Sunday, 19th May 2024

ಯಾವ ಪ್ರಧಾನಿ ತನ್ನ ದೇಶವಾಸಿಗಳಿಗೆ ಈ ಮಾತುಗಳನ್ನು ಹೇಳಿದ್ದಾನೆ?

ಇಡೀ ಸಿಂಗಾಪುರಕ್ಕೆ ಪ್ರತಿದಿನ ಎಂಟು ನೂರು ಒಲಿಂಪಿಕ್ ಗಾತ್ರದ ಈಜುಗೊಳದಷ್ಟು ನೀರು ಬೇಕಂತೆ. ಅದರ ನಾಲ್ಕು ಪಟ್ಟು ಕುಡಿಯುವ ನೀರನ್ನು ಅದು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುತ್ತದೆ. ಎಲ್ಲ ವಸ್ತುಗಳನ್ನೂ ಬೇರೆ ದೇಶಗಳಿಂದ ತರಿಸಿಕೊಳ್ಳುವ ಸಿಂಗಾಪುರ, ಪ್ರಾಯಶಃ ಕುಡಿಯುವ ನೀರೊಂದನ್ನೇ ರಫ್ತು ಮಾಡುತ್ತದೆ. ಕುಡಿಯುವ ನೀರಿನ ನಿರ್ವಹಣೆ ಮತ್ತು ವ್ಯವಸ್ಥೆಯಲ್ಲಿ ಇಂದು ಆ ದೇಶ ಜಗತ್ತಿಗೆ ಪಾಠ ಮಾಡುತ್ತದೆ. 

ನಾನು ಯಾವುದೇ ದೇಶಕ್ಕೆ ಹೋಗಿ ಬಂದ ನಂತರ, ಸಾಮಾನ್ಯವಾಗಿ ಆ ದೇಶದ ಬಗ್ಗೆ ಪುಂಖಾನುಪುಂಖವಾಗಿ ಬರೆಯುವುದಿಲ್ಲ. ಯಾವ ದೇಶವೂ ಒಂದು ತೆಕ್ಕೆಗೆ ತನ್ನ ಅಸಲೀಯತ್ತನ್ನು ಬಿಟ್ಟು ಕೊಡುವುದಿಲ್ಲ. ನಾವು ನೋಡಿ ಬಂದ ಬಳಿಕ ಅಲ್ಲಿ ಖುದ್ದಾಗಿ ನೋಡಿದ್ದನ್ನು, ಕೇಳಿದ್ದನ್ನು, ಈ ಮೊದಲು ಅಥವಾ ನಂತರ ಓದಿದ್ದಕ್ಕೆ ತಾಳೆ ಹಾಕಿಕೊಂಡು ಬರೆಯುವುದು ಒಳ್ಳೆಯದು ಎಂದು ಎಷ್ಟೋ ಸಲ ಅನಿಸಿದೆ. ನಾನು ಮೊನ್ನೆ ಕಿರಗಿಜಸ್ತಾನ, ಕಝಕಿಸ್ತಾನ ಮತ್ತು ಉಜ್ಬೇಕಿಸ್ತಾನಕ್ಕೆ ಹೋಗಿದ್ದೆ. ಆ ದೇಶಗಳ ಬಗ್ಗೆ ಒಂದು ಸಾಲನ್ನೂ ಇಲ್ಲಿ ತನಕ ಬರೆದಿಲ್ಲ. ಆ ದೇಶಗಳ ಇತಿಹಾಸ, ರಾಜಕೀಯ ಮತ್ತು ಸಾಮಾಜಿಕ ಜೀವನಗಳ ಬಗ್ಗೆ ಓದುತ್ತಿದ್ದೇನೆ. ನಾನು ನೋಡಿದ ಸಂಗತಿಗಳನ್ನು ಅವುಗಳಿಗೆ ಥಳಕು ಹಾಕಿ ಮತ್ತೆ ಮತ್ತೆ ಓದುವ, ಮಾಹಿತಿ ಕೆದಕುವ ಪ್ರಕ್ರಿಯೆಯಲ್ಲಿ ತೊಡಗಿದ್ದೇನೆ.

