Tuesday, 14th May 2024

ಏಲಿಯನ್ನುಗಳು ಚುನಾವಣೆಯನ್ನು ನೋಡುತ್ತಿದ್ದರೆ !

ಶಿಶಿರಕಾಲ

shishirh@gmail.com

ಜಾಗತಿಕ ವಿದ್ಯಮಾನಗಳನ್ನು ಗ್ರಹಿಸುವಾಗ ಚುನಾವಣೆ ನಿತ್ಯ ನಿರಂತರ. ಚುನಾವಣೆಯನ್ನು ಗೆಲ್ಲಲು ಜಾತಿ, ಹಣಬಲ ಹೀಗೆ ಏನೇನೋ ಕಸರತ್ತು ಮಾಡುವುದು ಸಾಮಾನ್ಯ. ಈ ಬಾರಿ ಚೊಂಬು, ಕಿಸೆಗಳ್ಳರು ಎಂದೆಲ್ಲ ಜಾಹೀರಾತು ಬಂದದ್ದು ನೋಡಿರುತ್ತೀರಿ. ಇದು ನಮ್ಮಲ್ಲಿ ಸ್ವಲ್ಪ ಹೊಸತು. ಅಮೆರಿಕದಲ್ಲಿ ಚುನಾವಣೆ ಬಂತೆಂದರೆ ಪ್ರತಿಸ್ಪಽಯನ್ನು ಅವಾಚ್ಯವಾಗಿ ಬಯ್ಯುವುದು, ಮನೆಯೆದುರು ಪೋಸ್ಟರ್ ಹಾಕಿಕೊಳ್ಳುವುದು ಮಾಮೂಲು.

ಚುನಾವಣೆ. ಈ ವರ್ಷ ಭೂಮಿಯ ಯಾವ ಮೂಲೆಯ ದೇಶದತ್ತ ನೋಡಿದರೂ ಇಲೆಕ್ಷನ್. ಎಲ್ಲೆಂದರಲ್ಲಿ ಲೆಫ್ಟ್ ವಿಂಗ್, ರೈಟ್ ವಿಂಗ್- ಹೀಗೆ ನಾನಾ ರೀತಿಯ ರೆಕ್ಕೆ ಪುಕ್ಕ ಕಟ್ಟಿಕೊಂಡ ರಾಜಕಾರಣಿಗಳು. ಟಿಕೆಟ್ ಹಂಚಿಕೆ, ಪ್ರಣಾಳಿಕೆ, ಆಶ್ವಾಸನೆ, ಭಾಷಣ, ರೋಡ್ ಶೋ, ಕೆಸರೆರೆಚಾಟ, ಜಗಳ, ಹೊಡೆ ದಾಟಗಳು, ಕೆಲವೆಡೆ ದಂಗೆ. ಒಂದೊಮ್ಮೆ ಎಲ್ಲೋ ದೂರದಲ್ಲಿ- ನಮಗಿಂತ ಹೆಚ್ಚಿನ ಬುದ್ಧಿಮತ್ತೆಯ ಏಲಿಯನ್ ವರ್ಗವೊಂದು ಈ ಎಲ್ಲ ಚಟುವಟಿಕೆ ಗಳನ್ನು ನೋಡುತ್ತಿದ್ದರೆ ಅವುಗಳು ಇದೇನಾಗುತ್ತಿದೆ ಎಂದು ತಲೆ (!) ಕೆರೆದುಕೊಳ್ಳಬಹುದು.

‘ಈ ಮನುಷ್ಯನೆನ್ನುವ ಜೀವವರ್ಗ ಅದೇನೋ ಒಂದನ್ನು ಸಾಮೂಹಿಕವಾಗಿ ಮಾಡುತ್ತಿದೆ, ಅವರೆಲ್ಲ ರಸ್ತೆ ರಸ್ತೆಗಳಿಗೆ ಇಳಿಯುತ್ತಾರೆ, ಅದೇನೋ ಹಿಡಿದು ಗಟ್ಟಿ ಸ್ವರದಲ್ಲಿ ಕೂಗುತ್ತ ಹೋಗುತ್ತಿದ್ದಾರೆ, ಲಕ್ಷಗಟ್ಟಲೆ ಜನ ಒಂದೆಡೆ ಪೆಂಡಾಲಿನ ಕೆಳಗೆ ಸೇರುತ್ತಾರೆ, ಅದೆಲ್ಲಿಂದಲೋ ವಿಮಾನದಲ್ಲಿ ಹಾರಿ ಬಂದ ಮನುಷ್ಯ ನೊಬ್ಬ ಇವರೆಲ್ಲರೆದುರು ಏನೇನೋ ಕೂಗಿ ಹೋಗುತ್ತಾನೆ, ಸೇರಿದವರೂ ನಡುನಡುವೆ ಕೂಗುತ್ತಾರೆ, ಎರಡು ಅಂಗಗಳನ್ನು ತಟ್ಟಿ ಚಪ್ಪಾಳೆ ಹಾಕುತ್ತಾರೆ…’ ಎಂದು ಅವು ಹೇಳಿಕೊಳ್ಳ ಬಹುದು.

