Saturday, 27th April 2024

ಸಂಸತ್ ಗ್ರಂಥಾಲಯವೂ, ಪಾಪು ಹೇಳಿದ ಸದನ ಸ್ವಾರಸ್ಯಗಳೂ !

ಇದೇ ಅಂತರಂಗ ಸುದ್ದಿ

ಇತ್ತೀಚೆಗೆ ದಿಲ್ಲಿಗೆ ಹೋದಾಗ, ಪಾರ್ಲಿಮೆಂಟ್ ಲೈಬ್ರರಿಗೆ ಹೋಗಿದ್ದೆ. ಸಮಯವಿದ್ದಾಗಲೆಲ್ಲ ನಾನು ಅಲ್ಲಿ ಹೋಗಿ ಒಂದೆರಡು ಗಂಟೆ ಕಳೆದು ಬರುತ್ತೇನೆ. ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯನಾಗದೇ ಅಲ್ಲಿ ಐದು ವರ್ಷ ಕಳೆಯಬೇಕೆಂಬುದು ನನ್ನ ಆಸೆ. ಅದು ಅಷ್ಟೊಂದು ಅದ್ಭುತವಾದ ತಾಣ. ಯಾವ ಮಾಹಿತಿ ಕೇಳಿದರೂ ಸಂಸತ್ ಲೈಬ್ರರಿಯಲ್ಲಿ ಕ್ಷಣ ಮಾತ್ರದಲ್ಲಿ ಸಿಗುತ್ತದೆ. ಅಲ್ಲಿ ವಿಷಯವಾರು ಪತ್ರಿಕಾ ವರದಿಗಳನ್ನು ಗ್ರಹಿಸಿ ಇಟ್ಟಿದ್ದಾರೆ. ಅಷ್ಟೆಲ್ಲ ನೂರಾರು ವರ್ಷಗಳ ಪತ್ರಿಕೆಗಳನ್ನು
ಸಹ ಕಾಪಿಟ್ಟಿzರೆ. ಇನ್ನು ಪುಸ್ತಕಗಳ ಬಗ್ಗೆ ಕೇಳುವ ಮಾತೇ ಇಲ್ಲ. ಯಾವ ಶೀರ್ಷಿಕೆ ಕೇಳಿದರೂ ಅಲ್ಲಿ ಲಭ್ಯ. ಸಮಸ್ಯೆ ಅಂದ್ರೆ ಉಭಯ ಸದನಗಳ ಸದಸ್ಯರು ಅದರ ಪ್ರಯೋಜನ ಪಡೆಯಲು, ತಮ್ಮ ಐದು ವರ್ಷಗಳ ಅವಽಯಲ್ಲಿ ಒಮ್ಮೆಯೂ ಅತ್ತ ಸುಳಿಯುವುದೇ ಇಲ್ಲ.

ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ನಡೆಯುವ ಸ್ವಾರಸ್ಯಕರ ಚರ್ಚೆಯ ಹಳೆಯ ತುಣುಕಗಳಿಗಾಗಿ ಶೋಧಿಸುತ್ತಿದ್ದೆ. ಅಚ್ಚರಿ ಅಂದ್ರೆ ಈ ಕುರಿತು ಡಾ.ಪಾಟೀಲ ಪುಟ್ಟಪ್ಪ (ಪಾಪು) ನವರು ಬರೆದ (ಕನ್ನಡ) ಲೇಖನಗಳು ಸಿಗಬೇಕೇ? ಆ ಲೇಖನಗಳನ್ನೆಲ್ಲ ಸೇರಿಸಿ ಪಾಪು ಅವರು ‘ಪಾಪು ಪ್ರಪಂಚ’ ಎಂಬ ಬೃಹತ್ ಗ್ರಂಥ ರಚಿಸಿದ್ದಾರೆ. ಅದನ್ನೂ ಅಲ್ಲಿ ನೋಡಲು ಸಿಕ್ಕಿದ್ದು ಖುಷಿಯ ಸಂಗತಿಯೇ. ಸದನ ಸ್ವಾರಸ್ಯಗಳ ಬಗ್ಗೆ ಪಾಪು ಕೆಲವು ಪ್ರಸಂಗಳಲ್ಲಿ ಬರೆದಿದ್ದನ್ನು ಇಲ್ಲಿ ಪ್ರಸ್ತಾಪಿಸ ಬೇಕು.

೧೯೬೭ರಲ್ಲಿ ಚೀನೀಯ ಸೇನೆಗಳು ಲಡಾಖ್‌ನಲ್ಲಿ ಭಾರತದ ಪ್ರದೇಶದೊಳಕ್ಕೆ ನುಗ್ಗಿ ಬಂದು ಅಕ್ಸಾಯಿ ಚಿನ್ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದವು. ಆಗ ಪತ್ರಿಕೆಗಳಲ್ಲಿ, ಪಾರ್ಲಿಮೆಂಟಿನಲ್ಲಿ ಭಾರೀ ಕೋಲಾಹಲವೇ ನಡೆದಿದ್ದಿತು. ಲೋಕಸಭೆಯಲ್ಲಿ ಆಗಿನ ಜನಸಂಘದ ಅಟಲ ಬಿಹಾರಿ ವಾಜಪೇಯಿಯವರು ಪ್ರಧಾನ
ಮಂತ್ರಿ ಜವಾಹರಲಾಲ ನೆಹರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ವಾಜಪೇಯಿಯವರ ವಾಗ್ಬಾಣಗಳಿಂದ ತತ್ತರಿಸಿದ್ದ ಜವಾಹರಲಾಲರು ಭಾರೀ ಪ್ರಯಾಸದಿಂದ ವಿವರಣೆ ನೀಡುತ್ತಿದ್ದರು. ಪ್ರಶೋತ್ತರ ಕಾಲದ ಅವಽಯಲ್ಲಿ ಅಕ್ಸಾಯಿ ಚಿನ್ ಆಕ್ರಮಣದ ಪ್ರಶ್ನೆ ವಿಸ್ತಾರಗೊಳ್ಳುತ್ತ ನಡೆದಿದ್ದಿತ್ತು.

ಪ್ರಧಾನಮಂತ್ರಿ ನೆಹರೂರು ಅವರು ತಮ್ಮ ವಿವರಣೆ ನೀಡುತ್ತಿದ್ದರು: ‘ಅಲ್ಲಿ ಒಂದು ಹುಲ್ಲುಕಡ್ಡಿ ಕೂಡ ಬೆಳೆಯುವುದಿಲ್ಲ. ಅದು ಬರಡು ಭೂಮಿ, ಅಲ್ಲಿ ಯಾರೂ ವಾಸವಾಗಿಲ್ಲ. ಅದು ನಿರ್ಜನ ಪ್ರದೇಶವಾಗಿದೆ.’ ನೆಹರು ನೀಡಿದ ಈ ವಿವರಣೆಯಿಂದ ಸಭೆ ಸಮಾಧಾನ ಗೊಂಡಂತೆ ಕಾಣಲಿಲ್ಲ. ಉದ್ರೇಕದ ಮಾತುಗಳು ಕೆರಳಿ ನಿಂತಿದ್ದವು. ಆ ಸಭೆಯಲ್ಲಿದ್ದ ಕಾಂಗ್ರೆಸ್ ಪಕ್ಷದ ಸದಸ್ಯ ಮಹಾವೀರ ತ್ಯಾಗಿ ಯವರಿಗೆ ಪ್ರಧಾನ ಮಂತ್ರಿಗಳನ್ನು ಪೀಕಲಾಟದಿಂದ ಪಾರು ಮಾಡಲೆಂದು ಸ್ವೀಕರರ ಗಮನ ಸೆಳೆಯಲು ಎದ್ದುನಿಂತು, ‘ಅಧ್ಯಕ್ಷ ಮಹೋದಯ, ನನ್ನದೊಂದು ಗಂಭೀರ ಆಪಾದನೆ ಇದೆ’ ಎಂದರು.

ಸಮಗ್ರ ಸಭೆ ಅವರ ಕಡೆಗೆ ನೋಡತೊಡಗಿತು. ‘ನಿಮ್ಮ ಆಪಾದನೆ ಏನು?’ ಎಂದು ಸ್ವೀಕರರು ತ್ಯಾಗಿಯವರನ್ನು ಕೇಳಿದರು. ಆಗ ಅವರು ತಮ್ಮ ಆಪಾದನೆಯ ಕಾರಣವನ್ನು ಹೇಳಿದರು: ‘ಪ್ರಧಾನ ಮಂತ್ರಿಗಳು, ಅಕ್ಸಾಯಿ ಚಿನ್ ಪ್ರದೇಶದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲವೆಂದು ಹೇಳುತ್ತಾರೆ. ನೀವು ನನ್ನ ಬೋಳು ತಲೆಯನ್ನು ನೋಡಿ. ಅಲ್ಲಿ ಒಂದು ಕೂದಲು ಕೂಡ ಇಲ್ಲ. ಅಲ್ಲಿ ಏನೊಂದೂ ಬೆಳೆಯುತ್ತಿಲ್ಲವೆಂದು ನೀವು ಅದನ್ನು ನನ್ನ ದೇಹದಿಂದ ಕಡಿದು ಹಾಕಬೇಕೆನ್ನು ತ್ತೀರೋ?’ ಅವರ ಈ ಮಾತನ್ನು ಕೇಳಿ ಸಭೆಗೆ ಸಭೆಯೇ ಬಿದ್ದು ಬಿದ್ದು ನಕ್ಕಿತು. ಆಗ ಸ್ಪೀಕರರು, ಮುಂದಿನ ಪ್ರಶ್ನೆಯನ್ನು ಚರ್ಚೆಗೆ ಕೈಗೆತ್ತಿಕೊಂಡರು. ನೆಹರೂ ಅವರು ಪೇಚಿನ ಪ್ರಸಂಗದಿಂದ ಪಾರಾದರು.

‘ಇಂದಿರಾ ಗಾಂಧಿ ಕಾಲದಲ್ಲಿ ಮೊರಾರ್ಜಿ ದೇಸಾಯಿಯವರು ಉಪಪ್ರಧಾನ ಮಂತ್ರಿಯೂ, ಹಣಕಾಸಿನ ಮಂತ್ರಿಯೂ ಆಗಿದ್ದರು. ಅವರು ವಿಶ್ವಬ್ಯಾಂಕಿನ ಸಭೆ ಗೆಂದು ವಾಷಿಂಗ್ಟನ್ನಿಗೆ ಹೋಗಿದ್ದರು. ತಿರುಗಿ ಬರುವಾಗ ಇಟಲಿ ಸರಕಾರದೊಂದಿಗೆ ಮಾತುಕತೆ ನಡೆಸಲು ರೋಮ್ ನಗರಕ್ಕೆ ಭೇಟಿ ನೀಡಿದ್ದರು. ‘ರೋಮ್
ನಗರದಲ್ಲಿzಗ ರೋಮನ್‌ರಂತೆ ಇರು’ ಎನ್ನುವ ಗಾದೆಯ ಮಾತೊಂದು ಇದೆ. ಅದೇ ಮಾತನ್ನೆತ್ತಿಕೊಂಡು ರಾಜ್ಯಸಭೆಯಲ್ಲಿ ಕಮ್ಯೂನಿಸ್ಟ್ ಪಕ್ಷದ ಸದಸ್ಯ ಭೂಪೇಶ ಗುಪ್ತಾ ಅವರು, ಮೊರಾರ್ಜಿಯವರನ್ನು ಕೆಣಕಬೇಕೆಂದು, ‘ರೋಮ್ ನಗರದಲ್ಲಿದ್ದಾಗ, ಮೊರಾರ್ಜಿ ದೇಸಾಯಿಯವರು ರೋಮನ್ನಂತೆ ವರ್ತಿಸಿ
ದರೋ?’ ಎಂದು ಕೇಳಿದರು.

