Sunday, 19th May 2024

ಬಜೆಟ್‌ನ ಭರವಸೆಗಳು ಮತ್ತು ವಾಸ್ತವ

ಅಶ್ವತ್ಥಕಟ್ಟೆ

ranjith.hoskere@gmail.com

ದೇಶದಲ್ಲಿ ಇನ್ನೀಗ ಬಜೆಟ್ ಪರ್ವ. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ನಡೆದರೂ, ಈ ಬಾರಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ವರ್ಷ ಒಂದು ತಿಂಗಳು ಮೊದಲೇ ಬಜೆಟ್ ಮಂಡನೆ, ಬಜೆಟ್ ಕಲಾಪಗಳು ನಡೆಯಲಿವೆ. ಇನ್ನೆರಡು ದಿನದಲ್ಲಿ ಕೇಂದ್ರ ಬಜೆಟ್ ಅನ್ನು ವಿತ್ತೀಯ ಸಚಿವೆ ನಿರ್ಮಲಾ
ಸೀತಾರಾಮನ್ ಅವರು ಮಂಡಿಸಲಿದ್ದು, ಅದಾದ ಬಳಿಕ ರಾಜ್ಯಗಳು ತಮ್ಮ ಬಜೆಟ್ ಅನ್ನು ಮಂಡಿಸಲಿವೆ.

ಬಜೆಟ್ ಮಂಡನೆ ಎನ್ನುವುದು ಪ್ರತಿವರ್ಷ ನಡೆಯುವ ಮಾನ್ಯ ಪ್ರಕ್ರಿಯೆ ಎನಿಸಿದರೂ, ಪ್ರತಿವರ್ಷವೂ ಕೇಂದ್ರ ಬಜೆಟ್‌ಗಾಗಿ ಇಡೀ ದೇಶ ಹಾಗೂ ರಾಜ್ಯ ಬಜೆಟ್‌ ಗಾಗಿ ಜನ ಕಾದು ಕೂತಿರುತ್ತಾರೆ. ಸಾರ್ವಜನಿಕ ಜೀವನದ ನಿತ್ಯ ಬಳಕೆ ವಸ್ತು, ತಮಗೆ ಸಿಕ್ಕ ಕೊಡುಗೆಗಳೇನು ಎನ್ನುವುದನ್ನು ತಿಳಿಯುವುದಕ್ಕೆ ಬಹುತೇಕರು ಕಾತರದಿಂದ ಇರುತ್ತಾರೆ. ಇದರೊಂದಿಗೆ ಸಾವಿರಾರು ಕೋಟಿ ರು. ವೆಚ್ಚದಲ್ಲಿ ಘೋಷಣೆಯಾಗುವ ‘ಭರ್ಜರಿ’ ಯೋಜನೆಗಳೇನು ಎಂದು ತಿಳಿಯುವುದು ಅನೇಕರ ಕುತೂಹಲವಾಗಿರುತ್ತದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಸಾರ್ವಜನಿಕರಿಗೆ ಏನಾಗಲಿದೆ ಹಾಗೂ ಆರ್ಥಿಕ ಸ್ಥಿತಿಗತಿ ಗಳೇನಾಗಿದೆ ಎನ್ನುವುದಷ್ಟೇ ಅಲ್ಲದೇ, ಯಾವ ಯೋಜನೆಗಳ ಸ್ಥಿತಿಗತಿಗಳೇನು? ಅವುಗಳಿಗೆ ಬೇಕಿರುವ ಅನುದಾನವೇನು? ಎನ್ನುವುದನ್ನು ಮೀರಿದ, ಜನಸಾಮಾನ್ಯರಿಗೆ ತಿಳಿಯದೇ ಇರುವ ಹತ್ತು ಹಲವು ವಿಷಯಗಳು ಈ ಬಜೆಟ್‌ನಲ್ಲಿರಲಿವೆ. ಅದರಲ್ಲಿಯೂ ಕೇಂದ್ರ ಬಜೆಟ್‌ನಲ್ಲಿನ ಬಹುತೇಕ ಅಂಶಗಳು, ಜನಸಾಮಾನ್ಯರಿಗೆ ‘ಕಬ್ಬಿಣದ ಕಡಲೆ’ಯಾಗಿ ರಲಿವೆ. ಸಾಮಾನ್ಯವಾಗಿ ಪ್ರತೀ ಬಜೆಟ್‌ನಲ್ಲಿ ಒಂದಿಷ್ಟು ಹೊಸ ಯೋಜನೆ, ಒಂದಿಷ್ಟು ಘೋಷಣೆಗಳೊಂದಿಗೆ ಯಾವ ವಸ್ತುವಿನ ದರ ಏರಿಕೆ? ಯಾವುದು ಇಳಿಕೆ? ಇನ್ನೊಂದು ವರ್ಷ ಯಾವ ರೀತಿಯಲ್ಲಿ ದೇಶದ ಅಥವಾ ರಾಜ್ಯದ ಆರ್ಥಿಕತೆ ಇರಲಿದೆ ಎನ್ನುವ ಬಗ್ಗೆ ಮಾಹಿತಿಯಿರುತ್ತದೆ.

