Monday, 20th May 2024

ಅಜ್ಞಾನವನ್ನು ಅರಿತುಕೊಳ್ಳುವುದಕ್ಕೂ ಒಂದು ಪುಸ್ತಕ ಇದೆ !

ತಿಳಿರು ತೋರಣ

srivathsajoshi@yahoo.com

ಈಗಿನ ಕಾಲದಲ್ಲಿ ಅಂತರಜಾಲದಿಂದಾಗಿ ಜ್ಞಾನತಿಜೋರಿಯ ಕೀಲಿಕೈ ನಮ್ಮ ಅಂಗೈಯಲ್ಲೇ ಇದೆ ಎಂದರೆ ಉತ್ಪ್ರೇಕ್ಷೆ ಯಲ್ಲ. ಆದರೆ ಅಂತಹ ಮಾಹಿತಿಕಣಜದಿಂದ ಏನು ಉಪಯೋಗ? ನಮಗೀಗ ಬೇಕಿರುವುದು ಜ್ಞಾನವಲ್ಲ, ಜ್ಞಾನದ ದಾಹ. ಪ್ರಶ್ನೆಗಳಿಗೆ ಸಿದ್ಧ ಉತ್ತರಗಳಲ್ಲ, ಇನ್ನಷ್ಟು ಪ್ರಶ್ನೆಗಳನ್ನು ಕೇಳುವ ಅವಕಾಶ. ಆಗಲೇ ಸಂಗ್ರಹಿಸಿಟ್ಟ ಮಾಹಿತಿಯ ಮೇಲೆ ಬೆಳಕು ಚೆಲ್ಲುವ ದೀಪವಲ್ಲ, ಅಜ್ಞಾನದ ಕತ್ತಲೆಯನ್ನು ನೀಗಿಸುವ ದೀಪ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ… ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ… ಎನ್ನುತ್ತ ಮೊನ್ನೆ ಯಷ್ಟೇ ಗುರುಪೂರ್ಣಿಮೆ ಆಚರಿಸಿದೆವು. ಅಜ್ಞಾನ ವೆಂಬ ಕತ್ತಲಿನಿಂದ ಕುರುಡಾಗಿರುವಕಣ್ಣುಗಳನ್ನು ಜ್ಞಾನವೆಂಬ ಬೆಳಕಿನ ಕಡ್ಡಿಯಿಂದ ತೆರೆಸಿದ ಗುರುಗಳು ನಮ್ಮ ಬದುಕಿನಲ್ಲಿ ಯಾರೆಲ್ಲ ಬಂದುಹೋಗಿದ್ದಾರೋ- ಅಥವಾ ಬಂದುನಿಂತಿದ್ದಾರೋ- ಅವರನ್ನು ನೆನೆದು ನಮಿಸಿದೆವು.

ಗುರುವಿನ ಬಗೆಗಿನ ಈ ಶ್ಲೋಕದಲ್ಲಿ ‘ಜ್ಞಾನಾಂಜನ ಶಲಾಕಾ’ ಪದಪುಂಜ ತುಂಬ ಸೊಗಸಾದುದು. ಶಲಾಕಾ ಎಂಬ ಪದಕ್ಕೆ ಸಂಸ್ಕೃತ ದಲ್ಲಿರುವ ಹನ್ನೆರಡಕ್ಕೂ ಹೆಚ್ಚು ಅರ್ಥಗಳಲ್ಲಿ ‘ಕಣ್ಣಿಗೆ ಕಾಡಿಗೆ ಹಚ್ಚುವ ಸಣ್ಣ ಕುಂಚ’ ಕೂಡ ಒಂದು. ಅಂಜನ ಅಂದರೆ ಕಾಡಿಗೆ. ಜ್ಞಾನವೆಂಬ ಕಾಡಿಗೆಯನ್ನು ಕಣ್ಣುಗಳಿಗೆ ಹಚ್ಚುವವನು ಗುರು! ಈಗಿನ ಕಾಲದಲ್ಲಿ ಗುರುಸ್ಥಾನದಲ್ಲಿ ನಿಲ್ಲುವ ಅರ್ಹತೆ ಹೊಂದಿರುವುದು ಗೂಗಲ್ ಆದ್ದರಿಂದ ಅದಕ್ಕೇ ವ್ಯಕ್ತಿಯೊಬ್ಬ ನಮಸ್ಕರಿಸುತ್ತಿರುವ ಚಿತ್ರವೂ ಮೊನ್ನೆ ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡಿತು.

ಸ್ವಲ್ಪ ತಮಾಷೆ ಅಂತನಿಸಿದರೂ ಒಂದು ರೀತಿಯಲ್ಲಿ ಅದೂ ಸತ್ಯವೇ. ಹಾಗೆಯೇ ಗುರು ಮತ್ತು ಗೂಗಲ್ ಇರುವ ಸಾಲಿನಲ್ಲೇ
ನಿಲ್ಲುವ ಅರ್ಹತೆ ಪುಸ್ತಕಕ್ಕೂ ಇದೆ ಎಂಬುದನ್ನೂ ನಾವೆಲ್ಲ ಬಲ್ಲೆವು. ಕಾಕತಾಳೀಯವಾಗಿ, ವಿಶಿಷ್ಟವಾದ ಮತ್ತು ವಿಭಿನ್ನವೆನಿಸಿದ ಒಂದು ಪುಸ್ತಕ- ಕೆಲ ದಿನಗಳ ಹಿಂದೆ ಇಲ್ಲಿಯ ಗ್ರಂಥಾಲಯದಿಂದನಾನು ಓದಿಗೆಂದು ಎರವಲು ತಂದಿರುವುದು- ಕೂಡ ಗುರುವಿ
ನಂತೆಯೇ eನಾಂಜನ ಶಲಾಕಾ ಆಗಬಹುದು ಎಂದು ನನಗನಿಸಿತು. ಅದರ ವಿಚಾರವನ್ನೇ ಈ ವಾರದ ಅಂಕಣದಲ್ಲಿ ನಿಮ್ಮೊಡನೆ ಹಂಚಿಕೊಳ್ಳುವವನಿದ್ದೇನೆ.

