Monday, 20th May 2024

ಪ್ರಜಾಪ್ರಭುತ್ವದ ಏಳು ಪರಮ ಪಾತಕಗಳು

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್‌

ಒಂದು ಯೋಚನೆ: ಆಕಾಶದಲ್ಲಿರುವ ನೈತಿಕತೆಯ ದೇವತೆಗಳು ಮನುಷ್ಯನ ಜೀವಿತದ ಪರಮ ಪಾತಕಗಳನ್ನು ಏಕೆ ಏಳಕ್ಕೇ ಸೀಮಿತಗೊಳಿಸಿದರು? ಏಕೆ ಅದು ೮ ಅಥವಾ ೧೨ ಅಲ್ಲ? ಕ್ರಿಶ್ಚಿಯಾನಿಟಿಯಲ್ಲಿ ‘ಸೆವೆನ್ ಡೆಡ್ಲಿ ಸಿನ್ಸ್’ ಎಂಬುದು ತುಂಬಾ ಪ್ರಸಿದ್ಧ ಕಲ್ಪನೆ. ಜ್ಞಾನವೃಕ್ಷದ ಬಗ್ಗೆ ಆಡಂ ಮತ್ತು ಈವ್ ಜೋಡಿಯು ಸೈತಾನನ ಜತೆ ಸಂಭಾಷಣೆ ನಡೆಸಿದ ಬಳಿಕ ಅವರು ಮನುಷ್ಯನ ಪಾಪದ ಪ್ರವೃತ್ತಿಯನ್ನೇ ಕೀಳಂದಾಜು ಮಾಡಿದರೇ? ಆಡಂ ಮತ್ತು ಈವ್ ತಿಳಿದುಕೊಳ್ಳಲು ಬಯಸಿದ್ದ ಜ್ಞಾನವು ಆಸೆಯ ಕುರಿತಾಗಿತ್ತೇ? ಅದರಲ್ಲೂ ಅದು ಮನುಷ್ಯನ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಆಸೆಯ ಕುರಿತಾಗಿತ್ತೇ?
ದೇಶದಲ್ಲಿ ನಡೆಯುವ ಪ್ರತಿಯೊಂದು ಚುನಾವಣೆಯಲ್ಲೂ ಹಿಂದೆ ನಡೆದಿದ್ದು ನಿಕಷಕ್ಕೆ ಒಳಪಡುತ್ತದೆ ಹಾಗೂ ಮುಂದೆ ನಡೆಯುವುದು ಪಣಕ್ಕಿಡಲ್ಪಟ್ಟಿ ರುತ್ತದೆ.

ಹೀಗಾಗಿ ಭವಿಷ್ಯದ ಕುರಿತಾದ ಭಯ ಹಾಗೂ ಅಧಿಕಾರದ ಆಸೆ ಇವೆರಡರ ಅದ್ಭುತ ಹೊಂದಾಣಿಕೆಯು ನೀತಿ ನಿಯಮಗಳನ್ನು ದುರ್ಬಲಗೊಳಿಸಿ, ಆಸೆ
ಆಕಾಂಕ್ಷೆಗಳನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಬಹುಶಃ ನಿಮಗೆ ಆಶ್ಚರ್ಯವಾಗಬಹುದು. ಏಳು ಪರಮ ಪಾತಕಗಳ ಪಟ್ಟಿಯಲ್ಲಿ ಕೊಲೆ ಸೇರಿಲ್ಲ. ಅವು ಪರಮ ಪಾತಕಗಳು ಏಕೆಂದರೆ ಅವು ಬೇರೆಯವರನ್ನು ಗುರಿಯಾಗಿಸಿ ಮಾಡುವ ಪಾಪಕ್ಕಿಂತ ಹೆಚ್ಚಾಗಿ ನಮಗೆ ನಾವೇ ಮಾಡಿಕೊಳ್ಳುವ ಪಾಪಗಳು ಎಂಬ ಕಾರಣಕ್ಕಾಗಿ.

ಆ ಪರಮ ಪಾತಕಗಳು ಯಾವುವು? ಅಹಂಕಾರ, ದುರಾಸೆ, ಸಿಟ್ಟು, ಅಸೂಯೆ, ಮೋಹ, ಹೊಟ್ಟೆಬಾಕತನ ಮತ್ತು ಆಲಸ್ಯ. ಪ್ರಜಾಪ್ರಭುತ್ವ  ನಾಶವಾಗು ವುದು ತಾನೇ ಮಾಡಿಕೊಂಡ ಗಾಯಗಳಿಂದ. ನಾವಣೆಯಲ್ಲಿನ ಸೋಲಿಗೆ ಯಾರನ್ನಾದರೂ ದೂಷಿಸಬೇಕು ಎಂದು ನಿಮಗನ್ನಿಸಿದರೆ ಕನ್ನಡಿ
ನೋಡಿಕೊಳ್ಳುವುದು ಒಳ್ಳೆಯದು.

ಪ್ರಜಾಪ್ರಭುತ್ವದಲ್ಲಿ ಅತಿದೊಡ್ಡ ಅಪಾಯವಿರುವುದು ಸೋಮಾರಿತನದಿಂದ ಅಥವಾ ಎಲ್ಲದಕ್ಕೂ ಅಡ್ಜೆಸ್ಟ್ ಮಾಡಿಕೊಳ್ಳುವ ಮನೋಭಾವದಿಂದ. ತನ್ನನ್ನು ಬೇಕಾ ಬಿಟ್ಟಿಯಾಗಿ ನಡೆಸಿಕೊಳ್ಳುವವರನ್ನು ಪ್ರಜಾಪ್ರಭುತ್ವ ಖಂಡಿತ ಶಿಕ್ಷಿಸುತ್ತದೆ. ಹಾಗೆಯೇ ಅದು ದುರಹಂಕಾರಿಗಳನ್ನು ಕೂಡ ಹೊಸಕಿ ಹಾಕುತ್ತದೆ. ನಾನೇ ದೊಡ್ಡವನು, ನನಗೆ ಸೋಲಿಲ್ಲ ಎಂದು ಮೆರೆಯುವವರನ್ನು ತುಂಬಾ ಅದ್ಭುತವಾಗಿ ಅದು ನೆಲಕ್ಕುರುಳಿಸುತ್ತದೆ. ತಮ್ಮಲ್ಲಿರುವ
ಯಾವುದೋ ಪರಮಾದ್ಭುತ ಗುಣ ಅಥವಾ ಬುದ್ಧಿವಂತಿಕೆಗೆ ಮನಸೋತು ಜನರು ತಮ್ಮನ್ನು ಗೆಲ್ಲಿಸುತ್ತಿದ್ದಾರೆ ಎಂದು ನಂಬಿರುವ ಹವ್ಯಾಸಿ ಸಂಸದರು ದಯನೀಯವಾಗಿ ಸೋತು ಮಕಾಡೆ ಮಲಗುವುದನ್ನು ನಾವು ಪ್ರತಿ ಚುನಾವಣೆಯಲ್ಲೂ ನೋಡುತ್ತೇವೆ.

