IND vs ENG: ಭಾರತ ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ ನಾಯಕನಾಗಿ ಮುಂದುವರಿಯಬೇಕೆಂದ ಸೌರವ್ ಗಂಗೂಲಿ!
Sourav Ganguly on India's Test Captaincy: ಇಂಗ್ಲೆಂಡ್ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯ ಭಾರತ ತಂಡಕ್ಕೆ ನಾಯಕನಾಗಿ ರೋಹಿತ್ ಶರ್ಮಾ ಅವರೇ ಮುಂದುವರಿಯಬೇಕೆಂದು ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಆಗ್ರಹಿಸಿದ್ದಾರೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ದದ ಕಳೆದ ಎರಡು ಟೆಸ್ಟ್ ಸರಣಿಗಳಲ್ಲಿ ಭಾರತ ತಂಡ ಸೋಲು ಅನುಭವಿಸಿತ್ತು.

ರೋಹಿತ್ ಶರ್ಮಾ-ಸೌರವ್ ಗಂಗೂಲಿ

ನವದೆಹಲಿ: ಇತ್ತೀಚಿಗೆ ಭಾರತ ಟೆಸ್ಟ್ ತಂಡ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಭಾರತ ಟೆಸ್ಟ್ ತಂಡವನ್ನು ರೋಹಿತ್ ಶರ್ಮಾ ಅವರೇ ಮುನ್ನಡೆಸಬೇಕೆಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಆಗ್ರಹಿಸಿದ್ದಾರೆ. ಅಂದ ಹಾಗೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ಹಾಗೂ ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ದ ಎರಡು ಸತತ ಟೆಸ್ಟ್ ಸರಣಿಗಳನ್ನು ಸೋತಿತ್ತು. ಇದರೊಂದಿಗೆ ಭಾರತ ತಂಡ 2025ರ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.
2024ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 3-0 ಅಂತರದಲ್ಲಿ ವೈಟ್‌ವಾಷ್ ಸೋಲು ಅನುಭವಿಸಿತ್ತು. ನಂತರ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಭಾರತ ತಂಡ 1-3 ಅಂತರದಲ್ಲಿ ಸೋತಿತ್ತು. ಇದೀಗ ಭಾರತ ತಂಡ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಯಣವನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಆರಂಭಿಸಲು ಎದುರು ನೋಡುತ್ತಿದೆ.
ಅಂದ ಹಾಗೆ ಸತತ ಬ್ಯಾಟಿಂಗ್ ವೈಫಲ್ಯ ಹಾಗೂ ಭಾರತ ತಂಡದ ವೈಫಲ್ಯದ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಅವರನ್ನು ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಸಿ ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾಗೆ ನಾಯಕತ್ವ ನೀಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿತ್ತು. ಆದರೆ, ಸೌರವ್ ಗಂಗೂಲಿ ಅವರು ರೋಹಿತ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತ ಟೆಸ್ಟ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಅವರೇ ಮುಂದುವರಿಯಬೇಕೆಂದು ಸಲಹೆ ನೀಡಿದ್ದಾರೆ.
IND vs ENG Test Series: ಇಂಗ್ಲೆಂಡ್ ಟೆಸ್ಟ್ ಸರಣಿಗೂ ರೋಹಿತ್ ನಾಯಕ!
ರೋಹಿತ್ ಶರ್ಮಾ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು?
"ಕಳೆದ 4-5 ವರ್ಷಗಳಿಂದ ರೋಹಿತ್ ಶರ್ಮಾ ಅವರ ಫಾರ್ಮ್ ನನಗೆ ಅಚ್ಚರಿ ಮೂಡಿಸಿದೆ. ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ನೋಡಿದಾಗ, ಅವರು ಇಲ್ಲಿಯ ತನಕ ಏನು ಮಾಡಿದ್ದಾರೆ, ಅದಕ್ಕಿಂತ ಹೆಚ್ಚಿನದನ್ನು ಮಾಡಬಹುದು. ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಬರಲಿದೆ. ಹಾಗಾಗಿ ಅವರನ್ನೇ ನಾಯಕನಾಗಿ ಮುಂದುವರಿಸಬೇಕು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ರೀತಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಕೂಡ ಅತ್ಯಂತ ಕಠಿಣವಾಗಿರಲಿದೆ. ಇಂಗ್ಲೆಂಡ್‌ನಲ್ಲಿ ಸೀಮಿಂಗ್ ಕಂಡೀಷನ್ಸ್ ಇರಲಿದೆ ಹಾಗೂ ಸ್ವಿಂಗ್ ಇರಲಿದೆ. ಭಾರತ ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ತೋರುವ ಅಗತ್ಯವಿದೆ. ಆದರೆ, ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಅವರು ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದಾರೆ,"ಎಂದು ಸೌರವ್ ಗಂಗೂಲಿ ರೆವ್‌ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
IND vs ENG: ಇಂಗ್ಲೆಂಡ್‌ಗೆ ಭಾರಿ ಹಿನ್ನಡೆ, ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದ ಮಾರ್ಕ್ ವುಡ್ ಔಟ್!
ಭಾರತದ ನಾಯಕ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು
"ನಾಯಕನಾಗಿ ಭಾರತ ತಂಡವನ್ನು ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಯಾವ ಹಂತಕ್ಕೆ ತಲುಪಿಸಿದ್ದಾರೆಂಬ ಬಗ್ಗೆ ನನಗೆ ಯಾವುದೇ ಅಚ್ಚರಿ ಇಲ್ಲ. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಇದೇ ಸಾಧನೆ ಮಾಡಲಿದ್ದಾರೆಂಬ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಮಾತನ್ನು ಅವರು ಕೇಳಿದರೆ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಭಾರತ ತಂಡದ ಸಂಗತಿಗಳನ್ನು ತಿರುಗಿಸಬೇಕೆಂಬ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಪ್ರಸ್ತುತ ಭಾರತ ತಂಡ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅಷ್ಟೊಂದು ಉತ್ತಮವಾಗಿಲ್ಲ ಹಾಗೂ ಈ ಅಂಶವನ್ನು ಅವರು ನೋಡಬೇಕಾಗಿದೆ. ಇಂಗ್ಲೆಂಡ್‌ನಲ್ಲಿ ಉತ್ತಮ ಹಾದಿಯನ್ನು ಕಂಡುಕೊಳ್ಳಬೇಕಾಗಿದೆ. ಏಕೆಂದರೆ ಐದು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದೆ. ರೋಹಿತ್ ಶರ್ಮಾ ಅವರೇ ಉತ್ತಮ ಸಂಗತಿಗಳನ್ನು ಕಂಡುಕೊಳ್ಳಬೇಕಾಗಿದೆ," ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೂನ್ 20 ರಂದು ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಆರಂಭವಾಗಲಿದೆ. ಆ ಮೂಲಕ 2025-27ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಆವೃತ್ತಿ ಆರಂಭವಾಗಲಿದೆ. 2007ರಿಂದ ಇಲ್ಲಿಯವರೆಗೂ ಭಾರತ ತಂಡ, ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಮುಂದಿನ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ಟೆಸ್ಟ್ ಸರಣಿ ಗೆಲ್ಲಬೇಕೆಂದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಫಾರ್ಮ್ ತುಂಬಾ ಮುಖ್ಯವಾಗುತ್ತದೆ.