ಈ ಪ್ರಶ್ನೆಯಿಂದ ಮೊರಾರ್ಜಿ ದೇಸಾಯಿಯವರು, ಅಪ್ರತಿಭರಾಗದೇ, ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳದೇ ಉತ್ತರಿಸಿದರು: ‘ನಾನು ರೋಮ್ ನಗರ ದಲ್ಲಿದ್ದಾಗ ರೋಮನ್ನಂತೆ ವರ್ತಿಸಿ ದೆನೆನ್ನುವುದು ಇಲ್ಲಿ ಅಪ್ರಸ್ತುತ. ಆದರೆ ನನ್ನ ಕಮ್ಯುನಿಸ್ಟ್ ಸ್ನೇಹಿತರು, ಭಾರತದಲ್ಲಿ ಭಾರತೀಯನಂತೆ  ವರ್ತಿಸು ತ್ತಿರುವರೇ ಎಂಬುದೀಗ ಪ್ರಶ್ನೆ.’ ಸಭೆಯು ನಗೆಗಡಲಿನಲ್ಲಿ ತೇಲಿತು. ಅಂದು ಮೊರಾರ್ಜಿ ದೇಸಾಯಿಯವರು ಸವಾಲಿಗೆ ಸವಾಲು ಎಸೆದು ಆಡಿದ ರೀತಿಯು ಬ್ರಿಟಿಷ್ ಪ್ರಧಾನಮಂತ್ರಿ ಲಾಯ್ಡ್ ಜಾರ್ಜರ ಒಂದು ಚುನಾವಣಾ ಭಾಷಣವನ್ನು ನೆನಪಿಗೆ ತರುತ್ತದೆ ಎಂದು ಡಾ.ಪಾಟೀಲ ಪುಟ್ಟಪ್ಪ ಹೇಳಿದ್ದಾರೆ. ತಾವು ಬೇರೆ ಬೇರೆ ಮತಕ್ಷೇತ್ರಗಳಿಗೆ ಭೇಟಿ ಕೊಟ್ಟು ಬಂದ ಪ್ರಸಂಗಗಳನ್ನು ಲಾಯ್ಡ್ ಚಾರ್ಜ್ ಸಭೆಗೆ ವಿವರಿಸಿ ಹೇಳುತ್ತಿದ್ದರು. ಆಗ ಒಬ್ಬ ಅವರನ್ನು ಧೃತಿಗೆಡಿಸಬೇಕೆಂದು, ‘ನೀವು ನರಕಕ್ಕೆ ಭೇಟಿ ಕೊಟ್ಟು ಬಂದಿ ದ್ದೀರಾ?’ ಎಂದು ಕೇಳಿದನು. ಆಗ ಲಾಯ್ಡ್ ಚಾರ್ಜರು, ಪ್ರಶ್ನೆ ಕೇಳಿದವನ ಕಡೆಗೆ ತಿರುಗಿ ಶಾಂತಚಿತ್ತದಿಂದ ನುಡಿದರು: ‘ನಾನು ನಿಮ್ಮ ಮತಕ್ಷೇತ್ರಕ್ಕೆ ಇನ್ನೂ ಭೇಟಿ ಕೊಟ್ಟಿಲ್ಲ’. ಅವರ ಮಾತು ಕೇಳಿ ಸಭೆ ಗೊಳ್ಳನೆ ನಕ್ಕಿತು. ಪ್ರಶ್ನೆ ಹಾಕಿದವನು ಪೆಚ್ಚಾಗಿದ್ದ.

ಕೆಲವೊಂದು ಸಲ ಮಂತ್ರಿಯಾದವನು ಸಭೆಗೆ ನೀಡುವ ಉತ್ತರವು ಅವನನ್ನು ಫಜೀತಿಗೂ, ಸಭೆಯನ್ನು ತಮಾಷೆಗೂ ಒಳ ಪಡಿಸುತ್ತದೆ. ಹಿಂದೆ ನೆಹರು ಕಾಲದಲ್ಲಿ ಕರ್ನಾಟಕದ ಬಲವಂತ ರಾವ್ ದಾತಾರ ಗೃಹಶಾಖೆಯ ಸಹಾಯಕ ಮಂತ್ರಿ ಆಗಿದ್ದರು. ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿದ್ದ ಮಣಿಪುರದ ಬಗೆಗೆ ರಾಜ್ಯಸಭೆ
ಯಲ್ಲಿ ಪ್ರಶೋತ್ತರಗಳು ನಡೆದಿದ್ದವು. ‘ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಇದೆ. ನೀವು ಸಾರ್ವಜನಿಕ ಅಭಿಪ್ರಾಯ ತಿಳಿಯಲು ಅಲ್ಲಿ ಯಾರೊಂದಿಗೆ ಸಮಾ ಲೋಚನೆ ನಡೆಸುತ್ತಿದ್ದೀರಿ?’ ಎಂದು ಭೂಪೇಶ ಗುಪ್ತಾ ಕೇಳಿದರು.

‘ಅಲ್ಲಿ ನಾವು ಪ್ರಾತಿನಿಧಿಕ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುತ್ತೇವೆ’ ಎಂದು ದಾತಾರ ಹೇಳಿದರು. ಆ ಪ್ರಶ್ನೆಗೆ ಒಂದು ಉಪಪ್ರಶ್ನೆ ಹಾಕುತ್ತ, ‘ಗೋವಾದ
ಬಗೆಗೆ ಏನು ಮಾಡುತ್ತಿದ್ದೀರಿ?’ ಎಂದು ಗುಪ್ತಾ ಕೇಳಿದರು. ‘ಅಲ್ಲಿಯೂ ನಾವು ಪ್ರಾತಿನಿಽಕ ಸಂಸ್ಥೆಗಳೊಂದಿಗೆ ಸಮಾಲೋಚಿಸುತ್ತಿದ್ದೇವೆ’ ಎಂದು ದಾತಾರರು ಹೇಳಿದಾಗ, ತಮ್ಮ ಆಸನದಿಂದ ಸಿಡಿದೆದ್ದ ಭೂಪೇಶ ಗುಪ್ತಾ ತಮ್ಮ ನುಡಿಯಲ್ಲಿ ಕೆಂಡ ಕಾರುತ್ತ, ‘ನೀವೇನು ಹೇಳುತ್ತಿದ್ದೀರಿ? ಅಲ್ಲಿ ಮುನ್ನೂರು ವರ್ಷಗಳಿಂದ
ಚುನಾವಣೆಗಳೇ ನಡೆದಿಲ್ಲ. ಪೋರ್ಚುಗೀಸರು ಅಲ್ಲಿ ಪ್ರಾತಿನಿಧಿಕ ಸಂಸ್ಥೆಯೊಂದನ್ನೂ ಉಳಿಸಿಲ್ಲ. ನೀವು ಯಾರೊಂದಿಗೆ ಸಮಾಲೋಚನೆ ಮಾಡುತ್ತಿದ್ದೀರಿ?’ ಎಂದು ಕೇಳಿದರು.

ಭೂಪೇಶ ಗುಪ್ತಾ ಹಾಕಿದ ಗುಡುಗಿಗೆ, ಮಂತ್ರಿ ದಾತಾರರಲ್ಲಿ ಹೇಳುವುದು ಏನಿದೆಯೋ ಎಂದು ಸಭೆಯು ಬಹು ನಿರೀಕ್ಷೆಯಿಂದ ಕಾತರಿಸಿ ಕುಳಿತಿದ್ದಿತು. ಅವರು ಹೇಳುವುದನ್ನು ಕೇಳಲು ಸಭೆಯು ತನ್ನ ಮೈಯನ್ನೆಲ್ಲ ಕಿವಿಯಾಗಿ ಮಾಡಿಕೊಂಡಿದ್ದಿತು.

