ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಿಳಿ ಜೆರ್ಸಿ ಧರಿಸಿ ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸಿದ ಆರ್‌ಸಿಬಿ ಫ್ಯಾನ್ಸ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಬೆಂಗಳೂರಿನ ಎಂ ಚಿನ್ನಸ್ವಾಂಇ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ವೇಳೆ ಬಹುತೇಕ ಅಭಿಮಾನಿಗಳಿ ಬಿಳಿ ಜೆರ್ಸಿ ಧರಿಸಿಕೊಂಡು ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸಿದ್ದಾರೆ.

ಬಿಳಿ ಜೆರ್ಸಿ ಧರಿಸಿ ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸಿದ ಆರ್‌ಸಿಬಿ ಫ್ಯಾನ್ಸ್.

ಬೆಂಗಳೂರು: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿ, 10 ದಿನಗಳ ವಿರಾಮದ ನಂತರ ಪುನರಾರಂಭವಾಗಿದೆ. ಶನಿವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಣ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಆರ್‌ಸಿಬಿ ಪಂದ್ಯದಲ್ಲಿ ಸಾಮಾನ್ಯವಾಗಿ ಅಭಿಮಾನಿಗಳು ಕೆಂಪು ಜೆರ್ಸಿ ಧರಿಸಿ ಅಂಗಣಕ್ಕೆ ಬರುವುದು ವಾಡಿಕೆ. ಆದರೆ, ಆರ್‌ಸಿಬಿ ಹಾಗೂ ಕೆಕೆಆರ್ ನಡುವಣ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿ ಬಿಳಿ ಬಣ್ಣದಿಂದ ಕಂಗೊಳಿಸುತ್ತಿತ್ತು. ಆರ್‌ಸಿಬಿ ಅಭಿಮಾನಿಗಳು ಬಿಳಿ ಜೆರ್ಸಿ ಧರಿಸಿ ಕ್ರೀಡಾಂಗಣಕ್ಕೆ ಆಗಮಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಆಧುನಿಕ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿಗೆ (Virat Kohli) ವಿಶೇಷ ಗೌರವವನ್ನು ಸಮರ್ಪಿಸಿದ್ದಾರೆ.
ವಿರಾಟ್ ಕೊಹ್ಲಿ ಮೇ 12 ರಂದು ಟೆಸ್ಟ್ ಕ್ರಿಕೆಟ್‌ಗೆ ನಿವೃತಿ ಘೋಷಿಸಿದ್ದರು. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕಿಂಗ್ ಕೊಹ್ಲಿ ತಮ್ಮ 14 ವರ್ಷಗಳ ದೀರ್ಘಾವಧಿ ಸ್ವರೂಪಕ್ಕೆ ಪೂರ್ಣ ವಿರಾಮವನ್ನು ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಟೆಸ್ಟ್‌ಗೆ ವಿದಾಯ ಹೇಳಿದ ಬಳಿಕ ಇದೇ ಮೊದಲ ಬಾರಿ ಆರ್‌ಸಿಬಿಯ ತವರು ಅಂಗಣಕ್ಕೆ ವಿರಾಟ್ ಕೊಹ್ಲಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಶ್ರೇಷ್ಠ ವೃತ್ತಿಜೀವನವನ್ನು ಗೌರವಿಸಲು ಬೆಂಗಳೂರಿನ ಅಭಿಮಾನಿಗಳು ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಪಂದ್ಯ ನೋಡಲು ಬರುವವರೆಲ್ಲರೂ ಬಿಳಿ ಬಟ್ಟೆ ಧರಿಸಬೇಕೆಂದು ಅವರು ಬಯಸಿದ್ದರು. ಈ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
IPL 2025: ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ವಿರಾಟ್ ಕೊಹ್ಲಿ!
ಕೊಹ್ಲಿಯ 18ನೇ ಸಂಖ್ಯೆಯ ಬಿಳಿ ಜೆರ್ಸಿಗಳನ್ನು ಕ್ರೀಡಾಂಗಣದ ಹೊರಗೆ ಮಾರಾಟ ಮಾಡಲಾಗುತ್ತಿತ್ತು. ಇದು ಕೊಹ್ಲಿಗೆ ಅಭಿಮಾನಿಗಳಿಂದ ಬಂದ ಪ್ರೀತಿಯ ಉಡುಗೊರೆ. ಅಭಿಮಾನಿಗಳು ಕೊಹ್ಲಿಯನ್ನು ಕೇವಲ ಟಿ20 ಸೂಪರ್‌ಸ್ಟಾರ್ ಆಗಿ ಮಾತ್ರವಲ್ಲದೆ ಭಾರತದ ಅತ್ಯುತ್ತಮ ಟೆಸ್ಟ್ ನಾಯಕ ಮತ್ತು ಬ್ಯಾಟ್ಸ್‌ಮನ್ ಆಗಿಯೂ ನೋಡಿದ್ದಾರೆ. ಈ ಅಭಿಯಾನವು ಕೊಹ್ಲಿಯ ಪ್ರಭಾವ ಕೇವಲ ಒಂದು ಸ್ವರೂಪಕ್ಕೆ ಸೀಮಿತವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಅವರ ಉತ್ಸಾಹ, ಸ್ಥಿರ ಪ್ರದರ್ಶನ ಮತ್ತು ವರ್ಚಸ್ಸು ಅಭಿಮಾನಿಗಳ ಮೇಲೆ ಆಳವಾದ ಪ್ರಭಾವ ಬೀರಿದೆ.
🚦Rain Has Cleared at Chinnaswamy Stadium 🏟️
— Rebel_Warriors (@Rebel_Warriors) May 17, 2025
📸The rain has reduced to a very slight drizzle and the crowd have found their voice with chants of RCB.. RCB❣️
📢Fans waiting class for RCB vs KKR , Virat Kohli 👑 #RCBvsKKR #ViratKohli #viratkholi pic.twitter.com/e11W0YH2Ao
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವುದರಿಂದ ಚಿನ್ನಸ್ವಾಮಿ ಕ್ರೀಡಾಂಗಣದ ವಾತಾವರಣವು ಸ್ವಲ್ಪ ನಿರಾಶೆಯಿಂದ ಕೂಡಿರಬಹುದು. ಆರ್‌ಸಿಬಿ ಗೆದ್ದರೂ ಅಥವಾ ಸೋತರೂ ಕ್ರೀಡಾಂಗಣದಲ್ಲಿ ಬಿಳಿ ಬಣ್ಣ ಐಪಿಎಲ್ ಇತಿಹಾಸದಲ್ಲಿ ಅಭಿಮಾನಿಗಳು ನೀಡುವ ಅತ್ಯಂತ ಸ್ಮರಣೀಯ ಗೌರವವಾಗಿದೆ. ಟೆಸ್ಟ್‌ನ ಸಾರ್ವಕಾಲಿಕ ಶ್ರೇಷ್ಢ ಬ್ಯಾಟ್ಸ್‌ಮನ್ ಆಗಿರುವ ವಿರಾಟ್ ಕೊಹ್ಲಿ ಅವರ ಪರಂಪರೆಗೆ ಇದು ಸಾಕ್ಷಿಯಾಗಲಿದೆ. ಈ ವಿಶೇಷ ಸಂದರ್ಭದಲ್ಲಿ ಆರ್‌ಸಿಬಿ ಗೆಲುವು ಸಾಧಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.