Sunday, 19th May 2024

ಭಾರತ ರತ್ನ ಎನ್ನುವ ಚೆಕ್ ಮೇಟ್

ಅಶ್ವತ್ಥಕಟ್ಟೆ

ranjith.hoskere@gmail.com

ರಾಜಕೀಯದಲ್ಲಿ ತಾನು ಏನು ಮಾಡಬೇಕು ಎನ್ನುವುದಕ್ಕಿಂತ, ವಿರೋಧಿ ಏನು ಮಾಡುತ್ತಿದ್ದಾನೆ ಎನ್ನುವುದನ್ನು ಅರಿತು, ಅದಕ್ಕೆ ತಕ್ಕಂತೆ ತಂತ್ರಗಾರಿಕೆ ಮೆರೆಯುವುದು ಬಹುಮುಖ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ, ಬಿಜೆಪಿಯ ನಡೆಯೇನು ಎನ್ನುವುದನ್ನು ಅರಿಯುವಲ್ಲಿ ಬಹುತೇಕ ಪ್ರತಿಪಕ್ಷಗಳು ವಿಫಲವಾಗಿ
ರುವುದೇ, ಇಂದಿನ ರಾಜಕೀಯ ಪರಿಸ್ಥಿತಿಗೆ ಕಾರಣ ಎನ್ನಬಹುದು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಿಜೆಪಿಯ ಚುಕ್ಕಾಣಿ ಹಿಡಿದಾಗಿನಿಂದ ಪ್ರತಿ ಹಂತದಲ್ಲಿಯೂ ಬಿಜೆಪಿ ನಾಯಕರು ‘ಷಾಕ್’ ಕೊಟ್ಟಿದ್ದೇ ಹೆಚ್ಚು. ಬಿಜೆಪಿಯ ಮುಂದಿನ ನಡೆಯೇನು ಎಂದು ಕಾಂಗ್ರೆಸ್ ಲೆಕ್ಕ ಹಾಕೋದನ್ನು ಬಿಟ್ಟು, ‘ಅಚ್ಚರಿ’ ಘೋಷಣೆಯ ಮೂಲಕ ಬಿಜೆಪಿಯೇತರ ವಿರೋಧ ಪಕ್ಷಗಳಿಗೆ ಹಿನ್ನಡೆ ಉಂಟುಮಾಡುತ್ತಿದ್ದಾರೆ. ಇಂಥ ಹೊಡೆತವನ್ನು ಸರಿಪಡಿಸಿಕೊಳ್ಳುವ ವೇಳೆಗಾಗಲೇ ಕಾಲ ಮಿಂಚಿ ಹೋಗಿರುವ ಅದೆಷ್ಟೋ ನಿದರ್ಶನಗಳು ಕಳೆದೊಂದು ದಶಕ ದಲ್ಲಿ ಕಾಣಿಸಿವೆ. ಇದರ ಸಾಲಿಗೆ ಇದೀಗ ‘ಭಾರತ ರತ್ನ’ ಪುರಸ್ಕಾರದ ಘೋಷಣೆಯೂ ಸೇರಿದೆ ಎಂದರೆ ತಪ್ಪಾಗುವುದಿಲ್ಲ.

