Saturday, 23rd November 2024

CM Siddaramaiah: ತಜ್ಞರ ವರದಿಯ ಆಧಾರದ ಮೇಲೆ ಡ್ಯಾಂ ಗೇಟ್‌ಗಳ ನಿರ್ವಹಣೆ: ಸಿಎಂ

CM Siddaramaiah

ಕೊಪ್ಪಳ: ತಜ್ಞರ ವರದಿಯ ಆಧಾರದ ಮೇಲೆ ತುಂಗಭದ್ರಾ ಗೇಟ್‌ಗಳ ನಿರ್ವಹಣೆ ಮಾಡಲಾಗುವುದು. 50 ವರ್ಷಕ್ಕೆ ಕ್ರಸ್ಟ್ ಗೇಟ್ ಗಳನ್ನು ಬದಲಿಸಬೇಕು. ಆದರೆ, 70 ವರ್ಷಗಳಿಂದ ಗೇಟ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿವೆ. ಪ್ರಸ್ತುತ ತಜ್ಞರ ಸಮಿತಿ ರಚನೆಯಾಗಿದ್ದು, ವರದಿ ನೀಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಕ್ರಸ್ಟ್ ಗೇಟ್‌ಗಳ ಕಾಲಕಾಲಕ್ಕೆ ದುರಸ್ತಿ ಮಾಡುವ ಬಗ್ಗೆ ಕೊಪ್ಪಳದ ಗಿಣಿಗೇರಾ ಏರ್ ಸ್ಟ್ರಿಪ್‌ನಲ್ಲಿ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದ್ದಾರೆ.

ತುಂಗಭದ್ರಾ ಜಲಾಶಯ ಮತ್ತೆ ತುಂಬಿದೆ. 101.77 ಟಿ.ಎಂ.ಸಿ ನೀರು ಲಭ್ಯವಿದ್ದು, ಮುಂಗಾರು ಮತ್ತು ಹಿಂಗಾರು ಬಿತ್ತನೆಗೆ ನೀರು ಸಿಗಲಿದೆ. ಕೊಚ್ಚಿಹೋಗಿದ್ದ 19 ನೇ ಕ್ರಸ್ಟ್ ಗೇಟ್ ಅನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ , ಶಿವರಾಜ ತಂಗಡಗಿ, ಜಮೀರ್ ಅಹ್ಮದ್ ಖಾನ್ ಅವರು ಸ್ಥಳದಲ್ಲಿಯೇ ಇದ್ದು ಗೇಟ್ ದುರಸ್ತಿಗೆ ಕ್ರಮ ವಹಿಸಿದರು.

ತಜ್ಞ ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ, ಜಿಂದಾಲ್, ನಾರಾಯಣ್ ಎಂಜಿನಿಯರಿಂಗ್ ಹಾಗೂ ಇಂಜಿನಿಯರ್‌ಗಳು, ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿದ್ದರಿಂದ ಆದಷ್ಟು ತ್ವರಿತವಾಗಿ ಗೇಟ್ ಅಳವಡಿಸಲು ಸಾಧ್ಯವಾಯಿತು. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. 20ಕ್ಕೂ ಹೆಚ್ಚು ಟಿ.ಎಂ.ಸಿ ನೀರು ಉಳಿಯಿತು. ಬೆಳೆಗೆ ನೀರು ಸಿಗುತ್ತದೋ ಇಲ್ಲವೋ ಎಂಬ ರೈತರ ಆತಂಕ ನಿವಾರಣೆಯಾಗಿದೆ. ಹಿಂಗಾರಿನ ಬೆಳೆಗೆ ಯಾವುದೇ ತೊಂದರೆ ಇಲ್ಲ. ಎರಡನೇ ಬೆಳೆಗೆ ನೀರು ಒದಗಿಸಲು ಪ್ರಯತ್ನಿಸಲಾಗುವುದು.101 ಟಿಎಂಸಿ ಲಭ್ಯವಿರುವುದರಿಂದ ನೀರು ಲಭ್ಯವಾಗಬಹುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಸ್ತೆಗಳ ದುರಸ್ತಿ

ನಮ್ಮ ಸರ್ಕಾರವಿದ್ದಾಗ ರಸ್ತೆಗಳ ನಿರ್ಮಾಣ ಮಾಡಿದ್ದೇವೆ. ಬಿಜೆಪಿ ಕಾಲದಲ್ಲಿ ರಸ್ತೆಗಳಾಗಿಲ್ಲ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ರಸ್ತೆಗಳು ಹಾಳಾಗಿವೆ ಅದರ ದುರಸ್ತಿ ಮಾಡಿಸಲಾಗುವುದು ಎಂದರು.