ಆದರೆ, ಪ್ರತಿಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗುವ ಹಲವು ‘ಫ್ಯಾನ್ಸಿ’ ಘೋಷಣೆಗಳು ಬಜೆಟ್ ಮಂಡಿಸಿದ ಒಂದೆರೆಡು ವಾರ ಜನಜನಿತವಾಗಿರುತ್ತವೆ. ಅದಾದ ಬಳಿಕ ಬಹುತೇಕ ಸಂಗತಿಗಳು ಘೋಷಣೆಯಾಗಿಯೇ ಉಳಿಯುತ್ತವೆ. ಅಥವಾ ಜಾರಿಗೆ ಬಂದರೂ, ಅನುದಾನದ ಕೊರತೆ ಎನ್ನುವ ಕೊಂಕುಗಳನ್ನು ಎತ್ತಿ, ಯೋಜನೆ ಪೂರ್ಣ ಪ್ರಮಾಣ ದಲ್ಲಿ ಜಾರಿಯಾಗದೇ ಹಾಗೇ ಉಳಿದು ಹೋಗುತ್ತದೆ. ಮುಂದಿನ ವರ್ಷ ಮತ್ತೆ ಬಜೆಟ್ ಮಂಡನೆಯಾಗಿ, ಅದರಲ್ಲಿ ಇನ್ನೊಂದಿಷ್ಟು ಯೋಜನೆಗಳು ಘೋಷಣೆಯಾಗುತ್ತವೆ. ಇದು ಯಾವುದೇ ಒಂದು ಪಕ್ಷ ಅಥವಾ ಸರಕಾರದ ಸಮಸ್ಯೆಯಲ್ಲ.

ಈ ರೀತಿ ಬಜೆಟ್ ಘೋಷಣೆಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗದೇ ಕೇವಲ ಬಜೆಟ್ ಪುಸ್ತಕದಲ್ಲಿರುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿಯೂ ಚುನಾವಣಾ ವರ್ಷದಲ್ಲಿ ಘೋಷಣೆಯಾಗುವ ಬಹುತೇಕ ಘೋಷಣೆಗಳು, ಹಾಗೇ ಉಳಿಯುತ್ತವೆ. ಒಂದು ವೇಳೆ ಸರಕಾರ ಬದಲಾದರೆ ನೂತನ ಸರಕಾರ ಮತ್ತೆ ಬಜೆಟ್ ಮಂಡಿಸುವುದರಿಂದ ಈ ಹಿಂದಿನ ಸರಕಾರಗಳ ಘೋಷಣೆಗಳು ಹಾಗೆಯೇ ಉಳಿದು ಬಿಡುತ್ತವೆ.

