Saturday, 27th April 2024

ಪ್ರಜಾಪ್ರಭುತ್ವಕ್ಕೆ ಅಮರಿಕೊಂಡ ವಿಕೃತಿಗಳು

ಚರ್ಚಾ ವೇದಿಕೆ

ಪ್ರೊ.ಆರ್‌.ಜಿ,ಹೆಗಡೆ

ಸಂವಿಧಾನವನ್ನು ಬದಲಿಸಬೇಕು, ಸನಾತನ ಧರ್ಮವನ್ನು ಅಳಿಸಿಹಾಕಬೇಕು ಎಂಬ ಮಾತುಗಳು ನಮ್ಮಲ್ಲಿ ಸಾಕಷ್ಟು ಬಾರಿ ಕೇಳಿಬಂದಿರುವುದು ಉಂಟು. ಆದರೆ
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ಮಾತು ಬಂದಿಲ್ಲ. ಅಂದರೆ ಈ ಪದ್ಧತಿಯು ನಮ್ಮಲ್ಲಿ ವಿವಾದಾತೀತವಾಗಿ ಬೇರುಬಿಟ್ಟಿದೆ ಎಂದಾಯ್ತು.

ಮತ್ತೊಂದು ಚುನಾವಣೆ ಬಂದು ನಿಂತಿದೆ. ಹೆಮ್ಮೆಯ ವಿಷಯವೇನೆಂದರೆ, ವಿಶಾಲವಾದ, ಭಾರಿ ಜನಸಂಖ್ಯೆಯುಳ್ಳ ಮತ್ತು ಅಸಮಾನತೆಯನ್ನು ಈಗಲೂ ಹೊಂದಿರುವ ನಮ್ಮ ದೇಶವು ಪ್ರಜಾಪ್ರಭುತ್ವವನ್ನು ಉಳಿಸಿಕೊಂಡೇ ಬಂದಿದೆ. ಒಂದು ದೃಷ್ಟಿಯಿಂದ ಇದು ಅಚ್ಚರಿಯ ವಿಷಯವೂ ಹೌದು. ಏಕೆಂದರೆ, ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಒಂದು ಉಪಖಂಡವೇ ಆಗಿರುವ, ಜಾತಿ-ಉಪಜಾತಿ-ಧರ್ಮಗಳ ನಡುವಿನ ಮಾನಸಿಕ ಬಿರುಕುಗಳು, ಅನಕ್ಷರತೆ, ದಾರಿದ್ರ್ಯ ಇನ್ನೂ ಇರುವ ನಮ್ಮ ದೇಶದಲ್ಲಿ, ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸಿಬಿಡಬಹುದಾದ ಹಲವು ಸಾಮಾಜಿಕ ಅಂಶಗಳು ಇದ್ದವು, ಈಗಲೂ ಇವೆ.
ಬಹುಶಃ ಈ ವಿಷಯಗಳನ್ನು ಗಮನಿಸಿದ್ದ, ನಕಾರಾತ್ಮಕವಾಗಿಯೇ ಇದ್ದ ಕೆಲವು ಪಾಶ್ಚಾತ್ಯ ಘನಂದಾರಿಗಳು ನಮ್ಮ ಪ್ರಜಾಪ್ರಭುತ್ವದ ಕುರಿತಾದ ಕರಾಳ
ಭವಿಷ್ಯವನ್ನು ಹೇಳಿ ಮುಗಿಸಿಯೇಬಿಟ್ಟಿದ್ದರು.

