Sunday, 19th May 2024

ದೇಶವಿರೋಧಿ ಕೃತ್ಯಗಳ ಗುರಾಣಿ ಪದಗಳು

ವೀಕೆಂಡ್ ವಿತ್ ಮೋಹನ್

camohanbn@gmail.com

ಭಾರತದಲ್ಲಿ ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಕಮ್ಯುನಿಸ್ಟರು ಹೊಸ ಪದಗಳನ್ನು ಹುಟ್ಟುಹಾಕಿ ಜನರ ತಲೆ ಕೆಡಿಸುವಲ್ಲಿ ನಿಸ್ಸೀಮರು. ಆಂಗ್ಲ ಭಾಷೆಯ ನಿರರ್ಗಳ ಸಂವಹನದ ಮೂಲಕ ತಮ್ಮನ್ನು ತಾವು ಅತಿ ಬುದ್ಧಿವಂತರೆಂಬಂತೆ ಬಿಂಬಿಸಿಕೊಂಡು ತಾವು ಮಾಡುವ ದೇಶವಿರೋಧಿ ಕೆಲಸಗಳನ್ನು ಮುಚ್ಚಿ ಹಾಕಲು ಹೊಸ ಪದಪುಂಜಗಳನ್ನು ಹೇಳುತ್ತಿರುತ್ತಾರೆ. ಸ್ವಾತಂತ್ರ್ಯಾನಂತರ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ರಾಜಕೀಯ ಮಾಡಿ ದೇಶವಿರೋಧಿ ಕೃತ್ಯಗಳಲ್ಲಿ ತೊಡಗುವವರ ಪರವಾಗಿ ನಿಂತು, ಆಳುವ ಸರಕಾರದ ವಿರುದ್ಧ ಹೊಸ ನಿರೂಪಣೆ ಬರೆಯುವಲ್ಲಿ ಇವರು ಹಲವು ಬಾರಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ಸಿಗರ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಹಲವು ಪತ್ರಕರ್ತರು, ಕಾನೂನು ಪಂಡಿತರು, ರಾಜಕೀಯ ನಾಯಕರು ಕಮ್ಯುನಿಸ್ಟರ ಕುಡಿಗಳು. ಇವರು ತಮ್ಮ ಸಂವಿಧಾನ-ವಿರೋಧಿ ಕೃತ್ಯಗಳನ್ನು ಮರೆಮಾಚಲು ಸಂವಿಧಾನವನ್ನೇ ಮುಂದಿಟ್ಟುಕೊಂಡು ಜನರ ತಲೆಯಲ್ಲಿ ಸುಳ್ಳುಗಳನ್ನು ತುಂಬುವಲ್ಲಿ ನಿಸ್ಸೀಮರು.
ಇವರು ಕರ್ನಾಟಕದಲ್ಲಿ ನಡೆದ ಹಿಜಾಬ್ ವಿವಾದವನ್ನು ಸಮರ್ಥಿಸಿಕೊಳ್ಳಲು ಸಂವಿಧಾನವನ್ನು ಪದೇ ಪದೆ ಮುನ್ನೆಲೆಗೆ ತರುತ್ತಿದ್ದರು. ಬಾಬಾಸಾಹೇಬರು ಹಿಜಾಬ್ ಮತ್ತು ಬುರ್ಖಾ ಧರಿಸುವವರ ವಿರುದ್ಧವಾಗಿದ್ದರು, ಬುರ್ಖಾ ಧರಿಸಿದರೆ ಮುಸ್ಲಿಂ ಮಹಿಳೆಯರು ಅನಾರೋಗ್ಯಕ್ಕೆ ತುತ್ತಾಗುತ್ತಾರೆಂದು ಹೇಳಿದ್ದರು. ಆದರೆ ಹಿಜಾಬ್ ಬೆಂಬಲಿಸಿದವರ ಮಾತುಗಳಲ್ಲಿ ಸಂವಿಧಾನ ಎಂಬ ಪದಬಳಕೆ ಮುನ್ನೆಲೆಗೆ ಬರುತ್ತಲೇ ಇತ್ತು.

ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಕನಿಷ್ಠವೆಂದರೂ ೧೦ ಬಾರಿ ಬಾಬಾಸಾಹೇಬರ ಸಂವಿಧಾನ ಎಂಬ ಪದಬಳಕೆ ಮಾಡುತ್ತಿದ್ದರು. ಈ ವಿದ್ಯಾರ್ಥಿನಿಯರ ಹಿಂದಿದ್ದವರು ಮತ್ತದೇ ಎಡ ಚರರ ಮತ್ತು ಕಾಂಗ್ರೆಸ್ಸಿಗರ ಪಟಾಲಂ. ಇವರು ಬಾಬಾ ಸಾಹೇಬರ ಆಶಯದ ವಿರುದ್ಧ ಬುರ್ಖಾ ಮತ್ತು ಹಿಜಾಬ್ ಧರಿಸಿ ಶಾಲೆಗೆ ಬಂದು, ತಾವು ಮಾಡಿದ ತಪ್ಪನ್ನು ಸಮರ್ಥಿಸಿ ಕೊಳ್ಳಲು ಬಾಬಾಸಾಹೇಬರ ಹೆಸರನ್ನೇ ಮುನ್ನೆಲೆಗೆ ತಂದು ಜನರ ತಲೆಕೆಡಿಸುವ ಕೆಲಸಕ್ಕೆ ಕೈ ಹಾಕಿದ್ದರು.

೧೯೭೬ರಲ್ಲಿ ಕೇವಲ ೪೬ ಸೆಕೆಂಡಿನಲ್ಲಿ, ಬಾಬಾಸಾಹೇಬರು ರಚಿಸಿದ್ದ ಸಂವಿಧಾನದ ಪೀಠಿಕೆಯನ್ನೇ ಬದಲಾಯಿಸಿದ್ದ ಕಾಂಗ್ರೆಸ್ ಪಕ್ಷ, ಶಾಲಾ ವಿದ್ಯಾರ್ಥಿಗಳ ಪಠ್ಯದಲ್ಲಿ ಸಂವಿಧಾನದ ಪೀಠಿಕೆಯನ್ನು ಸೇರಿಸಲು ಹೊರಟಿದೆ. ಕಾಂಗ್ರೆಸ್ಸಿನ ನಾಯಕರು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಸಂವಿಧಾನವನ್ನು ಅಡ್ಡ ತರುತ್ತಾರೆ. ಭ್ರಷ್ಟಾಚಾರ ಪ್ರಕರಣ ಗಳಲ್ಲಿ ತನಿಖಾ ಸಂಸ್ಥೆಗಳು ಮನೆಗಳ ಮೇಲೆ ದಾಳಿ ನಡೆಸಿದರೆ ಮಾಧ್ಯಮಗಳ ಮುಂದೆ ಸಂವಿಧಾನವೆಂಬ ಪದಬಳಕೆ
ಮಾಡುತ್ತಾರೆ. ಕಳೆದ ಕೆಲವು ವರ್ಷಗಳಿಂದ ಹುಟ್ಟಿಕೊಂಡಿರುವ ಮತ್ತೊಂದು ಪದವೆಂದರೆ ಕುವೆಂಪುರವರು ಹೇಳಿದ್ದ ‘ಸರ್ವಜನಾಂಗದ ಶಾಂತಿಯ ತೋಟ’. ಮುಸಲ್ಮಾನರನ್ನು ಓಲೈಸಲು ಹೆಚ್ಚಾಗಿ ಈ ಪದವನ್ನು ಬಳಸಲಾಗುತ್ತದೆ.

