Chhaava Movie: 'ಛಾವಾ' ಎಫೆಕ್ಟ್! ನಿಧಿಗಾಗಿ ರಾತ್ರೋರಾತ್ರಿ ಭೂಮಿ ಅಗೆದ ಗ್ರಾಮಸ್ಥರು
Chhaava Movie: ʼಛಾವಾʼ ಚಿತ್ರದಲ್ಲಿ ಮೊಘಲ್ ಯುಗದ ಚಿನ್ನದ ನಾಣ್ಯಗಳನ್ನು ಮಧ್ಯ ಪ್ರದೇಶದ ಬುರ್ಹಾನ್‌ಪುರದಲ್ಲಿರುವ ಆಸಿರ್‌ಗಢ ಕೋಟೆಯಲ್ಲಿ ಅಡಗಿಸಿ ಇಡಲಾಗಿದೆ ಎಂಬುದನ್ನು ತೋರಿಸಲಾಗಿದೆ. ಹೀಗಾಗಿ ಈಗಲೂ ಚಿನ್ನ ಸಿಗಬಹುದು ಎಂದು ಗ್ರಾಮಸ್ಥರು ಕೋಟೆಯನ್ನು ಅಗೆದಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Chhaava effect

ಭೋಪಾಲ್: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಛಾವಾʼ (Chhaava) ಬಾಲಿವುಡ್ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ʼಛಾವಾʼ ಚಿತ್ರದ ದೃಶ್ಯ ನೋಡಿ ಮಧ್ಯ ಪ್ರದೇಶದ ಬುರ್ಹಾನ್‌ಪುರ (Burhanpur) ಗ್ರಾಮಸ್ಥರು ಚಿನ್ನದ ನಿಧಿಯನ್ನು ಹುಡುಕಲು ಕೋಟೆಯನ್ನು ಅಗೆದಿರುವ ದೃಶ್ಯ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ʼಛಾವಾʼ ಚಿತ್ರದಲ್ಲಿ ಮೊಘಲ್ ಯುಗದ ಚಿನ್ನದ ನಾಣ್ಯಗಳನ್ನು ಮಧ್ಯ ಪ್ರದೇಶದ ಬುರ್ಹಾನ್‌ಪುರದಲ್ಲಿರುವ ಆಸಿರ್‌ಗಢ ಕೋಟೆ (Asirgarh Fort)ಯಲ್ಲಿ ಅಡಗಿಸಿ ಇಡಲಾಗಿದೆ ಎಂಬುದನ್ನು ತೋರಿಸಲಾಗಿದ್ದು, ಈಗಲೂ ಚಿನ್ನ ಸಿಗಬಹುದು ಎಂದು ಗ್ರಾಮಸ್ಥರು ಕೋಟೆಯನ್ನು ಅಗೆದಿದ್ದಾರೆ. ಮಧ್ಯ ಪ್ರದೇಶದ ಬರ್ಹಾನ್‌ಪುರದ ಆಸಿರ್‌ಗಢ ಕೋಟೆಯ ಸುತ್ತಮುತ್ತ ರಾತೋ ರಾತ್ರಿ ಗ್ರಾಮಸ್ಥರು ಮುಗಿಬಿದ್ದು ಭೂಮಿ ಅಗೆಯಲು ತೊಡಗಿರುವ ದೃಶ್ಯ ಎಲ್ಲಡೆ ಹರಿದಾಡುತ್ತಿದ್ದು, ಸಂಚಲವನ್ನೇ ಉಂಟು ಮಾಡಿದೆ. ನಿಧಿ ಹುಡುಕುವ ಕಾರ್ಯದಲ್ಲಿ ತೊಡಗಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಮೊಘಲರ ಕಾಲದಲ್ಲಿ ಬರ್ಹಾನ್‌ಪುರದಲ್ಲಿ ಚಿನ್ನದ ಗಣಿ ಇತ್ತು, ಮೊಘಲರು ಮರಾಠರಿಂದ ಲೂಟಿ ಮಾಡಿದ ಚಿನ್ನ ಮತ್ತು ನಿಧಿಯನ್ನು ಆಸಿರ್‌ಗಢ ಕೋಟೆಯಲ್ಲಿ ಬಚ್ಚಿಟ್ಟಿದ್ದಾರೆ ಎಂದು ʼಛಾವಾʼ ಚಿತ್ರದಲ್ಲಿ ತೋರಿಸಲಾಗಿದೆ. ಹೀಗಾಗಿ ಗ್ರಾಮಸ್ಥರ ಗುಂಪೊಂದು ಚಿನ್ನದ ನಿಧಿಯನ್ನು ಹುಡುಕಲು ಕೋಟೆಯ ಸುತ್ತಮುತ್ತ ಅಗೆಯಲು ಮುಂದಾಗಿದೆ ಎಂದು ವರದಿಯೊಂದು ತಿಳಿಸಿದೆ. ಸ್ಥಳೀಯರು ಚಿನ್ನದ ನಿಧಿಯನ್ನು ಹುಡುಕಲು ಅಗೆಯುವ ಉಪಕರಣಗಳನ್ನು ಹಿಡಿದು ಭೇಟಿ ನೀಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಅಲ್ಲಿನ ಆಡಳಿತವು ಎಚ್ಚೆತ್ತುಕೊಂಡಿದ್ದು, ಪೊಲೀಸ್ ತಂಡವನ್ನು ಸ್ಥಳಕ್ಕೆ ರವಾನಿಸಿದೆ. ಅಕ್ರಮ ಭೂಮಿ ಶೋಧವನ್ನು ನಿಲ್ಲಿಸುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಕ್ರಮವಾಗಿ ಭೂಮಿ ಅಗೆಯುವುದು, ಲೋಹಕ್ಕಾಗಿ ಹುಡುಕಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಲ್ಲಿನ ಆಡಳಿತ ಇಲಾಖೆ ಎಚ್ಚರಿಕೆ ನೀಡಿದೆ.
