ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ceasefire Violations: ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನದಿಂದ ದಾಳಿ; ಏರ್‌ ಫೋರ್ಸ್‌ ಅಧಿಕಾರಿ ಹುತಾತ್ಮ

Indian Air Force: ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಭಾರತೀಯ ವಾಯುಪಡೆಯಲ್ಲಿ ವೈದ್ಯಕೀಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜಸ್ಥಾನದ ನಿವಾಸಿ ಸುರೇಂದ್ರ ಕುಮಾರ್ ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಪಾಕಿಸ್ತಾನದ ವಾಯುದಾಳಿ ನಡೆದಿದೆ.

ಉಧಂಪುರದಲ್ಲಿ ಏರ್‌ ಫೋರ್ಸ್‌ ಅಧಿಕಾರಿ ಹುತಾತ್ಮ

ಸುರೇಂದ್ರ ಕುಮಾರ್.

Profile Ramesh B May 11, 2025 2:52 AM

ಶ್ರೀನಗರ: ಭಾರತವನ್ನು ಕೆಣಕಲು ಹೋಗಿ ಸರಿಯಾಗಿ ಪೆಟ್ಟು ತಿಂದರೂ ಬುದ್ಧಿ ಕಲಿಯದ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ದಾಳಿ ಮುಂದುವರಿಸಿದೆ. ಪಾಕ್‌ನ ಈ ದಾಳಿಯಿಂದಾಗಿ ಮೇ 10ರಂದು ಭಾರತೀಯ ವಾಯುಪಡೆಯಲ್ಲಿ (Indian Air Force-IAF) ವೈದ್ಯಕೀಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜಸ್ಥಾನದ ನಿವಾಸಿ ಸುರೇಂದ್ರ ಕುಮಾರ್ (Surendra Kumar) ಹುತಾತ್ಮರಾಗಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ಅವರು ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ರಾಜಸ್ಥಾನದ ಜುನ್ಜುನು ನಿವಾಸಿಯಾಗಿದ್ದ ಸುರೇಂದ್ರ ಕುಮಾರ್ ಕಳೆದ 14 ವರ್ಷಗಳಿಂದ ಭಾರತೀಯ ವಾಯುಪಡೆಯ ವೈದ್ಯಕೀಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಅವರನ್ನು ಉಧಮ್‌ಪುರದ 39 ವಿಂಗ್‌ನಲ್ಲಿ ನಿಯೋಜಿಸಲಾಗಿತ್ತು. ಅವರ ಮೃತಪಟ್ಟಿರುವುದನ್ನು ಸೇನಾ ಪ್ರಧಾನ ಕಚೇರಿ ದೃಢಪಡಿಸಿದೆ. ಸುರೇಂದ್ರ ಕುಮಾರ್ ಅವರು ಸ್ಥಳೀಯ ಯುವಕರನ್ನು ಸಶಸ್ತ್ರ ಪಡೆಗಳಿಗೆ ಸೇರಲು ಪ್ರೇರೇಪಿಸುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: ಪಾಕಿಸ್ತಾನದಿಂದ ಶೆಲ್‌ ದಾಳಿ; ಜಮ್ಮುವಿನಲ್ಲಿ ಬಿಎಸ್‌ಎಫ್‌ ಯೋಧ ಹುತಾತ್ಮ: 7 ಮಂದಿಗೆ ಗಾಯ

ಇತ್ತೀಚೆಗಷ್ಟೆ ಗೃಹ ಪ್ರವೇಶ ನೆರವೇರಿತ್ತು

ಸುರೇಂದ್ರ ಕುಮಾರ್ ರಜೆಯ ಬಳಿಕ ಏ. 15ರಂದು ಕರ್ತವ್ಯಕ್ಕೆ ಮರಳಿದ್ದರು. ಅವರು ತಮ್ಮ ಗ್ರಾಮದಲ್ಲಿ ನಿರ್ಮಿಸಿದ ಮನೆಯ ಗೃಹ ಪ್ರವೇಶ ಇತ್ತೀಚೆಗಷ್ಟೆ ನೆರವೇರಿತ್ತು. ಅವರು ತಾಯಿ, ಪತ್ನಿ ಸೀಮಾ, 8 ವರ್ಷದ ಮಗಳು ಮತ್ತು 5 ವರ್ಷದ ಮಗನನ್ನು ಅಗಲಿದ್ದಾರೆ.