ಆದರೆ ಮೊನ್ನೆ ಸಿಂಗಾಪುರಕ್ಕೆ ಹೋಗಿ ಬಂದ ಬಳಿಕ, ಆ ದೇಶದ ಬಗ್ಗೆ ಎರಡು-ಮೂರು ವಾರಗಳಿಂದ ಬರೆಯುತ್ತಿದ್ದೇನೆ. ಕಾರಣ ಇಷ್ಟೇ. ನಾನು ಸಿಂಗಪುರಕ್ಕೆ ಈಗಾಗಲೇ ಏಳು ಸಲ ಹೋಗಿ ಬಂದಿದ್ದೇನೆ. ನಿತ್ಯವೂ ಅಲ್ಲಿನ ಪ್ರಮುಖ ದೈನಿಕ ‘ದಿ ಸ್ಟ್ರೇಟ್ಸ್ ಟೈಮ್ಸ್’ ನನ್ನ ಬೆಳಗಿನ ಓದಿನ ಭಾಗವೇ. ಸಿಂಗಾ ಪುರಕ್ಕೂ, ನಮ್ಮ ದೇಶಕ್ಕೂ ಹೋಲಿಕೆಯೇ ಅಲ್ಲ. ನಮ್ಮ ರಾಜಕಾರಣಿಗಳು ಆಗಾಗ ತಮ್ಮ ಊರನ್ನು ಸಿಂಗಾಪುರ ಮಾಡುತ್ತೇವೆ ಎಂದು ಹೇಳುತ್ತಾರೆ. ಅದು ಸಾಧ್ಯವಿಲ್ಲ ಎಂಬುದು ಅವರಿಗೂ ಗೊತ್ತಿರುತ್ತದೆ. ಆದರೂ ನಿದರ್ಶನಕ್ಕೆ ಸಿಂಗಾಪುರವೇ ಬೇಕು. ನಮ್ಮ ದೇಶದಲ್ಲಿ ಆ ದೇಶ ಒಂದು ರೂಪಕವಾಗಿದೆ. ಒಂದು ದೇಶ ಎಲ್ಲ ರೀತಿಯಿಂದಲೂ ಸಮರ್ಪಕವಾಗಿದ್ದರೆ, ಅದಕ್ಕೆ ಸಿಂಗಾಪುರ ಎಂದು ಹೇಳುವುದು ಸಾಮಾನ್ಯವಾಗಿದೆ. ಸಿಂಗಾಪುರವನ್ನು ಪ್ರಯೋಗಶಾಲೆಯಲ್ಲಿ ರೂಪಿಸಿದ ದೇಶ ಅಂತ ಹೇಳುವುದುಂಟು. ಇಲ್ಲ ಅಂದ್ರೆ ಒಂದು ದೇಶವನ್ನು ಉದ್ಯಾನವನದಲ್ಲಿ ರೂಪಿಸಲು ಸಾಧ್ಯವೇ ಇಲ್ಲ. ಅದು ಈಗ Garden Nation ಹೋಗಿ, Nation in the Garden ಆಗಿದೆ.

 