ಔರಂಗಜೇಬ್‌ನ ಚಿತ್ರವಿರುವ ಅಖಂಡ ಭಾರತದ ನಕ್ಷೆಯನ್ನು ಶಿವಮೊಗ್ಗದಲ್ಲಿ ಮುಸ್ಲಿಂ ಯುವಕರು ಈದ್ ಮಿಲಾದ್ ಸಂದರ್ಭದಲ್ಲಿ ಪ್ರದರ್ಶಿಸಿ ಗಲಭೆ ನಡೆಸಿದ್ದರ ವಿರುದ್ಧ ಮಾತನಾಡಿದರೆ ಸರ್ವಜನಾಂಗದ ಶಾಂತಿಯ ತೋಟ ನೆನಪಾಗುತ್ತದೆ. ಹಿಂದೂಪರ ಸಂಘಟನೆಗಳು ಸಾವರ್ಕರ್ ಚಿತ್ರವನ್ನು ಗಣೇಶ ಹಬ್ಬದಲ್ಲಿ ಪ್ರದರ್ಶಿಸಿದರೆ ಕೋಮುವಾದ ವೆಂಬ ಪದ ಪ್ರತಿಯೊಬ್ಬ ಕಾಂಗ್ರೆಸ್ ಮತ್ತು ಎಡಚರರ ಬಾಯಲ್ಲಿ ಬರುತ್ತದೆ. ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಿದಾಗ ಸರ್ವಜನಾಂಗದ ಶಾಂತಿಯ ತೋಟ ಮತ್ತು ಕೋಮುವಾದ ವೆಂಬ ಪದಗಳು ನೆನಪಾಗುವುದಿಲ್ಲ. ಇವರು ಹಿಂದೂ
ಧರ್ಮದ ವಿಚಾರಧಾರೆಯವರನ್ನು ಕೋಮುವಾದ ಎಂದರು, ಕ್ರೈಸ್ತ ಮತ್ತು ಮುಸ್ಲಿಂ ಧರ್ಮದ ವಿಚಾರಧಾರೆಯವರನ್ನು ಜಾತ್ಯತೀತ ಎಂದರು.

ಹಿಂದೂ ವಿರೋಧಿ ಚಿಂತನೆ ಮಾಡುವವರನ್ನು ವಿಚಾರವಾದಿ, ಬುದ್ಧಿಜೀವಿ ಎಂದು ಕರೆದರು. ದೇಶದಲ್ಲಿ ವಿಚಾರವಾದಿ ಎಂದು ಕರೆಸಿಕೊಳ್ಳುವವರ ವಿಚಾರಧಾರೆ ಗಳು ಹಿಂದೂಧರ್ಮ ವಿರೋಧಕ್ಕೆ ಮಾತ್ರ ಸೀಮಿತ. ಮುಸ್ಲಿಂ ಮತ್ತು ಕ್ರೈಸ್ತ ಧರ್ಮದಲ್ಲಿನ ವಿಚಾರಧಾರೆ ಗಳ ಬಗ್ಗೆ ಅವರು ತುಟಿ ಬಿಚ್ಚುವುದಿಲ್ಲ. ಬುದ್ಧಿಜೀವಿಗಳು ಎನಿಸಿಕೊಂಡವರು ಪಕ್ಕಾ ಎಡಚರರ ಪಟಾಲಮ್ಮಿನ ವಿದ್ಯಾರ್ಥಿಗಳು. ಸದಾ ಹಿಂದೂ ದೇವರುಗಳನ್ನು ಟೀಕಿಸುವ ಭಗವಾನ್ ಎಂಬ ಅಜ್ಞಾನಿ, ಕಾಂಗ್ರೆಸ್
ಮತ್ತು ಎಡಚರರಿಗೆ ಬುದ್ಧಿಜೀವಿ. ಕಾಶ್ಮೀರದಲ್ಲಿ ಪಂಡಿತರ ನರಮೇಧ ನಡೆಸಿದ್ದ ಭಯೋತ್ಪಾದಕ ಯಾಸೀನ್ ಮಲಿಕ್ ಪರವಾಗಿ ನಿಲ್ಲುವ ಅರುಂಧತಿ ರಾಯ್ ವಿಚಾರವಾದಿ. ದೇಶ ವನ್ನು ತುಂಡುತುಂಡು ಮಾಡಲು ಹೊರಟಿರುವ ‘ಟುಕ್ಡೆ ಟುಕ್ಡೆ ಗ್ಯಾಂಗ್’ ಪರವಾಗಿ ಮಾತನಾಡುವ ಎಡಚರ ಪತ್ರಕರ್ತರು ವಿಚಾರವಾದಿಗಳು. ನಕ್ಸಲ್ ವಾದದ ಪರವಾಗಿ ನಿಲ್ಲುವವರು ವಿಚಾರವಾದಿಗಳು.

