Monday, 13th May 2024

ಸಂದೇಶಖಾಲಿ ಇಡೀ ಜಗತ್ತಿಗೆ ಕಳಿಸಿದ ಸಂದೇಶ ಮಾತ್ರ ಖಾಲಿಖಾಲಿ

ನೂರೆಂಟು ವಿಶ್ವ

ಪಶ್ಚಿಮ ಬಂಗಾಳದ ಉತ್ತರ ಚೌಬೀಸ್ (೨೪) ಪರಗಣ ಜಿಲ್ಲೆಯ ಸುಂದರಬನ ಪ್ರಾಂತ್ಯದಲ್ಲಿರುವ ಸಂದೇಶಖಾಲಿ ಎಂಬ ಊರನ್ನು ತಲುಪಿದಾಗ ಸೂರ್ಯ
ನೆತ್ತಿಯ ಮೇಲೆ ನಿಂತಿದ್ದ. ಆ ರಣರಣ ಬಿಸಿಲಿನಲ್ಲೂ ಗಿಜಿಗಿಜಿ ಜನ. ಈದ್ ಹಿಂದಿನ ದಿನವಾಗಿದ್ದರಿಂದ ಅಲ್ಲಿನ ಮಾರುಕಟ್ಟೆಯಲ್ಲಿ ಕಾಲಿಡಲು ಸಾಧ್ಯವಾಗುತ್ತಿರಲಿಲ್ಲ.

ರಸ್ತೆಯ ಇಕ್ಕೆಲಗಳಲ್ಲಿ ಹಾಸಿಕೊಂಡಿದ್ದ ಬೀದಿಬದಿ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆದಿತ್ತು. ಎರಡು ದಿನಗಳ ಹಿಂದೆ, ಆ ಊರಿಗೆ ಹೊರಟ ಪೊಲೀಸರನ್ನು ಅಲ್ಲಿನ ಗೂಂಡಾಗಳು ಹಿಗ್ಗಾಮುಗ್ಗಾ ಥಳಿಸಿದ್ದರು. ಹೀಗಾಗಿ ನಮ್ಮ ಕಾರಿನ ಡ್ರೈವರ್ ಅಲಿ, ‘ಸರ್, ಇದಕ್ಕಿಂತ ಮುಂದೆ ಹೋಗುವುದು ಅಪಾಯಕಾರಿ. ನೀವು ಹೇಳಿದರೆ ಇಲ್ಲ ಅನ್ನೋಲ್ಲ. ಆದರೆ ಅಲ್ಲಿಗೆ ಹೋಗುವುದು ಸುರಕ್ಷಿತವಲ್ಲ ಎಂದು ಅನಿಸುತ್ತಿದೆ’ ಎಂದ. ನಾವು ಸಂದೇಶಖಾಲಿ ಯಿಂದ ಎಂಟು ಕಿ. ಮೀ. ಹಿಂದೆ ಸರ್ಬೇರಿಯ ಎಂಬ ಊರಿನಲ್ಲಿ ನಿಂತು ಏನು ಮಾಡುವುದು ಎಂದು ಯೋಚಿಸುತ್ತಿದ್ದೆವು.

ಸರ್ಬೇರಿಯದಲ್ಲಿಯೇ ಸಂದೇಶಖಾಲಿಗೆ ಹೋಗದಂತೆ ಬ್ಯಾರಿಕೇಡ್ ಹಾಕಿದ್ದರು. ಮುಂದಿನ ದಾರಿ ನಿರ್ಜನವಾಗಿತ್ತು. ಅಷ್ಟು ಹತ್ತಿರ ಹೋಗಿ ಸಂದೇಶ ಖಾಲಿಗೆ ಹೋಗದಿದ್ದರೆ ಹೇಗೆ ಎಂಬ ಭಾವನೆ ನನ್ನನ್ನು ಬಲವಾಗಿ ಕಾಡುತ್ತಿತ್ತು. ಆದರೆ ಅಲ್ಲಿಗೆ ಹೋಗುವುದು ಸುರಕ್ಷಿತವಲ್ಲ ಎಂಬುದೂ ಮನವರಿಕೆ ಯಾಗಿತ್ತು. ನಾಲ್ಕು ತಿಂಗಳ ಹಿಂದೆ ಸಂದೇಶಖಾಲಿ ಎಂಬ ಊರಿನ ಹೆಸರನ್ನು ಆ ಜಿಲ್ಲೆಯವರ ಹೊರತಾಗಿ ಬೇರೆ ಯಾರೂ ಕೇಳಿರಲಿಲ್ಲ. ಪಶ್ಚಿಮ ಬಂಗಾಳದ ರಾಜಧಾನಿಯಿಂದ ೭೪ ಕಿ. ಮೀ. ದೂರದಲ್ಲಿರುವ ಸಂದೇಶಖಾಲಿ ಹೆಸರನ್ನು ಕೋಲ್ಕೊತಾ ವಾಸಿಗಳು ಸಹ ಕೇಳಿರುವ ಸಾಧ್ಯತೆ ಇರಲಿಲ್ಲ. ಆದರೆ ಈ ವರ್ಷದ ಜನವರಿ ೫ರ ನಂತರ ಆ ಊರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಅಲ್ಲಿಂದ ಇಂದಿನವರೆಗೆ ಅದು
ನಿತ್ಯ ಸುದ್ದಿಯಲ್ಲಿದೆ. ಆ ಊರಿಗೆ ದೇಶ-ವಿದೇಶಗಳ ಮಾಧ್ಯಮ ಪ್ರತಿನಿಽಗಳು ಭೇಟಿ ನೀಡಿ ಅಲ್ಲಿಂದ ವರದಿ ಮಾಡಿದ್ದಾರೆ.

