Saturday, 18th May 2024

ವ್ಯವಸ್ಥೆಯ ಶುದ್ದೀಕರಣಕ್ಕೆ ಒಬ್ಬೊಬ್ಬರೇ ಸಾಕು

ಚರ್ಚಾ ವೇದಿಕೆ

ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ

ಚುನಾವಣಾ ಸುಧಾರಣೆಗಳನ್ನು ದೇಶದಲ್ಲಿ ಜಾರಿಗೆ ತಂದೇ ಸಿದ್ಧ ಎಂದು ಹಠಕ್ಕೆ ಬಿದ್ದು ಹೋರಾಡಿದ ಶೇಷನ್, ಜಡ್ಡುಗಟ್ಟಿದ ವ್ಯವಸ್ಥೆಯ ಶುದ್ಧೀಕರಣಕ್ಕೆ ನೂರಾರು ಜನರ ಅಗತ್ಯವಿರುವುದಿಲ್ಲ; ಕ್ಷಮತೆ ಮತ್ತು ದೃಢಸಂಕಲ್ಪ ಉಳ್ಳವರಾದರೆ ಒಬ್ಬೊಬ್ಬರೇ ಸಾಕಾಗುತ್ತಾರೆ ಎಂಬುದನ್ನು ಜಗತ್ತಿಗೆ ತೋರಿಸಿದ್ದರು.

೧೯೯೦ರವರೆಗೆ ಭಾರತದಲ್ಲಿ ಚುನಾವಣೆಗಳು ಈಗಿನಂತೆ ವ್ಯವಸ್ಥಿತವಾಗಿ ನಡೆಯುತ್ತಿರಲಿಲ್ಲ, ಎಲ್ಲವೂ ಅಯೋಮಯವಾಗಿರುತ್ತಿತ್ತು. (೧೯೫೨ ಮತ್ತು ೧೯೫೭ರ ಮೊದಲ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರತಿ ಅಭ್ಯರ್ಥಿಗೆ ಅವರ ಚುನಾವಣಾ ಚಿಹ್ನೆಯೊಂದಿಗೆ ಪ್ರತ್ಯೇಕ ಮತಪೆಟ್ಟಿಗೆಯನ್ನು ಇರಿಸಲಾಗುತ್ತಿತ್ತು. ಮತದಾರರು ತಾವು ಮತ ಚಲಾಯಿಸಲು ಬಯಸುವ ಅಭ್ಯರ್ಥಿಯ ಪೆಟ್ಟಿಗೆಯಲ್ಲಿ ಖಾಲಿ ಮತಪತ್ರವನ್ನು ಹಾಕಬೇಕಾಗಿತ್ತು.

ಮೂರನೇ ಚುನಾವಣೆಯ ಹೊತ್ತಿಗೆ ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಚಿಹ್ನೆಯ ಮೇಲೆ ಮುದ್ರೆ ಹಾಕಲು ಅನುಕೂಲ ವಾಗುವ ಬ್ಯಾಲೆಟ್ ಪೇಪರ್ ಅನ್ನು ಪರಿಚಯಿಸಲಾಯಿತು). ‘ಚುನಾವಣೆಗಳು ಅಂದರೆ ಅಕ್ರಮ, ಅಕ್ರಮ ಎಂದರೆ ಚುನಾವಣೆ’ ಎನ್ನುವಂತಿತ್ತು ಆಗಿನ ವ್ಯವಸ್ಥೆ. ಬೂತನ್ನು
ವಶಪಡಿಸಿಕೊಳ್ಳುವುದು, ಮತಪೆಟ್ಟಿಗೆಗಳನ್ನೇ ಹೊತ್ತೊಯ್ದುಬಿ ಡುವುದು, ಚುನಾವಣಾ ಹಿಂಸಾಚಾರಗಳು, ಕೋಮು ಗಲಭೆಗಳು, ಮರುಮತದಾನ ಮತ್ತು ಸರಕಾರಿ ಯಂತ್ರದ ಸಾರಾಸಗಟು ದುರುಪಯೋಗ ಇವುಗಳೆಲ್ಲಾ ಸಾಮಾನ್ಯವಾಗಿ ಬಿಟ್ಟಿತ್ತು. ನೀತಿ ಸಂಹಿತೆಗಳನ್ನಂತೂ ಯಾರೂ ಗಂಭೀ
ರವಾಗಿ ತೆಗೆದುಕೊಳ್ಳುತ್ತಿರಲಿಲ್ಲ.

