Monday, 13th May 2024

ವಿದ್ಯಾವಂತ್ರೆ ಕಣ್ಲಾ ಈಗ ಇಷ್ಟೊೊಂದ್ ಅವಾಂತ್ರ ಮಾಡ್ತಿರೋದು!

ಹಳ್ಳಿ ಕಟ್ಟೆ
ವೆಂಕಟೇಶ ಆರ್. ದಾಸ್

ಸೀರಿಯಲ್ ನೋಡೋ ಹೆಂಗುಸ್ರು ಮದ್ಯೆನೆ ಇದ್ದು ಇದ್ದು ಸಾಕಾದ್ ಸೀನಾ, ತಡಿ ಪಟೇಲಪ್ಪಂಹೆ ಒಂದ್ ಫೋನ್ ಮಡುಮಾ ಅಂತ ಫೋನ್ ಎತ್ಕಂಡ. ಡಯಲ್ ಮಾಡಿದರೆ ಅರ್ಧ ಗಂಟೆ ಬರೀ ಕರೋನಾ ವೈರಸ್ದೆ ಅಡ್ವಿಟೇಜ್ ಬಂತು. ಅಂತೂ ಇಂತೂ ಕೊನೆ ಗಳಿಗೆಗ್ ಪಟೇಲಪ್ಪನ್ ಫೋನ್ ರಿಸೀವ್ ಆಯ್ತು.

ಹಲೋ, ದೊಡ್ಡಪ್ಪೋ ನಾನ್ ಕಣ ಕೇಳುಸ್‌ತ್ತೈತಾ, ಗುಡ್ದಳ್ಳಿ ಸೀನ, ನಿಂಗೆ ಹಿರಿ ಮಗಾ ಇದ್ದಂಗೆ ಅಂತ ನೀನೆ ಅವಾಗವಾಗ ಹೇಳ್ತಿದ್ದಲ್ಲ, ಅವ್ನೆ ಸೀನ ಮಾತಾಡ್ತಿರದು. ಹೆಂಗಿದ್ದೀಯಾ ಎಂಟು ದಿನ ಆಯ್ತು ಎಲ್ಡುಕ್ಕೋಗಕ್ಕೂ ಇತ್ಲಾಕಡೆ ಬಂದಿಲ್ಲ ನೀನು ಅಂದ ಸೀನ. ಹೇಳ್ಲಾ ಬಡ್ಡಿಹೈದ್ನೆ, ನಿನ್ ದನಿಕೇಳಿ ಏಸ್ ದಿನ ಆಯ್ತಲಾ, ಹೆಂಗಿದ್ದೀಲ ಸೀನ, ಪುಡಾರಿಗಳ್ ಜತ್ಗೆ ಜಾಸ್ತಿ ಓಡಾಡೋ ಬಡ್ಡಿಹೈದ್ನೆ ನೀನು, ನೀನ್ ವಸಿ ದಿನ ಕೋಣೆವೊಳ್ಗೆ ಇರ್ಲಾ ಅಂದ ಪಟೇಲಪ್ಪ.

ದೊಡ್ಡಪ್ಪೋ ಈಗೇನ್ ನಾನ್ ಬೀದಿಗ್ ಬಂದೀವ್ನೆ, ನಾನು ಮನೆವೊಳಗೆ ಇದ್ದೀನಿ. ಆದ್ರೆ ಹೆಂಗುಸ್ರು ಬರೀ ಧಾರವಾಹಿ ನೋಡ್ಕಂಡೆ ಕೂತ್ಕತ್ತರೆ, ಇನ್ನು ನ್ಯೂಸ್ ಚಾನೆಲ್ ಹಾಕಿದ್ರೆ ಸಾಕು. ಅದೆಂತವೋ ಹುಳುಗಳು ಓಡಾಡದ್ನೆ ತೋರುಸ್ತಾರೆ. ಅದುನ್ನೋಡಕ್ಕೂ ಭಯ, ಇತ್ಲಾಗ್ ಹೆಂಗುಸ್ರುಗೋಳ್ನಾ ಕೆಣಕಕ್ಕೂ ಭಯ. ಅದ್ಕೆ ನಿಂಗ್ ಫೋನ್ ಮಾಡ್ದೆ ಕಣ ಅಂದ ಸೀನ.