ಪ್ರವಾಹ ಬಂದಾಗ ಸರಿಯಾದ ಅಲೆಯನ್ನು ಗುರುತಿಸಿ ಅದರ ಜತೆಗೆ ತೇಲಿಕೊಂಡು ಹೋದರೆ ಸುಲಭವಾಗಿ ಗುರಿ ತಲುಪಿ ಅದೃಷ್ಟದ ಮನೆಯನ್ನು ಸೇರಬಹುದು ಎಂಬುದು ಬುದ್ಧಿವಂತರಿಗೆ ಮಾತ್ರ ಅರ್ಥವಾಗುತ್ತದೆ. ಭಾರತದ ಚುನಾವಣೆಯ ಬಗ್ಗೆ ವರದಿ ಮಾಡಲು ಯಾವುದಾದರೂ ಪತ್ರಿಕೆಯ ಸಂಪಾದಕರು ಶೇಕ್ ಪಿಯರ್‌ನನ್ನು ಕಳುಹಿಸಿದ್ದರೆ ಬಹುಶಃ ಅವನು ಹೀಗೇ ಹೇಳುತ್ತಿದ್ದ!

ಯಾವಾಗ ಈ ಅಲೆಯು ನಿರ್ದಿಷ್ಟ ರಾಜಕೀಯ ಪಕ್ಷದ ಜತೆಗೆ ಹರಿಯುತ್ತದೆಯೋ ಆಗ ಬೆಟ್ ಕಟ್ಟುವ ಪಂಟರ್‌ಗಳು ಕೂಡ ಸುಲಭವಾಗಿ ಈಜಿ ಮನೆ ಸೇರಿಕೊಳ್ಳುತ್ತಾರೆ. ತಾವೇ ಕಷ್ಟಪಟ್ಟು ಈಜಿ ವಿಜಯಪತಾಕೆ ಯನ್ನು ಹಾರಿಸಿದ್ದೇವೆ ಎಂಬ ಭ್ರಮೆಯಲ್ಲಿರುವವರು ಬಹಳ ಬೇಗ ಪತನಗೊಳ್ಳುತ್ತಾರೆ.
ಹಾಗೆ ತೇಲಿಕೊಂಡು ಹೋಗುವ ದಿಕ್ಕು ನಿರ್ಧರಿಸುವವರು ಪ್ರಜೆಗಳು. ಪ್ರಜಾಪ್ರಭುತ್ವದಲ್ಲಿ ಮತದಾರರು ಮೂರ್ಖರೂ ಅಲ್ಲ, ಅವಾಸ್ತವಿಕರೂ ಅಲ್ಲ. ಅವರಿಗೆ ರಾಜಕಾರಣಿಗಳ ಅಹಂಕಾರ ಅರ್ಥವಾಗುತ್ತದೆ. ಇಷ್ಟಕ್ಕೂ ತಮ್ಮ ನರನಾಡಿಗಳಲ್ಲಿ ತಕ್ಕಮಟ್ಟಿಗಿನ ಅಹಂಕಾರವಿಲ್ಲದೆ ಯಾವ ರಾಜಕಾರಣಿ ತಾನೇ ಚುನಾವಣೆಗೆ ಸ್ಪರ್ಧಿಸುತ್ತಾನೆ? ಯಾವುದೇ ಪಕ್ಷದ ಅಭ್ಯರ್ಥಿಯಿರಲಿ, ಆತ ತನ್ನ ಮೆರೆದಾಟವೇ ಮತದಾರರ ಅಗತ್ಯಕ್ಕಿಂತ ದೊಡ್ಡದು ಎಂದು ಪರಿಗಣಿಸಲು ಆರಂಭಿಸಿದಾಗ ಏನು ಮಾಡಬೇಕೆಂಬುದು ಮತದಾರರಿಗೆ ಗೊತ್ತಿರುತ್ತದೆ.

ಏಳು ಹಂತಗಳ ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಈಗ ಮೂರು ಹಂತಗಳಷ್ಟೇ ಮುಗಿದಿವೆ. ಇನ್ನೂ ನಾಲ್ಕು ಬಾಕಿಯಿವೆ. ಆದರೆ ಉದಾಹರಣೆಗಳು ಈಗಲೇ ಸಿಗುತ್ತವೆ. ಒಬ್ಬ ಅಭ್ಯರ್ಥಿ (ಅವನು ಅನಾಮಧೇಯವಾಗಿಯೇ ಇರಲಿ, ಏಕೆಂದರೆ ಇದು ಒಂದು ವ್ಯಾಧಿಯ ಕುರಿತ ಲೇಖನ) ಮತದಾನದ ದಿನ ತುಂಬಾ ಕೆಟ್ಟ ಸಂದೇಶವೊಂದನ್ನು ಸಾರಿದ್ದ. ‘ನನಗೆ ಶೇ.೮೦ರಷ್ಟು ಮತದಾರರ ಬೆಂಬಲವಿದೆ, ಅವರೆಲ್ಲ ಮನೆಯಲ್ಲಿ ಕುಳಿತಿದ್ದಾರೆ. ನನ್ನ ವಿರುದ್ಧ ಮತ ಹಾಕುವ ಶೇ.೨೦ರಷ್ಟು ಮತದಾರರು ಮಾತ್ರ ಬೂತ್‌ಗಳಿಗೆ ಬರುತ್ತಿದ್ದಾರೆ’ ಎಂದು ಆತ ಹೇಳಿದ್ದ. ಈ ದುರಹಂಕಾರದ ವರ್ತನೆಯೇ ಮತದಾರರನ್ನು ತನ್ನಿಂದ ದೂರ ಸರಿಸಬಹುದು ಎಂಬ ಕಲ್ಪನೆಯೂ ಬಹುಶಃ ಅವನಿಗೆ ಇರಲಿಕ್ಕಿಲ್ಲ.

