IED Blast: ರಸ್ತೆ ನಿರ್ಮಾಣ ಕಾರ್ಯದ ವೇಳೆ ಸ್ಪೋಟಗೊಂಡ IED; ಯೋಧ ಹುತಾತ್ಮ
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ನಕ್ಸಲರು ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ಛತ್ತೀಸ್‌ಗಢ ಸಶಸ್ತ್ರ ಪಡೆ (ಸಿಎಎಫ್)ಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ರಸ್ತೆ ನಿರ್ಮಾಣ ಕಾರ್ಯಕ್ಕೆ ಭದ್ರತೆ ಒದಗಿಸಲು ಸಿಎಎಫ್ ತಂಡ ಗಸ್ತು ತಿರುಗುತ್ತಿದ್ದಾಗ ಟೊಯ್ನಾರ್ ಮತ್ತು ಫರ್ಸೆಗಢ ಗ್ರಾಮಗಳ ನಡುವೆ ಸ್ಫೋಟ ಸಂಭವಿಸಿದೆ.


ರಾಯ್ಪುರ್: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ನಕ್ಸಲರು ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನ (IED Blast) ಸ್ಫೋಟಗೊಂಡು ಛತ್ತೀಸ್‌ಗಢ ಸಶಸ್ತ್ರ ಪಡೆ (ಸಿಎಎಫ್)ಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ರಸ್ತೆ ನಿರ್ಮಾಣ ಕಾರ್ಯಕ್ಕೆ ಭದ್ರತೆ ಒದಗಿಸಲು ಸಿಎಎಫ್ ತಂಡ ಗಸ್ತು ತಿರುಗುತ್ತಿದ್ದಾಗ ಟೊಯ್ನಾರ್ ಮತ್ತು ಫರ್ಸೆಗಢ ಗ್ರಾಮಗಳ ನಡುವೆ ಸ್ಫೋಟ ಸಂಭವಿಸಿದೆ. ಟೊಯ್ನಾರ್ ನಿಂದ ಫರ್ಸೆಘರ್ ವರೆಗೆ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಸಿಎಎಫ್‌ನ 19 ನೇ ಬೆಟಾಲಿಯನ್‌ಗೆ ಸೇರಿದ ಕಾನ್‌ಸ್ಟೆಬಲ್ ಮನೋಜ್ ಪೂಜಾರಿ (26) ಅವರು ಹುತಾತ್ಮರಾದ ಯೋಧ.
ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಯೋಧ ಐಇಡಿ ಮೇಲೆ ಕಾಲಿಟ್ಟಿದ್ದಾರೆ ಇದರಿಂದಾಗಿ ಸ್ಫೋಟ ಸಂಭವಿಸಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸದ್ಯ ಸ್ಫೋಟಗೊಂಡ ಪ್ರದೇಶದ ಸುತ್ತಮುತ್ತ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಿಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತರ್ ಪ್ರದೇಶದ ಒಳಭಾಗಗಳಲ್ಲಿ ಗಸ್ತು ತಿರುಗುವಾಗ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಮಾವೋವಾದಿಗಳು ಆಗಾಗ್ಗೆ ರಸ್ತೆಗಳಲ್ಲಿ ಮತ್ತು ಕಾಡುಗಳಲ್ಲಿನ ಮಣ್ಣಿನ ಹಳಿಗಳಲ್ಲಿ ಐಇಡಿಗಳನ್ನು ಇಡುತ್ತಾರೆ. ಈ ಹಿಂದೆಯೂ ಹಲವರು ಈ ರೀತಿಯ ದಾಳಿಗೆ ಬಲಿಯಾಗಿದ್ದರು.
ಏಪ್ರಿಲ್ 9 ರಂದು ಬಿಜಾಪುರದಲ್ಲಿ ನಡೆದ ಇದೇ ರೀತಿಯ ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನ ಒಬ್ಬ ಜವಾನ ಗಾಯಗೊಂಡಿದ್ದರು, ಏಪ್ರಿಲ್ 4 ರಂದು ನಾರಾಯಣಪುರ ಜಿಲ್ಲೆಯಲ್ಲಿ 25 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರೆ, ಇನ್ನೊಬ್ಬ ವ್ಯಕ್ತಿಗೆ ಗಂಭೀರಗಾಯಗಳಾಗಿದ್ದವು. ಮಾರ್ಚ್ 30 ರಂದು ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಇರಿಸಿದ್ದ ಐಇಡಿ ಸ್ಫೋಟಗೊಂಡು 40 ವರ್ಷದ ಬುಡಕಟ್ಟು ಮಹಿಳೆಯೊಬ್ಬರು ಮೃತಪಟ್ಟಿದ್ದರು.
ಈ ಸುದ್ದಿಯನ್ನೂ ಓದಿ: Maoists Killed: 1ಕೋಟಿ ರೂ. ಇನಾಮು ಘೋಷಣೆಯಾಗಿದ್ದ ನಕ್ಸಲ್ ಮುಖಂಡನ ಹತ್ಯೆ - ಭರ್ಜರಿ ಕಾರ್ಯಾಚರಣೆಯಲ್ಲಿ 8 ನಕ್ಸಲರ ಎನ್‌ಕೌಂಟರ್
ಛತ್ತೀಸ್‌ಗಢದಲ್ಲಿ ಕಳೆದ ಮೂರು ತಿಂಗಳಿಂದ ನಿರಂತರವಾಗಿ ನಕ್ಸಲ್ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ. ಇತ್ತೀಚೆಗೆ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ (Naxal Encounter) 13 ಲಕ್ಷ ರೂಪಾಯಿಗಳ ಬಹುಮಾನವನ್ನು ಹೊಂದಿದ್ದ ಇಬ್ಬರು ಮಾವೋವಾದಿಗಳು ಹತರಾಗಿದ್ದರು. ಹತ್ಯೆಗೀಡಾದ ಮಾವೋವಾದಿಗಳನ್ನು ಪೂರ್ವ ಬಸ್ತಾರ್ ವಿಭಾಗದ ಸದಸ್ಯ ಮತ್ತು ಮಾವೋವಾದಿ ಕಮಾಂಡರ್ ಹಲ್ದಾರ್ ಪ್ರದೇಶ ಸಮಿತಿ ಸದಸ್ಯ ರಾಮೆ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಹಲ್ದಾರ್ ಮತ್ತು ರಾಮೆ ತಲಾ ಕ್ರಮವಾಗಿ 8 ಲಕ್ಷ ಮತ್ತು 5 ಲಕ್ಷ ರೂಪಾಯಿಗಳ ಬಹುಮಾನವನ್ನು ಹೊಂದಿದ್ದರು. ಈ ವರ್ಷ ಇಲ್ಲಿಯವರೆಗೆ ರಾಜ್ಯದಲ್ಲಿ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 140 ಮಾವೋವಾದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ.