Friday, 17th May 2024

ಹೃದಯ ಶ್ರೀಮಂತರು ಎಂದರೆ ಯಾರು ?

ಆರೋಗ್ಯ ಭಾಗ್ಯ

ಮಿರ್ಲೆ ಚಂದ್ರಶೇಖರ

ಆಹಾರ ಸೇವನೆ, ವ್ಯಾಯಾಮದಲ್ಲಿ ಶಿಸ್ತನ್ನು ಪಾಲಿಸಿಕೊಂಡು ಬಂದವರಿಗೂ ಹೃದಯಾಘಾತ ಆಗಿರುವ ಉದಾಹರಣೆಗಳಿವೆ. ಹಾಗೆಯೇ, ತಂಬಾಕು ಮತ್ತು ಕುಡಿತದ ಚಟವಿದ್ದು, ಆಹಾರ ಸೇವನೆಯಲ್ಲಿ ಇತಿಮಿತಿಯಿಲ್ಲದೆ ತಿಂದು ಇಳಿವಯಸ್ಸಿನಲ್ಲೂ ಚೆನ್ನಾಗಿರುವ ಗೆಳೆಯರನ್ನೂ ನೋಡಿದ್ದೇನೆ. ಹಾಗಾದರೆ ಹೃದ್ರೋಗಕ್ಕೆ ಕಾರಣವಾದರೂ ಏನು?

ಇಂದಿನ ಜೀವನಶೈಲಿಯಲ್ಲಿ ಶ್ರೀಮಂತ ಯಾರು? ಎಂಬ ಪ್ರಶ್ನೆ ಕೇಳಿದರೆ, ‘ಯಾರು ಮಧುಮೇಹ, ರಕ್ತದೊತ್ತಡ ಇಲ್ಲದೆ, ಇಷ್ಟಪಟ್ಟಿದ್ದನ್ನು ಸಮೃದ್ಧಿಯಾಗಿ ತಿಂದು, ಕಣ್ಣು ಮುಚ್ಚಿದಾಕ್ಷಣ ನಿದ್ರಾದೇವತೆಯನ್ನು ಅಪ್ಪಿಕೊಳ್ಳುತ್ತಾನೋ, ಅವನೇ!’ ಎಂದು ಉತ್ತರಿಸಬೇಕಾಗುತ್ತದೆ. ಕೋಟಿಕೋಟಿ ಹಣವಿದ್ದರೆ ಏನು ಬಂತು, ನಮ್ಮಿಷ್ಟದಂತೆ ಬದುಕಲು ಸಾಧ್ಯವಾಗದಿದ್ದಾಗ. ಮನಸ್ಸಿನೊಳಗೆ ಆಸೆಗಳನ್ನು ಬೆಟ್ಟದಷ್ಟು ತುಂಬಿಕೊಂಡಿರುತ್ತೇವೆ, ಆಸೆ ಫಲಿಸದಿದ್ದಾಗ ನಿರಾಸೆ ಮತ್ತು ಅದರದೇ ಚಿಂತೆ.

ಇಷ್ಟಕ್ಕೇ ಸುಮ್ಮನಿರುತ್ತೇವೆಯೇ? ಇಲ್ಲ. ಯಾವಾಗಲೂ ಬೇರೆಯವರ ಜೀವನದ ಕಡೆಗೇ ನಮ್ಮ ದೃಷ್ಟಿ ಹರಿಸುತ್ತಾ, ಅವರಂತೆ ನಾವಿಲ್ಲವಲ್ಲ ಎಂಬ ಚಿಂತೆ ಮತ್ತು ಅಸೂಯೆಗೆ ಒಡ್ಡಿಕೊಳ್ಳುತ್ತೇವೆ. ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ನೆಮ್ಮದಿಯ ಬದುಕಿಗೆ ಕೊರತೆಯಾಗದು; ಆದರೆ ಬಿಡಬೇಕಲ್ಲ ಮನಸ್ಸು?! ಮನಸ್ಸೆಂಬುದು ಮಿದುಳಿನಲ್ಲಿರುತ್ತದೋ ಹೃದಯದಲ್ಲಿರುತ್ತದೋ ತಿಳಿಯದು; ಆದರೆ ಮಿದುಳು ಮತ್ತು ಹೃದಯ ಎರಡೂ ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರವೇ ಮನುಷ್ಯ ಆರೋಗ್ಯವಂತ ನಾಗಿರುತ್ತಾನೆ.