ಕನ್ನಡ ಪತ್ರಿಕೆಗಳ ಮುಖಪುಟದಲ್ಲೂ ಸಂದೇಶಖಾಲಿ ಹತ್ತಾರು ಸಲ ಕಂಗೊಳಿಸಿದೆ. ಸಂಸತ್ತಿನಲ್ಲಿ ಈ ವಿಷಯವಾಗಿ ಕೋಲಾಹಲವೇ ನಡೆದಿದೆ. ಪ್ರಧಾನಿ, ಗೃಹಮಂತ್ರಿಗಳ ಭಾಷಣಗಳಲ್ಲೂ ಸಂದೇಶಖಾಲಿ ಪ್ರಸ್ತಾಪವಾಗಿದೆ. ಲಂಡನ್‌ನ ಬಿಬಿಸಿ ಸಂದೇಶಖಾಲಿ ಬಗ್ಗೆ ವಾರಗಟ್ಟಲೆ ಸತತ ವರದಿ ಮಾಡಿತು. ತನ್ನ ಪಾಡಿಗೆ ತಾನಿದ್ದ ಸುಮಾರು ಒಂದೂವರೆ ಲಕ್ಷ ದಷ್ಟು ಜನಸಂಖ್ಯೆಯಿರುವ ಒಂದು ಸಾಮಾನ್ಯ ಹಳ್ಳಿ ಏಕಾಏಕಿ ಎಲ್ಲರ ಬಾಯಲ್ಲಿ ನುಲಿಯುವಂತಾಗಿದ್ದು ಒಂದು ಕೆಟ್ಟ ಕಾರಣಕ್ಕಾಗಿ. ಹೀಗಾಗಿ ಆಷ್ಟು ಹತ್ತಿರ ಹೋಗಿ ಸಂದೇಶಖಾಲಿಗೆ ಹೋಗದಿದ್ದರೆ ಹೇಗೆ? ಇಲ್ಲದಿದ್ದರೆ ಆ ಊರಿಗೆ ಹೋಗಲು ಯಾವ ಕಾರಣವಿದೆ? ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮಾಜಿ ಸಚಿವ ಜ್ಯೋತಿಪ್ರಿಯ ಮಲ್ಲಿಕ್, ಪಡಿತರ ದವಸ-ಧಾನ್ಯಗಳನ್ನು ಸಾರ್ವಜನಿಕರಿಗೆ ನೀಡದೇ, ಅದನ್ನು ನೇರವಾಗಿ ಖಾಸಗಿಯವರಿಗೆ ಮಾರಾಟ ಮಾಡಿ ನೂರಾರು ಕೋಟಿ ರುಪಾಯಿ ಅಕ್ರಮವಾಗಿ ಲಪಟಾಯಿಸಿದ್ದ. ಈ ಸಂಬಂಧವಾಗಿ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳು ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ ಮಲ್ಲಿಕ್‌ನನ್ನು ಬಂಧಿಸಿದ್ದರು.