ಜೆ.ಕೆ.ಗ್ಯಾಲ್‌ಬ್ರೆತ್ ಎಂಬ ಅಮೆರಿಕದ ರಾಜತಂತ್ರಜ್ಞರು, ‘ಭಾರತವು ಒಂದು ಕಾರ್ಯಶೀಲವಾಗಿರುವ ಅರಾಜಕತೆ’ (ಊಠಿಜಿಟ್ಞZ ಅZeqs) ಎಂದು ಹೇಳಿದ್ದರು. ‘ಭಾರತೀಯರು ಮತದಾನದ ಹಕ್ಕಿಗೆ ಅರ್ಹರಲ್ಲ; ಇಂಥ ದೇಶವು ಪ್ರಜಾಪ್ರಭುತ್ವವನ್ನು ಪಡೆಯುವುದು ಒಂದು ಭಾರಿ ದುರಂತ’ ಎಂದು ಬ್ರಿಟನ್ ಪ್ರಧಾನಿ ಚರ್ಚಿಲ್ ವಾದಿಸಿದ್ದರು. ಈ ಮಾತುಗಳನ್ನೆಲ್ಲ ಸುಳ್ಳಾಗಿಸಿರುವ ಭಾರತವು ಪ್ರಜಾಪ್ರಭುತ್ವವನ್ನು ಬಲವಾಗಿ ಪೋಷಿಸಿಕೊಂಡೇ ಬಂದಿದೆ. ದೇಶದಲ್ಲಿ ಬೇರೆ ಬೇರೆ ಸಂಗತಿಗಳ ಕುರಿತು ಅಪಸ್ವರಗಳು ಕೇಳಿಬರುತ್ತಲೇ ಇರುತ್ತವೆ. ಅಂದರೆ, ಸಂವಿಧಾನವನ್ನು ಬದಲಿಸಬೇಕು, ಸನಾತನ ಧರ್ಮವನ್ನು ಅಳಿಸಿಹಾಕಬೇಕು ಎಂಬ ಮಾತುಗಳು ಕೇಳಿಬಂದಿವೆ; ಆದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ಮಾತು ಬಂದಿಲ್ಲ. ಅಂದರೆ ಈ ಪದ್ಧತಿಯು ನಮ್ಮಲ್ಲಿ ವಿವಾದಾತೀತವಾಗಿ ಬೇರುಬಿಟ್ಟಿದೆ ಎಂದಾಯ್ತು. ಆದರೆ, ನಮ್ಮ ಪ್ರಜಾಪ್ರಭುತ್ವದ ಕಾರ್ಯವೈಖರಿಯನ್ನು ಗಮನಿಸುತ್ತಾ ಹೋದಂತೆ, ಹೆಮ್ಮೆಯ ಭಾವನೆ ಮಾಯವಾಗಿ ವಿಷಾದ, ಕಳವಳ, ಆತಂಕ ಮನಸ್ಸನ್ನು ಮೆತ್ತಿಕೊಳ್ಳತೊಡಗುತ್ತವೆ.

ವಿಶೇಷವಾಗಿ ಇತ್ತೀಚಿನ ದಶಕಗಳಲ್ಲಿ ನಮ್ಮ ಪ್ರಜಾಪ್ರಭುತ್ವವು ಹೆಸರಿಗಷ್ಟೇ ಉಳಿದುಕೊಂಡು, ಮಿಕ್ಕಂಥ ಅರ್ಥ ಕಳೆದುಕೊಳ್ಳುತ್ತಿದೆಯೇ? ಎಂಬ ಆತಂಕಕಾರಿ ಪ್ರಶ್ನೆ ಏಳಲಾರಂಭಿಸಿದೆ. ಕಾರಣ, ಪ್ರಜಾಪ್ರಭುತ್ವಕ್ಕೆ ಮಾರಕ ವಾಗಿರುವ ವಿಕೃತಿಗಳು ಹುಟ್ಟಿಕೊಂಡು ವಿಜೃಂಭಿಸಲಾರಂಭಿಸಿರುವುದು. ಈ ಪೈಕಿ ಮೊದಲನೆ ಯದು, ಪ್ರಜಾಪ್ರಭುತ್ವದ ಹೆಸರಿನಲ್ಲಿ ದೇಶದ ಆಳುಗ ವ್ಯವಸ್ಥೆಯು ಅತಿಶ್ರೀಮಂತರ ಆಳ್ವಿಕೆಯ ‘ಒಲಿಗಾರ್ಕಿ’ಯಾಗಿ (ಅಂದರೆ ಮಿತ-ಜನತಂತ್ರ; ಕೆಲವೇ ಮಂದಿ ಆಡಳಿತ ನಡೆಸುವ ಸರ ಕಾರ) ಬದಲಾಗುತ್ತಿರುವ ಲಕ್ಷಣಗಳು ತೋರಿ ಬಂದಿವೆ. ಗಮನಿಸಿ- ಲೋಕಸಭೆ, ರಾಜ್ಯಸಭೆ, ವಿಧಾನಸಭೆ/ವಿಧಾನ ಪರಿಷತ್ತಿನಂಥ ಜನಪ್ರತಿನಿಽ ಸಭೆಗಳಲ್ಲಿ ಇಂದು ತುಂಬಿ ತುಳುಕಾಡುತ್ತಿರುವವರು ಹೆಚ್ಚಾಗಿ ಭಾರಿ ಶ್ರೀಮಂತರು; ಇವರಲ್ಲಿ ಕೌಟುಂಬಿಕವಾಗಿ ‘ಕುಬೇರ ಸಿರಿವಂತಿಕೆ’ಯ ಹಿನ್ನೆಲೆಯವರು, ಶ್ರೀಮಂತ ವಕೀಲರು, ಔದ್ಯಮಿಕ ಸಂಸ್ಥೆಗಳೊಂದಿಗ ಆಳ ಸಂಬಂಧವಿರುವವರು/ಅವರಿಂದ ಪ್ರಾಯೋಜಿತರಾದವರು, ಕ್ರಿಕೆಟ್ ಅಥವಾ ಸಿನಿಮಾ ತಾರೆಯರು ಹೀಗೆ ಸಮಾಜದ ‘ಅತಿ ಮೇಲ್ಪದರದ’ ವ್ಯಕ್ತಿ ಗಳು ಸೇರಿದ್ದಾರೆ.

