Tuesday, 14th May 2024

ಸಮಾನತೆಯೇ ಸಂವಿಧಾನದ ಸೌಂದರ್ಯ

ವಿದ್ಯಮಾನ

ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ

ನಮ್ಮ ಸಂವಿಧಾನದ ಸೌಂದರ್ಯವಿರುವುದೇ ಸಮಾನತೆಯಲ್ಲಿ ಅಂದಮೇಲೆ ಅದು ಯಾವುದೇ ಧರ್ಮೀಯರಿಗೂ ಹೆಚ್ಚುವರಿ ಸೌಲಭ್ಯ ನೀಡಲು ಸಾಧ್ಯವಿಲ್ಲ ತಾನೆ? ಹಾಗೆ ಮಾಡಿದರೆ ಸಂವಿಧಾನದಡಿಯಲ್ಲಿ ಎಲ್ಲರೂ ಸಮಾನರು ಆದರೆ, ಕೆಲವರು ಮಾತ್ರ ಹೆಚ್ಚು ಸಮಾನರು ಎನ್ನುವ ವಿಡಂಬನೆಯಾಗುತ್ತದೆ.

ಯಾವುದೇ ದೇಶದ ಬಹುಜನರ ಬುಡಕಟ್ಟು, ಮತ, ಧರ್ಮ, ಭಾಷೆ, ಸಂಸ್ಕೃತಿ ಮತ್ತು ಆಚಾರ ವಿಚಾರಗಳು ಒಂದು ತೆರನಾಗಿದ್ದು, ಇವುಗಳಿಂದ ಭಿನ್ನವಿರುವ ಬುಡಕಟ್ಟು, ಧರ್ಮ, ಭಾಷೆ ಇತ್ಯಾದಿಗಳನ್ನು ಅನುಸರಿಸುವ ಜನ ಸ್ವಲ್ಪ ಸಂಖ್ಯೆಯಲ್ಲಿದ್ದರೆ ಅವರು ಆ ದೇಶದಲ್ಲಿ ಅಲ್ಪಸಂಖ್ಯಾತ ರೆನ್ನಿಸಿಕೊಳ್ಳುತ್ತಾರೆ. ಬಹುಸಂಖ್ಯಾತರು ಅವಲಂಬಿಸಿರುವ ಧರ್ಮ, ಭಾಷೆ, ಆಚಾರ ವ್ಯವಹಾರಗಳನ್ನೇ ಅಲ್ಪಸಂಖ್ಯಾತರೂ ಅನುಸರಿಸಬೇಕೆ ಅಥವಾ ತಮ್ಮ ಮತ, ಭಾಷೆ ಮತ್ತು ಆಚಾರ ವಿಚಾರಗಳನ್ನು ಅವಲಂಬಿಸಿ ಬಹುಸಂಖ್ಯಾತರೊಂದಿಗೆ ಸಹಬಾಳ್ವೆ ನಡೆಸುವ ಹಕ್ಕು ಅವರಿಗಿರಬೇಕೆ? ಒಂದು ಪಕ್ಷ ಈ ಸೌಲಭ್ಯಕ್ಕೆ ಅವಕಾಶ ಕೊಡುವುದಾದರೆ ಯಾವ ಪ್ರಮಾಣದಲ್ಲಿ ಮತ್ತು ಹೇಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು? ಎನ್ನುವುದು ಎಲ್ಲ ದೇಶಗಳಲ್ಲಿ ಅಲ್ಪಸಂಖ್ಯಾತರ ಹಕ್ಕಿನ ಸಮಸ್ಯೆಯ ಸರಳವಾದ ಪರಿಚಯವಾಗಿದೆ.

