ರೋಹಿತ್ ಶರ್ಮಾ ಇದ್ದ ರೂಂಗೆ ರಹಸ್ಯವಾಗಿ ಗೆಳತಿಯನ್ನು ಕರೆದೊಯ್ದ ಘಟನೆಯನ್ನು ನೆನೆದ ಧವನ್!
ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅವರು ಈಗಾಗಲೇ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ಹಲವು ಆಸಕ್ತದಾಯಕ ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ. ಅವರು ಭಾರತ ಎ ತಂಡದ ಪರ ಆಡುವಾಗ ರಹಸ್ಯವಾಗಿ ತಮ್ಮ ಗೆಳತಿಯನ್ನು ಹೋಟೆಲ್ ಕೊಠಡಿಗೆ ಕರೆದುಕೊಂಡು ಬಂದಿದ್ದ ಪ್ರಸಂಗವನ್ನು ಬಹಿರಂಗಪಡಿಸಿದ್ದಾರೆ.



ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭಿಕ ದಿನಗಳ ವೈಯಕ್ತಿಕ ಕಥೆಯನ್ನು ತಮ್ಮ ಆತ್ಮಚರಿತ್ರೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ ಅವರು ತಮ್ಮ ಗೆಳತಿಯನ್ನು ರಹಸ್ಯವಾಗಿ ತಮ್ಮ ಕೋಣೆಗೆ ಕರೆತರುತ್ತಿದ್ದರು ಹಾಗೂ ಇದರಿಂದಾಗಿ ಅವರ ಜತೆ ಕೊಠಡಿಯನ್ನು ಹಂಚಿಕೊಂಡಿದ್ದ ರೋಹಿತ್ ಶರ್ಮಾ ಕೋಪಗೊಳ್ಳುತ್ತಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ.

2006ರಲ್ಲಿ ಧವನ್ ಭಾರತ ಎ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಈ ಸಮಯದಲ್ಲಿ ಧವನ್ ಕಣ್ಣು ವಲಸೆ ಮಾರ್ಗದಲ್ಲಿರುವ ಒಬ್ಬ ಸುಂದರ ಹುಡುಗಿಯ ಮೇಲೆ ಬಿದ್ದಿತ್ತು. ಇಬ್ಬರೂ ಮಾತನಾಡಲು ಪ್ರಾರಂಭಿಸಿದ್ದರು. ಸ್ವಲ್ಪ ಸಮಯದ ಸಂಭಾಷಣೆಯ ನಂತರ ಇಬ್ಬರೂ ಫೋನ್ ನಂಬರ್ ಹಾಗೂ ಇಮೇಲ್ ಅನ್ನು ಪರಸ್ಪರ ಹಂಚಿಕೊಂಡಿದ್ದರು.

ಇದಾದ ನಂತರ ಧವನ್ ಹೋಟೆಲ್ ಕೋಣೆಗೆ ತಲುಪಿ ಹುಡುಗಿಗೆ ಸಂದೇಶ ಕಳುಹಿಸಿದ್ದರು. ಹುಡುಗಿಯಿಂದ ಉತ್ತರ ಬಂದ ನಂತರ, ಧವನ್ ಅವಳನ್ನು ಪಾರ್ಟಿಗೆ ಆಹ್ವಾನಿಸಿದ್ದರು. ಇಬ್ಬರ ನಡುವೆ ತ್ವರಿತವಾಗಿ ಉತ್ತಮ ಬಾಂಧವ್ಯ ಬೆಳೆದಿತ್ತು.

ಧವನ್ ಕೂಡ ಆ ಹುಡುಗಿಯನ್ನು ತನ್ನ ಹೋಟೆಲ್ ಕೋಣೆಗೆ ಕರೆತರಲು ಪ್ರಾರಂಭಿಸಿದ್ದರು. ಆ ಸಮಯದಲ್ಲಿ ರೋಹಿತ್ ಶರ್ಮಾ, ಧವನ್ ಜೊತೆ ಕೊಠಡಿಯನ್ನು ಹಂಚಿಕೊಂಡಿದ್ದರು. ಧವನ್ ಇದನ್ನು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿ, "ನಾನು ಆ ಸುಂದರ ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಅವಳು ನನಗೆ ಉತ್ತಮ ಎಂದು ನಾನು ಭಾವಿಸಿದ್ದೆ ಮತ್ತು ನಾನು ಅವಳನ್ನು ಮದುವೆಯಾಗುತ್ತೇನೆ," ಎಂದು ಬರೆದುಕೊಂಡಿದ್ದಾರೆ.

"ಪ್ರತೀ ಪಂದ್ಯದ ನಂತರ ನಾನು ಅವರನ್ನು ಭೇಟಿ ಮಾಡಲು ಹೋಗಿ ನನ್ನ ಕೋಣೆಗೆ ಕರೆತರುತ್ತಿದ್ದೆ. ರೋಹಿತ್ಗೆ ಇದೆಲ್ಲ ಇಷ್ಟವಾಗುತ್ತಿರಲಿಲ್ಲ. ರೋಹಿತ್ ಕೆಲವೊಮ್ಮೆ ದೂರು ನೀಡುತ್ತಿದ್ದ. ನೀವು ನನ್ನನ್ನು ಮಲಗಲು ಬಿಡುತ್ತೀರಾ?" ಎಂದು ರೇಗಾಡುತ್ತಿದ್ದ ಘಟನೆಯನ್ನು ಧವನ್ ತಮ್ಮ ಆತ್ಮ ಚರಿತ್ರೆ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.

ಧವನ್ ಕಳೆದ ವರ್ಷ ಎಲ್ಲಾ ಸ್ವರೂಪದ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಧವನ್ ಭಾರತ ಪರ 34 ಟೆಸ್ಟ್, 167 ಏಕದಿನ ಮತ್ತು 68 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆ ಮೂಲಕ ಅವರು ಟೆಸ್ಟ್ನಲ್ಲಿ 2315 ರನ್, ಏಕದಿನ ಕ್ರಿಕೆಟ್ನಲ್ಲಿ 6793 ಮತ್ತು ಟಿ20ಐ ಕ್ರಿಕೆಟ್ನಲ್ಲಿ 1759 ರನ್ ಬಾರಿಸಿದ್ದಾರೆ.