ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amitabh Mattoo Column: ಹೊಸ ಕಾಶ್ಮೀರವನ್ನು ಏಕೆ ಮತ್ತು ಹೇಗೆ ನಿರ್ಮಿಸಬೇಕು ?

ಕಣಿವೆ ರಾಜ್ಯವು ಅನೇಕ ಋಷಿಗಳ ತಪೋಭೂಮಿಯಾಗಿದೆ, ಬಗೆಬಗೆಯ ದೇವಾಲಯಗಳ ನೆಲೆ ಯಾಗಿದೆ ಹಾಗೂ ಸಂಕೀರ್ಣ-ಸಂಯೋಜಿತ ಸಂಸ್ಕೃತಿಯ ತವರೂರಾಗಿದೆ. ನವೋ ತ್ಸಾಹವನ್ನು ತುಂಬುವ ಹಬ್ಬ-ಹರಿದಿನಗಳು, ಅಂತರಧರ್ಮೀಯ ಸಂವಹನ, ಪರಂಪರೆಯ ಮರುಸ್ಥಾಪನೆ ಹಾಗೂ ಶೈಕ್ಷಣಿಕ ವ್ಯವಸ್ಥೆ ಯ ಸುಧಾರಣೆಯ ಮೂಲಕ ಈ ಬಹುತ್ವ ನೀತಿ ಯನ್ನು ಉತ್ತೇಜಿಸುವಂತಾಗಬೇಕು.

ಹೊಸ ಕಾಶ್ಮೀರವನ್ನು ಏಕೆ ಮತ್ತು ಹೇಗೆ ನಿರ್ಮಿಸಬೇಕು ?

Profile Ashok Nayak May 17, 2025 8:14 AM

ಸಿಂದೂರಸಾರ

ಅಮಿತಾಭ್ ಮಟ್ಟೂ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಕಾಶ್ಮೀರವು ಮತ್ತೊಮ್ಮೆ ನಿರ್ಣಾಯಕ ತಿರುವಿನ ಘಟ್ಟದಲ್ಲಿ ನಿಂತಿದೆ. ಈ ದಾಳಿಯ ನಂತರ ಭಾರತವು ಕೈಗೊಂಡ ಕ್ಷಿಪ್ರ ಮತ್ತು ನಿಖರವಾದ ‘ಭಯೋತ್ಪಾದನಾ ನಿಗ್ರಹ ಪ್ರಕ್ರಿಯೆ’ಯು, ಭದ್ರತಾ ಪರಿಸರದ ಅಸ್ಥಿರತೆ ಹಾಗೂ ಭಾರತದ ಸಾಂಸ್ಥಿಕ ವ್ಯವಸ್ಥೆಗಳ ಮೌನ ಎರಡನ್ನೂ ಒತ್ತಿಹೇಳುತ್ತದೆ. ಈ ಬೆಳವಣಿಗೆಯಲ್ಲಿ ದುಃಖವು ಆಳವಾಗಿದೆ, ಆಕ್ರೋಶವು ಸಮರ್ಥನೀಯವಾಗಿದೆ ಮತ್ತು ಕೈಗೊಳ್ಳಲಾದ ಕಾರ್ಯತಂತ್ರವು ಅನಿವಾರ್ಯವಾಗಿದೆ. ಅಲ್ಲಿ ನಡೆದದ್ದು ಕೇವಲ ಉಗ್ರವಾದಿಗಳ ಅನಾಗರಿಕ ಕೃತ್ಯವಾಗಲೀ ಅಥವಾ ಭದ್ರತಾ ವ್ಯವಸ್ಥೆಯ ಉಲ್ಲಂಘನೆಯಾಗಲೀ ಅಲ್ಲ. ಅದು ಒಂದು ಶಾಂತಿಯುತ, ಬಹುತ್ವ ದ ಮತ್ತು ಮುಕ್ತ ಕಾಶ್ಮೀರದ ಪರಿಕಲ್ಪನೆಯ ಮೇಲಿನ ದಾಳಿಯಾಗಿತ್ತು. ಇಲ್ಲಿ ಅಷ್ಟೇ ಮುಖ್ಯವಾಗಿರುವ ಮತ್ತು ಉತ್ತೇಜನಕಾರಿ ಯಾಗಿರುವ ಸಂಗತಿಯೆಂದರೆ, ಸಾಮಾನ್ಯ ಕಾಶ್ಮೀರಿಗಳ ಪ್ರತಿಕ್ರಿಯೆ. ಅದು ಹಿಂಸಾಚಾರವನ್ನು ತಿರಸ್ಕರಿಸುವ ವಿಷಯದಲ್ಲಿ ನಿಸ್ಸಂದಿಗ್ಧವಾಗಿ, ಸಹಾನುಭೂತಿಯಿಂದ ಮತ್ತು ದೃಢನಿಶ್ಚಯದಿಂದ ಹೊಮ್ಮಿದ ಪ್ರತಿಕ್ರಿಯೆಯಾಗಿದೆ ಎಂಬುದು ಗಮನಾರ್ಹ.