ದ ಬುಕ್ ಆಫ್ ಜನರಲ್ ನಾಲೆಡ್ಜ್- ಅಥವಾ ಅಂತಹದೇ ಹೆಸರಿನ ಪುಸ್ತಕಗಳನ್ನು ನೀವು ಅದೆಷ್ಟೋ ನೋಡಿದ್ದಿರಬಹುದು,
ಓದಿದ್ದಿರಬಹುದು. ಕ್ವಿಜ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು, ಕ್ವಿಜ್‌ಗಳನ್ನು ಕಂಡಕ್ಟ್ ಮಾಡುವವರು, ಐಎಎಸ್ ಐಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರು, ಅಥವಾ ಸಾಮಾನ್ಯಜ್ಞಾನ ಭಂಡಾರವನ್ನು ಬೆಳೆಸಿಕೊಳ್ಳುವ
ಅಸಾಮಾನ್ಯ ಹುಚ್ಚಿರುವ ಯಾರಿಗೇ ಆದರೂ ಅಂತಹ ಪುಸ್ತಕಗಳೆಂದರೆ ಪಂಚಪ್ರಾಣ. ಮನುಕುಲದ ಅಸಂಖ್ಯಾತ ಸಂಶೋಧನೆ
ಗಳು ಆವಿಷ್ಕಾರಗಳು ಸಾಹಸಗಳು ದಾಖಲೆಗಳು ದಾಂಧಲೆಗಳಿಂದ ಮೊದಲ್ಗೊಂಡು, ಭೌಗೋಳಿಕ ಅಂಕಿಅಂಶಗಳು, ಸೃಷ್ಟಿಯ
ಕೌತುಕಗಳು, ಬ್ರಹ್ಮಾಂಡದ ಸಕಲ ಚರಾಚರಗಳ ಬಗೆಗಿನ ಸಣ್ಣ ಪುಟ್ಟ ಮಾಹಿತಿಯಿಂದ ಹಿಡಿದು ಸ್ವಾರಸ್ಯಕರ ಸಂಗತಿಗಳವರೆಗೆ
ಎಲ್ಲವೂ ತುಂಬಿರುತ್ತದೆ ಆ ಪುಸ್ತಕಗಳಲ್ಲಿ.

ವಿಶ್ವವಿಖ್ಯಾತ ಬ್ರಿಟಾನಿಕಾ ಎನ್‌ಸೈಕ್ಲೊಪಿಡಿಯಾ, ನಮ್ಮ ಕನ್ನಡದ ಹೆಮ್ಮೆಯ ಜ್ಞಾನ ಗಂಗೋತ್ರಿ ಸಂಪುಟಗಳು, ಮಲಯಾಳ ಮನೋರಮಾ ಇಯರ್ ಬುಕ್, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್… ಅಂತಹ ಪುಸ್ತಕಗಳ ಸಂಖ್ಯೆಯೇ ಒಂದು ದಾಖಲೆಯಾ ಗುವಷ್ಟಿದೆ ಎಂದರೂ ತಪ್ಪಲ್ಲ.

ಆದರೆ ಇಲ್ಲಿ ನಾನು ಹೇಳಹೊರಟಿರುವುದು ಅಂತಹ ಜನರಲ್ ನಾಲೆಡ್ಜ್ ಪುಸ್ತಕಗಳ ಬಗ್ಗೆ ಅಲ್ಲ. ಈಗ ನನ್ನ ಕೈಲಿರುವುದು The
Book of General Ignorance ಎಂಬ ಹೆಸರಿನ ಪುಸ್ತಕ. ಕನ್ನಡದಲ್ಲಿ ಹೇಳುವುದಾದರೆ ಇದೊಂದು ಸಾಮಾನ್ಯಜ್ಞಾನದ
ಪುಸ್ತಕ ಅಲ್ಲ, ಸಾಮಾನ್ಯ ಅeನದ ಪುಸ್ತಕ! ಇದರ ಮುಖಪುಟದಲ್ಲೇ ಹೀಗೆ ಬರೆದದ್ದಿದೆ- Everything you think you know is
wrong. ಈ ಒಂದು ವಾಕ್ಯವೇ ಸಾಕಲ್ಲ ಏನಿದೆಯಪ್ಪಾ ಪುಸ್ತಕದೊಳಗೆ ಎಂಬ ಆಸಕ್ತಿ ಕೆರಳಿಸಲಿಕ್ಕೆ? ಓದುಗನಿಗೆ ಏನೂ ಗೊತ್ತಿಲ್ಲ ಎಂದು ಹೇಳಿ ಅವನಿಂದಲೇ ಪುಸ್ತಕವೊಂದನ್ನು ಓದಿಸಬೇಕೆಂದರೆ ಅದೆಂಥ ಧೈರ್ಯ! ಆದರೆ ಪುಸ್ತಕದ ಮುನ್ನುಡಿ ಬರೆದಿರುವ ಸ್ಟೀಫನ್ – ಮಾತುಗಳಲ್ಲೇ ಓದುಗನಿಗೆ ತನ್ನ ಜ್ಞಾನ ಎಷ್ಟು ಜುಜುಬಿ ಎಂದು ಅರ್ಥವಾಗಿ ಹೋಗುತ್ತದೆ.

ಸ್ಟೀಫನ್ ಕೊಡುವ ಹೋಲಿಕೆಯೇ ಹಾಗಿದೆ. ‘ನಿನಗೆ ತುಂಬ ವಿಷಯಗಳು ಗೊತ್ತಿವೆ’ ಎಂದು ಯಾರಿಗಾದರೂ ಹೇಳುವುದೆಂದರೆ, ಮರಳಿನ ಕಣಗಳು ಮೈಗೆ ಮೆತ್ತಿಕೊಂಡಿರು ವವನಿಗೆ ‘ಏನಯ್ಯಾ ಅಷ್ಟೂ ಮರಳನ್ನು ಮೈಗೆ ಮೆತ್ತಿಕೊಂಡಿದ್ದೀಯಾ!’ ಎಂದಂತೆಯೇ. ಅವನ ಮೈಗೆ ಅಷ್ಟಿಷ್ಟು ಮರಳಿನ ಕಣಗಳು ಅಂಟಿರುವುದು ಹೌದಾದರೂ ಪ್ರಪಂಚದಲ್ಲಿರುವ ಅಷ್ಟೂ ಮರಳಿನ ಕಣಗಳಿಗೆ ಹೋಲಿಸಿದರೆ ಅವನ ಮೈಗೆ ಅಂಟಿಕೊಂಡಿರುವುದು ಏನು ಮಹಾ? ಸಮುದ್ರ ತೀರಗಳಲ್ಲಿ, ಮರಳುಗಾಡುಗಳಲ್ಲಿ ಇರುವ ಮರಳ ರಾಶಿಯನ್ನು ಕಣ್ಣಾರೆ ನೋಡುವುದಿರಲಿ, ಅದರ ಪ್ರಮಾಣವನ್ನು ಅಂದಾಜಿಸುವುದಾದರೂ ಸಾಧ್ಯವಿದೆಯೇ ನಮ್ಮಿಂದ? ಜ್ಞಾನದ ವಿಷಯವೂ ಹಾಗೆಯೇ.

