Saturday, 18th May 2024

ಇದು ಚುನಾವಣಾ ಪ್ರಚಾರವೋ, ಬೈಗುಳ ಪರ್ವವೋ ?

ಕದನ ಕುತೂಹಲ

ರಮಾನಂದ ಶರ್ಮಾ

ತಮ್ಮ ಪಕ್ಷ ಅಥವಾ ಅಭ್ಯರ್ಥಿ ಇತರರಿಗಿಂತ ಹೇಗೆ ಭಿನ್ನ ಎಂದು ಭಾಷಣದಲ್ಲಿ ಹೇಳುತ್ತಿದ್ದ ಕಾಲವೊಂದಿತ್ತು; ಆದರೀಗ, ಇಂಥವರನ್ನು ಪ್ರಧಾನಿ ಮಾಡಲು ಮತನೀಡಿ, ದೇಶವನ್ನು ಮತ್ತು ಸಂವಿಧಾನವನ್ನು ಉಳಿಸಲು ಮತನೀಡಿ, ದೇಶಪ್ರೇಮಕ್ಕಾಗಿ ಮತ್ತು ದೇಶದ ಜಾತ್ಯತೀತ ಸ್ವರೂಪವನ್ನು ಉಳಿಸಿಕೊಳ್ಳಲಿಕ್ಕಾಗಿ ಮತನೀಡಿ ಮುಂತಾದ ಘೋಷಣೆಗಳು ಮುನ್ನೆಲೆಗೆ ಬಂದಿವೆ.

ಈಗಿನ ಲೋಕಸಭಾ ಚುನಾವಣಾ ಪ್ರಚಾರದ ವೈಖರಿಯನ್ನು, ಅದರಲ್ಲಿ ಬಳಸುವ ಭಾಷೆಯನ್ನು ನೋಡಿದರೆ, ಇದು ಚುನಾವಣಾ ಪ್ರಚಾರವೋ, ಜಾಹೀ ರಾತು ಸಮರವೋ ಅಥವಾ ಬೈಗುಳ ಪರ್ವವೋ ಎಂಬ ಗೊಂದಲ ಉಂಟಾಗುತ್ತದೆ. ಸಾಮಾನ್ಯವಾಗಿ ಚುನಾವಣಾ ಪ್ರಚಾರವೆಂದರೆ, ಸ್ಪರ್ಧಿಸಿರುವ ಅಭ್ಯರ್ಥಿ ಒಂದೊಮ್ಮೆ ಮರು ಆಯ್ಕೆ ಬಯಸಿದ್ದಲ್ಲಿ, ಆತ ಹಿಂದಿನ ಅವಧಿಯಲ್ಲಿ ಮತಕ್ಷೇತ್ರಕ್ಕೆ ತಾನು ನೀಡಿರುವ ಕೊಡುಗೆಗಳು, ಅಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಸುದೀರ್ಘ ಪಟ್ಟಿ ನೀಡುವುದು ವಾಡಿಕೆ.

ಹಲವು ಅಡೆತಡೆಗಳ ಹೊರತಾಗಿಯೂ ಹೇಗೆ ಅವನ್ನು ತಾನು ಸಾಧಿಸಿದೆ ಎಂಬುದನ್ನು ಒಂದಿಷ್ಟು ಬಣ್ಣ ಕಟ್ಟಿ ವಿವರಿಸುವುದು, ಅಭಿವೃದ್ಧಿಯ ನಿಟ್ಟಿ ನಲ್ಲಿ ದಾಪುಗಾಲಿಟ್ಟಿರುವ ತಾನು ಉಳಿದವರಿಗಿಂತ ಹೇಗೆ ಭಿನ್ನ ಎಂದು ಬಿಂಬಿಸಿಕೊಳ್ಳುವುದು ವಾಡಿಕೆ. ಹಾಗೆಯೇ, ತಾನು ಆರಂಭಿಸಿದ ಅಭಿವೃದ್ಧಿ ಕಾರ್ಯ ಗಳಿಗೆ ತಾರ್ಕಿಕ ಅಂತ್ಯ ನೀಡಲು ಮತ್ತು ಇನ್ನೂ ಹೆಚ್ಚಿನ ಜಲಕಲ್ಯಾಣ ಯೋಜನೆಗಳನ್ನು ಕ್ಷೇತ್ರಕ್ಕೆ ತರಲು ತನಗೆ ಇನ್ನೊಂದು ಅವಕಾಶವನ್ನು ನೀಡ ಬೇಕೆಂದು ಆತ ಕಳಕಳಿಯಿಂದ ಕೋರುವುದೂ ಕಂಡುಬರುತ್ತದೆ.