ಅವನ ಅಕ್ಕಪಕ್ಕದ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಈ ಸಮಸ್ಯೆ ಇಲ್ಲ. ಜಯದ ದವಡೆಯಿಂದಲೂ ಸೋಲನ್ನು ಕಿತ್ತು ಮೈಮೇಲೆ ಹಾಕಿಕೊಳ್ಳುವ ಅಭ್ಯರ್ಥಿಗಳು ಯಾವಾಗಲೂ ಇರುತ್ತಾರೆ ಬಿಡಿ. ಅಂಥವರು ಒಂದು ಸಂಗತಿ ಯನ್ನು ನೆನಪಿಡಬೇಕು. ಭಾರತದ ಮತದಾರರು ಜಗತ್ತಿನ ಪ್ರಜಾಪ್ರಭುತ್ವದ ನಾಟಕೀಯ ಇತಿಹಾಸದಲ್ಲೇ ಅತ್ಯಂತ ಬುದ್ಧಿವಂತ, ಎಚ್ಚರಿಕೆಯ ಹಾಗೂ ಮೌನವಾಗಿರುವ ಮತದಾರರು. ಇಲ್ಲಿನ ಮತದಾರರು ಉಂಟುಮಾಡಿರುವಂಥ ಬದಲಾವಣೆಯನ್ನು ಅಥವಾ ಇವರಂತೆ ಪರಿಣಾಮಕಾರಿಯಾಗಿ ಅಽಕಾರ ಚಲಾಯಿಸುವ ಮತದಾರರನ್ನು ನೀವು ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ.

ಹೋರಾಟಗಾರರಿಗೆ ಶಕ್ತಿ ಬೇಕಾಗುತ್ತದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಿರುವ ಎಲ್ಲಾ ದೇಶಗಳಲ್ಲೂ ಇಂದು ಚುನಾವಣೆಗಳು ತುಂಬಾ ದೀರ್ಘವಾಗಿವೆ. ಅಮೆರಿಕದ ಸುದೀರ್ಘ ಚುನಾವಣೆಯು ಒಂದು ನಿರ್ದಿಷ್ಟ ವ್ಯವಸ್ಥೆಗೆ ಅನುಗುಣವಾಗಿ ನಡೆದುಕೊಂಡು ಹೋಗುತ್ತದೆ. ಬ್ರಿಟಿಷರು ಇತ್ತೀಚೆಗೆ ತಮ್ಮ ನೋವನ್ನು ಇನ್ನಷ್ಟು ಎಳೆದು ದೀರ್ಘಗೊಳಿಸಿಕೊಳ್ಳುವುದರಲ್ಲೇ ಸುಖ ಕಾಣುತ್ತಿದ್ದಾರೆ. ಫ್ರಾನ್ಸ್ ಯಾವಾಗಲೂ ಚುನಾವಣೆಯ ಮೋಡ್‌ನಲ್ಲೇ
ಇರುತ್ತದೆ. ಯುರೋಪ್‌ನ ಬಹುತೇಕ ಸಣ್ಣಪುಟ್ಟ ದೇಶಗಳು ಸದಾಕಾಲ ಅನಿಶ್ಚಯತೆಯ ರುತ್ತವೆ. ಹಾಗೆ ನೋಡಿದರೆ ಅನಿಶ್ಚಯತೆಯೇ ಪ್ರಜಾಪ್ರಭುತ್ವದ
ಜೀವಾಳ.

ಚುನಾವಣಾ ಸಮೀಕ್ಷೆಗಳು ಯಾಕೆ ಕುತೂಹಲ ಕಾರಿಯಾಗಿ ಇರುತ್ತವೆ ಅಂದರೆ, ಅವು ಪ್ರತಿ ಬಾರಿ ನಡೆದಾಗಲೂ ಮತದಾರರ ಮೂಡ್ ಬದಲಾಗು ತ್ತಿರುವುದನ್ನು ನಮಗೆ ತೋರಿಸುತ್ತವೆ. ಚುನಾವಣೆಯ ಪ್ರಕ್ರಿಯೆಯಲ್ಲಿ ಸೂರ್ಯ ಉದಯಿಸಿದಾಗಲೇ ಮಂಜು ಸರಿಯುತ್ತದೆ ಎಂಬುದು ಭಾರತದ
ಪ್ರತಿಯೊಬ್ಬ ಅಭ್ಯರ್ಥಿಗೂ ಗೊತ್ತಿದೆ. ನಮ್ಮ ದೇಶದ ಚುನಾವಣೆಯ ಅತ್ಯಂತ ಅದ್ಭುತ ಅಂಶವೆಂದರೆ ಇಲ್ಲಿನ ಮತದಾರರ ಮೌನ. ಅವರನ್ನು
ರಾಜಕಾರಣಿಗಳು ಅಥವಾ ಪತ್ರಕರ್ತರು ಮಾತನಾಡಿಸಿದರೆ ಸಾಮಾನ್ಯವಾಗಿ ಸಿಗುವ ಉತ್ತರವೆಂದರೆ ಮುಗುಳ್ನಗೆ. ಕಳೆದ ಅರ್ಧ ಶತಮಾನದಲ್ಲಿ ಈ ಅದ್ಭುತವಾದ ಮೌನವೇ ಅನೇಕ ಚುನಾವಣೆಗಳ ಫಲಿತಾಂಶವನ್ನು ಬುಡಮೇಲು ಮಾಡಿದೆ.

