ಕೇಜ್ರಿ ಆಟಕ್ಕೆ ತಕ್ಕ ಶಾಸ್ತಿ
ಅಣ್ಣಾ ಹಜಾರೆ ಅವರ ಈ ಸತ್ಯಾಗ್ರಹದಲ್ಲಿ ಅಂದು ಕರ್ನಾಟಕದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ , ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ, ಬಾಬಾ ರಾಮ್‌ದೇವ್ ಮತ್ತಿತರರು ಭಾಗವಹಿಸಿದ್ದರು. ರಾಷ್ಟ್ರವ್ಯಾಪಿ ಸಂಚಲನ ಮೂಡಿಸಿದ ಈ ಹೋರಾಟವನ್ನು ರಾಜಕೀಯ ಆಂದೋಲನವಾಗಿ ಮುಂದು ವರಿಸುವ ಪ್ರಸ್ತಾಪ ಬಂದಾಗ ಅಣ್ಣಾ ಹಜಾರೆ ಸೇರಿದಂತೆ ಜತೆಗಾರರು ವಿರೋಧಿಸಿದ್ದರು
![Vishwavani Editorial: ಕೇಜ್ರಿ ಆಟಕ್ಕೆ ತಕ್ಕ ಶಾಸ್ತಿ](https://cdn-vishwavani-prod.hindverse.com/media/original_images/Arvind_Kejriwal_6FX7CuI.jpg)
ಆಪ್ ಪಕ್ಷದ ನಾಯಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್
![Profile](https://vishwavani.news/static/img/user.png)
ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬರೋಬ್ಬರಿ 26 ವರ್ಷ 2 ತಿಂಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವ ಆಮ್ ಆದ್ಮಿ ಪಕ್ಷದ ಕನಸು ನುಚ್ಚುನೂರಾಗಿದೆ. ಆಪ್ ಪಕ್ಷದ ನಾಯಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಸೋತು ಮನೆ ಸೇರಿ ದ್ದಾರೆ. ಈ ಫಲಿತಾಂಶ ತೀರಾ ಅನಿರೀಕ್ಷಿತವೇನೂ ಅಲ್ಲ. ದಿಲ್ಲಿ ಚುನಾವಣೆ ಪ್ರಚಾರದ ಸಂದರ್ಭ ದಲ್ಲಿಯೇ ಆಪ್ ಜನಪ್ರಿಯತೆ ಕುಸಿತದ ಸೂಚನೆ ಕಂಡು ಬಂದಿತ್ತು.
ಸಾಮಾನ್ಯವಾಗಿ ಯಾವುದೇ ಪಕ್ಷ ನಿರಂತರ ಎರಡು ಅವಽಗೆ ಆಡಳಿತ ನಡೆಸಿದ ಬಳಿಕ ಮೂರನೇ ಅವಽಗೆ ಆಡಳಿತ ವಿರೋಧಿ ಅಲೆ ಎದುರಿಸುವುದು ಸಹಜ. ಆದರೆ ಆಮ್ ಆದ್ಮಿ ಪಕ್ಷದ ಈ ಸೋಲಿಗೆ ಸ್ವತ: ನಾಯಕ ಅರವಿಂದ ಕೇಜ್ರಿವಾಲ್ ಅವರೇ ಕಾರಣ ಎನ್ನುವುದು ಸುಸ್ಪಷ್ಟ. ದಶಕದ ಹಿಂದೆ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದಾಗ, ಐಆರ್‌ಎಸ್ ಹುದ್ದೆಗೆ ರಾಜೀನಾಮೆ ನೀಡಿ ಜತೆಗೂಡಿದ್ದ ಅರವಿಂದ ಕೇಜ್ರಿವಾಲ್ ನಂತರ ಈ ಹೋರಾಟವನ್ನು ತನ್ನ ಕೈಗೆ ತೆಗೆದುಕೊಂಡಿದ್ದರು.
ಅಣ್ಣಾ ಹಜಾರೆ ಅವರ ಈ ಸತ್ಯಾಗ್ರಹದಲ್ಲಿ ಅಂದು ಕರ್ನಾಟಕದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ , ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ, ಬಾಬಾ ರಾಮ್‌ದೇವ್ ಮತ್ತಿತರರು ಭಾಗವಹಿಸಿದ್ದರು. ರಾಷ್ಟ್ರವ್ಯಾಪಿ ಸಂಚಲನ ಮೂಡಿಸಿದ ಈ ಹೋರಾಟವನ್ನು ರಾಜಕೀಯ ಆಂದೋಲನವಾಗಿ ಮುಂದುವರಿಸುವ ಪ್ರಸ್ತಾಪ ಬಂದಾಗ ಅಣ್ಣಾ ಹಜಾರೆ ಸೇರಿದಂತೆ ಜತೆಗಾರರು ವಿರೋಧಿಸಿದ್ದರು.
ಆದರೆ ದಿಲ್ಲಿಯ ಮಧ್ಯಮ ವರ್ಗದ ಜನತೆ ಅರವಿಂದ ಕೇಜ್ರಿವಾಲ್ ಅವರಲ್ಲಿ ಹೊಸ ಭರವಸೆಯನ್ನು ಕಂಡಿದ್ದರು. ಕೇಜ್ರಿವಾಲ್ ತಮ್ಮ ಆಶೋತ್ತರಗಳನ್ನು ಈಡೇರಿಸುವ ನಾಯಕ ಎಂದು ಭಾವಿಸಿ ಎರಡು ಚುನಾವಣೆಗಳಲ್ಲಿ ಸಂಪೂರ್ಣ ಆರ್ಶೀವಾದ ನೀಡಿದ್ದರು. ಮೊದಲ ಅವಧಿಯಲ್ಲಿ ಕೆಲವೊಂದು ತಪ್ಪು ನಿರ್ಧಾರಗಳ ಹೊರತಾಗಿಯೂ ಆಪ್ ಸರಕಾರ ಜನಪರವಾಗಿತ್ತು. ಆದರೆ ಎರಡನೇ ಅವಧಿಯಲ್ಲಿ ಕೇಜ್ರಿ ತಮ್ಮ ನಿಜವಾದ ಮುಖವನ್ನು ತೆರೆದಿಟ್ಟರು.
ಸಿಎಂ ಬಂಗಲೆ ಶೀಷ್ ಮಹಲ್ ನವೀಕರಣಕ್ಕಾಗಿ 37 ಕೋಟಿ ರು.ಗೂ ಹೆಚ್ಚು ಹಣ ವ್ಯಯಿಸಿದಾಗಲೇ ಅವರ ನಡೆ ನುಡಿಯಲ್ಲಿನ ವ್ಯತ್ಯಾಸ ಸ್ಪಷ್ಟವಾಗಿತ್ತು. ನಂತರ ಸಾಲು ಸಾಲು ಹಗರಣಗಳಲ್ಲಿ ಸಿಲುಕಿದ ಕೇಜ್ರಿವಾಲ್ ತಾನೂ ಪಕ್ಕಾ ರಾಜಕಾರಣಿ ಎಂದು ನಿರೂಪಿಸಿದ್ದರು. ರಾಜಕೀಯದಲ್ಲಿ ನಂಬಿಕೆ ಗಳಿಸುವುದಕ್ಕಿಂತಲೂ ಉಳಿಸಿಕೊಳ್ಳುವುದು ಮುಖ್ಯ. ದಿಲ್ಲಿಯ ಮಧ್ಯಮ ವರ್ಗದ ಜನರ ಭ್ರಮನಿರಶನದಿಂದಲೇ ಇಂದು ಆಪ್ ಸೋತಿದೆ.