Vishwavani Impact: ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆ ಹೆಚ್ಚಳ; ಸದನದಲ್ಲಿ ಸದ್ದು ಮಾಡಿದ ʼವಿಶ್ವವಾಣಿ ವರದಿʼ
Vishwavani Impact: ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನೂತನ ಕಾರ್ಯಕ್ರಮ ಜಾರಿ ಮಾಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇತ್ತೀಚೆಗೆ ತಿಳಿಸಿದ್ದರು. ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಶೇ. 46 ಇದ್ದು, ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 61 ರಷ್ಟು ಸಿಸೇರಿಯನ್‌ಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು.


ತುಮಕೂರು: ಸಿಸೇರಿಯನ್‌ಗಳಿಂದ ಹೆಚ್ಚು ಆದಾಯ ಬರುತ್ತದೆ ಮತ್ತು ಸುಲಭವಾಗಿ ಮಾಡಬಹುದು ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆಗಳನ್ನೇ (caesarean delivery) ಹೆಚ್ಚು ಮಾಡುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಆದರೆ, ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಿಂದ ಇದಕ್ಕೆ ಕಡಿವಾಣ ಹಾಕುವುದು ಅತ್ಯಗತ್ಯವಾಗಿದೆ. ಇನ್ನು ತುಮಕೂರು ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ಹೆರಿಗೆ ಹೆಚ್ಚಳವಾಗಿದ್ದು, ಸರಕಾರಿ ಆಸ್ಪತ್ರೆಗಳಲ್ಲಿಯೂ ಸಹಜ ಪ್ರಸವ ಪ್ರಮಾಣ ತಗ್ಗಿದೆ. ಈ ಬಗ್ಗೆ ವಿಶ್ವವಾಣಿ ಪತ್ರಿಕೆ ವಿಶೇಷ ವರದಿಯ (Vishwavani Impact ) ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಇದೀಗ ಅಧಿವೇಶನದ ವೇಳೆ ವಿಧಾನ ಪರಿಷತ್‌ನಲ್ಲಿ ʼವಿಶ್ವವಾಣಿ ವರದಿʼ ಸದ್ದು ಮಾಡಿದೆ.
ವರ್ಷದಿಂದ ವರ್ಷಕ್ಕೆ ತುಮಕೂರು ಜಿಲ್ಲೆಯ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ಹೆರಿಗೆಗಳು ಹೆಚ್ಚಳವಾಗುತ್ತಿರುವ ಬಗ್ಗೆ ಮಾರ್ಚ್ 13ರಂದು ʼಸಹಜ ಪ್ರಸವ ಮಾಯ, ಶಸ್ತ್ರಚಿಕಿತ್ಸೆ ಅಯೋಮಯʼ ಎಂಬ ಶೀರ್ಷಿಕೆಯಡಿ ವಿಶ್ವವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಇದೀಗ ಆಗ್ನೆಯ ಪದವೀಧರ ಕ್ಷೇತ್ರದ ಎಂಎಲ್‌ಸಿ ಚಿದಾನಂದ್ ಎಂ. ಗೌಡ ಅವರು ಸದನದಲ್ಲಿ ʼವಿಶ್ವವಾಣಿ ವರದಿʼ ಪ್ರಸ್ತಾಪಿಸಿ, ಸಿಸೇರಿಯನ್ ಹೆರಿಗೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಆಸ್ಪತ್ರೆಗಳಿಗೆ ಹಣದ ವ್ಯಾಮೋಹ ಹೆಚ್ಚುತ್ತಿದೆ