ಸುಮಾರು ಅರವತ್ತು ಲಕ್ಷ ಜನಸಂಖ್ಯೆ ಇರುವ ಒಂದು ದೇಶವನ್ನು ಆ ರೀತಿ ಕಟ್ಟಿರುವುದು ಸಣ್ಣ ಸಂಗತಿಯಲ್ಲ. ನಮ್ಮ ದೇಶವನ್ನು ಸಿಂಗಾಪುರಕ್ಕೆ ಹೋಲಿಸಲು ಸಾಧ್ಯವೂ ಇಲ್ಲ, ಹೋಲಿಸಲೂ ಬಾರದು. ಕಾರಣ ಆ ದೇಶ ಬೆಂಗಳೂರಿನಷ್ಟೂ ದೊಡ್ಡದಿಲ್ಲ. ಆದರೆ ಜನಸಂಖ್ಯೆಯಲ್ಲಿ ಬೆಂಗಳೂರಿಗಿಂತ ಮೂರೂವರೆ ಪಟ್ಟು ಕಡಿಮೆ. ಆದರೂ ನಮಗೆ ಸಿಂಗಾಪುರ ಯಾಕೆ ಮಹತ್ವದ್ದಾಗುತ್ತದೆ ಅಂದರೆ, ಅಲ್ಲಿ ಜಾರಿಗೆ ತಂದಿರುವ ಅನೇಕ ಯೋಜನೆಗಳ ಹಿಂದಿನ ಚಿಂತನೆಗಳು ನಮಗೂ ದಾರಿದೀಪವಾಗಬಹುದು. ಆರಂಭದಲ್ಲಿ ಸಿಂಗಾಪುರ ಸಹ ಒಂದು ಸಣ್ಣ ಹಳ್ಳಿಯಂತಿತ್ತು. ಅರವತ್ತು ವರ್ಷಗಳ ಹಿಂದೆ, ಆ ದೇಶದಲ್ಲಿ ಒಳಚರಂಡಿ ವ್ಯವಸ್ಥೆಯೂ ಇರಲಿಲ್ಲ. ಜನ ಹಾದಿ-ಬೀದಿಯಲ್ಲಿ ಉಗುಳುತ್ತಿದ್ದರು, ಹೊಲಸು ಮಾಡುತ್ತಿದ್ದರು. ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಇರಲಿಲ್ಲ. ‘ಇರುವೆಗೆ ತನ್ನ ಬಾಲ ಭಾರ. ಆನೆಗೂ ತನ್ನ ಬಾಲ ಭಾರ’ ಎಂಬ ಮಾತಿದೆ. ಪ್ರತಿಯೊಂದು ದೇಶಕ್ಕೂ ಅದರದೇ ಆದ ಸಮಸ್ಯೆಗಳಿರುತ್ತವೆ. ಅಂಥ ಸಮಸ್ಯೆಗಳಿಗೆ ಸಿಂಗಾಪುರ ಕೂಡ ಹೊರತಾಗಿರಲಿಲ್ಲ. ಅವೆಲ್ಲವುಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡೇ ಅದು ಈ ಹಂತದವರೆಗೆ ಬೆಳೆದಿದೆ. ಅದನ್ನು ಯಾರೋ ಪ್ರಯೋಗಶಾಲೆಯಲ್ಲಿ ನಿರ್ಮಿಸಿದ್ದಲ್ಲ. ಹಾಗೆ ಅಂದವಾಗಿ ನಿರ್ಮಿಸಿದ ಬಳಿಕ ಆ ರೀತಿ ಕರೆದಿದ್ದಾರಷ್ಟೇ.

ಸಮುದ್ರದಿಂದ ಆವೃತವಾಗಿ ದ್ವೀಪದಂತಿರುವ ಸಿಂಗಾಪುರ, ಐವತ್ತು ವರ್ಷಗಳ ಹಿಂದೆ, ಒಂದು ತೊಟ್ಟು ಕುಡಿ ಯುವ ನೀರಿಗಾಗಿ ಪಕ್ಕದ ದೇಶವಾದ ಮಲೇಶಿಯ ಮೇಲೆ ಅವಲಂಬಿತವಾಗಿತ್ತು. ಅದಕ್ಕಾಗಿ ಸೇತುವೆಯನ್ನು ನಿರ್ಮಿಸಲಾಗಿತ್ತು. ಸೇತುವೆ ಮೇಲೆ ಪೈಪುಗಳ ಮೂಲಕ ಕುಡಿಯುವ ನೀರು ಪೂರೈಕೆ ಆಗುತ್ತಿತ್ತು. ಅಂದರೆ ಜನರ ಮೂಲಭೂತ ಅಗತ್ಯಗಳಲ್ಲಿ ಒಂದಾದ ಕುಡಿಯುವ ನೀರಿಗಾಗಿ ಪಕ್ಕದ ದೇಶವನ್ನು ನೆಚ್ಚಿಕೊಳ್ಳಬೇಕಾದ ಕಾಲವಿತ್ತು. ಹಾಗೆ ಕುಡಿ ಯುವ ನೀರಿಗಾಗಿ ಪಕ್ಕದ ದೇಶವನ್ನು ನಂಬಿಕೊಳ್ಳುವುದು ಸುರಕ್ಷಿತ ಅಲ್ಲ ಎಂದು ಸಿಂಗಾಪುರಕ್ಕೆ ಅನಿಸಿತು. ಮನಸು ಮಾಡಿದರೆ, ಯಾವ ಕ್ಷಣದಲ್ಲೂ ಮಲೇಷಿಯಾ ನೀರು ಪೂರೈಕೆ ನಿಲ್ಲಿಸಿದರೆ, ಏನು ಕಥೆ? ಇದರಿಂದ ಎಚ್ಚೆತ್ತ ಸಿಂಗಾಪುರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿತು. ಸಮುದ್ರದ ನೀರನ್ನು ಕುಡಿಯುವ ನೀರಾಗಿ (Desalination) ಪರಿವರ್ತಿಸುವುದರ ಹೊರತಾಗಿ ಬೇರೆ ಮಾರ್ಗವೇ ಇರಲಿಲ್ಲ. ಆ ತಂತ್ರಜ್ಞಾನವನ್ನೇ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಯಿತು. ಹಾಗೆ ತೀರ್ಮಾನಿಸಿದ ಮೂರು ವರ್ಷಗಳಲ್ಲಿ, ಕುಡಿಯುವ ನೀರಿನ ವಿಷಯದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿತು. ಇಂದು ಮಲೇಷಿಯ ಬಯಸಿದರೆ, ಆ ದೇಶಕ್ಕೆ ಕುಡಿಯುವ ನೀರನ್ನು ಸಿಂಗಾಪುರ ಪೂರೈಸಬಲ್ಲದು. ಅಷ್ಟರಮಟ್ಟಿಗಿನ ಯಶಸ್ಸನ್ನು ಸಾಧಿಸಿದೆ.