ಲೋಕಸಭಾ ಚುನಾವಣೆಗೆ ದಿನಗಣನೆಯಾಗುತ್ತಿರುವ ಈ ಸಮಯದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಈ ಸಂಬಂಧದ ಆಯ್ಕೆ ಪ್ರಕ್ರಿಯೆ ನಡೆಸಿರುವುದು ಕಾಂಗ್ರೆಸ್‌ಗೆ ಮತ್ತೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ದೇಶದ ಪರಮೋಚ್ಚ ನಾಗರಿಕ ಪುರಸ್ಕಾರವಾಗಿರುವ ಭಾರತ ರತ್ನವನ್ನು, ದೇಶದ ಇತಿಹಾಸ ದಲ್ಲಿ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಐವರಿಗೆ ಘೋಷಿಸಿರುವುದು ಅನೇಕರ ಅಚ್ಚರಿಗೆ ಕಾರಣವಾಗಿದೆ. ೧೯೫೪ರಲ್ಲಿ ಭಾರತ ರತ್ನ ಪುರಸ್ಕಾರ ವನ್ನು ನೀಡಲು ಕೇಂದ್ರ ಸರಕಾರ ಆರಂಭಿಸಿತು. ಮೊದಲ ವರ್ಷವೇ ಮೂವರಿಗೆ ಭಾರತ ರತ್ನ ನೀಡಿ ಗೌರವಿಸಲಾಯಿತು. ಇದಾದ ಬಳಿಕ ೧೯೫೫ರಲ್ಲಿಯೂ ಮೂವರಿಗೆ ಈ ಗೌರವ ನೀಡಲಾಯಿತು. ಇದಾದ ಬಳಿಕ ೧೯೯೧ರ ತನಕ ಒಬ್ಬರಿಗೆ ಅಥವಾ ಇಬ್ಬರಿಗೆ ನೀಡುವ ಸಂಪ್ರದಾಯವಿತ್ತು. ಆದರೆ ೧೯೯೧, ೧೯೯೨, ೯೭ ಹಾಗೂ ೨೦೧೯ರಲ್ಲಿ ತಲಾ ಮೂವರಿಗೆ ಭಾರತ ರತ್ನ ಪುರಸ್ಕಾರವನ್ನು ನೀಡಲಾಗಿದೆ. ಇನ್ನು ೧೯೯೯ರಲ್ಲಿ ಒಮ್ಮೆ ನಾಲ್ವರಿಗೆ ಈ ಗೌರವ ನೀಡಿದ ಉದಾ ಹರಣೆಯಿದೆ.

ಇದನ್ನು ಹೊರತುಪಡಿಸಿದರೆ, ಇದೇ ಮೊದಲ ಬಾರಿಗೆ ಐವರಿಗೆ ಈ ಪುರಸ್ಕಾರವನ್ನು ನೀಡಲಾಗಿದೆ. ಹಾಗೆ ನೋಡಿದರೆ, ೧೯೫೪ರಿಂದ ಇಲ್ಲಿಯವರೆಗೆ ಕೇವಲ ೫೧ ಮಂದಿಗೆ ಭಾರತ ರತ್ನ ನೀಡಲಾಗಿದೆ. ಆದರೆ ಪ್ರತಿವರ್ಷ ನೀಡಲೇಬೇಕು ಎನ್ನುವ ಕಾನೂನಿಲ್ಲ. ಕಳೆದ ೭೫ ವರ್ಷದ ಅವಧಿಯಲ್ಲಿ ಹಲವು ವರ್ಷ ಯಾರಿಗೂ ನೀಡದೇ ಖಾಲಿ ಬಿಟ್ಟಿರುವ ಉದಾಹರಣೆಯೂ ಇದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈ ಬಾರಿ ಐವರಿಗೆ ಭಾರತ ರತ್ನ ಘೋಷಣೆ ಮಾಡಿದ್ದು ಹಲವರಿಗೆ ಅಚ್ಚರಿಯಾಗಿರಬಹುದು. ಈ ಪರಮೋಚ್ಚ ನಾಗರಿಕ ಪ್ರಶಸ್ತಿಯನ್ನು ಈ ಪ್ರಮಾಣದಲ್ಲಿ ನೀಡುವ ಬದಲು ಹಿಂದಿನ ವರ್ಷಗಳಲ್ಲಿಯೇ ನೀಡಬಹುದಾಗಿತ್ತು. ಆದರೆ ಚುನಾವಣೆಯ ಕಾರಣಕ್ಕೆ ಒಂದೇ ವರ್ಷ ಐವರಿಗೆ ಘೋಷಿಸಿದ್ದಾರೆ ಎನ್ನುವ ಆರೋಪವನ್ನು ಹಲವರು ಮಾಡುತ್ತಿದ್ದಾರೆ.

