Sunday, 19th May 2024

ಬಜೆಟ್ ಎಂದರೆ ಕೊಡುಗೆಗಳಷ್ಟೇ ಅಲ್ಲ !

ಅಶ್ವತ್ಥಕಟ್ಟೆ

ranjith.hoskere@gmail.com

ಲೋಕಸಭಾ ಚುನಾವಣೆ ಎದುರಿಸಲು ಶಸ್ತ್ರಾಭ್ಯಾಸ ಮಾಡುತ್ತಿರುವ ಎಲ್ಲ ಪಕ್ಷಗಳು ಈ ಸಮಯದಲ್ಲಿ ಜನರನ್ನು ಓಲೈಸಲು ‘ಘೋಷಣೆ’ಗಳನ್ನು ಮಾಡುವುದು
ಸರ್ವೇಸಾಮಾನ್ಯ. ಪ್ರತಿಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಜನರನ್ನು ಸೆಳೆಯುವ ಪ್ರಯತ್ನ ಮಾಡಿದರೆ, ಆಡಳಿತಾರೂಢ ಸರಕಾರಗಳು ತಮ್ಮ ಕೊನೆಯ ಬಜೆಟ್‌ನಲ್ಲಿ ಹಲವು ಆಕರ್ಷಕ ಯೋಜನೆಗಳನ್ನು ಘೋಷಿಸಿ, ಜನರನ್ನು ತಮ್ಮತ್ತ ಸೆಳೆಯಲು ಕಸರತ್ತು ಮಾಡುವುದು ಭಾರತದ ರಾಜಕೀಯ ವ್ಯವಸ್ಥೆಯಲ್ಲಿ
ರುವ ‘ಸಿದ್ಧಸೂತ್ರ’.

ಈ ಸೂತ್ರ ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗಷ್ಟೇ ಸೀಮಿತವಲ್ಲ. ಬಹುತೇಕ ಪಕ್ಷಗಳು ತಮ್ಮ ತಮ್ಮ ಅವಧಿಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಈ ಕಾರ್ಯವನ್ನು ಚಾಚೂತಪ್ಪದೆ ಮಾಡಿವೆ. ಇದೇ ಲೆಕ್ಕಾಚಾರದಲ್ಲಿದ್ದ ಬಹುತೇಕರು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ವಾರ ಮಂಡಿಸಿದ ಬಜೆಟ್‌ನಲ್ಲಿಯೂ ಹತ್ತು ಹಲವು ಯೋಜನೆಗಳನ್ನು ನಿರೀಕ್ಷೆ ಮಾಡಿದ್ದರು. ಕರ್ನಾಟಕದಲ್ಲಿನ ಗ್ಯಾರಂಟಿ ಯಶಸ್ಸಿನಿಂದ ದೇಶಾದ್ಯಂತ ಅದೇ ಸೂತ್ರವನ್ನು ಅಳವಡಿಸುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಕೇಂದ್ರ ಸರಕಾರದಿಂದಲೂ ‘ಫ್ರೀ ಬೀ’ ಯೋಜನೆಗಳ ಘೋಷಣೆ ಯಾಗುವುದನ್ನು ಅನೇಕರು ನಿರೀಕ್ಷಿಸಿದ್ದರು.

ಗ್ಯಾರಂಟಿಗಳಿಗೆ ಟಕ್ಕರ್ ಕೊಡುವುದಷ್ಟೇ ಅಲ್ಲದೆ, ಇನ್ನೂ ಹಲವು ಅಕರ್ಷಕ ಯೋಜನೆಗಳ ಪಟ್ಟಿ ಸಿಗುತ್ತದೆ ಎನ್ನುವ ಆಲೋಚನೆ ಹಲವರಲ್ಲಿತ್ತು. ಆದರೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾವು ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಈ ಎಲ್ಲ ನಿರೀಕ್ಷೆಗಳನ್ನು ಮೀರಿ ‘ಅಚ್ಚರಿ’ಯ ರೀತಿಯಲ್ಲಿ ಕೆಲ ಘೋಷಣೆಗಳನ್ನು ಮಾಡಿದ್ದು ಈಗಲೂ ಬಹುಚರ್ಚಿತ ವಿಷಯವಾಗಿದೆ.