ರಾಜ್ಯಪಾಲರ ಕಚೇರಿಯಿಂದಲೇ ಮಾಹಿತಿ ಸೋರಿಕೆಯಾಗಿರಬಹುದು

ಅರ್ಕಾವತಿ ಬಡಾವಣೆ ಬಗ್ಗೆ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದರೆ ಸರ್ಕಾರ ಈ ಬಗ್ಗೆ ಗಮನಹರಿಸಲಿದೆ ಎಂದರು. ರಾಜ್ಯಪಾಲರ ಸೋರಿಕೆಯಾಗಿದೆ ಎಂಬ ಬಗ್ಗೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಬಗ್ಗೆ ಮಾತನಾಡಿ ರಾಜ್ಯಪಾಲರ ಕಚೇರಿಯಿಂದಲೇ ಸೋರಿಕೆಯಾಗಿರಬಹುದು ಎಂದರು. ಈ ಬಗ್ಗೆ ತನಿಖೆಯಾಗಲಿ ಎಂದರು. ಈ ಬಗ್ಗೆ ಪತ್ರಿಕೆಯಲ್ಲಿ ಓದಿ ತಿಳಿದಿದ್ದೇನೆ ಎಂದರು.

ಹೈದರಾಬಾದ್ ಕರ್ನಾಟಕಕ್ಕೆ ಸಂಬಂಧಿಸಿದ 46 ವಿಷಯಗಳ ಬಗ್ಗೆ ತೀರ್ಮಾನ

ಕೊಪ್ಪಳ ಜಿಲ್ಲೆಯ ನಗರಸಭೆಯಲ್ಲಿ 8.5 ಕೋಟಿ ಬಾಕಿ ಕಾಮಗಾರಿಗಳ ಬಗ್ಗೆ ಮಾತನಾಡಿ, ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 56 ವಿಷಯಗಳಲ್ಲಿ 46 ವಿಷಯಗಳು ಹೈದರಾಬಾದ್ ಕರ್ನಾಟಕಕ್ಕೆ ಸಂಬಂಧಿಸಿತ್ತು. ಇದರಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದರು.

ಹಾಲಿನ ದರ ಹೆಚ್ಚು ಮಾಡಿದರೆ ಅದು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲಾಗುವುದು. ಮಾಗಡಿಯಲ್ಲಿ ಬಹಳ ಶಾಸಕರು, ರೈತರು ಹಸು ಸಾಕಣೆಯ ವೆಚ್ಚ ಹೆಚ್ಚಾಗಿದ್ದು, ಹಾಲಿನ ದರ ಹೆಚ್ಚಳ ಮಾಡಲು ಒತ್ತಾಯ ಮಾಡಿದ್ದಾರೆ. ಒಂದು ವೇಳೆ ಹಾಲಿನ ದರ ಹೆಚ್ಚಿಸುವ ಬಗ್ಗೆ ತೀರ್ಮಾನವಾದರೆ, ಅದನ್ನು ಸಂಪೂರ್ಣವಾಗಿ ರೈತರಿಗೆ ಕೊಡಬೇಕೆಂದು ಹೇಳಿದ್ದೇನೆ ಎಂದರು.

ಈ ಸುದ್ದಿಯನ್ನೂ ಓದಿ | Tungabhadra Dam: ತುಂಗಭದ್ರಾ ಡ್ಯಾಂಗೆ ಬಾಗಿನ ಅರ್ಪಣೆ; 2ನೇ ಬಾರಿ ಜಲಾಶಯ ತುಂಬಿದ್ದಕ್ಕೆ ಸಿಎಂ ಸಂತಸ

ಮುನಿರತ್ನ ಅವರಿಂದ ಸುಳ್ಳು ಆರೋಪ

ನನ್ನ ಮತ್ತು ಆಪ್ತ ಬಳಗಕ್ಕೆ ಕಿರುಕುಳ ನೀಡಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂಬ ಶಾಸಕ ಮುನಿರತ್ನ ಹೇಳಿಕೆ ಬಗ್ಗೆ ಮಾತನಾಡಿ, ನಾವು ಯಾರ ಮೇಲೂ ದ್ವೇಷದ ರಾಜಕಾರಣ ಮಾಡುವುದಿಲ್. ಅಪರಾಧ ಮಾಡಿ ಎಂದು ನಾವು ಯಾರಿಗೂ ಹೇಳಿಲ್ಲ. ಶಾಸಕರು ನನ್ನನ್ನು ಭೇಟಿ ಮಾಡಿ ಎಸ್.ಐ.ಟಿ ರಚಿಸಲು ಕೋರಿದರು. ಅವರ ಮೇಲೆ ಮೂರು ಪ್ರಕರಣಗಳು ದಾಖಲಾಗಿದೆ. ತಪ್ಪು ಮಾಡಿದರೆ ತಾನೇ ಎಫ್ ಐ ಆರ್ ಆಗುವುದು. ನಾವು ಯಾರಿಗೂ ಕಿರುಕುಳ ನೀಡಿ ಕೇಸು ದಾಖಲಿಸಿಲ್ಲ, ಈ ಆರೋಪ ಸುಳ್ಳು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.