Maratha Warriors: ಭಾರತದ ಚರಿತ್ರೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ಬಲಿಷ್ಠ ಮರಾಠ ಯೋಧರ ಮಾಹಿತಿ ಇಲ್ಲಿದೆ
ಭಾರತದ ರಾಜ ಮನೆತನಗಳ ಪೈಕಿ ಮರಾಠ ಸಾಮ್ರಾಜ್ಯಕ್ಕೆ ಪ್ರಮುಖವಾದ ಸ್ಥಾನವಿದೆ. ಸ್ವರಾಜ್ಯದ ಕಲ್ಪನೆಯೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರು ಸ್ಥಾಪಿಸಿದ ಈ ಮರಾಠ ಸಾಮ್ರಾಜ್ಯ ಒಂದು ಕಾಲದಲ್ಲಿ ಭಾರತದ ಬಹುಭಾಗವನ್ನು ಆಳಿದ ಖ್ಯಾತಿಗೆ ಪಾತ್ರವಾಗಿತ್ತು. ಈ ಸಾಮ್ರಾಜ್ಯದಲ್ಲಿ ಆಗಿ ಹೋದ ಬಲಿಷ್ಠ ಯೋಧರ ಬಗ್ಗೆ ಇಲ್ಲಿದ ಮಾಹಿತಿ...

ಟಾಪ್ 10 ಬಲಿಷ್ಠ ಮರಾಠ ಯೋಧರ ಬಗ್ಗೆ ನಿಮಗೆಷ್ಟು ಗೊತ್ತು?

ಮುಂಬೈ: ಭಾರತದ ಭವ್ಯ ಇತಿಹಾಸದಲ್ಲಿ ಮರಾಠ ಸಾಮ್ರಾಜ್ಯ (Maratha Empire) ಮತ್ತು ಮರಾಠ ಯೋಧರಿಗೆ (Maratha Soldires) ತಮ್ಮದೇ ಆದ ಪ್ರಾಮುಖ್ಯತೆಯಿದೆ. ಮರಾಠ ರಾಜರು ಆ ಕಾಲದಲ್ಲಿ ಭಾರತವನ್ನು ಆಳುತ್ತಿದ್ದ ವಿವಿಧ ರಾಜ ಮನೆತನಗಳ ಪೈಕಿ ಶಕ್ತಿಶಾಲಿ ರಾಜ ಮನೆತನಗಳಲ್ಲಿ ಒಬ್ಬರಾಗಿದ್ದರು. ತಮ್ಮ ಸಾಹಸ, ಮಿಲಿಟರಿ ತಂತ್ರಗಾರಿಕೆ ಮತ್ತು ಮೊಘಲರು (Mughals) ಹಾಗೂ ಬ್ರಿಟಿಷರನ್ನು (British) ಅವರು ದಿಟ್ಟತನದಿಂದ ಎದುರಿಸಿದ ರೀತಿ ಅವರಿಗೆ ಸ್ವಾತಂತ್ರ್ಯ ಪೂರ್ವ ಭಾರತದ ಇತಿಹಾಸದಲ್ಲಿ ಮಹತ್ತರವಾದ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ. ಭಾರತ ಉಪಖಂಡವನ್ನು ಹಲವಾರು ವರ್ಷಗಳ ಕಾಲ ಆಳ್ವಿಕೆ ನಡೆಸಿ ದೊಡ್ಡದಾದ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ ಹೆಸರುವಾಸಿಯಾಗಿದ್ದರು. ಈ ಮರಾಠ ಸಾಮ್ರಾಜ್ಯಕ್ಕೆ ಛತ್ರಪತಿ ಶಿವಾಜಿ ಮಹಾರಾಜರಂತಹ (Chhatrapati Shivaji Maharaj) ಗಟ್ಟಿ ನಾಯಕತ್ವ ಲಭಿಸಿತ್ತು.
ನಾವಿಲ್ಲಿ ಇಂದು 10 ಬಲಶಾಲಿ ಮರಾಠ ಯೋಧರ ಸಂಕ್ಷಿಪ್ತ ಪರಿಚಯವನ್ನು ನಿಮಗೆ ಮಾಡಿಕೊಡಲಿದ್ದೇವೆ.