ರಾಷ್ಟ್ರೀಯತೆಯನ್ನು ಜನರ ಮನದಲ್ಲಿ ಬಿತ್ತಲು ಮುಂದಾದರೆ ವಿಶ್ವಮಾನವತೆಯನ್ನು ಮುಂದೆ ತರುತ್ತಾರೆ. ವಸುಧೈವ ಕುಟುಂಬಕಂ ಪದಬಳಕೆಯಲ್ಲಿ ಇವರಿಗೆ ಬ್ರಾಹ್ಮಣ್ಯ ಕಾಣುತ್ತದೆ, ಆದರೆ ವಿಶ್ವಮಾನವತೆಯಲ್ಲಿ ಕಾಣುವುದಿಲ್ಲ. ಇಸ್ರೇಲಿನ ನಾಗರಿಕರನ್ನು ಗುರಿಯನ್ನಾಗಿಸಿಕೊಂಡು ಪ್ಯಾಲೆಸ್ತೀನಿನ ಹಮಾಸ್ ಉಗ್ರರು ರಾಕೆಟ್ ದಾಳಿ ನಡೆಸಿದಾಗ ವಿಶ್ವಮಾನ ವತೆ ನೆನಪಿಗೆ ಬರುವುದಿಲ್ಲ. ಆದರೆ ಪ್ರತಿಯಾಗಿ ಪ್ಯಾಲೆಸ್ತೀನಿನ ಮೇಲೆ ಇಸ್ರೇಲ್ ದಾಳಿ ನಡೆಸಿದಾಗ ವಿಶ್ವಮಾನವತೆ ನೆನಪಾಗುತ್ತದೆ. ಮಣಿಪುರದಲ್ಲಿ ನಡೆದ ಹಿಂಸಾಚಾರ ಪ್ರಕರಣ ನೆನಪಾಗುವವರಿಗೆ ಕಾಶ್ಮೀರದಲ್ಲಿ ಪಂಡಿತರ ಮೇಲಾದ ಹಿಂಸಾಚಾರ ಪ್ರಕರಣ ನೆನಪಿಗೆ ಬರುವುದಿಲ್ಲ.

ನಾವು ಹಿಂದೂ ಸಮಾಜದಲ್ಲಿದ್ದಂಥ ತಾರತಮ್ಯವನ್ನು ಹೋಗಲಾಡಿಸಲು ಸಾಮರಸ್ಯದ ಪ್ರಯತ್ನಕ್ಕೆ ನಿಂತರೆ, ಅವರು ಪುರೋಹಿತಶಾಹಿಗಳೆಂಬ ಹಣೆಪಟ್ಟಿ ಕಟ್ಟುತ್ತಾರೆ. ಹಿಂದೂ ಸಮಾಜದಲ್ಲಿನ ವಿವಿಧ ವರ್ಗಗಳ ಜನರನ್ನು ಬೆಸೆಯಲು ಮಾಡುವ ಪ್ರಯತ್ನಕ್ಕೆ ಮೊದಲ ಕಲ್ಲು ಪುರೋಹಿತಶಾಹಿಗಳೆಂಬ ಪದಬಳಕೆಯ ಮೂಲಕ ಬೀಳುತ್ತದೆ. ಹಿಂದೂ ಸಮಾಜದಲ್ಲಿ ರುವ ತಾರತಮ್ಯ ನಿವಾರಣೆಯಾಗುವುದು ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲ. ಹಿಂದೂ ಸಮಾಜ ಜಾತಿಗಳನ್ನು ಮೀರಿ ಒಂದಾದರೆ ತಮಗೆ ಉಳಿಗಾಲವಿಲ್ಲವೆಂಬ ಅಂಶ ಅವರಿಗೆ ಸ್ಪಷ್ಟವಾಗಿ ತಿಳಿದಿದೆ.

