Sunday, 19th May 2024

ರೇಗಳ ನಡುವೆ ಮತ್ತೊಬ್ಬ ಕನ್ನಡಿಗ ಪ್ರಧಾನಿಯಾದರೆ ಖುಷಿಯಲ್ಲವೇ ?

ಅಶ್ವತ್ಥಕಟ್ಟೆ

ranjith.hoskere@gmail.com

ರಾಷ್ಟ್ರದಲ್ಲಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಿರೀಕ್ಷೆಯಂತೆ ಪ್ರಧಾನಿ ಅಭ್ಯರ್ಥಿಯ ವಿಷಯದಲ್ಲಿ ಮತ್ತೆ ಚರ್ಚೆ ಮುನ್ನಲೆಗೆ ಬಂದಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಮುಂದುವರೆಯುವುದು ಸ್ಪಷ್ಟವಾಗಿದ್ದರೂ, ಇಂಡಿಯ ಮೈತ್ರಿಕೂಟವನ್ನು ಮುನ್ನಡೆಸುವ ನಾಯಕ ನ್ಯಾರು ಎನ್ನುವ ಗೊಂದಲ ಮತ್ತೆ ಶುರುವಾಗಿದೆ.

ಇಂಡಿಯ ಮೈತ್ರಿಕೂಟದ ಆರಂಭಿಕ ದಿನದಿಂದಲೂ ಈ ಪ್ರಶ್ನೆಯಿತ್ತು. ಆದರೆ ಈ ಪ್ರಶ್ನೆ ಬಂದಾಗಲೆಲ್ಲ, ಮುಂದೆ ನೋಡೋಣ ಎನ್ನುವ ಹಾರಿಕೆಯ ಮಾತನ್ನು ಬಹುತೇಕ ನಾಯಕರು ಹೇಳಿಕೊಂಡು ಬರುತ್ತಿದ್ದರೂ, ಬಹುತೇಕರು ರಾಹುಲ್ ಗಾಂಧಿ ನೇತೃತ್ವದಲ್ಲಿಯೇ ಮೈತ್ರಿಕೂಟ ಚುನಾವಣೆ ಎದುರಿಸಲಿದೆ ಎಂದು ಹೇಳಿದ್ದರು. ಆದರೆ, ಪಂಚರಾಜ್ಯ ಚುನಾವಣಾ ಫಲಿತಾಂಶದ ಬೆನಲ್ಲೇ, ರಾಹುಲ್ ಹೆಸರನ್ನು ಪಕ್ಕಕ್ಕೆ ಸರಿಸಲು ಮೈತ್ರಿಕೂಟದ ಹಲವು ನಾಯಕರು ಪ್ರಯತ್ನಿ
ಸಿದ್ದು, ಅದರಲ್ಲಿ ಕಳೆದ ವಾರ ಒಂದು ಹಂತದಲ್ಲಿ ಯಶಸ್ವಿಯೂ ಆಗಿದ್ದಾರೆ ಎಂದರೆ ತಪ್ಪಾಗಲಾರದು.

ಹೌದು, ಕಳೆದ ಒಂದು ವಾರದಿಂದ ರಾಷ್ಟ್ರ ರಾಜಕಾರಣದಲ್ಲಿ ಬಹುದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸುದ್ದಿಯೆಂದರೆ ‘ಮಲ್ಲಿಕಾರ್ಜುನ ಖರ್ಗೆ ಇಂಡಿಯ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ’ ಎನ್ನುವುದು. ಈ ಮಾತು ಕೇಳಿಬರುತ್ತಿದ್ದಂತೆ, ಕರ್ನಾಟಕ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೇ ಹೊಸ ಹುರುಪು ಕಾಣಿಸಿ ಕೊಂಡಿದೆ. ಅಂತೆಕಂತೆ ಯಲ್ಲಿ ಓಡಾಡುತ್ತಿರುವ ಈ ಸುದ್ದಿ ಒಂದು ವೇಳೆ ಇದು ಅಧಿಕೃತ ಘೋಷಣೆಯಾದರೆ ಐದು ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೊನೆ ಪಕ್ಷ ಕರ್ನಾಟಕದ ಮಟ್ಟಿಗಾದರೂ ಲಾಭವಾಗುವುದು ಖಚಿತ ಎನ್ನಲಾಗುತ್ತಿದೆ.