1 ಛತ್ರಪತಿ ಶಿವಾಜಿ ಮಹಾರಾಜ (1630 – 1680)
ಮರಾಠ ಸಾಮ್ರಾಜ್ಯದ ಸ್ಥಾಪಕರಾದ ಛತ್ರಪತಿ ಶಿವಾಜಿ ಮಾಹಾರಾಜರು 1630ರಲ್ಲಿ ಶಹಾಜಿ ಭೋಸಲೆ ಮತ್ತು ಜೀಜಾಬಾಯಿಯ ಮಗನಾಗಿ ಜನಿಸುತ್ತಾರೆ. ಈಗ ಮಹಾರಾಷ್ಟ್ರ ಎಂದು ಕರೆಯಿಸಿಕೊಳ್ಳುತ್ತಿರುವ ಪಶ್ಚಿಮ ದಖ್ಖನ್ ಪ್ರಸ್ಥಭೂಮಿಯ ಸತಾರ ಪ್ರದೇಶದಲ್ಲಿ ಶಿವಾಜಿ ವಾಸವಾಗಿದ್ದರು. ಶಕ್ತಿಶಾಲಿ ಸೇನಾ ವ್ಯವಸ್ಥೆ ಮತ್ತು ಗೆರಿಲ್ಲಾ ಯುದ್ಧ ತಂತ್ರಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಶಿವಾಜಿ ಮಹಾರಾಜರು ಅದಿಲ್ ಶಾಹಿ ಮತ್ತು ಮೊಘಲ್ ಪ್ರಾಬಲ್ಯಕ್ಕೆ ಪ್ರಬಲ ಸವಾಲನ್ನು ಒಡ್ಡಿದ್ದರು. ಶಿವಾಜಿ ಮಹಾರಾಜರು 1680ರಲ್ಲಿ ರಾಯಗಢ ಕೋಟೆಯಲ್ಲಿ ಮರಾಠ ಸಾಮ್ರಾಜ್ಯದ ಛತ್ರಪತಿಯಾಗಿ ಅಭಿಷಿಕ್ತರಾದರು. 1680 ಶಿವಾಜಿಯ ನಿಧನವಾಯಿತು.
2 ತಾನಾಜಿ ಮಾಲಸೂರೆ (1626 – 1670)
ಛತ್ರಪತಿ ಮಹಾರಾಜರ ನಂಬಿಕಸ್ಥ ಸೇನಾಧಿಪತಿ ಆಗಿದ್ದ ತಾನಾಜಿ ಶತ್ರುಗಳ ವಶದಲ್ಲಿದ್ದ ಕೊಂಡಾಣ ಕೋಟೆಯನ್ನು ವಶಪಡಿಸಿಕೊಳ್ಳಲು ಭಾರೀ ಸಾಹಸಪಟ್ಟ ದಿಟ್ಟ ಸೇನಾನಾಯಕನಾಗಿ ಇತಿಹಾಸದ ಪುಟದಲ್ಲಿ ಗುರುತಿಸಿಕೊಂಡಿದ್ದಾರೆ. ಕೊಂಡಾಣ ಕೋಟೆಯನ್ನು ಇಂದು ಸಿಂಹಗಢ ಎಂದು ಕರೆಯುತ್ತಾರೆ. ಈ ಕೋಟೆಯನ್ನು ಶತ್ರುಗಳ ಕೈಯಿಂದ ವಶಪಡಿಸಿಕೊಳ್ಳುವುದಕ್ಕಾಗಿ ನಡೆದ ಭಾರೀ ಕಾದಾಟದಲ್ಲಿ ತಾನಾಜಿ 1670ರಲ್ಲಿ ವೀರ ಮರಣವನ್ನಪ್ಪುತ್ತಾರೆ.