ಅತ್ಯಾಶ್ಚರ್ಯಕರ ರೀತಿಯಲ್ಲಿ ವಿರೋಧ ಪಕ್ಷಗಳನ್ನು ವಿಜಯದ ದಡಕ್ಕೆ ಸೇರಿಸಿದ ೧೯೬೭ರ ಚುನಾವಣೆ, ಇಂದಿರಾ ಗಾಂಧಿಗೆ ಪರಮಾದ್ಭುತ ವಿಜಯ ತಂದುಕೊಟ್ಟ ೧೯೭೧ರ ಚುನಾವಣೆ, ೧೯೭೭ರಲ್ಲಿ ಅವರ ಪವಾಡಸದೃಶ ಸೋಲು ಅಥವಾ ೧೯೮೦ರಲ್ಲಿ ಅವರು ಮತ್ತೆ ಮೈಕೊಡವಿಕೊಂಡು ಅಧಿಕಾರಕ್ಕೆ ಬಂದ ರೀತಿಯನ್ನು ನಾವೊಮ್ಮೆ ಮೆಲುಕು ಹಾಕಬೇಕು. ಭಾರತದ ಮತದಾರರು ಈ ಮೌನವನ್ನು ಖುಷಿಯಾಗಿ ಅನುಭವಿಸುತ್ತಾರೆ. ಇದು ಅವರ ಖಾಸಗಿ
ಸುಖ. ಇದನ್ನವರು ಜೋಪಾನವಾಗಿ ರಕ್ಷಿಸಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಉಂಟಾಗುವ ಅನಿಶ್ಚಯತೆ ಯನ್ನು ಮಾಧ್ಯಮಗಳು ವರದಿ ಮಾಡುತ್ತವೆ. ಆದರೆ ಅಲ್ಲೂ ಇವತ್ತಿನ ಊಹೆಗಳು ನಾಳೆಯ ನಗುವಿಗೆ ಸರಕಾಗುತ್ತವೆ. ಈ ಸಲದ ಮೊದಲ ಹಂತದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಯಿತು. ಏಕೆ ಹಾಗಾಯಿತು ಎಂದು ಸಾಕಷ್ಟು ಚರ್ಚೆ ನಡೆಯಿತು.

ಸರಕಾರದ ಕುರಿತಾದ ಬೇಸರ ಇದಕ್ಕೆ ಕಾರಣವೇ? ರಿಯಾಲಿಟಿ ಚೆಕ್‌ಗಳು ನಡೆದವು. ಆದರೆ ಯಾರಿಗೂ ಯಾರ ಮತಗಳು ಕಾಣೆಯಾಗಿವೆ ಎಂಬುದು
ತಿಳಿಯಲಿಲ್ಲ. ವಯನಾಡನ್ನೇ ತೆಗೆದುಕೊಳ್ಳಿ. ದಕ್ಷಿಣ ಭಾರತದಲ್ಲೇ ಇದು ಅತ್ಯಂತ ಹೈಪ್ರೊಫೈಲ್ ಕ್ಷೇತ್ರ. ೨೦೧೯ರಲ್ಲಿ ರಾಹುಲ್ ಗಾಂಧಿ ಅಮೇಠಿಯನ್ನು ತೊರೆದು ಇಲ್ಲಿ ಆಶ್ರಯ ಪಡೆದುಕೊಂಡಾಗ ಇದು ಕೇರಳದ ಮುಸ್ಲಿಂ ಲೀಗ್‌ನ ಪ್ರಾಬಲ್ಯವಿರುವ ಕ್ಷೇತ್ರವಾಗಿತ್ತು.

ರಾಹುಲ್ ಗಾಂಧಿ ಸ್ಪರ್ಧಿಸಿದ್ದಾರೆಂದು ಮತದಾರರಲ್ಲಿ ತುಂಬಾ ಕುತೂಹಲ ಹಾಗೂ ಉತ್ಸಾಹವಿತ್ತು. ಹೀಗಾಗಿ ಶೇ.೮೦.೩೩ರಷ್ಟು ಮತದಾನವಾಯಿತು. ರಾಹುಲ್ ಗಾಂಧಿ ನಾಲ್ಕು ಲಕ್ಷ ಮತಗಳಿಂದ ಗೆದ್ದರು. ಈ ಬಾರಿ ಇಲ್ಲಿ ಮತದಾನದ ಪ್ರಮಾಣ ಶೇ.೭೩.೪೮ಕ್ಕೆ ಕುಸಿದಿದೆ. ಅಂದರೆ ಶೇ.೭ರಷ್ಟು ಕಡಿಮೆ ಯಾಗಿದೆ. ರ‍್ಯಾಲಿಗಳಲ್ಲಿ ಮುಸ್ಲಿಂ ಲೀಗ್‌ನ ಧ್ವಜಗಳು ಕಾಣಿಸದಂತೆ ನೋಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ತಂತ್ರಗಾರಿಕೆಯನ್ನು ಬದಲಾವಣೆ ಮಾಡಿಕೊಂಡಿದ್ದರ ಫಲವೇ ಇದು? ೨೦೧೯ರಲ್ಲಿ ಕಮ್ಯುನಿಸ್ಟರಿಗೆ ರಾಹುಲ್ ಗಾಂಧಿ ಬಗ್ಗೆ ಕನಿಕರವಿತ್ತು. ಹೀಗಾಗಿ ವಯನಾಡಿನಲ್ಲಿ ಅವರ ಅಭ್ಯರ್ಥಿ ನಾಮ್-ಕೆ-ವಾಸ್ತೆ ಸ್ಪರ್ಧೆ ಮಾಡಿದ್ದ.