ಮಂಗಳವಾರ ಸದನದ 'ಶೂನ್ಯ ವೇಳೆಯಲ್ಲಿ' ಚಿದಾನಂದ್ ಎಂ. ಗೌಡ ಅವರು ಸಿಸೇರಿಯನ್ ಹೆರಿಗೆ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿದ್ದು, ಹೆರಿಗೆ ಎಂಬುದು ಮಗುವಿಗೆ ಜನ್ಮ, ತಾಯಿಗೆ ಪುನರ್ಜನ್ಮ. ಮನೆಗೆ ಪುಟ್ಟ ಕಂದಮ್ಮನ ಆಗಮನ ಇಡೀ ಕುಟುಂಬಕ್ಕೆ ಸಂತಸದ ಕ್ಷಣ, ಆದರೆ ಇಂದು ಮಗುವಿನ ಜನ್ಮವನ್ನು ತಾಯಿ ಮತ್ತು ಕುಟುಂಬಕ್ಕಿಂತ ಹೆಚ್ಚು ಸಂಭ್ರಮಿಸುತ್ತಿರುವುದು ಆಸ್ಪತ್ರೆಗಳು. ಆಸ್ಪತ್ರೆಗಳಿಗೆ ಹಣದ ವ್ಯಾಮೋಹ ಹೆಚ್ಚುತ್ತಿದ್ದು, ಇದರ ಪರಿಣಾಮವಾಗಿ ಸಿಸೇರಿಯನ್ ಮಾಯೆ ಎಲ್ಲೆಡೆ ಆವರಿಸುತ್ತಿದೆ. ತುಮಕೂರು ಜಿಲ್ಲೆ ಇದರಲ್ಲಿ ಮುಂಚೂಣಿಯಲ್ಲಿದೆ ಎಂದು ಎಂಎಲ್‌ಸಿ ಚಿದಾನಂದಗೌಡ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆ ಮಾಯವಾಗಿದ್ದು, ಸಿಸೇರಿಯನ್ ಹೆರಿಗೆಗಳು ಹೆಚ್ಚಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಬಾಣಂತಿಯರ ಸಾವಿನಿಂದ ಆತಂಕಗೊಂಡಿರುವ ಜನತೆ, ಹೆರಿಗೆ ಎಂದರೆ ಸಾಕು, ಎಷ್ಟೇ ಹಣ ವೆಚ್ಚವಾದರೂ ಸರಿ, ತಾಯಿ-ಮಗು ಬದುಕಿದರೆ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಕುಟುಂಬದವರ ಭಯವನ್ನೇ ಕೆಲವು ಆಸ್ಪತ್ರೆಯವರು ಹಣ ಮಾಡುವ ಮಾರ್ಗವನ್ನಾಗಿ ಮಾಡಿಕೊಂಡಿದ್ದಾರೆ. ಬಡವರ ಪಾಲಿಗೆ ಇದು ಬಿಸಿ ತುಪ್ಪವಾಗಿದೆ.
ಈ ಸುದ್ದಿಯನ್ನೂ ಓದಿ | Health Tips: ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಎಂದಿಗೂ ಇಡ್ಬೇಡಿ
ಆಸ್ಪತ್ರೆಗಳು ಮೊದಲು ಸಹಜ ಹೆರಿಗೆಗೆ ಆದ್ಯತೆ ನೀಡಬೇಕು, ತಾಯಿ ಮಗುವಿನ ಆರೋಗ್ಯದ ಕುಂಟುನೆಪದಲ್ಲಿ ಗರ್ಭಿಣಿಯರಿಗೆ ಮತ್ತು ಅವರ ಕುಟುಂಬದವರಿಗೆ ಆತಂಕ ಮೂಡಿಸಿ, ಸಹಜ ಹೆರಿಗೆಯ ಲಕ್ಷಣಗಳಿದ್ದರೂ ಸಿಸೇರಿಯನ್ ಹೆರಿಗೆ ನೆಪದಲ್ಲಿ ಆಸ್ಪತ್ರೆಗಳು ಹಣ ಮಾಡುವ ಮಾರ್ಗ ಮಾಡಿಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಈ ವಿಷಯದ ಕುರಿತು ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯ ನಕಲನ್ನು ಲಗತ್ತಿಸಿದ್ದೇನೆ ಎಂದು ತಿಳಿಸಿದ್ದಾರೆ.