ಮಲ್ಲಿಕ್‌ನ ಆಪ್ತರಲ್ಲಿ ಒಬ್ಬನಾದ ಸಂದೇಶಖಾಲಿಯ ಶಹಜಾನ್ ಶೇಕ್ ಎಂಬ ಸ್ಥಳೀಯ ನಾಯಕ ಕೂಡ ಈ ಹಗರಣದಲ್ಲಿ ಭಾಗಿಯಾಗಿದ್ದುದು ತನಿಖೆಯಿಂದ ಸಾಬೀತಾಗಿತ್ತು. ಈ ಹಗರಣದಲ್ಲಿ ಶೇಕ್ ಪಾತ್ರವಿರುವುದನ್ನು ಮಲ್ಲಿಕ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದ. ಹೀಗಾಗಿ ಅವನನ್ನು ಖೆಡ್ಡಾಕ್ಕೆ ಕೆಡವಿ ಬಂಧಿಸಲು ಇ.ಡಿ. ಅಧಿಕಾರಿಗಳು ಹೊಂಚು ಹಾಕಿದ್ದರು. ಆ ಪ್ರಕಾರ ಈ ವರ್ಷದ ಜನವರಿ ಐದರಂದು ಇ.ಡಿ. ಅಧಿಕಾರಿಗಳು ಶೇಕ್‌ನನ್ನು
ಬಂಧಿಸಲು ಸಂದೇಶಖಾಲಿಗೆ ಸಾಕಷ್ಟು ಪೊಲೀಸ್ ಮತ್ತು ಅರೆಸೇನಾ ಬಲದೊಂದಿಗೆ ಹೋದರು. ತನ್ನನ್ನು ಬಂಧಿಸಲು ಇ.ಡಿ. ಅಧಿಕಾರಿಗಳು ಬರುವ ಸುಳಿವನ್ನು ಮೊದಲೇ ಪಡೆದಿದ್ದ ಶಹಜಾನ್ ಶೇಕ್, ಅವರು ಬರುತ್ತಿದ್ದಂತೆ ತನ್ನ ಬೆಂಬಲಿಗರೊಂದಿಗೆ ಮಾರಣಾಂತಿಕ ಹಲ್ಲೆ ನಡೆಸಿದ.

ಬದುಕಿದೆಯಾ ಬಡಜೀವವೇ ಎಂದು ಅಧಿಕಾರಿಗಳು ಎದ್ನೋಬಿದ್ನೋ ಎಂದು ಓಡೋಡಿ ಜೀವ ಉಳಿಸಿಕೊಂಡರು. ಶೇಕ್‌ನ ಸಹಚರರು ಕಿಲೋ ಮೀಟರ್‌ಗಟ್ಟಲೆ ಅವರನ್ನು ಬೆನ್ನಟ್ಟಿ ಥಳಿಸಿದರು. ಶೇಕ್ ದಾಳಿಗೆ ಪೊಲೀಸರು ಸಹ ದಂಗಾಗಿಹೋದರು. ಆ ದಿನ ಅವರೆಲ್ಲ ಪವಾಡಸದೃಶ ರೀತಿಯಲ್ಲಿ ಜೀವ ಬಚಾವ್ ಮಾಡಿಕೊಂಡು ಬಂದರು. ಮೂವರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡರು. ಈ ಗಲಾಟೆ ಮಧ್ಯೆ ಶಹಜಾನ್ ಶೇಕ್ ಎಲ್ಲರ ಕಣ್ತಪ್ಪಿಸಿ ಪರಾರಿಯಾಗಿಬಿಟ್ಟ!

ಇಷ್ಟೇ ಆಗಿದ್ದರೆ ಅದು ಅಷ್ಟು ದೊಡ್ಡ ಸುದ್ದಿ ಆಗುತ್ತಿರಲಿಲ್ಲ. ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಈ ಘಟನೆ ಸಿಂಗಲ್ ಕಾಲಂ ಸುದ್ದಿಯಾಗಿ ಮರುದಿನ ಪ್ರಕಟವಾಯಿತು. ಇದಾಗಿ ಒಂದು ತಿಂಗಳ ನಂತರ, ಸಂದೇಶಖಾಲಿಯ ಸುಮಾರು ಇನ್ನೂರು ಹೆಂಗಸರು ಕೈಯಲ್ಲಿ ಪೊರಕೆ ಮತ್ತು ಬಡಿಗೆ ಹಿಡಿದು ಕೊಂಡು ಶಹಜಾನ್ ಶೇಕ್‌ನನ್ನು ಬಂಧಿಸಬೇಕು ಎಂಬ ಆಗ್ರಹದಿಂದ ಬೀದಿಗಿಳಿದರು. ಶೇಕ್‌ನ ಎಲ್ಲ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆತನ ಇಬ್ಬರು ಬಲಗೈ ಬಂಟರಾದ ಶಿವಪ್ರಸಾದ ಹಜ್ರಾ ಮತ್ತು ಉತ್ತಮ್ ಸರ್ದಾರ್‌ನನ್ನೂ ಬಂಧಿಸಬೇಕು ಎಂಬುದು ಅವರ ಆಗ್ರಹವಾಗಿತ್ತು. ಈ ಘಟನೆ
ನಡೆದು ಒಂದು ತಿಂಗಳಾದರೂ ಶೇಕ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಲು ಸರಕಾರ ಮೀನಾಮೇಷ ಎಣಿಸುತ್ತಿತ್ತು.