ಅಲ್ಪಸಂಖ್ಯಾತರ ಹಕ್ಕಿನ ಸಮಸ್ಯೆ ಇಂದು ನಿನ್ನೆಯದೇನೂ ಅಲ್ಲ ಮತ್ತು ಅದು ಕೇವಲ ಭಾರತಕ್ಕಷ್ಟೇ ಸೀಮಿತವೂ ಅಲ್ಲ. ಶತಮಾನಗಳು ಕಳೆದರೂ ಅಲ್ಪ ಸಂಖ್ಯಾತರು ಬಹುಸಂಖ್ಯಾತ ಮನಸ್ಥಿತಿಯನ್ನು ಗೌರವಿಸಿ ಅವರೊಡನೆ ಬೆರೆತು ಜೀವಿಸಲಾಗದೇ, ತಮ್ಮ ತನವನ್ನು  ಉಳಿಸಿಕೊಳ್ಳಲು ನಿರಂತರ ಯತ್ನ ಮಾಡುತ್ತಿರುವುದನ್ನು ನಾವು ಕಾಣುತ್ತೇವೆ. ತಾವು ಸುಖ ಶಾಂತಿಯಿಂದ ಜೀವಿಸುತ್ತಿರುವ ರಾಷ್ಟ್ರದಲ್ಲಿ ಅಗಾಗ ಶಾಂತಿ ಭಂಗವನ್ನು ಉಂಟು ಮಾಡುವುದರ ಮೂಲಕ ದೇಶದ ಪ್ರಗತಿಗೆ ತಾವೇ ಅಡ್ಡಗಾಲಾಗುತ್ತಿರುವ ನಿದರ್ಶನಗಳೂ ನಮ್ಮ ಮುಂದೆ ಬೇಕಾದಷ್ಟಿವೆ. ಈ ಕಾರಣಕ್ಕಾಗಿ ಅಲ್ಪ ಸಂಖ್ಯಾ ತರುಗಳನ್ನು ಸ್ಥಳಾಂತರಗೊಳಿಸುವುದು ಅಥವಾ ಇವರಿಗಾಗಿಯೆ ದೇಶದಲ್ಲಿ ಪ್ರತ್ಯೇಕ ಭಾಗವೊಂದನ್ನು ಗುರುತಿಸುವುದು ಅಷ್ಟು ಸುಲಭವೂ ಅಲ್ಲ ಮತ್ತು ಸರಿಯೂ ಅಲ್ಲ.

ಹಾಗಾಗಿಯೇ ನಾಗರಿಕ ಪ್ರಜ್ಞೆ ಹೊಂದಿದ ಪ್ರತಿ ದೇಶದಲ್ಲೂ ಮಾನವ ಹಕ್ಕುಗಳನ್ನು ಸಂರಕ್ಷಿಸುವುದಕ್ಕಾಗಿ ಅಲ್ಪಸಂಖ್ಯಾತರಿಗೆ ಕೆಲವು ವಿಶೇಷ ಹಕ್ಕು ಗಳನ್ನು ಸಂವಿಧಾನದಲ್ಲಿ ನೀಡಲಾಗುತ್ತದೆ. ಭಾರತ ಸಂವಿಧಾನದಲ್ಲಿಯೂ ಅಲ್ಪಸಂಖ್ಯಾತರ ಹಕ್ಕುಗಳನ್ನು ಮೂಲಭೂತ ಹಕ್ಕುಗಳೆಂದೇ ಪರಿಗಣಿಸ ಲಾಗಿದೆ. ರಾಷ್ಟ್ರ ಮತ್ತು ಸಮಾಜದ ಒಟ್ಟಾರೆ ಹಿತಕ್ಕೆ ಧಕ್ಕೆ ಬಾರದಂತೆ, ಅಲ್ಪಸಂಖ್ಯಾತರು ಬಹುಸಂಖ್ಯಾತರ ದುಂಡಾವರ್ತನೆಗೆ ಒಳಗಾಗದಂತೆ ಅಥವಾ ಬಹುಸಂಖ್ಯಾತರ ಮೇಲೆ ಅಲ್ಪಸಂಖ್ಯಾತರು ದುಂಡಾವರ್ತನೆ ನಡೆಸದಂತೆ ಇದ್ದು ಬಹುಸಂಖ್ಯಾತರಂತೆ ದೇಶವು ಸರ್ವ ಪ್ರಥಮ ಹಾಗೂ ಸರ್ವೋಪರಿ ಎನ್ನುವುದನ್ನು ಒಪ್ಪಿ ತಮ್ಮ ತಮ್ಮ ಧರ್ಮ, ಭಾಷೆ ಮತ್ತು ಆಚಾರ ವ್ಯವಹಾರಗಳನ್ನು ಉಳಿಸಿಕೊಳ್ಳಲು ಹಾಗೂ ಬೆಳೆಸಿಕೊಳ್ಳಲು ಅಗತ್ಯ ಅನುಕೂಲ ಗಳನ್ನೂ ನಮ್ಮ ಸಂವಿಧಾನದಲ್ಲಿ ಉದಾರತೆಯಿಂದ ಕಲ್ಪಿಸಿಕೊಡಲಾಗಿದೆ.