ಇಂಡಿಯ ಮೈತ್ರಿಕೂಟ ರಚನೆಯಾದ ದಿನದಿಂದಲೂ ಬಹುತೇಕರಲ್ಲಿದ್ದ ಬಹುದೊಡ್ಡ ಪ್ರಶ್ನೆಯೆಂದರೆ ಪ್ರಧಾನಿ ಅಭ್ಯರ್ಥಿ ಯಾರೆಂಬುದಾಗಿತ್ತು. ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಸಹಜವಾಗಿಯೇ ತಮ್ಮ ಯುವರಾಜ ರಾಹುಲ್ ಗಾಂಧಿಗೆ ಈ ಪಟ್ಟವನ್ನು ನೀಡಬೇಕು ಎನ್ನುವ ಮನಃಸ್ಥಿತಿಯಲ್ಲಿದ್ದರು. ಇತರೆ ಮೈತ್ರಿಕೂಟಗಳು ಒಲ್ಲದ ಮನಸ್ಸಿನಿಂದಲೇ ಈ ವಿಷಯದಲ್ಲಿ ‘ಮೌನ’ಕ್ಕೆ ಶರಣಾಗಿದ್ದರು. ಆದರೆ, ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸುತ್ತಿದ್ದಂತೆ, ರಾಹುಲ್ ನೇತೃತ್ವದಲ್ಲಿ ಲೋಕಸಭೆ ಬೇಡ ಎನ್ನುವ ಧ್ವನಿಗೆ ಹೆಚ್ಚಿನ ಮಹತ್ವ ಪಡೆದಿದೆ.

ಇದರ ಬೆನ್ನಲ್ಲೇ ಕಳೆದ ವಾರ ನಡೆದ ಇಂಡಿಯ ಸಭೆಯಲ್ಲಿ, ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರಾದರೆ ನಮಗೆ ಸಮಸ್ಯೆಯಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳುತ್ತಿದ್ದಂತೆ, ನಿತೀಶ್ ಕುಮಾರ್ ಸೇರಿದಂತೆ ಕೆಲವರು ವಿರೋಧಿಸಿದ್ದು ಬಿಟ್ಟರೆ ಬಹುತೇಕ ಮೈತ್ರಿ ಪಕ್ಷಗಳು ಖರ್ಗೆ ಅವರನ್ನು ಒಪ್ಪಿಕೊಂಡಿವೆ. ಈ ರೀತಿ ಒಪ್ಪಿಗೆ ಕೊಡಲು ಹಲವು ಕಾರಣಗಳಿವೆ ಎನ್ನುವುದು ಬೇರೆ ಮಾತು. ಮಮತಾ ಬ್ಯಾನರ್ಜಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ತೇಲಿಬಿಡುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಹೊಡೆಯುವ ಪ್ರಯತ್ನ ಮಾಡಿದ್ದರು. ಮೊದಲಿಗೆ ಇಂಡಿಯ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ರೇಸ್‌ನಿಂದ ರಾಹುಲ್ ಗಾಂಧಿ ಹಾಗೂ ನಿತೀಶ್‌ಕುಮಾರ್‌ರನ್ನು ದೂರವಿಟ್ಟರೆ, ದಲಿತ ಮತಗಳನ್ನು ಒಂದು ಗೂಡಿಸುವುದಕ್ಕೆ ಖರ್ಗೆ ಹೆಸರು ಮುನ್ನಲೆಗೆ ತಂದಿದ್ದಾರೆ.

ಆರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎನ್ನುವ ಮಾತುಗಳು ಕೇಳಿಬರುತ್ತಿದ್ದಂತೆ ಗಾಂಧಿ ಕುಟುಂಬದ ವಿರೋಧವನ್ನು ಅನೇಕರು ನಿರೀಕ್ಷಿಸಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಗಾಂಽ ಅವರನ್ನಾಗಲಿ, ಪ್ರಿಯಾಂಕಾ ಗಾಂಧಿಯನ್ನಾಗಲಿ ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸುವುದಕ್ಕಿಂತ, ತಮ್ಮ ನಿಷ್ಠರನ್ನು ಆ ಸ್ಥಾನಕ್ಕೆ ತೋರಿಸುವುದು ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದಿರುವ ಗಾಂಧಿ ಕುಟುಂಬ, ಬ್ಯಾನರ್ಜಿ ಅವರು ಖರ್ಗೆ ಹೆಸರು ಮುನ್ನಲೆಗೆ ತರುತ್ತಿದ್ದಂತೆ, ಗಾಂಽ ಕುಟುಂಬವೂ ಇದಕ್ಕೆ ಅನುಮೋದಿಸಿದೆ.