ಈ ಬಾರಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಆನಿ ರಾಜಾ. ಅವರು ಸಿಪಿಐ ನಾಯಕ ಡಿ.ರಾಜಾ ಅವರ ಪತ್ನಿ. ಅಂದರೆ ಈ ಬಾರಿ ಎಡಪಕ್ಷಗಳ ಮತಗಳು ದೊಡ್ಡ
ಸಂಖ್ಯೆಯಲ್ಲಿ ಚಲಾವಣೆಯಾಗಿರುತ್ತವೆ. ಹಾಗಿದ್ದರೆ ಯಾರ ಮತಗಳು ಕಡಿಮೆ ಚಲಾವಣೆಯಾಗಿವೆ? ಜೂನ್ ೪ರಂದು ತಿಳಿಯುತ್ತದೆ. ಇದು ವಯನಾಡಿನ
ಚಿತ್ರಣವನ್ನು ಬದಲಾವಣೆ ಮಾಡಿದ ಸಂಗತಿಯಾಗಿ ದ್ದರೆ, ದೇಶದ ಮೂಲೆಮೂಲೆಯಲ್ಲಿರುವ ಇನ್ನೂ ಸಾಕಷ್ಟು ಕ್ಷೇತ್ರಗಳಲ್ಲೂ ಇದೇ ಸಂಗತಿ ಪ್ರಭಾವ
ಬೀರಿರಬೇಕು. ರಾಜಕಾರಣಿಗಳೇ ಹೇಳಿರುವುದರಿಂದ ನಮಗೆ ಕೆಲವು ವಿಷಯಗಳು ಗೊತ್ತಿವೆ. ಕೇರಳದಲ್ಲಿ ಎಡಪಕ್ಷಗಳ ಎಲ್ ಡಿಎಫ್ ಮೈತ್ರಿಕೂಟವು ಕಾಂಗ್ರೆಸ್‌ನಿಂದ ಸೀಟುಗಳನ್ನು ಮರಳಿ ಪಡೆಯಲು ಸಾಕಷ್ಟು ಕೆಲಸ ಮಾಡುತ್ತಿದೆ.

ಹೀಗಾಗಿ ಎಡಪಕ್ಷಗಳ ಮತ ಏರಿಕೆಯಾಗುವ ಸುಳಿವು ಈಗಾಗಲೇ ಕಾಣಿಸುತ್ತಿದೆ. ಕಾಂಗ್ರೆಸ್ ನಾಯಕರು ಇದರಿಂದ ಎಷ್ಟು ಹೆದರಿದ್ದಾರೆ ಅಂದರೆ, ಮಾರ್ಕ್ಸಿಸ್ಟ್‌ಗಳು ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಂದು ಅವರು ಆರೋಪಿಸುತ್ತಿದ್ದಾರೆ. ಎಡಪಕ್ಷಗಳ ಸಿದ್ಧಾಂತದ ಪುಸ್ತಕದ ಪ್ರಕಾರ ಇದು ಅಪರಾಧ. ಆದರೆ ವ್ಯಾವಹಾರಿಕವಾಗಿ ನೋಡಿದರೆ ಇದರಲ್ಲೊಂದು ತರ್ಕವಿದೆ. ಮಾರ್ಕ್ಸಿಸ್ಟ್‌ಗಳು ಈಗಾಗಲೇ ಬಂಗಾಳದಲ್ಲಿ ನಾಮಾವಶೇಷವಾಗಿದ್ದಾರೆ. ಈ ಚುನಾವಣೆಯಲ್ಲೂ ಅವರು ತಲೆಯೆತ್ತುವುದು ಕಷ್ಟ. ಹೀಗಾಗಿ ಉಳಿದಿರುವ ಒಂದೇ ಒಂದು ರಾಜ್ಯವಾದ ಕೇರಳವನ್ನು ಅವರು ಅಷ್ಟು ಸುಲಭಕ್ಕೆ ಬಿಟ್ಟುಕೊಡುವುದಿಲ್ಲ.

ಚುನಾವಣೆಯ ಬಗ್ಗೆ ಕುತೂಹಲವಿರುವವರಿಗೆ ನನ್ನ ಸಲಹೆಯೇನೆಂದರೆ, ಮತದಾನದ ಬೂತ್‌ಗಳ ಹೊರಗೆ ಪುರುಷ ಹಾಗೂ ಮಹಿಳಾ ಮತದಾರರ ಸಾಲು ಎಷ್ಟು ಉದ್ದವಿದೆ ಎಂಬುದರ ಫೋಟೋ ತೆಗೆಯಿರಿ. ಎರಡೂ ಸಾಲುಗಳು ಹೆಚ್ಚುಕಮ್ಮಿ ಸಮವಾಗಿದ್ದರೆ ಪ್ರಧಾನಿ ನರೇಂದ್ರ ಮೋದಿಗೆ ಲಾಭ. ಏಕೆಂದರೆ ಅವರಿಗೆ ಮಹಿಳೆಯರ ಬೆಂಬಲ ಹೆಚ್ಚಿದೆ. ಈ ತರ್ಕವನ್ನೇ ಇನ್ನಷ್ಟು ವಿಸ್ತರಿಸಿದರೆ, ಚುನಾವಣೆಯ ಚಿತ್ರಣವೇ ದೊರೆತುಬಿಡುತ್ತದೆ. ಮಹಿಳೆಯರ ಮತದಾನ ಎಲ್ಲೆಲ್ಲಿ ಹೆಚ್ಚಾಗಿದೆಯೋ ಅಲ್ಲಿ ಬಿಜೆಪಿಗೆ ಲಾಭ. ಮೋದಿ ಬಗ್ಗೆ ಮಹಿಳೆಯರಿಗೆ ಗೌರವವಿರುವುದಕ್ಕೆ ಕಾರಣ ಕೂಡ ಬಲವಾಗಿಯೇ ಇದೆ.