ಹೇಳ್ಲಾ ಸೀನ, ಸರಕಾರ ಹೇಳಿದ್ ಮ್ಯಾಲೂ ಮನೇಲಿರ್ದೆ ಬೀದಿಗ್ ಬಂದ್ರೆ ನಮ್ಗೆ ಮರ್ಯಾದೆ ಇದ್ದದ್ದೇನ್ಲಾ, ನಾವು ಅಷ್ಟ್ನೂ ಮಾಡ್ನಿಲ್ಲ ಅಂದ್ರೆ ಕರೋನಾ ವೈರಸ್ ಹಟ್ಕಾಯಿಸ್ಕಂಡು ಗುಮ್‌ತ್ತದೆ. ಅಲ್ದೆೆ ನಮ್ ಸುತ್ಲಾ ಇರೋರ್ಗೂ ಅದು ಡೇಂಜರು ಅಲ್ವಲ್ಲಾ ಅದ್ಕೆ ಯಾಕ್ ಬೇಕು ಅಂತ ಕೋಣೆವೊಳಗೆ ಇದ್ದೀನಪ್ಪ ಅಂದ ಪಟೇಲಪ್ಪ.

ದೊಡ್ಡಪ್ಪೋ, ಮಾತ್ ಮಾತ್ಗೂ ಕ್ವಾಣೆವೊಳ್ಗೆ ಕ್ವಾಣೆವೊಳಗೆ ಅನ್ನಬೇಡ, ಕೇಳಿಸ್ಕಳ್ಳರ್ಗೆ ಕೆಟ್ಟದಾಗ್ ಕೇಳ್ಸುತ್ತೆ. ಅದು ಕ್ವಾರಂಟೈನ್ ಅಂತಾವಾ, ಯಾರಿಗಾದ್ರೂ ಡೌಟ್ ಬಂದು ಜ್ವರ, ಶೀತ ಇದ್ರೆ ಅವ್ರುನ್ನ ಮನೇಲೆ ಯಾರ್ ಸಂಪರ್ಕಕ್ಕೂ ಬರ್ದೆೆ ಇರಿ ಅಂತ ಡಾಕ್ಟರ್ ಹೇಳಿದ್ರೆ ಅದೇ ಕ್ವಾರಂಟೈನು. ಅದುನ್ನ ನೀನು ಕುಲ್ಗೆೆಡ್ಸಿ ಕ್ವಾಣೆವೊಳ್ಗೆ ಮಾಡ್ಬೇಡ ಅಂದ ಸೀನ.

ಕ್ವಾಣೆವೊಳ್ಗೆ ಮಾಡಕ್ ಇನ್ನೇನ್ ಕೆಲ್ಸ ಐತೆ ಬಿಡ್ಲಾ, ಅದೆಂತದ್ದೋ ನಮಗೆ ಇಂಗ್ಲೀಷೆಲ್ಲ ಬರಾಕುಲ್ಲಾ, ನಾವು ಹೆಬ್ಬೆಟ್‌ ಬಡ್ಡಿಮಕ್ಳು, ನಮಗೆ ಅದೆಲ್ಲ ಕಾಣಕ್ಕಿಲ್ಲ, ದೇಸ ಸುತ್ತೋ ಬಡ್ಡಿಮಕ್ಳು ನೀವು ಬುದ್ಧಿ ಇರೋರು ಮಾಡೋ ಘನಂಧಾರಿ ಕೆಲ್ಸ ಮಾಡೋದ್ ನೋಡಿಲ್ವೇ ಅಂದ ಪಟೇಲಪ್ಪ.