ಒಮ್ಮೆಯಾದರೂ ದೇಶದ ಪ್ರಧಾನಿಯಾಗಬೇಕು ಎನ್ನುವ ಆಸೆಯಿರುವ ರಾಹುಲ್ ಗಾಂಧಿ ಅವರು, ಖರ್ಗೆ ಹೆಸರನ್ನು ಬೆಂಬಲಿಸುವುದಕ್ಕೆ ಪ್ರಮುಖ ಕಾರಣವಿದೆ.
ಅದೇನೆಂದರೆ ೨೦೨೪ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಹೆಚ್ಚಿದೆ. ಇದರೊಂದಿಗೆ ಮೋದಿ ಎದುರು ಪ್ರಧಾನಿ ಅಭ್ಯರ್ಥಿಯಾಗಿ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣಾಗಿರುವ ರಾಹುಲ್‌ಗೆ ಈ ಬಾರಿ ಮತ್ತೊಮ್ಮೆ ಹಿನ್ನಡೆ ಅನುಭವಿಸಿ ದರೆ ಎದ್ದುಬರಲು ಸಾಧ್ಯವಾಗದಷ್ಟು ಆಳಕ್ಕೆ ಬೀಳುವುದು ಸ್ಪಷ್ಟ. ಆದ್ದರಿಂದ ‘ರಿಸ್ಕ್’ ತಗೆದುಕೊಳ್ಳುವ ಬದಲು ಖರ್ಗೆ ಅವರ ಹೆಸರಿಗೆ ಒಪ್ಪಿದ್ದಾರೆ. ತಮ್ಮ ಕುಟಂಬಕ್ಕೆ ಪರಮನಿಷ್ಠರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಂದ ತಮಗೆ ಯಾವುದೇ ರೀತಿಯ ಆತಂಕವಿಲ್ಲ ಎನ್ನುವುದು ಈಗಾಗಲೇ ಮನವರಿಕೆಯಾಗಿದೆ.

ಒಂದು ವೇಳೆ ಅಪ್ಪೀತಪ್ಪಿ ಇಂಡಿಯ ಮೈತ್ರಿಕೂಟ ಮುಂದಿನ ಚುನಾವಣೆಯಲ್ಲಿ ಗೆದ್ದರೂ, ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೊಬ್ಬ ಮನಮೋಹನ್ ಸಿಂಗ್ ಆಗುವುದು ಸ್ಪಷ್ಟ. ಆದ್ದರಿಂದ ತಮ್ಮ ಅಸ್ತಿತ್ವಕ್ಕೆ ಯಾವುದೇ ಸಮಸ್ಯೆಯಿಲ್ಲ ಎನ್ನುವ ಕಾರಣಕ್ಕೆ ಸುಲಭಕ್ಕೆ ಖರ್ಗೆ ಹೆಸರಿಗೆ ‘ಒಕೆ’ ಎಂದಿದ್ದಾರೆ. ಇನ್ನು ಈ ಎಲ್ಲ ಮುತ್ಸದ್ದಿತನ, ಮೈತ್ರಿಕೂಟದಲ್ಲಿ ಮಾಡಿಕೊಳ್ಳಬೇಕಿರುವ ಹೊಂದಾಣಿಕೆ, ಪಕ್ಷನಿಷ್ಠೆ ಮೀರಿ ನೋಡಿದರೆ ನರೇಂದ್ರ ಮೋದಿ ಅವರ ವಿರುದ್ಧ ಮೈತ್ರಿ ಕೂಟದಲ್ಲಿರುವ ನಾಯಕರ ಪೈಕಿ ಖರ್ಗೆ ಅವರಿಗೆ ಅರ್ಹತೆಯಿದೆ. ಪ್ರಧಾನಿ ಅಭ್ಯರ್ಥಿಯಾಗಲು ಬೇಕಿರುವ ಅನುಭವ, ಸಂಘಟನಾ ಶಕ್ತಿ, ವಾಕ್ಚಾತುರ್ಯವಿದೆ. ಇದರೊಂದಿಗೆ ದಲಿತ ಎನ್ನುವ ಕಾರಣಕ್ಕೆ, ಒಂದಿಷ್ಟು ಮತಗಳು ಕ್ರೋಢಿಕರಣವಾಗುವುದರಲ್ಲಿ ಸಂಶಯವಿಲ್ಲ.