ಸ್ನೇಹಿತನೊಬ್ಬ ಸಿಕ್ಕಿ ಮಾತನಾಡಿ ಒಂದು ದಿನವಾಗಿರಬಹುದು, ಮರುದಿನ ಹೃದಯಾಘಾತವಾಗಿ ಮರಣ ಹೊಂದಿದನೆಂಬ ಆಘಾತಕಾರಿ ಸುದ್ದಿ. ಮತ್ತೊಬ್ಬ ವಾಯುವಿಹಾರಕ್ಕೆ ಹೋಗಿಬಂದು ಮನೆಯೊಳಗೆ ಕಾಲಿಡುತ್ತಿದ್ದಂತೆ ಕುಸಿದು ಪ್ರಾಣತೆತ್ತ. ಸತ್ತವರ ಸಂಖ್ಯೆ ಇಲ್ಲಿಗೇ ನಿಲ್ಲದು. ಕೆಲವಾರು ವರ್ಷಗಳಿಂದ ಇಂಥ ಸುದ್ದಿಗಳಿಗೆ ಬರವಿಲ್ಲ. ವಯೋಸಹಜ ನಿವೃತ್ತಿಯಾಗಿ ಒಂದೆರಡು ವರ್ಷಗಳು ಕಳೆಯುವಷ್ಟರಲ್ಲಿ ಹೃದಯಾಘಾತದಿಂದ ಸತ್ತವರು ಬಹಳಷ್ಟು ಮಂದಿ. ಇಂಥ ಸಾವುಗಳು ಸಂಭವಿಸುತ್ತಿರುವುದಕ್ಕೆ ಕಾರಣಗಳು ಗೊತ್ತಿದ್ದರೂ, ಮುನ್ನೆಚ್ಚರಿಕೆ ತೆಗೆದುಕೊಳ್ಳುವುದರಲ್ಲಿ ಉದಾಸೀನ ತೋರು ತ್ತಿದ್ದೇವೆ.

ನನ್ನದೇ ಉದಾಹರಣೆ ತೆಗೆದುಕೊಂಡರೆ, ನನ್ನ ನಡವಳಿಕೆಯೂ ಹಾಗೇ ಇತ್ತು. ಮನೆಯಲ್ಲಿ ಮಗ ವೈದ್ಯನಾಗಿದ್ದರಿಂದ ಸಂಭಾವ್ಯ ಹೃದಯಾಘಾತದ ಅನಾಹುತದಿಂದ ಪಾರಾದೆ. ಕೆಲವು ವರ್ಷಗಳಿಂದ ನನಗೆ ಮಧುಮೇಹ ಇರುವುದರಿಂದ, ಹೃದಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದರ ಪರಿಣಾಮವಾಗಿ ಮಾಡಿಸಿದ ಪರೀಕ್ಷೆಯಲ್ಲಿ ಪಾಸಿಟಿವ್ ಬಂತು. ಗುರುತರವಾದ ಯಾವ ಮುನ್ಸೂಚನೆ ನನಗೆ ದಕ್ಕದೆಯೂ ಇದು ಹೇಗೆ ಸಾಧ್ಯ ಎಂದು ಕೊಂಡು ಮತ್ತೊಂದು ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಿಕೊಂಡೆ. ಅಲ್ಲಿಯೂ ಅದೇ ಫಲಿತಾಂಶ- ಪಾಸಿಟಿವ್. ಈ ಫಲಿತಾಂಶದಿಂದ ನಾನು ಭಯಗೊಂಡಿದ್ದೂ ಉಂಟು; ಹೃದಯ ಸಂಬಂಧಿ ಕಾಯಿಲೆ ಇದೆಯೆಂದರೆ ಭಯವಾಗದೆ ಇರುತ್ತದೆಯೇ? ವಿಳಂಬ ಮಾಡಲಿಲ್ಲ, ಬೆಂಗಳೂರಿನ ಪ್ರತಿಷ್ಠಿತ ಹೃದಯಾಲಯವೊಂದಕ್ಕೆ ಮರುದಿನವೇ ಹೊರಟೆ.