ಚುನಾವಣಾ ಹೊಸ್ತಿಲಿನಲ್ಲಿರುವಾಗ ಯಾವುದೇ ಸರಕಾರ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸುವುದಿಲ್ಲ. ಚುನಾವಣೆಗೆ ಮೊದಲು ಮಧ್ಯಂತರ ಬಜೆಟ್ ಮಂಡಿಸಿ, ಚುನಾವಣೆ ಬಳಿಕ ಅಧಿಕಾರಕ್ಕೆ ಬರುವ ನೂತನ ಸರಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವುದು ದೇಶದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಮಧ್ಯಂತರ ಬಜೆಟ್ ಮಂಡಿಸುವ ಬಹುತೇಕ ಸಮಯದಲ್ಲಿ, ಆಡಳಿತಾರೂಢ ಪಕ್ಷಗಳು ಬಜೆಟ್ ಭಾಷಣದ
ಅವಕಾಶವನ್ನು ಬಳಸಿಕೊಂಡು, ಭರ್ಜರಿ ಘೋಷಣೆಗಳನ್ನು ಸೇರಿಸುತ್ತವೆ. ಕೇವಲ ಕಾಂಗ್ರೆಸ್ ಅಥವಾ ಬಿಜೆಪಿಯೇತರ ಪಕ್ಷಗಳಿಂದ ಮಾತ್ರ ಈ ರೀತಿಯ ಘೋಷಣೆಯಾಗಿಲ್ಲ. ಬದಲಿಗೆ ಕಳೆದ ವರ್ಷ ಚುನಾವಣಾ ಹೊಸ್ತಿಲಲ್ಲಿ ಕರ್ನಾಟಕ ದಲ್ಲಿದ್ದ ಬಿಜೆಪಿ ಸರಕಾರವೂ ಭರ್ಜರಿ ಘೋಷಣೆಗಳನ್ನು ಮಾಡಿದ್ದುಂಟು.

ರಾಜ್ಯದಲ್ಲಿದ್ದ ಬಿಜೆಪಿ ಸರಕಾರ ತನ್ನ ಅವಽಯ ಅಂತಿಮ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳಿಗೆ ಸೂಕ್ತ ಅನುದಾನ ನೀಡದೇ ಆಗಿರುವ ಸಮಸ್ಯೆಗಳ ಬಗ್ಗೆ ಕಳೆದ ವಾರದ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಆದರೆ ಈ ರೀತಿ ಘೋಷಣೆಗೆ ಸೀಮಿತವಾಗಿರುವ ಯಾವ ಯೋಜನೆಗಳೂ ಈ ಬಾರಿಯ ನಿರ್ಮಲಾ ಸೀತಾರಾಮನ್ ಅವರ ಮಧ್ಯಂತರ ಬಜೆಟ್‌ನ ಭಾಷಣದಲ್ಲಿ ಕಾಣಿಸಲಿಲ್ಲ. ಈ ಕಾರಣಕ್ಕಾಗಿಯೇ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಬಹುತೇಕರಿಗೆ ‘ಚುನಾ
ವಣಾ ಬಜೆಟ್’ ಎನಿಸಲಿಲ್ಲ.

ಸ್ವತಂತ್ರ ಭಾರತದ ಯಾವುದೇ ಸರಕಾರವಿರಲಿ, ಬಜೆಟ್ ಎನ್ನುವುದನ್ನು ದೇಶದ ಆರ್ಥಿಕತೆಗೆ ಸಂಬಂಽಸಿದ ವಿಷಯ ಎನ್ನುವ ರೀತಿಯಲ್ಲಿ ತೋರಿಸುವ ಪ್ರಯತ್ನವನ್ನು ಮಾಡಲೇ ಇಲ್ಲ. ಬದಲಿಗೆ ಜನರಿಗೆ ಉಚಿತ ಯೋಜನೆ, ಸಹಾಯಧನ ಘೋಷಿಸಲು ಇರುವ ಮಾರ್ಗವೇ ಬಜೆಟ್ ಎನ್ನುವ ರೀತಿಯಲ್ಲಿ ನಡೆದುಕೊಂಡು ಬಂದಿರುವುದು ಎಲ್ಲರಿಗೂ ಗೊತ್ತಿ ರುವ ವಿಷಯ. ಆ ಕಾರಣಕ್ಕಾಗಿಯೇ, ಯಾವುದೇ ಬಜೆಟ್ ಮಂಡಿಸಿದಾಗಲೂ ಬಹುತೇಕರು ‘ತಮಗೇನು ಸಿಕ್ಕಿದೆ’ ಎಂದು ಆಸೆಗಣ್ಣಿನಿಂದ ನೋಡುತ್ತಾರೆ. ಆದರೆ ನೈಜವಾಗಿ ಹೇಳಬೇಕೆಂದರೆ ಬಜೆಟ್ ಎನ್ನುವುದು ಜನರಿಗೆ ನೀಡಬಹುದಾದ ಉಚಿತ ಯೋಜನೆಗಳನ್ನೂ ಮೀರಿ, ದೇಶದ ಆರ್ಥಿಕ ಸ್ಥಿತಿಗತಿಯ ಹಿನ್ನೆಲೆಯಲ್ಲಿ ಆರ್ಥಿಕ ವರ್ಷದಲ್ಲಿ ನೀಲಿನಕ್ಷೆ ಯೊಂದಿಗೆ ದೇಶದ ಭವಿಷ್ಯಕ್ಕೆ ಏನೆಲ್ಲ ‘ಆಸ್ತಿ’ ಸಿದ್ಧಪಡಿಸಲಾಗುತ್ತಿದೆ ಎನ್ನುವುದರ ವರದಿ.