ಕೆಲವೇ ಪಕ್ಷಗಳನ್ನು ಹೊರತು ಪಡಿಸಿದರೆ ಮಿಕ್ಕೆಲ್ಲವೂ ಕುಟುಂಬಗಳ ವೈಯಕ್ತಿಕ ಆಸ್ತಿಗಳು. ಇವು ೫೦-೬೦ ವರ್ಷಗಳಿಂದ ರಾಜಕೀಯದಲ್ಲಿ ಬೀಡು ಬಿಟ್ಟು ‘ಸಾಕಷ್ಟು ಮಾಡಿಕೊಂಡ’ ಕುಟುಂಬಗಳ ಆಸ್ತಿಗಳಾಗಿಬಿಟ್ಟಿವೆ. ಕೆಲವು ಪ್ರಾಂತ್ಯಗಳಲ್ಲಂತೂ ಇವುಗಳದೇ ಪಾರುಪತ್ಯ. ತಂದೆಯ ನಂತರ ತಾಯಿ, ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹೀಗೆ ಚುನಾವಣೆಗಳಲ್ಲಿ ಸ್ಪರ್ಧಿಸುವವರೂ ಈ ಕುಟುಂಬದವರೇ. ಒಂದೇ ಮನೆತನದ ೨-೩ ಜನ ಅಥವಾ ವಯಸ್ಕರಾದ ಎಲ್ಲರೂ ರಾಜಕೀಯದ ಹುದ್ದೆಗಳಲ್ಲಿ ಮೆರೆಯುತ್ತಿರುವ ಕುಟುಂಬಗಳೂ ಇವೆ. ಒಟ್ಟಾರೆ ಯಾಗಿ ಇವು ‘ಸೂಪರ್ ರಿಚ್’ ಕುಟುಂಬಗಳು!

ಈ ಬಾರಿ ಘೋಷಣೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನೇ ಒಮ್ಮೆ ನೋಡಿ. ಕರ್ನಾಟಕದಲ್ಲಂತೂ ಅವುಗಳಲ್ಲಿ ಹೆಚ್ಚಾಗಿ ತುಂಬಿಕೊಂಡಿರುವುದು ರಾಜಕಾರಣಿಗಳ ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮಾಜಿ ಹಿರಿಯ ಅಧಿಕಾರಿಗಳು ಅಥವಾ ಅವರ ಕುಟುಂಬಿಕರೇ. ಒಂದೊಮ್ಮೆ ಇಂಥವರು ಲಭ್ಯವಿಲ್ಲದಿದ್ದರೆ, ಬೇರೆ ಬೇರೆ ಅತಿಶ್ರೀಮಂತರು. ಜಾತಿ, ಧರ್ಮ ಅಥವಾ ಒಟ್ಟಾರೆ ‘ಗೆಲುವಿನ ಸಾಧ್ಯತೆ’ ಪಕ್ಷಗಳ ಪಾಲಿಗೆ ಮಹತ್ವದ ಅಂಶ, ನಿಜ. ಆದರೆ, ಇಂಥ ಅಂಶಗಳನ್ನು ಅವಲಂಬಿಸಿ ಸೀಟು ಸಿಗುವುದು ಕೂಡ ಭಾರಿ ದುಡ್ಡಿನ ಗಂಟು ಇದ್ದವರಿಗೇ!