ವಿಪರ್ಯಾಸವೆಂದರೆ ಈ ಸಲ, ತಮಗೆ ಮತನೀಡಿ ಗೆಲ್ಲಿಸಿ ಎನ್ನುವುದಕ್ಕಿಂತ, ಇಂಥವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ತಮಗೆ ಮತನೀಡಿ ಎಂಬ ಧಾಟಿಯ ಬಿನ್ನಹ ಪ್ರಚಾರದಲ್ಲಿ ಮಾರ್ದನಿಸುತ್ತಿದೆ. ಇನ್ನು ಕೆಲವರು, ಮುಖ್ಯವಾಗಿ ಪ್ರಥಮ ಬಾರಿಗೆ ಪ್ರಯತ್ನಿಸುವವರು ಅಥವಾ ಹಲವು ಬಾರಿ ಪ್ರಯತ್ನಿಸಿ ವಿಫಲರಾಗಿ ‘ಮರಳಿ ಯತ್ನವ ಮಾಡು’ ಮೋಡ್ ನಲ್ಲಿರುವವರು, ‘ಹಿಂದಿನ ಜನಪ್ರತಿನಿಧಿ ಈ ಕ್ಷೇತ್ರಕ್ಕೆ ಏನೂ ಮಾಡಿಲ್ಲ; ಇಂಥ ಅನರ್ಹ ರಿಂದಾಗಿ ನಮ್ಮ ಕ್ಷೇತ್ರ ಅಭಿವೃದ್ಧಿಯಲ್ಲಿ ದಶಕಗಳಷ್ಟು ಹಿಂದೆ ಉಳಿದಿದೆ.

ನಿಮ್ಮ ಸರ್ವತೋಮುಖ ಅಭಿವೃದ್ಧಿಗಾಗಿ ಹೊಸಬರಿಗೆ ಮತ್ತು ಕ್ರಿಯಾಶೀಲರಿಗೆ ಮತ ನೀಡಿ’ ಎಂದು ತಮ್ಮ ಪ್ರಚಾರದಲ್ಲಿ ಒತ್ತಿಹೇಳುತ್ತಾರೆ. ಮಿಕ್ಕಂತೆ, ಅಭ್ಯರ್ಥಿಗಳು ತಮ್ಮ ಹಿಂಬಾಲಕರು ಮತ್ತು ಅಭಿಮಾನಿಗಳ ಹಿಂಡಿನೊಂದಿಗೆ ಮನೆಮನೆಗೆ ಭೇಟಿಯಿತ್ತು ಮತದಾರರನ್ನು ಓಲೈಸುವುದು, ಆಯಕಟ್ಟಿನ ಸ್ಥಳಗಳಲ್ಲಿ ಭಿತ್ತಿಪತ್ರ- ಬ್ಯಾನರ್ ಲಗತ್ತಿಸುವುದು, ರಾಜ್ಯ/ರಾಷ್ಟ್ರ ಮಟ್ಟದ ನಾಯಕರನ್ನು ಮತ್ತು ಸೆಲೆಬ್ರಿಟಿಗಳನ್ನು ಕರೆಸಿ ಪ್ರಚಾರ ಮಾಡಿಸುವುದು ಇವೆಲ್ಲ ಲಾಗಾಯ್ತಿನಿಂದ ಇದ್ದದ್ದೇ.