ಹಾಗೆಂದ ಮಾತ್ರಕ್ಕೆ ಕೇಂದ್ರ ಸರಕಾರ ಈ ಪುರಸ್ಕಾರ ಘೋಷಿಸಿರುವ ಐವರಲ್ಲಿ ಇಂಥವರು ಈ ಗೌರವಕ್ಕೆ ಅರ್ಹರಲ್ಲ ಎನ್ನುವ ಮಾತು ಯಾರಿಂದಲೂ ಕೇಳಿ ಬರುತ್ತಿಲ್ಲ. ಆದರೆ ಹಲವು ವರ್ಷಗಳ ಕಾಲ ಭಾರತ ರತ್ನವನ್ನೇ ಘೋಷಿಸದಿರುವ ಉದಾಹರಣೆಯಿರುವಾಗ, ಒಂದೇ ಬಾರಿಗೆ ಐವರಿಗೆ ಘೋಷಿಸಿರುವುದು ಬಹುತೇಕರ ಅಚ್ಚರಿಗೆ ಕಾರಣವಾಗಿದೆ. ಹಾಗೆ ನೋಡಿದರೆ ಕೇಂದ್ರ ಸರಕಾರ ಭಾರತ ರತ್ನ ಘೋಷಿಸಿರುವ ಐವರೂ, ಈ ಗೌರವಕ್ಕೆ ಅರ್ಹರು ಎನ್ನುವುದರಲ್ಲಿ
ಎರಡನೇ ಮಾತಿಲ್ಲ. ಈ ಐವರನ್ನು ಗುರುತಿಸುವಲ್ಲಿ ತೋರಿರುವ ರಾಜಕೀಯ ನಡೆಯನ್ನು ಅರಗಿಸಿಕೊಳ್ಳಲು ಈಗಲೂ ಪ್ರತಿಪಕ್ಷಗಳಿಗೆ ಆಗುತ್ತಿಲ್ಲ ಎನ್ನುವುದು ಸ್ಪಷ್ಟ. ಪ್ರಮುಖವಾಗಿ ಬಿಜೆಪಿ ಚುಕ್ಕಾಣಿಯನ್ನು ಮೋದಿ ಹಾಗೂ ಅಮಿತ್ ಶಾ ಅವರು ಹಿಡಿದ ಬಳಿಕ ಹಿರಿಯರನ್ನು ಮೂಲೆಗುಂಪು ಮಾಡಲಾಗಿದೆ.

ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿದ ಲಾಲ್‌ಕೃಷ್ಣ ಆಡ್ವಾಣಿ ಅವರನ್ನು ಮೋದಿ ಸೈಡ್‌ಲೈನ್ ಮಾಡಿದ್ದಾರೆ ಎನ್ನುವ ಆರೋಪವಿತ್ತು. ಅದರಲ್ಲಿಯೂ ಅಯೋಧ್ಯೆಯ
ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮದ ವೇಳೆ ಆಡ್ವಾಣಿ ಅವರಿಗೆ ಆಮಂತ್ರಣ ನೀಡುವ ವಿಷಯದಲ್ಲಿ ಉಂಟಾದ ಗೊಂದಲ ಈ ಆರೋಪಕ್ಕೆ ಮತ್ತಷ್ಟು ತುಪ್ಪ ಸುರಿದಿತ್ತು. ಆದರೆ ಇದೀಗ ಅವರಿಗೆ ಭಾರತ ರತ್ನ ಘೋಷಿಸುವ ಮೂಲಕ ‘ಬಿಜೆಪಿಯ ಭೀಷ್ಮನನ್ನು ಮರೆತಿಲ್ಲ, ಅವರಿಗೆ ಅತ್ಯುನ್ನತ ಗೌರವ’ ನೀಡಿದ್ದೇವೆ ಎನ್ನುವ ಸ್ಪಷ್ಟ ಸಂದೇಶವನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ಕರಸೇವಕರಿಗೆ ಅವರು ರವಾನಿಸಿದ್ದಾರೆ.