ದೊಡ್ಡಪ್ಪೋ, ಹಳ್ಳಿ ಜನ ಈಗ್ಲೂ ಏನೂ ಆಗಿಲ್ಲ ಅಂದ್ಕಂಡು ತಿರುಗಾಡ್ತಲ್ವೇ, ವಿದ್ಯಾವಂತ್ರು ಏನ್ ಮಾಡ್ಯವ್ರೆ ಹೇಳು ಅಂತ ತಪ್ನಾ, ಜನಕ್ಕೆ ವಿದ್ಯೆ ಇಲ್ದಿದ್ರೆೆ ಕರೋನಾ ಬಗ್ಗೆೆ ಗೊತ್ತಾಗಕುಲ್ಲ ಅಂದ ಸೀನ. ಲೇ ಮುಚ್ಲಾ ಮೂದೇವಿ ನನ್ಮಗ್ನೆ, ಫಾರಿನ್ನಿಿಂದ ಕರೋನಾನ ತಂದೋರು ವಿದ್ಯಾವಂತ್ರೆ, ಅದಾದ್ಮೇಲೆ ಮುಚ್ಕಂಡ್ ಮನೇಲಿರಿ ಅಂತ ಸೀಲ್ ಹಾಕಿ ಕಳಿಸಿದ್ರೆ ಬಸ್ ಸ್ಟಾಾಂಡಲ್ಲಿ ಟೀ ಕುಡಿಯೋದು, ಸ್ಟೈಲಾಗಿ ಶಾಪಿಂಗ್ ಮಾಡಿದ್ದೇನೆ ನರ್ಮ್ಮೂ ಗಿಡ್ನೆೆಂಡ್ರು ಯಳ್ವೀನಾ, ಎಲ್ಲ ನಿನ್ಮಂತ ಅರ್ಧಬರ್ಧ ಓದಿರೋ ಬಿಲ್ನಾಸಿ ನನ್ಮಕ್ಕಳೇ ಕಣ್ಲಾ ಅಂದ ಪಟೇಲಪ್ಪ.

ದೊಡ್ಡಪ್ಪ ಬ್ಯಾರೆ ದೇಸಗೋಳು ಹೀಂಗಾಯ್ತಿದ್ದಂಗೆ ಉಚ್ಚೆ ಉಯ್ಯಕ್ಕೂ ಆಚೆ ಬರದಂಗ್ ಮಾಡಿದ್ದೋ, ಇಲ್ಲಿ ರಾಜ ಮರ್ಯಾದೆ ಕೊಟ್ಟು ಕರ್ಕೊಂಡ್ ಬಂದಿದ್ದು ಅಲ್ದೆ ಮನೇ ತಂಕ ಬುಟ್ಟು ಹುಷಾರಿಗಿರೀ ಅಂದ್ರೆ ಅದೆಂಗ್ ಕೇಳಕ್ಕಾಯ್ತದೆ. ಶೋಕಿಗೆ ಶಾಪಿಂಗ್ ಮಾಡಿ, ಅಲ್ಲಿ ಇಲ್ಲಿ ಟೀ ಕುಡ್ದು ನಾಲ್ಕಾರ್ ಜನಕ್ಕೆ ತೊಂದ್ರೆ ಕೊಟ್ರೇನೆ ಅವ್ರಿಗೆಲ್ಲ ಖುಷಿ ಕಣ್ ತಕೋ ಅಂದ ಸೀನ.

ಊ ಮತ್ತೇ ಅದಕ್ಕೆ ಹೇಳಿದ್ದು, ವಿದ್ಯಾವಂತ್ರು ಅನ್ನಿಸ್ಕಂಡ್ ಅವಿವೇಕಿಗಳ್ ಥರ ನಡ್ಕೊೊಂಡ್ರು ಜನ ಅಂತೇಳಿದ್ದು, ಮೊನ್ನೆ ಮೋದಿ, ಕರೋನಾ ವಿರುದ್ಧ ಹೋರಾಟ ಮಾಡೋರಿಗೆ ಚಪ್ಪಾಳೆ ತಟ್ಟಿ ಅಂದ್ರೆ ಬೀದಿಗ್ ಬಂದು ಗುಂಪ್ ಸೇರಿ ಜಾಗ್ಟೆ ಬಡಿದೋರೆಲ್ಲ ವಿದ್ಯಾವಂತ್ರೆ, ಬೆಂಗ್ಳೂರಿಂದ ಸಿಕ್ಕಿಸಿಕ್ಕಿದ ಬಸ್ ಹತ್ಕೊೊಂಡು ಊರಿಗ್ ಹೋಗಿದ್ದು, ಪಾಪ ಊರಲ್ಲಿರೋ ವಯಸ್ಸಾದೋರ್ಗೆಲ್ಲ ತೊಂದ್ರೆ ಕೊಟ್ಟಿದ್ದು ಇದೇ ವಿದ್ಯಾವಂತ್ರು ಕಣ್ಲಾ ಅಂದ ಪಟೇಲಪ್ಪ.