ದಾತಾರರು ಬಾಯಿ ತೆರೆದರು: ‘ನನ್ನನ್ನು ಕ್ಷಮಿಸಿರಿ. ನಾನು ತಪ್ಪಿನಿಂದ ಬೇರೆ ಪ್ರಶ್ನೆಯ ಉತ್ತರವನ್ನು ಓದಿದ್ದೇನೆ’. ಜಲಾಶಯದ ಒಡ್ಡು ಒಮ್ಮೆಲೇ ಒಡೆದಂತೆ ಸಭೆಯಲ್ಲಿ ನಗೆಯ ಹೊನಲು ನುಗ್ಗಿ ಬಂದಿತು. ಸಭೆಯಲ್ಲಿ ಜವಾಹರಲಾಲ ನೆಹರು ಕೂಡ ಇದ್ದರು. ಅವರು ಆ ದಿನ ನಕ್ಕಷ್ಟನ್ನು ಅವರು ಹಿಂದೆಂದೂ ನಕ್ಕಿರಲಿಲ್ಲ. ದಾತಾರರು ತಮ್ಮ ಅನುಚಿತ, ಅನುದ್ದೇಶಪೂರಿತ ಉತ್ತರದಿಂದ ಸಭೆಯನ್ನು ನಗೆಗಡಲಲ್ಲಿ ತೇಲಿಸಿದ್ದರು.

ಎಂಎಸ್ ಕುರಿತು ನೆಹರು ಹೇಳಿದ್ದು

ಸ್ವತಃ ಸಂಗೀತಜ್ಞರೂ, ಕನ್ನಡದಲ್ಲಿ ಸಂಗೀತವನ್ನು ಕುರಿತು ಉತ್ತಮ ಕೃತಿಗಳನ್ನು ರಚಿಸಿರುವ ಎಸ್.ಕೃಷ್ಣಮೂರ್ತಿ ಅವರ ‘ಸುನಾದ ವಿನೋದಿನಿ ಎಂ.ಎಸ್.ಸುಬ್ಬುಲಕ್ಷ್ಮಿ’ ಪುಸ್ತಕ (ಪ್ರಿಸಮ್ ಬುಕ್ಸ್ ಪ್ರಕಾಶನ)ವನ್ನು ಓದುತ್ತಿದ್ದೆ.

ಸುಬ್ಬುಲಕ್ಷ್ಮಿ ಕುರಿತು ಹಲವಾರು ಕೃತಿಗಳನ್ನು ಓದಿದ್ದರೂ, ಕೃಷ್ಣಮೂರ್ತಿಯವರ ಈ ಕೃತಿ ಆಪ್ತವಾಗಿದೆಯೆನಿಸಿತು. ಅದಕ್ಕೆ ಕಾರಣ ಅವರು ನಿವೇದಿಸಿರುವ
ರೀತಿ. ಈ ದೇಶ ಕಂಡ ಕೆಲವೇ ಕೆಲವು ಸ್ವರ ಸಾಮ್ರಾಜ್ಞಿಗಳ ಪೈಕಿ ಒಬ್ಬರಾಗಿರುವ ಸುಬ್ಬುಲಕ್ಷ್ಮಿ ಅವರ ಸ್ವಭಾವ, ವ್ಯಕ್ತಿತ್ವ ಮತ್ತು ಬದುಕನ್ನು ಪ್ರಸಂಗಗಳ ಮೂಲಕ ವಿವರಿಸಿರುವುದು ಈ ಕೃತಿಯ ವೈಶಿಷ್ಟ್ಯ. ‘ಎಂಎಸ್’ ಎಂದೇ ಪರಿಚಿತರಾದ ಸುಬ್ಬುಲಕ್ಷ್ಮಿಯವರ ಸಂಗೀತ ಕಛೇರಿ ಇದೆ ಅಂದರೆ ದಿಲ್ಲಿಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಸ್ವಯಂಸೇವಾ ಸಂಸ್ಥೆಗಳು ಎಂಎಸ್ ಅವರನ್ನು ಕರೆಯಿಸಿ ಸಹಾಯಾರ್ಥ ಕಛೇರಿಗಳನ್ನು ಏರ್ಪಡಿಸುತ್ತಿದ್ದವು.

ಇಂಥ ಕಛೇರಿಗಳಿಗೆ ಆ ದಿನಗಳಲ್ಲಿ ಪ್ರಧಾನಿ ನೆಹರು ಸಹ ಆಗಮಿಸುತ್ತಿದ್ದರು. ಪ್ರಧಾನಿಯವರು ಪಾಲ್ಗೊಳ್ಳುತ್ತಾರೆಂದ ಮೇಲೆ, ದಿಲ್ಲಿಯ ಗಣ್ಯ ಮತ್ತು ಅತಿ ಗಣ್ಯರೆಲ್ಲ ಭಾಗವಹಿಸುತ್ತಿದ್ದರು. ಒಮ್ಮೆ ಎಂಎಸ್ ಸಂಗೀತ ಕಛೇರಿ ಮುಗಿದ ಬಳಿಕ, ಪ್ರಧಾನಿ ನೆಹರು ಹೇಳಿದ ಮಾತು ಸ್ಮರಣೀಯ. ‘ಸಾರ್ವಜನಿಕ ಸಭೆಗಳಲ್ಲಿ ಮಾತಾಡು ವುದು ನನಗೆ ಹೊಸತೇನಲ್ಲ. ಅದು ನನಗೆ ಇಷ್ಟ ಕೂಡ. ನಾನು ದೇಶದೆಡೆ, ವಿದೇಶಗಳಲ್ಲಿ ಲೆಕ್ಕ ವಿಲ್ಲದಷ್ಟು ಸಭೆ- ಸಮಾರಂಭಗಳಲ್ಲಿ ಮಾತಾಡಿದ್ದೇನೆ. ಆದರೆ ಇಂದು ನನಗೆ ಮಾತಾಡಲು ಕಷ್ಟವಾಗುತ್ತಿದೆ. ಅದರಲ್ಲೂ ಎಂಎಸ್ ಅವರ ದೇವಗಾನವನ್ನು ಕೇಳಿದ ಮೇಲೆ ಮಾತಾಡಲು ಹಿಂಜರಿಕೆಯಾಗುತ್ತಿದೆ. ಅವರು ದಿಲ್ಲಿಗೆ ಬರುವು ದನ್ನೇ ಜನ ಚಾತಕಪಕ್ಷಿ ಯಂತೆ ಎದುರು ನೋಡುತ್ತಿರುತ್ತಾರೆ.