ಅವುಗಳಲ್ಲಿಯೂ ಬಾಹ್ಯಾಕಾಶ ತಜ್ಞರಿರಬಹುದು. ಅವುಗಳದ್ದೇ ಒಂದು ದೊಡ್ಡ ಟೀಮ್ ಇರಬಹುದು. ಆ ತಂಡ ಭೂಮಿಯತ್ತ ನೋಡುವುದಷ್ಟೇ ಅಲ್ಲ, ನಮ್ಮ ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳನ್ನೂ ಗ್ರಹಿಸಿ ಅರ್ಥೈಸುತ್ತಿರಬಹುದು. ಅವುಗಳದೇ ಪ್ರತ್ಯೇಕ, ಮುಂದುವರಿದ ತಂತ್ರಜ್ಞಾನಗಳಿಂದ ಭಾರತದ ಪ್ರಧಾನಿ ಇವರೇ ಆಗುತ್ತಾರೆ, ಇಷ್ಟೇ ಅಂತರದಲ್ಲಿ ಇಂತಿಂಥವರು ಎಂಪಿಗಳಾಗಿ ಆಯ್ಕೆಯಾಗುತ್ತಾರೆ ಎನ್ನುವ ವರದಿ ತಯಾರಾಗಿರಬಹುದು. ಅದು ಅವುಗಳ ಮುಖ್ಯಸ್ಥನ ಟೇಬಲ್ಲಿನ ಮೇಲೆ ಅದಾಗಲೇ ಹೋಗಿ ಮುಟ್ಟಿರಬಹುದು. ಅಷ್ಟೇ ಅಲ್ಲ, ಏಲಿಯನ್ನುಗಳು ಚುನಾವಣೆಯನ್ನು ವೈಜ್ಞಾನಿಕವಾಗಿ ಅಭ್ಯಾಸ ಮಾಡುತ್ತಿರಬಹುದು.

ಅದು ತಾಂತ್ರಿಕವಾಗಿ ನಡೆಯುವ ಬಗೆ, ಅವುಗಳು ಮನುಷ್ಯ ಜೀವಿಯ ಆಚಾರ ವಿಚಾರಗಳನ್ನು, ಸಂಸ್ಕೃತಿಯನ್ನು, ನಡೆ ನುಡಿಗಳನ್ನು ಹೇಗೆ ನಿರ್ದೇಶಿಸು ತ್ತವೆ ಇತ್ಯಾದಿಗಳು ವಿಶೇಷ ಅಧ್ಯಯನದ ವಿಷಯಗಳಾಗಿರಬಹುದು. ಹೋಮೋಸೇಪಿಯನ್ನರ ಚುನಾವಣೆಗಳು ಅತ್ಯಂತ ಜಟಿಲ, ಸಂಕೀರ್ಣ
ವಾದದ್ದು ಎಂದೇ ಅವುಗಳ ವರದಿಗಳಲ್ಲಿ ಪ್ರಕಟವಾಗ ಬಹುದು. ಈ ಊಹೆಗಳೆಲ್ಲ ನಿಜವಾದಲ್ಲಿ ಆ ವರದಿಯಲ್ಲಿ ಭಾರತದ ಚುನಾವಣೆಯೇ ಮುಖ್ಯ ವಿಷಯವಾಗಿರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕಾರಣ ವಿವರಿಸಬೇಕಿಲ್ಲ.

ಇಷ್ಟೊಂದು ಜನಸಂಖ್ಯೆ ತನ್ನ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆ ಎಂದರೆ ಸಾಮಾನ್ಯವೇ? ಆ ವರದಿಯ ಮುಖಪುಟ ದಲ್ಲಿ ಯಾರ ಫೋಟೋ ಛಾಪಿಸಲ್ಪಟ್ಟಿರಬಹುದು? ಅದು ನಿಮ್ಮ ಊಹೆಗೆ ಬಿಟ್ಟ ವಿಷಯ. ಜಾಗತಿಕ ವಿದ್ಯಮಾನಗಳನ್ನು ಗ್ರಹಿಸುವಾಗ ಚುನಾವಣೆ ನಿತ್ಯ ನಿರಂತರ. ಒಂದಿಲ್ಲೊಂದು ದೇಶ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಲೇ ಇರುತ್ತದೆ. ಅನ್ಯ ದೇಶಗಳನ್ನು ಬಿಡಿ, ಭಾರತದಲ್ಲಿಯೇ ಒಂದರ ಬೆನ್ನಿಗೆ ಇನ್ನೊಂದು ಚುನಾವಣೆ. ಚುನಾವಣೆಯೆಂದರೆ ಗಂಭೀರ ವಿಷಯವೇ ಆಗಿದ್ದರೂ ಅವುಗಳ ಸುತ್ತಲಿನ ಲಘು ವಿಚಾರಗಳು ಕೆಲವೊಮ್ಮೆ ಸುದ್ದಿಯಾಗುತ್ತವೆ.

