ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anupam Mittal: ಕಾಶ್ಮೀರಕ್ಕೆ ಟಿಕೆಟ್ ಬುಕ್ ಮಾಡಿ ಅಲ್ಲಿನ ಜನರೊಂದಿಗೆ ನಿಲ್ಲೋಣ ಎಂದ ಉದ್ಯಮಿ ಅನುಪಮ್ ಮಿತ್ತಲ್

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮಕ್ಕೆ ಸಾಕಷ್ಟು ಹೊಡೆತ ಬಿದ್ದಿದೆ. ಹೊಟೇಲ್, ಹೌಸ್‌ಬೋಟ್‌ಗಳು ಖಾಲಿಯಾಗಿವೆ. ಈ ಮಧ್ಯೆಯೇ ಶಾದಿ ಡಾಟ್ ಕಾಮ್‌ನ ಸಂಸ್ಥಾಪಕ ಅನುಪಮ್ ಮಿತ್ತಲ್ ಕಾಶ್ಮೀರಕ್ಕೆ ಪ್ರಯಾಣಿಸುವ ನಿರ್ಧಾರ ಕೈಗೊಂಡು ಎಲ್ಲರಿಗೂ ಧೈರ್ಯ ತುಂಬಲು ಮುಂದಾಗಿದ್ದಾರೆ.

ಪಹಲ್ಗಾಮ್ ದಾಳಿಯ ಬಳಿಕ ಉದ್ಯಮಿ ಅನುಪಮ್ ಮಿತ್ತಲ್ ಕಾಶ್ಮೀರ ಪ್ರವಾಸ

ಮುಂಬೈ: ಕಾಶ್ಮೀರದ (Kashmir) ಪಹಲ್ಗಾಮ್ (Pahalgam) ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ (terror attack) ನಡೆದ ವಾರಗಳ ಅನಂತರ ಶಾದಿ ಡಾಟ್ ಕಾಮ್‌ನ (Shaadi.com) ಸಂಸ್ಥಾಪಕ ಅನುಪಮ್ ಮಿತ್ತಲ್ (Anupam Mittal) ಶ್ರೀನಗರಕ್ಕೆ ವಿಮಾನ ಟಿಕೆಟ್ (Srinagar Flight) ಬುಕ್ ಮಾಡಿರುವುದಾಗಿ ಸಾಮಾಜಿಕ ಜಾಲತಾಣ ಲಿಂಕ್ಡ್ಇನ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಇದು ಕೇವಲ ಪ್ರದರ್ಶನಕ್ಕಾಗಿ ಅಲ್ಲ ನಮ್ಮ ಧೈರ್ಯವನ್ನು ತೋರಿಸಲು ಮತ್ತು ಕಾಶ್ಮೀರದ ಜನರೊಂದಿಗೆ ನಾವು ಇದ್ದೇವೆ ಎಂದು ಹೇಳಲು ಎಂಬುದಾಗಿ ಅವರು ತಿಳಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮಕ್ಕೆ ಸಾಕಷ್ಟು ಹೊಡೆತ ಬಿದ್ದಿದೆ. ಹೊಟೇಲ್, ಹೌಸ್‌ಬೋಟ್‌ಗಳು ಖಾಲಿಯಾಗಿವೆ. ಈ ಮಧ್ಯೆಯೇ ಶಾದಿ ಡಾಟ್ ಕಾಮ್‌ನ ಸಂಸ್ಥಾಪಕ ಅನುಪಮ್ ಮಿತ್ತಲ್ ಅವರು ಕಾಶ್ಮೀರಕ್ಕೆ ಪ್ರಯಾಣಿಸುವ ನಿರ್ಧಾರ ಕೈಗೊಂಡು ಎಲ್ಲರಿಗೂ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.