ಹಾಗೇ ನೋಡಿದರೆ ಕಳೆದ ವರ್ಷ ರಾಜ್ಯದಲ್ಲಿದ್ದ ಬಿಜೆಪಿ ಸರಕಾರ ಚುನಾವಣೆಗೆ ಹೋಗುವ ಮೊದಲು ಹತ್ತು ಹಲವು ಘೋಷಣೆಗಳನ್ನು ಮಾಡಿತ್ತು. ಅದರಲ್ಲಿಯೂ ಬಸವರಾಜ ಬೊಮ್ಮಾಯಿ ಅವರು, ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ನೀರಾವರಿ, ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹಲವು ಘೋಷಣೆಗಳನ್ನು ಮಾಡಿದ್ದರು. ಆದರೆ ಅವುಗಳ ಜಾರಿಗೆ ಬೇಕಿರುವ ಅನುದಾನವನ್ನು ಮಾತ್ರ ಮೀಸಲಿಟ್ಟಿರಲಿಲ್ಲ. ಉದಾಹರಣೆಗೆ ಎಂಟು ಸಾವಿರ ವಿವೇಕ ಕೊಠಡಿಗಳನ್ನು
ನಿರ್ಮಿಸುವುದಾಗಿ ಘೋಷಿಸಿತ್ತು. ಆದರೆ ಅನುದಾನವನ್ನು ಮಾತ್ರ ಒಂದರಿಂದ ಎರಡು ಸಾವಿರ ಕೊಠಡಿಗಳ ನಿರ್ಮಾಣಕ್ಕೆ ಅಗತ್ಯವಿರುವಷ್ಟು ನೀಡಿತ್ತು. ಇನ್ನುಳಿದ ಆರು ಸಾವಿರ ಕೊಠಡಿಗಳ ನಿರ್ಮಾಣದ ಹೊರೆ ಮುಂದಿನ ಸರಕಾರದ ಮೇಲೆ ಬೀಳುತ್ತದೆ.

ಇದೇ ರೀತಿ ಹತ್ತು ಹಲವು ಇಲಾಖೆಗಲ್ಲಿ ಬಹುದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡು ಶೇ.೨೦ರಷ್ಟು ಯೋಜನೆ ಪೂರ್ಣಗೊಳಿಸುವುದಕ್ಕೆ ಆಗುವಷ್ಟು ಅನುದಾನ
ವನ್ನು ನೀಡಿದ್ದರು. ಯೋಜನೆ ಆರಂಭಗೊಳ್ಳದಿದ್ದರೆ, ಹೊರೆ ಯಾಗುತ್ತಿರಲಿಲ್ಲ. ಆದರೆ ಚುನಾವಣೆಯ ಕಾರಣಕ್ಕೆ ಹರಿಬರಿ ಯಲ್ಲಿ ಅವೆಷ್ಟೋ ಯೋಜನೆಗಳಿಗೆ ಶಂಕುಸ್ಥಾಪನೆ, ಭೂಮಿ ಪೂಜೆ ನೆರವೇರಿಸಿದೆ. ಇದೀಗ ಯೋಜನೆ ಪೂರ್ಣಗೊಳಿಸಲು ಅನುದಾನವಿಲ್ಲದೇ, ಕೆಲಸ ಆರಂಭವಾಗಿ ಅಲ್ಲಿಯೇ ನಿಂತಿವೆ.

ಆರ್ಥಿಕ ಇಲಾಖೆ ಅಧಿಕಾರಿಯೊಬ್ಬರ ಪ್ರಕಾರ, ಕಳೆದ ವರ್ಷ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ಬಜೆಟ್‌ನಲ್ಲಿನ ಯೋಜನೆಗಳು ಕೇವಲ ಒಂದು ಬಾರಿಗೆ ಮುಗಿಯುವ ಯೋಜನೆಗಳಾಗಿರಲಿಲ್ಲ. ಏಕೆಂದರೆ ಪ್ರತಿ ಯೋಜನೆಗೂ ಆರಂಭಿಕ ಹಂತಕ್ಕೆ ಅಗತ್ಯ ಅನುದಾನವನ್ನು ಮಾತ್ರ ಮೀಸಲಿಟ್ಟು ಮುಂದಿನ ವರ್ಷಗಳಲ್ಲಿ ಬಾಕಿ ಅನುದಾನ ಎನ್ನುವ ಲೆಕ್ಕಾಚಾರದಲ್ಲಿ ಸಿದ್ಧಪಡಿಸಲಾಗಿತ್ತು. ಇದರಿಂದಾಗಿ ಬಿಜೆಪಿ ಸರಕಾರದ ಅಂತಿಮ ವರ್ಷದ ಬಜೆಟ್ ಪೂರ್ಣ ಗೊಳಿಸುವುದಕ್ಕೆ ಇನ್ನು ನಾಲ್ಕೈದು ಬಜೆಟ್ ಅಗತ್ಯ ವಿದೆ.