ಹಾಗೆಂದ ಮಾತ್ರಕ್ಕೆ ಜನರು ಶ್ರೀಮಂತರಾಗುವುದೇ ತಪ್ಪು, ಶ್ರೀಮಂತರು ಚುನಾವಣೆಗೆ ಸ್ಪರ್ಧಿಸಲೇಬಾರದು ಎಂದಲ್ಲ ಅಥವಾ ಶ್ರೀಮಂತರೆಲ್ಲರೂ ಭ್ರಷ್ಟರು- ದುಷ್ಟರು ಎಂದೂ ಅಲ್ಲ. ಶ್ರೀಮಂತರನ್ನು ಬಿಟ್ಟು ಬಡ, ಮಧ್ಯಮ ವರ್ಗದಿಂದ ಬಂದವರು ರಾಜಕೀಯದಲ್ಲಿ ಇಲ್ಲವೇ ಇಲ್ಲ ಎಂದೇನಲ್ಲ. ಮತ್ತೆ ಬಡವರೆಲ್ಲರೂ ‘ಅಪ್ಪಂತರು’ ಎಂದೂ ಅಲ್ಲ. ಅಥವಾ ಇಂಥ ಪರಿಸ್ಥಿತಿಗೆ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಮಾತ್ರವೇ ಕಾರಣವೆಂದಲ್ಲ. ಹಲವು ಸಂಕೀರ್ಣ ಸಾಮಾಜಿಕ, ರಾಜಕೀಯ, ಆರ್ಥಿಕ ಕಾರಣಗಳು, ದೇಶದಲ್ಲಿ ಹೆಚ್ಚಿರುವ ಹಣದ ಹರಿವು, ಸಾಮಾಜಿಕ ಮೌಲ್ಯಗಳಲ್ಲಿ ಒಟ್ಟಾರೆಯಾಗಿ ಕಾಣುತ್ತಿರುವ ಅಧಃಪತನ, ಸಂವಿಧಾನ ಮತ್ತು ಕಾನೂನು ವ್ಯವಸ್ಥೆಯಲ್ಲಿನ ನ್ಯೂನತೆಗಳು ಇವೆಲ್ಲ ಸೇರಿ ಈ ಪರಿಸ್ಥಿತಿಯನ್ನು ಸೃಷ್ಟಿಸಿವೆ.

ಅದೆಂಥ ಪರಿಸ್ಥಿತಿಯೆಂದರೆ- ಚುನಾವಣೆಗೆ ಸ್ಪರ್ಧಿಸಲು ಕೋಟಿ ಕೋಟಿ ಹಣಬೇಕು, ಇಲ್ಲವಾದಲ್ಲಿ ಗೆಲ್ಲುವುದಿರಲಿ ನಿಲ್ಲುವುದು ಕೂಡ ಸಾಧ್ಯವಿಲ್ಲ ಎಂಬಂಥ ಕಹಿವಾಸ್ತವ. ಸ್ಥಾನಗಳು ಭಾರಿ ಶ್ರೀಮಂತರಿಗೆ ಮೀಸಲಾದಂತೆ ಆಗಿರುವ ಇಂದಿನ ವ್ಯವಸ್ಥೆಯಲ್ಲಿ ಸಾಧಾರಣ ಜನರಿಗೆ ಪ್ರಾತಿನಿಧ್ಯದ ಅವಕಾಶವೇ ಇಲ್ಲ. ಶಾಸಕ, ಸಂಸದ ಸ್ಥಾನಗಳಿಗೆ ಇವರು ಸ್ಪರ್ಧಿಸಲಾಗುವುದಿಲ್ಲ. ಶಿಕ್ಷಕ ಮತದಾರರ ಕ್ಷೇತ್ರ, ಜಿಲ್ಲಾ ಪಂಚಾಯಿತಿ ಇಂಥವು ಕೂಡ ತುಟ್ಟಿಯಾಗಿ ಹೋಗಿವೆ. ಇಲ್ಲೊಂದು ಮಾತು- ನಾಯಕತ್ವದ ಗುಣ, ಬುದ್ಧಿಮತ್ತೆ, ಸೇವಾಸಕ್ತಿಗಳಿದ್ದರೆ ಕುಟುಂಬ ರಾಜಕೀಯ/ಹಣದ ರಾಜಕೀಯವನ್ನೂ ಸ್ವಾಗತಿಸಬಹುದಿತ್ತು. ಆದರೆ, ತಲೆತಿರುಕರು, ಸಂಸ್ಕಾರವಿ ಹೀನರು, ಬೇಜವಾಬ್ದಾರಿಯ ವ್ಯಕ್ತಿಗಳು ಕೂಡ ಕುಟುಂಬದ ಹಿನ್ನೆಲೆ, ಶ್ರೀಮಂತಿಕೆಯೊಂದನ್ನೇ ಆಧರಿಸಿ ಜವಾಬ್ದಾರಿಯ ಸ್ಥಾನಗಳನ್ನು ಆಕ್ರಮಿಸು
ತ್ತಿರುವುದೇ ಸಮಸ್ಯೆ ತಂದಿರುವುದು.