ಅವರ ಅಡುಗೆ ಮನೆಯಲ್ಲಿ ಇಂದು ಆಹಾರಕ್ಕೆ ಕೊರತೆಯಿಲ್ಲ. ಅವರಿಗಿಂದು ಸ್ವಂತ ಮನೆ ಸಿಗುತ್ತಿದೆ. ಕುಟುಂಬಕ್ಕೆ ಸೋವಿ ದರದಲ್ಲಿ ಔಷಧಿ ಸಿಗುತ್ತಿದೆ.
ಬಡತನ ಕಡಿಮೆಯಾಗುತ್ತಿದೆ. ಹೀಗಾಗಿ ೨೦೨೪ರ ಚುನಾವಣೆಯಲ್ಲಿ ಮಹಿಳೆಯರೇ ನಿರ್ಣಾಯಕ ವರ್ಗ. ಆಂಧ್ರಪ್ರದೇಶದಲ್ಲಿ ಮತ್ತೆ ಎದ್ದು ನಿಲ್ಲುತ್ತಿರುವ
ಯುದ್ಧಕುದುರೆ ಎನ್.ಚಂದ್ರಬಾಬು ನಾಯ್ಡು ಅವರಿಗೆ ಇದು ಗೊತ್ತಿದೆ. ನಾಲ್ಕು ದಶಕಗಳ ಹಿಂದೆ ಅವರ ಮಾವ ಎನ್.ಟಿ.ರಾಮರಾವ್ ಕೂಡ
ಮಹಿಳೆಯರೇ ಆಂಧ್ರಪ್ರದೇಶದ ಚುನಾವಣೆಯ ಫಲಿತಾಂಶವನ್ನು ಬದಲಿಸುವ ಶಕ್ತಿಯುಳ್ಳ ಮತದಾರರು ಎಂಬುದನ್ನು ಮನಗಂಡಿದ್ದರು. ಆಂಧ್ರದಲ್ಲಿ
ಲೋಕಸಭೆಯ ಜತೆಗೇ ವಿಧಾನಸಭೆಗೂ ಚುನಾವಣೆ ನಡೆಯುತ್ತಿದೆ.

ಉಚಿತಗಳ ಭರಾಟೆ ಎಲ್ಲೆಡೆ ನಡೆಯುತ್ತಿರುವಂತೆ ಚಂದ್ರಬಾಬು ನಾಯ್ಡು ಕೂಡ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ವರ್ಷಕ್ಕೆ ಮೂರು ಉಚಿತ ಗ್ಯಾಸ್ ಸಿಲಿಂಡರ್, ಶಾಲೆಗೆ ಹೋಗುವ ಪ್ರತಿ ಮಗುವಿಗೂ ವರ್ಷಕ್ಕೆ ೨೦,೦೦೦ ರು. ಸ್ಕಾಲರ್‌ಶಿಪ್, ಪ್ರತಿ ರೈತನಿಗೂ ೨೦,೦೦೦ ರು. ಸಬ್ಸಿಡಿಗಳನ್ನು ಘೋಷಿಸಿದ್ದಾರೆ. ಇದು ವಿರೋಧಿಗಳಲ್ಲಿ ಉಂಟುಮಾಡಿರುವ ತಲ್ಲಣವನ್ನು ನಾವು ಮೇಲ್ನೋಟಕ್ಕೇ ಗುರುತಿಸಬಹುದು. ಅವರ ಕಡುವೈರಿ ವೈ.ಎಸ್. ಜಗನ್ಮೋಹನ ರೆಡ್ಡಿ ಈ ಭರವಸೆಗಳೆಲ್ಲ ಭ್ರಮೆಯೆಂದು ಜರೆದಿದ್ದಾರೆ. ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತದೆ ಎಂದೂ ಕೇಳಿದ್ದಾರೆ. ಉತ್ತರ ಸುಲಭವಾಗಿದೆ.

ಜಗನ್‌ಗೆ ಅವರ ಯೋಜನೆಗಳನ್ನು ಜಾರಿಗೊಳಿಸಲು ಎಲ್ಲಿಂದ ಹಣ ಬರುತ್ತದೆಯೋ ನಾಯ್ಡು ಅವರಿಗೂ ಅಲ್ಲಿಂದಲೇ ಹಣ ಬರುತ್ತದೆ. ಅದು ರಾಜ್ಯ ಸರಕಾರದ ಬೊಕ್ಕಸ. ಆರ್ಥಿಕ ಸಬಲೀಕರಣದ ವಿಷಯದಲ್ಲಿ ಭಾರತವಿಂದು ಇರಿಸುತ್ತಿರುವ ಹೆಜ್ಜೆಗಳನ್ನು ಗಮನಿಸಿದರೆ ಭವಿಷ್ಯದ ಭಾರತ ಹೇಗೆ ಕಾಣಿಸಬಹುದು? ಇದೇ ಈ ಚುನಾವಣೆಗಳ ವಿನಿಮಯ ದರ. ರಾಜ್ಯಗಳು ಆರ್ಥಿಕವಾಗಿ ಕುಸಿದು ಬೀಳುವುದನ್ನು ತಪ್ಪಿಸಲು ಇರುವ ಏಕೈಕ ಪರಿಹಾರವೆಂದರೆ ಆರ್ಥಿಕಾಭಿವೃದ್ಧಿಯ ದರವನ್ನು ಹೆಚ್ಚಿಸುವುದು. ಆಗ ಉಚಿತ ಯೋಜನೆಗಳಿಗೂ, ನಿರ್ಲಕ್ಷಿತ ವರ್ಗಗಳಿಗೂ, ರಾಜ್ಯದ ಅಭಿವೃದ್ಧಿಗೂ
ಅನುದಾನ ಹಂಚಿಕೆ ಮಾಡಬಹುದು. ಆರ್ಥಿಕವಾಗಿ ಹಿಂದುಳಿದವರಿಗೆ ತಾವೂ ಬಡತನದಿಂದ ಹೊರಗೆ ಬರಬೇಕೆಂಬ ಕನಸಿದೆ. ಆರ್ಥಿಕ ಸಬಲೀಕರಣವು ಅವರ ಮೂಲಭೂತ ಹಕ್ಕು.