ಕಾರಣ ಶೇಕ್ ಸಂದೇಶಖಾಲಿಯ ಸ್ಥಳೀಯ ಟಿಎಂಸಿ ನಾಯಕನಾಗಿದ್ದ. ಆತನನ್ನು ಬಂಧಿಸಕೂಡದೆಂದು ಜ್ಯೋತಿಪ್ರಿಯ ಮಲ್ಲಿಕ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಒತ್ತಡ ಹೇರಿದ್ದ. ಪರಿಣಾಮ, ಪೊಲೀಸರು ಯಾವ ಕ್ರಮಕ್ಕೂ ಮುಂದಾಗದೇ ಸುಮ್ಮನಿದ್ದರು. ಅಷ್ಟಕ್ಕೂ ಶಹಜಾನ್ ಶೇಕ್ ಸಂದೇಶಖಾಲಿಯ ಒಬ್ಬ ಪುಡಿ ರೌಡಿ. ಆತ ಸ್ಥಳೀಯ ಫಿಶರಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ. ಬಿಡುವಿನ ವೇಳೆಯಲ್ಲಿ ಸಿಪಿಎಂ ಪಕ್ಷದ ಹೋರಾಟ, ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ. ತನ್ನ ಚಟುವಟಿಕೆಗಳಿಗಾಗಿ ಹಫ್ತಾ ವಸೂಲಿ ಮಾಡುತ್ತಿದ್ದ. ಹಫ್ತಾ ಕೊಡದ ಅಂಗಡಿ ಮಾಲೀಕರಿಗೆ ಕಿರುಕುಳ ಕೊಡುತ್ತಿದ್ದ.

ರಾತ್ರಿ ವೇಳೆ ಕಲ್ಲೆಸೆದು ಭೀತಿ ಹುಟ್ಟಿಸುತ್ತಿದ್ದ. ತನ್ನ ಈ ಚಟುವಟಿಕೆಗಳಿಗೆ ರಾಜಕೀಯ ಬೆಂಬಲ ಬೇಕು ಎಂದು ಅವನಿಗೆ ಮನವರಿಕೆಯಾಯಿತು. ಆತನ ಚಿಕ್ಕಪ್ಪ ಸಹ ಸಿಪಿಎಂ ಸ್ಥಳೀಯ ನಾಯಕನಾಗಿದ್ದ. ಆಗ ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಅಧಿಕಾರದಲ್ಲಿತ್ತು. ಜನರಲ್ಲಿ ಭೀತಿ ಹುಟ್ಟಿಸಿ ಬಹುಬೇಗ
ನಾಯಕನಾಗಬಹುದು ಎಂದು ಅವನಿಗೆ ಅನಿಸಿತು. ಹೀಗಾಗಿ ತನ್ನದೇ ಪುಂಡರ ತಂಡ ಕಟ್ಟಿಕೊಂಡ. ರಾಜಕೀಯವಾಗಿ ಬೆಳೆಯಬೇಕೆಂದರೆ ಹಣ ಮಾಡಬೇಕು ಎಂದು ಅವನಿಗೆ ಅನಿಸಿತು.

ಮೂಲತಃ ಸಂದೇಶಖಾಲಿ ಸೀಗಡಿ ಮೀನು ಕೃಷಿಗೆ ಹೆಸರುವಾಸಿ. ಇಲ್ಲಿನ ಮೀನುಗಳಿಗೆ ದೇಶ-ವಿದೇಶಗಳಲ್ಲಿ ಭಾರಿ ಬೇಡಿಕೆ. ಕೋಲ್ಕೊತಾದಿಂದ ಸಂದೇಶಖಾಲಿಗೆ ಹೋಗುವಾಗ ಸುಮಾರು ಮೂವತ್ತು ಕಿ.ಮೀ. ದೂರದವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ ಸೀಗಡಿ ಮೀನಿನ ಕೃಷಿ ಭೂಮಿ (ಕೆರೆಯಂತಿ ರುವ ವಿಶಾಲ ಹೊಂಡ) ಕಾಣಿಸುತ್ತದೆ. ಏನಿಲ್ಲವೆಂದರೂ ಒಂದೂವರೆ ಲಕ್ಷ ಎಕರೆ ಭೂಪ್ರದೇಶಗಳಲ್ಲಿ ಈ ಕೃಷಿ ನಡೆಯುತ್ತಿರಬಹುದು. ಶಹಜಾನ್ ಶೇಕ್ ತನ್ನ ಬೆಂಬಲಿಗರೊಂದಿಗೆ ಹೋಗಿ, ಈ ಭೂಮಿಯನ್ನು ಬಿಟ್ಟು ಕೊಡಬೇಕೆಂದು ಧಮಕಿ ಹಾಕಿ ತಾಕೀತು ಮಾಡುತ್ತಿದ್ದ.