ಇನ್ನೂ ಕಳವಳಕಾರಿ ಸಂಗತಿಯೆಂದರೆ, ಪ್ರಗತಿಪರ ರೈತರು, ಐಟಿ ಕ್ಷೇತ್ರದ ನಾಯಕರು, ಶಿಕ್ಷಣವೇತ್ತರು, ಜಲಾನಯನ ತಜ್ಞರು, ನಿವೃತ್ತ ಸೇನಾಧಿಕಾರಿಗಳು,
ವಿವಿಧ ಕ್ಷೇತ್ರಗಳಲ್ಲಿ ಅರ್ಥಪೂರ್ಣ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರು ಇಂಥವರು ಚುನಾವಣೆಗೆ ಸ್ಪರ್ಧಿಸುವುದಿರಲಿ, ಆ ಕಡೆ ತಲೆಹಾಕಿ
ಮಲಗಲೂ ಅನುವು ಮಾಡಿಕೊಡದ ರಾಜಕೀಯ ವ್ಯವಸ್ಥೆಯೊಂದು ಸೃಷ್ಟಿಯಾಗಿಬಿಟ್ಟಿದೆ. ಈ ವ್ಯವಸ್ಥೆ ಹೇಗಿದೆಯೆಂದರೆ, ಟಿಕೆಟ್ ಕೊಡಿಸುವವರನ್ನು ಮತ್ತು ಬೆಂಬಲಿಗರನ್ನು ಬೆಂಗಳೂರಿನಲ್ಲೋ ದೆಹಲಿಯಲ್ಲೋ ರೆಸಾರ್ಟ್ಗಳಲ್ಲಿ ಇಟ್ಟುಕೊಂಡು ಖುಷಿಪಡಿಸಿ ನಿಭಾಯಿಸುವ ಶಕ್ತಿ ಟಿಕೆಟ್ ಕೇಳುವವನಿಗೆ ಇರಬೇಕು. ಅಂದರೆ ಇಂಥವರಿಗೆ ಆರಂಭದ ಹೆಜ್ಜೆಗಳಿಗಾಗಿಯೇ ಕೋಟಿ ಕೋಟಿ ದುಡ್ಡು ಬೇಕು. ಇಷ್ಟಾದರೂ ಟಿಕೆಟ್ ಸಿಕ್ಕೇಬಿಡುತ್ತದೆ ಎಂಬ ಖಾತ್ರಿಯಿಲ್ಲ.