 

ನಾನು ಮೊನ್ನೆ ಸಿಂಗಾಪುರಕ್ಕೆ ಹೋದಾಗ ಹೋಟೆಲ್ ರೂಮಿನೊಳಗೆ ಪ್ರವೇಶಿಸಿದ ಬಳಿಕ, ಕುಡಿಯುವ ನೀರಿಗಾಗಿ ಹುಡುಕಿದೆ. ವಿಚಿತ್ರ ಎಂಬಂತೆ ಒಂದು ಮೂಲೆಯಲ್ಲಿ ಟೇಬಲ್ ಮೇಲೆ ಖಾಲಿ ಬಾಟಲಿಗಳಿದ್ದವು. ಯಾರೋ ಕುಡಿದು ಬಿಟ್ಟ ನೀರಿನ ಬಾಟಲಿಗಳನ್ನು ತೆಗೆದಿಲ್ಲ, ಹಾಗೆ ಇಟ್ಟಿದ್ದಾರೆ ಅಂದುಕೊಂಡೆ. ರಿಸೆಪ್ಷನ್‌ಗೆ ಫೋನ್ ಮಾಡಿ, ಒಂದು ಬಾಟಲಿ ನೀರನ್ನು ಕಳಿಸುವಂತೆ ವಿನಂತಿಸಿಕೊಂಡೆ. ಆಗ ರೂಮ್ ಬಾಯ್ ಕೋಣೆಗೆ ಬಂದು, ‘ಸಾರ್, ಈ ಹೋಟೆಲಿನಲ್ಲಿ ನಾವು ನೀರು ತುಂಬಿದ ಬಾಟಲಿ ಇಡುವುದಿಲ್ಲ. ಕಾರಣ ಇಷ್ಟೇ. ಬಾತರೂಮ್ ನಳದಿಂದ (ನಲ್ಲಿ) ಬರುವ ನೀರು ಕುಡಿಯಲು ಯೋಗ್ಯವಾಗಿದೆ. ಅದು ಬಾಟಲಿ ನೀರಿನಷ್ಟೇ (ಮಿನರಲ್ ವಾಟರ್) ಶುದ್ಧವಾಗಿದೆ. ಆ ನೀರನ್ನು ಹಿಡಿದುಕೊಳ್ಳಲು ಅನುವಾಗಲು ಖಾಲಿ ಬಾಟಲಿಗಳನ್ನು ಇಟ್ಟಿದ್ದೇವೆ. ನೀವು ಆ ಬಾಟಲಿಯಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಇನ್ನೊಂದು ವಿಷಯ. ನಮ್ಮ ಹೋಟೆಲ್ ಅಂತಲ್ಲ, ಇಡೀ ಸಿಂಗಾಪುರದಲ್ಲಿ ಯಾವುದೇ ಸಾರ್ವಜನಿಕ ನಳದಿಂದ ಬರುವ ನೀರು ಕುಡಿಯಲು ಯೋಗ್ಯ. ಅಷ್ಟು ಪರಿಶುದ್ಧ. ಆ ಬಗ್ಗೆ ನಿಮಗೆ ಯೋಚನೆ ಬೇಡ. Tap water might be cleaner
than home-filtered water. ಬಾಟಲಿ ನೀರು ಕುಡಿಯುವ ಅಭ್ಯಾಸವನ್ನು ಕುಗ್ಗಿಸಲು, ಅದರ ಬೆಲೆಯನ್ನು ಎರಡು ಪಟ್ಟು ಜಾಸ್ತಿ ಮಾಡಲಾಗಿದೆ. ಸ್ವಲ್ಪವೂ ಯೋಚನೆ ಮಾಡದೇ ನೀವು ಇಡೀ ದೇಶದಲ್ಲಿ ಎಲ್ಲಿ ಬೇಕಾದರೂ ಟ್ಯಾಪ್ ವಾಟರ್ ಕುಡಿಯಬಹುದು’ ಎಂದು ಹೇಳಿದ.