ತಿಳಿದುಕೊಳ್ಳುವುದು ಅಗಾಧ ಪ್ರಮಾಣದಲ್ಲಿದ್ದಾಗಲೂ ಎಲ್ಲವನ್ನೂ ತಿಳ್ಕೊಂಡಿದ್ದೇವೆ ಎಂದು ಬೀಗುತ್ತೇವೆ. ಈ ಪುಸ್ತಕದ ಲೇಖಕ ಜಾನ್ ಲಾಯ್ಡ್ ಹೇಳುತ್ತಾನೆ- ‘ಇದು ಎಲ್ಲವನ್ನೂ ಬಲ್ಲೆ ಎನ್ನುವವರಿಗೆಂದು ಬರೆದ ಪುಸ್ತಕವಲ್ಲ. ತಿಳಿದುಕೊಳ್ಳಬೇಕಾದ್ದು ಇನ್ನೂ ಬಹಳಷ್ಟಿದೆ ಎಂಬ ವಿನೀತಭಾವದವರಿಗೆಂದೇ ಬರೆದದ್ದು. ಈಗಿನ ಕಾಲದಲ್ಲಿ ಅಂತರಜಾಲದಿಂದಾಗಿ ಜ್ಞಾನತಿಜೋರಿಯ ಕೀಲಿಕೈ ನಮ್ಮ ಅಂಗೈಯಲ್ಲೇ ಇದೆ ಎಂದರೆ ಉತ್ಪ್ರೇಕ್ಷೆಯಲ್ಲ. ಆದರೆ ಅಂತಹ ಮಾಹಿತಿಕಣಜದಿಂದ ಏನು ಉಪಯೋಗ? ನಮಗೀಗ
ಬೇಕಿರುವುದು ಜ್ಞಾನವಲ್ಲ, ಜ್ಞಾನದ ದಾಹ. ಪ್ರಶ್ನೆಗಳಿಗೆ ಸಿದ್ಧ ಉತ್ತರಗಳಲ್ಲ, ಇನ್ನಷ್ಟು ಪ್ರಶ್ನೆಗಳನ್ನು ಕೇಳುವ ಅವಕಾಶ. ಆಗಲೇ
ಸಂಗ್ರಹಿಸಿಟ್ಟ ಮಾಹಿತಿಯ ಮೇಲೆ ಬೆಳಕು ಚೆಲ್ಲುವ ದೀಪವಲ್ಲ, ಅಜ್ಞಾನದ ಕತ್ತಲೆಯನ್ನು ನೀಗಿಸುವ ದೀಪ.

ಅದಕ್ಕೆಂದೇ ನನ್ನ ಪುಸ್ತಕವನ್ನು ನಾನು ಬುಕ್ ಆಫ್ ಜನರಲ್ ನಾಲೆಡ್ಜ್ ಎನ್ನುತ್ತಿಲ್ಲ, ಬುಕ್ ಆಫ್ ಜನರಲ್ ಇಗ್ನೊರೆನ್ಸ್ ಎಂದು ಕರೆಯಲು ಇಷ್ಟಪಡುತ್ತೇನೆ.’ ಆಲೋಚಿಸಿದಷ್ಟೂ ಆಳವಾದ ಅಧ್ಯಾತ್ಮವನ್ನೇ ತೆರೆದಿಡುವ ಮಾತುಗಳಿವು. ಹಾಗಂತ ಇದು ಕಬ್ಬಿಣದ ಕಡಲೆಯಂತೆ ಭಾಸವಾಗುವ ತತ್ತ್ವಜ್ಞಾನ ಉಪದೇಶಗಳ ಪುಸ್ತಕವಲ್ಲ. ಇದರಲ್ಲಿ ಇರುವುದು ಸುಮಾರು ಇನ್ನೂರಕ್ಕೂ ಹೆಚ್ಚಿನ ಸರಳ-ಸ್ವಾರಸ್ಯಕರ ಪ್ರಶ್ನೋತ್ತರಗಳು. ಅಷ್ಟೇ.

ಸಾಮಾನ್ಯ ಜ್ಞಾನದ ಕ್ವಿಜ್ ಪ್ರಶ್ನೋತ್ತರಗಳಂಥವೇ. ಆದರೆ ಆ ಪ್ರಶ್ನೋತ್ತರಗಳಲ್ಲೇ ಮೋಜಿದೆ, ಕೆಣಕಿಸಿ ತಿಣುಕುವ ಕರಾಮತ್ತಿದೆ, ಕುತೂಹಲ ಹುಟ್ಟಿಸುವ ವಿಶಿಷ್ಟವಾದೊಂದು ಶಕ್ತಿಯಿದೆ. ಇದರ ಲೇಖಕರು ಜಾನ್ ಲಾಯ್ಡ್ ಮತ್ತು ಜಾನ್ ಮಿಚಿನ್ಸನ್ ಇಬ್ಬರೂ ಬ್ರಿಟನ್‌ನವರು. ಅಲ್ಲಿ ಜನಪ್ರಿಯ ಟೆಲಿವಿಷನ್ ಹಾಸ್ಯಸರಣಿಗಳನ್ನು, ‘ಕ್ವೈಟ್ ಇಂಟೆರೆಸ್ಟಿಂಗ್’ ಹೆಸರಿನ ಟಿವಿ ಕ್ವಿಜ್ ಶೋಗಳನ್ನು ನಿರ್ಮಿಸಿದವರು. ಲೇಖಕರ ಪರಿಚಯದಲ್ಲೂ ಅದಷ್ಟೇ ವಿವರ ಕೊಟ್ಟಿದ್ದಾರೆ. ಇಬ್ಬರದೂ ಒಂದೇ ಪಬ್‌ನಲ್ಲಿ ಗುಂಡು ಸೇವನೆ ಎಂಬುದನ್ನೂ ಬರೆದು ಕೊಂಡಿರುವುದರಲ್ಲೇ ಗೊತ್ತಾಗುತ್ತದೆ ಇವರಿಬ್ಬರ ಸೆನ್ಸ್ ಆಫ್ ಹ್ಯೂಮರ್ ಮತ್ತು ಕೀಟಲೆ ಸ್ವಭಾವ.