ಆಡ್ವಾಣಿ ಮಾತ್ರವಲ್ಲದೆ ಆಯ್ಕೆಯಾಗಿರುವ ಪ್ರತಿಯೊಬ್ಬರ ಹಿಂದೆಯೂ ಒಂದೊಂದು ರಾಜಕೀಯ ಲೆಕ್ಕಾಚಾರವಿರು ವುದು ಸ್ಪಷ್ಟ. ಬಿಹಾರ ರಾಜಕೀಯದಲ್ಲಿ ಅಧಿಕಾರದಲ್ಲಿರುವುದಕ್ಕಿಂತ ರೈತ ಪರ ಹೋರಾಟದ ಮೂಲಕ ಮನೆಮಾತಾಗಿರುವ ಕರ್ಪೂರಿ ಠಾಕೂರ್, ಬಿಹಾರದಲ್ಲಿ ಉದ್ಯೋಗದಲ್ಲಿ ಮೀಸಲು ತರುವ ಮೂಲಕ ಕ್ರಾಂತಿ ಮೂಡಿಸಿದ್ದರು. ಒಬಿಸಿ ಸಮುದಾಯಗಳಿಗೆ ಮೀಸಲು ನೀಡಿದ ಕಾರಣಕ್ಕೆ, ಈಗಲೂ ಅವರ ಹೆಸರು ಬಿಹಾರದಲ್ಲಿ ‘ಮತ’ಗಳನ್ನು ಸೆಳೆಯುವ
ತಾಕತ್ತು ಹೊಂದಿದೆ. ಠಾಕೂರ್ ಅವರಿಗೆ ಭಾರತ ರತ್ನ ನೀಡುತ್ತಿದ್ದಂತೆ, ಬಿಹಾರದಲ್ಲಿ ಆಗ ಬಹುದಾದ ರಾಜಕೀಯ ಸ್ಥಿತ್ಯಂತರವನ್ನು ಗಮನಿಸಿ ಬಿಹಾರ ಮುಖ್ಯ ಮಂತ್ರಿ ನಿತೀಶ್‌ಕುಮಾರ್ ‘ಇಂಡಿಯ’ ಮೈತ್ರಿ ಕೂಟದಿಂದ ಹೊರಬಂದು, ಬಿಜೆಪಿ ಯೊಂದಿಗೆ ಮರುಮೈತ್ರಿ ಮಾಡಿಕೊಂಡು ಮತ್ತೆ ಅಧಿಕಾರದ ಗದ್ದುಗೆ ಏರಿದರು.

ಇನ್ನು ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಘ ಟನೆಯನ್ನು ಕರ್ನಾಟಕದಿಂದ ಆಚೆಗೂ ವಿಸ್ತರಿಸಬೇಕು ಎನ್ನುವುದು ಪಕ್ಷದ ಹಲವು ವರ್ಷಗಳ ಕನಸಾಗಿದೆ. ಆದ್ದರಿಂದ ತಮಿಳು ನಾಡಿನಲ್ಲಿ ಲೋಕಸಭಾ ಸ್ಥಾನದ ಖಾತೆ ತೆರೆಯಬೇಕು ಹಾಗೂ ಅಖಂಡ ಆಂಧ್ರಪ್ರದೇಶದಲ್ಲಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವ ಲೆಕ್ಕಾಚಾರ ದಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಹಾಗೂ ದೇಶದಲ್ಲಿ ಕೃಷಿ ಕ್ರಾಂತಿ ಮಾಡಿದ ಎಂ.ಎಸ್. ಸ್ವಾಮಿನಾಥನ್ ಅವರಿಗೆ ಭಾರತ ರತ್ನವನ್ನು ಘೋಷಿಸ ಲಾಗಿದೆ.

