ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತೆಲಂಗಾಣ ಪೊಲೀಸರ ಭರ್ಜರಿ ಬೇಟೆ: 20 ಮಾವೋವಾದಿಗಳ ಬಂಧನ; ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Maoists Arrested: ತೆಲಂಗಾಣ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ನಿಷೇಧಿತ ಮಾವೋವಾದಿ ಸಂಘಟನೆಯ 20 ಸದಸ್ಯರನ್ನು ಸೆರೆ ಹಿಡಿದಿದ್ದಾರೆ. ಮುಲುಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಈ ಮಾಮೋವಾದಿಗಳನ್ನು ಬಂಧಿಸಿದ್ದು, ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ತೆಲಂಗಾಣದಲ್ಲಿ 20 ಮಾವೋವಾದಿಗಳ ಬಂಧನ

Profile Ramesh B May 17, 2025 8:03 PM

ಹೈದರಾಬಾದ್‌: ತೆಲಂಗಾಣ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ನಿಷೇಧಿತ ಮಾವೋವಾದಿ ಸಂಘಟನೆಯ 20 ಸದಸ್ಯರನ್ನು ಸೆರೆ ಹಿಡಿದಿದ್ದಾರೆ. ಮುಲುಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಈ ಮಾಮೋವಾದಿಗಳನ್ನು ಬಂಧಿಸಿದ್ದು, ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ (20 Maoists Arrested). ಮೇ 16 ಮತ್ತು 17ರಂದು ನಡೆಸಿದ ವಾಹನ ತಪಾಸಣೆ, ವಿವಿಧ ಕಡೆಗಳಲ್ಲಿ ನಡೆಸಿದ ಶೋಧ ಕಾರ್ಯದ ವೇಳೆ ಈ ಮಾವೋವಾದಿಗಳು ಸಿಕ್ಕಿ ಬಿದ್ದಿದ್ದಾರೆ.

ʼʼಸೆರೆಸಿಕ್ಕ ಮಾವೋವಾದಿಗಳ ಪೈಕಿ ಓರ್ವ ಡಿವಿಷನ್‌ ಕಮಿಟಿ ಸದಸ್ಯ, 5 ಮಂದಿ ಏರಿಯಾ ಕಮಿಟಿ ಸದಸ್ಯರು ಸೇರಿದ್ದಾರೆ. ವಾಹನ ತಪಾಸಣೆ, ವೆಂಕಟಪುರಂ, ವಜೀಡು, ಕನ್ನೈಗುಡೆಮ್ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆ ಶೋಧ ಕಾರ್ಯದ ಮೂಲಕ 20 ಮಂದಿಯನ್ನು ವಶಕ್ಕೆ ಪಡೆಯಲಾಗಿದೆʼʼ ಎಂದು ಮುಲುಗು ಜಿಲ್ಲೆಯ ಎಸ್‌ಪಿ ಶಬರೀಷ್‌ ಪಿ. ತಿಳಿಸಿದ್ದಾರೆ.

ಪೊಲೀಸರ ಸುದ್ದಿಗೋಷ್ಠಿ:



ಈ ಸುದ್ದಿಯನ್ನೂ ಓದಿ: ಜಾರ್ಖಂಡ್‌ನಲ್ಲಿ ಮಾವೋವಾದಿಗಳಿಂದ ಐಇಡಿ ಸ್ಫೋಟ; ಓರ್ವ ಪೊಲೀಸ್‌ ಹುತಾತ್ಮ

ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿರುವ ಕರ್ರೆಗುಟ್ಟ ಬೆಟ್ಟಗಳಲ್ಲಿ ಸಿಆರ್‌ಪಿಎಫ್ ಮತ್ತು ಛತ್ತೀಸ್‌ಗಢ ಪೊಲೀಸರು ಇತ್ತೀಚೆಗೆ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಇದಾದ ಬಳಿಕ ಕರ್ರೆಗುಟ್ಟದಲ್ಲಿ ಆಶ್ರಯ ಪಡೆದಿದ್ದ ಮಾವೋವಾದಿಗಳು ಬೇರೆ ಬೇರೆ ಗುಂಪುಗಳಾಗಿ ಅಲ್ಲಿಂದ ವಿವಿಧ ಸ್ಥಳಗಳಿಗೆ ಪಲಾಯನ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂಬುದಾಗಿ ಮುಲುಗು ಪೊಲೀಸರು ವಿವರಿಸಿದ್ದಾರೆ.

ಮುಲುಗು ಜಿಲ್ಲೆಗೆ ಮಾವೋವಾದಿಗಳು ಪ್ರವೇಶಿಸುವುದನ್ನು ತಡೆಯಲು ಪೊಲೀಸರು ತಮ್ಮ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಬಂಧಿತ 20 ಮಾವೋವಾದಿಗಳು ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ನಡೆದ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಜತೆಗೆ ಇವರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೆಲವು ಸ್ಥಳೀಯರನ್ನು ಹತ್ಯೆ ಮಾಡಿದ್ದಾರೆ ಎನ್ನುವ ಮಾಹಿತಿಯೂ ಇದೆ.

ವಿವಿಧ ಶಸ್ತ್ರಾಸ್ತ್ರ ವಶಕ್ಕೆ

ಬಂಧಿತ ಮಾವೋವಾದಿಗಳಿಂದ ಮೂರು 5.56 ಎಂಎಂ ಐಎನ್‌ಎಸ್‌ಎಎಸ್ ರೈಫಲ್‌ಗಳು, ನಾಲ್ಕು 7.62 ಎಂಎಂ ಎಸ್‌ಎಲ್‌ಆರ್ ರೈಫಲ್‌ಗಳು, ಒಂದು .303 ರೈಫಲ್, ನಾಲ್ಕು 8 ಎಂಎಂ ರೈಫಲ್‌ಗಳು, ಎರಡು ಲೈವ್ ಗ್ರೆನೇಡ್‌ಗಳು ಮತ್ತು ಮ್ಯಾಗಜೀನ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಎಲಿಮಿಡಿ ಹಾಗೂ ಉಸೂರ್, ತೆಲಂಗಾಣದ ವಿವಿಧ ಪೊಲೀಸ್ ಠಾಣೆಗಳ ಭದ್ರತಾ ಪಡೆಗಳು ಪ್ರವೇಶಿಸದಂತೆ ಮುಲುಗು ಜಿಲ್ಲೆಯ ವೆಂಕಟಪುರಂ, ವಜೀಡು ಮತ್ತು ಪೆರೂರು ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಬರುವ ಕರ್ರೆಗುಟ್ಟ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಸುಧಾರಿತ ಸ್ಫೋಟಕ ವಸ್ತು (IED) ಇರಿಸಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ. ಇದೇ ಕಾರಣಕ್ಕೆ ಏ. 8ರಂದು ಮಾವೋವಾದಿಗಳು ಆದಿವಾಸಿಗಳು ಕರ್ರೆಗುಟ್ಟ ಅರಣ್ಯ ಪ್ರದೇಶಕ್ಕೆ ಪ್ರವೇಶಿಸದಂತೆ ಎಚ್ಚರಿಕೆ ನೀಡಿದ್ದರು.

ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿರುವ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ 31 ಮಾವೋವಾದಿಗಳನ್ನು ಕೊಂದಿದ್ದೇವೆ ಎಂದು ಮೇ 14ರಂದು ಭದ್ರತಾ ಪಡೆಗಳು ಘೋಷಿಸಿದ್ದವು.