ಅದು ಪುಸ್ತಕದುದ್ದಕ್ಕೂ ಅಲ್ಲಲ್ಲಿ ಇಣುಕಿ ಓದುಗನಿಗೆ ಕಚಗುಳಿಯಿಡುತ್ತದೆ. ಅಯ್ಯೋ ನನಗೇನೂ ಗೊತ್ತೇ ಇಲ್ಲವಲ್ಲ ಎಂಬ ಕೀಳರಿಮೆ ಆವರಿಸುವುದನ್ನು ತಪ್ಪಿಸುತ್ತದೆ. ಬ್ರಿಟನ್‌ನಲ್ಲಿ ಬೆಸ್ಟ್ ಸೆಲ್ಲಿಂಗ್ ಬುಕ್ ಎಂದು ಮಿಲಿಯಗಟ್ಟಲೆ ಪ್ರತಿಗಳು ಮಾರಾಟ ವಾದ ಈ ಪುಸ್ತಕ ೨೦೦೬ರಲ್ಲಿ ಅಮೆರಿಕದಲ್ಲೂ ಪ್ರಕಟವಾಯಿತು. ಇಲ್ಲಿಯೂ ಸುಪರ್‌ಹಿಟ್ ಆಯಿತು. ಲೈಬ್ರರಿಯಲ್ಲಿ ನನ್ನ ಕಣ್ಣಿಗೂ ಬಿತ್ತು. ಹೆಸರು ‘ದ ಬುಕ್ ಆಫ್ ಜನರಲ್ ಇಗ್ನೊರೆನ್ಸ್’ ಅಂತಿದ್ದದ್ದಕ್ಕೆ ಗಮನ ಸೆಳೆಯಿತು, ಓದಿದೆ, ಇಷ್ಟವಾಯ್ತು.
‘ಪ್ರಪಂಚದ ಅತ್ಯಂತ ಎತ್ತರದ ಪರ್ವತ ಯಾವುದು?’ ಎಂಬ ಪ್ರಶ್ನೆ.

ನಮಗೆಲ್ಲ ಗೊತ್ತಿದೆ ಎನ್ನುವವರು ಥಟ್ಟನೆ ಹೇಳುವ ಉತ್ತರ ಮೌಂಟ್ ಎವರೆಸ್ಟ್. ಆದರೆ ಅದು ತಪ್ಪು! ಮೌಂಟ್ ಎವರೆಸ್ಟ್‌ನ
ಎತ್ತರ ಸಮುದ್ರಮಟ್ಟದಿಂದ ೨೯೦೨೯ ಅಡಿಗಳು. ಆದರೆ ಅಮೆರಿಕದ ಹವಾಯಿ ದ್ವೀಪಗಳಲ್ಲೊಂದು ಜ್ವಾಲಾಮುಖಿ ಪರ್ವತವಿದೆ,
ಅದರ ಎತ್ತರ ೧೩೭೯೯ ಅಡಿಗಳು, ಆದರೂ ಅದು ಮೌಂಟ್ ಎವರೆಸ್ಟ್‌ಗಿಂತಲೂ ಎತ್ತರ! ಹೇಗೆ? ನೀರಿನ ಆಳದಲ್ಲೂ ಇರುವ ಆ
ಪರ್ವತದ ಒಟ್ಟು ಎತ್ತರವನ್ನು ಲೆಕ್ಕಹಾಕಿದರೆ ೩೩೪೬೫ ಅಡಿಗಳಾಗುತ್ತದೆ, ಮೌಂಟ್ ಎವರೆಸ್ಟ್‌ನ ಎತ್ತರವನ್ನು ಮೀರಿಸುತ್ತದೆ!

ಇನ್ನೊಂದು ಪ್ರಶ್ನೆ, ‘ಗೋಸುಂಬೆ ಏನು ಮಾಡುತ್ತದೆ?’ ಇದಕ್ಕೆ ಸಾಮಾನ್ಯರೆಲ್ಲ ಸಿಂಪಲ್ಲಾಗಿ ಒಂದೇ ಉತ್ತರ ಕೊಡುತ್ತೇವೆ
‘ಗೋಸುಂಬೆ ತನ್ನ ಪರಿಸರಕ್ಕೆ ತಕ್ಕಂತೆ ಮೈಬಣ್ಣ ಬದಲಾಯಿಸಿಕೊಳ್ಳುತ್ತದೆ’ ಎಂದು. ಶುದ್ಧ ತಪ್ಪು! ಗೋಸುಂಬೆ ಬಣ್ಣ ಬದಲಿಸು
ವುದು ಬ್ಯಾಕ್‌ಗ್ರೌಂಡ್‌ಗೆ ತಕ್ಕಂತೆ ಅಲ್ಲ. ಹೆದರಿಕೊಂಡಾಗ, ಸಿಟ್ಟಾದಾಗ, ಜಗಳಾಡುವಾಗ, ಸಂಗಾತಿಯನ್ನು ಅರಸುವಾಗ,
ಅಷ್ಟೇ ಅಲ್ಲ ವಾತಾವರಣದ ಉಷ್ಣತೆ ಮತ್ತು ಬೆಳಕಿನ ಪ್ರಮಾಣದಲ್ಲಿ ವ್ಯತ್ಯಾಸವಾದಾಗಲೂ! ಅಂದರೆ ಗೋಸುಂಬೆಯ ಬಗ್ಗೆ ನಮಗಿರುವ ಜ್ಞಾನ, ಆ ಜ್ಞಾನದಿಂದಾಗಿ ನಮ್ಮ ಭಾಷೆಯಲ್ಲಿ ಹುಟ್ಟಿಕೊಂಡಿರುವ ನುಡಿಗಟ್ಟು ಎಲ್ಲವೂ ತಪ್ಪು ಅಂತಾಯ್ತು.

