ಬೆಂಗಳೂರು: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(WTC Final 2025) ಪ್ರವೇಶದ ರೇಸ್ ತೀವ್ರ ಪೈಪೋಟಿಗೊಂಡಿದೆ. ಸೋಮವಾರ ನ್ಯೂಜಿಲ್ಯಾಂಡ್ ವಿರುದ್ದ ಶ್ರೀಲಂಕಾ ಗೆಲುವು ಸಾಧಿಸಿದ್ದು ಇದಕ್ಕೆ ಪ್ರಮುಖ ಕಾರಣ. ಲಂಕಾ ಗೆಲುವಿನಿಂದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (Test Championship final) ಅಂಕಪಟ್ಟಿಯಲ್ಲಿ(WTC POINTS TABLE) ಭಾರೀ ಬದಲಾವಣೆಯಾಗಿದೆ. ನ್ಯೂಜಿಲ್ಯಾಂಡ್ ವಿರುದ್ದ ಗೆದ್ದ ಶ್ರೀಲಂಕಾ ಇದೀಗ ಮೂರನೇ ಸ್ಥಾನಕ್ಕೆ ಜಿಗಿದಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಲಂಕಾಗೂ ಫೈನಲ್ ಪ್ರವೇಶಿಸುವ ಬಾಗಿಲೊಂದು ತೆರೆದಂತಾಗಿದೆ.
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ ತಂಡವು ಮೊದಲ ಸ್ಥಾನದಲ್ಲಿದೆ. ಆಡಿರುವ 10 ಪಂದ್ಯಗಳನ್ನು ಏಳನ್ನು ಗೆದ್ದಿರುವ ಭಾರತ 71.67 ಶೇಕಡಾವಾರು ಅಂಕ ಹೊಂದಿದೆ. ರೋಹಿತ್ ಪಡೆ ಅಗ್ರಸ್ಥಾನದಲ್ಲಿದ್ದರೂ ಫೈನಲ್ ಟಿಕೆಟ್ ಇನ್ನೂ ಖಾತ್ರಿಯಾಗಿಲ್ಲ. ಅಧಿಕೃತವಾಗಿ ಫೈನಲ್ ಪ್ರವೇಶಿಸಬೇಕಿದ್ದರೆ, ಭಾರತವು ಇನ್ನುಳಿದ 9 ಪಂದ್ಯಗಳಲ್ಲಿ ಕನಿಷ್ಠ ಆರನ್ನು ಗೆಲ್ಲಬೇಕು. ಹೀಗಾಗಿ ಮುಂದಿನ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ವಿರುದ್ದದ ಸರಣಿ ರೋಹಿತ್ ಪಡೆಗೆ ಅತ್ಯಂತ ಪ್ರಮುಖವಾಗಲಿದೆ. 9 ಪಂದ್ಯಗಳಲ್ಲಿ 4 ಪಂದ್ಯ ಸೋತರೂ ಭಾರತಕ್ಕೆ ಫೈನಲ್ ಪ್ರವೇಶ ಕೈ ತಪ್ಪಬಹುದು.
ದ್ವಿತೀಯ ಸ್ಥಾನಿಯಾಗಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಇನ್ನು5 ಪಂದ್ಯಗಳಿಗೆ. ಇದು ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಪಂದ್ಯಗಳು. ಆಸೀಸ್ ಈ ಸರಣಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಅಥವಾ ಮೂರು ಗೆದ್ದು ಒಂದು ಪಂದ್ಯ ಡ್ರಾ ಆದರೂ ಫೈನಲ್ ಪ್ರವೇಶದ ಅವಕಾಶವಿದೆ. ಭಾರತ ವಿರುದ್ಧ ಸರಣಿ ಸೋತರೆ ಆಸೀಸ್ ಈ ರೇಸ್‌ನಿಂದ ಹೊರಬೀಳಲಿದೆ. ಆಗ ಮೂರನೇ ಸ್ಥಾನಿಯಾಗಿರುವ ತಂಡಕ್ಕೆ ಇದರ ಲಾಭ ಸಿಗಲಿದೆ. ಸದ್ಯ 4ನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಉಳಿದಿರುವ ಏಳು ಪಂದ್ಯಗಳಲ್ಲಿ ಆರನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅದರಲ್ಲಿ ಮೂರು ಪಂದ್ಯಗಳನ್ನು ಅದು ಭಾರತದ ವಿರುದ್ದ ಆಡಲಿದೆ. ಒಂದೊಮ್ಮೆ ಭಾರತ ವಿರುದ್ಧ ಒಂದು ಗೆಲುವು ಎರಡು ಸೋಲು ಕಂಡರೆ. ಆಸೀಸ್ ಭಾರತ ವಿರುದ್ಧದ ಸರಣಿಯಲ್ಲಿ ನಾಲ್ಕು ಪಂದ್ಯ ಸೋತರೆ ಆಗ ಕಿವೀಸ್‌ಗೆ ದ್ವಿತೀಯ ಸ್ಥಾನಿಯಾಗಿ ಫೈನಲ್ ಪ್ರವೇಶಿಸುವ ಅವಕಾಶವಿದೆ. ಲಂಕಾಗೆ ಫೈನಲ್ ಟಿಕೆಟ್ ಸಿಗಬೇಕಿದರೆ, ಕಿವೀಸ್ ವಿರುದ್ಧ ಮುಂದಿನ ಪಂದ್ಯದ ಜತೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನೂ ಗೆಲ್ಲಬೇಕಿದೆ. ಜತೆಗೆ ತನಗಿಂತ ಮೇಲಿರುವ ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರ ಕೂಡ ಪ್ರಮುಖವಾಗಿದೆ.
ಇದನ್ನೂ ಓದಿ IND vs BAN: ದ್ವಿತೀಯ ಟೆಸ್ಟ್‌ಗೆ ಭಾರತ ತಂಡ ಪ್ರಕಟ; ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ
ಜೂನ್‌ನಲ್ಲಿ ಫೈನಲ್
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ದಿನಾಂಕವನ್ನು ಈಗಾಗಲೇ ಘೋಷಿಸಲಾಗಿದೆ. ಫೈನಲ್ ಪಂದ್ಯವು ಜೂನ್ 11 ರಿಂದ 15 ರ ತನಕ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಜೂನ್ 16 ಮೀಸಲು ದಿನವಾಗಿದೆ. ಕ್ರಿಕೆಟ್ ಕಾಶಿ ಎಂದು ಕರೆಯಲಾಗುವ ಲಾರ್ಡ್ಸ್‌ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಡೆಯುತ್ತಿದೆ. ಮೊದಲ ಆವೃತ್ತಿಯ ಫೈನಲ್ (2021) ಸೌತ್‌ಹ್ಯಾಂಪ್ಟನ್ನಲ್ಲಿ ಮತ್ತು ಎರಡನೇ ಆವೃತ್ತಿಯ ಫೈನಲ್ (2023) ಓವಲ್‌ನಲ್ಲಿ ನಡೆದಿತ್ತು. ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಮೊದಲೆರಡು ಬಾರಿ ಚಾಂಪಿಯನ್ ಆಗಿ ಮೂಡಿಬಂದಿದ್ದವು. ಎರಡು ಬಾರಿಯೂ ಭಾರತ ರನ್ನರ್ ಅಪ್ ಆಗಿತ್ತು. ಮೂರನೇ ಆವೃತ್ತಿಯಲ್ಲಿ ಫೈನಲ್‌ಗೆ ಭಾರತ ಅರ್ಹತೆ ಪಡೆದು ಕಪ್ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ.