NEET PG 2025: ಜೂ. 15ರಂದು ನಿಗದಿಯಾಗಿದ್ದ ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆ
ಜೂ. 15ಕ್ಕೆ ನಿಗದಿಯಾಗಿದ್ದ ನೀಟ್ ಪಿಜಿ 2025 ಪರೀಕ್ಷೆಯನ್ನು ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ ಮುಂದೂಡಿದೆ. ಪಾರದರ್ಶಕತೆ ಮತ್ತು ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) ಮಹತ್ವದ ಪ್ರಕಟಣೆ ಹೊರಡಿಸಿದ್ದು, ನೀಟ್ ಪಿಜಿ 2025 (NEET PG 2025) ಪರೀಕ್ಷೆಯನ್ನು ಮುಂದೂಡಿದೆ. ಈ ಮೊದಲು ಪರೀಕ್ಷೆಯನ್ನು ಜೂ. 15ಕ್ಕೆ ನಿಗದಿಪಡಿಸಲಾಗಿತ್ತು. ಪಾರದರ್ಶಕತೆ ಮತ್ತು ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಬೇಕೆಂದು ಸುಪ್ರೀಂ ಕೋರ್ಟ್ (Supreme Court) ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರಿಷ್ಕೃತ ದಿನಾಂಕ ಇನ್ನಷ್ಟೆ ಪ್ರಕಟಿಸಬೇಕಿದೆ.
2 ಪಾಳಿಯಲ್ಲಿ (ಶಿಫ್ಟ್) ನಡೆಸುವ ಪರೀಕ್ಷಾ ಸ್ವರೂಪವನ್ನು ಪ್ರಶ್ನಿಸಿ ಅಭ್ಯರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಯ ವಾದ-ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ಪರೀಕ್ಷೆ ಒಂದೇ ಪಾಳಿಯಲ್ಲಿ ನಡೆಸಬೇಕೆಂದು ನಿರ್ದೇಶನ ನೀಡಿದೆ. ನೀಟ್ ಪಿಜಿ 2025 ಪರೀಕ್ಷೆಯನ್ನು ಸುರಕ್ಷಿತ ಮತ್ತು ಪಾರದರ್ಶಕ ಪರೀಕ್ಷಾ ಕೇಂದ್ರಗಳಲ್ಲಿ ಒಂದೇ ಶಿಫ್ಟ್‌ನಲ್ಲಿ ನಡೆಸುವಂತೆ ನ್ಯಾಯಾಲಯ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿಗೆ ಈಗಾಗಲೇ ಸೂಚಿಸಿದೆ.
NEET PG has been postponed # NEET PG 2025 @NbeIndia please give clarification about NEET PG 2025 Exam date @JPNadda @MoHFW_INDIA #neetpgpostpone #neetpg pic.twitter.com/wzGbRS8Osg
— Dr AKSHAY DONGARDIVE (@dr_dongardive) June 2, 2025
ಈ ಸುದ್ದಿಯನ್ನೂ ಓದಿ: NEET Exam: ಸಿಇಟಿ ಬಳಿಕ ನೀಟ್ ಪರೀಕ್ಷೆ ವೇಳೆಯೂ ವಿದ್ಯಾರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗಳು; ಕಲಬುರಗಿಯಲ್ಲಿ ಎಡವಟ್ಟು
ಸುಪ್ರೀಂ ಕೋರ್ಟ್‌ನ ಸೂಚನೆಯ ಹಿನ್ನೆಲೆಯಲ್ಲಿ ಎನ್‌ಬಿಎಎಂಎಸ್ ಇದೀಗ ಭಾರತದಾದ್ಯಂತ ಹೆಚ್ಚಿನ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ. ಜತೆಗೆ ಎಲ್ಲ ಅಭ್ಯರ್ಥಿಗಳಿಗೆ ಒಂದೇ ಪಾಳಿಯಲ್ಲಿ ಪರೀಕ್ಷೆಯನ್ನು ನಡೆಸಲು ಅಗತ್ಯವಿರುವ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಇದು ಎನ್‌ಬಿಎಎಂಎಸ್‌ಗೆ ದೊಡ್ಡ ಸವಾಲಾಗಿದ್ದು, ಈ ಕಾರಣಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿದೆ.
ʼʼನೀಟ್ ಪಿಜಿ 2025 ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಎನ್‌ಬಿಎಎಂಎಸ್ ಇನ್ನೂ ಘೋಷಿಸಿಲ್ಲ. ಅಭ್ಯರ್ಥಿಗಳು ಹೊಸ ಪರೀಕ್ಷಾ ದಿನಾಂಕ, ಹಾಲ್ ಟಿಕೆಟ್ ಬಿಡುಗಡೆ ಮತ್ತು ಸಂಪೂರ್ಣ ಪರೀಕ್ಷಾ ವೇಳಾಪಟ್ಟಿಗಾಗಿ ಅಧಿಕೃತ ಎನ್‌ಬಿಎಎಂಎಸ್ ವೆಬ್‌ಸೈಟ್‌ಗಳಾದ natboard.edu.in ಮತ್ತು nbe.edu.in ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕುʼʼ ಎಂದು ಮೂಲಗಳು ತಿಳಿಸಿವೆ.
ಪರೀಕ್ಷಾ ವಿಧಾನ
ಸುಪ್ರೀಂ ಕೋರ್ಟ್ ಆದೇಶದಂತೆ ಇನ್ನು ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಲಾಗುತ್ತದೆ. ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer-Based Test -CBT) ಆಗಿದ್ದು, ಇಂಗ್ಲಿಷ್‌ನಲ್ಲಿ 200 ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) ಒಳಗೊಂಡಿರುತ್ತದೆ. ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಪೂರ್ಣಗೊಳಿಸಲು 3 ಗಂಟೆ 30 ನಿಮಿಷಗಳ ಕಾಲಾವಕಾಶವಿರುತ್ತದೆ.
ನೀಟ್ ಪಿಜಿ 2025 ಪರೀಕ್ಷೆಯನ್ನು ಮುಂದೂಡಲಾಗುತ್ತಿದೆ ಎಂಬ ವದಂತಿ ಏಪ್ರಿಲ್‌ನಲ್ಲಿ ಹಬ್ಬಿದ್ದವು. ಅದಾಗ್ಯೂ ಅಧಿಕೃತವಾಗಿ ದೃಢಪಟ್ಟಿರಲಿಲ್ಲ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ನಿರ್ದೇಶನದಿಂದಾಗಿ ಪರೀಕ್ಷೆಯನ್ನು ಈಗ ಅಧಿಕೃತವಾಗಿ ಮುಂದೂಡಲಾಗಿದೆ.