ಪಕ್ಷಗಳು ಬಹುತೇಕವಾಗಿ ವ್ಯಕ್ತಿಯ ಗೆಲುವಿನ ಸಾಮರ್ಥ್ಯವನ್ನು, ಅಂದರೆ ಜಾತಿಯ ಬೆಂಬಲ, ಸ್ಥಳೀಯ ಧಾರ್ಮಿಕ-ಸಾಮಾಜಿಕ-ಔದ್ಯಮಿಕ-ಆರ್ಥಿಕ ನಾಯಕರ ಬೆಂಬಲ, ಕಾರ್ಮಿಕರ ಒತ್ತಾಸೆ ಇತ್ಯಾದಿ ಗಳನ್ನು ಅಳೆದುತೂಗುತ್ತವೆ. ಅಲ್ಲಿ ತನ್ನ ಪರವಾಗಿ ಜನಾಭಿಪ್ರಾಯ ಬರುವಂತೆ ಮಾಡಬೇಕಿರುವುದೂ ಅಭ್ಯರ್ಥಿಯ ಕಾರ್ಯತಂತ್ರದ ಭಾಗ. ಇಂಥ ತಂತ್ರಗಳ ಹಿಂದೆ ಏನಿರುತ್ತವೆ ಎಂಬುದು ಹೆಚ್ಚು ಕಡಿಮೆ ಎಲ್ಲರಿಗೂ ಗೊತ್ತಾಗಿಹೋಗಿದೆ. ಟಿಕೆಟ್ ಸಿಕ್ಕಿತು ಎಂದೇ ಇಟ್ಟುಕೊಳ್ಳಿ. ಮುಂದೆ ಚುನಾವಣಾ ಫಲಿತಾಂಶ ಹೊರಬರುವ ತನಕದ ದಿನಗಳು ಅಭ್ಯರ್ಥಿಯೊಬ್ಬನ ಪಾಲಿಗೆ ‘ತಾಕತ್ತಿನ ಪರೀಕ್ಷೆಯ’ (ಚಿತ್ರಹಿಂಸೆಯ!) ದಿನಗಳು. ಯಾವ ವ್ಯಕ್ತಿಯನ್ನೂ ಅಭ್ಯರ್ಥಿಯು ಬೇಸರಿಸದೆ ಅವರವರ ಹಂತದಲ್ಲಿ ‘ಸಮಾಧಾನಿಸಿ’ ಕಳಿಸಬೇಕು. ಹಾಗೆ ಎದುರಿಗೆ ಸಮಾಧಾನಗೊಂಡವನಂತೆ ಕಾಣುವ ವ್ಯಕ್ತಿಯು ಹಿಂದಿನಿಂದ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿದರೂ ಅಚ್ಚರಿಯಿಲ್ಲ.

ಕಾರಣ, ಆತ ಹಲವರಿಂದ ಹೀಗೆ ‘ಸಮಾಧಾನ’ ಪಟ್ಟಿರುವ ಸಾಧ್ಯತೆ ಇರುತ್ತದೆ! ಕೊನೆಯ ದಿನಗಳಲ್ಲಂತೂ ಕೇಳುವುದೇ ಬೇಡ, ಅಭ್ಯರ್ಥಿಯು ನೀರಿನಂತೆ ಹಣವನ್ನು ಹರಿಸಬೇಕಾಗುತ್ತದೆ. ವಿಷಯ ಇಷ್ಟಕ್ಕೇ ಮುಗಿಯುವುದಿಲ್ಲ. ಆಯ್ಕೆಯಾದ ಎಂಪಿ/ಎಂಎಲ್‌ಎಗಳನ್ನು ತಮ್ಮಲ್ಲೇ ಉಳಿಸಿಕೊಳ್ಳಲು ನಾಯಕನಾದವ ತಂತ್ರಗಾರಿಕೆ ಬಳಸಬೇಕು, ಅಂದರೆ ಹಣ ಪೀಕಬೇಕು. ಇದರ ಪ್ರಮಾಣ ಕೋಟಿಗಳನ್ನು ಮೀರುವುದಿದೆ ಎನ್ನುತ್ತಾರೆ ಬಲ್ಲವರು. ಹೀಗೆ ‘ಹಣ ಸುರಿಯುವ’ ಶಕ್ತಿ ಮತ್ತು ಧೈರ್ಯ ಬರುವುದು, ಭಾರಿ ಸಂಪತ್ತಿರುವ ಅಥವಾ ಅದನ್ನು ಒದಗಿಸಬಲ್ಲ ಸಂಪರ್ಕ ಹೊಂದಿರುವ ವ್ಯಕ್ತಿಗೆ ಮಾತ್ರವೇ ಇರಬಹುದು. ಚುನಾವಣಾ
ಆಯೋಗವೇನೋ ನಿಜಕ್ಕೂ ದಿಟ್ಟಕ್ರಮಗಳನ್ನು ಕೈಗೊಳ್ಳುತ್ತಿದೆ, ದಕ್ಷತೆಯಿಂದ ಕೆಲಸ ಮಾಡುತ್ತಿದೆ.