ನನಗೆ ಆಗ ಐದು ವರ್ಷಗಳ ಹಿಂದೆ ಸಿಂಗಾಪುರದ ‘ಹೈಫ್ಲಕ್ಸ್’ ಎಂಬ ಕಂಪನಿಗೆ ಭೇಟಿ ನೀಡಿದ್ದು ನೆನಪಾಯಿತು. ಆ ಕಂಪನಿ ಒಂದು ಹಂತದಲ್ಲಿ ಜಗತ್ತಿನ ಅರವತ್ತಕ್ಕೂ ಹೆಚ್ಚು ದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನೆರವಿಗೆ ಬಂದಿತ್ತು. ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ತಂತ್ರಜ್ಞವಾದಲ್ಲಿ ಆ ಕಂಪನಿ ಮಾಡಿದ ಸಾಧನೆ ಅಗಾಧ. ಅಂದರೆ ಕುಡಿಯುವ ನೀರಿನ ತಂತ್ರಜ್ಞಾನವನ್ನು ಇಂದು ಸಿಂಗಾಪುರ ಜಗತ್ತಿನ ಇತರ ದೇಶಗಳಿಗೆ ನೀಡುವಷ್ಟು ಮುಂದುವರಿದಿದೆ. ಅಷ್ಟರಮಟ್ಟಿಗೆ ನೀರಿನ ವಿಷಯದಲ್ಲಿ ಆ ಪುಟ್ಟ ದೇಶ ದೊಡ್ಡ ಸಾಧನೆ ಮಾಡಿದೆ. ಇಂದು ವಿಶ್ವದಲ್ಲಿ ಯಾವುದೇ ದೇಶ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೆ, ಸಿಂಗಾಪುರದತ್ತ ನೋಡುವಂತಾಗಿದೆ. ಇಂದು ಸಿಂಗಾಪುರದ ಯಾವ ಹೋಟೆಲಿಗೆ ಹೋದರೂ ‘ನೀರನ್ನು ಮಿತವಾಗಿ ಬಳಸಿ’ ಎಂಬ ಎಚ್ಚರಿಕೆ ಫಲಕ ಕಾಣಸಿಗುವುದಿಲ್ಲ.

ಆದರೆ ನಾನು ತಂದಿದ್ದ ಹೋಟೆಲಿನಲ್ಲಿ ‘ನೀರನ್ನು ಎಷ್ಟು ಬೇಕಾದರೂ ಬಳಸಿ, ಆದರೆ ನಿರರ್ಥಕವಾಗಿ ಬಳಸಿ, ಪೋಲು ಮಾಡಬೇಡಿ’ ಎಂಬ ಫಲಕವನ್ನಷ್ಟೇ ನೋಡಿದೆ. ಇಂದು ಇಡೀ ಸಿಂಗಾಪುರಕ್ಕೆ ಪ್ರತಿದಿನ ಎಂಟು ನೂರು ಒಲಿಂಪಿಕ್ ಗಾತ್ರದ ಈಜುಗೊಳದಷ್ಟು ನೀರು ಬೇಕಂತೆ. ಅದರ ನಾಲ್ಕು ಪಟ್ಟು ಕುಡಿಯುವ ನೀರನ್ನು ಅದು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುತ್ತದೆ. ಎಲ್ಲ ವಸ್ತುಗಳನ್ನೂ ಬೇರೆ ದೇಶಗಳಿಂದ ತರಿಸಿಕೊಳ್ಳುವ ಸಿಂಗಾಪುರ, ಪ್ರಾಯಶಃ ಕುಡಿಯುವ ನೀರೊಂದನ್ನೇ ರಫ್ತು ಮಾಡುತ್ತದೆ. ಕುಡಿಯುವ ನೀರಿನ ನಿರ್ವಹಣೆ ಮತ್ತು ವ್ಯವಸ್ಥೆಯಲ್ಲಿ ಇಂದು ಆ ದೇಶ ಜಗತ್ತಿಗೆ ಪಾಠ ಮಾಡುತ್ತದೆ. ಜಲ ತಂತ್ರಜ್ಞಾನದಲ್ಲಿ ಅಸಾಧಾರಣ ಪ್ರಗತಿ ಮತ್ತು ಸಂಶೋಧನೆ ಮಾಡಿರುವ ಸಿಂಗಾಪುರ, ಜಲ ವಾಣಿಜ್ಯ ದಲ್ಲಿ ಆರ್ಥಿಕ ಸದಾವಕಾಶಗಳನ್ನು ತೆರೆದ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಸಿಂಗಾಪುರಕ್ಕೆ Global Hydrohub ಅಂತಾನೂ ಕರೆಯುತ್ತಾರೆ. ತಮಾಷೆಯ ಸಂಗತಿ ಅಂದ್ರೆ ಸ್ವಚ್ಛತೆ, ಸೌಂದರ್ಯದ ಬಗ್ಗೆ ಸಿಂಗಾಪುರದ ಉದಾಹರಣೆ ಕೊಟ್ಟಾಗ ಆಕ್ಷೇಪಿಸುವವರು, ನೀರಿನ ವಿಷಯದಲ್ಲಿ ಅದು ಸಾಧಿಸಿದ ಪ್ರಗತಿಯನ್ನು ಪ್ರಸ್ತಾಪಿಸಿದರೆ, ಯಾರೂ ಆ ಹೋಲಿಕೆ ಸರಿ ಅಲ್ಲ ಎಂದು ಹೇಳುವುದಿಲ್ಲ.