ಬುಡು ದೊಡ್ಡಪ್ಪ ಬುದ್ದಿ ಕಲೀಲಿಲ್ಲ ಅಂದ್ರೆ ಕರೋನಾ ಬಂದು ಕಲಿಸ್ತದೆ. ಆಗ ಸರಿಹೋಯ್ತದೆ. ಜನ್ರಿಗೆ ಪೊಲೀಸ್ನೋರು ಬೈದು ಬುದ್ಧಿ ಹೇಳಿದ್ರು, ಕೈಮುಗಿದ್ರು ಕೊನೆಗೆ ದೊಣ್ಣೆ ತಗಂಡು ಅಂಡ್ ಮ್ಯಾಲೆ ಬಾಸುಂಡೆ ಬರೋಗಂಟ ಬಾರಿಸಿದ್ರು, ಇದಕ್ಕೆಲ್ಲ ಬುದ್ಧಿ ಕಲೀನಿಲ್ಲ ಅಂದ್ರೆ ಕೊನೆಗೆ ಕರೋನಾ ಗ್ಯಾರಂಟಿ ಅಲ್ವೇ ಮತ್ತೆ ಅಂದ ಸೀನ.

ನಿಮ್ ರೇಣುಕಾಚಾರ್ಯ ಊರ್ ಗೂಳಿ ಅನ್ನೋದ್ನಾ ಮತ್ತೇ ಸಾಬೀತ್ ಮಾಡ್ತಂತೆ, ಊರ್ ಸುತ್ತಾ ಜತೆಗೊಂದಿಷ್ಟು ಗುಂಪ್ ಸೇರಿಸ್ಕಂಡು ಜನಕ್ಕೆ ಜಾಗೃತಿ ಮೂಡಿಸ್ತೀನಿ ಅಂತ ಊರ್ ಸುತ್ತುತ್ತಂತೆ, ಡಿಸಿ ಬಂದ್ ಬೈದು ಮನೆಗ್ ಕಳಿಸ್ತಂತೆ ಅಂದ ಪಟೇಲಪ್ಪ.
ದೊಡ್ಡಪ್ಪ, ಕರೋನಾ ಅಂತೇಳಿ ಮೂರ್ನಾಲ್ಕು ಮಿನಿಷ್ಟ್ರುಬುಟ್ಟು ಮಿಕ್ಕೋರೆಲ್ಲ ಮನೆಲ್ಕೂತ್ಕಂಡ್ ಚೌಕಾಬಾರ ಆಡ್ತಾವ್ರೆ, ಅಂತಾದ್ರಲ್ಲಿ ನಾನು ಮುಂದೆ ಹೋಗಿ ಜನ್ರು ಕಷ್ಟ ಕೇಳಿ ನಾನ್ಯಾಕೆ ಮಿನಿಷ್ಟ್ರಾಗಬಾರದು ಅನ್ನೋ ಭಾವ್ನೆ ಮೂಡಿಸ್ಬೇಕು ಅಂತ ಹೋಗಿತ್ತಂತೆ ಅದ್ಕೆ ಡಿಸಿ ಸಾಹೇಬ್ರು ಬಂದು ಕರೋನಾ ನಾ ಮಿನಿಷ್ಟ್ರಾಗೋನು ಅಂತ ಹೇಳಿದ್ರೆ ಕೇಳಲ್ಲ, ಎಲ್ರೂ ಸಾಮಾಜಿಕ ಅಂತರ ಕಾಪಾಡ್ಕೋಳ್ಳಲೇಬೇಕು. ನೀವು ನಿಮ್ ಬಾಲಗಳ್ನೆಲ್ಲ ಕೂಡ್ಕಂಡು ಹಿಂಗೆ ಬೀದಿಗ್ ಬಂದ್ರೆ ನಮ್ಗೆ ಕಷ್ಟ ಆಯ್ತದೆ ಅಂದ್ರಂತೆ ಅದಕ್ಕೆ ಮನೇಗ್ ಹೋಗಿ ಮಲೀಕತಂತೆ ನಮ್ ಹೊನ್ನಾಳಿ ಗೂಳಿ ಅಂದ ಸೀನ.