ಎಂಎಸ್ ಅವರಿಗೆ ಸಂಗೀತಾಸಕ್ತರ ಮನಸ್ಸನ್ನು ಸೂರೆ ಮಾಡುವ ಕಲೆ ಸಿದ್ಧಿಸಿದೆ. ತಮ್ಮ ಕಂಠಸಿರಿಯಿಂದ ಸಮ್ಮೋಹನಾಸ ಬೀರಿ ರಸಿಕಲೋಕವನ್ನು ಅವರು
ಸೆಳೆದುಕೊಂಡು ಬಿಡುತ್ತಾರೆ. ಸಂಗೀತ ಸಾಮ್ರಾಜ್ಞಿಯ ಮುಂದೆ ಈ ಬಡ ಪ್ರಧಾನಿ ಎಷ್ಟರವನು?’ ಎಂದು ನೆಹರು ಹೇಳಿದಾಗ ಇಡೀ ಸಭೆ ಕಿವಿಗಡಚಿಕ್ಕುವ ಚಪ್ಪಾಳೆ ಗಳ ಸುರಿಮಳೆಗೈದಿತ್ತು. ಅಂದು ಪ್ರಧಾನಿಯವರು ಯಾವ ಚೌಕಾಶಿ ಮಾಡದೇ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಪ್ರಕಟಿಸಿದ್ದರು. ಅದಾಗಿ ಕೆಲ ವರ್ಷಗಳ ಬಳಿಕ, ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸಹಾಯಾರ್ಥವಾಗಿ ಏರ್ಪಡಿಸಿದ ಕಛೇರಿಯಲ್ಲೂ ಪಾಲ್ಗೊಂಡಿದ್ದ ನೆಹರು, ಇದೇ ಮಾತುಗಳನ್ನಾಡಿ ಎಂಎಸ್
ಗುಣಗಾನ ಮಾಡಿದ್ದರು.

ಕಮಲಾ ನೆಹರು ಸ್ಮಾರಕ ಆಸ್ಪತ್ರೆಯ ಸಹಾಯಾರ್ಥವಾಗಿ ಏರ್ಪಡಿಸಿದ್ದ ಕಛೇರಿಗಾಗಿ ಎಂಎಸ್ ತಮ್ಮ ಪತಿ ಸದಾಶಿವಂ ಅವರೊಂದಿಗೆ ದಿಲ್ಲಿಗೆ ಹೋಗಿದ್ದಾಗ ಪ್ರಧಾನಮಂತ್ರಿಗಳ ಗೌರವಾನ್ವಿತ ಅತಿಥಿಗಳಾಗಿ, ಅವರ ಅಧಿಕೃತ ನಿವಾಸ ತೀನ್ ಮೂರ್ತಿ ಭವನದಲ್ಲಿ ತಂಗಿದ್ದರು. ಪ್ರಧಾನಿಯವರ ಅತಿಥಿಯಾಗಿ ಅವರ ನಿವಾಸದಲ್ಲಿ ಅತಿಥಿಯಾಗಿ ಉಳಿದುಕೊಳ್ಳುವ ಅವಕಾಶ, ಅದೆಷ್ಟೇ ಗಣ್ಯರಿಗೂ ಸಿಗುವುದಿಲ್ಲ. ಅದು ನೆಹರು ಎಂಎಸ್ ಬಗ್ಗೆ ಇಟ್ಟುಕೊಂಡಿದ್ದ ಅಭಿಮಾನ ಮತ್ತು ವಿಶ್ವಾಸ. ಅಲ್ಲಿ ನಾವು ಕಳೆದ ಹತ್ತು ದಿವಸಗಳು ಚಿರಸ್ಮರಣೀಯ. ಪ್ರಧಾನಿಯವರೂ, ಅವರ ಪುತ್ರಿ ಇಂದಿರಾ ಗಾಂಧಿಯವರೂ ತೋರಿದ ಪ್ರೀತಿವಾತ್ಸಲ್ಯಗಳು
ಆಜೀವ ಪರ್ಯಂತ ಕೃತಜ್ಞತೆಯಿಂದ ನೆನೆಯುವಂಥವು ಎಂದು ಸದಾಶಿವಂ ಪದೇ ಪದೆ ಹೇಳುತ್ತಿದ್ದರು.

ಎಂಎಸ್ ಅವರಲ್ಲಿ ತಮಗಿದ್ದ ಪ್ರೀತಿ-ಗೌರವಗಳನ್ನು ಸೂಚಿಸಲು ಇಂದಿರಾ ಗಾಂಧಿ, ಕಾಂಜೀವರಂ ಸೀರೆಯನ್ನುಟ್ಟು ಮಲ್ಲಿಗೆಯ ದಂಡೆಯನ್ನು ಮುಡಿದು ಬರುತ್ತಿದ್ದರಂತೆ! ನೆಹರು – ಇಂದಿರಾ ನಂತರವೂ, ಆ ಕುಟುಂಬದೊಂದಿಗಿನ ಸಂಬಂಧ ಮುಂದುವರಿಯಿತು. ಸದಾಶಿವಂ ನಿಧನರಾದ ಸುದ್ದಿಯನ್ನು ಕೇಳಿ
ಸೋನಿಯಾ ಗಾಂಧಿ, ದಿಲ್ಲಿಯಿಂದ ಚೆನ್ನೈಗೆ ಹೋಗಿ, ಎಂಎಸ್ ಅವರಿಗೆ ಸಾಂತ್ವನ ಹೇಳಿ ಬಂದಿದ್ದರು. ಹೀಗಿದ್ದರೂ ಸದಾಶಿವಂ ಅವರಾಗಲಿ, ಎಂಎಸ್ ಅವರಾಗಲಿ, ಈ ನಿಕಟ ಸಂಬಂಧವನ್ನು ಎಂದೂ ದುರುಪಯೋಗಪಡಿಸಿ ಕೊಳ್ಳಲಿಲ್ಲ ಎಂದು ಕೃಷ್ಣಮೂರ್ತಿಯವರು ಬರೆದಿದ್ದಾರೆ.

ಬದುಕು ಬದಲಿಸಿದ ಶಿಕ್ಷಕ

ತಮ್ಮ ಶಿಕ್ಷಕರ ಕುರಿತು ದಿವಂಗತ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರಷ್ಟು ಅಭಿಮಾನದಿಂದ ಮಾತಾಡಿದ ಮತ್ತೊಬ್ಬರನ್ನು ನಾನು ನೋಡಿಲ್ಲ. ಅವರು ತಮ್ಮ ಗುರುಗಳ ಬಗ್ಗೆ ಮಾತಾಡುವಾಗ ಮೈ ಮರೆಯುತ್ತಿದ್ದರು. ಅವರ ಮುಖದಲ್ಲಿ ವಿಶೇಷ ಭಾವಗಳು ದಟ್ಟೈಸುತ್ತಿದ್ದವು. ಅವರಿಗೆ ಸಮಯದ ಪರಿವೆಯೇ ಇರುತ್ತಿರಲಿಲ್ಲ. ತಮ್ಮ ಶಿಕ್ಷಕರನ್ನು ಸಿನಿಮಾ ಹೀರೊ ಥರ ಅವರು ಬಣ್ಣಿಸುತ್ತಿದ್ದರು. ರಾಷ್ಟ್ರಪತಿಯಾದ ಬಳಿಕವೂ ಅವರು ಅನೇಕ ಸಾರ್ವಜನಿಕ ವೇದಿಕೆಗಳಲ್ಲಿ, ಅದರಲ್ಲೂ ವಿಶೇಷವಾಗಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತಾಡುವಾಗ, ತಮ್ಮ ಶಿಕ್ಷಕರನ್ನು ನೆನಪು ಮಾಡಿಕೊಳ್ಳದೇ ಇರುತ್ತಿರಲಿಲ್ಲ.