ದೂಸರಾ ಮಾತಾಡದೇ ಭೂಮಿಯನ್ನು ಬಿಟ್ಟುಕೊಟ್ಟರೆ ಚೂರುಪಾರು ಹಣ ಕೊಡುತ್ತಿದ್ದ. ಪ್ರತಿರೋಧ ಒಡ್ಡಿದರೆ, ಬಲವಂತವಾಗಿ ನಯಾಪೈಸೆಯನ್ನೂ ಕೊಡದೇ ಜಮೀನನ್ನು ಕಿತ್ತುಕೊಳ್ಳುತ್ತಿದ್ದ. ಪೊಲೀಸರಿಗೆ ದೂರು ನೀಡಿದರೆ ಅವರ ಕಥೆ ಮುಗೀತ್. ಶೇಕ್ ಯಾರ ಭೂಮಿಯ ಮೇಲೆ ಕಣ್ಣು ಹಾಕಲಿ,
ಆತ ಕೇಳಿದ ಹಣಕ್ಕೆ ಕೊಟ್ಟು ಜಾಗ ಖಾಲಿ ಮಾಡುತ್ತಿದ್ದರು. ಈ ರೀತಿ ಆತ ಐದು ಸಾವಿರಕ್ಕೂ ಅಧಿಕ ಎಕರೆ ಸೀಗಡಿಮೀನು ಕೃಷಿಭೂಮಿಯನ್ನು ಲಪಟಾಯಿಸಿದ್ದ. ನೋಡನೋಡುತ್ತಿದ್ದಂತೆ ಶೇಕ್ ಆ ಪ್ರದೇಶದ ದೊಡ್ಡ ಭೂಮಾಲೀಕನಾದ. ಆತನ ರಕ್ಷಣೆಗೆ ಶಾಸಕರು ಮತ್ತು ಸಂಸದರು ಮುಂದಾ ದರು. ಅವರಿಗೆ ಶೇಕ್ ಕೇಳಿದಷ್ಟು ಹಣ ನೀಡುತ್ತಿದ್ದ. ಜ್ಯೋತಿಪ್ರಿಯ ಮಲ್ಲಿಕ್ ಕೂಡ ಶೇಕ್‌ಗೆ ಪರಿಚಯವಾಗಿದ್ದು ಹಾಗೇ.