ಅಲ್ಲಿ ಆಂಜಿಯೋಗ್ರಾಮ್ ಮಾಡಲಾಗಿ ಎರಡು ರಕ್ತನಾಳಗಳಲ್ಲಿ ಬ್ಲಾಕೇಜ್ ಇದೆಯೆಂದು ‘ಸ್ಟೆಂಟ್’ ಹಾಕಿದರು. ಚಿಕಿತ್ಸೆಗೆ ತಗುಲಿದ ಸಮಯ ಅರ್ಧಗಂಟೆ ಗಿಂತಲೂ ಕಡಿಮೆ, ನೋವು ಇಲ್ಲ. ಪ್ರಜ್ಞೆ ತಪ್ಪಿಸುವ ಅರಿವಳಿಕೆಯನ್ನು ಕಾಣೆ. ವೈದ್ಯರು ನನ್ನ ಜತೆ ಮಾತನಾಡುತ್ತಲೇ ಸ್ಟೆಂಟ್ ಅಳವಡಿಸಿದರು. ಡಿಸ್
ಚಾರ್ಜ್ ಆಗಿ ಹೊರಬಂದ ನಂತರ ‘ಖರ್ಚು ಎಷ್ಟಾಯಿತು?’ ಎಂದು ಮಗನನ್ನು ಕೇಳಿದೆ. ಆಗ ಬಂದ ಉತ್ತರ ದಿಂದ ನಿಜವಾಗಿಯೂ ಹೃದಯಾಘಾತ ಆಗಬೇಕಾಗಿತ್ತು. ಆದರೆ ಹೃದಯ ಸದೃಢವಾಗಿತ್ತು ಎನಿಸುತ್ತದೆ, ಪ್ರಶಾಂತವಾಗಿಯೇ ಇದ್ದೆ! ಆದ ಖರ್ಚು- ‘ನಾಲ್ಕು ಲಕ್ಷದ ಎಂಟು ಸಾವಿರ ರುಪಾಯಿ ಮಾತ್ರ’. ಅದೂ ವಿನಂತಿಸಿಕೊಂಡ ಮೇರೆಗೆ ಡಿಸ್ಕೌಂಟು ಕೊಟ್ಟ ನಂತರ ಆದ ಬಿಲ್ಲು!

ಇದೆಲ್ಲವೂ ನಡೆದಿದ್ದು ಮಗನ ಮದುವೆಗೆ ಕೆಲವೇ ದಿನಗಳಿರುವಾಗ. ಈಗ ಆರೋಗ್ಯವಾಗಿದ್ದೇನೆ. ಎಲ್ಲರಂತೆ ನಾನೂ ಚಟುವಟಿಕೆಯಿಂದ ಇರುವೆ. ಅಕಸ್ಮಾತ್, ಮಗನ ಮಾತು ಕೇಳದೆ ಪರೀಕ್ಷೆಗೆ ಒಳಪಡದೇ ಇದ್ದಿದ್ದರೆ ಏನಾಗುತ್ತಿತ್ತೋ? ಇಂದಿನ ಕಾಲಘಟ್ಟದಲ್ಲಿ, ವಯಸ್ಸಿನ ತಾರತಮ್ಯ ಇಲ್ಲದೆ ಎಲ್ಲರೂ ಹೃದಯ ಪರೀಕ್ಷೆಗೆ ಒಳಗಾಗಬೇಕಾದ್ದು ಸೂಕ್ತ. ನಾನಿದ್ದ ತೀವ್ರ ನಿಗಾ ಘಟಕದ ವಾರ್ಡ್‌ನಲ್ಲಿ, ಯುವಕರಿಂದ ಹಿಡಿದು ಬದುಕಿನ ಸಂಧ್ಯಾಕಾಲದಲ್ಲಿ
ಇರುವ ಎಲ್ಲರ ಎದೆಗಳನ್ನು ಬಗೆದು, ಹೃದಯಗಳನ್ನು ರಿಪೇರಿ ಮಾಡಿ ಹೊಲಿದು, ಎರಡು ಸಾಲುಗಳಲ್ಲಿ ಉದ್ದಕ್ಕೂ ಮಲಗಿಸಿದ್ದರು. ಅದು ಬಹುದೊಡ್ಡ ಆಸ್ಪತ್ರೆ, ಬಹುತೇಕ ಎಲ್ಲಾ ವಾರ್ಡ್‌ಗಳೂ ತುಂಬಿ ತುಳುಕುತ್ತಿದ್ದವು. ಆದರೆ ಅಲ್ಲಿ ನನ್ನ ಗಮನಕ್ಕೆ ಬಂದಿದ್ದು- ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಒಬ್ಬ ಮಹಿಳೆಯೂ ಇಲ್ಲದಿದ್ದುದು.