ಊ ಕಣ್ಲಾ ಅದ್ಕೆ ಅಲ್ವೇ ಈಗ ಎಲ್ಲ ಸೇರ‌್ಕಂಡು ಮನೇಲಿದ್ದು ರಾಮಾಯಣ, ಮಹಾಭಾರತ ನೋಡಿ ಅಂತೇಳಿ ಅದನ್ನೆಲ್ಲ ಮರುಪ್ರಸಾರ ಮಾಡ್ತಾವ್ರಂತೆ. ಅದ್ಕೆ ಮೊನ್ನೆೆಯಿಂದ ನಾನುವೆ ಡಿಡಿ 1 ಯಾವುದ್ರಲ್ಲಿ ಬತ್ತದೆ ಅಂತ ಹುಡುಕ್ತಾ ಇದೀನಿ ಸಿಗ್ನೇ ವಲ್ದು ಕಣ್ಲಾ ಸೀನ, ಮನೇ ಕಡಿಕ್ ಬಂದ್ರೆ ಹಂಗೆಯಾ ಅದೆಲ್ಲಿ ಬತ್ತದೆ ಅಂತ ವಸಿ ತೋರಿಸ್ ಬುಟ್ಟು ಹೋಗ್ಲಾ ಅಂದ ಪಟೇಲಪ್ಪ.

ದೊಡ್ಡಪ್ಪೋ, ಅವ್ರು ಅದ್ಯಾವ್ ಟೈಮ್ನಾಗೆ ರಾಮಾಯಣ ಶುರು ಮಾಡಿದ್ರೋ ಏನೋ, ವಾರದಿಂದ ಗಂಡ ಮನೇಲಿರೋದ್ರಿಿಂದ ಹೆಂಡ್ರಿಗೆ ಮೈಯೆಲ್ಲ ಉರಿ ಹತೊಂಡು ಅದೆಷ್ಟೋ ಮನೇಲಿ ರಾಮಾಯಣ ಶುರುವಾಗ್ಯದೆ. ಎಷ್ಟೋ ಮನೇಲಿ ಮಹಾಭಾರತ ಈಗಾಗಲೇ ನಡೆದೋಗ್ಯದೆ. ಕ್ರೈಂ ರೇಟೆಲ್ಲ ಕಡ್ಮೆಯಾಗಿ ಕಳ್ಳತನ, ಕೊಲೆ ಸುಲ್ಗೆ ಎಲ್ಲ ಕಡ್ಮೆ ಆಗ್ಯದಂತೆ. ಆದ್ರೆ, ಗಂಡ ಹೆಂಡ್ರು ಜಗ್ಳದ್ ಕೇಸ್ ಮಾತ್ರ ಜಾಸ್ತಿ ಆಗ್ಯದಂತೆ ಕಣ್ ದೊಡ್ಡಪ್ಪೋ ಅಂದ ಸೀನ.

ಇನ್ನೇನ್ಲಾ ಮತ್ತೇ ಮನೇಲಿದ್ದಾಗ್ಲಾದ್ರು ಹೆಂಡ್ರಿಗೆ ಹೆಲ್‌ಫ್‌ ಮಾಡ್ಕಂಡು ಇರೋದ್ಬುಟ್ಟು, ಮನೇಲಿದ್ದೀನಿ ಅಂತ ಹೆಂಡ್ರಿಗೆ ಅದ್ ಮಾಡ್ಕೊಡು, ಇದು ಮಾಡ್ಕೊಡು ಅಂತ ಆಡ್ರು ಮಾಡಿದ್ರೆ ಯಾವ್ ಹೆಂಡ್ರು ಮಾಡ್ಕೊಟ್ಟಾಳೇಳು. ಹೆಂಗುಸ್ರುಗೋಳು ಎಷ್ಟು ಅಂತ ನಮ್ಮೆಲ್ರು ಸೇವೆ ಮಾಡ್ಯಾಳ್ ಹೇಳು ಅಂದ ಪಟೇಲಪ್ಪ.

ದೊಡ್ಡಪ್ಪೋ, ನೀನು ಬದ್ಕೋ ದಾರಿ ಕಂಡ್ಕಂಡೆ ಕಣ್ ಬುಡು, ಹೆಂಡ್ರು ಜತ್ಗೆ ಇನ್ನೂ ಎರಡ್ ವಾರ ಕಳೀಬೇಕು ಅಂದ್ರೆ ಹೆಂಗುಸ್ರು ಬಗ್ಗೆ ಹಿಂಗೆ ಮಾತಾಡ್ಬೇಕು, ಇಲ್ಲ ಅಂದ್ರೆ ವತ್ತೊತ್ಗೆ ಊಟ, ಕಾಫಿ, ತಿಂಡಿ ಸಿಗದಿರಲಿ, ಮನೇಲಿ ನೆಮ್ದಿನೇ ಇರಲ್ಲ, ಅದ್ಕೆ ಹೆಂಗುಸ್ರುನಾ ಓಲೈಕೆ ಮಾಡ್ಕೋಬೇಕು ಅಂತ ತಿಳ್ಕಂಡ್ ಬುಟ್ಟೆ ಬುಡು ಅಂದ ಸೀನ.