ನಾವು ವಿಕಾಸದ ಮಾತನಾಡಿದರೆ ಪರಿಸರ ವಿರೋಧಿಗಳೆಂಬ ಹಣೆಪಟ್ಟಿ ಕಟ್ಟುತ್ತಾರೆ. ಗುಜರಾತಿನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನರ್ಮದಾ ನದಿಗೆ ಅಣೆಕಟ್ಟು ನಿರ್ಮಿಸಿ ಲಕ್ಷಾಂತರ ರೈತರ ಕುಟುಂಬದ ಸಹಾಯಕ್ಕೆ ನಿಂತಾಗ ಮೇಧಾ ಪಾಟ್ಕರ್ ‘ಪರಿಸರ ವಿರೋಧಿ’ ಎಂಬ ಪದಪುಂಜದ ಮೂಲಕ ದೊಡ್ಡ ಚಳವಳಿಯನ್ನೇ ಮಾಡಿಬಿಟ್ಟರು. ಒಂದೆಡೆ ರೈತರ ಪರವಾಗಿ ನಿಲ್ಲುತ್ತೇವೆಂದು ಹೇಳಿ ಮತ್ತೊಂದೆಡೆ ಪರಿಸರ ವಿರೋಧಿ ಎಂಬ ಹೆಸರಿನಲ್ಲಿ
ವಿಕಾಸವನ್ನು ತಡೆದು ರೈತರ ಕೃಷಿ ಚಟುವಟಿಕೆಗಳಿಗೆ ಬೇಕಿರುವ ನೀರನ್ನು ತಡೆಯುವುದು.

‘ಮಾನವ ಹಕ್ಕು’ ಎಂಬುದು ಎಡಚರರು ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿ ಬಳಸುವ ಪದ. ಮುಸಲ್ಮಾನರ ವಿರುದ್ಧ ನಡೆಯುವ ದೌರ್ಜನ್ಯಗಳು ಮಾತ್ರ ಮಾನವ ಹಕ್ಕುಗಳ ಹೆಸರಿನಲ್ಲಿ ಮುನ್ನೆಲೆಗೆ ಬರುತ್ತವೆ. ಹಿಂದೂ ಧರ್ಮದಲ್ಲಿರುವವರನ್ನು ಇವರು ಮಾನವರೆಂದುಕೊಂಡಿಲ್ಲ.
ಜಗತ್ತಿನ ಉಗ್ರವಾದಿಗಳ ಪರವಾಗಿ ನಿಲ್ಲುವಾಗ ಅತಿ ಹೆಚ್ಚಾಗಿ ಮಾನವ ಹಕ್ಕು ಎಂಬ ಪದವನ್ನು ಎಡಚರರು ಬಳಸುತ್ತಾರೆ. ಭಾರತೀಯ ಸಂಸತ್ತಿನ ಮೇಲೆ ದಾಳಿ ನಡೆಸಿದ್ದ ಉಗ್ರ ಆಫ್ಜಲ್ ಗುರುವಿನ ಪರವಾಗಿ ಮಾನವ ಹಕ್ಕುಗಳೆಂಬ ಹೆಸರಿನಲ್ಲಿ ನ್ಯಾಯಾಲಯದಲ್ಲಿ ವಾದ ನಡೆಸುತ್ತಾರೆ. ಕನ್ನಯ್ಯಕುಮಾರ್ ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರ ಒಸಾಮಾ ಬಿನ್ ಲಾಡೆನ್‌ನನ್ನು ಮಾನವ ಹಕ್ಕುಗಳ ಪದದ ಮೂಲಕ ಸಮರ್ಥಿಸಿಕೊಳ್ಳುತ್ತಾನೆ. ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲುಗಳನ್ನು ತೂರಿದಾಗ ನೆನಪಾಗದ ಮಾನವ ಹಕ್ಕು, ಕಲ್ಲು ತೂರಿದ ಪುಂಡರನ್ನು ಸೈನಿಕರ ಜೀಪಿಗೆ ಕಟ್ಟಿ ಎಳೆತಂದಾಗ ನೆನಪಾಗುತ್ತದೆ.

