Friday, 29th November 2024

Drona Desai: 86 ಬೌಂಡರಿ, 7 ಸಿಕ್ಸರ್‌ ನೆರನಿಂದ 498 ರನ್‌ ಬಾರಿಸಿದ ಗುಜರಾತ್‌ನ ಪೋರ

Drona Desai

ಅಹಮದಾಬಾದ್‌: ಅಹಮದಾಬಾದ್‌ನ ಶಾಲಾ ಮಟ್ಟದ ಕ್ರಿಕೆಟ್‌ ಟೂರ್ನಿಯಾದ ದಿವಾನ್‌ ಬಲ್ಲುಭಾಯ್ ಕಪ್ ಅಂಡರ್ 19 ಪಂದ್ಯಾವಳಿಯಲ್ಲಿ(Diwan Ballubhai Cup) ಗುಜರಾತ್‌ನ 18 ವರ್ಷದ ಪೋರನೊಬ್ಬ ವಿಶೇಷ ದಾಖಲೆಯೊಂದನ್ನು ಬರೆದಿದ್ದಾನೆ. ಬರೋಬ್ಬರಿ 86 ಬೌಂಡರಿ ಮತ್ತು 7 ಸಿಕ್ಸರ್‌ ಸಿಡಿಸಿ 498 ರನ್‌ ಬಾರಿಸಿ ದಾಖಲೆ ಬರೆದಿದ್ದಾನೆ. ಈತನ ಹೆಸರು ದ್ರೋಣಾ ದೇಸಾಯಿ(Drona Desai).

ಗುಜರಾತ್‌ನ ಸೆಂಟ್ರಲ್‌ ಬೋರ್ಡ್‌ ಕ್ರಿಕೆಟ್‌ ಅಹಮದಾಬಾದ್‌ ಅಡಿಯಲ್ಲಿ ನಡೆದ ಶಾಲಾ ಟೂರ್ನಿ ಇದಾಗಿತ್ತು. ಶಿವಾಯ್ ಕ್ರಿಕೆಟ್‌ ಮೈದಾನದಲ್ಲಿ ನಡೆದ ಸೇಂಟ್ ಕ್ಸೇವಿಯರ್ಸ್ (ಲೊಯೊಲಾ) ಹಾಗೂ ಜೆಎಲ್ ಇಂಗ್ಲಿಷ್ ಸ್ಕೂಲ್ ನಡುವಣ ಪಂದ್ಯದಲ್ಲಿ ದ್ರೋಣಾ ದೇಸಾಯಿ 498 ರನ್‌ಗಳ ಇನಿಂಗ್ಸ್‌ ಕಟ್ಟಿ ಅಬ್ಬರಿಸಿದ್ದಾನೆ. ಈ ಸಾಧನೆಗೈದ ಆರನೇ ಬ್ಯಾಟರ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾನೆ.

ಇದಕ್ಕೂ ಮೊದಲು ಮುಂಬೈ ತಂಡದ ಪ್ರಣವ್ ಧನ್ವಾಡೆ (1009 ), ಪೃಥ್ವಿ ಶಾ (546 ), ಡಿಆರ್ ಹವೇವಾಲ್ಲಾ (515 ), ಚಮನ್‌ಲಾಲ (506 ), ಅರ್ಮಾನ್ ಜಾಫರ್ (498 ) ರನ್‌ ಪೇರಿಸಿದ್ದರು. ಈ ಸಾಲಿಗೆ ಈಗ ದ್ರೋಣಾ ದೇಸಾಯಿ ಸೇರ್ಪಡೆಗೊಂಡಿದ್ದಾನೆ. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ದ್ರೋಣಾ ದೇಸಾಯಿ ಸಿಕ್ಸರ್‌ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿ ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ಇತನ ಈ ಅಮೋಘ ಬ್ಯಾಟಿಂಗ್‌ ನೆರವಿನಿಂದ ಜೆಎಲ್‌ ಇಂಗ್ಲಿಂಷ್ ಶಾಲೆಯ ವಿರುದ್ಧ 712 ರನ್‌ ಅಂತದ ಗೆಲುವು ಸಾಧಿಸಿತು. ಗುಜರಾತ್‌ ಅಂಡರ್ 14 ತಂಡವನ್ನು ಪ್ರತಿನಿಧಿಸಿರುವ ದೇಸಾಯಿ, ರಾಜ್ಯದ ಅಂಡರ್ 19 ತಂಡವನ್ನು ಪ್ರತಿನಿಧಿಸುವ ಕನಸು ಹೊಂದಿದ್ದಾರೆ.