ಈಗಲೂ ವಿಶ್ವದ ಹಲವು ರಾಷ್ಟ್ರ ಗಳಲ್ಲಿ ಬಜೆಟ್ ಎನ್ನುವುದು ಒಂದು ಔಪಚಾರಿಕ ಕಡತವಷ್ಟೆ. ಆದರೆ ನಮ್ಮಲ್ಲಿ ಅನೇಕ ವೇಳೆ ಬಜೆಟ್ ಎನ್ನುವುದನ್ನು ಪಕ್ಷದ
ಪ್ರಣಾಳಿಕೆಯ ರೀತಿ ಸಿದ್ಧಪಡಿಸಿರುವ ಉದಾಹರಣೆಗಳಿವೆ. ಹಾಗೆಂದ ಮಾತ್ರಕ್ಕೆ ಉಚಿತ ಯೋಜನೆಗಳನ್ನು ಘೋಷಿಸುವುದು ತಪ್ಪು, ಅದರಿಂದ ದೇಶದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತದೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಶೋಷಿತರ, ಬಡವರ ಏಳ್ಗೆಗೆ ಹಾಗೂ ಹಿಂದುಳಿದವರ ಅಭಿವೃದ್ಧಿಗೆ ಬೇಕಿರುವ ನೆರವನ್ನು ನೀಡುವುದು ಪ್ರತಿಯೊಂದು ಸ್ಥಾಪಿತ ವ್ಯವಸ್ಥೆಗಳ ಆದ್ಯ ಕರ್ತವ್ಯ. ಆದರೆ ‘ಸಹಾಯ’ವೆಂದರೆ ಏನು ಎನ್ನುವ ಸ್ಪಷ್ಟ ಕಲ್ಪನೆ ಹಾಗೂ ಗಡಿರೇಖೆ ಸರಕಾರಗಳಿಗೆ ಇರಬೇಕು. ಸಮುದಾಯಗಳ ಅಭಿವೃದ್ಧಿ, ಸಾಮಾಜಿಕ ಭದ್ರತಾ ಯೋಜನೆ ಗಳನ್ನು ಜಾರಿಗೊಳಿಸುವುದರಲ್ಲಿ ತಪಿಲ್ಲ. ಇಂಥ ಯೋಜನೆಗಳನ್ನು ಜಾರಿಗೊಳಿಸಿದಾಗ ‘ಅರ್ಹ’ರನ್ನು ಗುರುತಿಸಿಯೋಜನೆಯ ಫಲ ನೀಡುವುದು ಸಹ ಅಷ್ಟೇ ಮುಖ್ಯವಾಗುತ್ತದೆ.