ಆರ್ಥಿಕಾಭಿವೃದ್ಧಿ ಕುಸಿದರೆ ದೇಶದಲ್ಲಿ ಬಿಕ್ಕಟ್ಟು ಶುರುವಾಗುತ್ತದೆ. ಬೀದಿ ಬೀದಿಗಳಲ್ಲಿ ಹಿಂಸಾಚಾರ ನಡೆಯುತ್ತದೆ. ಅನಿಶ್ಚಯತೆ ಅಥವಾ ಇನ್ನಾವುದೇ ಕಾರಣದಿಂದ ಆರ್ಥಿಕಾಭಿವೃದ್ಧಿಗೆ ಅಡ್ಡಿಯಾದರೆ ನಾವು ಹಿಂದಿನ ಹಲವು ದಶಕಗಳಲ್ಲಿ ಕಂಡಿರದ ಸಾಮೂಹಿಕ ಪ್ರತಿಭಟನೆ, ಹೋರಾಟಗಳು ೨೦೨೬ ರಲ್ಲಿ ಶುರುವಾಗುತ್ತವೆ. ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಪಿತ್ರಾರ್ಜಿತ ಆಸ್ತಿ ತೆರಿಗೆಯೇ ಮೊದಲಾದ ಕಾಂಗ್ರೆಸ್ ಪಕ್ಷದ ಪರಿಹಾರಗಳು ೨೦೨೦ರ ಸಮಸ್ಯೆಗಳಿಗೆ ೧೯೫೦ರ ದಶಕದ ಪರಿಹಾರಗಳಿದ್ದಂತೆ. ಇಂದು ಆಸ್ತಿಯೆಂಬುದು ಕೇವಲ ಶ್ರೀಮಂತರ ಸ್ವತ್ತಲ್ಲ. ಎಲ್ಲಾ ವರ್ಗದಲ್ಲೂ ಇಂದು ಆಸ್ತಿಗಳ ಮಾಲೀಕರಿದ್ದಾರೆ. ಹಾಗೆಯೇ ಇದು ಶ್ರೀಮಂತರಲ್ಲಿರುವ ಪ್ರಮುಖ ಸ್ವತ್ತೂ ಅಲ್ಲ.

ಭಾರತದ ಬಡವರಿಗೆ ವಾಸಿಸಲು ಮನೆ ಬೇಕು. ಅದು ಅವರಿಗೆ ಸಿಗುತ್ತಿದೆ. ಅಂಕಿ-ಅಂಶಗಳನ್ನು ನೋಡಿ. ಕಳೆದ ೧೦ ವರ್ಷಗಳಲ್ಲಿ ಗಮನಾರ್ಹ ಸಂಖ್ಯೆಯ ಬಡವರಿಗೆ ವಸತಿ ಯೋಜನೆಯ ಲಾಭ ದೊರೆತಿದೆ. ಅಂಥ ಬಡವರಿಗೆ ಪಿತ್ರಾರ್ಜಿತ ಆಸ್ತಿ ತೆರಿಗೆಯ ಮೂಲಕ ತಮ್ಮ ಸಾವಿನ ನಂತರ ಮಕ್ಕಳಿಗೆ ಸಿಗದಂತೆ ಅರ್ಧದಷ್ಟು ಆಸ್ತಿ ಕಳೆದುಕೊಳ್ಳಲು ಖಂಡಿತ ಇಷ್ಟವಿಲ್ಲ. ಒಂದು ಅಚ್ಚುಕಟ್ಟಾದ ಮನೆಯ ರೂಪದಲ್ಲಿ ನಮಗೊಂದು ಆಸ್ತಿಯಿರಬೇಕು ಎಂಬುದು ದೇಶದ ಬಡವರ ಪ್ರಮುಖ ಬೇಡಿಕೆ. ಪ್ರಜಾಪ್ರಭುತ್ವವು ದೇಶದ ಪ್ರಜೆಗಳಿಗೆ ಕನಿಷ್ಠ ಆಹಾರ ಹಾಗೂ ವಸತಿಯನ್ನೂ ನೀಡುವುದಿಲ್ಲ ಅಂತಾದರೆ ಬಡವರಿಗೆ ಅಂಥ ಪ್ರಜಾಪ್ರಭುತ್ವದಿಂದ ಏನು ಪ್ರಯೋಜನ? ನಾಗರಿಕ ಸಮಾಜದ ಕನಿಷ್ಠ ಅಗತ್ಯಗಳಾದ ಇಂಥ ಪ್ರಾಥಮಿಕ ಸಂಗತಿಗಳನ್ನು ಪೂರೈಸುವುದು ಸರಕಾರದ ಮೂಲಭೂತ ಕರ್ತವ್ಯ ಮತ್ತು ಸಾಂವಿಧಾನಿಕ ಜವಾಬ್ದಾರಿ. ಕಾಂಗ್ರೆಸ್ ಪಕ್ಷಕ್ಕೆ ಪಿತ್ರಾರ್ಜಿತ ಆಸ್ತಿ ತೆರಿಗೆಯ ಐಡಿಯಾ ನೀಡಿದವರು ಖಂಡಿತ ೨೧ನೇ ಶತಮಾನದಲ್ಲಿ ಇಲ್ಲ.