೭೦-೮೦ರ ದಶಕದಲ್ಲಿ, ಚುನಾವಣಾ ಪ್ರಚಾರದ ಮುಖ್ಯ ಆಕರ್ಷಣೆಯೆಂದರೆ ರಾಷ್ಟ್ರಮಟ್ಟದ ಪ್ರಭಾವಿ ನಾಯಕರ ಭಾಷಣಗಳು. ಆಗೆಲ್ಲ ಈಗಿನಂತೆ ರೋಡ್ ಶೋಗಳು ಇರುತ್ತಿರಲಿಲ್ಲ. ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ಜಾರ್ಜ್ ಫೆರ್ನಾಂಡಿಸ್, ಮಧು ದಂಡವತೆ, ರಾಮಕೃಷ್ಣ ಹೆಗಡೆ, ಜಗನ್ನಾಥರಾವ್ ಜೋಷಿ, ತಾರಕೇಶ್ವರಿ ಸಿನ್ಹಾರಂಥ ಅಪ್ರತಿಮ ನಾಯಕರು ದೇಶಾದ್ಯಂತ ತಿರುಗಿ ಮುಖ್ಯ ನಗರಗಳಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಇಂಥ ಸಭೆಗಳಿಗೆ ಬರಲು ಯಾರೂ ಸಾರಿಗೆ ವ್ಯವಸ್ಥೆಯನ್ನು ಮಾಡುತ್ತಿರಲಿಲ್ಲ, ಜನರೇ ಸ್ವಂತ ಖರ್ಚಿನಿಂದ ಬರುತ್ತಿದ್ದರು. ಊಟೋಪಚಾರಗಳಿರಲಿ, ಕನಿಷ್ಠ ಪಕ್ಷ ಕುಡಿಯುವ ನೀರಿನ ವ್ಯವಸ್ಥೆಯೂ ಇರುತ್ತಿರಲಿಲ್ಲ.

ಕೂರಲು ಕುರ್ಚಿಗಳಿಲ್ಲದೆ ಜನರು ಮಣ್ಣಿನ ಮೈದಾನದಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ನೆಲಗಡಲೆ ತಿನ್ನುತ್ತಾ ತಮ್ಮ ನೆಚ್ಚಿನ ನಾಯಕರ ಭಾಷಣವನ್ನು ಕೊನೆವರೆಗೂ ಕೇಳುತ್ತಿದ್ದರು ಮತ್ತು ಅದನ್ನು ನಂತರದ ದಿನಗಳಲ್ಲಿ ಮೆಲುಕುಹಾಕುತ್ತಿದ್ದರು, ಇತರರೊಂದಿಗೆ ಚರ್ಚಿಸುತ್ತಿದ್ದರು. ಆ ಭಾಷಣಗಳಲ್ಲಿ ದೇಶದಲ್ಲಿನ ಆಗುಹೋಗುಗಳ ವಿಸ್ತೃತ ವಿಶ್ಲೇಷಣೆ ಇರುತ್ತಿತ್ತು. ಆಡಳಿತ ಪಕ್ಷದ ತಪ್ಪುಗಳನ್ನು ಅಂಕಿ-ಅಂಶಗಳೊಂದಿಗೆ ವಿವರಿಸಲಾಗುತ್ತಿತ್ತು. ಆಳುಗರ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗುತ್ತಿತ್ತು ಮತ್ತು ಅರ್ಥಪೂರ್ಣ ಟೀಕೆ ಹೊಮ್ಮುತ್ತಿತ್ತು.

ಭಾಷಣಕಾರರು ಆಡಳಿತ ಪಕ್ಷದವರಾದರೆ, ತಮ್ಮ ಪಕ್ಷದ ಸಾಧನೆಯನ್ನು ಜನರಿಗೆ ವಿವರಿಸುತ್ತಿದ್ದರು, ತಮ್ಮ ಕಾರ್ಯಕ್ಕೆ ವಿಪಕ್ಷಗಳು ಒಡ್ಡುವ ಅಡೆತಡೆಗಳ ಬಗೆಗೂ ಹೇಳುತ್ತಿದ್ದರು. ಇವಿಷ್ಟೂ ಸಂದರ್ಭದಲ್ಲಿ ಎಲ್ಲೂ ಅಸಾಂವಿಧಾನಿಕ/ಅಶ್ಲೀಲ ಪದಗಳಾಗಲೀ, ರಾಜಕೀಯ ಎದುರಾಳಿಗಳ ಚಾರಿತ್ರ್ಯವಧೆ ಮಾಡುವ ಮಾತುಗಳಾಗಲೀ ಅಪ್ಪಿತಪ್ಪಿಯೂ ಹೊಮ್ಮುತ್ತಿರಲಿಲ್ಲ. ಇವರ ಭಾಷಣದಿಂದಾಗಿ ತಮ್ಮ ತೇಜೋವಧೆಯಾಯಿತೆಂದು ಎದುರಾಳಿಗಳು ಪ್ರಕರಣ ದಾಖಲಿಸುವುದು ಕಂಡುಬರುತ್ತಿರಲಿಲ್ಲ. ಬಹುತೇಕ ಸಾರ್ವಜನಿಕ ಸಭೆಗಳ ಮತ್ತು ಭಾಷಣ ಮಾಡುವವರ ಬಗ್ಗೆ ಭರಪೂರ ಪ್ರಚಾರ ಇರುತ್ತಿರ ಲಿಲ್ಲ; ಬಾಯಿಮಾತಿ ನಿಂದಲೇ ಜನ ಸೇರುತ್ತಿದ್ದರು.