ಕಾಂಗ್ರೆಸ್‌ನ ಕಟ್ಟಾಳುವಾಗಿದ್ದ ಪಿ.ವಿ. ನರಸಿಂಹರಾವ್ ಅವರು ದೇಶದ ವ್ಯಾಪಾರ, ಉದ್ಯಮ ಹಾಗೂ ವಿದೇಶಿ ಬಂಡವಾಳ ಹೂಡಿಕೆಗೆ ನೀಡಿದ್ದ ಕೊಡುಗೆಯನ್ನು ಗಮನಿಸಿದರೆ, ಅವರಿಗೆ ಯುಪಿಎ ೧ ಅಥವಾ ೨ನೇ ಅವಧಿಯಲ್ಲಿಯೇ ಭಾರತ ರತ್ನ ಗೌರವ ಸಿಗಬೇಕಿತ್ತು. ಆದರೆ ಸೋನಿಯಾ ಗಾಂಧಿ ಅವರೊಂದಿಗೆ ‘ಆತ್ಮೀಯ’ರಾಗಿರಲಿಲ್ಲ ಎನ್ನುವ ಏಕಮಾತ್ರ ಕಾರಣಕ್ಕೆ ಕಾಂಗ್ರೆಸ್ ಪಿ.ವಿ. ನರಸಿಂಹರಾವ್ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಸ್ವತಃ ಹಲವು ಕಾಂಗ್ರೆಸಿಗ ರಲ್ಲಿಯೇ ಅಸಮಾಧಾನವಿದೆ. ಉದಾರೀಕರಣ ನೀತಿಯ ಮೂಲಕ ಇಂದಿನ ಭಾರತಕ್ಕೆ ಮುನ್ನುಡಿ ಬರೆದಿದ್ದ ಪಿ.ವಿ. ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡುವ ಮೂಲಕ, ಕಾಂಗ್ರೆಸಿಗರನ್ನೇ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ದಲ್ಲಿ ಯಶ ಕಂಡಿದ್ದಾರೆ ಪ್ರಧಾನಿ ಮೋದಿ.

ಇದಿಷ್ಟೇ ಅಲ್ಲದೆ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಒಂದಿಷ್ಟು ಮತ ಗಳನ್ನು ಸೆಳೆಯುವಲ್ಲಿ ಮುಂದೆ ಸಫಲರಾಗಲಿದ್ದಾರೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ದೇಶದಲ್ಲಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆದವರಲ್ಲಿ, ಆಹಾರ ಭದ್ರತೆಯ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಸ್ವಾಮಿನಾಥನ್ ಸಹ ಒಬ್ಬರು. ಹಸಿರು ಕ್ರಾಂತಿಯ ವಿಷಯದಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ನೀಡುವ ಮೂಲಕ ತಮಿಳುನಾಡಿನ ಜನರ ಭಾವನೆಗಳನ್ನು ‘ಟಚ್’ ಮಾಡುವಲ್ಲಿ ಒಂದು ಹಂತಕ್ಕೆ ಬಿಜೆಪಿ ಯಶಸ್ವಿಯಾಗಿದೆ. ಈ ಒಂದು ಗೌರವದಿಂದ ತಮಿಳುನಾಡಿನಲ್ಲಿ ಹತ್ತಾರು ಕ್ಷೇತ್ರವನ್ನು ಗೆಲ್ಲುವ ಯಾವುದೇ ನಂಬಿಕೆ ಬಿಜೆಪಿಗಿಲ್ಲ. ಆದರೆ ಸಂಘಟನೆಯೇ ಇಲ್ಲದ ರಾಜ್ಯ ದಲ್ಲಿ ಮುಂದಿನ ಒಂದು-ಎರಡು ದಶಕವನ್ನು ಗಮನದಲ್ಲಿರಿಸಿಕೊಂಡು, ಭಾರತ ರತ್ನದ ಮೂಲಕ ಸಂಘಟನೆಗೆ ಒತ್ತು ನೀಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಆದರೆ ಪ್ರಾದೇಶಿಕ ಅಸ್ಮಿತೆಗೆ ಹೆಚ್ಚು ಒತ್ತುನೀಡುವ ತಮಿಳಿಗರು ಭಾರತ ರತ್ನ ಪುರಸ್ಕಾರಕ್ಕೆ ಮನ್ನಣೆ ನೀಡುವರೋ ಅಥವಾ ಪ್ರಾದೇಶಿಕ ಪಕ್ಷಗಳಿಗೆ ಬೆಂಬಲಿಸುವರೋ ಎನ್ನುವುದನ್ನು ಕಾದು ನೋಡಬೇಕಿದೆಯಷ್ಟೆ.

ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತುಪರಿಸ್ಥಿತಿಯ ವಿರುದ್ಧ ಬಹುದೊಡ್ಡ ಧ್ವನಿಯಾಗಿದ್ದ, ಜಯಪ್ರಕಾಶ್ ನಾರಾಯಣ್ ಅವರೊಂದಿಗೆ ಕಾಂಗ್ರೆಸ್ ವಿರುದ್ಧ ಹೋರಾಡಿದ್ದ ಚರಣ್ ಸಿಂಗ್ ಅವರು ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ತಮ್ಮದೇ ಆದ ‘ಫ್ಯಾನ್‌ಬೇಸ್’ ಹೊಂದಿದ್ದರು. ಜನತಾದಳದಿಂದ ಹೊರಬಂದು, ಅವರು ಸ್ಥಾಪಿಸಿದ್ದ ಲೋಕದಳ ಪಕ್ಷವನ್ನು ಇದೀಗ ಅವರ ಮೊಮ್ಮಗ ಜಯಂತ್ ಚೌಧರಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಚರಣ್ ಸಿಂಗ್ ಅವರಿಗೆ ಭಾರತ ರತ್ನ ಘೋಷಿಸುವ ಮೊದಲು ‘ಇಂಡಿಯ’ ಮೈತ್ರಿಕೂಟದಲ್ಲಿದ್ದ ಜಯಂತ್ ಚೌಧರಿ ಇದೀಗ ಬಿಜೆಪಿಯೊಂದಿಗೆ ಹೋಗಲು ಸಜ್ಜಾಗಿ ನಿಂತಿದ್ದಾರೆ. ಇದಿಷ್ಟೇ ಅಲ್ಲದೆ, ಜಾಟ್ ಸಮುದಾಯಕ್ಕೆ ಸೇರಿರುವ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡುವ ಮೂಲಕ, ಆ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಒಂದು ಹಂತಕ್ಕೆ ಯಶಸ್ವಿಯಾಗಿದ್ದಾರೆ.

ಮೋದಿ ಸರಕಾರ ತೆಗೆದುಕೊಂಡಿರುವ ಈ ತೀರ್ಮಾನ, ಉತ್ತರ ಭಾರತದ ಪ್ರಮುಖ ಮೂರು ರಾಜ್ಯ ಗಳಾದ ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಕನಿಷ್ಠ ೨೫ರಿಂದ ೪೦ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಭಾವ ಬೀರಲಿದೆ ಎನ್ನುವುದು ಸ್ಥಳೀಯ ರಾಜಕೀಯ ಲೆಕ್ಕಾಚಾರವಾಗಿದೆ. ಐದು ಮಂದಿಗೆ ಭಾರತ ರತ್ನ ಪುರಸ್ಕಾರ ಘೋಷಿಸಿರುವ ಹಿಂದೆ ಒಂದೊಂದು ಲೆಕ್ಕಾಚಾರವಿದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಆದರೆ ರಾಜಕೀಯ ಮೀರಿ ನೋಡುವು
ದಾದರೆ, ಈ ಎಲ್ಲರೂ ಭಾರತ ರತ್ನಕ್ಕೆ ಅರ್ಹರು. ನಿಜ ಹೇಳಬೇಕೆಂದರೆ ಪಿ.ವಿ. ನರಸಿಂಹರಾವ್, ಸ್ವಾಮಿನಾಥನ್, ಕರ್ಪೂರಿ ಠಾಕೂರ್ ಹಾಗೂ ಚರಣ್ ಸಿಂಗ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡುವುದಕ್ಕಿಂತ, ಅವರು ಬದುಕಿದ್ದಾಲೇ ಈ ಗೌರವವನ್ನು ನೀಡಬೇಕಿತ್ತು. ರಾಜಕೀಯ ದಾಳಗಳು, ಲೆಕ್ಕಾಚಾರಗಳು ಏನೇ ಇದ್ದರೂ, ದೇಶದ ಅಭಿವೃದ್ಧಿಗೆ ಒಬ್ಬೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎನ್ನುವುದನ್ನು ಮಾತ್ರ ಮರೆಯುವಂತಿಲ್ಲ.