ಆದರೆ ಚುನಾವಣೆ ಬಳಿಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ, ಮಂಡಿಸಿದ ಬಜೆಟ್‌ನಲ್ಲಿ ಮತ್ತೆ ತಮ್ಮ ಘೋಷಣೆಗಳನ್ನು ಸೇರಿಸಿವೆ. ಇದರೊಂದಿಗೆ ಪಂಚಗ್ಯಾರಂಟಿ ಯೋಜನೆಗಳೇ ಬಜೆಟ್‌ನ ಬಹುಪಾಲು ಅನುದಾನವನ್ನು ಬಯಸುವುದರಿಂದ ಯೋಜನೆಗಳು ಕುಂಠಿತಗೊಳ್ಳುತ್ತವೆ. ಬಜೆಟ್ ಮಂಡನೆಯ ವೇಳೆ ಘೋಷಿಸುವ ಯೋಜನೆಗೆ ಅನುದಾನವನ್ನು ಸೂಕ್ತ ರೀತಿಯಲ್ಲಿಟ್ಟರೆ ಮಾತ್ರ ಆ ಯೋಜನೆಗಳು ಪೂರ್ಣಗೊಳ್ಳುತ್ತವೆ. ಮುಂದಿನ ವರ್ಷಕ್ಕೆ ನೋಡಿಕೊಂಡರಾಯಿತು ಎಂದು ಯೋಜನೆ ಘೋಷಿಸಿ, ಒಂದು ವರ್ಷ ಕುಂಠಿತವಾದರೆ ಯೋಜನೆ ಪೂರೈಸುವುದು ಬಹುದೊಡ್ಡ ತಲೆಬಿಸಿಯಾಗುತ್ತದೆ. ಆದ್ದರಿಂದ ಕೇಂದ್ರ ಅಥವಾ ರಾಜ್ಯ ಸರಕಾರಗಳು ಯಾವುದೇ ಘೋಷಣೆಗೂ ಮೊದಲು ಅನುದಾನದ ಲಭ್ಯತೆ ಬಗ್ಗೆ ಎಚ್ಚರವಹಿಸುವುದು ಅತ್ಯಗತ್ಯ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ಇನ್ನು ಇತ್ತೀಚಿನ ದಿನದಲ್ಲಿ ಕೇಂದ್ರ ಸರಕಾರದಿಂದ ರಾಜ್ಯ ಸರಕಾರಗಳಿಗೆ ಅನುದಾನ ಸರಿಯಾದ ರೀತಿಯಲ್ಲಿ ಬರುತ್ತಿಲ್ಲ. ಕೋಟ್ಯಂತರ ರುಪಾಯಿ ಬಾಕಿ ಉಳಿಸಿಕೊಂಡಿದೆ ಎನ್ನುವ ಆರೋಪ ಸರ್ವೇ ಸಾಮಾನ್ಯವಾಗಿದೆ. ಅದರಲ್ಲಿಯೂ ಬಿಜೆಪಿಯೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಸೂಕ್ತ ಅನುದಾನ ನೀಡಿತ್ತಿಲ್ಲ. ಬಜೆಟ್‌ನಲ್ಲಿ ಘೋಷಿಸಿರುವ ಅನುದಾನವನ್ನು ನೀಡುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿವೆ. ಹಾಗೆಂದು ಕೇಂದ್ರ ಬಳಿ ಅನುದಾನದ ಕೊರತೆಯಿಲ್ಲ. ಅದರಲ್ಲಿಯೂ ಮೋದಿ ಸರಕಾರದ ಅವಧಿಯಲ್ಲಿ ಯಾವುದೇ ಯೋಜನೆ ಘೋಷಿಸಿದರೂ, ಅದಕ್ಕೆ ಅಗತ್ಯ ಅನುದಾನವನ್ನು ಮೀಸಲಿರಿಸಿಯೇ
ಘೋಷಣೆ ಮಾಡುತ್ತಾರೆ ಎನ್ನುವುದು ಹಲವು ಆರ್ಥಿಕ ತಜ್ಞರ ಅಭಿಪ್ರಾಯ.