ಹಣ-ಹೆಂಡಗಳನ್ನು ಎಗ್ಗಿಲ್ಲದೇ ಹಂಚಲಾಗುತ್ತಿತ್ತು. ಈ ಎಲ್ಲ ದುರವಸ್ಥೆಗಳನ್ನು ಮೌನವಾಗಿ ನೋಡುತ್ತಾ ಕುಳಿತಿರುತ್ತಿದ್ದ ಚುನಾವಣಾ ಆಯೋಗ ‘ಒಂದು ಹಲ್ಲಿಲ್ಲದ ಹಾವು’ ಅಷ್ಟೇ ಎನ್ನುವ ಪರಿಸ್ಥಿತಿಯಲ್ಲಿದ್ದಾಗ ಟಿ. ಎನ್.ಶೇಷನ್ (ತಿರುನೆಲ್ಲೈ ನಾರಾಯಣ ಅಯ್ಯರ್ ಶೇಷನ್) ಅವರು ೧೯೯೦ರಲ್ಲಿ ಭಾರತದ ೧೦ನೇ ಮುಖ್ಯ ಚುನಾವಣಾ ಆಯುಕ್ತರಾಗಿ ನಿಯುಕ್ತರಾದರು. ಅಂದಿನ ಪ್ರಧಾನಿ ಚಂದ್ರಶೇಖರ್ ಅವರು ಶೇಷನ್ ಅವರನ್ನು ಈ ಹುದ್ದೆಗೆ
ಆಯ್ಕೆಮಾಡಿದ್ದರು. ಆಗಿನ ಕಾನೂನು ಸಚಿವ ಸುಬ್ರಮಣಿ ಯನ್ ಸ್ವಾಮಿ ಅವರು ಶೇಷನ್ ಅವರ ನೇಮಕಾತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗುತ್ತದೆ.

ಬಹುತೇಕ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ಕಾಲದ ಚುನಾವಣೆಗಳಿಗೆ ಅಂದು ಮುನ್ನುಡಿ ಬರೆದವರು, ರಾಜಿ ಮಾಡಿಕೊಳ್ಳದ ಸ್ವಭಾವದ ಟಿ.ಎನ್.ಶೇಷನ್ ಅವರು ಎನ್ನಬಹುದು. ಭಾರತದಲ್ಲಿನ ಚುನಾವಣಾ ಸುಧಾರಣೆಗಳ ಹರಿಕಾರ ಎಂದು ಕರೆಸಿಕೊಳ್ಳುವ ಮತ್ತು ಚುನಾವಣಾ ಆಯೋಗಕ್ಕೆ
ಇಷ್ಟೊಂದು ಶಕ್ತಿ ಇದೆ ಎಂದು ಮೊದಲ ಬಾರಿಗೆ ತೋರಿಸಿಕೊಟ್ಟ ಶೇಷನ್ ಅವರನ್ನು ೨೦೨೪ರ ಈ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ನಾವು ಸ್ಮರಿಸಲೇಬೇಕು. ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ ೬ ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾದ
ಚುನಾವಣೆಗಳನ್ನು ನಡೆಸಲು, ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳನ್ನು ಏಕಾಂಗಿಯಾಗಿ ಎದುರಿಸಿ ಹೋರಾಟ ಮಾಡಿದವರು ಶೇಷನ್; ರಾಜಕೀಯ ಪಕ್ಷಗಳಿಗೆ ಕಿರಿಕಿರಿ ಆಗುವಷ್ಟರ ಮಟ್ಟಿಗೆ ಮಾದರಿ ನೀತಿ ಸಂಹಿತೆಯನ್ನು, ರಾಜಕೀಯ ಪಕ್ಷಗಳ ವಿರೋಧದ ನಡುವೆಯೂ ನಿರ್ದಯವಾಗಿ ಜಾರಿಗೊಳಿಸಿದ್ದೂ ಅವರೇ.