ಕಾಶ್ಮೀರಿಗಳು ಈಗ ಹಿಂದಿನ ದಶಕಗಳಿಗಿಂತ ಭಿನ್ನವಾಗಿದ್ದಾರೆ. ಈ ವಿಷಯದಲ್ಲಿ ಅವರಲ್ಲಿ ಯಾವು ದೇ ಅಸ್ಪಷ್ಟತೆಗಾಗಲೀ, ದ್ವಂದ್ವಕ್ಕಾಗಲೀ ಮತ್ತು ಸಂದೇಹಕ್ಕಾಗಲೀ ಆಸ್ಪದವಿಲ್ಲ. ಆದ್ದರಿಂದ ನಾವೀಗ ಒಂದು ಪ್ರಮುಖ ಕಾಲಘಟ್ಟದಲ್ಲಿದ್ದೇವೆ. ಪಹಲ್ಗಾಮ್‌ನಲ್ಲಿ ಘಟಿಸಿದ ದುರಂತವು, ಪರಿವರ್ತನೆಯ ಸಾಧ್ಯತೆಯನ್ನು ಹಳಿ ತಪ್ಪಿಸುವುದಕ್ಕೆ ನಾವು ಆಸ್ಪದ ನೀಡಬಾರದು.

ಹಿಂಸಾಚಾರದ ಕುರಿತಂತೆ ಸಾಮಾನ್ಯ ಕಾಶ್ಮೀರಿಗಳಿಂದ ಹೊಮ್ಮಿರುವ ತಿರಸ್ಕಾರವು, ನಮ್ಮ ಕಾರ್ಯ ನೀತಿಯ ನೈತಿಕ ಕೇಂದ್ರವಾಗಬೇಕು. ಓರ್ವ ಸೂಫಿ ಸಂತನಲ್ಲಿರುವ ಪರಿಕಲ್ಪನೆಯೊಂದಿಗೆ, ಓರ್ವ ತಂತ್ರಗಾರನಲ್ಲಿರುವ ಸ್ಪಷ್ಟತೆಯೊಂದಿಗೆ ಮತ್ತು ಸಂವಿಧಾನವಾದಿಗಳಲ್ಲಿರುವ ದೃಢಸಂಕಲ್ಪ ದೊಂದಿಗೆ ನಾವು ಕಾರ್ಯನಿರ್ವಹಿಸಬೇಕು.

ಇದನ್ನೂ ಓದಿ: Naveen Sagar Column: ಜಂಟ್ಲ್‌ ಮನ್‌ ಪಟ್ಟ ತಿರಸ್ಕರಿಸಿದ್ದ ಬ್ಯಾಡ್‌ ಬಾಯ್‌ ಸೈಮಂಡ್ಸ್‌ !

ಕಾಶ್ಮೀರದ ಕಥೆಯು, ಅಂತ್ಯವಿಲ್ಲದ ಸಂಘರ್ಷದ ನಿರ್ವಹಣೆಯಿಂದ ಮೊದಲ್ಗೊಂಡು ಉದ್ದೇಶ ಪೂರ್ವಕ ರಾಷ್ಟ್ರನಿರ್ಮಾಣದವರೆಗಿನ ಒಂದೊಂದು ಅಂಶವನ್ನೂ ಒಳಗೊಳ್ಳುವಂತಾಗಬೇಕು. ಇದಕ್ಕೆ ನ್ಯಾಯದೊಂದಿಗೆ ದೃಢತೆಯನ್ನೂ, ದೃಷ್ಟಿಕೋನದೊಂದಿಗೆ ಸ್ಮರಣೆಯನ್ನೂ ಮತ್ತು ಸಹಾನುಭೂತಿಯೊಂದಿಗೆ ಭದ್ರತೆಯನ್ನೂ ಹೊಂದಿಸಿ ಸಮತೋಲನಗೊಳಿಸುವುದು ಅಗತ್ಯ ವಾಗಿರುತ್ತದೆ.