ಆದರೆ, ಕಳೆದ ೨-೩ ದಶಕಗಳಲ್ಲಿ ಚುನಾವಣಾ ಪ್ರಚಾರದ ವೈಖರಿ, ಭಾಷೆ ಮತ್ತು ವ್ಯವಸ್ಥೆಗಳು ಆಮೂಲಾಗ್ರವಾಗಿ ಬದಲಾವಣೆ ಕಂಡಿವೆ. ಚುನಾವಣಾ
ಆಯೋಗದ ಕೆಲವೊಂದು ಕಟ್ಟುನಿಟ್ಟಿನ ಕ್ರಮದಿಂದಾಗಿ, ನಗರ ಮತ್ತು ಪಟ್ಟಣಗಳ ಸೌಂದರ್ಯವನ್ನು ಹಾಳುಮಾಡುವ ಪೋಸ್ಟರ್, ಹೋರ್ಡಿಂಗ್, ಬ್ಯಾನರ್ ಮತ್ತು ಬಂಟಿಂಗ್ಸ್ ಬಹುತೇಕ ನೇಪಥ್ಯಕ್ಕೆ ಸರಿದಿವೆ. ಹಾಗೆಯೇ, ದಿನ-ರಾತ್ರಿ ಎನ್ನದೇ ಕಿರುಚುವ ಧ್ವನಿವರ್ಧಕಗಳ ಕಾಟವೂ ಇಲ್ಲ; ಅಷ್ಟರ ಮಟ್ಟಿಗೆ ಜನರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.

ಚುನಾವಣಾ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣದ ಗರಿಷ್ಠ ಬಳಕೆಯಾಗುತ್ತಿದೆ. ಆಡಂಬರದ ಸಾರ್ವಜನಿಕ ಸಭೆಗಳ ಪೀಠಿಕೆಯಾಗಿ ರೋಡ್ ಶೋಗಳು ನಡೆಯುತ್ತಿವೆ ಮತ್ತು ಇದರಲ್ಲಿ ರಾಜ್ಯ/ರಾಷ್ಟ್ರದ ಪ್ರಭಾವಿ ರಾಜಕೀಯ ಧುರೀಣರು ಪಾಲ್ಗೊಳ್ಳುತ್ತಿದ್ದಾರೆ. ತಮ್ಮ ಪಕ್ಷ ಅಥವಾ ಅಭ್ಯರ್ಥಿ ಇತರರಿಗಿಂತ ಹೇಗೆ ಭಿನ್ನ ಎಂದು ಭಾಷಣದಲ್ಲಿ ಹೇಳುತ್ತಿದ್ದ ಕಾಲವೊಂದಿತ್ತು; ಆದರೀಗ, ಇಂಥವರನ್ನು ಪ್ರಧಾನಿ ಮಾಡಲು ಮತನೀಡಿ, ದೇಶವನ್ನು ಮತ್ತು
ಸಂವಿಧಾನವನ್ನು ಉಳಿಸಲು ಮತನೀಡಿ, ರಾಷ್ಟ್ರೀಯತೆ/ದೇಶಪ್ರೇಮಕ್ಕಾಗಿ ಮತ್ತು ದೇಶದ ಜಾತ್ಯತೀತ ಸ್ವರೂಪವನ್ನು ಉಳಿಸಿಕೊಳ್ಳಲಿಕ್ಕಾಗಿ, ಸರ್ವರಿಗೂ ಸಮಪಾಲು-ಸಮಬಾಳು ನೀಡುವುದಕ್ಕಾಗಿ ಮತನೀಡಿ ಮುಂತಾದ ಘೋಷಣೆಗಳು ಮುನ್ನೆಲೆಗೆ ಬಂದಿವೆ.