3 ಸಂಭಾಜಿ ಮಾಹಾರಾಜ್ (1657 – 1689)
ಛತ್ರಪತಿ ಶಿವಾಜಿ ಮಹಾರಾಜರಿಗೆ ಇಬ್ಬರು ಮಕ್ಕಳಿದ್ದರು, ಅವರೆಂದರೆ ರಾಜಾರಾಮ್ ಮಹಾರಾಜ್ ಮತ್ತು ಸಂಭಾಜಿ ಮಹಾರಾಜ್. ಶಿವಾಜಿ ಮತ್ತು ಸಾಯಿಬಾಯಿ ಅವರ ಮೊದಲ ಪುತ್ರನಾದ ಸಂಭಾಜಿ ಮಹಾರಾಜ್ 1681ರಲ್ಲಿ ಮರಾಠ ಸಾಮ್ರಾಜ್ಯಕ್ಕೆ ಅಧಿಪತಿಯಾಗುತ್ತಾರೆ. ಸಂಭಾಜಿ ಮಹಾರಾಜರು, ಪೋರ್ಚು್ಗೀಸರು, ಸಿದ್ದಿಗಳು ಮತ್ತು ಮೊಘಲರ ವಿರುದ್ಧ ನಿರಂತರ ಹೋರಾಟವನ್ನು ಮಾಡುತ್ತಾರೆ. ಆದರೆ 1689ರಲ್ಲಿ ಸಂಭಾಜಿ ಮಹಾರಾಜರನ್ನು ಔರಂಗಜೇಬ್ ಸೆರೆ ಹಿಡಿಯುತ್ತಾನೆ, ಮತ್ತು ಸಂಭಾಜಿ ಮಹಾರಾಜರು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಒಪ್ಪದೇ ಇದ್ದಾಗ ಅವರನ್ನು ಕ್ರೂರವಾಗಿ ಹಿಂಸಿಸಿ ಕೊಲ್ಲಲಾಗುತ್ತದೆ. ಇದೀಗ ದೇಶಾದ್ಯಂತ ಸದ್ದು ಮಾಡುತ್ತಿರುವ ಬಾಲಿವುಡ್ ಸಿನೆಮಾ ಛಾವಾ, ಶಿವಾಜಿ ಮಹಾರಾಜರ ವೀರ ಪುತ್ರ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿ ನಿರ್ಮಾಣಗೊಂಡ ಚಿತ್ರವಾಗಿದೆ.
4 ಶಾಹುಜಿ ಮಹಾರಾಜ್ (1682 – 1749)
ಛತ್ರಪತಿ ಶಿವಾಜಿ ಮಹಾರಾಜರ ಮೊಮ್ಮಗ ಮತ್ತು ಸಂಭಾಜಿ ಮಹಾರಾಜರ ಪುತ್ರರಾಗಿದ್ದ ಶಾಹುಜಿ ಮಹಾರಾಜ್ ಹಲವಾರು ವರ್ಷಗಳನ್ನು ಮೊಘಲರ ಕಾರಾಗೃಹದಲ್ಲಿ ಕಳೆಯಬೇಕಾಗಿ ಬಂತು. ಔರಂಗಜೇಬ್ ಮರಣದ ಬಳಿಕ, ಬಹದ್ದೂರ್ ಶಾ ಈತನನ್ನು ಕಾರಾಗೃಹದಿಂದ ಬಿಡುಗಡೆಗೊಳಿಸುತ್ತಾನೆ. ತಕ್ಷಣವೇ ತಾನು ಮರಾಠ ಸಾಮ್ರಾಜ್ಯದ ಅಧಿಪತಿ ಎಂದು ಘೋಷಿಸಿಕೊಂಡ ಶಾಹುಜಿ, ತನ್ನ ಚಿಕ್ಕಮ್ಮ ತಾರಾಬಾಯಿ ಮತ್ತು ಆಕೆಯ ಪುತ್ರ, ಶಿವಾಜಿ ಮಹಾರಾಜರ ಎರಡನೇ ಪುತ್ರ ಮತ್ತು ಸಂಭಾಜಿಯ ಸಹೋದರ ರಾಜಾರಾಮ್ ಮಹಾರಾಜ್ ವಿರುದ್ಧವೇ ಸವಾಲೆಸೆಯುತ್ತಾರೆ. ಕಾರಾಗೃಹದಿಂದ ಬಿಡುಗಡೆಗೊಂಡ ಬಳಿಕ ಶಾಹುಜಿ ಮಹಾರಾಜರನ್ನು ಪೇಶ್ವೆಯನ್ನಾಗಿ ನೇಮಿಸಲಾಗುತ್ತದೆ. ಮರಾಠ ಸಾಮ್ರಾಜ್ಯದ ಬೆಳವಣಿಗೆಗೆ ಶಾಹುಜಿ ಬಹಳಷ್ಟ್ರ ಶ್ರಮ ಪಡುತ್ತಾರೆ. 1749ರಲ್ಲಿ ತಾನು ನಿಧನ ಹೊಂದುವಲ್ಲಿಯವರೆಗೆ ಶಾಹುಜಿ ಮಹಾರಾಜ್ ಮರಾಠ ಸಾಮ್ರಾಜ್ಯವನ್ನು ಒಂದು ಬಲಿಷ್ಠ ಸಾಮ್ರಾಜ್ಯವನ್ನಾಗಿ ಕಟ್ಟುತ್ತಾರೆ.