ಶೇಷನ್ ಅವರು ತಮ್ಮ ಕೆಲಸದ ಆರಂಭದ ದಿನಗಳಲ್ಲೇ ನೂರಾರು ಚುನಾವಣಾ ಅಕ್ರಮಗಳನ್ನು ಗುರುತಿಸಿ ಅವುಗಳನ್ನು ತಡೆಯುವಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು. ಮತದಾರರ ಪಟ್ಟಿಗಳ ತಯಾರಿಕೆಯಲ್ಲಿನ ಮತ್ತು ಮತದಾನ ಕೇಂದ್ರಗಳನ್ನು ಸ್ಥಾಪಿಸುವಲ್ಲಿನ ತಪ್ಪುಗಳು, ಬಲವಂತದ ಚುನಾವಣಾ ಪ್ರಚಾರ, ಪ್ರಚಾರ ಕಾರ್ಯಕ್ಕೆ ಕಾನೂನು ಮಿತಿಗಿಂತ ಹೆಚ್ಚು ಖರ್ಚು ಮಾಡುವುದು, ಮತಗಟ್ಟೆಗಳನ್ನು ಕಬ್ಜಾ ಮಾಡಿಕೊಳ್ಳಲು ಗೂಂಡಾಗಳನ್ನು ಬಳಸುವುದು ಮುಂತಾದ ಅಕ್ರಮಗಳನ್ನು ಶೇಷನ್ ಕಟ್ಟುನಿಟ್ಟಾಗಿ ನಿರ್ಬಂಧಿಸಿದರು. ಅವರು ಅಧಿಕಾರ ವಹಿಸಿಕೊಳ್ಳುವವರೆಗೂ, ರಾಜಕೀಯ ಪಕ್ಷಗಳು ಜನರನ್ನು ಮತಗಟ್ಟೆಗಳಿಗೆ ಸಾಗಿಸುವುದನ್ನು ಸಾಮಾನ್ಯ ಎಂದೇ ಪರಿಗಣಿಸಲಾಗಿತ್ತು. ಆದರೆ ಶೇಷನ್ ಅವರ ಕಾಲದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು.

ಅವರು ಅಧಿಕಾರ ವಹಿಸಿಕೊಂಡಾಗ ಸವಾಲುಗಳು ಅಧಿಕವಾಗಿದ್ದವು, ಆದರೆ ಅವುಗಳಿಗೆ ಶೇಷನ್ ಹೆದರಲಿಲ್ಲ. ‘ನೋಡಿ, ನಾನು ಚೆಂಡಿನಂತೆ. ನೀವು ನನ್ನನ್ನು ಎಷ್ಟು ಹೆಚ್ಚು ಒದೆಯುತ್ತೀರೋ ನಾನು ಅಷ್ಟು ಹೆಚ್ಚು ಪುಟಿದೇಳುತ್ತೇನೆ’ ಎನ್ನುತ್ತಿದ್ದರು ಶೇಷನ್. ಬೋಗಸ್ ಮತದಾನಕ್ಕೆ ಕಡಿವಾಣ ಹಾಕಿ ದೇಶದಲ್ಲಿ ನ್ಯಾಯಯುತವಾದ ಚುನಾವಣೆ ನಡೆಸಬೇಕು ಅಂತಾದರೆ, ಎಲ್ಲಾ ಮತದಾರರಿಗೆ ಸಚಿತ್ರ ಗುರುತಿನ ಚೀಟಿ ನೀಡುವುದು ಅಂದಿನ ಅಗತ್ಯವಾಗಿತ್ತು. ಅಂತೆಯೇ ತನ್ನ ಈ ಆಶಯವನ್ನು ಚುನಾವಣಾ ಆಯೋಗವು ಸರಕಾರಕ್ಕೆ ತಿಳಿಸಿತು. ಕೋಟಿ ಕೋಟಿ ಸಂಖ್ಯೆಯ ಮತದಾರರಿಗೆ ಹೀಗೆ ಫೋಟೋ ಸಹಿತ ಗುರುತಿನ ಚೀಟಿ ನೀಡುವುದು ಭಾರತದಲ್ಲಿ ಅಂದು ಕಲ್ಪನೆಗೂ ಮೀರಿದ ಕೆಲಸವಾಗಿತ್ತು.