ಭಾರತೀಯ ಕಾನೂನುಗಳ ಅಡಿಯಲ್ಲಿ ಅಲ್ಪಸಂಖ್ಯಾತರ ವ್ಯಾಖ್ಯಾನ ಏನಿದೆ ಎಂದು ನೋಡುವುದಾದರೆ- ‘ಅಲ್ಪ ಸಂಖ್ಯಾತರು’ ಎಂಬ ಅಭಿವ್ಯಕ್ತಿಯು ಭಾರತದ ಸಂವಿಧಾನದ ಕೆಲವು ವಿಽಗಳಲ್ಲಿ ಕಂಡುಬರುತ್ತದೆಯಾದರೂ ಎಲ್ಲಿಯೂ ವಿವರವಾಗಿ ಹಾಗೂ ನಿಖರವಾಗಿ ವ್ಯಾಖ್ಯಾನಿಸಲಾಗಿಲ್ಲ
ಎಂಬುದನ್ನು ಗಮನಿಸಬೇಕು. ಹಾಗಾದರೆ ಭಾರತದಲ್ಲಿ ಅಲ್ಪಸಂಖ್ಯಾತರು ಅಂದರೆ ಯಾರು? ಪ್ರಸ್ತುತ, ಕೇಂದ್ರ ಸರಕಾರವು ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗದ ಕಾಯಿದೆ, ೧೯೯೨ರ ಅಡಿಯಲ್ಲಿ ಅಧಿಸೂಚಿಸಲಾದ ಸಮುದಾಯಗಳನ್ನು ಮಾತ್ರ ಅಲ್ಪಸಂಖ್ಯಾತರು ಎಂದು ಪರಿಗಣಿಸಿದೆ.

ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಪಾರ್ಸಿಗಳನ್ನು ಅಲ್ಪಸಂಖ್ಯಾತರು ಎಂದು ಮೊದಲು ಸೂಚಿಸಲಾಗಿತ್ತು. ನಂತರ ಜೈನರನ್ನೂ ಈ ಪಟ್ಟಿಗೆ ಸೇರಿಸಲಾಯಿತು. ಭಾರತದಲ್ಲಿ ಒಂದು ವಿಚಿತ್ರ ಸನ್ನಿವೇಶ ಇದೆ. ಪೂರ್ಣವಾಗಿ ದೇಶವನ್ನು ಗಣನೆಗೆ ತೆಗೆದುಕೊಂಡಾಗ ಹಿಂದೂಗಳು ಬಹುಸಂಖ್ಯಾತರು ಎಂಬುದು ನಿಜ. ಆದರೆ, ಪಂಜಾಬ್, ಜಮ್ಮು-ಕಾಶ್ಮೀರದಲ್ಲಿ ಹಾಗೂ ಹಲವು ಈಶಾನ್ಯ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತ ರಾಗಿದ್ದಾರೆ. ಹಾಗಿದ್ದಾಗ, ಅಲ್ಲಿ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಎಲ್ಲ ವಿಶೇಷ ಸೌಲಭ್ಯಗಳು ಹಿಂದೂಗಳಿಗೆ ಸಿಗಬೇಕು ತಾನೆ? ಎಂದು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