ಆದರೆ ಕಳೆದ ವರ್ಷದ ಬಜೆಟ್‌ನಲ್ಲಿ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯ
ನ್ನಾಗಿ ಘೋಷಿಸಿ, ೫೬೦೦ ಕೋಟಿ ರು. ಅನುದಾನ ನೀಡಲು ಕೇಂದ್ರ ಸರಕಾರ ಘೋಷಣೆ ಮಾಡಿತ್ತು. ಘೋಷಣೆಯಾಗಿ ಒಂದು ವರ್ಷ ಕಳೆಯುತ್ತಾ ಬಂದರೂ ಈ ಅನುದಾನ ಬಂದಿಲ್ಲ ಎನ್ನುವ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಕೇವಲ ಭದ್ರ ಮೇಲ್ದಂಡೆ ಮಾತ್ರವಲ್ಲದೇ ರಾಜ್ಯ ಸರಕಾರದ ಸಹಯೋಗ ದೊಂದಿಗೆ ಕೇಂದ್ರ ಸರಕಾರದ ಯೋಜನೆಗಳನ್ನು ಆರಂಭಿಸಿದರೆ, ಆರಂಭದಲ್ಲಿಯೇ ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲೆಷ್ಟು ಎನ್ನುವ ಸ್ಪಷ್ಟತೆಯನ್ನು
ನೀಡಲಾಗುತ್ತದೆ.

ಉದಾಹರಣೆಗೆ, ಯಾವುದೋ ಒಂದು ಯೋಜನೆಗೆ ೨೦೦ ರು. ಅಗತ್ಯವಿದ್ದರೆ, ಶೇ.೫೦ರಷ್ಟು ಪಾಲನ್ನು ಕೇಂದ್ರ ನೀಡುತ್ತದೆ ಎಂದಾದರೆ, ಕೇಂದ್ರದಿಂದ ರಾಜ್ಯಕ್ಕೆ
ಮೊದಲ ಕಂತಿನಲ್ಲಿ ೫೦ ರು. ಅನುದಾನ ಬರುತ್ತದೆ. ಈ ೫೦ ರು. ಅನುದಾನದೊಂದಿಗೆ ರಾಜ್ಯ ಸರಕಾರ ಹಾಕಬೇಕಿರುವ ೫೦ ರು. ಅನುದಾನವನ್ನು ಸೇರಿಸಿ ೧೦೦ ರು. ಮೌಲ್ಯದ ಕೆಲಸ ವನ್ನು ಪೂರ್ಣಗೊಳಿಸಿದ ವರದಿಯನ್ನು ನೀಡಿದ ಬಳಿಕಯೇ ಎರಡನೇ ಕಂತಿನ ಅನುದಾನ ಬಿಡುಗಡೆಯಾಗುತ್ತದೆ. ಆದರೆ, ಬಹುತೇಕ ಸಮಯದಲ್ಲಿ ರಾಜ್ಯ ಸರಕಾರಗಳು, ಕೇಂದ್ರದಿಂದ ಬರುವ ಅನುದಾನವನ್ನು ಬಳಸಿಕೊಳ್ಳುವುದಿಲ್ಲ.