ಈ ಎಲ್ಲದಕ್ಕಿಂತ ಮುಖ್ಯವಾಗಿ, ಇಂಡಿಯ ಮೈತ್ರಿಕೂಟದಲ್ಲಿರುವ ಕಪ್ಪೆಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಒಂದು ತಟ್ಟೆಯಲ್ಲಿ ಹಾಕುವುದಕ್ಕೆ ಬೇಕಿರುವ ತಾಳ್ಮೆ,
ಆತ್ಮೀಯತೆ ಖರ್ಗೆ ಅವರಿಗಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯ ನ್ನಾಗಿ ಬಿಂಬಿಸುವ ವಿಷಯದಲ್ಲಿ ಸಾಧಕ-ಬಾಧಕಗಳಿಗೇನು ಕೊರತೆಯಿಲ್ಲ. ಈ ವಿಷಯದಲ್ಲಿ ಸ್ವತಃ ಖರ್ಗೆ, ಮೈತ್ರಿಕೂಟದ ನಾಯಕರಿಗೆ ಈ ವಿಷಯದಲ್ಲಿ ಹಲವು ಗೊಂದಲಗಳಿವೆ. ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುತ್ತಿ
ದ್ದಂತೆ, ಕರ್ನಾಟಕ ಹಾಗೂ ದಕ್ಷಿಣ ಭಾರತದ ಪಾಲಿಗೆ ಸಿಕ್ಕ ಬಹುದೊಡ್ಡ ಸಿಹಿ ಸುದ್ದಿ ಎನಿಸಿದರೂ, ಈ ಘೋಷಣೆ ಯಲ್ಲಿರುವ ಹಲವು ಸಮಸ್ಯೆಗಳ ಬಗ್ಗೆಯೂ
ಗಮನಹರಿಸಬೇಕಿದೆ.

ದೇಶ ೧೫ ಪ್ರಧಾನಿಗಳನ್ನು ಕಂಡಿದ್ದರೂ ಕರ್ನಾಟಕದಿಂದ ಒಬ್ಬರಿಗೆ ಮಾತ್ರ ಈ ಸ್ಥಾನ ಲಭಿಸಿದೆ. ಅದರಲ್ಲಿಯೂ ರಾಜ್ಯದಿಂದ ಪ್ರಧಾನಿ ಹುದ್ದೆಗೆ ಏರಿದ್ದ ದೇವೇ ಗೌಡರು, ‘ಅಚಾನಕ್’ ಆಗಿ ಪ್ರಧಾನಿಯಾದರೆ ಹೊರತು, ಚುನಾವಣಾ ಪೂರ್ವದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಏನು ಬಿಂಬಿತವಾಗಿರಲಿಲ್ಲ. ಅವರು ಆ ಸ್ಥಾನದಿಂದ ಕೆಳಗಿಳಿದು ೩೦ ವರ್ಷ ಕಳೆಯುತ್ತ ಬಂದರೂ, ಈವರೆಗೆ ಕರ್ನಾಟಕದ ಯಾರೊಬ್ಬರೂ ಪ್ರಧಾನಿ ಅಭ್ಯರ್ಥಿಯ ರೇಸ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಸಾಮಾನ್ಯವಾಗಿ ರಾಷ್ಟ್ರ ರಾಜಕಾರಣದ ಆಯಕಟ್ಟಿನ ಹುದ್ದೆಗಳಿಗೆ ಉತ್ತರ ಭಾರತದವರ ಹೆಸರು ಮುನ್ನೆಲೆಗೆ ಬಂದಷ್ಟು ದಕ್ಷಿಣ ಭಾರತದವರದ್ದು ಬರುವುದಿಲ್ಲ. ಅದರಲ್ಲಿಯೂ ಕಾಂಗ್ರೆಸ್-ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಹುದ್ದೆ, ಪ್ರಧಾನ ಮಂತ್ರಿ ಹುದ್ದೆಯ ಸಮಯದಲ್ಲಿ ದಕ್ಷಿಣ ಭಾರತದ ರಾಜಕಾರಣಿಗಳ ಹೆಸರು ಕಾಣಿಸಿಕೊಳ್ಳುವುದೇ ಕಷ್ಟ.