ಉಚಿತ ಘೋಷಣೆಗಳು, ಆರ್ಥಿಕ ಸಹಾಯ ಕೇವಲ ಭಾರತಕ್ಕೆ ಸೀಮಿತ ಎಂದಿಲ್ಲ. ಅಮೆರಿಕದಲ್ಲಿ ಕಪ್ಪುವರ್ಣೀಯರಿಗೆ ಉಚಿತ ಯೋಜನೆ ನೀಡಲಾಗಿದೆ.
ಹಲವು ದೇಶದಲ್ಲಿ ನಿರುದ್ಯೋಗಿ ಯುವಕರಿಗೆ ಆರ್ಥಿಕ ಸಹಾಯವನ್ನು ನೀಡಿರುವ, ನೀಡುತ್ತಿರುವ ಉದಾಹರಣೆಗಳಿವೆ. ಆದರೆ ಯಾವುದೇ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು, ಹಣದ ರೂಪದಲ್ಲಿ ನೀಡಿದರೆ ಅದೊಂದು ತಾತ್ಕಾಲಿಕ ಯೋಜನೆಯಾಗಿರುತ್ತದೆ. ಅದರ ಬದಲಿಗೆ, ಭವಿಷ್ಯದ ಲೆಕ್ಕಾಚಾರ ದೊಂದಿಗೆ ಯೋಜನೆಗಳನ್ನು ರೂಪಿಸಿ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರಿಗೆ ಕೌಶಲ, ಶಿಕ್ಷಣ ಹಾಗೂ ಸ್ವಯಂ ಉದ್ಯೋಗಕ್ಕೆ ನೆರ ವಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಯೋಜಿಸಿದರೆ ಅದು ದೇಶಕ್ಕೆ ಹಾಗೂ ವ್ಯಕ್ತಿಗತವಾಗಿ ಪ್ರಯೋಜನವಾಗುತ್ತದೆ ಎನ್ನುವುದು ಸ್ಪಷ್ಟ.

ಇತ್ತೀಚಿನ ದಿನಗಳಲ್ಲಿ, ‘ಬಿಜೆಪಿ ನಾಯಕರು ಸಾಮಾಜಿಕ ಭದ್ರತಾ ಯೋಜನೆಗಳ ವಿರೋಽಗಳು’ ಎನ್ನುವ ಅರ್ಥದಲ್ಲಿ ಕಾಂಗ್ರೆಸ್ ನಾಯಕರು ಟೀಕಿಸು ತ್ತಿದ್ದಾರೆ. ‘ಯಾವುದೇ ಉಚಿತ ಯೋಜನೆಗಳನ್ನು ನೀಡದ ಬಡವರ-ವಿರೋಧಿ ಸರಕಾರ’ ಎನ್ನುವ ಹಣೆಪಟ್ಟಿಯನ್ನು ಕಟ್ಟುತ್ತಿದ್ದಾರೆ. ಆದರೆ ರೈತರಿಗಾಗಿ ಪಿಎಂ ಕಿಸಾನ್ ಯೋಜನೆ, ಆಯುಷ್ಮಾನ್ ಭಾರತ್, ಸಬ್ಸಿಡಿ ದರದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ, ಉಚಿತ ಅಕ್ಕಿ ಸೇರಿದಂತೆ ಹಲವರು ಯೋಜನೆಗಳು ಕೇಂದ್ರದ ವತಿಯಿಂದ ಜಾರಿಯಲ್ಲಿವೆ. ಈ ಎಲ್ಲವೂ ‘ಗ್ಯಾರಂಟಿ’ ಯೋಜನೆಗಳ ರೀತಿಯಲ್ಲಿ ಜನರಿಗೆ ನೇರವಾಗಿ ನೆರವಾಗುತ್ತವೆ ಎನ್ನುವುದನ್ನು ಮರೆ ಯುವಂತಿಲ್ಲ.

ಮಧ್ಯಂತರ ಬಜೆಟ್ ಮಂಡಿಸಿದ ಬಳಿಕ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರು ನಿರಂತರವಾಗಿ ಮಾಡುತ್ತಿರುವ ಏಕೈಕ ಆರೋಪವೆಂದರೆ, ‘ಮನಮೋಹನ್ ಸಿಂಗ್ ಸರಕಾರಕ್ಕೆ ಹೋಲಿಸಿದರೆ ಬಿಜೆಪಿ ಸರಕಾರದ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಸಾಲವನ್ನು ಎತ್ತಲಾಗಿದೆ. ಇದರಿಂದಾಗಿ ದೇಶದ ಜನರ ಮೇಲೆ ಸಾಲದ ಹೊರೆ ಹೆಚ್ಚುವುದಷ್ಟೇ ಅಲ್ಲದೆ, ಅಭಿವೃದ್ಧಿಯೂ ಕುಂಠಿತವಾಗಲಿದೆ’ ಎಂಬುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿರುವಂತೆ, ಕೇಂದ್ರ ಸರಕಾರದ ಒಟ್ಟು ಸಾಲದ ಮೌಲ್ಯ ೧೯೦ ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ೨೦೨೪-೨೫ನೇ ಸಾಲಿನಲ್ಲಿಯೇ ೧೬.೮೫ ಲಕ್ಷ ಕೋಟಿ ರು. ಸಾಲ ಮಾಡಲು ಯೋಜಿಸಲಾಗಿದೆ.