ಚುನಾವಣೆಯನ್ನು ಗೆಲ್ಲಲು ಜಾತಿ, ಹಣಬಲ ಹೀಗೆ ಏನೇನೋ ಕಸರತ್ತು ಮಾಡುವುದು ಸಾಮಾನ್ಯ. ಈ ಬಾರಿ ಚೊಂಬು, ಕಿಸೆಗಳ್ಳರು ಎಂದೆಲ್ಲ ಜಾಹೀರಾತು ಬಂದದ್ದು ನೋಡಿರುತ್ತೀರಿ. ಇದು ನಮ್ಮಲ್ಲಿ ಸ್ವಲ್ಪ ಹೊಸತು. ಅಮೆರಿಕದಲ್ಲಿ ಚುನಾವಣೆ ಬಂತೆಂದರೆ ಪ್ರತಿಸ್ಪರ್ಧಿಯನ್ನು ಅವಾಚ್ಯವಾಗಿ
ಬಯ್ಯುವುದು, ಮನೆಯೆದುರು ಪೋಸ್ಟರ್ ಹಾಕಿಕೊಳ್ಳುವುದು ಇತ್ಯಾದಿ, F*ck Biden, Devil Trump ಹೀಗೆಲ್ಲ, ಇನ್ನು ಕೆಲವು ಇಲ್ಲಿ ಬರೆಯಲಾಗದಷ್ಟು ಅವಾಚ್ಯಗಳನ್ನು ತಮ್ಮ ಕಾರುಗಳ ಹಿಂದೆ ಪ್ರಿಂಟ್ ಮಾಡಿಕೊಂಡು ಹೋಗುವುದೆಲ್ಲ ಇಲ್ಲಿನ ಚುನಾವಣೆಯ ಲಕ್ಷಣ. ಟಿವಿಗಳಲ್ಲಿ ಪ್ರತಿಸ್ಪರ್ಧಿಯ ಲಂಚ ಸ್ವೀಕರಿಸುವ, ಹನಿಟ್ರ್ಯಾಪ್ ವಿಡಿಯೋ, ಟೆಲಿ-ನ್ ಸಂಭಾಷಣೆಯ ಧ್ವನಿ ಇವನ್ನೆಲ್ಲ ಸೇರಿಸಿ ನಿಮಗೆ ಅವರು ಬೇಕೋ, ನಾವು ಬೇಕೋ ಎಂದೆಲ್ಲ ಪ್ರಶ್ನೆ ಯನ್ನು ಜನರೆದುರಿ ಗಿಡುತ್ತಾರೆ. ಆದರೆ ಭಾರತದಲ್ಲಿ ಅದೆಲ್ಲ ಇನ್ನೂ ಬಂದಿಲ್ಲ. ಎಲ್ಲಿಯೇ ಆಗಲಿ- ಚುನಾವಣೆಯೆಂದರೆ ಅಲ್ಲಿ ಎಲ್ಲವೂ ಸಾಧು. ಹೇಗೇ ಪ್ರಚಾರ ಮಾಡಲಿ, ಕೊನೆಯಲ್ಲಿ ಗೆಲ್ಲುವುದೇ ಅಂತಿಮ ಗುರಿ.

ಬಹಳ ಹಿಂದೆ ಕೆನಡಾದ ಹಳ್ಳಿಗನೊಬ್ಬ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಪ್ರಚಾರ ನೆರವೇರಿಸಿ, ಇನ್ನೇನು ಚುನಾವಣೆಯ ದಿನ ಬಂದೇಬಿಟ್ಟಿತು. ಅವನಿಗೆ ತಾನು ಗೆಲ್ಲುತ್ತೇನೋ ಇಲ್ಲವೋ ಎಂಬ ಅನುಮಾನ ಶುರುವಾಯಿತು. ತಕ್ಷಣ ಮತ ಚಲಾವಣೆಯಾಗುತ್ತಿದ್ದ ಜಾಗದಲ್ಲಿದ್ದ ಒಂದು ದೊಡ್ಡ ಕಂಬವನ್ನು ಏರಿದ. ಜತೆಯಲ್ಲಿ ತಂದಿದ್ದ ಒಂದು ಮರದ ಬ್ಯಾರಲ್ ಅನ್ನು ಅದರ ತುದಿಗೆ ಸಿಕ್ಕಿಸಿ, ಅದರ ಮೇಲೆ ಹತ್ತಿ ಕೂತುಬಿಟ್ಟ. ‘ನನ್ನನ್ನು ಗೆಲ್ಲಿಸಿದರಷ್ಟೇ ನಾನು ಈ ಕಂಬದಿಂದ ಕೆಳಕ್ಕಿಳಿಯುವುದು’ ಎಂದು ಅವನ ಹಠ. ಅವನು ಗೆದ್ದನೋ, ಅಥವಾ ಇಂದಿಗೂ ಅಲ್ಲಿಯೇ ಕೂತಿದ್ದಾನೋ ಗೊತ್ತಿಲ್ಲ. ಆದರೆ ಕೆನಡಾದ
ಚುನಾವಣೆಯಲ್ಲಿ ನಾವು ಸೋಲುವುದಿಲ್ಲ ಎಂದು ಹೇಳಲು ‘We are not staring down the barrel’-‘ನಾವು ಬ್ಯಾರಲ್ಲಿನ ಮೇಲೆ ಕೂತು ಕೆಳಕ್ಕೆ ನೋಡು ತ್ತಿಲ್ಲ’ ಎಂದು ಹೇಳುವ ರೂಢಿ ಬೆಳೆದುಬಂದಿದೆ.