#Chhava movie showed that Mughals looted Gold and treasure from Marathas and kept it in the Asirgarh Fort, Burhanpur, MP.
— Roshan Rai (@RoshanKrRaii) March 7, 2025
After watching the movie, locals flocked to the spot with digging tools, metal detectors and bags to dig up the treasure and take it home.
My heart bleeds… pic.twitter.com/zUiGyMoQKh
ಐತಿಹಾಸಿಕ ಮಾಹಿತಿ ಪ್ರಕಾರ, ಬುರ್ಹಾನ್‌ಪುರವು ಒಂದು ಕಾಲದಲ್ಲಿ ಮೊಘಲರ ಪ್ರಮುಖ ಕೇಂದ್ರವಾಗಿತ್ತು. ಯುದ್ಧದ ಸಮಯದಲ್ಲಿ ಮೊಘಲರು ತಮ್ಮ ಚಿನ್ನ, ಸಂಪತ್ತನ್ನು ಈ ಕೋಟೆಯಲ್ಲಿ ಅಡಗಿಸಿಟ್ಟದ್ದರು ಎನ್ನಲಾಗಿದೆ. ಈ ಹಿಂದೆ ಮೊಘಲರ ಕಾಲದಲ್ಲಿ ಬುರ್ಹಾನ್‌ಪುರ ಸಂಪತ್ತಿನಿಂದ ಸಮೃದ್ಧವಾಗಿತ್ತು. ಇಲ್ಲಿ ನಾಣ್ಯಗಳನ್ನು ತಯಾರಿಸಲು ಒಂದು ಟಂಕಸಾಲೆ ನಿರ್ಮಿಸಲಾಗಿದ್ದು ತಮ್ಮಲ್ಲಿದ್ದ ಸಂಪತ್ತನ್ನು ಭೂಮಿ ಅಗೆದು ಭದ್ರವಾಗಿ ಇಡುತ್ತಿದ್ದರು ಎನ್ನಲಾಗಿದೆ. ಆದರೆ ಇದನ್ನೇ ನಿಜ ಎಂದು ನಂಬಿ ಗ್ರಾಮಸ್ಥರು ಚಿನ್ನ ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ.
ಇದನ್ನು ಓದಿ: Amitabh Bachchan: ಐಷಾರಾಮಿ ಅಪಾರ್ಟ್ಮೆಂಟ್ ಸೇಲ್ ಮಾಡಿ 52ಕೋಟಿ ರೂ ಲಾಭ ಗಳಿಸಿದ ಬಿಗ್ ಬಿ!
ಈ ದೃಶ್ಯ ನೋಡಿದ ನೆಟ್ಟಿಗರೊಬ್ಬರು ನಮ್ಮ ದೇಶದಲ್ಲಿ ಇನ್ನು ಎಷ್ಟು ಅನಕ್ಷರಸ್ಥ ಜನರಿದ್ದಾರೆ. ಈ ದೃಶ್ಯ ನೋಡಿ ನಾನು ಬಹಳಷ್ಟು ದುಃಖಿತನಾಗಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇವರು ದುಡಿದು ತಿನ್ನುವ ಜನರಲ್ಲ ಎಂದು ಕಿಡಿ ಕಾರಿದ್ದಾರೆ.
ಲಕ್ಷ್ಮಣ್ ಉಟೇಕರ್ ನಿರ್ದೇಶನ, ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಅಭಿನಯದ ʼಛಾವಾʼ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ಜೀವನದ ವೇಳೆ ಬೆಳಕು ಚೆಲ್ಲುತ್ತದೆ. ವಿಕ್ಕಿ ಕೌಶಲ್ ಸಂಭಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸದ್ಯ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಈಗಾಗಲೇ ವಿಶ್ವದಾದ್ಯಂತ 700 ಕೋಟಿ ರೂ.ಗೂ ಹೆಚ್ಚು ಗಳಿಸಿದೆ.