ಪಾಕಿಸ್ತಾನದ ಉಗ್ರರನ್ನು ಮಾನವರೆನ್ನುವವರು ಭಾರತೀಯ ಸೈನಿಕರನ್ನು ಮಾನವರೆಂದು ಪರಿಗಣಿಸಿಲ್ಲ. ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆ ಗಳನ್ನು ತಡೆಯಲು ಭಾರತೀಯ ಸೈನ್ಯವನ್ನು ಜಮಾಯಿಸಿದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆಯೆಂಬ ಕೂಗು ಕೇಳಿಬರುತ್ತದೆ. ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿ ಮಾನವ ಹಕ್ಕು ಎಂಬ ಪದ ಕೇಳಿಬರುತ್ತದೆ. ಗುಜರಾತಿನಲ್ಲಿ ನಡೆದ ಭಯೋತ್ಪಾದಕಿ ಇಶ್ರತ್ ಜಹಾನ್‌ಳ ಎನ್‌ಕೌಂಟರ್ ವಿಷಯದಲ್ಲಿ ಮಾನವ ಹಕ್ಕು ಎಂಬ ಪದ ಬಳಕೆಯ ಮೂಲಕ ದೊಡ್ಡಮಟ್ಟದ ಸುಳ್ಳು ನಿರೂಪಣೆಯನ್ನು ತೀಸ್ತಾ ಸೆಟ್ಲ್‌ವಾಡ್ ಮಾಡಿದ್ದರು. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರದಲ್ಲಿ, ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾದವರ ಎನ್‌ಕೌಂಟರ್ ನಡೆದರೆ ಇವರಿಗೆ ಮಾನವ ಹಕ್ಕು ನೆನಪಾಗುತ್ತದೆ.

ಇವರು ಬಳಸುವ ಪದಪುಂಜಗಳು ಅಧಿಕಾರದಲ್ಲಿರುವ ಪಕ್ಷ ಮತ್ತು ವ್ಯಕ್ತಿಯ ಧರ್ಮದ ಮೇಲೆ ಅವಲಂಬಿತ ವಾಗಿರುತ್ತವೆ. ದೇಶದಲ್ಲಿ ಅಸಹಿಷ್ಣುತೆ ಇದೆಯೆಂಬ ಹೊಸ ವಾದದ ಮೂಲಕ ನೂತನ ನಿರೂಪಣೆ ಶುರುವಾಗಿತ್ತು. ಬಾಲಿವುಡ್ ನಟ ಆಮಿರ್ ಖಾನ್, ಭಾರತದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆಯೆಂದು ತನ್ನ ಹೆಂಡತಿ ಮತ್ತು ಮಕ್ಕಳು ಹೇಳುತ್ತಿದ್ದಾರೆಂದು ಹೇಳಿದ್ದರು. ಇವರ ಹಳೆಯ ಸಿನಿಮಾ ಗಳಲ್ಲಿ ಹಿಂದೂಧರ್ಮಕ್ಕೆ ಅವಮಾನ ಮಾಡಿದ್ದಾಗ ಸುಮ್ಮನಿದ್ದ ಹಿಂದೂಗಳು ಸಹಿಷ್ಣುಗಳಾಗಿದ್ದರು. ಆದರೆ ಹಿಂದೂಗಳು ಎಚ್ಚೆತ್ತು ಈಗ ವಿರೋಽಸಿದಾಕ್ಷಣ ಅಸಹಿಷ್ಣುತೆ ಎದ್ದುಕಾಣುತ್ತದೆ.