ಚುನಾವಣೆ ಎಂದರೆ ಜನರೆಲ್ಲಾ ಜತೆಯಾಗುವುದಷ್ಟೇ ಅಲ್ಲ ವಲ್ಲ. ಚುನಾವಣೆ ಸಮಾಜದ ಹಲವು ಸ್ತರಗಳಲ್ಲಿ ಬಿರುಕನ್ನು ಉಂಟುಮಾಡುತ್ತದೆ. ಈ ಕಾರಣಕ್ಕೆ ಅಮೆರಿಕದಲ್ಲಿ ಒಂದು ಪದ್ಧತಿಯಿದೆ. ಚುನಾವಣೆಯ ದಿನ ಸಂಜೆ ಇಲ್ಲಿನ ಕ್ಲಬ್ಬುಗಳು, ಚರ್ಚುಗಳು, ಸಂಘ ಸಂಸ್ಥೆಗಳು ‘Election Supper’ ಚುನಾವಣಾ ದಿನದ ವಿಶೇಷ ಊಟವನ್ನಿಟ್ಟುಕೊಂಡಿರುತ್ತವೆ. ಅಲ್ಲಿ ಎಲ್ಲಾ ಪಕ್ಷದ ಎಲ್ಲಾ ಬೆಂಬಲಿಗರೂ ಬರುತ್ತಾರೆ. ಜತೆಯಲ್ಲಿ ಉಂಡು, ತೇಗಿ ತಮ್ಮ ನಡುವಿನ ಚುನಾವಣಾ ಸಮಯದ ಒಡಕನ್ನು ಸರಿಪಡಿಸಿಕೊಳ್ಳಲಿಕ್ಕೊಂದು ಅವಕಾಶ. ಚುನಾವಣೆಯಲ್ಲಿ ವೋಟ್ ಮಾಡಲಿಕ್ಕೆ ಬರುವಂತೆ ಮಾಡುವುದೇ ಈ ಪ್ರಕ್ರಿಯೆಯ ಅತ್ಯಂತ ಕಷ್ಟದ ಕೆಲಸ. ಅದೆಷ್ಟೇ ಜಾಗೃತಿ ಬೆಳೆಸಿದರೂ ಚುನಾವಣೆಯ ದಿನ ಮತ ಚಲಾಯಿಸುವಂತೆ ಮಾಡುವುದು ಸುಲಭವಲ್ಲ. ಎಲ್ಲಾ ದೇಶಗಳಲ್ಲಿಯೂ ಇದೇ ಕಥೆ. ಅದರ ಪರಿಹಾರಕ್ಕೆ ಆಸ್ಟ್ರೇಲಿಯಾದಲ್ಲಿ ಒಂದು ರೂಢಿ ಬೆಳೆದುಬಂದಿದೆ. ಅಲ್ಲಿನ ಬಹುತೇಕ ಮತಗಟ್ಟೆಗಳ ಹೊರಗೆ ಬಿಸಿಬಿಸಿ ಸಾಸೇಜ್ ಸ್ಯಾಂಡ್‌ವಿಚ್‌ಗಳನ್ನು ಹಂಚಲಾಗುತ್ತದೆ. ಈ ಮೂಲಕ ಜನರನ್ನು ಮತಗಟ್ಟೆಗೆ ಸೆಳೆಯುವ ಕಾರ್ಯಕ್ರಮ. ಇದು ಅಲ್ಲಿ ಅತ್ಯಂತ ಯಶಸ್ವಿಯೂ ಹೌದು.

ಜನರು ಸ್ಯಾಂಡ್‌ವಿಚ್ ರುಚಿಗನುಗುಣವಾಗಿ ಮತಗಟ್ಟೆಯನ್ನು ಆಯ್ಕೆಮಾಡಿಕೊಳ್ಳುವ ಮಟ್ಟಿಗೆ ಜನಪ್ರಿಯ. ಮತಗಟ್ಟೆಗಳಲ್ಲಿಯೇ ಪೈಪೋಟಿ. ನಮ್ಮಲ್ಲಿಯೂ ಮಸಾಲೆ ದೋಸೆ, ಇಡ್ಲಿ ವಡಾ ಇಟ್ಟು ವೋಟ್ ಮಾಡಿದವರಿಗೆ ಒಂದು ಪ್ಲೇಟ್ ಎಂದು ಮಾಡಿದರೆ ಹೇಗೆ? ಚುನಾವಣಾ ಆಯೋಗ ಯೋಚಿಸಬಹುದು.

ಬ್ರಿಟನ್ನಿನಲ್ಲಿ Monster Raving Loony Party ಎಂಬ ಪಕ್ಷವೊಂದಿದೆ. ಇದರ ಹೆಸರನ್ನೇ ಭಾವಾರ್ಥೈಸುವುದಾದರೆ ‘ರಾಕ್ಷಸ ಕಿರಿಕಿರಿಯ ಹುಚ್ಚರ ಪಕ್ಷ’. ಇಂಗ್ಲೆಂಡಿನಲ್ಲಿ ಚುನಾವಣೆ ಬಂತೆಂದರೆ ಈ ಪಕ್ಷದ ಪ್ರಣಾಳಿಕೆಯನ್ನು ನಾನು ಹುಡುಕಿ ಓದದೇ ಇರುವುದಿಲ್ಲ.

ಬಾಕಿಯವರದ್ದೇ ಒಂದಾದರೆ ಅವರದ್ದೇ ಇನ್ನೊಂದು. ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಕಾನೂನಿನಲ್ಲಿ ಅವಕಾಶ ಮಾಡಿಕೊಡುತ್ತೇವೆ,
ಪ್ರತಿಯೊಬ್ಬ ಮಂತ್ರಿಯೂ ಲಂಚ ತೆಗೆದುಕೊಳ್ಳುವುದನ್ನು ಕಡ್ಡಾಯ ಮಾಡುತ್ತೇವೆ. ಸಾರಾಯಿಯನ್ನು ನೀರಿನಂತೆ ಮುಕ್ತ ಸರಬರಾಜು ಮಾಡುತ್ತೇವೆ. ಗಂಡನನ್ನು ಶಾಪಿಂಗಿಗೆಂದು ಕರೆದುಕೊಂಡು ಹೋಗಿ ದಿನವಿಡೀ ಅಲೆಸುವುದು ಶಿಕ್ಷಾರ್ಹ ಎಂಬ ಕಾನೂನು ತರುತ್ತೇವೆ. ಅಷ್ಟೇ ಅಲ್ಲ, ದೇಶದ ಹೆಸರನ್ನು
‘ಯುನೈಟೆಡ್ ಕಿಂಗ್ಡಮ್ ಆಫ್ ಲೂನಿ’ (ಹುಚ್ಚರ ಯುನೈಟೆಡ್ ಕಿಂಗ್ಡಮ್) ಎಂದು ಮರುನಾಮಕರಣ ಮಾಡುತ್ತೇವೆ.