‘ಪ್ರಪಂಚದಲ್ಲಿ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು?’ ಎಂಬ ಪ್ರಶ್ನೆ. ಯಾವುದಿರಬಹುದಪ್ಪಾ ಎಂದು ಹುಲಿ-ಸಿಂಹಗಳ ನ್ನೆಲ್ಲ ನೆನಪಿಸಿ ಕೊಳ್ಳುತ್ತೇವೆ ತಾನೆ? ಆದರೆ ಸರಿಯಾದ ಉತ್ತರ ಹೆಣ್ಣು ಸೊಳ್ಳೆ (ಗಂಡು ಸೊಳ್ಳೆ ಮನುಷ್ಯರನ್ನಲ್ಲ ಸಸ್ಯಗಳನ್ನಷ್ಟೇ ಕಚ್ಚುತ್ತದೆ)! ಒಂದು ಅಂದಾಜಿನ ಪ್ರಕಾರ ಮನುಕುಲದಲ್ಲಿ ಇದುವರೆಗೆ ವಯಸ್ಸಹಜ ಸಾವನ್ನು ಹೊರತುಪಡಿಸಿ ಉಳಿದ ರೀತಿಯ ಸಾವು ಗಳಲ್ಲಿ ಅರ್ಧದಷ್ಟು, ಅಂದರೆ ೫೦೦೦ ಕೋಟಿ ಸಂಖ್ಯೆಯ ಜನರು ಸೊಳ್ಳೆ ಕಡಿತದ ಪರಿಣಾಮದಿಂದ ಸತ್ತಿದ್ದಾರೆ.

ಉತ್ತರದ ವಿವರಣೆಯಲ್ಲಿ ಆಮೇಲೆ ಮಲೇರಿಯಾ, ಡೆಂಗ್ಯೂ, ಆನೆಕಾಲು ರೋಗ ಮುಂತಾದ ಭೀಕರ ಕಾಯಿಲೆಗಳು, ಸರ್ ಪ್ಯಾಟ್ರಿಕ್ ಮಾನ್ಸನ್ ಮತ್ತು ರೊನಾಲ್ಡ್ ರಾಸ್ ನಡೆಸಿದ ಸಂಶೋಧನೆಗಳು, ನೊಬೆಲ್ ಪ್ರಶಸ್ತಿ, ಕ್ವಿನೈನ್ ಗುಳಿಗೆಗಳು, ಗರ್ಭಿಣಿ ಯರಿಗೆ ಮತ್ತು ಹೆಚ್ಚು ಬೆವರುವವರಿಗೆ ಸೊಳ್ಳೆ ಕಡಿತ ಸಾಧ್ಯತೆ ಹೆಚ್ಚು, ಮಸ್ಕಿಟೊ ಎಂಬ ಪದಕ್ಕೆ ಸ್ಪಾನಿಷ್ ಮತ್ತು ಪೋರ್ಚುಗೀಸ್‌ ನಲ್ಲಿ ಚಿಕ್ಕ ನೊಣ ಎಂದು ಅರ್ಥ… ಅಂತೆಲ್ಲ ಸಣ್ಣಪುಟ್ಟ ಸಂಗತಿಗಳು ಸೇರಿಕೊಳ್ಳುತ್ತವೆ.

‘ಅತಿ ಹೆಚ್ಚು ಹುಲಿಗಳು ಜಗತ್ತಿನ ಯಾವ ದೇಶದಲ್ಲಿ ವಾಸಿಸುತ್ತವೆ?’ ಅಂತ ಮತ್ತೊಂದು ಪ್ರಶ್ನೆ. ಭಾರತ ದೇಶವೇ ತಾನೆ ಹುಲಿಗಳಿಗೆ ಪ್ರಸಿದ್ಧಿ? ರಾಷ್ಟ್ರೀಯ ಪ್ರಾಣಿಯೇ ಹುಲಿ ಎಂದಮೇಲೆ ಭಾರತದಲ್ಲೇ ಹುಲಿಗಳ ಸಂಖ್ಯೆ ಅತ್ಯಽಕವಿರಬೇಕು. ತಪ್ಪು! ಅತಿ ಹೆಚ್ಚು ಹುಲಿಗಳಿರುವುದು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ. ಒಂದು ಶತಮಾನದ ಹಿಂದೆ ಭಾರತದಲ್ಲಿ ಸುಮಾರು ೪೦೦೦೦ ಹುಲಿ ಗಳಿದ್ದಿರಬಹುದು. ಈಗ ಅದರ ಹತ್ತು ಶೇಕಡಾ ಸಹ ಇಲ್ಲ.

ಇಡೀ ಪ್ರಪಂಚದಲ್ಲಿಯೇ ವನ್ಯ ಹುಲಿಗಳ ಸಂಖ್ಯೆ ೭೦೦೦ ದಾಟದು. ಹಾಗಾದರೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಹೇಗೆ
ಅತ್ಯಽಕ ಹುಲಿಗಳು? ಇಲ್ಲಿ ಸುಮಾರು ೧೨೦೦೦ ಹುಲಿಗಳಿವೆ, ಪ್ರಾಣಿ ಸಂಗ್ರಹಾಲಯಗಳಲ್ಲಿ, ಮತ್ತು ಶ್ರೀಮಂತ ವ್ಯಕ್ತಿಗಳ ಬಳಿ
ಸಾಕುಪ್ರಾಣಿಯಾಗಿ! ಖ್ಯಾತ ಕುಸ್ತಿಪಟು ಮೈಕ್ ಕೈಸನ್‌ನ ಬಳಿಯೇ ಒಂದು ಕಾಲದಲ್ಲಿ ನಾಲ್ಕು ಹುಲಿಗಳಿದ್ದುವಂತೆ! ಅಮೆರಿಕದ ೫೦ ರಾಜ್ಯಗಳ ಪೈಕಿ ಕೆಲವು ಮಾತ್ರ ಹುಲಿಯಂಥ ಕ್ರೂರಪ್ರಾಣಿಯನ್ನು ಯಾರೂ ಸಾಕಬಾರದು ಎಂದು ಸಂವಿಧಾನದಲ್ಲಿ ನಿಷೇಧ
ಮಾಡಿವೆ, ಉಳಿದ ರಾಜ್ಯಗಳಲ್ಲಿ ಅಂಥ ಕಟ್ಟಳೆಗಳೇನಿಲ್ಲ.