ಲೇ, ಅಂಥದ್ದೇನಿಲ್ಲ ಕಣ್ಲಾ ಸೀನ, ಕೆಲವು ವಿಷ್ಯದಲ್ಲಿ ಹೆಂಡ್ರು ಮೆಚ್ಚಿಸ್ದೇನೆ ಯಾವ್ ಕೆಲ್ಸಾನು ಆಗಾಕಿಲ್ಲ. ಮೆಚ್ಚಿಸ್ಲೇಬೇಕಾಯ್ತದೆ. ಅದೆಲ್ಲ ನಿನ್ನಂತ ಬೇವರ್ಸಿ ಬುಂಡ್ರುಗೋವಿಗೆ ಎಲ್ಲಿ ಗೊತ್ತಾಯ್ತದೆ, ಹೋಗು ಬಂಗ ಮಾಡು, ನಿಮ್ ದೊಡ್ಡವ್ವ ಬಜ್ಜಿ ಹಾಕ್ ಬಾ ಅಂತಾವ್ಳೆ, ಇಬ್ರು ಸೇರ‌್ಕಂಡ್ ಬಜ್ಜಿ ಮಾಡ್ತೀವಿ, ಬರೋದಾದ್ರೆ ಬಾ ಮನೇ ಕಡಿಕೆ, ಆದ್ರೆ, ಬರೋವಾಗ ಮಾಸ್‌ಕ್‌ ಹಾಕೊಂಡ್ ಬರೋದ್ನಾ ಮರೀಬ್ಯಾಡ ಗೊತ್ತಾಯ್ತಾ ಅಂದ ಪಟೇಲಪ್ಪ.

ದೊಡ್ಡಪ್ಪ, ಈಗ ಬಜ್ಜಿ, ಬೋಂಡಾ ಎಲ್ಲ ತಿನ್ನಬಾರದು, ಅದ್ರಲ್ಲೂ ನಿನ್ನಂತ ವಯಸ್ಸಾದೋರಿಗೆ ಸ್ವಲ್ಪ ಕೆಮ್ಮು ಅಂದ್ರೂ ಡೌಟ್ ಬತ್ತದೆ. ಅದ್ಕೆ ಇಂಥ ಟೈಮ್‌ನಲ್ಲಿ ಇದೆಲ್ಲ ಬುಟ್ಟು ಒಳ್ಳೆ ಪೌಷ್ಠಿಕಾಂಶ ಸಿಗೋ ಊಟ ತನ್ಕಂಡು ಮನೇಲಿರಿ, ಮುದ್ದೆ ಉಪ್ಸಾರು ತಿಂದ್ರೆ ಶ್ಯಾನೆ ಒಳ್ಳೆದು, ಅದುನ್ ಬುಟ್ಟು ನಾಲ್ಗೆ ಚಪ್ಲಕ್ಕೆ ಅದೆಲ್ಲ ತಿಂದು ಯಡ್ವಟ್ಟು ಮಾಡ್ಕೋಬ್ಯಾಡ ಆಯ್ತಾ ಅಂತ ಬುದ್ಧಿ ಹೇಳ್ದ ಸೀನ.

ಬುಡಪ್ಪ, ನೀನು ಬೋ ಬುದ್ವಂತ, ನೀನೇಳಿದ್ ಮ್ಯಾಲೆ ಕೇಳ್ದಂಗ್ ಇರಕ್ಕಾಯ್ತದಾ, ಬೋಂಡಾ ಮಾಡೋದ್‌ಬ್ಯಾಡ ಕಣೇ, ಸೀನ ಹೇಳ್ತಾವ್ನೆ ತಿನ್ನಂಗಿಲ್ಲ ಅಂತ, ಅದ್ರು ಬದ್ಲು ಸೊಪ್ಪಾಕಿ ಉಪ್ಪ್ಸಾರು ಮಾಡು, ಮುದ್ದೆ ಉಂಡ್ಕಂಡ್ ಮಲೀಕಳ್ಳುಮಾ ಅಂದೋನು, ಇಡ್ಲಾ ಫೋನನ್ನಾ ಅಂತ ಫೋನಿಟ್ಟ ಪಟೇಲಪ್ಪ.

Leave a Reply

Your email address will not be published. Required fields are marked *

error: Content is protected !!