5 ಬಾಲಾಜಿ ವಿಶ್ವನಾಥ್ ಭಟ್ (1662 – 1720)
1662ರಲ್ಲಿ ಜನಿಸಿದ ಬಾಲಾಜಿ ವಿಶ್ವನಾಥ್ ಭಟ್, ಮರಾಠ ಸಾಮ್ರಾಜ್ಯದ ಮೊದಲ ಪೇಶ್ವೆ, ಇವರು ಸಾಹು ಮಹಾರಾಜರ ಕಾಲದಲ್ಲಿ ಪೇಶ್ವೆಯಾಗಿದ್ದರು. ಮರಾಠ ಸಂಸ್ಥಾನಕ್ಕೆ ಸದೃಢ ಹಣಕಾಸಿನ ವ್ಯವಸ್ಥೆ ಹಾಗೂ ಪ್ರಮುಖ ಸಂಪರ್ಕಗಳನ್ನು ಸಾಧಿಸುವಲ್ಲಿ ಇವರು ಮಹತ್ವದ ಪಾತ್ರವನ್ನು ವಹಿಸಿದ್ದರು. ಅನಾರೋಗ್ಯಕ್ಕೊಳಗಾಗಿ ವಿಶ್ವನಾಥ್ ಭಟ್ 1720ರಲ್ಲಿ ನಿಧನ ಹೊಂದಿದರು.
ಇದನ್ನೂ ಓದಿ: Rishan Shetty: ಛತ್ರಪತಿ ಶಿವಾಜಿಯಾಗಿ ರಿಷಬ್ ಶೆಟ್ಟಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
6 ಒಂದನೇ ಪೇಶ್ವ ಬಾಜಿರಾವ್ (1700 – 1740)
ಬಾಲಾಜಿ ವಿಶ್ವನಾಥ್ ಮರಣದ ನಂತರ ಅವರ ಪುತ್ರ ಪೇಶ್ವೆ ಒಂದನೇ ಬಾಜಿರಾವ್ ಬಲ್ಲಾಲ್ ಭಟ್ ಅವರನ್ನು ಶಾಹುಜಿ ಮಹಾರಾಜ್ ಅವರ ಮುಂದಿನ ಪೇಶ್ವೆ ಆಗಿ ನೇಮಿಸಲಾಯಿತು. 1700ರಲ್ಲಿ ಜನಿಸಿದ ಮೊದಲನೇ ಬಾಜಿರಾವ್ ಮರಾಠ ಸಂಸ್ಥಾನ ಕಂಡ ಬುದ್ಧಿವಂತ ಸೇನಾಧಿಪತಿಗಳಲ್ಲಿ ಒಬ್ಬರಾಗಿದ್ದರು. ಹಲವಾರು ಯುದ್ಧಗಳನ್ನು ಗೆಲ್ಲುವ ಮೂಲಕ ಇವರು ಮರಾಠ ಸಂಸ್ಥಾನ ವಿಸ್ತರಣೆಗೊಳ್ಳಲು ಕಾರಣರಾಗಿದ್ದಾರೆ. ರಾವೆರ್ ಖೇಡಿ ಶಿಬಿರದ ಸಂದರ್ಭದಲ್ಲಿ ಅನಾರೋಗ್ಯಕ್ಕೊಳಗಾಗಿ ಇವರು 1740ರಲ್ಲಿ ನಿಧನ ಹೊಂದಿದರು. ರಣ್ವೀರ್ ಸಿಂಗ್ ಅಭಿನಯಿಸಿರುವ ಬಾಲಿವುಡ್ ಸಿನೆಮಾ ಬಾಜಿರಾವ್ ಮಸ್ತಾನಿ ಬಾಜಿರಾವ್ ಬಲ್ಲಾಲ್ ಕಥೆಯನ್ನಾದಿರಿಸಿದ ಚಿತ್ರವಾಗಿದೆ.