ಲಿಂಕ್ಡ್‌ಇನ್‌ನಲ್ಲಿ ಬರೆದಿರುವ ದೀರ್ಘ ಪೋಸ್ಟ್‌ನಲ್ಲಿ ಅವರು ಕಾಶ್ಮೀರಕ್ಕೆ ಪ್ರಯಾಣಿಸುವ ತಮ್ಮ ವಿಮಾನ ಟಿಕೆಟ್‌ಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಕಾಶ್ಮೀರ ಪ್ರವಾಸೋದ್ಯಮವನ್ನು ಬೆಂಬಲಿಸುವಂತೆ ಅವರು ಇತರರನ್ನು ಒತ್ತಾಯಿಸಿದ್ದಾರೆ. ಇದು ಕೇವಲ ಧೈರ್ಯ ಪ್ರದರ್ಶನಕ್ಕಾಗಿ ಅಲ್ಲ. ಬದಲಿಗೆ ಕಾಶ್ಮೀರದ ಜನರ ಜತೆ ನಿಲ್ಲಲು ಎಂದು ಹೇಳಿದ್ದಾರೆ.

ಉಗ್ರರ ವಿರುದ್ಧ ಹೋರಾಟಕ್ಕೆ ಭಾರತೀಯ ಸೇನೆ ಮುಂದಾಗಿರುವಾಗ ಇದರ ದೊಡ್ಡ ಹೊರೆಯನ್ನು ಹೊರುವವರು ಕಾಶ್ಮೀರಿಗಳು ಎಂಬುದನ್ನು ನಾವು ಮರೆಯಬಾರದು. ಕೊನೆಗೂ ಅಭಿವೃದ್ಧಿ ಬಯಸಿದ ಕಾಶ್ಮೀರದಲ್ಲಿ ಪ್ರವಾಸೋದ್ಯಮದಿಂದಾಗಿಯೇ ಚಹಾ ಮಾರಾಟಗಾರರು ದಿನಕ್ಕೆ 5,000 ರೂ. ಆದಾಯ ಗಳಿಸುತ್ತಾರೆ. ಆದರೆ ಈಗ ರದ್ದಾಗಿರುವ ಪ್ರವಾಸಗಳು, ಮುಚ್ಚಿದ ಹೊಟೇಲ್‌ಗಳು ಭಯ ಮತ್ತು ಅನಿಶ್ಚಿತತೆಯ ಮತ್ತೊಂದು ಅಲೆಯನ್ನು ಎದುರಿಸಬೇಕಾಗುತ್ತದೆ. ಶತ್ರುಗಳು ಬಯಸುವುದು ಅದನ್ನೇ ಅಲ್ಲವೇ? ಎಂದು ಮಿತ್ತಲ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ನಾನು ಮಾಡುತ್ತಿರುವುದು ಸಣ್ಣ ಕಾರ್ಯ. ಕುಟುಂಬದೊಂದಿಗೆ ನಾನು ಕಾಶ್ಮೀರಕ್ಕೆ ಟಿಕೆಟ್ ಬುಕ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

anu1

ಸಾವಿರಾರು ಸ್ಥಳೀಯ ವ್ಯವಹಾರಗಳು, ಸಣ್ಣ ಮಾರಾಟಗಾರರ ಆರ್ಥಿಕ ಜೀವನಾಡಿಯನ್ನು ರಕ್ಷಿಸಲು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ಕಾಶ್ಮೀರಕ್ಕೆ ಭೇಟಿ ನೀಡುವಂತೆ ಇತರರಿಗೂ ಹೇಳಿರುವ ಅವರು ಈ ಸಮಯದಲ್ಲಿ ನಾವು ನಮ್ಮಲ್ಲಿರುವ ಭಯವನ್ನು ಗೆಲ್ಲಲು ಬಿಟ್ಟು ಕಾಶ್ಮೀರದ ಆರ್ಥಿಕತೆಯನ್ನು ಕುಸಿಯಲು ಬಿಟ್ಟರೆ ಪಹಲ್ಗಾಮ್‌ನಲ್ಲಿ ಪ್ರಾಣ ಕಳೆದುಕೊಂಡವರು ವ್ಯರ್ಥವಾಗಿ ಸತ್ತಂತೆ ಆಗುತ್ತದೆ ಎಂದು ಅವರು ಬರೆದಿದ್ದಾರೆ.