ಪಿತ್ರಾರ್ಜಿತ ತೆರಿಗೆ ವಿಧಿಸಿದರೆ ಶ್ರೀಮಂತರು ಹೇಗೋ ತಮ್ಮಲ್ಲಿರುವ ಸಂಪತ್ತಿನಿಂದಾಗಿ ಅದನ್ನು ತಾಳಿಕೊಳ್ಳುತ್ತಾರೆ. ಆದರೆ ಬಡತನದಿಂದ ಹೊರಗೆ ಬರುತ್ತಿರುವ ದೊಡ್ಡ ಸಂಖ್ಯೆಯ ಜನರು ಅದರ ವಿರುದ್ಧ ಬೀದಿಗಿಳಿಯುತ್ತಾರೆ. ೧೮ನೇ ಶತಮಾನದ ಒಂದು ದಂತಕತೆಯ ಮೂಲಕ ಪ್ರಜಾಪ್ರಭುತ್ವದಲ್ಲಿ ಜನರು ಮತ್ತು ಅಧಿಕಾರದ ನಡುವಿನ ಸಂಬಂಧ ಹೇಗೆ ಸಮಾಜದ ಸಮತೋಲನವನ್ನು ಕಾಪಾಡಬೇಕು ಎಂಬುದನ್ನು ನೋಡೋಣ. ಪ್ರಜಾಪ್ರಭುತ್ವ ವೆಂಬುದು ಜಗತ್ತಿನ ಅತ್ಯಂತ ಸೃಜನಶೀಲ, ಅತ್ಯಂತ ನ್ಯಾಯಯುತವಾದ ಹಾಗೂ ಅತ್ಯಂತ ಉತ್ಪಾದಕ ಆಡಳಿತ ವ್ಯವಸ್ಥೆ. ಪಶ್ಚಿಮ ಬಂಗಾಳದ ಚಂದನ್ ನಗರದಲ್ಲಿ ಪ್ರಸಿದ್ಧ ಜಗಧಾತ್ರಿ ಪೂಜೆಯನ್ನು ಆರಂಭಿಸಿದ ನಾಡಿಯಾ ಕೃಷ್ಣಚಂದ್ರ ರಾಯ್ (೧೭೧೦ರಲ್ಲಿ ಜನನ; ೧೭೨೮ರಿಂದ ೧೭೮೩ರವರೆಗೆ ಆಳ್ವಿಕೆ) ಎಂಬ ಮಹಾರಾಜನಿದ್ದ. ಆತನ ವಂಶಸ್ಥ ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾನೆ ಎಂಬ ಕಾರಣಕ್ಕೂ ಈ ಕತೆ ಪ್ರಸ್ತುತ.

ಮಹಾರಾಜನಿಗೆ ಗೋಪಾಲ ಭಾರ್ ಎಂಬ ಆಸ್ಥಾನ ವಿದೂಷಕನೊಬ್ಬನಿದ್ದ. ಒಂದು ರಾತ್ರಿ ಔತಣಕೂಟದಲ್ಲಿ ಆ ವಿದೂಷಕ ಯದ್ವಾತದ್ವಾ ಕುಡಿದು, ಮನೆಗೆ ಹೋಗಲು ಆಗದೆ, ಅರಮನೆಯ ಚಾವಡಿಯಲ್ಲೇ ಮಲಗಿಬಿಟ್ಟಿದ್ದ. ಮರುದಿನ ಬೆಳಗ್ಗೆ ಮಹಾರಾಜ ವಾಯುವಿಹಾರಕ್ಕೆ ಹೋಗಬೇಕಾದರೆ ಈತ ಏಳುತ್ತಿರುವುದನ್ನು ನೋಡಿದ. ನಂತರ ಮಹಾರಾಜನಿಗೆ ಮುಖಕ್ಷೌರ ಮಾಡುವ ಕ್ಷೌರಿಕ ಆವತ್ತು ಮೊಟ್ಟಮೊದಲ ಬಾರಿಗೆ ಕೈಜಾರಿ ಗಾಯ ಮಾಡಿಬಿಟ್ಟ. ಮಹಾರಾಜನಿಗೆ ಸಿಟ್ಟು ಬಂತು. ಕ್ಷೌರಿಕನ ತಲೆ ತೆಗೆಯುವಂತೆ ಆದೇಶ ನೀಡಿದ.

ನಡುಗುವ ಕೈಗಳನ್ನು ಮುಗಿದು ಕ್ಷೌರಿಕ ಹೇಳಿದ, ‘ಮಹಾರಾಜರೇ, ಇದು ನನ್ನ ತಪ್ಪಲ್ಲ. ಯಾವತ್ತೂ ನನ್ನ ಕೈ ಹೀಗೆ ಜಾರಿಲ್ಲ. ತಾವು ಬೆಳಗ್ಗೆ ಎದ್ದಕೂಡಲೇ ಇವತ್ತು ನೋಡಿದ ಮೊದಲ ಮುಖವೇ ನಿಮಗೆ ಈ ಅಮಂಗಳವನ್ನು ತಂದಿದೆ’. ಅದು ಗೋಪಾಲ ಭಾರ್‌ನ ಮುಖ. ಹೀಗಾಗಿ ಗೋಪಾಲ ಭಾರ್‌ನ ತಲೆ ತೆಗೆಯಲು ಮಹಾರಾಜ ಆದೇಶ ನೀಡಿದ. ಬೆಚ್ಚಿದ ಗೋಪಾಲ ತನ್ನ ವಾದವನ್ನೂ ಒಮ್ಮೆ ಕೇಳಬೇಕು ಎಂದು ಬೇಡಿಕೊಂಡ. ರಾಜ ಒಪ್ಪಿದ.

‘ಮಹಾರಾಜರೇ, ನೀವು ಇಂದು ಬೆಳಗ್ಗೆ ನೋಡಿದ ಮೊದಲ ಮುಖದಿಂದಾಗಿ ನಿಮ್ಮ ಕತ್ತಿನ ಬಳಿ ಗಾಯವಾಗಿದೆ. ಆದರೆ ನಾನು ನೋಡಿದ ಮೊದಲ
ಮುಖದಿಂದಾಗಿ ನನ್ನ ತಲೆಯೇ ಹೋಗುತ್ತಿದೆ. ಅದು ನಿಮ್ಮ ಮುಖವಾಗಿತ್ತು. ಹಾಗಿದ್ದರೆ ಯಾರ ಮುಖ ಹೆಚ್ಚು ಅಮಂಗಳಕರ?’ ಬುದ್ಧಿವಂತ ರಾಜನಿಗೆ ಅರ್ಥವಾಯಿತು. ಗೋಪಾಲ ಭಾರ್ ಬದುಕಿಕೊಂಡ. ಪ್ರಜಾಪ್ರಭುತ್ವದಲ್ಲಿ ಸಂಗೀತಕ್ಕೆ ಹೆಜ್ಜೆಹಾಕಲು ಇಬ್ಬರು ಇರಬೇಕಾಗುತ್ತದೆ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

error: Content is protected !!