ಹಿಂದೂಗಳ ಹಬ್ಬಗಳ ಆಚರಣೆಯಂದು ಕಾಡುವ ಅಸಹಿಷ್ಣುತೆ ಮುಸಲ್ಮಾನರ ಹಬ್ಬದಂದು ನಡೆಯುವ ಆಚರಣೆಯಲ್ಲಿ ಕಾಣಿಸುವುದಿಲ್ಲ. ಚೀನಾದಲ್ಲಿ ಮುಸಲ್ಮಾನರ ಮೇಲೆ ನಡೆಯುತ್ತಿರುವ ದೌರ್ಜನ್ಯವು ಎಡಚರರಿಗೆ ಅಸಹಿಷ್ಣುತೆಯಾಗಿ ಕಾಣಿಸುವುದಿಲ್ಲ. ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತ್ರ ಅಸಹಿಷ್ಣುತೆ ಕಾಣುತ್ತದೆ. ಚೀನಾಕ್ಕೂ ಎಡಚರರಿಗೂ ಶತಮಾನಗಳ ಸಂಬಂಧ. ಅಲ್ಲಿನ ಕಮ್ಯುನಿಸ್ಟ್ ಸರಕಾರ ಮುಸಲ್ಮಾನರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳ ವಿರುದ್ಧ ಒಮ್ಮೆಯೂ ಇವರು ಧ್ವನಿ ಎತ್ತುವುದಿಲ್ಲ.

ಹಿಂದೂಧರ್ಮದ ಆಚರಣೆಗಳಿಗೆ ಧಕ್ಕೆ ತರುವವರನ್ನು ಪ್ರಶ್ನಿಸಿದರೆ ಕಾಂಗ್ರೆಸ್ಸಿಗರಿಗೆ ಮತ್ತು ಎಡಚರರಿಗೆ ಅಸಹಿಷ್ಣುತೆ ನೆನಪಾಗುತ್ತದೆ. ಕೆಲವು ವರ್ಷಗಳ ಹಿಂದೆ ಚಾಲ್ತಿಯಲ್ಲಿ ಬಂದಂಥ ಮತ್ತೊಂದು ಪದ ‘ಪ್ರಶಸ್ತಿ ವಾಪ್ಸಿ’. ಈ ಪದಪುಂಜವು ಕೇವಲ ರಾಜಕೀಯಕ್ಕಾಗಿ ಮುಸ್ಲಿಂ ಧರ್ಮವನ್ನು ಓಲೈಸಿ, ಹಿಂದೂಗಳ ವಿರುದ್ಧ ಮಾತನಾಡುವುದಕ್ಕಷ್ಟೇ ಸೀಮಿತ. ದೇಶದಲ್ಲಿ ಕೋಮುವಾದ ಹೆಚ್ಚಾಗಿ ನಡೆಯುತ್ತಿದೆ ಎಂಬ ಸುಳ್ಳು ನೆಪವೊಡ್ಡಿ ಪ್ರಶಸ್ತಿ ವಾಪ್ಸಿ ಮಾಡುತ್ತೇವೆಂದು ಇವರು ಹೇಳಿದ್ದರು. ಒಂದು ಕಾಲದಲ್ಲಿ ಎಡಚರರ ಪಟಾಲಂ ಮೂಲಕ ತಮ್ಮ ಬೆನ್ನನ್ನು ತಾವುಗಳೇ ಕೆರೆದುಕೊಂಡು ಅವಾರ್ಡ್ ಪಡೆದವರಿವರು.