ಟೆಕ್ಸಾಸ್ ರಾಜ್ಯವೊಂದರಲ್ಲೇ ೪೦೦೦ ಹುಲಿಗಳು ಸಾಕುಪ್ರಾಣಿಯಾಗಿ ಬದುಕಿಕೊಂಡಿವೆ ಎನ್ನಲಾಗಿದೆ. ಅಮೆರಿಕದ ರಾಜ್ಯಗಳ ವಿಚಾರ ಬಂದಾಗ ಇನ್ನೊಂದು ಪ್ರಶ್ನೆ: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ ಈಗ ಎಷ್ಟು ಸ್ಟೇಟ್ಸ್ ಇವೆ? ೫೦ ಎಂದು ಎಲ್ಲರೂ
ಹೇಳುವ ಉತ್ತರ. ಆದರೆ ಸರಿಯುತ್ತರ ೪೬. ಏಕೆಂದರೆ ವರ್ಜೀನಿಯಾ, ಪೆನ್ಸಿಲ್ವೇನಿಯಾ, ಮೆಸ್ಸಾಚ್ಯುಸೆಟ್ಸ್, ಮತ್ತು ಕೆಂಟಕಿ- ಇವು
ನಾಲ್ಕು ತಮ್ಮನ್ನು ಸ್ಟೇಟ್ ಅಂತಲ್ಲ, ಕಾಮನ್‌ವೆಲ್ತ್ ಎಂದು ಗುರುತಿಸಿಕೊಳ್ಳುತ್ತವೆ! ಇಂಥ ಕೆಲವು ಟ್ರಿಕ್ಕಿ ಪ್ರಶ್ನೆಗಳೂ ಈ ಪುಸ್ತಕದಲ್ಲಿವೆ.

ಎಷ್ಟೋ ಸಂಶೋಧನೆಗಳು, ಪ್ರಸಿದ್ಧ ಹೇಳಿಕೆಗಳು ಯಾರವೆಂದು ನಾವು ತಿಳಿದುಕೊಂಡಿರುತ್ತೇವೋ ಅದೂ ತಪ್ಪೇ ಆಗಿರುವ ಸಾಧ್ಯತೆ ಗಳಿರುತ್ತವೆ. ಟೆಲಿಫೋನನ್ನು ಸಂಶೋಧಿಸಿದವನು ಅಲೆಕ್ಸಾಂಡರ್ ಗ್ರಹಾಂ ಬೆಲ್ ಎಂದು ನಾವೆಲ್ಲ ತಿಳಿದುಕೊಂಡಿರು ವುದು. ಆದರೆ ನಿಜವಾದ ಸಂಶೋಧಕ ಗ್ರಹಾಂ ಬೆಲ್ ಅಲ್ಲ, ಆಂಟೋನಿಯೊ ಮ್ಯೂಸಿ ಎಂಬಾತ ೧೮೬೦ರಲ್ಲಿ, ಗ್ರಹಾಂ ಬೆಲ್‌ ಗಿಂತ ಹನ್ನೊಂದು ವರ್ಷಗಳ ಮೊದಲೇ ಟೆಲಿಫೋನ್ ಕಂಡುಹುಡುಕಿದ್ದ, ಅದರ ಪೇಟೆಂಟ್‌ಗಾಗಿ ಅರ್ಜಿ ಸಹ ಗುಜರಾಯಿ ಸಿದ್ದ.

ಅವನ ದುರದೃಷ್ಟ, ಯಾವುದೋ ಅವಗಡದಲ್ಲಿ ಬದುಕಿನ ಸರ್ವಸ್ವವನ್ನೂ ಕಳಕೊಂಡು ಪೇಟೆಂಟ್ ರಿನಿವಲ್‌ಗೆ ಬೇಕಾದ ಹತ್ತು ಡಾಲರ್ ಸಹ ಕಿಸೆಯಲ್ಲಿಲ್ಲದ ಪರಿಸ್ಥಿತಿ ಬಂತು. ಅಷ್ಟುಹೊತ್ತಿಗೆ ಗ್ರಹಾಂ ಬೆಲ್ ತನ್ನ ಸಂಶೋಧನೆಯನ್ನು ಮಂಡಿಸಿ ಪೇಟೆಂಟ್ ಪಡೆದಾಯ್ತು, ಅವನೇ ಟೆಲಿಫೋನ್ ಸಂಶೋಧಕ ಎಂದು ಇಡೀ ಜಗತ್ತು ಒಪ್ಪಿಯೂ ಆಯ್ತು. ವಿದ್ಯುದ್ದೀಪ ಸಂಶೋಧಕನೆಂಬ
ಖ್ಯಾತಿ ಥಾಮಸ್ ಆಲ್ವಾ ಎಡಿಸನ್‌ಗೆ ಸಂದಿರುವುದೂ ಹೀಗೆ ತಪ್ಪಾಗಿಯೇ!

ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ಎಂಬ ಬಹುಪ್ರಸಿದ್ಧ ಪದಪುಂಜವನ್ನು ಮೊದಲಿಗೆ ಹೇಳಿದ್ದು ನಾವು ತಿಳಿದುಕೊಂಡಂತೆ
ಚಾರ್ಲ್ಸ್ ಡಾರ್ವಿನ್ ಅಲ್ಲ, ಹರ್ಬರ್ಟ್ ಸ್ಪೆನ್ಸರ್ ಎಂಬೊಬ್ಬ ತತ್ತ್ವಜ್ಜಾನಿ ಮನಃಶಾಸ್ತ್ರಜ್ಞ. ಥಿಯರಿ ಆಫ್ ರಿಲೇಟಿವಿಟಿಯನ್ನು ಮೊತ್ತಮೊದಲಿಗೆ ಪ್ರತಿಪಾದಿಸಿದ್ದು ಐನ್ ಸ್ಟೈನ್ ಅಲ್ಲ ಗೆಲಿಲಿಯೊ. ಕೆಮೆಸ್ಟ್ರಿ ಲ್ಯಾಬ್‌ಗಳಲ್ಲಿ ಅಜರಾಮರವಾದ ಬುನ್ಸೆನ್ ಬರ್ನರ್‌ಅನ್ನು ವಿನ್ಯಾಸಗೊಳಿಸಿದ್ದು ರಾಬರ್ಟ್ ವಿಲ್ಹೆಲ್ಮ್ ಬುನ್ಸೆನ್ ಅಲ್ಲ, ಮೈಕೇಲ್ ಫ್ಯಾರಡೆ ಮತ್ತುಪೀಟರ್ ಡೆಸಾಗ. ಗ್ರೀಕ್ ಪುರಾಣಗಳಲ್ಲಿನ ಅಟ್ಲಸ್ ತನ್ನ ಬೆನ್ನ ಮೇಲೆ ಹೊತ್ತಿರುವುದು ಭೂಗೋಲವನ್ನಲ್ಲ, ಸ್ವರ್ಗಲೋಕವನ್ನು. ಅದಿರಲಿ, ನಮ್ಮ ಬೆನ್ನಮೇಲೆ/ತಲೆಯಲ್ಲಿ ಅದೆಷ್ಟು ತಪ್ಪು ತಿಳಿವಳಿಕೆ ಹೊತ್ತುಕೊಂಡಿದ್ದೇವೆ ಅಲ್ಲವೇ?