ಇಷ್ಟಾಗಿಯೂ ಸಿಂಗಾಪುರ ನೀರಿನ ಬಳಕೆಯಲ್ಲಿ ಮತ್ತೊಂದು ಸಾಧನೆ ಮಾಡಿದೆ. ಹಾಗೆ ನೋಡಿದರೆ, ಸಿಂಗಾಪುರದಲ್ಲಿ ನೀರಿನ ಬಳಕೆ ಜಾಸ್ತಿಯಾಗಬೇಕಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಕಮ್ಮಿಯಾಗುತ್ತಿದೆ. ೨೦೦೦ ದಲ್ಲಿ ಒಬ್ಬ ವ್ಯಕ್ತಿ ಪ್ರತಿದಿನ ಸರಾಸರಿ ೧೬೫ ಲೀಟರ್ ನೀರನ್ನುಬಳಸುತ್ತಿದ್ದರೆ, ಈಗ ೧೩೫ ಲೀಟರ್ ಬಳಸುತ್ತಿದ್ದಾನೆ. ೨೦೩೦ ರಹೊತ್ತಿಗೆ ನೂರು ಲೀಟರ್‌ಗೆ ಇಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆಯಂತೆ. ಇದಕ್ಕೆ ನೀರಿನ ಬಳಕೆ ಬಗ್ಗೆ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನದ ಪರಿಣಾಮವೇ ಕಾರಣ. ನೀರಿನ ಬಳಕೆ ಬಗ್ಗೆ ಅಸಾಮಾನ್ಯ ಸಾಧನೆ ಮಾಡಿರುವ ಸಿಂಗಾಪುರದಿಂದ ಉಳಿದ ದೇಶಗಳು ನೀತಿಪಾಠ ಹೇಳಿಸಿಕೊಳ್ಳುವಂತಾಗಿದೆ. ಮೂವತ್ತು ವರ್ಷಗಳ ಹಿಂದೆ, ಆ ದೇಶದ ಪ್ರಧಾನಿಯಾಗಿದ್ದ ಲೀ ಕುಆನ್ ಯು, ‘ನಾವು ಬೇಕಾದಷ್ಟು ಕುಡಿಯುವ ನೀರನ್ನು ಉತ್ಪಾದಿಸುತ್ತೇವೆಂದು ಮನಸೋ ಇಚ್ಛೆ ಬಳಸಬಾರದು. ಬಳಸಿದ ನೀರನ್ನು ಮರುಬಳಕೆ (ರೀಸೈಕಲ್ ) ಮಾಡುವುದು ಹೇಗೆ ಎಂಬ ಬಗ್ಗೆ ಯೋಚಿಸ ಬೇಕು’ ಎಂದು ಹೇಳಿದ್ದರು. ಇಂದು ಜಗತ್ತಿನಲ್ಲಿ ನೀರಿನ ಮರುಬಳಕೆಯಲ್ಲೂ ಸಿಂಗಾಪುರ ವಿಶ್ವಕ್ಕೇ ಮಾದರಿಯಾಗಿದೆ. ನಾನು ಸಿಂಗಾಪುರದ ಒಂದು ಕಾಫಿ ಕೆಫೆಗೆ ಹೋದಾಗ, ಅಲ್ಲಿ ಒಂದು ಫಲಕ ನೇತು ಹಾಕಿದ್ದು ಕಂಡಿತು. ನಾನು ಹತ್ತಿರ ಹೋಗಿ ನೋಡಿದಾಗ ಅದರ ಮೇಲೆ ಬರೆದಿತ್ತು – ‘ಒಂದು ಕಪ್ ಕಾಫಿ ತಯಾರಿಸಲು ೧೩೦ ಲೀಟರ್ ನೀರು ಬೇಕು ಅಂದ್ರೆ ಆಶ್ಚರ್ಯವಾಗಬಹುದು. ೩೦೦ ಎಂಎಲ್ ಕಾಫಿ ತಯಾರಿಕೆಗೆ ೧೩೦ ಲೀಟರ್ ನೀರು ಬೇಕು ಅಂದ್ರೆ ನಂಬುವುದು ಹೇಗೆ ಎಂದು ಅನಿಸಬಹುದು. ಆದರೆ ಅದು ಸತ್ಯ. ಅಂದರೆ ಇದಕ್ಕೆ embedded wate ಎಂದು ಕರೆಯುತ್ತಾರೆ. ಅಂದರೆ ಕಾಫಿ ಪುಡಿ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳನ್ನು ತಯಾರಿಸಲು ಬೇಕಾಗುವ ನೀರಿನ ಪ್ರಮಾಣ ಎಂದರ್ಥ. ಕಾಫಿ ಗಿಡವನ್ನು ನೆಡಬೇಕು, ಅದು ಹೂ ಬಿಟ್ಟು, ಕಾಯಿ ಯಾಗಿ, ಹಣ್ಣಾಗಿ ಕೊಯ್ಯುವ ತನಕವೂ ನೀರು ಪೂರೈಸ ಬೇಕು. ಬೀಜಗಳನ್ನು ಪ್ರತ್ಯೇಕಿಸಲು ಸಹ ನೀರು ಬೇಕು.