ಬಿಜೆಪಿಯವರಂತೂ, ‘ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮತನೀಡಿ’ ಎಂಬುದನ್ನು ಪ್ರಚಾರದ ಘೋಷವಾಕ್ಯವನ್ನಾಗಿ ಮಾಡಿಬಿಟ್ಟಿ ದ್ದಾರೆ; ತನಗೆ ಮತನೀಡಿ ಎಂದು ಈ ಪಕ್ಷದ ಯಾವ ಅಭ್ಯರ್ಥಿಯೂ ಕೋರುವುದಿಲ್ಲವಂತೆ. ಇದನ್ನು ಕೇಳಿದ ಅಶಿಕ್ಷಿತ ಹೈದನೊಬ್ಬ, ‘ನಮ್ಮ ಸಮಸ್ಯೆ ಕೇಳಲು ಮೋದಿ ಇಲ್ಲೇ ಇರ್ತಾರಾ?’ ಎಂದು ಪ್ರಶ್ನಿಸಿ ಅಭ್ಯರ್ಥಿಗೆ ಮುಜುಗರ ಉಂಟುಮಾಡಿದ್ದನಂತೆ. ಸೆಕ್ಯುಲರಿಸಂ ಅನ್ನು ಮುಂದು ಮಾಡಿಕೊಂಡಿರುವ
ಕಾಂಗ್ರೆಸ್‌ನವರು, ಸಂವಿಧಾನವು ಬದಲಾಗದಂತಿರಲು ಮತ್ತು ಮೋದಿಯವರನ್ನು ಕೆಳಗಿಳಿಸಲು ಮತ ಕೇಳುತ್ತಿದ್ದಾರಂತೆ.

ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳು ಭಾರಿ ಬಾಜಾ-ಬಜಂತ್ರಿಯೊಂದಿಗೆ ಬಿಡುಗಡೆಗೊಳಿಸುತ್ತಿರುವ ಚುನಾವಣಾ ಪ್ರಣಾಳಿಕೆಗಳು ನಗೆ ಪಾಟಲಿಗೆ ಈಡಾಗುತ್ತಿವೆ. ಈ ಪ್ರಣಾಳಿಕೆಗಳನ್ನು ಹಿಡಿದುಕೊಂಡು ಯಾವ ಅಭ್ಯರ್ಥಿಯೂ ಚುನಾವಣಾ ಪ್ರಚಾರಕ್ಕೆ ಇಳಿದಂತೆ ಕಾಣುತ್ತಿಲ್ಲ. ಅಭ್ಯರ್ಥಿಗಳು
ಸ್ವಂತಿಕೆಯನ್ನು ಕಳೆದುಕೊಂಡು ತಮ್ಮ ಧುರೀಣರ ಹೆಸರಿನಲ್ಲಿ ಮತ ಕೇಳುವುದು ಪ್ರಜ್ಞಾವಂತರನ್ನು ದಿಗಿಲುಗೊಳಿಸಿದೆ.

ಚುನಾವಣಾ ಪ್ರಚಾರ ಸಮಯದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಪರವಾಗಿ ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ನೀಡುವುದು
ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿದೆ. ಇದರ ಜತೆಗೆ, ಕೆಲವಷ್ಟು ನಿಯಮಾವಳಿಯ ಅಡಿಯಲ್ಲಿ ಅವರ ಬೆಂಬಲಿಗರೂ ಜಾಹೀರಾತು ನೀಡು ವುದು ಬೇರೆ ಮಾತು. ಈ ಜಾಹೀರಾತುಗಳಲ್ಲಿ ಪಕ್ಷದ/ಅಭ್ಯರ್ಥಿಯ ಈವರೆಗಿನ ಸಾಧನೆ ಮತ್ತು ಮುಂದಿನ ದಿನಗಳ ಯೋಜನೆಗಳ ಬಗ್ಗೆ ಉಲ್ಲೇಖ ವಿದ್ದರೂ, ಇತ್ತೀಚಿನ ದಿನಗಳಲ್ಲಿ ಇಂಥ ಜಾಹೀರಾತುಗಳಲ್ಲಿ ಬಳಸುವ ಭಾಷೆ, ತಮ್ಮ ರಾಜಕೀಯ ವಿರೋಧಿಗಳನ್ನು ಲೇವಡಿ- ಟೀಕೆಗಳಿಂದ ರೊಚ್ಚಿಗೆಬ್ಬಿಸುವ ಪರಿ ಮತದಾರರಲ್ಲಿ ದಿಗ್ಭ್ರಮೆ ಮೂಡಿಸಿದೆ.