ಇನ್ನೂ ಕೆಲವು ಸತ್ಯಗಳ ಅನಾವರಣ: ಬ್ರಿಟನ್‌ನ ಅತಿನೆಚ್ಚಿನ ಚಿಕನ್ ಟಿಕ್ಕಾ ಮಸಾಲಾ ಭಾರತದಿಂದ ಹೋದದ್ದಲ್ಲ, ಅಲ್ಲಿಯೇ
ಸ್ಕಾಟ್‌ಲ್ಯಾಂಡಿನ ಗ್ಲಾಸ್ಗೊದಲ್ಲಿ ಹುಟ್ಟಿದ್ದದು. ಅದೇ ರೀತಿ ಶಾಂಪೇನ್ ಸಹ ಮೂಲತಃ ಫ್ರೆಂಚರದಲ್ಲ ಇಂಗ್ಲಿಷರದಂತೆ. ಟ್ಯುಲಿಪ್ ಹೂವುಗಳ ಮೂಲ ನೆದರ್‌ಲ್ಯಾಂಡ್ಸ್ ಅಲ್ಲ ಇಸ್ತಾಂ ಬುಲ್. ಪನಾಮಾ ಹ್ಯಾಟ್‌ಗಳ ಮೂಲ ಪನಾಮಾ ಅಲ್ಲ ಈಕ್ವಡೊರ್. ಅತ್ಯುತ್ತಮ ವಿದ್ಯುದ್ವಾಹಕ ತಾಮ್ರ ಅಲ್ಲ ಬೆಳ್ಳಿ. ಈಗ ಭೂಕಂಪದ ಪ್ರಮಾಣಮಾಪಕ ರಿಕ್ಟರ್ ಸ್ಕೇಲ್ ಅಲ್ಲ, ಮೊಮೆಂಟ್ ಮಾಗ್ನಿಟ್ಯೂಡ್ ಸ್ಕೇಲ್. ಶತಪದಿ(ಸೆಂಟಿಪೇಡ್)ಗೆ ೧೦೦ ಕಾಲುಗಳಿರುವುದಲ್ಲ, ಸಾಮಾನ್ಯವಾಗಿ ಬೆಸಸಂಖ್ಯೆಯ(೧೫ರಿಂದ ೧೯೧)
ಜೊತೆ ಕಾಲುಗಳಿರುತ್ತವೆ.

ಸಹಸ್ರಾರು ವರ್ಷಗಳ ಹಿಂದೆ ಕ್ಯಾರೆಟ್ ಗಳು ನೇರಳೆ ಬಣ್ಣದವಾಗಿದ್ದುವು. ರೋಮ್ ಉರಿಯುತ್ತಿದ್ದಾಗ ನೀರೋ ಪಿಟೀಲು ಬಾರಿಸು ತ್ತಿರಲಿಲ್ಲ, ಏಕೆಂದರೆ ರೋಮ್ ಹೊತ್ತಿ ಉರಿದದ್ದು ಕ್ರಿ.ಶ ಒಂದನೆಯ ಶತಮಾನದಲ್ಲಿ, ಪಿಟೀಲಿನ ಆವಿಷ್ಕಾರವಾದದ್ದು ೧೫ನೆಯ ಶತಮಾನದಲ್ಲಿ! ಒಂಟೆಗಳ ಮೂಲ ಅರಬ್ ದೇಶಗಳಲ್ಲ ಅಮೆರಿಕ. ಒಂಟೆಗಳ ಡುಬ್ಬದಲ್ಲಿ ಸಂಗ್ರಹ ವಾಗುವುದು ನೀರು ಅಲ್ಲ ಕೊಬ್ಬು. ಅಮೆರಿಕದ ಹೆಸರು ಬಂದಿರು ವುದು ಅಮೆರಿಗೊ ವೆಸ್ಪುಸಿಯಿಂದ ಅಲ್ಲ, ರಿಚಾರ್ಡ್ ಅಮೆರಿಕ್ ಎಂಬ ವೆಲ್ಷ್ ಹೂಡಿಕೆ ದಾರನಿಂದ. ಬೇಸ್‌ಬಾಲ್ ಆರಂಭವಾದದ್ದು ಅಮೆರಿಕದಲ್ಲಲ್ಲ ಇಂಗ್ಲೆಂಡ್‌ನಲ್ಲಿ.