ಆದರೆ ಯಾವುದೇ ಅಭಿವೃದ್ಧಿಶೀಲ ರಾಷ್ಟ್ರ ಸಾಲ ಮಾಡದೇ ದೂರದರ್ಶಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವೇ ಇಲ್ಲ. ಕೇವಲ ಅಭಿವೃದ್ಧಿಶೀಲ ಮಾತ್ರವಲ್ಲದೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳೂ ಸಾಲ ಮಾಡುವುದು ಅನಿವಾರ್ಯ. ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕದ ಸಾಲದ ಮೊತ್ತ ೩೧.೪ ಲಕ್ಷ ಕೋಟಿ ಡಾಲರ್ ಆಗಿದೆ. ಚೀನಾ ಸುಮಾರು ೧.೩೪ ಟ್ರಿಲಿಯನ್ ಡಾಲರ್ ಸಾಲವನ್ನು ಮಾಡಿದೆ. ಈ ರಾಷ್ಟ್ರ ಗಳು ಮಾತ್ರವಲ್ಲದೆ, ಪ್ರತಿ ಯೊಂದು ದೇಶವು ತನ್ನದೇ ಆದ ಯೋಜನೆಗಳಿಗೆ ವಿವಿಧ ಮೂಲಗಳಿಂದ ಸಾಲ ಎತ್ತುವುದು ಸರ್ವೇಸಾಮಾನ್ಯ.

ದೇಶಗಳು ಮಾತ್ರವಲ್ಲದೆ, ರಾಜ್ಯಗಳು ತಮ್ಮ ಯೋಜನೆಗಳಿಗೆ ವಿವಿಧ ರೂಪದಲ್ಲಿ, ಕೇಂದ್ರ ಸರಕಾರ ಖಾತ್ರಿಯೊಂದಿಗೆ, ವಿಶ್ವಬ್ಯಾಂಕ್ ಸಹಕಾರದೊಂದಿಗೆ ಸಾಲಗಳನ್ನು ಪಡೆಯುತ್ತವೆ. ಆರ್ಥಿಕ ತಜ್ಞರ ಪ್ರಕಾರ, ಯಾವುದೇ ರಾಷ್ಟ್ರ ಅಥವಾ ರಾಜ್ಯವು ಅಸೆಟ್ ವೃದ್ಧಿ (ಆಸ್ತಿ) ಗೆ ಸಾಲ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ದೇಶ ಅಥವಾ ರಾಜ್ಯದ ಆಸ್ತಿಗಳೆಂದರೆ, ನೀರಾವರಿ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ, ಬಂಡಾವಳ ಹೂಡಿಕೆಗಳಾಗಿರುತ್ತವೆ. ಹಾಗೆ ನೋಡಿದರೆ,
ದೇಶ, ರಾಜ್ಯ ಮಾತ್ರವಲ್ಲದೆ ಸಾರ್ವಜನಿಕವಾಗಿ ನೋಡಿದರೂ, ಆಸ್ತಿ ಖರೀದಿ ಅಥವಾ ಬಂಡಾವಳ ಹೂಡಿಕೆ ವೇಳೆ ಸ್ವಂತ ಹಣಕ್ಕಿಂತ ಹೆಚ್ಚಾಗಿ ಸಾಲ ಪಡೆದು ಆ ನಿಟ್ಟಿನಲ್ಲಿ ಮುಂದುವರಿಯುವುದು ಸಾಮಾನ್ಯ ಸಂಗತಿ. ೨೦ ಲಕ್ಷ ರು. ಮೌಲ್ಯದ ಮನೆ ಖರೀದಿಗೆ ಸಾಲ ಮಾಡುವಾಗ, ಕೋಟ್ಯಂತರ ರುಪಾಯಿ ಬಯಸುವ ಯೋಜನೆಗಳನ್ನು ಸರಕಾರದ ಅನುದಾನದಿಂದಲೇ ಪೂರ್ಣಗೊಳಿಸಬೇಕು ಎನ್ನುವ ವಾದವನ್ನು ಒಪ್ಪಲು ಸಾಧ್ಯವಿಲ್ಲ.