೨೦೧೭ರ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ನೇಮಿಸಿರುವ ಸಮಿತಿಯ ವರದಿ ಪ್ರಕಾರ ಕೇವಲ ೬ ಸಮುದಾಯಗಳಿಗೆ ಅಲ್ಪ
ಸಂಖ್ಯಾತ ಸ್ಥಾನಮಾನ ನೀಡಿದ್ದು, ಸಾಂವಿಧಾನಿಕ ಇತಿಮಿತಿಗಳ ಕಾರಣದಿಂದ ಅಲ್ಲಿ ಹಿಂದೂಗಳನ್ನು ಅಲ್ಪ ಸಂಖ್ಯಾತರೆಂದು ಮಾನ್ಯ ಮಾಡಲು
ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು. ಆದರೆ ಆಯಾ ರಾಜ್ಯಗಳು ತಮ್ಮದೇ ಆದ ಅಲ್ಪಸಂಖ್ಯಾತ ವರ್ಗೀಕರಣ ಮಾಡಿಕೊಳ್ಳಬಹುದು ಎಂದು
ಕೂಡಾ ಹೇಳಿತ್ತು. ರಾಜ್ಯಮಟ್ಟದಲ್ಲಿ ಅಲ್ಪಸಂಖ್ಯಾತರನ್ನು ಗುರುತಿಸಲು ಮತ್ತು ಇತರ ಸಮುದಾಯಗಳಿಗಿಂತ ಕಡಿಮೆ ಇರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಾಗ ಅದರ ಮುಂದೆ ಲಕ್ಷದ್ವೀಪ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಜಮ್ಮು-ಕಾಶ್ಮೀರ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ಪಂಜಾಬ್ ಪ್ರದೇಶಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಎಂದು ಜನಗಣತಿಯ ದಾಖಲೆಯೊಂದಿಗೆ ವಾದ ಮಂಡಿಸಲಾಯಿತು.

ಈ ಸ್ಥಳಗಳಲ್ಲಿ ಆಯಾ ಬಹುಸಂಖ್ಯಾತ ಸಮುದಾಯಗಳು ಅನುಭವಿಸುತ್ತಿರುವ ಅಲ್ಪಸಂಖ್ಯಾತರ ಪ್ರಯೋಜನಗಳನ್ನು ಅಲ್ಲಿ ನಿಜವಾಗಿಯೂ ಅಲ್ಪ ಸಂಖ್ಯಾತರಾದ ಹಿಂದುಗಳಿಗೆ ನಿರಾಕರಿಸಲಾಗುತ್ತಿದೆ ಎನ್ನುವ ವಾಸ್ತವವನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಲಾಯಿತು. ‘ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವ ಕಾರಣದಿಂದ ಅವರು ಸದರಿ ರಾಜ್ಯಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಲು ಸಾಧ್ಯವಿಲ್ಲ’ ಎನ್ನುವ ವಾದ ವನ್ನು ನ್ಯಾಯಾಲಯವು ಸಾರಾಸಗಟಾಗಿ ತಿರಸ್ಕರಿಸಿತು ಮತ್ತು ಹಿಂದೂಗಳು ಅಲ್ಪಸಂಖ್ಯಾತ ಸಮುದಾಯವೇ ಎಂಬುದನ್ನು ನಿರ್ಧರಿಸಲು ಆಯಾಯಾ ರಾಜ್ಯಗಳ ಸ್ಥಿತಿಯನ್ನು ಪರಿಗಣಿಸಿ ಅಲ್ಲಿನ ಸರಕಾರಗಳೇ ತೀರ್ಮಾನಿಸಬೇಕಾಗುತ್ತದೆ ಎಂದು ಹೇಳಿತು.

ಪಾಕಿಸ್ತಾನ, ಅಫ್ಘಾನಿಸ್ತಾನ ಮುಂತಾದ ಇಸ್ಲಾಂ ಬಾಹುಳ್ಯವಿರುವ ದೇಶಗಳಲ್ಲಿಯಂತೆ ಅಲ್ಪಸಂಖ್ಯಾತರು ಭಾರತದಲ್ಲಿ ನಿರ್ಗತಿಕರಾಗಿಲ್ಲ. ಎಲ್ಲರಂತೆ ಸಂತಸದ ಮತ್ತು ಸುರಕ್ಷತೆಯ ಜೀವನ ನಡೆಸುತ್ತಿದ್ದಾರೆ ಎನ್ನುವುದಕ್ಕೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ಅ ಸಮುದಾಯದ ಜನಸಂಖ್ಯೆಯೇ ಸಾಕ್ಷ್ಯಾಧಾರವಾಗಿದೆ (ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮುಂತಾದ ದೇಶಗಳಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರು ವ ವರದಿ ಇದೆ). ನಮ್ಮ ದೇಶದಲ್ಲಿ ಧರ್ಮಾಧಾರಿತ ಅಲ್ಪಸಂಖ್ಯಾತರು ಮುಖ್ಯಮಂತ್ರಿ, ರಾಜ್ಯಪಾಲ, ರಾಷ್ಟ್ರಪತಿ ಮುಂತಾದ ಅನೇಕ ಪ್ರಮುಖ ಹುದ್ದೆಗಳನ್ನು ಸಮಾನವಾಗಿ ಪಡೆದಿದ್ದನ್ನು ನಾವು ಕಾಣುತ್ತೇವೆ.