ಮಗನ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಿತರಿಸುವ ಕಾರ್ಯದಲ್ಲಿ ಮಗ್ನನಾಗಿದ್ದಾಗ ಮನಸ್ಸು ತಡೆಯದೆ, ಸ್ಟೆಂಟ್ ಹಾಕಿಸಿಕೊಂಡಿದ್ದನ್ನು ಆತ್ಮೀಯರಲ್ಲಿ ಹೇಳಿಕೊಳ್ಳುತ್ತಿದ್ದೆ. ಆಗ, ‘ನಾನು ಸಹ ಹಾಕಿಸಿಕೊಂಡೆ’ ಎಂದು ಒಬ್ಬರೆಂದರೆ ಮತ್ತೊಬ್ಬರು, ‘ನಿನ್ನದು ಪರವಾಗಿಲ್ಲ, ನಾನು ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದೇನೆ’ ಎಂದರು. ಶೇ.೫೦ರಷ್ಟು ಮಂದಿಯ ಪ್ರತಿಕ್ರಿಯೆಗಳು ಹೀಗೇ ಇದ್ದವು. ಇನ್ನು, ನನ್ನ ಆತ್ಮೀಯ ಗೆಳೆಯನ ಪರಿಸ್ಥಿತಿ ಎಲ್ಲರದಕ್ಕಿಂತಲೂ ಭಿನ್ನ. ಹದಿನೈದು ವರ್ಷಗಳ ಹಿಂದೆ ಆತ ಸ್ಟೆಂಟ್ ಹಾಕಿಸಿಕೊಂಡಿದ್ದಾನೆ. ಆಗಿಂದಾಗ್ಗೆ ಎದೆನೋವು ಕಾಣಿಸಿಕೊಳ್ಳುತ್ತಿದ್ದುದರಿಂದ ಆಂಜಿಯೋಗ್ರಾಂ ಮಾಡಿಸಿಕೊಳ್ಳಲಾಗಿ ಎರಡು ರಕ್ತನಾಳಗಳು ಸಂಪೂರ್ಣ ಬ್ಲಾಕ್ ಆಗಿದ್ದರೆ, ಉಳಿದ ರಕ್ತನಾಳಗಳ ಐದು ಕಡೆಗಳಲ್ಲಿ ಶೇ.೩೦ರಿಂದ
೯೫ರವರೆಗೆ ಬ್ಲಾಕ್ ಆಗಿದ್ದುದು ಕಂಡುಬಂತು. ಇದು ಕಡುವೈರಿಗೂ ನೋವು ತರುವಂಥ ಸಂಗತಿ.