ಆ ದಿನಗಳಲ್ಲಿ ಸಿಪಿಎಂ ಕ್ಷೀಣಿಸಿ, ದೀದಿಯ ಟಿಎಂಸಿ ಪ್ರವರ್ಧಮಾನಕ್ಕೆ ಬರಲಾರಂಭಿಸಿತ್ತು. ಹೀಗಿರುವಾಗ ೨೦೧೩ರ ಒಂದು ದಿನ ಶೇಕ್ ಟಿಎಂಸಿ ಸೇರಿ ಬಿಟ್ಟ! ಅಷ್ಟೊತ್ತಿಗೆ ಶಹಜಾನ್ ಶೇಕ್ ಸಂದೇಶಖಾಲಿ ಮತ್ತು ಸುತ್ತ ಮುತ್ತಲ ಊರುಗಳಲ್ಲಿ ತನ್ನ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದ. ಆತನ ಸಹಾಯ ವಿಲ್ಲದೇ ಚುನಾವಣೆಯಲ್ಲಿ ಆರಿಸಿ ಬರುವುದು ಸಾಧ್ಯವೇ ಇಲ್ಲ ಎಂದು ರಾಜಕೀಯ ನಾಯಕರಿಗೆ ಪಕ್ಕಾ ಆಗಿತ್ತು. ಆತ ತನ್ನ ವ್ಯಾಪ್ತಿಯಲ್ಲಿರುವ ಕೂಲಿಕಾರರಿಗೆ, ಅಂಗಡಿಕಾರರಿಗೆ ಬಡ್ಡಿಗೆ ಹಣ ನೀಡುತ್ತಿದ್ದುದರಿಂದ ಅವರೆಲ್ಲ ತನ್ನ ಹಂಗು-ಹಿಡಿತದಲ್ಲಿರುವಂತೆ ನೋಡಿಕೊಂಡ. ಸುತ್ತಮುತ್ತಲ
ಹತ್ತಾರು ಊರುಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಿಸಿ, ಅಂಗಡಿಗಳನ್ನು ಬಾಡಿಗೆಗೆ ನೀಡಲಾರಂಭಿಸಿದ. ತನ್ನ ಸಹಾಯವಿಲ್ಲದೇ ಯಾವ ದಂಧೆಯನ್ನೂ ಮಾಡಲು ಸಾಧ್ಯವಿಲ್ಲ ಎಂಬ ಅವಲಂಬನೆಯನ್ನು ಸೃಷ್ಟಿಸಿದ. ಸೀಗಡಿ ಮೀನಿನ ಕೃಷಿಯಿಂದ ದಿನಕ್ಕೆ ಲಕ್ಷ ಲಕ್ಷ ಹಣ ಹರಿದು ಬರಲಾರಂಭಿಸಿತು. ರಾಜಕೀಯ ನಾಯಕರಿಗೆ ಶೇಕ್ ಕಾಮಧೇನುವಾದ. ಈ ಮಧ್ಯೆ ಶೇಕ್‌ನ ಶೋಕಿಗಳೂ ಹೆಚ್ಚಾದವು.

ಸಂದೇಶಖಾಲಿಯಲ್ಲಿ ಯಾವುದೇ ಹೆಣ್ಣುಮಗಳು ಆತನ ಕಾಕದೃಷ್ಟಿಗೆ ಬಿದ್ದರೆ ಅವಳನ್ನು ಎತ್ತಾಕಿಕೊಂಡು ಬರುವಂತೆ ತನ್ನ ಸಹಚರರಿಗೆ ಸೂಚಿಸುತ್ತಿದ್ದ. ಶೇಕ್‌ನನ್ನು ಸಂತೃಪ್ತಗೊಳಿಸಲು ಆತನ ಸಹಚರರು ಹೆಣ್ಣುಗಳ ಬೇಟೆ ಆರಂಭಿಸಿದರು. ಕೆಲವರಂತೂ ಶೇಕ್‌ನ ಹೆಣ್ಣುಬಾಕತನವನ್ನು ನೋಡಿ, ಊರು
ಖಾಲಿ ಮಾಡಿಕೊಂಡು ಹೋದರು. ತನ್ನ ಕೋರಿಕೆಯನ್ನು ಮನ್ನಿಸದ ಹೆಣ್ಣುಮಕ್ಕಳ ಮಾನಭಂಗಕ್ಕೂ ಆತ ಹೇಸುತ್ತಿರಲಿಲ್ಲ. ಮಧ್ಯರಾತ್ರಿ ಶೇಕ್‌ನ ಸಹಚರರು ಯಾರ ಮನೆಗಳನ್ನು ನುಗ್ಗುತ್ತಾರೆ ಎಂದು ಜನ ಭಯಭೀತರಾಗಿ ಕಾಲ ಕಳೆಯುವಂತಾಯಿತು. ಇಂದು ಸಂದೇಶಖಾಲಿಯಲ್ಲಿ ಶೇಕ್ ಯಾವ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕಿರಬಹುದು ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಆತ ಏನಿಲ್ಲವೆಂದರೂ ಮುನ್ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯ, ಅತ್ಯಾಚಾರ ನಡೆಸಿರಬಹುದು, ಆದರೆ ಯಾರೂ ಆತನ ವಿರುದ್ಧ ದೂರು ನೀಡುವ ಧೈರ್ಯವನ್ನೂ ಮಾಡಲಿಲ್ಲ.