ಈ ವಿಷಯದಲ್ಲಿ ನಮ್ಮ ದೇಶ ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ಯಾವತ್ತೂ ತಾರತಮ್ಯ ಮಾಡಲಿಲ್ಲ. ಅಲ್ಪಸಂಖ್ಯಾತರು ಭಾರತದಲ್ಲಿ ಗರಿಷ್ಠ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ, ಭಾರತವೇ ಅಲ್ಪಸಂಖ್ಯಾತರಿಗೆ ಹೆಚ್ಚು ಸುರಕ್ಷಿತ ದೇಶ ಮತ್ತು ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಲ್ಪ ಸಂಖ್ಯಾತರ ಮೇಲೆ ನಿರ್ಬಂಧಗಳು ಕಡಿಮೆ ಎನ್ನುವುದಕ್ಕಿಂತ ಇಲ್ಲವೇ ಇಲ್ಲ ಎಂದು ಹೇಳಬಹುದು. ಭಾರತದ ಸಂವಿಧಾನವು ಸಂಸ್ಕೃತಿ ಮತ್ತು ಶಿಕ್ಷಣ ಎರಡರಲ್ಲೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸುವ ವಿಶಿಷ್ಟ ವಿಧಿಗಳನ್ನು ಹೊಂದಿದೆ ಎನ್ನುವುದನ್ನು ಕುರಿತು ಜಾಗತಿಕವಾಗಿ ಅಧ್ಯಯನ ಮಾಡಿದ ಅಂತಾರಾಷ್ಟ್ರೀಯ ವರದಿಗಳು ಸಾರುತ್ತವೆ.

ಭಾರತದ ನಂತರದ ೪ ಸ್ಥಾನಗಳಲ್ಲಿ ಪನಾಮಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಅಮೆರಿಕ ದೇಶಗಳಿವೆ. ತಮಾಷೆ ಎಂದರೆ, ನರೇಂದ್ರ ಮೋದಿಯವರ ಆಡಳಿತದಲ್ಲಿ ಮುಸ್ಲಿಮರು ಆತಂಕ ಅನುಭವಿಸುತ್ತಿದ್ದಾರೆ ಎಂದು ಪ್ರಚಾರ ಮಾಡಲು ಹೊರಟಿದ್ದ ಬಿಬಿಸಿ ಸುದ್ದಿ ಸಂಸ್ಥೆಯಿರುವ ಇಂಗ್ಲೆಂಡ್ ದೇಶ ಈ ವರದಿಯಲ್ಲಿ ೫೪ನೇ ಸ್ಥಾನದಲ್ಲಿದೆಯಂತೆ. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಎಂದಕೂಡಲೇ ನಮ್ಮ ಮನಸ್ಸಿಗೆ ಇನ್ನುಳಿದ ಐದು ಅನುಸೂಚಿತ ಸಮುದಾಯಗಳು ಬರುವುದೇ ಇಲ್ಲ. ಅಲ್ಪಸಂಖ್ಯಾತರು ಎಂದಕೂಡಲೇ ೬ ಸಮುದಾಯಗಳ ಪೈಕಿ ಮುಸ್ಲಿಮರೆಂದೇ ಥಟ್ಟನೆ ಅನಿಸುವುದು ವಿಚಿತ್ರ ವೆನಿಸಿದರೂ ಸತ್ಯ. ಅದಕ್ಕೆ ಕಾರಣ, ಸ್ವಾತಂತ್ರ್ಯಾ ನಂತರ ಬಿಜೆಪಿ ಪಕ್ಷವನ್ನು ಹೊರತುಪಡಿಸಿ ಹೆಚ್ಚು ಕಡಿಮೆ ಉಳಿದೆಲ್ಲ ರಾಜಕೀಯ ಪಕ್ಷಗಳು ಕೇವಲ ಮತಾಸಕ್ತಿಯಿಂದ ಸತತವಾಗಿ ಅಲ್ಪಸಂಖ್ಯಾತರನ್ನು ಅದರಲ್ಲೂ ಮುಸ್ಲಿಂ ಸಮುದಾಯವನ್ನು ಧ್ರುವೀಕರಣ ಮಾಡುತ್ತಾ ಬಂದಿರುವುದೇ ಆಗಿದೆ.