೨೦೧೫ ರ ಜೂನ್‌ನಲ್ಲಿ ಡಾ.ಕಲಾಂ ಬೆಂಗಳೂರಿನ ಬಾಲ್ಡ ವಿನ್ ವಿದ್ಯಾಸಂಸ್ಥೆಗೆ ಆಗಮಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತಾಡಿದರು. ಆ ಸಂದರ್ಭದಲ್ಲಿ ಅವರು, ತಮ್ಮ ಗುರುಗಳಾದ ಶಿವಸುಬ್ರಮಣಿಯ ಅಯ್ಯರ್ ಕುರಿತು ಮಾತಾಡಿದ್ದರು. ಆಗ ಡಾ.ಕಲಾಂ ಐದನೇ ಕ್ಲಾಸಿನಲ್ಲಿ ಓದುತ್ತಿದ್ದರು. ಅಯ್ಯರ್ ಕ್ಲಾಸಿಗೆ ಬಂದರೆ ಸಾಕು, ವಿದ್ಯಾರ್ಥಿಗಳೆಲ್ಲ ಗಪ್ ಚುಪ್. ಅವರ ಮುಖ ಜ್ಞಾನಾಕಾಂತಿಯಿಂದ ಹೊಳೆಯುತ್ತಿತ್ತು. ಅವರು ಕಟ್ಟು ನಿಟ್ಟು. ಆದರೂ ಅವರ ಕ್ಲಾಸನ್ನು ಯಾರೂ ತಪ್ಪಿಸುತ್ತಿರಲಿಲ್ಲ.
ಕಾರಣ, ಅವರು ಸ್ವಾರಸ್ಯವಾಗಿ ಪಾಠ ಮಾಡುತ್ತಿದ್ದರು. ಕತೆ ಹೇಳುವ ಮೂಲಕ ಪಾಠ ಮಾಡುತ್ತಿದ್ದರು. ಒಂದು ದಿನ ಅವರು ‘ಹಕ್ಕಿಗಳು ಹೇಗೆ ಹಾರುತ್ತವೆ?’ ಎಂಬ ವಿಷಯದ ಬಗ್ಗೆ ಪಾಠ ಮಾಡುತ್ತಿದ್ದರು. ಬೋರ್ಡಿನ ಮೇಲೆ ಹಕ್ಕಿಯ ಚಿತ್ರಗಳನ್ನು ಬಿಡಿಸಲಾರಂಭಿಸಿದರು.

ಹಕ್ಕಿಗಳು ಹೇಗೆ ತಮ್ಮ ರೆಕ್ಕೆಗಳನ್ನು ಬಡಿಯುತ್ತವೆ, ಹಾರುವಾಗ ದಿಕ್ಕನ್ನು ಹೇಗೆ ಬದಲಿಸುತ್ತವೆ, ಎತ್ತರವನ್ನು ಹೇಗೆ ಹೆಚ್ಚಿಸಿಕೊಳ್ಳುತ್ತವೆ.. ಎಂಬುದನ್ನು ಸುಮಾರು
ಅರ್ಧ ಗಂಟೆ ಕಾಲ ವಿವರಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ, ‘ಈಗ ನಾನು ಹಕ್ಕಿಗಳು ಹೇಗೆ ಹಾರುತ್ತವೆ ಎಂದು ಪಾಠ ಮಾಡಿದ್ದು ನಿಮ್ಮಲಿ ಎಷ್ಟು ಮಂದಿಗೆ
ಅರ್ಥವಾಯಿತು?’ ಎಂದು ಕೇಳಿದರು. ಅದಕ್ಕೆ ಕಲಾಂ, ‘ಸರ್, ನನಗೆ ಏನೂ ಅರ್ಥವಾಗಿಲ್ಲ’ ಎಂದು ಹೇಳಿದರು. ಉಳಿದ ವಿದ್ಯಾರ್ಥಿಗಳನ್ನು ಕೇಳಿದರು. ಅವರಲ್ಲಿ ಅನೇಕರು ತಮಗೂ ಅರ್ಥವಾಗಿಲ್ಲ ಎಂದು ಹೇಳಿದರು. ಅಯ್ಯರ್ ಅವರಿಗೆ ಸ್ವಲ್ಪವೂ ಬೇಸರವಾಗಲಿಲ್ಲ.

ಅದೇ ದಿನ ಸಾಯಂಕಾಲ ಅಯ್ಯರ್ ಅವರು ವಿದ್ಯಾರ್ಥಿಗಳನ್ನು ರಾಮೇಶ್ವರಂ ಕಡಲ ಕಿನಾರೆಗೆ ಕರೆದುಕೊಂಡು ಹೋದರು. ಅಲ್ಲಿ ಸಾವಿರಾರು ಹಕ್ಕಿಗಳು ಕಡಲ ತೀರದಲ್ಲಿ ಕುಳಿತುಕೊಂಡಿದ್ದವು. ಹಕ್ಕಿಗಳನ್ನು ತದೇಕಚಿತ್ತದಿಂದ ನೋಡುವಂತೆ ಹೇಳಿದರು. ಅವುಗಳ ದೇಹದ ಚಲನೆಯನ್ನು ಗಮನಿಸುವಂತೆ ಹೇಳಿದರು. ಹಾರುವಾಗ ರೆಕ್ಕೆ ಬಡಿಯುವ ರೀತಿ, ಕತ್ತನ್ನು ನೀಳವಾಗಿಸುವ ರೀತಿ, ಪುಕ್ಕದ ಗತಿ ಬದಲಿಸುವ ಬಗೆಯನ್ನು ದಿಟ್ಟಿಸಿ ನೋಡುವಂತೆ ತಿಳಿಸಿದರು. ಹಕ್ಕಿಗಳು ಹಾರುವಾಗ ಮತ್ತು ದಿಕ್ಕು ಬದಲಿಸುವಾಗ ಈ ಮೂರು ಭಾಗಗಳ ನಡುವೆ ಸಂಯೋಜನೆ ಏರ್ಪಡುವುದನ್ನು ವಿದ್ಯಾರ್ಥಿ ಗಳು ಗಮನಿಸಿದರು. ಸುಮಾರು ಅರ್ಧ ಗಂಟೆ ಅವಧಿಯಲ್ಲಿ ಹಕ್ಕಿಗಳ ಬೇರೆ ಬೇರೆ ಭಂಗಿಗಳ ಅರ್ಥವನ್ನು ಅವರು ವಿವರಿಸಿದರು.