ನವಕಾಶ್ಮೀರ ಎಂಬ ಪರಿಕಲ್ಪನೆಯು ಒಂದು ‘ಮುಂದೂಡಲ್ಪಟ್ಟ’ ಕನಸಲ್ಲ. ಅದೊಂದು ರಾಷ್ಟ್ರೀಯ ಕರ್ತವ್ಯವಾಗಿದ್ದು, ಅದಕ್ಕೆ ಈಗಿಂದೀಗಲೇ ಚಾಲನೆ ನೀಡಬೇಕಿದೆ. ಆ ನಿಟ್ಟಿನಲ್ಲಿ ಒಂದಷ್ಟು ವ್ಯೂಹಾತ್ಮಕ ಕಾರ್ಯತಂತ್ರದ ಹೆಜ್ಜೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದ್ದು, ರಾಷ್ಟ್ರೀಯತೆ ಯ ತಳಹದಿಯನ್ನು ಹೊಂದಿದ್ದೂ ನವಕಾಶ್ಮೀರದ ದೃಷ್ಟಿಕೋನವನ್ನು ಹೊಂದಿರುವ ಈ ಹೆಜ್ಜೆ ಗಳನ್ನು ಭಾರತವು ಇರಿಸಬೇಕಾಗಿದೆ. ಅಸೀಮ ತಾಳ್ಮೆ ಮತ್ತು ನಿಖರತೆಯೊಂದಿಗೆ ಪಾಕಿಸ್ತಾನ ವನ್ನು ಶಿಕ್ಷಿಸಬೇಕು ಗಡಿಯಾಚೆಗಿನ ಭಯೋತ್ಪಾದನೆಯನ್ನೇ ಅಸ್ತ್ರ ಮಾಡಿಕೊಂಡಿದ್ದ/ಮಾಡಿಕೊಂಡಿರುವ ಪಾಕಿಸ್ತಾನವು ಈ ನಿಟ್ಟಿನಲ್ಲಿ ಏಕಪ್ರಕಾರವಾಗಿ ತಂದಿಟ್ಟ ಸಂಕೀರ್ಣ ಮತ್ತು ಅಸಹನೀಯ ಪರಿಸ್ಥಿತಿಗೆ ಭಾರತವು ಸದ್ಯಕ್ಕೆ ನಿರ್ಣಾಯಕವಾಗಿಯೇ ಉತ್ತರಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ, ಇಂಥ ತಕ್ಷಣದ ಪ್ರತೀಕಾರ ಕ್ರಮವನ್ನೂ ಮೀರಿದ ಒಂದು ‘ದೀರ್ಘಾವಧಿ ಕಾರ್ಯತಂತ್ರ’ ಇಲ್ಲಿ ಅಗತ್ಯವಾಗಿದೆ. ಗಡಿನಿಯಂತ್ರಣ ರೇಖೆ ಗುಂಟ ಕಾಯ್ದುಕೊಳ್ಳಬೇಕಾದ ಕದನ ವಿರಾಮದ ಸ್ಥಿತಿಯನ್ನು ಎತ್ತಿಹಿಡಿಯಲೆಂದು ಉಭಯ ದೇಶಗಳ ‘ಡಿಜಿಎಂಒ’ಗಳು ತೋರಿಸಿದ ವಿವೇಕಯುತ ಗ್ರಹಿಕೆಯು, ಯುದ್ಧತಂತ್ರದ ಸ್ಥಿರತೆಗೆ ಸಂಬಂಧಿಸಿದ ಒಂದು ಚೌಕಟ್ಟಿಗೆ ಹೊಸದಾಗಿ ಬಲ ತುಂಬಿತು

ಎನ್ನಬೇಕು. ಆದರೆ, ಈಗ ಹೊಮ್ಮಿರುವ ಕದನವಿರಾಮವು ಹಿಂದಿನ ನಿದರ್ಶನಗಳಲ್ಲಿದ್ದಂತೆಯೇ ಅನಿಶ್ಚಿತವಾಗಿದೆ; ಸರಕಾರಿ ವ್ಯವಸ್ಥೆಗೆ ಹೊರತಾದ ‘ಪಾತ್ರಧಾರಿಗಳಿಂದ’ ಮತ್ತು ಕುತ್ಸಿತ ಚಿಂತನೆಯ ಜನರಿಂದ ರಾವಲ್ಪಿಂಡಿಯಲ್ಲಿ ಘಟಿಸಿದ ವಿಧ್ವಂಸಕ ಕೃತ್ಯಗಳಿಗೆ ಅದು ಈಡಾಗಬಹುದು.

ಆದ್ದರಿಂದ, ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸಲು ನಾವೀಗ ಕೇವಲ ಭದ್ರತಾ ಸಜ್ಜಿಕೆಗಳ ಮೂಲಕ ಮಾತ್ರವಲ್ಲದೆ, ರಾಜತಾಂತ್ರಿಕ ಅಭಿಯಾನಗಳ ಮೂಲಕವೂ ಪ್ರತಿರೋಧವನ್ನು ಬಲಪಡಿಸಬೇಕು; ಉಗ್ರವಾದಿಗಳಿಗೆ ಹಣಕಾಸಿನ ನೆರವನ್ನು ನೀಡುವ ವ್ಯವಸ್ಥೆ ಗಳನ್ನು ನಿಗ್ರಹಿಸುವ ಪರಿಪಾಠವನ್ನು ಚುರುಕುಗೊಳಿಸಬೇಕು ಹಾಗೂ ಇಂಥ ಸಾಮರ್ಥ್ಯ ನಿರ್ಮಾಣ ದಲ್ಲಿ ದೀರ್ಘಕಾಲಿಕವಾಗಿ ತೊಡಗಿಸಿಕೊಳ್ಳುವಂತಾಗಬೇಕು.