ನಿವೃತ್ತ ಸಿಆರ್‌ಪಿಎಫ್ ಸಿಬ್ಬಂದಿಯಾಗಿದ್ದ ಅವರ ತಂದೆ ಶಿಶುಪಾಲ್ ಸಿಂಗ್ ಈ ಹಿಂದೆಯೇ ನಿಧನರಾಗಿದ್ದರು. ಪತಿಯ ನಿಧನದ ಸುದ್ದಿ ತಿಳಿದು ಸೀಮಾ ಕುಸಿದು ಬಿದ್ದಿದ್ದು, ಅವರಿಗೆ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಸದ್ಯ ಅವರು ಚೇತರಿಸಿಕೊಂಡಿದ್ದು, ಡಿಸ್‌ಚಾರ್ಜ್‌ ಮಾಡಲಾಗಿದೆ. ಜಿಲ್ಲಾಧಿಕಾರಿ ರಾಮ್ ಅವತಾರ್ ಮೀನಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಶರದ್ ಚೌಧರಿ ಮತ್ತಿತರರು ಸೀಮಾ ಅವರ ಆರೋಗ್ಯ ವಿಚಾರಿಸಿದ್ದರು. ಜತೆಗೆ ವೈದ್ಯಕೀಯ ಸಿಬ್ಬಂದಿಗೆ ವಿಶೇಷ ಆರೈಕೆ ನೀಡುವಂತೆ ಸೂಚಿಸಿದ್ದರು.

ಸುರೇಂದ್ರ ಕುಮಾರ್ 14 ವರ್ಷಗಳಿಗೂ ಹೆಚ್ಚು ಕಾಲ ಸಶಸ್ತ್ರ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. "ಇದಕ್ಕೂ ಮೊದಲು ಅವರನ್ನು ಲಖನೌನಲ್ಲಿ ನಿಯೋಜಿಸಲಾಗಿತ್ತು ಮತ್ತು 2 ತಿಂಗಳ ಹಿಂದೆಯಷ್ಟೆ ಉಧಂಪುರಕ್ಕೆ ವರ್ಗಾಯಿಸಲಾಗಿತ್ತು. ಇತ್ತೀಚೆಗಷ್ಟೆ ಅವರು ತಮ್ಮ ಮನೆಯ ಗೃಹ ಪ್ರವೇಶ ನೆರವೇರಿಸಿದ್ದರುʼʼ ಎಂದು ಅವರ ಸೋದರ ಸಂಬಂಧಿ, ಮಾಜಿ ಸೈನಿಕ ಕುಲದೀಪ್ ಕುಮಾರ್ ಮೋಗಾ ಹೇಳಿದ್ದಾರೆ.

ʼʼಸುರೇಂದ್ರ ಅವರೊಂದಿಗೆ ಉಧಂಪುರದಲ್ಲಿ ಇದ್ದ ಸೀಮಾ, 10 ದಿನಗಳ ಹಿಂದೆ ತಮ್ಮ ಅಜ್ಜ ಮೃತಪಟ್ಟ ಹಿನ್ನೆಲೆಯಲ್ಲಿ ಜುನ್ಜುನುವಿನ ಬಲರಿಯಾ ಗ್ರಾಮಕ್ಕೆ ಮರಳಿದ್ದರು. ಅವರು ಶೀಘ್ರದಲ್ಲೇ ಉಧಂಪುರಕ್ಕೆ ಮರಳಲು ಸಿದ್ಧತೆ ನಡೆಸಿದ್ದರುʼʼ ಎಂದು ಕುಲದೀಪ್ ಕುಮಾರ್ ತಿಳಿಸಿದ್ದಾರೆ.

"ನಮಗೆ ಭಾರತ ಸರ್ಕಾರದ ಮೇಲೆ ನಂಬಿಕೆ ಇದೆ. ಸುರೇಂದ್ರ ಅವರ ತ್ಯಾಗ ವ್ಯರ್ಥವಾಗುವುದಿಲ್ಲ. ಪಾಕಿಸ್ತಾನಕ್ಕೆ ನಮ್ಮ ಸೇನಾ ಪಡೆಗಳು ಶೀಘ್ರದಲ್ಲೇ ಸೂಕ್ತ ಉತ್ತರ ನೀಡಲಿವೆ" ಎಂದು ಅವರು ಹೇಳಿದ್ದಾರೆ.