ಶಸ್ತ್ರ ಚಿಕಿತ್ಸೆ ಮಾಡಿದರೂ ಅದು ಯಶಸ್ವಿ ಆಗುವುದರಲ್ಲಿ ಖಾತ್ರಿಯಿಲ್ಲ. ಹೀಗಾಗಿ ಔಷಧಿ ಸೇವಿಸಿಕೊಂಡು ದಿನದೂಡುವಂತೆ ವೈದ್ಯರು ಸಲಹೆ ಕೊಟ್ಟಿದ್ದಾರೆ. ಜಾತಿ-ಧರ್ಮಗಳು, ಲಿಂಗ ಹಾಗೂ ವಯಸ್ಸಿನ ಭೇದಗಳಿಲ್ಲದೆ ಎಲ್ಲರನ್ನೂ ಹೀಗೆ ಕಾಡುತ್ತಿರುವ ಹೃದಯಸಂಬಂಧಿತ ಕಾಯಿಲೆಗಳಿಗೆ ಕಾರಣವಾದರೂ ಏನು? ಆಹಾರ ಸೇವನೆಯಲ್ಲಿ, ವ್ಯಾಯಾಮದಲ್ಲಿ ಕಟ್ಟುನಿಟ್ಟಿನ ಶಿಸ್ತನ್ನು ಪಾಲಿಸಿಕೊಂಡು ಬಂದವರಿಗೂ ಹೃದಯಾಘಾತ ಆಗಿರುವ
ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಹಾಗೆಯೇ, ತಂಬಾಕು ಮತ್ತು ಕುಡಿತದ ಚಟವಿದ್ದು, ಆಹಾರ ಸೇವನೆ ಯಲ್ಲಿ ಇತಿಮಿತಿಯಿಲ್ಲದೆ ಯರ್ರಾಬಿರ್ರಿ ತಿಂದು ಇಳಿವಯಸ್ಸಿನಲ್ಲೂ ಚೆನ್ನಾಗಿರುವ ಗೆಳೆಯರನ್ನೂ ನೋಡಿದ್ದೇನೆ.

ಹಾಗಾದರೆ ಈ ರೋಗಕ್ಕೆ ಕಾರಣವಾದರೂ ಏನು? ವೈದ್ಯಕೀಯ ವಿಜ್ಞಾನದ ಪ್ರಕಾರ, ಅಧಿಕ ರಕ್ತದೊತ್ತಡ, ಮಧುಮೇಹ, ಧೂಮಪಾನ, ಬೊಜ್ಜು ಮುಂತಾದ ಅಪಾಯಕಾರಿ ಅಂಶಗಳು ಭಾರತೀಯರಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣ. ಇದರ ಜತೆಗೆ, ಅನು ವಂಶೀಯತೆ, ಸೋಮಾರಿ ತನ, ಆಹಾರದಲ್ಲಿ ಹಣ್ಣು- ತರಕಾರಿಗಳ ಕೊರತೆ ಹಾಗೂ ಮಾನಸಿಕ ಒತ್ತಡವೂ ಸೇರಿಕೊಂಡಿದೆ. ವಿಶ್ವದಲ್ಲಿ ಪ್ರತಿವರ್ಷ ಅಂದಾಜು ೧೭.೯೦ ಮಿಲಿಯನ್ ಜನರು ಮರಣ ಹೊಂದುತ್ತಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಭಾರತದಲ್ಲಿ ೫೪.೫೦ ಮಿಲಿಯನ್ ಹೃದ್ರೋಗಿಗಳು ೨೦೧೬ರಲ್ಲಿ ವರದಿ ಯಾಗಿದ್ದು, ೨೦೨೨ರ ವರ್ಷವೊಂದರಲ್ಲೇ ೩೨,೪೫೭ ಮಂದಿ ಹೃದ್ರೋಗದಿಂದ ಮರಣಿಸಿದ್ದಾರೆಂದು ತಿಳಿದುಬಂದಿದೆ.

ಹೀಗೆ ಸಾಯುವವರಲ್ಲಿ ಗ್ರಾಮೀಣರಿಗಿಂತ ಒತ್ತಡದಲ್ಲಿರುವ ನಗರವಾಸಿಗಳೇ ಹೆಚ್ಚು. ಕಾಯಿಲೆ ಬಂದ ನಂತರ ನಿತ್ಯವೂ ಊಟದ ಹಾಗೆ ಮುಷ್ಟಿ ತುಂಬಾ ಮಾತ್ರೆ/ಔಷಽ ತೆಗೆದುಕೊಳ್ಳುವ ಬದಲು ಶಿಸ್ತುಬದ್ಧ ಜೀವನ ನಡೆಸುವುದು ಒಳ್ಳೆಯದು. ರೋಗ ಬರುವುದಕ್ಕೆ ಮುಂಚೆಯೇ ಮುನ್ನೆಚ್ಚರಿಕಾ ಕ್ರಮಗಳನ್ನು
ತೆಗೆದುಕೊಳ್ಳುವ ಮೂಲಕ ಆರೋಗ್ಯವಂತರಾಗಿರಬಹುದು. ಮಕ್ಕಳಿಗೆ ಆರೋಗ್ಯ ಶಿಕ್ಷಣವನ್ನು ನೀಡುವುದು, ಹೃದಯದ ಕಾಯಿಲೆಯ ಬಗ್ಗೆ ಅರಿವು ಮೂಡಿಸುವುದು, ಧೂಮಪಾನ ಮತ್ತು ತಂಬಾಕು ಸೇವನೆಯನ್ನು ನಿಷೇಧಿಸುವುದು, ಆರೋಗ್ಯಕರ ಆಹಾರ ಮತ್ತು ಹಣ್ಣು-ತರಕಾರಿಗಳ ಸೇವನೆಗೆ, ನಿತ್ಯವ್ಯಾಯಾಮಕ್ಕೆ ಆದ್ಯತೆ ನೀಡುವುದು ಇಲ್ಲಿ ಮುಖ್ಯವಾಗಬೇಕು.