ಹಾಗೆಂದ ಮಾತ್ರಕ್ಕೆ, ಪಾಕಿಸ್ತಾನಕ್ಕೆ ನಾವು ನೀಡುವ ಶಿಕ್ಷೆಯು ವರ್ಣರಂಜಿತವಾಗಿದ್ದು ಎಲ್ಲರಿಗೂ ಗೋಚರಿಸುವಂತಿರಬೇಕು ಎಂದೇನಿಲ್ಲ; ಅದು ವ್ಯೂಹಾತ್ಮಕ ಕಾರ್ಯತಂತ್ರದ ಸ್ವರೂಪದಲ್ಲಿರಬೇಕು ಹಾಗೂ ನಿರಂತರವಾಗಿರಬೇಕು.

ರಾಜಕೀಯ ಹಿಡಿತವನ್ನು ಮರಳಿ ಪಡೆಯಲು ‘ರಾಜ್ಯತ್ವ’ವನ್ನು ಮರುಸ್ಥಾಪಿಸಬೇಕು ಕಣಿವೆ ರಾಜ್ಯಕ್ಕೆ ರಾಜ್ಯತ್ವ ಅಥವಾ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡುವುದರ ಕುರಿತಾಗಿ ಜಮ್ಮು-ಕಾಶ್ಮೀರದ ಜನರಿಗೆ ಭರವಸೆ ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿ ಏನೇ ಚಿತಾವಣೆಗಳು/ಅಡೆತಡೆಗಳು ಹೊಮ್ಮಿದರೂ ಲೆಕ್ಕಿಸದೆ, ಆ ಭರವಸೆಯನ್ನು ಈಡೇರಿಸುವುದಕ್ಕೆ ಈಗ ಕಾಲ ಒದಗಿದೆ; ಹೀಗೆ ಮಾಡಿದಲ್ಲಿ, ಭಾರತವು ಆಡಳಿತ ನಡೆಸುವುದು ಸಾಂವಿಧಾನಿಕ ಬದ್ಧತೆಯಿಂದಲೇ ವಿನಾ, ಭಯ ವನ್ನು ಬಿತ್ತುವ ಮೂಲಕ ಅಲ್ಲ ಎಂಬ ಗ್ರಹಿಕೆಯು ಜನರಲ್ಲಿ ದಟ್ಟವಾಗುತ್ತದೆ. ಏಕೆಂದರೆ, ಕೇಂದ್ರಾಡಳಿತ ಪ್ರದೇಶ ವೊಂದು ಸರಳವಾಗಿ-ಸಲೀಸಾಗಿ ದಕ್ಕಿಸಿಕೊಳ್ಳಲು ಸಾಧ್ಯವಾಗದಂಥ ಅಗತ್ಯ ಘನತೆ ಮತ್ತು ಸಾಂಸ್ಥಿಕ ಹೊಣೆಗಾರಿಕೆಯನ್ನು ಇಂಥದೊಂದು ರಾಜ್ಯತ್ವ ಅಥವಾ ರಾಜ್ಯದ ಸ್ಥಾನ ಮಾನವು ಒದಗಿಸುತ್ತದೆ ಎಂಬ ಅಂಶವನ್ನು ನಾವು ಮರೆಯಲಾಗದು.

ಹೀಗೆ ಸ್ಥಾನಮಾನವನ್ನು ಮರಳಿ ದಕ್ಕಿಸಿಕೊಡುವ ಕಾರ್ಯವಿಧಾನವು ಕ್ಷಿಪ್ರವಾಗಿರಬೇಕು ಮತ್ತು ನಿಸ್ಸಂದಿಗ್ಧವಾಗಿರಬೇಕು. ಇಲ್ಲೊಂದು ವಾಸ್ತವವನ್ನೂ ನಾವು ಗ್ರಹಿಸಬೇಕು, ಅದೆಂದರೆ- ಕಣಿವೆ ಪ್ರದೇಶವು ಒಂದು ಕೇಂದ್ರಾಡಳಿತ ಪ್ರದೇಶವಾಗಿದ್ದುಕೊಂಡೂ ಪಹಲ್ಗಾಮ್ ದಾಳಿಯನ್ನು ಅದು ತಡೆಯಲಾಗಲಿಲ್ಲ. ಹೀಗಿರುವಾಗ, ಸಾಮಾಜಿಕ ಒಡಂಬಡಿಕೆಯನ್ನು ಬಲಪಡಿಸುವಂಥ ಭರವಸೆಯ ಈಡೇರಿಕೆಯ ವಿಷಯದಲ್ಲಿ ಏಕೆ ವಿಳಂಬ ಮಾಡಬೇಕು? ಯುವಪೀಳಿಗೆಯ ಭವಿಷ್ಯಕ್ಕಾಗಿ ನಿಧಿ ಯನ್ನು ಸಜ್ಜುಗೊಳಿಸಬೇಕು ಕಾಶ್ಮೀರದ ಯುವಪೀಳಿಗೆಯ ಭವಿಷ್ಯಕ್ಕಾಗಿ ಭಾರತವು ಒಂದು ನಿಧಿ ಯನ್ನು ಪ್ರಾರಂಭಿಸಬೇಕಾದ್ದು ಹಿಂದೆಂದಿಗಿಂತ ಅಗತ್ಯವಾಗಿದೆ.

