Wednesday, 25th September 2024

IND vs AUS: ಭಾರತ-ಆಸೀಸ್‌ ಬಾಕ್ಸಿಂಗ್‌ ಡೇ ಟೆಸ್ಟ್‌; ದಾಖಲೆಯ ಟಿಕೆಟ್‌ ಸೇಲ್‌

IND vs AUS

ಸಿಡ್ನಿ: ವರ್ಷಾಂತ್ಯದಲ್ಲಿ ನಡೆಯುವ ಭಾರತ ಮತ್ತು ಆಸ್ಟ್ರೇಲಿಯಾ(IND vs AUS) ನಡುವಣ ಬಹುನಿರೀಕ್ಷಿತ ಬಾರ್ಡರ್ –ಗಾವಸ್ಕರ್ ಟೆಸ್ಟ್ ಸರಣಿ ಆರಂಭಕ್ಕೆ ಸರಿಯಾಗಿ 2 ತಿಂಗಳು ಬಾಕಿ ಉಳಿದಿವೆ. ಇದೀಗ ಸರಣಿ ಆರಂಭಕ್ಕೂ ಮುನ್ನವೇ ಪಂದ್ಯದ ಟಿಕೆಟ್‌ ಖರೀದಿಗೆ ಕ್ರಿಕೆಟ್‌ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಹೌದು, ಡಿ.26 ರಿಂದ ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ಮೊದಲ ದಿನದ ಟಿಕೆಟ್‌ಗಳು ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ(Cricket Australia) ತಿಳಿಸಿದೆ. 2018-19ರ ಸರಣಿಗೆ ಹೋಲಿಸಿದರೆ ಈ ಬಾರಿ ಮೂರು ಪಟ್ಟು ಹೆಚ್ಚು ಟಿಕೆಟ್‌ ಮಾರಾಟವಾಗಿದೆ ಎಂದಿದೆ. ಜತೆಗೆ ಈ ಬಾರಿ ಎಲ್ಲ ಪಂದ್ಯಗಳಿಗೂ ಕ್ರೀಡಾಂಗಣ ತುಂಬುವ ನಿರೀಕ್ಷೆ ಇದೆ ಎಂದು ಹೇಳಿದೆ.

ನವೆಂಬರ್ 22ರಿಂದ ಜನವರಿ 7ರವರೆಗೆ ಐದು ಪಂದ್ಯಗಳು ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಪಂದ್ಯಗಳು ನಡೆಯಲಿದೆ. ಇದರಲ್ಲಿ ಅಡಿಲೇಡ್ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಆಗಿರಲಿದೆ.

1991/92 ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಭಾರತವು ಬಾರ್ಡರ್-ಗಾವಸ್ಕರ್ ಟ್ರೋಫಿಯ ಭಾಗವಾಗಿ ಐದು ಪಂದ್ಯಗಳ ಸರಣಿಯನ್ನು ಆಡಲಿದೆ. ಇದು ಮುಂದಿನ ವರ್ಷದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಎರಡೂ ತಂಡಗಳಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಭಾರತವು ಇತ್ತೀಚಿನ ಕೆಲ ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್‌ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಲೇ ಬಂದಿದೆ. ಕಳೆದ 4 ಸರಣಿಗಳಲ್ಲಿ ಭಾರತವೇ ಗೆದ್ದು ಬಂದಿದೆ. 2016-17ರಲ್ಲಿ 2-1 (ತವರಿನ ಸರಣಿ), 2018-19ರಲ್ಲಿ 2-1 (ಆಸ್ಟ್ರೇಲಿಯದಲ್ಲಿ), 2020- 21ರಲ್ಲಿ 2-1 (ಆಸ್ಟ್ರೇಲಿಯದಲ್ಲಿ) ಹಾಗೂ 2022-23ರಲ್ಲಿ 2-1 (ತವರಿನ ಸರಣಿ) ಅಂತರದಿಂದ ಭಾರತ ಜಯ ಸಾಧಿಸಿತ್ತು. ಆದಾಗ್ಯೂ, 2023ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ತಂಡವು ಭಾರತವನ್ನು ಸೋಲಿಸಿತ್ತು.

ಇದನ್ನೂ ಓದಿ IND vs BAN: ದ್ವಿತೀಯ ಟೆಸ್ಟ್‌ಗೆ ಭಾರೀ ಮಳೆ ಎಚ್ಚರಿಕೆ; ಪಂದ್ಯ ನಡೆಯುವುದು ಅನುಮಾನ

ವೇಳಾಪಟ್ಟಿ

ಮೊದಲ ಟೆಸ್ಟ್: ನವೆಂಬರ್ 22-26, ಪರ್ತ್

ಎರಡನೇ ಟೆಸ್ಟ್: ಡಿಸೆಂಬರ್ 6-10, ಅಡಿಲೇಡ್ (ಹಗಲು ರಾತ್ರಿ)

ಮೂರನೇ ಟೆಸ್ಟ್: ಡಿಸೆಂಬರ್ 14-18, ಬ್ರಿಸ್ಬೇನ್

ನಾಲ್ಕನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬೋರ್ನ್

ಐದನೇ ಟೆಸ್ಟ್: ಜನವರಿ 3-7, ಸಿಡ್ನಿ