ಚೊಂಬು, ಡೇಂಜರ್, ಪಿಕ್ ಪಾಕೆಟ್, ಮಹಾಮೋಸ ಮುಂತಾದ ಆಣಿಮುತ್ತುಗಳು ಇಲ್ಲಿ ಮನಸ್ವೀ ಮಿನುಗುತ್ತಿದ್ದು, ಪ್ರಜ್ಞಾವಂತರಿರಲಿ, ಚುನಾವಣಾ ರಾಜಕೀಯ ಮತ್ತು ತಂತ್ರಗಾರಿಕೆಯ ಒಳಹೂರಣಗಳನ್ನು ತಿಳಿಯದ ಜನರೂ ಜುಗುಪ್ಸೆ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕ ಸಭೆಗಳಲ್ಲಿನ ರಾಜಕಾರಣಿ ಗಳ ಭಾಷಣಗಳೂ ತಮ್ಮ ಹಿಂದಿನ ಮಟ್ಟವನ್ನು ಕಳೆದುಕೊಂಡಿವೆ. ‘ಅನಿಷ್ಟಕ್ಕೆಲ್ಲಾ ಶನೈಶ್ಚರನೇ ಕಾರಣ’ ಎನ್ನುವಂತೆ ದೇಶದ/ರಾಜ್ಯದ ಸಮಸ್ಯೆಗಳಿಗೆಲ್ಲ ತಂತಮ್ಮ ರಾಜಕೀಯ ವಿರೋಧಿಗಳನ್ನೇ ಗುರಿಯಾಗಿಸುವುದು, ಏನಾದರೂ ಒಳ್ಳೆಯದಾಗಿದ್ದರೆ ತಮ್ಮ ಹೆಗಲುಗಳನ್ನು ಮುಟ್ಟಿ ಕೊಳ್ಳುವುದು, ಸಭಿಕರ ಶಿಳ್ಳೆ-ಚಪ್ಪಾಳೆ-ಕೇಕೆಗಳು ಹೆಚ್ಚಾದಂತೆ ರಾಜಕೀಯ ಎದುರಾಳಿಗಳ ಕುರಿತಾದ ತಮ್ಮ ಟೀಕೆ ಮತ್ತು ಅವಹೇಳನವನ್ನು ‘ಟಾಪ್ ಗೇರ್’ಗೆ ತಿರುಗಿಸುವುದು ಈಗ ಮಾಮೂಲಾಗಿಬಿಟ್ಟಿದೆ.

‘ಗಂಡಸ್ತನವಿದ್ದರೆ, ತಾಕತ್ತಿದ್ದರೆ, ದಮ್ ಇದ್ದರೆ’ ಮುಂತಾದ ಶಬ್ದಗಳು ಕತ್ತರಿ ಪ್ರಯೋಗವಿಲ್ಲದೆ ಬಾಯಿಂದ ಹೊಮ್ಮುತ್ತವೆ. ದುರ್ದೈವವೆಂದರೆ, ಒಂದು ಕಾಲಕ್ಕೆ ತಳಸ್ತರದ ರಾಜಕಾರಣಿಗಳಿಗೆ ಸೀಮಿತವಾಗಿದ್ದ ಈ ಟ್ರೆಂಡ್ ಇತ್ತೀಚೆಗೆ ಉನ್ನತ ಮಟ್ಟದ ರಾಜಕಾರಣಿಗಳೆಡೆಗೂ ನಿಧಾನವಾಗಿ ಹರಿಯುತ್ತಿದೆ. ಇದು ಬದಲಾವಣೆಯ ಸಂಕೇತವೋ, ರಾಜಕಾರಣವು ಅಧೋಗತಿಗೆ ಇಳಿದಿರುವುದರ ದ್ಯೋತಕವೋ ಎಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ವಿಲಕ್ಷಣವಾದು ದನ್ನೇ ನೋಡುತ್ತಾ ಹೋಗುತ್ತೇವೆ ಎಂಬುದಂತೂ ಸತ್ಯ!

(ಲೇಖಕರು ಅರ್ಥಿಕ ಮತ್ತು ರಾಜಕೀಯ
ವಿಶ್ಲೇಷಕರು)

Leave a Reply

Your email address will not be published. Required fields are marked *

error: Content is protected !!