ಈ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರ ಕಲ್ಯಾಣದ ಬಗ್ಗೆ ಮಾತನಾಡುವಾಗ ಮುಸ್ಲಿಮರನ್ನು ಕೇಂದ್ರ ಸ್ಥಾನದಲ್ಲಿಟ್ಟೇ ಮಾತಾಡುತ್ತವೆ. ಉಳಿದ ಐದು ಅಲ್ಪಸಂಖ್ಯಾತ ಸಮುದಾಯಗಳು ಚುನಾವಣೆಗಳಲ್ಲಿ ನಿರ್ಣಾಯಕವಲ್ಲದೇ ಇರುವುದರಿಂದ ಇವಕ್ಕೆ ಲೆಕ್ಕಕ್ಕೇ ಇಲ್ಲ. ಮುಸ್ಲಿಮರು ಭಾರತದ ಜನಸಂಖ್ಯೆ ಯ ಸುಮಾರು ಶೇ.೧೪ರಷ್ಟು, ಅಂದರೆ ೨೦ ಕೋಟಿಗೂ ಮಿಕ್ಕಿ ಇರುವುದು ಮತ್ತು ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸ್ಥಿತಿಯಲ್ಲಿ ಇರುವು ದರಿಂದ ಇವರ ಓಲೈಕೆಗೆ ತಾ ಮುಂದು ನಾ ಮುಂದು ಎಂದು ಪಕ್ಷಗಳು ಮುಗಿಬೀಳುತ್ತವೆ.

ನಮ್ಮ ಸಂವಿಧಾನದ ಸೌಂದರ್ಯವಿರುವುದೇ ಸಮಾನತೆಯಲ್ಲಿ ಅಂದಮೇಲೆ ಅದು ಯಾವುದೇ ಧರ್ಮೀಯರಿಗೂ ಹೆಚ್ಚುವರಿ ಸೌಲಭ್ಯ ನೀಡಲು ಸಾಧ್ಯವಿಲ್ಲ ತಾನೆ? ಹಾಗೆ ಮಾಡಿದರೆ ಸಂವಿಧಾನದಡಿಯಲ್ಲಿ ಎಲ್ಲರೂ ಸಮಾನರು ಆದರೆ, ಕೆಲವರು ಮಾತ್ರ ಹೆಚ್ಚು ಸಮಾನರು ಎನ್ನುವ ವಿಡಂಬನೆ ಯಾಗುತ್ತದೆ. ಅಲ್ಪಸಂಖ್ಯಾತರ ಸುರಕ್ಷತೆಗೆ ಅಥವಾ ಅವರ ಧಾರ್ಮಿಕ ಹಕ್ಕುಗಳ ರಕ್ಷಣೆಗೆ ಇರುವ ವಿಧಿಗಳಾವುವೂ ಅವರಿಗೆ ವಿಶೇಷ ಹಕ್ಕನ್ನು ನೀಡುವು ದಿಲ್ಲ, ದೇಶದ ಸಾಮಾನ್ಯ ಪ್ರಜೆಗಳಿಗೆ ಇರುವ ಹಕ್ಕನ್ನೇ ಇವರಿಗೂ ಸಮಾನವಾಗಿ ದಯಪಾಲಿಸಿದೆ ಅಷ್ಟೆ. ಅಲ್ಪಸಂಖ್ಯಾತರಿಗೆ ವಿಶೇಷ ಹಕ್ಕುಗಳನ್ನು ಭಾರತದ ಸಂವಿಧಾನ ನೀಡಿದೆ ಎನ್ನುವುದು ಕಾನೂನಿನ ಪ್ರಕಾರ ಸರಿಯಾದ ಮಾತಾಗುವುದಿಲ್ಲ, ಭಾರತದಲ್ಲಿ ಯಾವ ವ್ಯಕ್ತಿಯೂ ಅವನ ಧಾರ್ಮಿಕ ಅಸ್ಮಿತೆಯ ಕಾರಣದಿಂದಾಗಿ ಹೆಚ್ಚುವರಿ ಹಕ್ಕನ್ನು ಮತ್ತು ಸೌಲಭ್ಯಗಳನ್ನು ಸಂವಿಧಾನದ ಅಡಿಯಲ್ಲಿ ಅನುಭವಿಸಲಾಗದು, ದೇಶದ ಬಹುಸಂಖ್ಯಾತ ರಿಗಿಲ್ಲದ ಯಾವ ಹೆಚ್ಚುವರಿ ಹಕ್ಕನ್ನೂ ಅಲ್ಪಸಂಖ್ಯಾತರಿಗೆ ನಮ್ಮ ಸಂವಿಧಾನ ಪ್ರದಾನ ಮಾಡಿಲ್ಲ ಎನ್ನುವುದು ದೇಶದ ಕಾನೂನು ತಜ್ಞರ ಖಡಾ ಖಂಡಿತವಾದ ಮತ್ತು ಸ್ಪಷ್ಟವಾದ ಅಭಿಪ್ರಾಯವಾಗಿದೆ.