ಇಷ್ಟೆಲ್ಲ ಆಗಿ, ಕಾಫಿಪುಡಿಯನ್ನು ಬಳಸುವ ಹೊತ್ತಿಗೆ ಬೇಕಾಗುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿದರೆ ಅದು ೧೩೦ ಲೀಟರ್ ಆಗಿರುತ್ತದೆ. ಅದೇ ರೀತಿ ೫೦೦ ಎಂಎಲ್ ಕೋಕ್ ತಯಾರಿಕೆಗೆ ೭ಲೀಟರ್, ಒಂದು ಬಾಳೇಹಣ್ಣಿಗೆ ೧೬೦ ಲೀಟರ್, ಒಂದು ಕಪ್ ಚಹಾಕ್ಕೆ ಇನ್ನೂರು ಲೀಟರ್ ನೀರು ಬೇಕು.’ ನೀರಿನ ಬಳಕೆ ಬಗ್ಗೆ ಜನರಿಗೆ ಸಿಂಗಾಪುರ ಹೇಳಿಕೊಡುವ ಪಾಠವಿದು. ಹನ್ನೆರಡು ವರ್ಷಗಳ ಹಿಂದೆ, ಈ ಫಲಕವನ್ನುಸಿಂಗಾಪುರದ ಎಲ್ಲ ಹೋಟೆಲ, ಕೆಫೆಗಳಲ್ಲಿ ನೇತು ಹಾಕಲಾಗಿತ್ತು. ಈಗಲೂ ಅಲ್ಲಲ್ಲಿ ಕಾಣುತ್ತದೆ. ‘ಒಂದು ದಿನ ನಾವು ಸೇವಿಸುವ ಪ್ರತಿ ವಸ್ತುವಿನ ತಯಾರಿಕೆಗೆ ಕನಿಷ್ಠ ಮೂರುಸಾವಿರ ಲೀಟರ್ ನೀರು ಬೇಕಾಗುತ್ತದೆ ಎಂಬುದು ಗೊತ್ತಿರಲಿ’ ಎಂದು ಆ ದೇಶದ ಪ್ರಧಾನಿಯೇ ಖುದ್ದಾಗಿ ಎಚ್ಚರಿಸಿದ್ದರು. ಕೋವಿಡ್‌ಗಿಂತ ಮುಂಚೆ ಸಿಂಗಾಪುರದ ಸಾರ್ವಜನಿಕ ಕುಡಿಯುವ ನೀರಿನ ಪಾಯಿಂಟ್ ಬಳಿ Our water is tested over 400,000 times to
make sure it’s safe to drink  ಎಂಬ ಫಲಕ ಕಾಣುತ್ತಿತ್ತು. ಈಗ ಆ ಫಲಕ ಕಾಣದಿದ್ದರೂ ನೀರಿನ ಪರೀಕ್ಷೆಯಲ್ಲಿ ರಾಜಿ ಇಲ್ಲ. ಮಳೆ ನೀರು, ಜಲಾಶಯದ ನೀರು, ಪೈಪಿನ ಮೂಲಕ ಬರುವ ನೀರು ಹಾಗೂ ನಲ್ಲಿ ನೀರಿನ ನಾಲ್ಕು ಲಕ್ಷಕ್ಕೂ ಅಧಿಕ ಸ್ಯಾಂಪಲ್‌ಗಳನ್ನು ನಿರಂತರವಾಗಿ ಶೇಖರಿಸಿ ಪರೀಕ್ಷೆಗೆ ಗುರಿಪಡಿಸಲಾಗುತ್ತದೆ. ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆ ಇಲ್ಲವೇ ಇಲ್ಲ. ಸಿಂಗಾಪುರದ ಪ್ರಧಾನಿಯಾದ ಆರಂಭದಲ್ಲಿ ಲೀ ಕುಆನ್ ಯು ಕಾರ್ಯಕ್ರಮವೊಂದರಲ್ಲಿ ನೀರಿನ ಬಳಕೆ ಕುರಿತು ಮಾತಾಡುತ್ತ, ‘ನೀರನ್ನು ಎಚ್ಚರಿಕೆಯಿಂದ ಬಳಸ ಬೇಕು. ಬಟ್ಟೆಗಳಿಂದ ವಾಷಿಂಗ್ ಮಷೀನ್ ಪೂರ್ತಿ ಭರ್ತಿ ಮಾಡಿಯೇ ಬಳಸಿ, ಅರ್ಧ ಬಟ್ಟೆ ಹಾಕಿ ಬಳಸಬೇಡಿ, ಆಗ ನೀರು ಹೆಚ್ಚು ಬೇಕಾಗುತ್ತದೆ. ಮೈಗೆ ಸೋಪ್ ಹಚ್ಚಿಕೊಳ್ಳುವಾಗ ಶಾವರ್ ಬಳಸಬೇಡಿ, ಹಲ್ಲುಜ್ಜುವಾಗ ನಲ್ಲಿಯನ್ನು ಬಂದ್ ಮಾಡಿ, ಯಾವತ್ತೂ ಫ್ಲಶ್ ಮಾಡುವಾಗ ಅರ್ಧ ಅಮುಕಿ, ತರಕಾರಿಯನ್ನುಕಂಟೇನರ್ ಬಳಸಿ ತೊಳೆಯಿರಿ’ ಎಂದು ಕಿವಿಮಾತು ಹೇಳಿದ್ದರು.