ಇದು ಬಹುಕೋಟಿಯ ಮೊಬಲಗನ್ನು ಒಳಗೊಂಡ ಒಂದು ಬಹುವಾರ್ಷಿಕ ಉಪಕ್ರಮವಾಗಿದ್ದು, ಅತೀವ ಬೆಳವಣಿಗೆಯನ್ನು ದಾಖಲಿಸಬಲ್ಲ ವೈವಿಧ್ಯಮಯ ವಲಯಗಳಲ್ಲಿ ಕಾಶ್ಮೀರಿ ಯುವಜನರಿಗೆ ತರಬೇತಿ ನೀಡುವ, ಮಾರ್ಗದರ್ಶನ ನೀಡಿ ಅವರನ್ನು ಪರಿಣತರಾಗಿ ರೂಪಿಸುವ ಹಾಗೂ ಉದ್ಯೋ ಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರೂಪುಗೊಳ್ಳಬೇಕಿದೆ. ಯುವಪೀಳಿಗೆಯು ಒಡೆಯುವು ದಕ್ಕಿಂತ ನಿರ್ಮಿಸಲು ಆಶಿಸುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಂಥದೊಂದು ದೀರ್ಘಕಾಲಿಕ ಹೂಡಿಕೆಯ ಅಗತ್ಯವು ಹಿಂದೆಂದಿಗಿಂತ ಹೆಚ್ಚಾಗಿದೆ.

ಕಾಶ್ಮೀರಿಗಳಿಗೆ ಈಗ ಬೇಕಿರುವುದು ಒಳ್ಳೆಯ ಶಿಕ್ಷಣ, ಉದ್ಯೋಗಾವಕಾಶಗಳು ಮತ್ತು ಭಾರತದ ಬೆಳವಣಿಗೆಯ ಕಥಾನಕದಲ್ಲಿ ತಮ್ಮ ಸೇರ್ಪಡೆ. ಅವರು ಇಂಥದೊಂದು ಪ್ರವೇಶವನ್ನು ಬಯಸು ತ್ತಾರೆಯೇ ವಿನಾ ಪರಕೀಯತೆಯನ್ನಲ್ಲ; ಇಂಥದೊಂದು ದೀರ್ಘಕಾಲಿಕ ಹೂಡಿಕೆ ಅವರಿಗೆ ಅಗತ್ಯ ವಿದೆಯೇ ವಿನಾ ಕೇವಲ ಒಣಸಿದ್ಧಾಂತವಲ್ಲ.

ಕಾಶ್ಮೀರ ಕಣಿವೆಯು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ಕುಶಲಿಗಳು, ಬುದ್ಧಿವಂತರು, ಅವರಲ್ಲಿ ಕೆನೆಗಟ್ಟಿರುವ ಆತಿಥ್ಯದ ಮನೋಭಾವ ಹಾಗೂ ಸಂಸ್ಕೃತಿಯ ಕಾರಣದಿಂದಾಗಿ ಜಗತ್ತಿನಲ್ಲಿ ಗುರುತಿಸಿಕೊಳ್ಳುವಂತಾಗಬೇಕೆಂದು ಅಲ್ಲಿನ ಯುವಜನರು ಬಯಸುತ್ತಾರೆಯೇ ವಿನಾ, ಕಾಶ್ಮೀರ ಕಣಿವೆಯು ಯಾವಾಗಲೂ ಸಂಘರ್ಷದ ಬೇಗೆಯಲ್ಲೇ ಬೇಯುತ್ತಿರುತ್ತದೆ ಎಂಬ ಗ್ರಹಿಕೆಯೊಂದಿಗೆ ಅದನ್ನು ಗುರುತಿಸುವಂತಾಗಬಾರದು ಎಂಬುದು ಅವರ ಹೆಬ್ಬಯಕೆ. ಕಾಶ್ಮೀರದ ಯುವಜನರಲ್ಲಿ ಸ್ಥಾಯಿಯಾಗಿರುವ ಈ ಭಾವನೆಯನ್ನು ಗೌರವಿಸಬೇಕೇ ವಿನಾ ನಿರ್ಲಕ್ಷಿಸಬಾರರು.