ಆದರೆ ಜನರು ಕೂಡ ಭ್ರಷ್ಟರಾಗಿಬಿಟ್ಟಿರುವುದರಿಂದ ಹಣವು ಗುಪ್ತಗಾಮಿನಿಯಾಗಿ ಹರಿಯುತ್ತದೆ, ಅದನ್ನೆಲ್ಲ ಕಂಡುಹಿಡಿಯುವುದು ಸುಲಭವೇನಲ್ಲ. ಇದೇ
ಸಮಸ್ಯೆ. ಚುನಾವಣಾ ಸಮಯದಲ್ಲಿ ತನ್ನೆಲ್ಲ ಘನತೆ, ಮೌಲ್ಯಗಳನ್ನು ಬದಿಗಿಟ್ಟು ಜೋಕರ್‌ನಂತೆ ಸಾರ್ವಜನಿಕವಾಗಿ ದೊಂಬರಾಟ ನಡೆಸುವ ಅವಶ್ಯಕತೆ
ಅಭ್ಯರ್ಥಿಗೆ ಬಂದಿರುವುದು ಮತ್ತೊಂದು ವಿಕೃತಿ. ಇದು ಕೂಡ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ತಳ್ಳುವಂಥದ್ದು. ಜನರೊಂದಿಗೆ ಬೆರೆತು ಸರಳವಾಗಿ,
ಸಾಮಾನ್ಯನಾಗಿ ಇರುವಂತೆ ತೋರಿಸಿಕೊಳ್ಳಬೇಕಿರುವುದು ಅನಿವಾರ್ಯ ಮತ್ತು ಅದು ಗೆಲ್ಲುವ ತಂತ್ರ ಎಂಬ ಭಾವನೆ ಅಭ್ಯರ್ಥಿಗಳಲ್ಲಿ ಬೇರೂರಿ ಬಿಟ್ಟಿದೆ. ಹಾಗಾಗಿ, ಕನಿಷ್ಠ ಚುನಾವಣೆ ಮುಗಿಯುವವರೆಗಾದರೂ ಜನರು ಕರೆದಲ್ಲಿಗೆ ಅಭ್ಯರ್ಥಿ ಹೋಗಬೇಕು. ದಿನಪೂರ್ತಿ ಕೈಮುಗಿದುಕೊಂಡೇ ಇರಬೇಕು, ಎದುರಿಗೆ ಕಂಡಕಂಡವರಿಗೆ ಕಾಲಿಗೆ ಬೀಳಬೇಕು.

ಎಲ್ಲರೊಂದಿಗೆ ನೆಲದ ಮೇಲೆ ಕುಳಿತು ಬಡಿಸಿ ದ್ದನ್ನೆಲ್ಲ ಊಟಮಾಡಬೇಕು. ಬಡವರ ಮನೆಯಲ್ಲಿ ಬ್ರೇಕ್ ಫಾಸ್ಟ್ ಮಾಡಿ ಮಲಗಬೇಕು. ದಾರಿಯಲ್ಲಿ
ಜನರೊಂದಿಗೆ ಬೋಂಡಾ-ಚಹಾ ಸೇವಿಸಬೇಕು. ‘ನಾನೂ ನಿಮ್ಮವನೇ’ ಎಂದು ತೋರಿಸಿಕೊಳ್ಳಲು ಆಯಾ ಜನಾಂಗೀಯರ ಶೈಲಿಯಲ್ಲಿ ರುಮಾಲು,
ಪೇಟ, ಮುಂಡಾಸು, ಟೋಪಿ ಇತ್ಯಾದಿ ಧರಿಸಬೇಕು. ಗಣಪತಿ ಹಬ್ಬದಲ್ಲಿ ಜನರೊಂದಿಗೆ ಸೇರಿ ರಸ್ತೆಯಲ್ಲಿ ಕುಣಿಯಬೇಕು, ಕಬಡ್ಡಿ ಆಡಬೇಕು. ಮತ್ತೆ ಯಾರು ಹುಟ್ಟಲಿ ಸಾಯಲಿ, ಅಂಥವರ ಮನೆಗಳಿಗೆಲ್ಲ ಭೇಟಿನೀಡಿ ಖರ್ಚುವೆಚ್ಚ ನೋಡಿಕೊಳ್ಳಬೇಕು; ಕಾರ್ಯಕರ್ತರು ಸತ್ತರೆ ಅವರ ಹೆಣಕ್ಕೆ ಹೆಗಲು ಕೊಡಬೇಕು. ಇವೆಲ್ಲ ಜನಪ್ರತಿನಿಽಯೊಬ್ಬನ ಕೆಲಸವಲ್ಲ, ಇವು ಆತನ ಘನತೆಯನ್ನು ಕುಗ್ಗಿಸುತ್ತವೆ ಎಂಬುದನ್ನು ಜನರೂ ಅರ್ಥಮಾಡಿಕೊಳ್ಳುತ್ತಿಲ್ಲ.