ಥೈಲ್ಯಾಂಡ್‌ನ ರಾಜಧಾನಿಯ ಹೆಸರು ಬ್ಯಾಂಕಾಕ್ ಅಲ್ಲ ಕ್ರಂಗ್‌ತೇಪ್ ಎಂದು. ಕೆನಡಾದ ಅತಿ ದೊಡ್ಡ ಸರೋವರ ಪಂಚಮ ಹಾಸರೋವರಗಳ ಪೈಕಿ ಒಂದೂ ಅಲ್ಲ(ಅವ್ಯಾವುವೂ ಪೂರ್ಣವಾಗಿ ಕೆನಡಾದಲ್ಲಿಲ್ಲ) ಗೇಟ್ ಬೇರ್ ಲೇಕ್. ಆಸ್ಟ್ರೇಲಿಯಾವನ್ನು ಕಂಡುಹಿಡಿದವನು ಕ್ಯಾಪ್ಟನ್ ಕುಕ್ ಅಲ್ಲ, ವಿಲಿಯಂ ಡ್ಯಾಂಪಿಯರ್ ಎಂಬಾತ. ಮೂಲ ಕಥೆಯಲ್ಲಿ ಸಿಂಡ್ರೆಲಾಳ ಚಪ್ಪಲಿಗಳು ಅಳಿಲಿನ ತುಪ್ಪಟದವು ಇದ್ದದ್ದು, ಫ್ರೆಂಚ್ ಅನುವಾದಕನೊಬ್ಬನ ತಪ್ಪಿನಿಂದಾಗಿ ಗಾಜಿನವಾದುವು. ಹೀಗೆ ಓದುತ್ತ ಹೋದಂತೆಲ್ಲ ಅಯ್ಯೋ ದೇವ್ರೇ ನಮ್ಮ ತಿಳಿವಳಿಕೆಯೆಲ್ಲ ತಪ್ಪುತಪ್ಪೇ ಇದೆಯಲ್ಲ ಎಂದೆನಿಸುತ್ತದೆ.

ಕರಿಹಲಗೆಯ ಮೇಲೆ ಬರೆಯಲು ಬಳಸುವ ಸೀಮೆಸುಣ್ಣವನ್ನು ನಾವು ‘ಚಾಕ್’ ಎನ್ನುವುದೂ ತಪ್ಪೇ! ಚಾಕ್ ಎನ್ನುವುದು ಕ್ಯಾಲ್ಸಿಯಂ ಕಾರ್ಬೊನೇಟ್ ಗೆ. ಕರಿಹಲಗೆಯ ಮೇಲೆ ಬರೆಯಲು ಬಳಸುವುದು ಕ್ಯಾಲ್ಸಿಯಂ ಸಲ್‌ಫೇಟ್. ಅದರ ಇನ್ನೊಂದು ಹೆಸರು ಜಿಪ್ಸಂ. ಯಾರೋ ಅದನ್ನು ತಪ್ಪಾಗಿ ಚಾಕ್ ಎಂದು ಗುರುತಿಸಿದರು, ಪ್ರಪಂಚವೆಲ್ಲ ಚಾಕ್ ಎಂದೇ ಕರೆಯಿತು! ಪೆನ್ಸಿಲ್‌ ನಲ್ಲಿ ಇಂಗಾಲದ ರೂಪವಾದ ಗ್ರಾಫೈಟ್ ಮಾತ್ರ ಇರುವುದು ಆದರೂ ಲೆಡ್ ಪೆನ್ಸಿಲ್ ಎಂದು ಹೆಸರು!

ನನಗೆ ಈ ಪುಸ್ತಕದಲ್ಲಿ ಇಷ್ಟವಾದ ಒಂದು ಸೂಕ್ಷ್ಮ ಅಂಶವೆಂದರೆ, ಸಾಮಾನ್ಯವಾಗಿ ಪಾಶ್ಚಾತ್ಯ ಲೇಖಕರು ತೋರುವ ಭಾರತ ದೇಶದ ಬಗೆಗಿನ ತಾತ್ಸಾರ ಮನೋಭಾವ ಇದರಲ್ಲಿಲ್ಲದಿರುವುದು. ಭಾರತಕ್ಕೆ ಕ್ರೆಡಿಟ್ ಕೊಡಬೇಕಾದಲ್ಲೆಲ್ಲ ಪ್ರಾಂಜಲ ಮನಸ್ಸಿಂದ ಕೊಟ್ಟಿದ್ದಾರೆ ಇದರ ಲೇಖಕರು. ‘ಪ್ಯಾಂಥರ್ ಎಂದು ಈಗ ಕಪ್ಪು ಬಣ್ಣದ ಚಿರತೆಗೆ ಹೇಳುತ್ತೇವಾದರೂ ಮೂಲತಃ ಪ್ಯಾಂಥರ್ ಪದ ಬಂದಿರುವುದು ಸಂಸ್ಕೃತದ ಪಾಂಡರ ಎಂಬ ಪದದಿಂದ ಬಿಳಿ/ನಸುಹಳದಿ ಬಣ್ಣ ಎಂಬ ಅರ್ಥದಿಂದ’ ಎಂದು ಒಂದುಕಡೆ ಓದುವಾಗ ಖುಷಿಯಾಗುತ್ತದೆ.

ಕೊಕೊನಟ್ ಮಿಲ್ಕ್‌ಗೆ ಸಂಬಂದಿಸಿದ ಒಂದು ಪ್ರಶ್ನೋತ್ತರದಲ್ಲಿ ಕೊನೆಗೆ ‘ಪ್ರಪಂಚದ ಅತ್ಯಂತ ಉಪಯುಕ್ತ ಮರವೆಂಬ ಖ್ಯಾತಿ ತೆಂಗಿನಮರಕ್ಕೆ ಸುಮಾರು ಮೂರುಸಾವಿರ ವರ್ಷಗಳಿಂದಲೂ ಇದೆ. ಸಂಸ್ಕೃತ ಭಾಷೆಯ ಪ್ರಾಚೀನ ಗ್ರಂಥಗಳಲ್ಲಿ ಅದನ್ನು ಕಲ್ಪವೃಕ್ಷ, ಅಂದರೆ ನಮ್ಮ ಅಗತ್ಯಗಳೆಲ್ಲವನ್ನೂ ಪೂರೈಸುವ ಮರ ಎಂದು ಗುರುತಿಸಲಾಗಿದೆ’ ಎಂದು ಓದಿದಾಗಂತೂ ಮತ್ತಷ್ಟು ಅಭಿಮಾನ. ಅಂದ ಹಾಗೆ ಪುಸ್ತಕದಲ್ಲಿಲ್ಲವಾದರೂ ಓದಿ ಮುಗಿಸಿದಾಗ ನನಗೆ ನೆನಪಾದದ್ದು ಪುರಂದರದಾಸರ ‘ಎಲ್ಲಾನೂ ಬಲ್ಲೆ ಎನ್ನುವಿರಲ್ಲ…’ ಪದ್ಯದ ಸಾಲು.

Leave a Reply

Your email address will not be published. Required fields are marked *

error: Content is protected !!