ಇವೆಲ್ಲ ಅವರ ಆಶ್ವಾಸನೆಗಳು. ಹಾಗಂತ ಈ ಪಕ್ಷವನ್ನು ಯಾರೋ ಎಲ್ಲಿಯೋ ರಿಜಿಸ್ಟರ್ ಮಾಡಿ ಬಿಟ್ಟದ್ದಲ್ಲ. ಇದಕ್ಕೆ ಸುಮಾರು ಐವತ್ತು ವರ್ಷದ ಇತಿಹಾಸವಿದೆ. ಈ ಪಕ್ಷದ ಸಾವಿರಾರು ಕ್ರಿಯಾಶೀಲ ಕಾರ್ಯಕರ್ತರಿದ್ದಾರೆ. ಅಲ್ಲದೇ, ಈ ಪಕ್ಷ ಹುಟ್ಟಿದಾಗಿನಿಂದ ಪ್ರತಿಯೊಂದು ಚುನಾವಣೆಯಲ್ಲಿಯೂ
ಈ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಅವರಿಗೆಷ್ಟು ವೋಟ್ ಬೀಳುತ್ತದೆ ಎನ್ನುವುದು ಪ್ರಶ್ನೆಯಲ್ಲ. ಮತದಾರನಿಗೆ ಯಾವ ಅಭ್ಯರ್ಥಿಯೂ ಒಪ್ಪಿಗೆ ಯಾಗದಿದ್ದಲ್ಲಿ, ಕೊನೆಯಲ್ಲಿ ಲೂನಿ- ಹುಚ್ಚರ ಪಕ್ಷದ ಅಭ್ಯರ್ಥಿಗೆ ಮತ ಒತ್ತಿ ಬರುತ್ತಾನೆ. ಈ ಪಕ್ಷ ಅಲ್ಲಿ ನೋಟಾಗೆ ಪರ್ಯಾಯ. ಈ ರೀತಿ ನೋಟಾ ಪರ್ಯಾಯ ಪಕ್ಷಗಳು ಹಲವು ದೇಶಗಳಲ್ಲಿವೆ.

ಆದರೆ ನಿಜವಾದ ನೋಟಾ ಮತ ಸಾಧ್ಯತೆ ಬಹಳಷ್ಟು ದೇಶ ಗಳಲ್ಲಿ ಇಲ್ಲ. ನಮ್ಮ ದೇಶದಲ್ಲಿದ್ದರೂ ಇದು ಇರುವಲ್ಲೆಲ್ಲ ಸಾಂಕೇತಿಕ. ಕಣಕ್ಕಿಳಿದ ಯಾರನ್ನೂ ಇಷ್ಟಪಡದ ಮತದಾರನಿಗೆ ಕೂಡ ಹಕ್ಕಿನ ಅವಕಾಶ ಇರಬೇಕೆಂಬ ಆಕಾಂಕ್ಷೆ. ನೋಟಾ ಚಲಾಯಿಸುವುದಕ್ಕೂ, ಮತದಾನ ಮಾಡದೇ ಮನೆಯಲ್ಲಿ ಕೂರುವುದಕ್ಕೂ ತಾರ್ಕಿಕವಾಗಿ ಬಹಳ ವ್ಯತ್ಯಾಸವಿದೆ. ಪರಿಣಾಮ ಒಂದೇ ಇರಬಹುದು. ಈ NOTA / None
of the above ಆಯ್ಕೆಯನ್ನು ಬಹಳ ಹಿಂದೆ ಜಾರಿಗೆ ತಂದ ದೇಶ ಫ್ರಾನ್ಸ್.

ಇದು ಸಾಂಕೇತಿಕವಾಗಿದ್ದರೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇ.೧.೦೪ರಷ್ಟು ಭಾರತೀಯರು ನೋಟಾ ಚಲಾಯಿಸಿದ್ದರು. ಇದು ಜಗತ್ತಿನ ಇಲ್ಲಿಯವರೆಗಿನ ಅತ್ಯಂತ ಹೆಚ್ಚಿನ ನೋಟಾ ಚಲಾವಣೆಯಾದ ಚುನಾವಣೆಯಾಗಿ ದಾಖಲೆಯಲ್ಲಿದೆ. ಮೊದಲೆಲ್ಲ ಇಡುಗಂಟು ಕಳೆದುಕೊಳ್ಳುವುದು ಅಭ್ಯರ್ಥಿಗಳಿಗೆ ಅವಮಾನದ ವಿಷಯವಾಗಿತ್ತು. ಈ ನೋಟಾ ಬಂದಾಗಿನಿಂದ ನೋಟಾ ಮತಗಳಿಗಿಂತ ಜಾಸ್ತಿ ಮತ ಬಂದರೆ ಸಾಕು ಎಂಬಂತಾಗಿದೆ.