ವಿದ್ಯಾರ್ಥಿಗಳಿಗೆ ಸರಿಯಾಗಿ ಮನದಟ್ಟಾಗಿತ್ತು. ಅಯ್ಯರ್ ಅವರು ಥಿಯರಿ ಮತ್ತು ಪ್ರಾಕ್ಟಿಕಲ್ ಎರಡನ್ನೂ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಟ್ಟಿದ್ದರು.
ಡಾ.ಕಲಾಂ ಪಾಲಿಗೆ ಇದು ಕೇವಲ ಹಕ್ಕಿ ಹೇಗೆ ಹಾರುತ್ತದೆ ಎಂಬ ಪಾಠವಷ್ಟೇ ಆಗಿರಲಿಲ್ಲ. ಆ ದಿನ ರಾತ್ರಿಯಿಂದ ಕಲಾಂ ತಲೆಯಲ್ಲಿ ವಿಮಾನಗಳು ಹೇಗೆ ಹಾರುತ್ತವೆ ಎಂಬ ಪ್ರಶ್ನೆ ಕಾಡಲಾರಂಭಿಸಿತು. ಅಯ್ಯರ್ ಅವರ ಪಾಠ ಮತ್ತು ಆ ದಿನ ಕಡಲ ಕಿನಾರೆಯಲ್ಲಿ ತೋರಿಸಿದ ಪ್ರತ್ಯಕ್ಷ ದರ್ಶನ ಡಾ.ಕಲಾಂ ಅವರ
ಯೋಚನೆ ಮತ್ತು ಬದುಕಿನ ಗತಿಯನ್ನೇ ಬದಲಿಸಿದವು. ಮುಂದೆ ಕಾಲೇಜಿಗೆ ಹೋದಾಗ ಡಾ.ಕಲಾಂ ಭೌತಶಾಸ್ತ್ರವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡರು. ನಂತರ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನಲ್ಲಿ ಓದುವಾಗ ‘ಏರೋನಾಟಿಕಲ್ ಎಂಜಿನಿಯರಿಂಗ್’ ವಿಷಯವನ್ನು ಆಯ್ಕೆ ಮಾಡಿಕೊಂಡರು. ಮುಂದೆ ಅವರು ರಾಕೆಟ್ ಎಂಜಿನಿಯರ್ ಮತ್ತು ಏರೋಸ್ಪೇಸ್ ಎಂಜಿನಿಯರ್ ಆದರು.

‘ಒಬ್ಬ ಉತ್ತಮ ಶಿಕ್ಷಕ ತನ್ನ ವಿದ್ಯಾರ್ಥಿಗಳ ಯೋಚನೆ ಮತ್ತು ಬದುಕಿನ ಮೇಲೆ ಅದೆಂಥ ಪರಿಣಾಮ ಬೀರಬಲ್ಲ ಎಂಬುದಕ್ಕೆ ಈ ನಿದರ್ಶನವೇ ಸಾಕ್ಷಿ. ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ’ ಎಂದು ಹೇಳಿ ಅಂದು ಡಾ.ಕಲಾಂ ಮಾತು ಮುಗಿಸಿದ್ದರು.

ದಾಖಲೆ ಬರೆದ ಹಾಸ್ಯನಟ
ತೆಲುಗು ಹಾಸ್ಯನಟ ಕನ್ನೆಗಂಟಿ ಬ್ರಹ್ಮಾನಂದಂ ನನಗೆ ಇಷ್ಟದ ನಟ. ಸಾಮಾನ್ಯವಾಗಿ ಅವರ ಸಿನಿಮಾಗಳನ್ನು ಆಸಕ್ತಿಯಿಂದ ನೋಡುತ್ತೇನೆ. ಕೆಲವೊಮ್ಮೆ ಬ್ರಹ್ಮಾನಂದಂ ಇದ್ದಾರೆಂಬ ಕಾರಣಕ್ಕೆ ನಾನು ಅವರು ನಟಿಸಿದ ತೆಲುಗು ಸಿನಿಮಾಗಳನ್ನು ನೋಡಿದ್ದಿದೆ. ಇತ್ತೀಚೆಗೆ ಭೇಟಿಯಾದ ತೆಲುಗು ನಿರ್ಮಾಪಕರೊಬ್ಬರು,
‘ತೆಲುಗು ಹೀರೋಗಳ ಕಾಲ್ ಶೀಟನ್ನಾದರೂ ಪಡೆಯಬಹುದು, ಆದರೆ ಬ್ರಹ್ಮಾನಂದಂ ಅವರ ಕಾಲ್ ಶೀಟ್ ಸಿಗೋದು ಕಷ್ಟ. ಕಾರಣ, ಹೀರೋಗಳು ವರ್ಷದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದರೆ, ಬ್ರಹ್ಮಾನಂದಂ ಕನಿಷ್ಠ ಇಪ್ಪತ್ತು ಚಿತ್ರಗಳಲ್ಲಿ ನಟಿಸು ತ್ತಾರೆ.

ಏಕಕಾಲದಲ್ಲಿ ಹತ್ತು ಸಿನಿಮಾಗಳನ್ನು ಒಪ್ಪಿಕೊಳ್ಳುವುದ ರಿಂದ, ಅವರ ಕಾಲ್ ಶೀಟ್ ಸುಲಭವಾಗಿ ಸಿಗುವುದಿಲ್ಲ. ಇಂದು ತೆಲುಗು ಚಿತ್ರರಂಗದಲ್ಲಿ ಅವರಿಗೆ ಆ ಪರಿ ಬೇಡಿಕೆ’ ಎಂದು ಹೇಳಿದ್ದರು. ತೆಲುಗು ಚಿತ್ರರಂಗದ ನಟರು ತಮ್ಮ ಜತೆ ಇಂಥ ನಟಿಯೇ ಬೇಕು ಎಂದು ಆಗ್ರಹಿಸುವಂತೆ, ಬ್ರಹ್ಮಾನಂದಂ ಕೂಡ ಇರಬೇಕು ಎಂದು
ಒತ್ತಾಯಿಸುತ್ತಾರಂತೆ. ಹೀಗಾಗಿ ತೆಲುಗಿನ ಎಲ್ಲ ಹೀರೋಗಳಿಗೂ ಇವರು ಬೇಕೇಬೇಕು. ಬ್ರಹ್ಮಾನಂದಂ ಇದ್ದರೆ ಸಿನಿಮಾ ಗೆಲ್ಲುತ್ತದೆ ಎಂಬ ಪ್ರತೀತಿಯೂ ಎಲ್ಲ ಚಿತ್ರಗಳಲ್ಲೂ ಅವರ ಉಪಸ್ಥಿತಿಗೆ ಆಗ್ರಹಿಸುವಂತೆ ಮಾಡಿದೆ.