ಯಾವ ದೇಶದ ಪ್ರಧಾನಿ ತನ್ನ ದೇಶವಾಸಿಗಳಿಗೆ ಈ ಮಾತನ್ನು ಹೇಳಿದ್ದಾನೆ? ಆದರೆ ಜನ ಏನು ಬೇಕಾದರೂ ತಿಳಿದುಕೊಳ್ಳಲಿ, ಸಿಂಗಾಪುರದ ಪ್ರಧಾನಿ ಮಾತ್ರ ಗಟ್ಟಿಯಾಗಿ ಈ ಮಾತುಗಳನ್ನು ಹೇಳಿದ್ದರು. ನಮ್ಮೂರು ಸಿಂಗಾಪುರ ಆಗಲಿಕ್ಕಿಲ್ಲ ಎಂದು ನಿರ್ಧಾರ ಮಾಡುವುದು ಬೇಡ. ಮನಸ್ಸು ಮಾಡಿದರೆ ನಾವು ಹಾಗೆ ಆಗಬಹುದು. ಆದರೆ ಆ ದೇಶ ಸುಮ್ಮನೆ ನಿರ್ಮಾಣವಾಗಿಲ್ಲ. ಅದರ ಹಿಂದೆ ಬಹುದೊಡ್ಡ ಮನುಷ್ಯ ಪ್ರೀತಿ, ಪ್ರಯತ್ನಗಳಿವೆ ಎಂಬ ಅರಿವು ನಮಗಿದ್ದರೆ ಸಾಕು.

Leave a Reply

Your email address will not be published. Required fields are marked *

error: Content is protected !!