ಉದಾಹರಣೆಗೆ ಕರ್ನಾಟಕದ ಒಟ್ಟಾರೆ ನೀರಾವರಿ ಯೋಜನೆಗಳನ್ನು ಪೂರೈಸಲು ಒಂದು ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಅನುದಾನದ ಅಗತ್ಯವಿದೆ. ಹಾಗೆಂದು ಒಂದೇ ವರ್ಷ ಈ ಪ್ರಮಾಣದ ಹಣವನ್ನು ಬಜೆಟ್‌ನಲ್ಲಿ ಎತ್ತಿಡಲು ಸಾಧ್ಯವಿಲ್ಲ. ಆದರೆ ವಿವಿಧ ಯೋಜನೆಗಳಿಗೆ ಸಾಲದ ಸ್ವರೂಪ ದಲ್ಲಿ ಅನುದಾನ ಪಡೆದರೆ ಹಂತಹಂತವಾಗಿ ಮರುಪಾವತಿಸಲು ಸಾಧ್ಯವಾಗುತ್ತದೆ.

ಯಾವುದೇ ಸರಕಾರ ಸಾಲ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಸಾಲದ ಹಣವನ್ನು ಯಾವುದಕ್ಕೆ ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ಮುಖ್ಯವಾಗುತ್ತದೆ. ಸಾಲದ ಹಣದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ರಸ್ತೆ, ಬಂದರು, ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡರೆ, ಅದು ದೇಶ ಅಥವಾ ರಾಜ್ಯದ ಆಸ್ತಿಯಾಗಿ ದಶಕಗಳ ಕಾಲ ಇರುತ್ತದೆ. ಆ ಕಾಮಗಾರಿಯ ಮೂಲಕವೇ ಸಾಲವನ್ನು ತೀರಿಸಲು ಸಾಧ್ಯವಾಗುತ್ತದೆ. ಆದರೆ ಪಡೆದ ಸಾಲವನ್ನು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹಾಗೂ ಬದ್ಧತಾ ವೆಚ್ಚಗಳಿಗೆ ಖರ್ಚು ಮಾಡಿದರೆ ಸಮಸ್ಯೆಯಾಗುತ್ತದೆ. ಬದ್ಧತಾ ವೆಚ್ಚ ಗಳಾದ ಪಿಂಚಣಿ, ಸಾಲ ಮರುಪಾವತಿ, ಸರಕಾರಿ ನೌಕರರ ವೇತನಕ್ಕೆ ವಿನಿಯೋಗಿಸಿದರೆ ಕಷ್ಟವಾಗು ತ್ತದೆ. ಆದ್ದರಿಂದ, ಸಾಲ ಪಡೆಯುವುದನ್ನು ತಪ್ಪು ಎನ್ನಲಾ ಗುವುದಿಲ್ಲ; ಆದರೆ ಸಾಲದ ಮೊತ್ತವನ್ನು ಯಾವುದಕ್ಕಾಗಿ ಬಳಸಲಾಗಿದೆ ಎನ್ನುವುದು ಅತಿಮುಖ್ಯವಾಗುತ್ತದೆ.

ಕೊನೆಯದಾಗಿ, ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಬಗ್ಗೆ ಅನೇಕರು ಹಲವು ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಆದರೆ ಇಷ್ಟು ವರ್ಷ ಆಡಳಿತ ನಡೆಸಿರುವ ಸರಕಾರಗಳು, ಬಜೆಟ್ ಎಂದರೆ ಇದೇ ರೀತಿಯಲ್ಲಿರಬೇಕು ಎನ್ನುವ ಸಿದ್ಧಸೂತ್ರದೊಂದಿಗೆ ಜನರ ಮನಸ್ಥಿತಿಯನ್ನು ಸರಿಹೊಂದಿಸಿ ದ್ದವು. ಅಂಥ ಆಲೋಚನೆಯಲ್ಲಿ ಕೇಂದ್ರದ ಬಜೆಟ್ ವೀಕ್ಷಿಸಿದವರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರಕಾರದ ಅಂತಿಮ ಬಜೆಟ್‌ನಲ್ಲಿ ‘ವಾವ್’ ಎನ್ನುವ ಹಲವು ಅಂಶಗಳು ಕಾಣಿಸದೇ ಇರಬಹುದು. ಆದರೆ ದೇಶದ ಭವಿಷ್ಯದ ಆಲೋಚನೆಯಿಟ್ಟುಕೊಂಡು ನೋಡುವು ದಾದರೆ, ಇದರಲ್ಲಿ ಹಲವು ಸಕಾರಾತ್ಮಕ ಅಂಶಗಳಿರುವುದು ಸ್ಪಷ್ಟ.

Leave a Reply

Your email address will not be published. Required fields are marked *

error: Content is protected !!