ನನಗೆ ಬ್ರಹ್ಮಾನಂದಂ ಅವರ ಟೈಮಿಂಗ್ ಬಹಳ ಇಷ್ಟ. ಅವರ ಡೈಲಾಗ್ ಡೆಲಿವರಿ ಮತ್ತು ಅದನ್ನು ಅವರು ವ್ಯಕ್ತಪಡಿಸುವ ರೀತಿ ಎಂಥವರಿಗಾದರೂ ಇಷ್ಟ ವಾಗುತ್ತದೆ. ಬ್ರಹ್ಮಾನಂದಂ ಎಲ್ಲ ವರ್ಗ (ಕ್ಲಾಸ್ ಮತ್ತು ಮಾಸ್)ದವರಿಗೂ ಇಷ್ಟವಾ ಗುವ ಅಪರೂಪದ ಹಾಸ್ಯ ನಟ. ಒಬ್ಬ ನಟ ಹೆಚ್ಚೆಂದರೆ ಐನೂರು ಸಿನಿಮಾಗಳಲ್ಲಿ ನಟಿಸಿದ ದಾಖಲೆಗಳಿವೆ. ಆದರೆ ಬ್ರಹ್ಮಾನಂದಂ ಅವರು ಸಾವಿರ ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಗಿನ್ನೆಸ್ ಬುಕ್ ದಾಖಲೆ ಸೇರಿದ್ದಾರೆ. ಪ್ರಾಯಶಃ ಈ ದಾಖಲೆ ಯನ್ನು ಮುರಿಯುವುದು ಕಷ್ಟ ಮತ್ತು ಅಸಾಧ್ಯ.

ಕೇವಲ ತೆಲುಗಿನಲ್ಲಷ್ಟೇ ಅಲ್ಲ, ಭಾರತದಲ್ಲಿಯೇ ಅತ್ಯುತ್ತಮ ಹಾಸ್ಯನಟ ಎಂಬ ಅಗ್ಗಳಿಕೆಗೆ ಪಾತ್ರರಾಗಿರುವ ಅವರು, ಅತ್ಯಧಿಕ ಸಂಭಾವನೆ ಪಡೆಯುವ ಹಾಸ್ಯನಟರೂ ಹೌದು. ಅವರ ಸಂಭಾವನೆ ಕೇಳಿದರೆ, ಕನ್ನಡದ ಕೆಲವು ನಾಯಕ ನಟರೆಂದು ಕರೆಯಿಸಿಕೊಂಡವರೂ ಅಚ್ಚರಿ ಪಡಬಹುದು. ಅವರು ಏನಿಲ್ಲ
ವೆಂದರೂ ಒಂದು ತಿಂಗಳಿಗೆ ಎರಡು ಕೋಟಿ ರುಪಾಯಿ ಸಂಪಾದಿಸುವ ನಟ! ಕೆಲವು ನಿರ್ಮಾಣ ಸಂಸ್ಥೆಗಳು ಅವರಿಗೆ ಸಿನಿಮಾ ವೊಂದಕ್ಕೆ ನಾಲ್ಕು ಕೋಟಿ ರುಪಾಯಿ ಸಂಭಾವನೆ ನೀಡಿದ್ದಿದೆ. ‘ನೀವು ಕೇಳಿದಷ್ಟು ಸಂಭಾವನೆ ಕೊಡ್ತೇವೆ’ ಅಂದರೂ ಬ್ರಹ್ಮಾನಂದಂ ಒಪ್ಪಿಕೊಳ್ಳುವುದಿಲ್ಲ. ಕಾರಣ ಅವರಿಗೆ ದಿನಾಂಕಗಳೇ
ಸಿಗುವುದಿಲ್ಲ. ಕೆಲವು ಸಲ ಅವರು ನಲವತ್ತೆಂಟು ಗಂಟೆಗಳ ಕಾಲ ಬಿಡುವಿಲ್ಲದೇ, ಎಂಟು-ಹತ್ತು ಚಿತ್ರಗಳಲ್ಲಿ ಸತತ ನಟಿಸಿದ್ದುಂಟು.

ಆದರೆ ಶೂಟಿಂಗ್ ಒಂದೇ ಊರಿನಲ್ಲಿರಬೇಕಷ್ಟೆ. ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ಗೆ ಭಾಜನರಾಗಿರುವ ಬ್ರಹ್ಮಾನಂದಂ, ಪದ್ಮಶ್ರೀ ಪ್ರಶಸ್ತಿಗೂ ಪಾತ್ರರಾಗಿzರೆ. ಕಳೆದ ಮೂವತ್ತೈದು ವರ್ಷಗಳಿಂದ ತೆಲುಗು ಚಿತ್ರಗಳಲ್ಲಿ ನಟಿಸುತ್ತಿರುವ ಅವರು, ಅಲ್ಲಿನ ರಾಜ್ಯಸರಕಾರ ನೀಡುವ ಪ್ರತಿಷ್ಠಿತ ನಂದಿ ಪ್ರಶಸ್ತಿಯನ್ನು ಆರು ಸಲ ಪಡೆದುಕೊಂಡಿದ್ದಾರೆ. ತೆಲುಗು ಟಿವಿ ಕಾರ್ಯಕ್ರಮವೊಂದರಲ್ಲಿ ಇವರ ನಟನೆಯನ್ನು ನೋಡಿದ ನಿರ್ದೇಶಕ ಜಂಧ್ಯಾಲ, ೧೯೮೫
ರಲ್ಲಿ ಸಿನಿಮಾ (ಆಹಾ ನಾ ಪೆಳ್ಳಂಟ!)ದಲ್ಲಿ ಅವಕಾಶ ನೀಡಿದರು. ಬ್ರಹ್ಮಾನಂದಂ ಆ ಚಿತ್ರದ ಮೂಲಕ ಮನೆಮಾತಾಗಿ ಹೋದರು. ಅಲ್ಲಿಂದ ಅವರು ತಿರುಗಿ ನೋಡಿದ್ದೇ ಇಲ್ಲ. ಇತ್ತೀಚೆಗೆ ಬ್ರಹ್ಮಾನಂದಂ ಬರೆದ ಆತ್ಮಕಥೆ (Iಛಿ)ಯನ್ನು ಓದುತ್ತಿದ್ದೆ. ಅವರ ಬದುಕಿನ ಇನ್ನಷ್ಟು ರೋಚಕ ಪ್ರಸಂಗಗಳನ್ನು ಮುಂದೆ ಹೇಳುತ್ತೇನೆ.

Leave a Reply

Your email address will not be published. Required fields are marked *

error: Content is protected !!