ಇದು ಅನಗತ್ಯವಾದ, ಪ್ರಾಯೋಗಿಕವಲ್ಲದ ಮತ್ತು ದುಬಾರಿಯಾದ ಪ್ರಸ್ತಾವನೆಯಾಗಿದೆ ಎಂದು ಸರಕಾರವು ಚುನಾವಣಾ ಆಯೋಗದ ಈ ಆಶಯವನ್ನು ಕಟುವಾಗಿ ಪ್ರತಿರೋಧಿಸಿತು. ಸರಕಾರದ ಅಡೆತಡೆಗೆ ಜಗ್ಗದ ಶೇಷನ್, ‘ಈ ಕೆಲಸಕ್ಕಾಗಿ ಸರಕಾರಕ್ಕೆ ಸಾಕಷ್ಟು ಸಮಯ ನೀಡಲಾಗುತ್ತದೆ; ಅಷ್ಟರೊಳಗಾಗಿ ಮತದಾರರ ಗುರುತಿನ ಚೀಟಿಗಳನ್ನು ನೀಡದಿದ್ದರೆ ೧೯೯೫ರ ಜನವರಿ ೧ರ ನಂತರ ಯಾವುದೇ ಚುನಾವಣೆಗಳನ್ನು ನಡೆಸಲಾಗುವುದಿಲ್ಲ’ ಎಂದು
-ರ್ಮಾನು ಹೊರಡಿಸುವ ಮೂಲಕ ಸರಕಾರದ ಮೇಲೆ ಒತ್ತಡ ಹಾಕಿದರು. ಈ ಕಾರಣಕ್ಕಾಗಿ ಹಲವಾರು ಚುನಾವಣೆಗಳನ್ನು ಮುಂದೂಡಲಾಯಿತು ಕೂಡಾ. ಸರ್ವೋಚ್ಚ ನ್ಯಾಯಾಲಯವು ಅಂತಿಮವಾಗಿ ಮಧ್ಯಸ್ಥಿಕೆ ವಹಿಸಿ, ‘ಮತದಾನವು ನಾಗರಿಕರ ಹಕ್ಕಾಗಿರುವುದರಿಂದ, ಮತದಾರರ ಗುರುತಿನ ಚೀಟಿಗಳ ಕೊರತೆಯಿಂದಾಗಿ ಚುನಾವಣೆಗಳನ್ನು ಅನಿರ್ದಿಷ್ಟವಾಗಿ ಮುಂದೂಡುವುದು ಸರಿಯಾದ ಕ್ರಮವಲ್ಲ’ ಎಂದು ತೀರ್ಪು ನೀಡಿತು.

ಅದಾಗಲೇ ಶೇಷನ್ ಅವರ ಒತ್ತಡದಿಂದಾಗಿ ಸರಕಾರವು ಗುರುತಿನ ಚೀಟಿ ನೀಡುವ ಕೆಲಸಕ್ಕೆ ಶುರುವಿಟ್ಟುಕೊಂಡಿತ್ತು. ಹೀಗೆ, ಎಲ್ಲಾ ಅರ್ಹ ಮತದಾರರಿಗೆ
‘ವೋಟರ್ ಐಡಿ’ಗಳನ್ನು ಪರಿಚಯಿಸಿದ್ದರ ಜತೆಗೆ, ಚುನಾವಣಾ ನೀತಿ ಸಂಹಿತೆ ಜಾರಿಗಾಗಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಅಭ್ಯರ್ಥಿಗಳಿಗೆ ವೆಚ್ಚದ ಮಿತಿಯನ್ನು ನಿಗದಿಪಡಿಸಿದ್ದು, ಚುನಾವಣೆಯ ಸಮಯದಲ್ಲಿ ಮದ್ಯ ಮತ್ತು ಹಣದ ಹಂಚಿಕೆಯನ್ನು ನಿಷೇಧಿಸಿದ್ದು ಶೇಷನ್ ಅವರ ಹೆಗ್ಗಳಿಕೆ. ಮಾತ್ರವಲ್ಲದೆ, ಭಾರತದ ಚುನಾವಣಾ ಆಯೋಗಕ್ಕೆ ಸ್ವಾಯತ್ತ ಸ್ಥಾನಮಾನ, ಅಭ್ಯರ್ಥಿಗಳು ಜಾತಿ ಅಥವಾ ಕೋಮುಭಾವನೆಗಳ ಆಧಾರದ ಮೇಲೆ ಮತ ಕೇಳುವುದನ್ನು ಹಾಗೂ ಚುನಾವಣಾ ಪ್ರಚಾರಕ್ಕಾಗಿ ಧಾರ್ಮಿಕ ಸ್ಥಳಗಳನ್ನು ಬಳಸುವುದನ್ನು ನಿಷೇಧಿಸುವಂಥ ಉಪಕ್ರಮಗಳನ್ನು ಶೇಷನ್ ಕೈಗೊಂಡರು.