ಇಂತಿಷ್ಟ ದಿನವಾದರೂ ಅನುದಾನ ಬಳಸಿಕೊಳ್ಳದಿದ್ದರೆ, ಕೇಂದ್ರ ಈ ಅನುದಾನವನ್ನು ಹಿಂಪಡೆಯುತ್ತದೆ. ಇನ್ನು ಕೆಲ ಯೋಜನೆ ಯಲ್ಲಿ ಕೇಂದ್ರದ ಪಾಲಿನ ಅನುದಾನವನ್ನು ಬಳಸಿಕೊಳ್ಳುವ ರಾಜ್ಯ ಸರಕಾರಗಳು, ರಾಜ್ಯ ಖಜಾನೆಯಿಂದ ನೀಡಬೇಕಾದ ಅನುದಾನವನ್ನು ನೀಡುವುದಿಲ್ಲ. ಇದರಿಂದಾಗಿ ಎರಡನೇ
ಕಂತಿನಲ್ಲಿ ಬಿಡುಗಡೆಯಾಗಬೇಕಾದ ಅನುದಾನ ಬಿಡುಗಡೆ ಯಾಗುವುದಿಲ್ಲ. ಒಂದು ವೇಳೆ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರಗಳಿದ್ದರೆ, ‘ಹೊಂದಾಣಿಕೆ’ ಆಧಾರ ದಲ್ಲಿ ಹೆಚ್ಚುವರಿ ಅನುದಾನವನ್ನು ಪಡೆಯಬಹುದು. ಆದರೆ ಬೇರೆ ಬೇರೆ ಪಕ್ಷಗಳು, ಪ್ರತಿಪಕ್ಷಗಳು ಅಧಿಕಾರ ನಡೆಸುತ್ತಿದ್ದರೆ ಹೊಂದಾಣಿಕೆ ಯಾಗದೇ, ಕಾನೂನು ಪ್ರಕಾರವೇ ಎಲ್ಲ ಪ್ರಕ್ರಿಯೆಗಳು ನಡೆಯುವುದರಿಂದ ಕೇಂದ್ರದಿಂದ ಬರಬೇಕಾದ ‘ಫಂಡ್ಸ್’ಗೆ ಬ್ರೇಕ್ ಬೀಳುತ್ತದೆ ಎನ್ನುವುದು ಸ್ಪಷ್ಟ.

ಆರ್ಥಿಕ ಇಲಾಖೆಯಲ್ಲಿನ ಈ ಸೂಕ್ಷ್ಮಗಳು ಅನೇಕರಿಗೆ ತಿಳಿಯುವುದಿಲ್ಲ. ಆದರೆ ಯಾವುದೇ ಒಂದು ಯೋಜನೆ ಆರಂಭಿಸುವಾಗ ಸೂಕ್ತ ಅನುದಾನ ನೀಡದೇ ಆರಂಭಿಸಿ, ಬಳಿಕ ವರ್ಷದಿಂದ ವರ್ಷಕ್ಕೆ ಎಸ್‌ಆರ್ ಮೌಲ್ಯ ಹೆಚ್ಚಳ, ನಿರ್ಮಾಣ ಸಾಮಗ್ರಿ ದರ ಏರಿಕೆ, ಮಾನವ ಸಂಪನ್ಮೂಲದ ದರ ಏರಿಕೆಯಿಂದ ಒಟ್ಟಾರೆ ಯೋಜನೆಯ ಮೊತ್ತ ಹತ್ತಾರು ಪಟ್ಟು ಹೆಚ್ಚಾಗಿರುವ ಉದಾಹರಣೆಗಳು ಅನೇಕವಿದೆ. ಕೆಲವೇ ಲಕ್ಷಗಳಲ್ಲಿ ಮುಗಿಯಬೇಕಿದ್ದ ಕೃಷ್ಣ ಮೇಲ್ದಂಡೆ ಯೋಜನೆಯ
ಇದೀಗ ೫೦ಸಾವಿರ ಕೋಟಿ ರು. ಮೀರಿ ಹೋಗಿದೆ.