7 ಬಾಲಾಜಿ ರಾವ್ (ನಾನಾ ಸಾಹೇಬ್) (1720 – 1761)
ಪೇಶ್ವೆ ಬಾಜಿರಾವ್ ಅವರ ನಿಧನದ ಬಳಿಕ, 1720ರಲ್ಲಿ ಇವರ ಪುತ್ರ ನಾನಾ ಸಾಹೇಬ್ ಪೇಶ್ವೆಯಾಗಿ ನೇಮಕಗೊಳ್ಳುತ್ತಾರೆ. ಮರಾಠ ಸಾಮ್ರಾಜ್ಯದ ವಿಸ್ತರಣೆಗೆ ಈತನ ಕೊಡುಗೆ ಅಪಾರವಾಗಿದ್ದರೂ, ಮೂರನೇ ಪಾಣಿಪತ್ ಕದನವನ್ನು 1761ರಲ್ಲಿ ಸೋತ ಅಪಕಿರ್ತಿ ಈತನ ಪಾಲಿಗೆ ಸಂದಿತ್ತು. ಇದೇ ವರ್ಷ ನಾನಾ ಸಾಹೇಬ್ ಸಾವನ್ನಪ್ಪುತ್ತಾರೆ.
8 ಎರಡನೇ ನಾನಾ ಸಾಹೇಬ್ ಪೇಶ್ವೆ (1796 – 1857)
1796ರಲ್ಲಿ ಜನಿಸಿದ ಎರಡನೇ ನಾನಾ ಸಾಹೇಬ್, ಎರಡನೇ ಬಾಜಿರಾವ್ ನ ದತ್ತು ಪುತ್ರನಾಗಿದ್ದು ಈತ ಮರಾಠ ಸಾಮ್ರಾಜ್ಯದ ಕೊನೆಯ ಪೇಶ್ವೆಯೂ ಹೌದು. 1857ರಲ್ಲಿ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದವರಲ್ಲಿ ನಾನಾ ಸಾಹೇಬ್ ಪ್ರಮುಖ ವ್ಯಕ್ತಿಯಾಗಿದ್ದ. ಕಾನ್ಪುರ ದಂಗೆ ಈತನ ನೇತೃತ್ವದಲ್ಲೇ ನಡೆದಿತ್ತು. ಇದು ಸ್ವಾತಂತ್ರ್ಯಕ್ಕಾಗಿ ನಡೆದ ದಂಗೆಯಾಗಿ ಗುರುತಿಸಲ್ಪಟ್ಟಿದೆ. ಈತ ಪ್ರವರ್ಧಮಾನಕ್ಕೆ ಮೊದಲೇ ಇದ್ದಕ್ಕಿದ್ದಂತೆ ಕಾಣೆಯಾಗುತ್ತಾನೆ ಮತ್ತು ಈತನಿಗೆ ಏನಾಯಿತು ಎಂದು ಯಾರಿಗೂ ಗೊತ್ತಾಗುವುದಿಲ್ಲ.
9 ತಾತ್ಯ ಟೋಪೆ (1814 – 1859_
1857ರ ಸ್ವಾತಂತ್ರ್ಯ ಸಮರದಲ್ಲಿ ತಾತ್ಯಾ ಟೋಪೆಯ ಹೆಸರೂ ಮುಂಚೂಣಿಯಲ್ಲಿತ್ತು. ನಾನಾ ಸಾಹೇಬ್ ಮತ್ತು ರಾಣಿ ಲಕ್ಷ್ಮೀಬಾಯಿಯೊಂದಿಗೆ ಟೋಪೆಯೂ ಸಹ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಝಾನ್ಸಿ ರಾಣಿಯ ಸೋಲಿನ ಬಳಿಕ, ಟೋಪೆ ಗೆರಿಲ್ಲಾ ಯುದ್ಧ ತಂತ್ರವನ್ನು ಬ್ರಿಟಿಷರ ವಿರುದ್ಧ ಪ್ರಯೋಗಿಸಿದ್ದರು. ಆದರೆ 1859ರಲ್ಲಿ ಟೋಪೆಯನ್ನು ಬ್ರಿಟಿಷರು ಸೆರೆ ಹಿಡಿದು ಕೊಲೆ ಮಾಡುತ್ತಾರೆ.
10 ಚೀಮಾಜಿ ಅಪ್ಪಾ (1707 – 1740)
ಒಂದನೇ ಬಾಜಿರಾವ್ ನ ಕಿರಿಯ ಸಹೋದರನಾಗಿರುವ ಚೀಮಾಜಿ ಅಪ್ಪಾ ವಸಾಯಿ ಕೋಟೆಯನ್ನು ವಶಪಡಿಸಿಕೊಂಡು ಪೋರ್ಚುಗೀಸರಿಗೆಟ ಠಕ್ಕರ್ ಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ. ಅನಾರೋಗ್ಯ ಸಮಸ್ಯೆಯಿಂದ ಅಪ್ಪಾ 1740ರಲ್ಲಿ ನಿಧನ ಹೊಂದುತ್ತಾರೆ.