Wednesday, 25th September 2024

Team India: ಟಿ20 ವಿಶ್ವಕಪ್‌ ಆಡಲು ದುಬೈಗೆ ತೆರಳಿದ ಭಾರತ ಮಹಿಳಾ ತಂಡ

Team India

ಮುಂಬಯಿ: ಮುಂದಿನ ತಿಂಗಳು ಅಕ್ಟೋಬರ್‌ 3ರಿಂದ ದುಬೈನಲ್ಲಿ ಆರಂಭಗೊಳ್ಳಲಿರುವ 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಗೆ(women’s t20 world cup) ಭಾರತ ಮಹಿಳಾ ತಂಡ(Team India) ದುಬೈಗೆ ಪ್ರಯಾಣ ಬೆಳೆಸಿದೆ. ಮಂಗಳವಾರ ಬಿಸಿಸಿಐ ಅಧಿಕಾರಿಗಳು ಮುಂಬೈಯಲ್ಲಿ ವಿಶೇಷ ಬೀಳ್ಕೊಡುಗೆ ಸಮಾರಂಭದ ಮೂಲಕ ತಂಡವನ್ನು ದುಬೈಗೆ ಕಳುಹಿಸಿದೆ. ಇದೇ ವೇಳೆ ಈ ಬಾರಿ ಖಂಡಿತವಾಗಿಯೂ ವಿಶ್ವಕಪ್‌ ಗೆಲ್ಲುವ ವಿಶ್ವಾಸವಿದೆ ಎಂದು ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯುಎಇಗೆ ತೆರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರ್ಮನ್‌ಪ್ರೀತ್‌, ನಮ್ಮ ತಂಡ ಈ ಬಾರಿ ಕಪ್‌ ಗೆಲ್ಲುವ ನಿಟ್ಟಿನಲ್ಲಿಯೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಸಂಪೂರ್ಣ ಸಿದ್ಧರಾಗಿದ್ದೇವೆ. ನಾವು ಈಗ ಆಸ್ಟ್ರೇಲಿಯಾ ತಂಡವನ್ನು ಸೋಲಿಸಬಲ್ಲೆವು. ಅದು ಅವರಿಗೂ ತಿಳಿದಿದೆ. ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತೇವೆ ಎಂದರು.

ಭಾರತ ತಂಡ ಅಕ್ಟೋಬರ್‌ 4ರಂದು ನ್ಯೂಜಿಲ್ಯಾಂಡ್‌ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಬಳಿಕ ಅ.6ರಂದು ಪಾಕಿಸ್ತಾನ, 9ರಂದು ಶ್ರೀಲಂಕಾ ಹಾಗೂ ಕೊನೆ ಪಂದ್ಯದಲ್ಲಿ ಅ.13ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಗುರುವಾರದಿಂದ ಭಾರತೀಯ ಆಟಗಾರರು ಅಭ್ಯಾಸ ಆರಂಭಿಸುವ ಸಾಧ್ಯತೆ ಇದೆ.

ಭಾರತದ ಸಾಧನೆ

ಭಾರತ ಇದುವರೆಗಿನ ಎಂಟು ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಒಂದು ಬಾರಿ ಮಾತ್ರ ಫೈನಲ್‌ ತಲುಪಿತ್ತು. ಅದು 2020 ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ. ಲೀಗ್‌ ಹಂತದಲ್ಲಿ ಅಮೋಘ ಪ್ರದರ್ಶನ ತೋರಿದ್ದ ಭಾರತ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ 85 ರನ್‌ಗಳ ಸೋಲು ಕಂಡು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 2016ರಲ್ಲಿ ಭಾರತದಲ್ಲೇ ಟೂರ್ನಿ ನಡೆದಿತ್ತಾದರೂ ಭಾರತಕ್ಕೆ ಇದರ ಲಾಭವೆತ್ತಲು ಸಾಧ್ಯವಾಗಿರಲಿಲ್ಲ. ಮಿಥಾಲಿ ಸಾರಥ್ಯದ ಭಾರತ ತಂಡ ಲೀಗ್‌ ಹಂತದಲ್ಲೇ ಸೋತು ಹೊರಬಿದ್ದಿತ್ತು. ಆಡಿದ 4 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿತ್ತು.

ಇದನ್ನೂ ಓದಿ Women’s T20 World Cup: ಎಲ್ಲ 10 ತಂಡಗಳ ಆಟಗಾರ್ತಿಯರ ಪಟ್ಟಿ ಹೀಗಿದೆ

ಸದ್ಯ ಭಾರತ ಇತ್ತೀಚೆಗೆ ಆಡಿದ ಎಲ್ಲ ಟೂರ್ನಿಯಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುತ್ತ ಬಂದಿದೆ. ಈ ಪ್ರದರ್ಶನವನ್ನು ಗಮನಿಸುವಾಗ ಭಾರತವೇ ಈ ಬಾರಿಯ ನೆಚ್ಚಿನ ತಂಡವಾಗಿ ಗೋಚರಿಸಿದೆ. ಸ್ಮೃತಿ ಮಂಧಾನ, ಶಫಾಲಿ, ಜೆಮಿಮಾ, ರಿಚಾ ಘೋಷ್‌ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ನಾಯಕಿ ಹರ್ಮನ್‌ ಕೂಡ ಬ್ಯಾಟಿಂಗ್‌ ಲಯಕ್ಕೆ ಮರಳಿದರೆ ತಂಡ ಹೆಚ್ಚು ಬಲಿಷ್ಠಗೊಳ್ಳಲಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ

ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮೃತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗ್ಸ್‌, ರಿಚಾ ಘೋಷ್‌, ಯಸ್ತಿಕಾ ಭಾಟಿಯಾ, ಪೂಜಾ ವಸ್ತ್ರಕರ್‌, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್‌, ದಯಾಳನ್‌ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್‌, ಶ್ರೇಯಾಂಕ ಪಾಟೀಲ್‌, ಸಜನಾ ಸಜೀವನ್‌.

ಮೀಸಲು ಆಟಗಾರ್ತಿಯರು: ಉಮಾ ಚೆಟ್ರಿ, ತನುಜಾ ಕನ್ವರ್‌, ಸೈಮಾ ಥಾಕೋರ್‌.