ಮತದಾರನ ಎದುರು ಆಯ್ಕೆಗಳೇ ಇಲ್ಲದಾಗ ಪ್ರಜಾಪ್ರಭುತ್ವ ವ್ಯಂಗ್ಯವೆನಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಇಬ್ಬರ ಜಗಳದ ನಡುವೆ ಯಾರೋ ಮೂರನೆಯವರು ಆಯ್ಕೆಯಾಗಿಬಿಡುತ್ತಾರೆ. ಹಾಗೆ ಆಯ್ಕೆಯಾಗುವವರಿಗೂ ತಾವು ಗೆಲ್ಲುತ್ತೇ ವೆಂಬ ಕಲ್ಪನೆಯಿರುವುದಿಲ್ಲ. ಅಂಥವರೇ ಅತಂತ್ರ ಸರಕಾರ
ವಾಗುವಾಗ ಅತ್ಯಂತ ಬೆಲೆಬಾಳುವವರು. ಈಗೊಂದು ಹತ್ತು ವರ್ಷದ ಹಿಂದೆ ಬ್ರೆಝಿಲ್‌ನಲ್ಲಿ ಚುನಾವಣೆ ನಡೆಯುತ್ತಿತ್ತು. ಒಂದು ಕ್ಷೇತ್ರದಲ್ಲಿ ಅಲ್ಲಿನ ಸರ್ಕಸ್ಸಿನಲ್ಲಿ ಜೋಕರ್ ವೇಷ ಹಾಕುವ ವ್ಯಕ್ತಿ ಚುನಾವಣೆಗೆ ನಿಂತಿದ್ದ. ಅವನು ಪ್ರಚಾರಕ್ಕೆ ಜೋಕರ್ ವೇಷ ಹಾಕಿಕೊಂಡೇ ಹೋಗುತ್ತಿದ್ದದ್ದು ಬಹಳ
ವೈರಲ್ ಆಗಿತ್ತು. ಆತ ಪ್ರಚಾರಕ್ಕೆ ರಸ್ತೆಗಿಳಿದರೆ ಮಕ್ಕಳು, ಹಿರಿಯರ ದಂಡು ಅವನ ಹಾಸ್ಯವನ್ನು ನೋಡಲಿಕ್ಕೆಂದು ಹಿಂಬಾಲಿಸುತ್ತಿತ್ತು. ಅವನನ್ನು ಪ್ರತಿಸ್ಪಽಗಳು ಅಲಕ್ಷಿಸಿದರು.

ಅವನ ಚುನಾವಣಾ ಪ್ರಚಾರ ಕೆಲವೇ ದಿನಗಳಲ್ಲಿ ಅದೆಷ್ಟು ಜನಪ್ರಿಯವಾಗಿಬಿಟ್ಟಿತೆಂದರೆ, ಪಕ್ಕದ ಊರಿನಲ್ಲಿ ಪ್ರಧಾನಿಯೇ ಭಾಷಣಕ್ಕೆ ಬಂದಾಗ ಅಲ್ಲಿಗಿಂತ ಇವನ ಹಾಸ್ಯ ನೋಡಲು ಜಾಸ್ತಿ ಮಂದಿ ಸೇರಿದ್ದರು.. ಅವನು ಎಂದಿಗೂ ನನ್ನನ್ನೇಕೆ ಆಯ್ಕೆ ಮಾಡಬೇಕು ಎಂದು ಪ್ರಚಾರದುದ್ದಕ್ಕೂ
ಹೇಳಲೇ ಇಲ್ಲ. ಅವನು ತನ್ನ ಹಾಸ್ಯ ಪ್ರಚಾರ ಕಾರ್ಯಕ್ರಮದ ಕೊನೆಯಲ್ಲಿ ಹೇಳುತ್ತಿದ್ದುದು ಒಂದೇ ಮಾತು- ‘ನೀವು ಯಾರ‍್ಯಾರನ್ನೋ ಆಯ್ಕೆಮಾಡಿ ಕಳಿಸುತ್ತೀರಿ. ಅವರು ಮಾಡಿದ ಕೆಲಸ ಅಷ್ಟೇ ಇದೆ. ನಾನೂ ಅದಕ್ಕಿಂತ ಭಿನ್ನವಲ್ಲ. ನಾನೂ ಏನನ್ನೂ ಮಾಡುವುದಿಲ್ಲ. ಹಾಗಾಗಿ ನನ್ನನ್ನೇ ಆಯ್ಕೆ ಮಾಡಿ
ಕಳಿಸಿ’ ಅಂತ. ಅವನು ಅಲ್ಲಿ ಅಭೂತಪೂರ್ವ ಅಂತರದಿಂದ ಆಯ್ಕೆಯಾಗಿ ಬಂದ. ಜೋಕರ್ ವೇಷ ಹಾಕಿಕೊಂಡು ಅಲ್ಲಿನ ಸಂಸತ್ತಿಗೆ ಹೊಕ್ಕಾಗ ಅದೂ ದೊಡ್ಡ ಸುದ್ದಿಯಾಯಿತು.