ಅಭ್ಯರ್ಥಿಗಳಿಗೆ ಇವೆಲ್ಲ ಕೆಲವು ದಿನಗಳವರೆಗಿನ ಅನಿವಾರ್ಯ ಕರ್ಮ, ಆಡಲೇಬೇಕಾದ ನಾಟಕ. ಇಂಥ ಹುಚ್ಚುತನಗಳನ್ನು ತಿದ್ದಿ, ವೈಯಕ್ತಿಕ ಘನತೆಯನ್ನು
ಕಾಪಿಟ್ಟುಕೊಳ್ಳುವಂತೆ ಬುದ್ಧಿ ಹೇಳಬಲ್ಲವರಾಗಿದ್ದರು ಮೊರಾರ್ಜಿ ದೇಸಾಯಿ. ಈಗಲೂ ಇಂಥವರು ಇಲ್ಲವೆಂದೇನಲ್ಲ, ಆದರೆ ಕಡಿಮೆ. ಹೀಗಾಗಿ, ಗೌರವಾನ್ವಿತ
ಹಿರಿಯರು, ಘನತೆವೆತ್ತ ಸಾಮಾಜಿಕ ಕಾರ್ಯಕರ್ತರು ರಾಜಕೀಯದ ಕಡೆ ತಲೆಹಾಕಿ ಮಲಗಲೂ ಇಚ್ಛಿಸುತ್ತಿಲ್ಲ. ಇಂಥ ವಿಕೃತಿಗಳಿಂದ ನಮ್ಮ ಪ್ರಜಾಪ್ರಭುತ್ವ
ವ್ಯವಸ್ಥೆಗಾಗಿರುವ ಹಾನಿಯನ್ನು ಗಮನಿಸಬೇಕು. ಮುಖ್ಯವಾಗಿ ಇವು ಶಾಸಕಾಂಗದ ಗುಣಮಟ್ಟವನ್ನು ತಗ್ಗಿಸಿವೆ. ಒಂದು ಕಾಲದಲ್ಲಿ ಪ್ರಜ್ಞಾವಂತರು, ಮುತ್ಸದ್ದಿ ಗಳಿಂದ ತುಂಬಿರುತ್ತಿದ್ದ ನಮ್ಮ ಜನಪ್ರತಿನಿಧಿ ಸಭೆಗಳು ಆ ದೃಷ್ಟಿಯಿಂದ ಇಂದು ಸೊರಗುತ್ತಿವೆ. ಮೌಲ್ಯಯುತ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಬಲ್ಲವರು ಇಂದು ಕಡಿಮೆ. ಹಿಂದೆ ಕರ್ಪೂರಿ ಠಾಕೂರ್, ಪಿಲೂ ಮೋದಿ, ಇಂದ್ರಜಿತ್ ಗುಪ್ತಾ ಇಂಥವರು ಇದ್ದರು; ಇವರು ಕೆಲವೊಮ್ಮೆ ಪಕ್ಷಬಲವಿಲ್ಲದೆ ಒಬ್ಬರೇ ಕುಳಿತಿರುವಾಗಲೂ ಸರಕಾರಗಳನ್ನು ನಡುಗಿಸಿದ್ದುಂಟು.

ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ ಮುಂತಾದವರು ಎದ್ದು ನಿಂತರೆ ಸದನವಷ್ಟೇ ಅಲ್ಲ ದೇಶವೇ ಆಲಿಸುತ್ತಿತ್ತು. ಅಂಥವರು ಇಂದು ವಿರಳ. ಏಕೆಂದರೆ, ಪ್ರಜ್ಞಾವಂತರೆನಿಸಿಕೊಂಡವರು ಮೇಲೆ ಉಲ್ಲೇಖಿಸಲಾಗಿರುವ ವಿಕೃತಿಗಳಿಂದಾಗಿ ಜನಪ್ರತಿನಿಽಗಳಾಗಲು ಸಾಧ್ಯವೇ ಇಲ್ಲದಂಥ ವ್ಯವಸ್ಥೆ ಸೃಷ್ಟಿಯಾಗಿಬಿಟ್ಟಿದೆ. ಇದು ಪ್ರಜಾಪ್ರಭುತ್ವದ ಪಾಲಿಗೆ ನಿಜಕ್ಕೂ ಅಪಾಯಕಾರಿ.

(ಲೇಖಕರು ನಿವೃತ್ತ ಪ್ರಾಂಶುಪಾಲರು)

Leave a Reply

Your email address will not be published. Required fields are marked *

error: Content is protected !!