ಇದನ್ನೂ ಓದಿ IND vs BAN: ದ್ವಿತೀಯ ಟೆಸ್ಟ್‌ಗೆ ಭಾರೀ ಮಳೆ ಎಚ್ಚರಿಕೆ; ಪಂದ್ಯ ನಡೆಯುವುದು ಅನುಮಾನ

500 ರನ್‌ ಬಾರಿಸವ ಅವಕಾಶವಿತ್ತು

ಅಮೋಘ ಇನಿಂಗ್ಸ್‌ ಬಳಿಕ ಮಾತನಾಡಿದ ಪಂದ್ಯದ ಬಳಿಕ ಮಾತನಾಡಿರುವ ದ್ರೋಣಾ ದೇಸಾಯಿ, ನನಗೆ 500 ರನ್‌ ಬಾರಿಸುವ ಅವಕಾಶವಿತ್ತು. ಆದರೆ ನಾನು 500ರನ್‌ ಸನಿಹದಲ್ಲಿ ಇದ್ದೇನೆ ಎಂಬುದು ನನಗೆ ತಿಳಿದಿರಲಿಲ್ಲ. ಈ ಮೈದಾನದಲ್ಲಿ ಸ್ಕೋರ್ ಬೋರ್ಡ್‌ ಸಹ ಇರಲಿಲ್ಲ. ಹೀಗಾಗಿ ನನಗೆ ನಾನು ಎಷ್ಟು ಮೊತ್ತ ಬಾರಿಸಿದ್ದೇನೆ ಎನ್ನುವುದು ತಿಳಿಯಲಿಲ್ಲ. ನಾನು ನನ್ನ ನೈಜ ಆಟವನ್ನು ಆಡಲು ಮುಂದಾಗಿ ಔಟ್ ಆದೆ. ನಾನು ಇಷ್ಟು ದೊಡ್ಡ ಇನಿಂಗ್ಸ್ ಆಡಿರುವುದು ನಿಜಕ್ಕೂ ಖುಷಿಯ ವಿಚಾರ ಎಂದು ತಿಳಿಸಿದ್ದಾರೆ.

ತಂದೆಯ ಪ್ರೋತ್ಸಾಹ

ನಾನು ಕ್ರಿಕೆಟ್‌ಗೆ ಬರಲು ನನ್ನ ತಂದೆಯ ಪ್ರೋತ್ಸಾಹವೇ ಪ್ರಮುಖ ಕಾರಣ. ನನಗೆ ಏಳು ವರ್ಷ ವಯಸ್ಸಿರುವಾಗಲೇ ನನಗೆ ತಂದೆ ಕ್ರಿಕೆಟ್‌ ಅಭ್ಯಾಸ ಆರಂಭಿಸಿದ್ದರು. ಶಾಲೆಗಳಿಗೆ ನಾನು ಕೇವಲ ಪರೀಕ್ಷೆ ಬರೆಯಲು ಮಾತ್ರ ಹೋಗುತ್ತಿದ್ದೆ. ಹೆಚ್ಚಾಗಿ ಮೈದಾನದಲ್ಲೇ ಕ್ರಿಕೆಟ್‌ ಅಭ್ಯಾಸ ಮತ್ತು ಪಂದ್ಯಗಳನ್ನು ಆಡುತ್ತಿರುವೆ ಎಂದು ದೇಸಾಯಿ ಹೇಳಿದ್ದಾನೆ.