ರಷ್ಯಾದ ಕೆಲವು ಪ್ರಾಂತ್ಯಗಳಲ್ಲಿ ಮನುಷ್ಯರೇ ಚುನಾವಣೆಗೆ ನಿಲ್ಲಬೇಕು ಎಂಬ ಬಗ್ಗೆ ನಿಬಂಧನೆಯಿಲ್ಲ. ಒಮ್ಮೆ ರಷ್ಯಾದ ಬರ್ನೌಲ್ ಎಂಬ ನಗರದಲ್ಲಿ ಮೇಯರ್ ಚುನಾವಣೆಯಿತ್ತು. ಅಲ್ಲಿ ಎಲ್ಲರೂ ಅಯೋಗ್ಯರೇ ಸ್ಪರ್ಧೆಗೆ ನಿಂತಿದ್ದರು. ಇದನ್ನು ಅಲ್ಲಿನ ಕೆಲವು ಪ್ರೊ-ಸರುಗಳು ನೋಡಿ, ಈ ಕಾನೂನಿನ
ಲೋಪವನ್ನು ಬಳಸಿ ಅಲ್ಲಿ ಒಂದು ಬೆಕ್ಕನ್ನು ತಂದು ಎಲೆಕ್ಷನ್ನಿಗೆ ನಿಲ್ಲಿಸಿದರು. ವಿಷಯ ಕೋರ್ಟಿಗೆ ಹೋಗಿ ಪರಿಹಾರವಾಗುವ ಮೊದಲೇ ಎಲೆಕ್ಷನ್ ದಿನ ಬಂದುಬಿಟ್ಟಿತು. ಅಲ್ಲಿನ ಬ್ಯಾಲೆಟ್ಟಿ ನಲ್ಲಿ ಬೆಕ್ಕನ್ನು ಒಂದು ಆಯ್ಕೆಯಾಗಿ ನೀಡುವುದು ಎಂದು ನಿರ್ಧಾರವಾಯಿತು. ಕೊನೆಗೆ ಅಲ್ಲಿ ಆದದ್ದೇನೆಂದರೆ ಆ ಬೆಕ್ಕಿಗೇ ಹೆಚ್ಚಿನ ಮತ ಬಿದ್ದುಬಿಟ್ಟಿತು. ನಂತರ ಎರಡನೇ ಹೆಚ್ಚು ಮತ ಪಡೆದವನನ್ನು ಉಪಮೇಯರ್ ಮಾಡಿ, ಆ ಬೆಕ್ಕನ್ನು ಗೌರವಾನ್ವಿತ ಮೇಯರ್ ಎಂದು ಕೋರ್ಟ್ ನಿರ್ಧಾರ ಕೊಟ್ಟಿತು.

ಮೊದಲೇ ಹೇಳಿ ಕೇಳಿ ರಷ್ಯಾ- ಮನುಷ್ಯರೇ ಆಯ್ಕೆ ಯಾದಲ್ಲಿ ಬೆಕ್ಕಿನಂತೆ ಸುಮ್ಮನಿರಬೇಕಾದ ಸ್ಥಿತಿಯಿರುವಾಗ ಬೆಕ್ಕೇ ಉತ್ತಮ ನಾಯಕನೆನಿಸಿರಬೇಕು.
ಗ್ರೀಸ್‌ನಲ್ಲಿ ಎಲೆಕ್ಷನ್ನಿನ ದಿನ ಸಂಜೆ ಎಲ್ಲಿಲ್ಲದ ಪ್ರಮಾಣದ ಬಿಯರ್ ಮಾರಾಟವಾಗುತ್ತದೆ. ಮತ ಚಲಾಯಿಸಿದ ಸಂಜೆ ಬಿಯರ್ ಹೀರುವುದು ಜರ್ಮನಿ ಯಲ್ಲಿಯೂ ಪದ್ಧತಿಯಾಗಿ ಕೆಲವೆಡೆ ಇದೆ. ಗ್ರೀಸ್‌ನಲ್ಲಿ ಹಿಂದಿನ ಚುನಾವಣೆಯಾದಾಗ, ಸಂಜೆ ಅಲ್ಲಿನ ಟಿವಿಗಳಲ್ಲಿ ಅಮಲಿನಲ್ಲಿ ತೇಲಾಡುವವರನ್ನೇ
ತೋರಿಸುವ ಒಂದು ಗಂಟೆಯ ಕಾರ್ಯಕ್ರಮ ಬಿತ್ತರವಾಗಿತ್ತು. ಇದು ಸಾಕಷ್ಟು ಸುದ್ದಿಯಾಗಿತ್ತು. ಹಿಂದೆಲ್ಲ ಈ ರೀತಿ ಕುಡಿದು ನಂತರದಲ್ಲಿ ಬ್ಯಾಲೆಟ್ ಬಾಕ್ಸ್‌ಗಳಿಗೆ ಬಿಯರನ್ನು ಹೊಯ್ಯುವುದು ಹಲವು ಯುರೋಪಿಯನ್ ದೇಶಗಳಲ್ಲಿ ಸಾಮಾನ್ಯ ವಾಗಿತ್ತಂತೆ.