ಆರಂಭದಲ್ಲಿ ಐದು ಸಾವಿರ ಕೋಟಿಯ ಆಸುಪಾಸಿನಲ್ಲಿದ್ದ ಎತ್ತಿನಹೊಳೆ ಯೋಜನೆ ಇದೀಗ ೩೨ ಸಾವಿರ ಕೋಟಿ ರು.ಗೆ ಬಂದು ನಿಂತಿದೆ. ಕೇವಲ ನೀರಾವರಿ ಮಾತ್ರವಲ್ಲದೇ, ಯಾವುದೇ ಯೋಜನೆಯನ್ನು ಒಂದು ವರ್ಷ ಸ್ಥಗಿತಗೊಳಿಸಿ ದರೆ ಆ ಯೋಜನೆ ಮೊತ್ತ ಕನಿಷ್ಠ ಶೇ.೧೦ರಿಂದ ೧೫ರಷ್ಟು ಏರಿಕೆಯಾಗುತ್ತದೆ. ಇನ್ನು ರಸ್ತೆ ನಿರ್ಮಾಣ, ಫ್ಲೈಓವರ್‌ಗಳ ನಿರ್ಮಾಣದಲ್ಲಿ ಅರ್ಧ ಕೆಲಸ ಮಾಡಿ ಎರಡು ವರ್ಷ ಕೈಬಿಟ್ಟರೆ, ಆ ಯೋಜನೆಗಳಿಗೆ ಬಳಸಿರುವ ಪಿಲ್ಲರ್ ಸೇರಿದಂತೆ
ಪ್ರತಿಯೊಂದು ಬಳಸಲು ಯೋಗ್ಯವಲ್ಲದೇ, ನಾಶಪಡಿಸಲು ಸಾಧ್ಯವಾಗದ ಸ್ಥಿತಿಗೆ ತಲುಪುತ್ತವೆ ಎನ್ನುವುದು ಸ್ಪಷ್ಟ.

ಸಾಮಾನ್ಯವಾಗಿ ಯಾವುದೇ ನೀರಾವರಿ ಯೋಜನೆಗಳನ್ನು ಆರಂಭಿಸಿದ ವರ್ಷವೇ ಪೂರ್ಣಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಕೆಲವೊಂದಿಷ್ಟು ವರ್ಷ ಎಳೆದುಕೊಂಡು ಹೋಗುತ್ತವೆ. ಆದರೆ ಕಟ್ಟಡ, ರಸ್ತೆ ಸೇರಿದಂತೆ ಇನ್ನಿತರೆ ಯೋಜನೆಗಳಿಗೆ ಸರಿಯಾದ ಅನುದಾನವನ್ನು ಮೀಸಲಿಟ್ಟರೆ, ನಿಶ್ಚಿತವಾಗಿ ಅದೇ ವರ್ಷ ಪೂರೈಸಬಹುದು ಎನ್ನುವುದು ಹಲವರ ಅಭಿಪ್ರಾಯ. ಆದರೆ ಎಲ್ಲ ಸರಕಾರಗಳು, ಪ್ರತಿವರ್ಷ ಇಂತಿಷ್ಟು ಹಣ ಮೀಸಲಿಡುವ ಮೂಲಕ ಯೋಜನೆಗಳನ್ನು ಒಂದಿಷ್ಟು ವರ್ಷ ಎಳೆದಾಡಿ, ಮೂಲ ಯೋಜನಾ ವೆಚ್ಚಕ್ಕಿಂತ ಕನಿಷ್ಠ ಒಂದೆರೆಡು ಪಟ್ಟು ಹೆಚ್ಚುಸುವುದು ಸಹಜವಾಗಿದೆ.

ಈ ಎಲ್ಲದರ ನಡುವೆ ಕೇಂದ್ರ ಸರಕಾರದ ಬಜೆಟ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಹತ್ತಾರು ನಿರೀಕ್ಷೆಗಳನ್ನು ಜನರ ಹೊಂದಿದ್ದಾರೆ. ಈ ಹಿಂದಿನ ಸರಕಾರದ ಪ್ರಮುಖ ತಪ್ಪಾಗಿ ರುವ ಅನುದಾನವಿಲ್ಲದೇ ಯೋಜನೆಯ ಘೋಷಣೆಯನ್ನು ಈ ವರ್ಷವಾದರೂ, ಕೈಬಿಟ್ಟು ಹಾಸಿಗೆ ಇದ್ದಷ್ಟು ಕಾಲು ಚಾಚಲಿ ಎನ್ನುವುದಷ್ಟೇ ಬಹುತೇಕರ ನಿರೀಕ್ಷೆಯಾಗಿದೆ.

Leave a Reply

Your email address will not be published. Required fields are marked *

error: Content is protected !!