ಇವರ ಪ್ರಕಾರ ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ವಿಚಾರ ಧಾರೆಗಳು ಸಮಾಜದಲ್ಲಿ ಚರ್ಚೆಗೆ ಬಂದರೆ ಕೋಮುವಾದ. ಶಾಲೆಯಲ್ಲಿ ಹಿಜಾಬ್ ನಿಷೇಧದ ವಿಚಾರ ಚರ್ಚೆಗೆ ಬಂದಾಕ್ಷಣ ಪ್ರಶಸ್ತಿ ವಾಪ್ಸಿ ಗ್ಯಾಂಗ್ ಎಚ್ಚೆತ್ತುಕೊಳ್ಳುತ್ತದೆ. ಆಜಾದಿ ಎಂಬ ಪದವನ್ನು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸ್ವಾತಂತ್ರ್ಯ ಹೋರಾಟ ಗಾರರು ಬಳಸುತ್ತಿದ್ದರು. ಆದರೆ ಎಡಚರರು ಮತ್ತು ಕಾಂಗ್ರೆಸ್ಸಿಗರು ಇದನ್ನು, ಭಾರತದಿಂದ ಕಾಶ್ಮೀರವನ್ನು ಬೇರ್ಪಡಿಸುವ ಪ್ರತ್ಯೇಕತಾವಾದಿಗಳ ದೇಶ ವಿರೋಧಿ ಹೋರಾಟದ ಪದವನ್ನಾಗಿಸಿಬಿಟ್ಟಿದ್ದಾರೆ. ಬಹಿರಂಗ ವಾಗಿ ಆಜಾದಿ ಎಂಬ ಪದ ಬಳಸುವ ಪ್ರತ್ಯೇಕತಾವಾದಿಗಳ ಪರವಾಗಿ ವಿಶ್ವವಿದ್ಯಾಲಯಗಳಲ್ಲಿ ಕಾಂಗ್ರೆಸ್ಸಿಗರು ನಿಂತು ಕೊಳ್ಳುತ್ತಾರೆ. ಬಂದೂಕುಗಳಿಲ್ಲದೆ ಕೆಲವೊಂದು ಪದಗಳಿಂದ ಜನರ ತಲೆಯನ್ನು ಹಾಳುಮಾಡುವ ಕೆಲಸ ಭಾರತದಲ್ಲಿ ನಿರಂತರವಾಗಿ ನಡೆಯುತ್ತಿದೆ. ತಾವು ಬಳಸುವ ಪದಗಳ ಅರ್ಥದ ವಿರುದ್ಧವಾಗಿ ನಡೆದುಕೊಂಡು ರಾಜಕೀಯ ಮಾಡಿ ಜನರ ತಲೆ ಹಾಳುಮಾಡುವ ಕಾಂಗ್ರೆಸ್ಸಿನ ಚಾಳಿ ಈಗಲೂ ಚಾಲ್ತಿಯಲ್ಲಿದೆ. ಕುವೆಂಪು ‘ಸರ್ವಜನಾಂಗದ ಶಾಂತಿಯ ತೋಟ’ ಎಂದಿದ್ದರು. ಆದರೆ ಇವರು ‘ಏಕಜನಾಂಗದ ಓಲೈಕೆಯ ತೋಟ’ವನ್ನಾಗಿಸಿ ಕುವೆಂಪುರವರ ಆಶಯದ
ವಿರುದ್ಧ ನಿಂತಿದ್ದಾರೆ.

Leave a Reply

Your email address will not be published. Required fields are marked *

error: Content is protected !!