ಅಷ್ಟಾಗಿಯೂ ಆತನ ವಿರುದ್ಧ ಎಂಟು ಲೈಂಗಿಕ ಕಿರುಕುಳದ ದೂರುಗಳು ದಾಖಲಾಗಿದ್ದವು. ಆದರೆ ಅವನ ವಿರುದ್ಧ ಕ್ರಮಕ್ಕೆ ಪೊಲೀಸರೂ ಮುಂದಾಗಲೇ ಇಲ್ಲ. ಯಾವಾಗ ಶಹಜಾನ್ ಶೇಕ್, ಇ.ಡಿ. ಅಽಕಾರಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾದನೋ, ಆತನಿಂದ ಲೈಂಗಿಕ ದೌರ್ಜನ್ಯ, ಕಿರುಕುಳಕ್ಕೊಳಗಾದ ಹೆಂಗಸರು ಧೈರ್ಯ ಮಾಡಿ, ಕೈಯಲ್ಲಿ ಪೊರಕೆ ಮತ್ತು ಕೋಲನ್ನು ಹಿಡಿದುಕೊಂಡು ಶಹಜಾನ್ ಶೇಕ್‌ನನ್ನು ಬಂಧಿಸಬೇಕು ಎಂದು ಬೀದಿಗಿಳಿದರು.
ತಮ್ಮ ಜಮೀನುಗಳನ್ನು ಕಳೆದುಕೊಂಡವರೂ ಈ ಮಹಿಳೆಯರ ಪ್ರತಿಭಟನೆಗೆ ಸೇರಿಕೊಂಡರು.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಶೇಕ್ ಒಂದೇ ಒಂದು ಅಕ್ರಮ ಎಸಗಿಲ್ಲ. ಆತನ ವಿರುದ್ಧ ಯಾವ ಪೊಲೀಸ್ ಠಾಣೆಯಲ್ಲೂ ದೂರು ಸಹ ದಾಖಲಾ ಗಿಲ್ಲ ಎಂದು ಟಿಎಂಸಿಯ ಹಿರಿಯ ನಾಯಕರು ಆತನ ಸಮರ್ಥನೆಗೆ ಮುಂದಾದರು. ಘಟನೆ ನಡೆದು ಒಂದೂವರೆ ತಿಂಗಳಾದರೂ ಪೊಲೀಸರು ಶೇಕ್‌ ನನ್ನು ಬಂಧಿಸಲಿಲ್ಲ. ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಹೊಲಸು ರಾಜಕಾರಣ ಮಾಡುತ್ತಿದೆ ಎಂದು ಟಿಎಂಸಿ ನಾಯಕರು ಸತ್ಯವನ್ನು ಮರೆಮಾಚಲು ಮುಂದಾದರು. ಎಲ್ಲ ನಾಯಕರೂ ಶೇಕ್‌ನ ಬೆಂಬಲಕ್ಕೆ ನಿಂತುಬಿಟ್ಟರು. ಸಂದೇಶಖಾಲಿಗೆ ಬಿಜೆಪಿ ಶಾಸಕರು, ಸಂಸದರು ಹೋಗದಂತೆ ಟಿಎಂಸಿ ಸರಕಾರ ನಿರ್ಬಂಧ ವಿಧಿಸಿತು.

ಈ ಮಧ್ಯೆ ಶೇಕ್‌ನ ಸಹಚರರಾದ ಹಜ್ರಾ ಮತ್ತು ಸರ್ದಾರ್ ನನ್ನು ಪೊಲೀಸರು ಬಂಽಸಿದರು. ಪಾಕಿಸ್ತಾನ ಮತ್ತು ಇರಾಕಿನಲ್ಲೂ ಮಹಿಳೆಯರ ಮೇಲೆ ಈ ರೀತಿ ದೌರ್ಜನ್ಯ ನಡೆದಿಲ್ಲ ಎಂದು ಲೋಕಸಭೆಯಲ್ಲಿ ಬಿಜೆಪಿ ಸಂಸದರು ಬೊಬ್ಬೆ ಹಾಕಿದರು. ಪಶ್ಚಿಮ ಬಂಗಾಳ ಸರಕಾರಕ್ಕೆ ಕೋಲ್ಕೊತಾ ಹೈಕೋರ್ಟ್ ಛೀಮಾರಿ ಹಾಕಿತು. ಶಹಜಾನ್ ಶೇಕ್‌ಗೆ ಶರಣಾಗುವಂತೆ ಸೂಚಿಸಿತು. ಸಂದೇಶಖಾಲಿಯಲ್ಲಿ ಶೇಕ್ ನಿಂದ ತೊಂದರೆಗೊಳಗಾದ ಪ್ರತಿಯೊಬ್ಬರ ಅಭಿಪ್ರಾ ಯವನ್ನು ಪಡೆಯುವುದಾಗಿ ಪಶ್ಚಿಮ ಬಂಗಾಳ ಡಿಜಿಪಿ ಕೋರ್ಟಿಗೆ ಹೇಳಬೇಕಾಯಿತು. ಶೇಕ್ ವಶಪಡಿಸಿಕೊಂಡಿದ್ದ ಮಕ್ಕಳ ಉದ್ಯಾನವನ್ನು ಮರಳಿ ಪಡೆಯಲಾಯಿತು. ಶೇಕ್‌ನ ಆಸ್ತಿ-ಪಾಸ್ತಿಗಳಿಗೆ ಬೆಂಕಿ ಹಚ್ಚಲಾಯಿತು. ‘ನನ್ನ ಪಕ್ಷ ಶೇಕ್ ನನ್ನು ರಕ್ಷಿಸುತ್ತಿಲ್ಲ. ಆತನ ವಿರುದ್ಧದ ತನಿಖೆಗೆ ಕೋಲ್ಕೊತಾ ಹೈಕೋರ್ಟ್ ತಡೆಯಾe ನೀಡಿರುವುದರಿಂದ ಅವನನ್ನು ಬಂಧಿಸಿಲ್ಲ’ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ದೀದಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಹೇಳಿದ. ‘ತಕ್ಷಣ ಶೇಕ್‌ನನ್ನು ಬಂಧಿಸಿ.