ಬೂತ್ ವಶಪಡಿಸಿಕೊಳ್ಳುವಿಕೆಯನ್ನು ಸಂಪೂರ್ಣವಾಗಿ ತಡೆಯಲು, ಬಿಹಾರ ಮತ್ತು ಉತ್ತರಪ್ರದೇಶದಂಥ ರಾಜ್ಯಗಳಲ್ಲಿ ಶೇಷನ್ ಅವರೇ ಸ್ವತಃ
ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಚುನಾವಣಾ ವೆಚ್ಚಗಳಿಗೆ, ಆಡಂಬರದ ಪ್ರಚಾರ-ಪ್ರದರ್ಶನಗಳಿಗೆ ಲಗಾಮು ಹಾಕಿದ್ದು ಮತ್ತು ಇತರ
ಸುಧಾರಣೆಗಳ ಜತೆಗೆ, ೧೯೫೧ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ ೭೭ ಅನ್ನು ಸಹ ಶೇಷನ್ ಲೀಲಾಜಾಲವಾಗಿ ಜಾರಿಗೆ ತಂದರು. ಇದು ಅಭ್ಯರ್ಥಿಗಳು ತಮ್ಮ ಖರ್ಚಿನ ನಿಖರವಾದ ಲೆಕ್ಕವನ್ನು ಇಟ್ಟುಕೊಳ್ಳುವುದನ್ನು ಕಡ್ಡಾಯಗೊಳಿಸಿತು ಮತ್ತು ಅವರು ತಮ್ಮ ಪ್ರಚಾರಕ್ಕಾಗಿ ಖರ್ಚುಮಾಡಬಹುದಾದ
ಮೊತ್ತದ ಮೇಲೆ ಮಿತಿಯನ್ನು ನಿಗದಿಪಡಿಸಿತು. ೧೯೯೩ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಶೇಷನ್ ಅವರು ಚುನಾವಣಾ ಆಯೋಗದ ಪ್ರಧಾನ ಕಚೇರಿಯಿಂದ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದರು. ಚುನಾವಣಾ ಇತಿಹಾಸದಲ್ಲಿ ಪ್ರಥಮ ಬಾರಿಗೆ,
ತಮ್ಮ ಚುನಾವಣಾ ವೆಚ್ಚದ ಲೆಕ್ಕವನ್ನು ಸಲ್ಲಿಸಲು ವಿಫಲರಾಗಿದ್ದಾರೆ ಎನ್ನುವ ಕಾರಣಕ್ಕೆ ಲೋಕಸಭೆಗೆ ಸ್ಪರ್ಧಿಸಿದ್ದ ಅನೇಕ ಅಭ್ಯರ್ಥಿಗಳನ್ನು ಮೂರು ವರ್ಷಗಳ ಕಾಲ ಅನರ್ಹಗೊಳಿಸಿ ಚುನಾವಣಾ ಆಯೋಗವು ಆದೇಶ ಹೊರಡಿಸಿತು. ಅವರು ರಾಜಕಾರಣಿಗಳ ಒತ್ತಡಕ್ಕೆ ಯಾವತ್ತೂ ಮಣಿಯಲಿಲ್ಲ ಮತ್ತು ಸಾಂವಿಧಾನಿಕ ತತ್ವಗಳ ಜತೆಗೆ ಎಂದೂ ರಾಜಿ ಮಾಡಿಕೊಳ್ಳಲಿಲ್ಲ.