ಅದಕ್ಕೆ ಹಲವು ಕಾರಣಗಳಿರಬಹುದು. ಇದನ್ನು ಮೀರಿ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದರಿಂದ, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಯಲ್ಲಿ ಲಾಭವೇ ಆಗಿತ್ತು. ಇದೀಗ ಪ್ರಧಾನಿ ಹುದ್ದೆಗೆ ಅವರ ಹೆಸರನ್ನು ಅಂತಿಮಗೊಳಿಸಿದರೆ ದಕ್ಷಿಣ ಭಾರತದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಲಾಭವಾಗುತ್ತದೆ ಎನ್ನುವುದು ಹಲವರ ಲೆಕ್ಕಾಚಾರವಾಗಿದೆ. ಹೇಗಿದ್ದರೂ ಹಿಂದಿ ಬೆಲ್ಟ್‌ನ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ನೆರವು ಸಿಗುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಆದ್ದರಿಂದ ದಕ್ಷಿಣ ಭಾರತದವರೊಬ್ಬರನ್ನು ಪ್ರಧಾನಿ ಹುದ್ದೆಗೆ ಬಿಂಬಿಸುವ ಮೂಲಕ, ಈ ರಾಜ್ಯಗಳಲ್ಲಿನ ಕ್ಷೇತ್ರಗಳಲ್ಲಿಯಾದರೂ ಲಾಭ ಪಡೆಯುವ ಲೆಕ್ಕಾಚಾರ ಮೈತ್ರಿಕೂಟಕ್ಕಿದೆ.

ಕಾಂಗ್ರೆಸ್ ಮಟ್ಟಿಗೆ ನೋಡುವುದಾದರೆ, ಸದ್ಯದ ಮಟ್ಟಿಗೆ ದಕ್ಷಿಣ ಭಾರತದಲ್ಲಿಯೇ ಎರಡು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ, ಈ ರಾಜ್ಯಗಳಲ್ಲಿ ಖರ್ಗೆ ಅಸ್ತ್ರ ಪ್ರಯೋಗಿಸಿ ಸಂಸದರ ಸ್ಥಾನದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರಗಳಿವೆ. ಆದರೆ, ಉತ್ತರ ಭಾರತ ಹಾಗೂ ಮೇಲ್ವರ್ಗದ ಮತದಾರರು ಬಿಜೆಪಿ ಪರವಾಗಿದ್ದಾರೆ. ಇದರೊಂದಿಗೆ ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ, ಒಬಿಸಿ ಹಾಗೂ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಮುಖಗಳಿಗೆ ಮಣೆಹಾಕಿದೆ. ಇನ್ನು ಕರ್ನಾಟಕದಲ್ಲಿಯೂ ಒಕ್ಕಲಿಗ, ಲಿಂಗಾಯತ ಹಾಗೂ ಒಬಿಸಿ ಲೆಕ್ಕಾಚಾರದಲ್ಲಿಯೇ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕ ಹಾಗೂ ಪದಾಧಿಕಾರಿಗಳ ನೇಮಕವಾಗಿರುವುದರಿಂದ, ಕಾಂಗ್ರೆಸ್ ಪಾಲಿಗಿರುವ ದಲಿತ ಮತಗಳನ್ನು ಗಟ್ಟಿಯಾಗಿಸಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಮುನ್ನೆಲೆಗೆ ತರುವುದು ಕಾಂಗ್ರೆಸ್ ಪಾಲಿಗೆ ಅನಿವಾರ್ಯ ಎನಿಸಿದೆ.

ಆದರೆ, ಪ್ರಧಾನಿ ಅಭ್ಯರ್ಥಿಯ ಹೆಸರಿಗೆ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಅಧಿಕೃತಗೊಳಿಸುವುದಕ್ಕೆ ಹಲವು ಸಮಸ್ಯೆಗಳಿವೆ. ಪ್ರಮುಖವಾಗಿ ಮೊದಲೇ ಹೇಳಿದಂತೆ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳಿರುವ ಉತ್ತರ ಭಾರತದ ಮತದಾರರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಪ್ಪಿಕೊಂಡು ಕಾಂಗ್ರೆಸ್ ಅಥವಾ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತಹಾಕುವರೇ ಎನ್ನುವ ಗೊಂದಲವಿದೆ. ದಲಿತ ಎನ್ನುವ ಟ್ರಂಪ್‌ಕಾರ್ಡ್ ಅನ್ನು ಬಳಸಿದರೂ, ಹಿಂದಿಯೇತರ ರಾಜ್ಯದ ನಾಯಕರನ್ನು ಉತ್ತರ ಭಾರತದ ಮತದಾರರು ಸ್ವೀಕರಿಸುವರೇ? ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ಇನ್ನು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿಲ್ಲ.