ಜ್ಞಾನ ಮತ್ತು ನಾವೀನ್ಯದ ಕಾರಿಡಾರ್ ರೂಪುಗೊಳ್ಳಬೇಕು ಜಮ್ಮು ಮತ್ತು ಶ್ರೀನಗರದಂಥ ಪ್ರದೇಶ ಗಳು, ಹಿಮಾಲಯದ ತಪ್ಪಲು ಪ್ರದೇಶದ ‘ಜ್ಞಾನದ ರಾಜಧಾನಿಗಳಾಗಿ’ ರೂಪುಗೊಳ್ಳುವ ವಿಪುಲ ಸಾಧ್ಯತೆಗಳಿವೆ. ಪ್ರಸ್ತುತ ಇಲ್ಲಿ ನೆಲೆಗೊಂಡಿರುವ ಸಂಸ್ಥೆಗಳನ್ನು ನವೀಕರಿಸುವ ಮೂಲಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ (ಉದಾಹರಣೆಗೆ, ಹವಾಮಾನ ಬದಲಾವಣೆ, ವ್ಯೂಹಾತ್ಮಕ ಕಾರ್ಯತಂತ್ರದ ಅಧ್ಯಯನಗಳು, ಕೃತಕ ಬುದ್ಧಿಮತ್ತೆ ಹಾಗೂ ಪ್ರವಾಸೋದ್ಯಮ ನಿರ್ವಹಣೆ ಇತ್ಯಾದಿ) ಹೊಸ ಹೊಸ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ, ಕಾಶ್ಮೀರವು ಪ್ರತಿಭೆಗಳನ್ನು ಆಕರ್ಷಿಸಬಲ್ಲದು.

ಮಾತ್ರವಲ್ಲ, ವಿಶ್ವದ ವಿವಿಧೆಡೆಯಿಂದ ಹೂಡಿಕೆಗಳನ್ನು ಸೆಳೆಯಬಲ್ಲದು. ಈ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ದೇಶದ ಐಐಟಿಗಳು, ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳು ಹಾಗೂ ಖಾಸಗಿ ಲೋಕೋಪಕಾರಿಗಳೊಂದಿಗೆ ಸಕ್ರಿಯವಾಗಿ ಕೈಜೋಡಿಸಿ ಸಹಯೋಗವನ್ನು ಕಟ್ಟಿಕೊಳ್ಳುವ ಮೂಲಕ ಗುರಿಯನ್ನು ಸಾಧಿಸಲು ಸಾಧ್ಯವಿದೆ.

ಹೀಗಾದಲ್ಲಿ, ಮತ್ತೆ ಮತ್ತೆ ಘೋಷಿಸಲ್ಪಡುತ್ತಿದ್ದ ಕರ್ಫ್ಯೂಗಳಿಗೆ ಬದಲಾಗಿ, ‘ವಿಚಾರ ಸಂಕಿರಣ’ಗಳ ಆಯೋಜನೆಯ ಮೂಲಕ ಜಮ್ಮು ಮತ್ತು ಕಾಶ್ಮೀರವು ಪ್ರಸಿದ್ಧಿಯನ್ನು ಪಡೆಯಬಲ್ಲದು ಎಂಬು ದರಲ್ಲಿ ಎರಡು ಮಾತಿಲ್ಲ. ನಾಗರಿಕ ಭದ್ರತಾ ಜಾಲವನ್ನು ವಿಸ್ತರಿಸಬೇಕು ಯಾವುದೇ ಪ್ರದೇಶದ ನಿರ್ವಹಣೆ/ವ್ಯವಸ್ಥಾಪನೆಯಲ್ಲಿ ಸಶಸ್ತ್ರ ಪಡೆಗಳು ಅನಿವಾರ್ಯವಾಗಿದ್ದರೂ, ಕಾಶ್ಮೀರದ ಭದ್ರತೆಗೆ ಒಂದು ಸದೃಢವಾದ ನಾಗರಿಕ ಭದ್ರತಾ ವ್ಯವಸ್ಥೆಯ ಅಗತ್ಯವಿದೆ.

ಗುಪ್ತಚರ ಜಾಲಗಳು, ಪೊಲೀಸ್ ಸುಧಾರಣೆಗಳು, ಸೈಬರ್-ಮೇಲ್ವಿಚಾರಣಾ ಘಟಕಗಳು ಹಾಗೂ ಸಮುದಾಯ ಸಂರಕ್ಷಣಾ ಗುಂಪುಗಳನ್ನು ಇಲ್ಲಿ ಮತ್ತಷ್ಟು ವಿಸ್ತರಿಸಬೇಕಾದ ಅಗತ್ಯವಿದೆ. ಮೂಲ ಭೂತವಾದ, ತೀವ್ರಗಾಮಿವಾದ, ವಿಧ್ವಂಸಕ ಚಿತ್ತಸ್ಥಿತಿ ಮುಂತಾದ ಅಪಸವ್ಯಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಇಲ್ಲಿನ ಸ್ಥಳೀಯರಿಗೆ ತರಬೇತಿ ನೀಡುವ ಅಗತ್ಯವಿದೆ; ಇದನ್ನು ಕೈಗೊಂಡಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳಲಾಗುವ ಭದ್ರತಾ ಪ್ರಯತ್ನಗಳಿಗೆ ಅದು ಪೂರಕವಾಗಿ ಪರಿಣಮಿಸುತ್ತದೆ.