೧೯೯೨ರಲ್ಲಿ, ಅವರ ನೇತೃತ್ವದ ಆಯೋಗವು ಬಿಹಾರ ಮತ್ತು ಪಂಜಾಬ್‌ನಲ್ಲಿ ಚುನಾವಣೆಗಳನ್ನು ರದ್ದುಗೊಳಿಸಿದಾಗ, ಕೆಲವು ರಾಜಕಾರಣಿಗಳು ಅವರನ್ನು ಮತ್ತು ಆಯೋಗವನ್ನು ಸಾರ್ವಜನಿಕವಾಗಿ ದೂಷಣೆ ಮಾಡಲು ಪ್ರಾರಂಭಿಸಿದರು. ತಮಿಳುನಾಡಿನ ಜಯಲಲಿತಾ ಅವರಂತೂ ಶೇಷನ್ ಅವರನ್ನು ಆಲ್ಸೇಷನ್ ನಾಯಿಗೆ ಹೋಲಿಸಿ ಮಾತಾಡಿದರು. ಇದ್ಯಾವುದಕ್ಕೂ ಕ್ಯಾರೇ ಎನ್ನದ ಶೇಷನ್, ‘ಕಾನೂನಿನ ಅನ್ವಯ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರುವ ಪ್ರಯತ್ನ ಮಾಡುತ್ತಿದ್ದೇನೆಯೇ ಹೊರತು, ಹಾಲಿ ಇರುವ ಕಾಯ್ದೆಗೆ ಒಂದು ಅಲ್ಪವಿರಾಮ ಅಥವಾ ಪೂರ್ಣವಿರಾಮವನ್ನು ಕೂಡ ನಾನು ಸೇರಿಸಲಿಲ್ಲ. ಕಾಯ್ದೆಯಲ್ಲಿ ಏನು ಹೇಳಲಾಗಿದೆಯೋ ಅದನ್ನು ಮಾತ್ರ ನಿಷ್ಠುರವಾಗಿ ಜಾರಿಗೆ ತರುತ್ತಿದ್ದೇನೆ ಅಷ್ಟೇ’ ಎಂದರು.

ಕಾನೂನನ್ನು ನಿರ್ದುಷ್ಟವಾಗಿ ಪಾಲನೆ ಮಾಡುವುದರ ಮೂಲಕ ಅನೇಕ ಸಲ ಸರಕಾರಗಳನ್ನು ಮತ್ತು ರಾಜಕೀಯ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತಿದ್ದ ಶೇಷನ್ ಅವರ ರೆಕ್ಕೆಗಳನ್ನು ಕತ್ತರಿಸಲು, ಪಿ.ವಿ. ನರಸಿಂಹರಾವ್ ನೇತೃತ್ವದ ಕೇಂದ್ರ ಸರಕಾರವು ಮುಖ್ಯ ಚುನಾವಣಾ ಆಯುಕ್ತರ ಜತೆಗೆ ಇನ್ನೂ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಿಸಿತು. ತನ್ಮೂಲಕ, ಚುನಾವಣಾ ಆಯೋಗದಲ್ಲಿ ಬಹುಮತದ ಆಧಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿತು. ಸರಕಾರದ ಈ ಕ್ರಮದಿಂದ ಅಸಮಾಧಾನಗೊಂಡ ಟಿ.ಎನ್. ಶೇಷನ್ ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಿದರು. ‘ಶೇಷನ್
ಅವರ ರೆಕ್ಕೆಗಳನ್ನು ಕತ್ತರಿಸುವ ಏಕಮಾತ್ರ ಉದ್ದೇಶದಿಂದ ಕೇಂದ್ರವು ಇನ್ನೂ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಿಸುವ ಪ್ರಯತ್ನಕ್ಕೆ ಮುಂದಾಗಿದೆ ಮತ್ತು ಬಹುಮತ ಸೂತ್ರವನ್ನು ವಿಧಿಸಿದೆ’ ಎಂದು ನ್ಯಾಯಾಲಯದಲ್ಲಿ ವಾದಿಸಲಾಯಿತು.