ಈ ಎಲ್ಲವನ್ನು ಮೀರಿ, ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ? ಬೇಡವೇ ಎನ್ನುವ ಗೊಂದಲದಲ್ಲಿದ್ದಾರೆ. ಸ್ಪರ್ಧಿಸಿದರೂ ಕಲಬುರಗಿಯಿಂದಲೇ ನಿಲ್ಲಬೇಕೇ? ಅಥವಾ ಬೇರೆಯಾವುದಾದರೂ ಕ್ಷೇತ್ರಕ್ಕೆ ವಲಸೆ ಹೋಗಬೇಕೇ ಎನ್ನುವ ಗೊಂದಲ ಬಗೆಹರಿದಿಲ್ಲ. ಒಂದು ವೇಳೆ ಕರ್ನಾಟಕ ವಲ್ಲದೇ, ಉತ್ತರ ಭಾರತದ ಯಾವುದಾದರೂ ಕ್ಷೇತ್ರಗಳಿಗೆ ವಲಸೆ ಹೋದರೆ ಅಲ್ಲಿನ ಮತದಾರರು ಅವರನ್ನು ಒಪ್ಪಿಕೊಳ್ಳುವರೇ? ಎನ್ನುವುದಕ್ಕೆ ಖರ್ಗೆ ಅವರಿಗೆ ಉತ್ತರಸಿಕ್ಕಿಲ್ಲ. ಅವರ ಆಪ್ತ ಮೂಲಗಳ ಪ್ರಕಾರ ಈ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಬೇಡವೇ ಎನ್ನುವ ಗೊಂದಲದಲ್ಲಿರುವುದರಿಂದ ಪ್ರಧಾನಿ ಅಭ್ಯರ್ಥಿಯ ಹೆಸರಿಗೆ ತಮ್ಮ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ‘ಸಮಯಾವಕಾಶ‘ ಕೇಳಿದ್ದಾರೆ ಎನ್ನಲಾಗುತ್ತಿದೆ.

ಹಲವಾರು ‘ರೇ’ಗಳ ನಡುವೆ ಕರ್ನಾಟಕದ ಒಬ್ಬ ದಲಿತನ ಹೆಸರು ಇಂಡಿಯ ಮೈತ್ರಿಕೂಟ ಪ್ರಧಾನಿ ಅಭ್ಯರ್ಥಿ ಹುದ್ದೆಗೆ ಬಂದಿರುವುದು ಕರ್ನಾಟಕದ ಮಟ್ಟಿಗೆ ಖುಷಿಪಡುವ ವಿಷಯ. ಆದರೆ ಒಂದೆಡೆ ಮೋದಿ ವೇವ್, ಇನ್ನೊಂದೆಡೆ ಹತ್ತು ಹಲವು ಗೊಂದಲಗಳನ್ನು ಹೊಂದಿರುವ ಇಂಡಿಯ ದಲ್ಲಿ ಸೀಟು ಹಂಚಿಕೆ, ಪ್ರಧಾನಿ ಅಭ್ಯರ್ಥಿಯ ಹೆಸರಿಗೆ ಮುಂದಿನ ದಿನದಲ್ಲಿ ಇನ್ನಷ್ಟು ಗದ್ದಲ-ಗಲಾಟೆಯಾಗುವ ಆತಂಕ. ಈ ಎಲ್ಲವನ್ನು ಗೋಜಲುಗಳನ್ನು ಮೀರಿ ಖರ್ಗೆ ಅವರನ್ನು ಒಮ್ಮತದಿಂದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲು ಸಾಧ್ಯವೇ? ಗಾಂಧಿ ಕುಟುಂಬದ ಹೊರತಾದ ಮತ್ತೊಮ್ಮೆ ಪ್ರಧಾನಿಯನ್ನು ನೋಡಲು ಕಾಂಗ್ರೆಸಿಗರು ಸಿದ್ಧವಾಗಿದ್ದಾ ರೆಯೇ ಎನ್ನುವುದು ಈಗಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಈ ಎಲ್ಲ ಗೊಂದಲ ಗೋಜಲು, ನೂರಾರು ಪ್ರಶ್ನೆಗಳ ನಡುವೆ ಕರ್ನಾಟಕದ ಮುತ್ಸದಿಯೊಬ್ಬರ ಹೆಸರು
ಪ್ರಧಾನಿ ಅಭ್ಯರ್ಥಿಯಾದರೆ ಇಂಡಿಯ ಮೈತ್ರಿಕೂಟಕ್ಕೆ ಲಾಭವಾಗುವುದೇ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!