ಜಾತ್ಯತೀತತೆಯ ಸೋಗಿನಲ್ಲಿ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ತುಷ್ಟೀಕರಣವು ಬಹುಸಂಖ್ಯಾತರ ಹಿತಾಸಕ್ತಿಯ ವಿರುದ್ಧದ ಷಡ್ಯಂತ್ರವೇ ಆಗಿದೆ. ಉದಾಹರಣೆಗೆ, ಸಂವಿಧಾನವನ್ನು ಅಪವ್ಯಾಖ್ಯಾನ ಮಾಡಿ ಬಹುಸಂಖ್ಯಾತ ಸಮುದಾಯದ ಹಿಂದುಳಿದ ವರ್ಗಕ್ಕೆ ಅನ್ವಯವಾಗುತ್ತಿದ್ದ ಮೀಸಲಾತಿಯನ್ನು ಹೃಸ್ವಮಾಡಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕೊಡಮಾಡುವ ಪ್ರಯತ್ನಗಳು ಬಹುಸಂಖ್ಯಾತ ಹಿಂದೂಸಮಾಜದ ಹಿಂದುಳಿದ ವರ್ಗಗಳಿಗೆ ಸಂವಿಧಾನ ನೀಡಿದ ಸೌಲಭ್ಯವನ್ನು ಕಿತ್ತುಕೊಂಡಂತೆಯೇ ಆಗುತ್ತದೆ. ಹಾಗಾಗಿ, ದೇಶದಲ್ಲಿ ಸಂವಿಧಾನ ಸಮ್ಮತವಲ್ಲದ ಅಲ್ಪಸಂಖ್ಯಾತರ
ತುಷ್ಟೀಕರಣವನ್ನು ಸರ್ವಥಾ ತಡೆಯುವುದು ಇಂದಿನ ಅಗತ್ಯವಾಗಿದೆ. ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಎರಡನೆಯ ದರ್ಜೆಯ ಪ್ರಜೆಗಳಾಗಿ ಬಾಳದೇ ಬಹುಸಂಖ್ಯಾತರಿಗೆ ಸರಿಸಮವಾದ ಬಾಳನ್ನು ಬಾಳುವಂತಾಗಲಿ ಎನ್ನುವುದು ನಮ್ಮ ಸಂವಿಧಾನದ ಔದಾರ್ಯಪೂರ್ಣ ಆಶಯವಾಗಿದೆ.

ಹಾಗಂತ, ದೇಶದ ಮೂಲ ನಾಗರಿಕರಾದ ಬಹುಸಂಖ್ಯಾತರನ್ನೇ ನಿರ್ಲಕ್ಷಿಸುತ್ತಾ ಅವರ ಹಕ್ಕನ್ನು ಮತ್ತು ಸವಲತ್ತುಗಳನ್ನು ರಾಜಕೀಯ ಲಾಭಕ್ಕಾಗಿ ಕಿತ್ತು
ಅಲ್ಪಸಂಖ್ಯಾತರಿಗೆ ಕೊಡಮಾಡುವ ಮೂಲಕ ದೇಶದಲ್ಲಿ ಬಹುಸಂಖ್ಯಾತರನ್ನೇ ಎರಡನೆಯ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುವುದು ಸಂವಿಧಾನರೀತ್ಯಾ ಸುತರಾಂ ಸರಿಯಲ್ಲ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು) 

Leave a Reply

Your email address will not be published. Required fields are marked *

error: Content is protected !!