ಇನ್ನು ಈ ವಿಷಯದಲ್ಲಿ ರಾಜಕೀಯವಾಗಿ ಅತಿಹೆಚ್ಚು ಇಕ್ಕಟ್ಟಿಗೆ ಸಿಲುಕಿದ್ದು ಕಾಂಗ್ರೆಸ್ ಎಂದರೆ ತಪ್ಪಾಗುವುದಿಲ್ಲ. ಅದರಲ್ಲಿಯೂ ಚರಣ್ ಸಿಂಗ್, ಪಿ.ವಿ ನರಸಿಂಹ ರಾವ್ ಹಾಗೂ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಿಸಿದ್ದರಿಂದ ಆಯಾ ರಾಜ್ಯಗಳಲ್ಲಿ ಆಗಬಹುದಾದ ರಾಜಕೀಯ ಸ್ಥಿತ್ಯಂತರ ಹಾಗೂ ‘ಇಂಡಿಯ’ ಮೈತ್ರಿಕೂಟದಲ್ಲಿ ಆಗುತ್ತಿ ರುವ ಬದಲಾವಣೆಗಳು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿವೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಹಾಗೆಂದು, ಈ ಐವರಲ್ಲಿ ಯಾರಿಗೆ ಏಕೆ ನೀಡಲಾಗಿದೆ ಎಂದು ಪ್ರಶ್ನಿಸಿದರೂ, ಪಕ್ಷಕ್ಕೆ ಬಹುದೊಡ್ಡ ಡ್ಯಾಮೇಜ್ ಆಗುವುದು ನಿಶ್ಚಿತ ಎನ್ನುವ ಕಾರಣಕ್ಕೆ ‘ಮೌನ’ಕ್ಕೆ ಶರಣಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಯೊಂದು ತೀರ್ಮಾನವನ್ನು ಟೀಕಿಸುವ ಹಲವು ಕಾಂಗ್ರೆಸಿಗರು, ಪಿ.ವಿ.ನರಸಿಂಹ ರಾವ್ ಅವರಿಗೆ ಭಾರತ ರತ್ನ ಘೋಷಣೆ ಮಾಡುತ್ತಿದ್ದಂತೆ, ಒಲ್ಲದ ಮನಸ್ಸಿನಿಂದಲೇ ಅದನ್ನು ಸ್ವಾಗತಿಸಬೇಕಾದ ಅನಿವಾರ್ಯತೆಯಿತ್ತು. ಇನ್ನೆರೆಡು ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾ ವಣೆಯ ಹೊಸ್ತಿಲಲ್ಲಿ, ಈ ರೀತಿಯ ‘ಷಾಕ್’ ಒಂದನ್ನು ಕಾಂಗ್ರೆಸಿನ ಬಹುತೇಕರು ನಿರೀಕ್ಷಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ತೋರಿದ ‘ರಾಜಕೀಯ ಚೆಕ್‌ಮೇಟ್’ಗೆ ಪ್ರತಿಪಕ್ಷಗಳು ಪ್ರತ್ಯಸ ಹುಡುಕುವ ವೇಳೆಗೆ ಲೋಕ ಸಮರ ಎದುರಾಗಲಿದೆ. ಈ ಎಲ್ಲ ರಾಜಕೀಯ ಮೀರಿ ನೋಡುವುದಾದರೆ, ದೇಶದ ಐದು ಅರ್ಹ ರತ್ನಗಳಿಗೆ ಯಾವಾಗಲೋ ಸಿಗಬೇಕಿದ್ದ ಗೌರವ ಈಗಲಾದರೂ ಸಿಕ್ಕಿದೆಯಲ್ಲ ಎನ್ನುವುದು ಸಮಾಧಾನದ ಸಂಗತಿ.

Leave a Reply

Your email address will not be published. Required fields are marked *

error: Content is protected !!