ಭದ್ರತೆ ಎಂಬ ಪರಿಕಲ್ಪನೆಯನ್ನು ಸಮಾಜಕ್ಕೆ ಹೊರತಾಗಿ ಪರಿಗಣಿಸಲಾಗದು, ಅದನ್ನು ಸಾಮಾಜಿಕ ರಚನೆಯೊಳಗೇ ಹುದುಗಿಸುವಂತಾಗಬೇಕು. ಆಗಲೇ ನಿರೀಕ್ಷಿತ ಫಲಿತಾಂಶ ದಕ್ಕೀತು. ಮಿಕ್ಕಂತೆ, ಕಣಿವೆ ರಾಜ್ಯವು ಅನೇಕ ಋಷಿಗಳ ತಪೋಭೂಮಿಯಾಗಿದೆ, ಬಗೆಬಗೆಯ ದೇವಾಲಯಗಳು ಮತ್ತು ಶ್ರದ್ಧಾಭಕ್ತಿ ಕೇಂದ್ರಗಳ ನೆಲೆಯಾಗಿದೆ ಹಾಗೂ ಸಂಕೀರ್ಣ-ಸಂಯೋಜಿತ ಸಂಸ್ಕೃತಿಯ ತವರೂ ರಾಗಿದೆ. ನವೋತ್ಸಾಹವನ್ನು ತುಂಬುವ ಹಬ್ಬ-ಹರಿದಿನಗಳು, ಅಂತರಧರ್ಮೀಯ ಸಂವಹನ, ಪರಂಪರೆಯ ಮರುಸ್ಥಾಪನೆ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಯ ಮೂಲಕ ಈ ಬಹುತ್ವ ನೀತಿಯನ್ನು ಉತ್ತೇಜಿಸುವಂತಾಗಬೇಕು.

ಭಾರತದೊಳಗಿನ ಸಾಂಸ್ಕೃತಿಕ ರಾಜತಾಂತ್ರಿಕತೆಯು ವಿಶೇಷವಾಗಿ ಯುವಕರಲ್ಲಿ ಈ ಪರಂಪರೆ ಯನ್ನು ಎತ್ತಿ ತೋರಿಸುವಂತಾಗಬೇಕು. ಕಾಶ್ಮೀರಿ ಪಂಡಿತರು ಗೌರವಾನ್ವಿತ ರೀತಿಯಲ್ಲಿ ಇಲ್ಲಿಗೆ ಮರಳುವಂತಾಗುವುದನ್ನು ಕೂಡ ಈ ವೇಳೆ ಖಾತ್ರಿಪಡಿಸಿಕೊಳ್ಳಬೇಕು ಎಂಬುದನ್ನು ಬಿಡಿಸಿ ಹೇಳ ಬೇಕಿಲ್ಲ. ಜತೆಗೆ, ಈ ಪ್ರದೇಶದಲ್ಲಿ ವ್ಯಾಪಿಸಿರುವ ಪ್ರವಾಸೋದ್ಯಮ ಮತ್ತು ಯಾತ್ರಾಸ್ಥಳಗಳನ್ನು ಉತ್ತೇಜಿಸಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ.

ಭಾರತದ ಉದ್ದಗಲಕ್ಕೂ ತೀರ್ಥಯಾತ್ರೆಗಳು, ಶೈಕ್ಷಣಿಕ ವಿನಿಮಯಗಳು ಮತ್ತು ಪಾರಂಪರಿಕ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಂದು ಸುಸ್ಥಿರ ಮತ್ತು ನಿರಂತರ ಅಭಿಯಾನ ವನ್ನು ಹಮ್ಮಿಕೊಳ್ಳುವಂತಾಗಬೇಕು. ಹೀಗೆ ಮಾಡಿದಾಗ, ವಿವಿಧ ಜನಾಂಗೀಯರ ನಡುವಿನ ಬಾಂಧವ್ಯಗಳು ಹಾಗೂ ಸೌಹಾರ್ದ -ಸಂವಹನಗಳು ಮತ್ತಷ್ಟು ಗಟ್ಟಿಯಾಗುತ್ತವೆ.

ಜತೆಗೆ, ನಾಗರಿಕ ಸಮಾಜದ ಪಾಲುದಾರಿಕೆಗಳನ್ನು ರೂಪಿಸಲೆಂದು ಕಣಿವೆ ರಾಜ್ಯದ ಜಿಲ್ಲೆಗಳನ್ನು ಮಿಕ್ಕ ರಾಜ್ಯಗಳು ದತ್ತು ತೆಗೆದುಕೊಳ್ಳುವಂಥ ಪರಿಪಾಠಕ್ಕೂ ಉತ್ತೇಜಿಸಬೇಕು. ಇಂಥ ಪರಿಪಾಠಗಳಿಗೆ ಒತ್ತು ನೀಡಿದಲ್ಲಿ, ದಶಕಗಟ್ಟಲೆ ನಡೆಸುವ ವಿಚಾರ ಸಂಕಿರಣಗಳಿಂದ ಹೊಮ್ಮುವ ಫಲಿತಾಂಶಕ್ಕೂ ಮೀರಿದ ಸಾಧನೆ ಕೈಗೂಡುತ್ತದೆ. ಕಾಶ್ಮೀರದ ಹಿತಾಸಕ್ತಿಯನ್ನು ಕಾಪಾಡಲೆಂದು, ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಮರುರೂಪಿಸಬೇಕಾದ ಅಗತ್ಯವಿದೆ. ಇದರ ಸಮರ್ಥ ನೆರವೇರಿಕೆ ಗಾಗಿ ಸದರಿ ಒಡಂಬಡಿಕೆಯನ್ನು ಮರುಮೌಲ್ಯಮಾಪನ ಮಾಡಬೇಕಿದೆ.