ಆತನ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿಲ್ಲ’ ಎಂದು ಕೋರ್ಟ್ ಸ್ಪಷ್ಟಪಡಿಸಿತು. ಕೋರ್ಟ್ ಅನುಮತಿ ಪಡೆದು ಬಿಜೆಪಿ ನಾಯಕ ಸುವೆಂದು ಅಧಿಕಾರಿ ಸಂದೇಶಖಾಲಿಗೆ ಭೇಟಿ ನೀಡಬೇಕಾಯಿತು. ಘಟನೆ ನಡೆದ ಎರಡು ತಿಂಗಳ ಬಳಿಕ ಶಹಜಾನ್ ಶೇಕ್‌ನನ್ನು ಪೊಲೀಸರು ಬಂಧಿಸಿದರು. ಆತ ಆ ಎರಡು ತಿಂಗಳು ಎಲ್ಲಿದ್ದ ಎನ್ನುವುದು ಪೊಲೀಸರಿಗೆ ಗೊತ್ತಿತ್ತು. ಸರಕಾರವೇ ಆತನಿಗೆ ರಾಜಾಶ್ರಯ ನೀಡಿತ್ತು. ಎಲ್ಲೆಡೆಗಳಿಂದ ಒತ್ತಡಗಳು ಹೆಚ್ಚಲಾ ರಂಭಿಸಿ, ಇನ್ನು ಆತನಿಗೆ ರಕ್ಷಣೆ ನೀಡುವುದು ಸಾಧ್ಯವೇ ಇಲ್ಲ ಎಂದು ಅರಿವಾದಾಗ ಶೇಕ್‌ನನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಶೇಕ್‌ನ ದೌರ್ಜನ್ಯ, ದರ್ಪ, ದೌಲತ್ತು, ಅಮಾನವೀಯ ಕೃತ್ಯಗಳದು ಒಂದು ಕರುಣಾಜನಕ ಕತೆಯಾದರೆ, ಆ ಎರಡು ತಿಂಗಳು ಆತ ಎಲ್ಲಿದ್ದ ಎಂಬುದು ಪತ್ತೆಯಾದರೆ ಅದು ಇದಕ್ಕಿಂತ ಕರಾಳ ಕತೆ. ಕಾರಣ ಆತ ಟಿಎಂಸಿ ಸರಕಾರದ ಮೂಗಿನ ಅಡಿಯಲ್ಲೇ ಮಲಗಿದ್ದ!

ಸಂದೇಶಖಾಲಿಯಲ್ಲಿ ನಡೆದ ಕಳೆದ ನಾಲ್ಕು ತಿಂಗಳ ವಿದ್ಯಮಾನಗಳನ್ನು ಕೇಳಿದ ಯಾರಿಗಾದರೂ ಭವಿಷ್ಯದ ಭರವಸೆಗಳೆಲ್ಲ ಖಾಲಿಯಾದ ಅನುಭವ ವಾದರೆ ಆಶ್ಚರ್ಯವಿಲ್ಲ. ಬಾಂಗ್ಲಾದೇಶದ ಗಡಿಗೆ ಹತ್ತಿರವಿರುವ, ಸುಂದರಬನದ ಪ್ರದೇಶದಲ್ಲಿರುವ ಸಂದೇಶಖಾಲಿ ಇಡೀ ಜಗತ್ತಿಗೆ ಕಳಿಸಿದ ಸಂದೇಶ ಮಾತ್ರ ಖಾಲಿ ಖಾಲಿ!

Leave a Reply

Your email address will not be published. Required fields are marked *

error: Content is protected !!