ಆ ಕಾರಣಕ್ಕೆ ಹಾಳಾದ, ತಿರಸ್ಕೃತ ವೋಟುಗಳನ್ನು Drunken Ballot – ಕುಡುಕ ಮತಗಳು ಎನ್ನುವುದಿದೆ. ಮನುಷ್ಯನ ವಿಕಸನದ ಬದುಕಿನ ಅವಿಷ್ಕಾರ ಗಳಲ್ಲಿಯೇ ವಿಶಿಷ್ಟವಾಗಿ ನಿಲ್ಲುವ ಕಾರ್ಯಕ್ರಮ ಚುನಾವಣೆ. ಯಾವುದೇ ದೇಶವಿರಲಿ, ಹಣವಿಲ್ಲದೆ ಚುನಾವಣೆ ಎದುರಿಸುವುದು ಸಾಧ್ಯವಿಲ್ಲ. ಸ್ಪಽಸ ಬೇಕೆಂದರೆ ಹಣ ಮಾಡಿರಬೇಕು, ಅಥವಾ ಸಾರ್ವಜನಿಕರಿಂದ ಹಣ ಎತ್ತಬೇಕು. ಅಮೆರಿಕ ಮೊದಲಾದ ದೇಶಗಳಲ್ಲಿ ಯಾರು ಹೆಚ್ಚು ಚಂದಾ ಎತ್ತುತ್ತಾರೆ ಎಂಬುದೇ ಚುನಾವಣೆಯ ಫಲಿತಾಂಶದ ಮುನ್ಸೂಚಕ. ಮೇಲ್ನೋಟಕ್ಕೆ ದುಂದುವೆಚ್ಚವೆನಿಸುವ ಚುನಾವಣಾ ಪ್ರಕ್ರಿಯೆ ಹೇರಳ ಪ್ರಮಾಣದ ಹಣವನ್ನು ದೇಶದ ಆರ್ಥಿಕತೆಗೆ ಹರಿಸುತ್ತದೆ. ಯಾವುದೇ ದೇಶವಿರಲಿ, ಅದರ ಚುನಾವಣೆಯ ನಂತರದ ಆರ್ಥಿಕತೆ ಸ್ವಲ್ಪಮಟ್ಟಿಗೆ ಚೇತರಿಕೆಯಾಗಿರುತ್ತದೆ.

ಈಗ ನಮ್ಮ ದೇಶ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಯಲ್ಲಿದೆ. ಭಾರತದ ಚುನಾವಣೆ ಎಂದರೆ ಪಾಶ್ಚಿಮಾತ್ಯ ಪತ್ರಿಕೆಗಳು Dance of Democracy ಎಂದೆಲ್ಲ ನಮುನಮೂನೆಯಾಗಿ ಬಣ್ಣಿಸಿ ಬರೆಯುತ್ತವೆ. ಪ್ರತಿ ಸಲವೂ ಭಾರತ ಪ್ರಜಾಪ್ರಭುತ್ವದಿಂದ ದೂರ ಸರಿಯುತ್ತಿದೆ ಎಂದೆಲ್ಲ ವಾಂತಿಮಾಡಿ ಕೊಳ್ಳುತ್ತವೆ. ನಮ್ಮಲ್ಲಿನ ಚುನಾವಣೆಯ ಶಿಸ್ತನ್ನು ಇವರಿಗೆ ಅರಗಿಸಿಕೊಳ್ಳಲಿಕ್ಕಾಗುವುದಿಲ್ಲ. ಪ್ರಪಂಚದ ಅತ್ಯಂತ ಹೆಚ್ಚಿನ ಜನಸಂಖ್ಯೆಯ ದೇಶದ ಚುನಾವಣೆಯೆಂದರೆ ಅದೊಂದು ಆಧುನಿಕ ಜಗತ್ತಿನ ಅಚ್ಚರಿ. ನೀವು ಏನೇ ಹೇಳಿ, ಭಾರತದಲ್ಲಿರುವಷ್ಟು ಅಚ್ಚುಕಟ್ಟಿನ ಚುನಾವಣೆ ಇನ್ನೊಂದು ದೇಶದಲ್ಲಿಲ್ಲ. ಇದ್ದರೂ ಅದರ ಪ್ರಮಾಣ ನಮ್ಮಲ್ಲಿಗೆ ಹೋಲಿಸುವಂತೆ ಇಲ್ಲ.

ಸಾಮಾನ್ಯವಾಗಿ ದೇಶ ದೊಡ್ಡದಾದಂತೆ ಅಲ್ಲಿ ದಂಗೆಗಳಾಗಿ, ಒಡಕುಗಳು ಹುಟ್ಟಿ, ಯುದ್ಧಗಳಿಗೆ ಕಾರಣವಾಗಿ ಪ್ರಜಾಪ್ರಭುತ್ವ ಕೊನೆಯಾಗಿಬಿಡುತ್ತದೆ. ಹೋಲಿಕೆಗೆ ಚೀನಾ, ರಷ್ಯಾ ಇತ್ಯಾದಿ. ಇಂದಿಗೂ ಜಗತ್ತಿನ ಅರ್ಧದಷ್ಟು ಜನರಿಗೆ ಪ್ರಜಾಪ್ರಭುತ್ವದ ಭಾಗ್ಯವಿಲ್ಲ. ಒಲಿಗಾರ್ಕಿ, ಸರ್ವಾಧಿಕಾರಿ ಅಥವಾ ಧಾರ್ಮಿಕ ಆಡಳಿತ. ಹೀಗಿರುವ ದೊಂಬರಾಟದ ಜಗತ್ತಿನ ನಡುವೆ ಪ್ರಜಾಪ್ರಭುತ್ವವನ್ನು ಇಷ್ಟು ಜೋಪಾನವಾಗಿ ಕಾಪಿಟ್ಟುಕೊಂಡಿರುವುದು ಸಣ್ಣ ವಿಷಯವಲ್ಲ. ಅದು ಹೆಮ್ಮೆ. ಏಲಿಯನ್ನುಗಳೂ ಪ್ರಶಂಸಿಸುವ ಚುನಾವಣೆ ಭಾರತದ್ದೇ ಆಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!