ಈ ಒಡಂಬಡಿಕೆಯನ್ನು ಕೇವಲ ತಾಂತ್ರಿಕವಾಗಿ ಅಲ್ಲದೆ, ರಾಜಕೀಯವಾಗಿ ಮತ್ತು ನೈತಿಕವಾಗಿ ಕೂಡ ಮರುವಿಮರ್ಶಿಸಬೇಕಾಗಿರುವ ಕಾಲಘಟ್ಟವಿದು. ಪ್ರಾದೇಶಿಕ ಶಾಂತಿಯನ್ನು ಹುಡಿಗಟ್ಟುವ ಮತ್ತು ವಿಧ್ವಂಸಕ ಕೃತ್ಯಗಳಿಗೆ ಚಿತಾವಣೆ ನೀಡುವ ತನ್ನ ಚಾಳಿಯನ್ನು ಪಾಕಿಸ್ತಾನವು ಒಂದೊಮ್ಮೆ ಮುಂದುವರಿಸಿದಲ್ಲಿ, ಸದರಿ ಒಡಂಬಡಿಕೆಯನ್ನು ಸ್ಥಗಿತಗೊಳಿಸುವ ನಡೆಯು ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ನೆರವೇರಿಕೆಗೆ ಇಂಬುಕೊಡುತ್ತದೆಯೇ ಅಥವಾ ಕಾಶ್ಮೀರ ಪ್ರದೇಶದ ಹಿತಾಸಕ್ತಿಯ ಈಡೇರಿಕೆಗೆ ಅದು ಪೂರಕವಾಗಿರುತ್ತದೆಯೇ ಎಂಬುದನ್ನು ಭಾರತವು ಅಳೆದೂ ಸುರಿದೂ ನೋಡಿ ಪರಿಗಣಿಸಬೇಕಿದೆ.

ಒಬ್ಬ ಕಾಶ್ಮೀರಿ ಪಂಡಿತನಾಗಿ, ನಷ್ಟದ ನೋವು ಎಂಥದ್ದು ಹಾಗೂ ಭರವಸೆಗಿರುವ ಶಕ್ತಿ ಎಂಥದ್ದು ಎಂಬುದನ್ನು ನಾನು ಅರಿತಿದ್ದೇನೆ. ಕಾಶ್ಮೀರ ಪ್ರದೇಶದಲ್ಲಿ ಉತ್ತಮ ಭವಿಷ್ಯವನ್ನು ನಿರ್ಮಿಸಲು ಸಾಧ್ಯ ಎಂಬುದನ್ನೂ ನಾನು ಅರಿತಿದ್ದೇನೆ. ಇದನ್ನು ದಟ್ಟವಾಗಿ ಗ್ರಹಿಸಿಕೊಂಡು ಅದನ್ನು ಒಂದು ಕ್ರಿಯೆಯಾಗಿ ಸಾಕಾರಗೊಳಿಸಬೇಕು ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸಬೇಕು.

ವಿಧ್ವಂಸಕ ಚಿತ್ತಸ್ಥಿತಿಯವರು ಮತ್ತೊಮ್ಮೆ ದಾಳಿಮಾಡುವಂತಾಗುವುದಕ್ಕೆ ಪಹಲ್ಗಾಮ್ ಅನುವು ಮಾಡಿಕೊಡಬಾರದು. ಬದಲಿಗೆ ಅದು, ನವಕಾಶ್ಮೀರವು ಉದಯಿಸುವ ನೆಲೆಯಾಗಬೇಕು. ಒಂದು ಘನತೆವೆತ್ತ, ಪ್ರಜಾಸತ್ತಾತ್ಮಕ ಮತ್ತು ಅಂತರಾಳದಲ್ಲಿ ಭಾರತೀಯತೆ ತುಂಬಿರುವ ಮಡಿಲಾಗಿ ಅದು ಹೊರಹೊಮ್ಮಬೇಕು. ಅದು ಈ ಕ್ಷಣಕ್ಕೆ ಪ್ರತಿಯೊಬ್ಬ ಕಾಶ್ಮೀರಿಯ ಆಶಯವೂ ಹೌದು, ನಿರೀಕ್ಷೆ ಯೂ ಹೌದು.

(ಲೇಖಕರು ಜವಾಹರಲಾಲ್ ನೆಹರು

ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಅಧ್ಯಯನ

ಶಾಲೆಯ ಡೀನ್ ಮತ್ತು ಪ್ರಾಧ್ಯಾಪಕರು)