ಸುಪ್ರೀಂ ಕೋರ್ಟ್‌ನಲ್ಲಿ ಟಿ.ಎನ್.ಶೇಷನ್ ಅಥವಾ ಆಯೋಗದ ಪರವಾಗಿ ಹಿರಿಯ ವಕೀಲ ನಾನಿ ಪಾಲ್ಖಿವಾಲಾ ಹಾಜರಾಗಿದ್ದರು. ಆದರೆ, ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ಎ.ಎಂ. ಅಹ್ಮದಿ ನೇತೃತ್ವದ ನ್ಯಾಯಪೀಠವು ಅನಿರೀಕ್ಷಿತವಾಗಿ ಸರಕಾರದ ಪರವಾಗಿ ತೀರ್ಪು ನೀಡಿತು. ಚುನಾವಣಾ ಆಯೋಗಕ್ಕಿದ್ದ ಒಬ್ಬರದೇ ಸಾರಥ್ಯ ಅಲ್ಲಿಂದೀಚೆಗೆ ಕೊನೆಗೊಂಡಿತು. ಆಧ್ಯಾತ್ಮಿಕ ನೆಲೆಯ ವ್ಯಕ್ತಿಯಾಗಿದ್ದ ಶೇಷನ್ ಅವರು ಮೂಲತಃ ತಮಿಳುನಾಡು ಬ್ಯಾಚ್‌ನ ಐಎಎಸ್ ಅಧಿಕಾರಿ. ಭಾರತದ ಮೆಟ್ರೋಮ್ಯಾನ್ ಎಂದು ಕರೆಸಿಕೊಂಡ ಇ.ಶ್ರೀಧರನ್ ಇವರ ಕಾಲೇಜಿನ ಸಹಪಾಠಿಯಾಗಿದ್ದರು.

ಸುಬ್ರಮಣಿಯನ್ ಸ್ವಾಮಿಯವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕೆಲ ಕಾಲ ಶೇಷನ್ ಅವರಿಗೆ ಬೋಧನೆ ಮಾಡಿ ‘ಗುರು’ ಎನಿಸಿಕೊಂಡಿದ್ದರು. ಶೇಷನ್ ಅವರು ರಕ್ಷಣಾ ಕಾರ್ಯದರ್ಶಿ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ ಹುದ್ದೆ ಸೇರಿದಂತೆ ಕೇಂದ್ರ ಸರಕಾರದ ಪ್ರಮುಖ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರೂ, ಚುನಾವಣಾ ಆಯೋಗದ ನೇತೃತ್ವ ವಹಿಸಿದ ನಂತರವಷ್ಟೇ ದೇಶದಲ್ಲಿ ಮನೆಮಾತಾಗಿದ್ದರು. ಅತ್ಯಂತ ಕಠಿಣವಾದ ಚುನಾವಣಾ ಸುಧಾರಣೆಗಳನ್ನು ದೇಶದಲ್ಲಿ ಜಾರಿಗೆ ತಂದೇ ಸಿದ್ಧ ಎಂದು ಹಠಕ್ಕೆ ಬಿದ್ದು ಏಕಾಂಗಿಯಾಗಿ ಹೋರಾಟ ಮಾಡಿದ ಶೇಷನ್ ಅವರು, ಜಡ್ಡುಗಟ್ಟಿದ ವ್ಯವಸ್ಥೆಯನ್ನು ಶುದ್ಧೀಕರಿಸಲು ನೂರಾರು ಜನರ ಅಗತ್ಯವಿರುವುದಿಲ್ಲ; ಕ್ಷಮತೆ ಮತ್ತು ದೃಢಸಂಕಲ್ಪ ಉಳ್ಳವರಾದರೆ ಒಬ್ಬೊಬ್ಬರೇ ಸಾಕಾಗುತ್ತಾರೆ ಎನ್ನುವುದನ್ನು ನಿದರ್ಶನವಾಗಿ ಜಗತ್ತಿಗೆ ತೋರಿಸಿದ್ದರು.

ಒಬ್ಬ ಶೇಷನ್ ಅಂದು ತೆಗೆದುಕೊಂಡ ಸುಧಾರಣೆಯ ನಿರ್ಧಾರಗಳಿಂದ ಜಗತ್ತಿನ ಅತಿದೊಡ್ಡ ಮತ್ತು ಸಂಕೀರ್ಣ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದ ಚುನಾವಣಾ ವ್ಯವಸ್ಥೆಯನ್ನು ಇಂದು ಪ್ರಪಂಚವೇ ಕೊಂಡಾಡುವಂತಾಗಿದೆ. ಹಾಗಾಗಿ, ದೇಶದಲ್ಲಿ ಚುನಾವಣೆ ಬಂದಾಗಲೆಲ್ಲಾ ನಮಗೆ ಶೇಷನ್ ಅವರು ನೆನಪಾಗುತ್ತಾರೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

error: Content is protected !!