ಜತೆಗೆ, ಅಧಿಕ ಕೊಬ್ಬಿನ ಹೈನು ಉತ್ಪನ್ನಗಳನ್ನು ಮಿತಿಗೊಳಿಸಿದರೆ, ಕಾರ್ಬೋಹೈಡ್ರೇಟ್ ಗಳನ್ನು ಕಡಿಮೆ ಮಾಡಿದರೆ ಒಳ್ಳೆಯದು. ಭಾರತೀಯರ ಆರೋಗ್ಯಕ್ಕೆ ಇಲ್ಲೇ ಹುಟ್ಟಿದ ಯೋಗವು ದಿವ್ಯೌಷಧ. ನಿಯತವಾಗಿ ನಿತ್ಯವೂ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿ ಇಟ್ಟುಕೊಂಡು ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳಬಹುದು. ನಾವು ಹೇಗೇ ಜೀವಿಸಿದರೂ ಕೆಲವೊಮ್ಮೆ ಬರುವ ಕಾಯಿಲೆಗಳನ್ನು ತಡೆಯಲಾಗದು. ಇಂದಿನ ಕೆಲವು ಆಸ್ಪತ್ರೆಗಳು ಸುಲಿಗೆಯ ಕೇಂದ್ರಗಳಾಗಿಬಿಟ್ಟಿವೆ. ಸಾಮಾನ್ಯ ಜನರು ಕಾಯಿಲೆಯಿಂದ ಸಾಯುವುದಕ್ಕಿಂತ ಖರ್ಚು ಭರಿಸಲಾಗದೆ ನರಳಿ ಸಾಯುವುದೇ ಹೆಚ್ಚು.

ಆದ್ದರಿಂದ, ಸಂಪಾದನೆಯ ಸ್ವಲ್ಪ ಮೊತ್ತವನ್ನು ಆರೋಗ್ಯ ವಿಮೆಗಾಗಿ ವ್ಯಯಿಸುವುದು ಉತ್ತಮ. ಇದರಿಂದ ಅತ್ಯಂತ ಕಡಿಮೆ ಹಣದಲ್ಲಿ ರೋಗವನ್ನು ಗುಣಪಡಿಸಿಕೊಂಡು ನಿರ್ಭಯವಾಗಿ ದಿನದೂಡಲಿಕ್ಕೆ ಸಾಧ್ಯ. ನಮ್ಮ ಹೃದಯದ ಆರೋಗ್ಯವು, ನಮ್ಮ ಕೆಲಸದಲ್ಲಿ ಮತ್ತು ಜೀವನದಲ್ಲಿ ನಮಗಿರುವ ಸಂಪತ್ತಾಗಿದೆ. ಆದ್ದರಿಂದ ಹೃದಯದ ಆರೋಗ್ಯವೇ ನಮ್ಮ ನಿಜವಾದ ಸಂಪತ್ತು ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ.

(ಲೇಖಕರು ನಿವೃತ್ತ ಸಹಾಯಕ ಕಾರ್ಯಪಾಲಕ
ಎಂಜಿನಿಯರ್)

Leave a Reply

Your email address will not be published. Required fields are marked *

error: Content is protected !!