ಇದರೊಂದಿಗೆ ಅವರು ನಾವು ನಮ್ಮ ಸಶಸ್ತ್ರ ಪಡೆಗಳ ಹಿಂದೆ ನಿಂತಿದ್ದೇವೆ. ಅವರೊಂದಿಗೆ ನಿಲ್ಲಲು ಸಾಧ್ಯವಿಲ್ಲವಾದರೂ ಇಂತಹ ಘಟನೆಗಳಿಂದ ನೇರವಾಗಿ ಪರಿಣಾಮ ಬೀರುವ ಜನರ ಪಕ್ಕದಲ್ಲಿ ನಿಲ್ಲಬಹುದು ಎಂದು ಹೇಳಿದರು.

ಇದನ್ನೂ ಓದಿ: Insult to Kannada: ಹೋಟೆಲ್ ಡಿಸ್‌ಪ್ಲೇ ಬೋರ್ಡ್​ನಲ್ಲಿ ಕನ್ನಡಿಗರಿಗೆ ನಿಂದನೆ, ಆಕ್ರೋಶ

ಮಿತ್ತಲ್ ಅವರ ಪೋಸ್‌ಗೆ ಅನೇಕರು ತ್ವರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಅವರ ನಿಲುವನ್ನು ಬೆಂಬಲಿಸಿದರೆ ಇನ್ನು ಕೆಲವರು ಇದೊಂದು ನಾಟಕ ಎಂದು ಟೀಕಿಸಿದ್ದಾರೆ.

ಒಬ್ಬರು ಇದು ತುಂಬಾ ಅಗತ್ಯವಿರುವ ಪೋಸ್ಟ್ . ನಿಮಗೆ ಧನ್ಯವಾದಗಳು ಎಂದು ಹೇಳಿದ್ದರೆ ಮತ್ತೊಬ್ಬರು ಇದು ಸಂಪೂರ್ಣ ಸರಿಯಾದ ಮಾರ್ಗ. ದಾಳಿಯ ಸಮಯದಲ್ಲಿ ನನ್ನ ಕುಟುಂಬವೂ ಕಾಶ್ಮೀರದಲ್ಲಿ ಸಿಲುಕಿಕೊಂಡಿತ್ತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಅನುಪಮ್ ಮಿತ್ತಲ್ ಇದು ನಿಮ್ಮ ಧೈರ್ಯದ ಪ್ರದರ್ಶನ. ನೀವು ಅಲ್ಲಿ ಹೂಡಿಕೆ ಮಾಡದ ಹೊರತು ಸುಮ್ಮನೆ ಮಾತನಾಡಬೇಡಿ. ಜನರಿಗೆ ಭಯವಿದೆ. ಸಾಕಷ್ಟು ಅನುಭವವಿದೆ. ಅವರ ನೋವುಗಳನ್ನು ಗುಣಪಡಿಸುವ ಕಾರ್ಯಗಳಾಗಲಿ ಎಂದಿದ್ದಾರೆ.

ಇನ್ನೊಬ್ಬರು ಕಾಮೆಂಟ್‌ನಲ್ಲಿ ಕಾಶ್ಮೀರಿಗಳಿಗೆ ಸಹಾಯ ಮಾಡಲು ಇನ್ನೂ ಹಲವು ಮಾರ್ಗಗಳಿವೆ. ಅಲ್ಲಿಗೆ ಹೋಗುವ ಮೂಲಕ ನಮ್ಮ ಜೀವ ಮತ್ತು ನಮ್ಮ ಕುಟುಂಬ ಸದಸ್ಯರ ಜೀವವನ್ನು ಪಣಕ್ಕಿಡುವುದು ಒಂದೇ ಮಾರ್ಗವಲ್ಲ ಎಂದು ಹೇಳಿದ್ದಾರೆ.

ಮತ್ತೊಬ್ಬರು ಈ ಸಮಯ ಅಲ್ಲಿಗೆ ಭೇಟಿ ನೀಡುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ ಹಲವು ನಿರ್ಬಂಧಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಿದ್ದಾರೆ.