ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Accident: ಸೇತುವೆಯಿಂದ ನೆಲಕ್ಕುರುಳಿದ ಬೊಲೆರೋ ವಾಹನ; 8 ಮಂದಿ ಸಾವು, ಹಲವರಿಗೆ ಗಾಯ

ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಮುವಾನಿ ಪಟ್ಟಣದ ಸುನಿ ಸೇತುವೆ ಬಳಿ ಮಂಗಳವಾರ ಭೀಕರ ಅಪಘಾತ ಸಂಭವಿಸಿದ್ದು, 13 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೊಲೆರೊ ವಾಹನವು 150 ಮೀಟರ್ ಆಳದ ಕಂದಕಕ್ಕೆ ಉರುಳಿದೆ. ಈ ಅಪಘಾತದಲ್ಲಿ ಎಂಟು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉತ್ತರಾಖಂಡ್‌ನಲ್ಲಿ ಕಂದಕಕ್ಕುರುಳಿದ ಬೊಲೆರೋ ವಾಹನ; 8 ಮಂದಿ ಸಾವು

Profile Vishakha Bhat Jul 15, 2025 9:40 PM

ಡೆಹ್ರಾಡೂನ್‌: ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಮುವಾನಿ (Road Accident) ಪಟ್ಟಣದ ಸುನಿ ಸೇತುವೆ ಬಳಿ ಮಂಗಳವಾರ ಭೀಕರ ಅಪಘಾತ ಸಂಭವಿಸಿದ್ದು, 13 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೊಲೆರೊ ವಾಹನವು 150 ಮೀಟರ್ ಆಳದ ಕಂದಕಕ್ಕೆ ಉರುಳಿದೆ. ಈ ಅಪಘಾತದಲ್ಲಿ ಎಂಟು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಡಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಪಿಥೋರಗಢ ಪೊಲೀಸ್ ವರಿಷ್ಠಾಧಿಕಾರಿ ರೇಖಾ ಯಾದವ್ ಘಟನೆಯನ್ನು ದೃಢಪಡಿಸಿದ್ದು, ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ತಕ್ಷಣವೇ ತಲುಪಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ತಿಳಿಸಿದ್ದಾರೆ. ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ದೇಹಗಳನ್ನು ಕಂದಕದಿಂದ ಹೊರತೆಗೆಯಲಾಗಿದೆ. ಅಪಘಾತಕ್ಕೆ ನಿಖರ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ. ಕಳಪೆ ರಸ್ತೆ ಪರಿಸ್ಥಿತಿ ಅಥವಾ ವಾಹನದಲ್ಲಿ ಯಾಂತ್ರಿಕ ತೊಂದರೆಯಾಗಿ ಅಪಘಾತ ಸಂಭವಿಸಬಹುದು ಎಂದು ಹೇಳಲಾಗಿದೆ. ವಾಹನವು ತೀವ್ರವಾಗಿ ಹಾನಿಗೊಳಗಾಗಿದೆ ಮತ್ತು ಛಿದ್ರಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜೀವಹಾನಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಮ್ಮ ಸಂತಾಪ ಸೂಚಿಸಿದ್ದಾರೆ. ಪರಿಹಾರ ಪ್ರಯತ್ನಗಳನ್ನು ವೇಗಗೊಳಿಸಲು ಮತ್ತು ಎಲ್ಲಾ ಗಾಯಾಳುಗಳಿಗೆ ಸಕಾಲಿಕ ಮತ್ತು ಉಚಿತ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಅವರು ಜಿಲ್ಲಾ ಅಧಿಕಾರಿಗಳು ಮತ್ತು ರಕ್ಷಣಾ ತಂಡಗಳಿಗೆ ನಿರ್ದೇಶನ ನೀಡಿದ್ದಾರೆ.

ಪಿಥೋರಗಢದಲ್ಲಿ ಇಂತಹ ದುರಂತ ಘಟನೆ ಇದೇ ಮೊದಲಲ್ಲ. ಏಪ್ರಿಲ್ 2024 ರಲ್ಲಿ, ಐಚೋಲಿ ಪ್ರದೇಶದಲ್ಲಿ ಇದೇ ರೀತಿಯ ಅಪಘಾತ ಸಂಭವಿಸಿತ್ತು. ಅಲ್ಲಿ ಬೊಲೆರೊ 200 ಮೀಟರ್ ಆಳವಾದ ಕಂದಕಕ್ಕೆ ಬಿದ್ದು ಇಬ್ಬರು ಸಹೋದರರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು. ಜೂನ್ 2023 ರಲ್ಲಿ, ಸಮಾ ಹೊಕಾರ ಪ್ರದೇಶದಲ್ಲಿ ಮತ್ತೊಂದು ಬೊಲೆರೊ ಅಪಘಾತವು ವಾಹನವು ಕಂದಕಕ್ಕೆ ಬಿದ್ದಿತ್ತು. ಆಗ 10 ಯಾತ್ರಿಕರು ಮೃತಪಟ್ಟಿದ್ದರು.

ಈ ಸುದ್ದಿಯನ್ನೂ ಓದಿ: Road Accident: ಬೆಂಗಳೂರು, ಚಿತ್ರದುರ್ಗದಲ್ಲಿ ರಸ್ತೆ ಅಪಘಾತ: ಬಸ್‌ ಡಿಕ್ಕಿಯಾಗಿ ಇಬ್ಬರು ಬೈಕ್‌ ಸವಾರರ ಸಾವು

ಅಪಘಾತದ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಜಿಲ್ಲಾಡಳಿತವು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಸ್ತೆ ಮೂಲಸೌಕರ್ಯ ಮತ್ತು ತುರ್ತು ಸಿದ್ಧತೆಯನ್ನು ಸುಧಾರಿಸುವ ಮೂಲಕ ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಗಟ್ಟುವತ್ತ ಗಮನಹರಿಸಿದೆ.