Sunday, 19th May 2024

Queue ಪದದ ಸ್ಪೆಲ್ಲಿಂಗ್‌’ನಲ್ಲೇ ಅಕ್ಷರಗಳ ಇಷ್ಟುದ್ದ ಕ್ಯೂ !

ತಿಳಿರು ತೋರಣ

srivathsajoshi@yahoo.com

ಇಷ್ಟವಿರಲಿ ಇಲ್ಲದಿರಲಿ ಈಗ ಕ್ಯೂ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿದೆ. ಬೇಕಿದ್ದರೆ ಕ್ಯೂ ಎನ್ನಿ, ಇಲ್ಲ ಕತಾರ್ ಎನ್ನಿ, ಅಮೆರಿಕದಲ್ಲಿ ಹೇಳು ವಂತೆ ‘ಲೈನ್’ ಎನ್ನಿ ಅಥವಾ ಅಚ್ಚಕನ್ನಡದಲ್ಲಿ ಸರತಿಯ ಸಾಲು ಎನ್ನಿ- ನಾವೆಲ್ಲರೂ ಜೀವನದ ಎಷ್ಟೋ ಗಂಟೆಗಳನ್ನು ಕ್ಯೂನಲ್ಲಿ ಕಳೆದಿರುತ್ತೇವೆ; ಇನ್ನೂ ಕಳೆಯುವವರಿದ್ದೇವೆ. ಕ್ಯೂ ಕಬಂಧಬಾಹುಗಳ ಬಂಧನದಲ್ಲಿರುವವರೇ ನಾವೆಲ್ಲ.

ಅ.ರಾ.ಮಿತ್ರ ಅವರು ಹಿಂದೊಮ್ಮೆ ‘ಕ್ಯೂ’ ಶೀರ್ಷಿಕೆಯ ಲಲಿತಪ್ರಬಂಧವೊಂದರಲ್ಲಿ ತಮಾಷೆಯಾಗಿ ಬರೆದಿದ್ದರು: “Q ಎಂಬ ಇಂಗ್ಲಿಷ್ ಅಕ್ಷರವೇ ನನಗೆ ಹಿಡಿಸುವು ದಿಲ್ಲ. ಇದರಿಂದ ಆರಂಭವಾಗುವ ಅನೇಕ ಶಬ್ದಗಳು- Quorum, Quality, Qualification… ಈಗ ಸಮಾಜದಲ್ಲಿ ತೂಕವನ್ನು ಕಳೆದುಕೊಂಡಿವೆ. ಈ ವಿಚಿತ್ರ ಅಕ್ಷರದ ಕುಬ್ಜ ಕಬಂಧ ರೂಪ ಕಂಡರೆ ಯಾರಿಗೂ ಗೌರವ ಮೂಡುವುದಿಲ್ಲ. ದುಂಡನೆ ಶೂನ್ಯ ಶುಷ್ಕ ಮುಖ, ಬಲಗೆನ್ನೆಯಿಂದ ಹೊರಟು ಎಡಭಾಗದಲ್ಲಿ ಕೆಳಗೆನ್ನೆಯವರೆಗೆ ಇಳಿದು ಮತ್ತೆ ವಂಕಿಮವಾಗಿ ಮೇಲೇರುವ ಗಿರಿಜಾಮೀಸೆ ಕಂಡರೆ ನನಗಂತೂ ಮೈಯೆಲ್ಲ ಉರಿದುಹೋಗುತ್ತದೆ.

ಹಾಗೆಯೇ ಇಂಗ್ಲಿಷಿನಲ್ಲಿ Queue ಎಂಬ ಸ್ಪೆಲ್ಲಿಂಗ್ ನಿರ್ಮಾಣ ಮಾಡಿದ ಮೊದಲ ಮನುಷ್ಯ ಆ ಶಬ್ದದ ಬಗ್ಗೆ ಎಷ್ಟು ಅಸಹ್ಯಪಟ್ಟುಕೊಂಡಿ ದ್ದಾನೆಂಬುದು ಆಕಳಿಸುತ್ತ ಸಾಗುವ ಅದರ ಅಕ್ಷರಗಳಿಂದಲೇ ತಿಳಿ ಯುತ್ತದೆ. ಕನ್ನಡದ ಕ್ಯೂ ತಾನೆ ಏನು!? ಲಿಪಿ ಬದಲಾದ ಮಾತ್ರಕ್ಕೇ ಕಪಿಬುದ್ಧಿ ಹೋದೀತೇ? ಕ-ಕಾರಕ್ಕೆ ಸುತ್ತಿಕೊಂಡಿ ರುವ ಒಂದು ಉದ್ದನೆಯ ಬಳ್ಳಿ ಇದು. ಯ ಒತ್ತು ಇದರ ಸಹವಾಸಕ್ಕೆ ಬೇಸತ್ತು ತನ್ನ ಬಾಲದಿಂದಲೇ ನೇಣುಹಾಕಿಕೊಂಡಿರುವಂತೆ ಕಾಣುತ್ತದೆ. ಕ್ಯೂಗೆ ಇರುವುದು ಬರಿಯ ಬಾಲವೇ. ಅದಕ್ಕೆ ತಲೆಯಿರುವಂತೆ ನನಗೆ ಎಂದಿಗೂ ಕಂಡುಬಂದಿಲ್ಲ! ಈ ತಲೆಯಿಲ್ಲದ ಪುಚ್ಛರಾಶಿಯನ್ನು ನೋಡಿ ನಾನು ಹಲವಾರು ಬಾರಿ ಬೇಸತ್ತಿ ದ್ದೇನೆ’- ಹೀಗೆ ಸಾಗುತ್ತದೆ ಕ್ಯೂ ಅಕ್ಷರ ಮತ್ತು ಪದದ ಬಗ್ಗೆ ಪ್ರೊ. ಮಿತ್ರರ ಜರೆತ.

ಅಷ್ಟೇಅಲ್ಲ, ಕ್ಯೂ ಪದ್ಧತಿ ನಮ್ಮನ್ನು ತಟಸ್ಥರನ್ನಾಗಿಸುತ್ತದೆಂದು ಮಿತ್ರರ ಅಂಬೋಣ. ಕ್ಯೂವಿನ ಬಾಲವನ್ನು ನಂಬಿ ನಿಂತಾಗಲೆಲ್ಲ ಇದಕ್ಕಿಂತ ಅಡ್ಡಾದಿಡ್ಡಿ ಗುಂಪುಗಲಾಟೆ ಪದ್ಧತಿಯೇ ಸರಿಯೆಂದು ಅನಿಸುತ್ತದಂತೆ. ‘ಸಡಗರದಿಂದ ಎಲ್ಲರೂ ಬಸ್ಸಿಗಾಗಿ ಕಾದು, ಬಸ್ಸು ಬಂದ ಕೂಡಲೇ ಹೋ ಎಂದು ಕೂಗುತ್ತ, ಯುದ್ಧಕ್ಕೆ ನುಗ್ಗುವ ವೀರಯೋಧರ ಹಾಗೆ ಮುಂದೆ ನುಗ್ಗಿ ತಮ್ಮ ಬಾಹುಬಲ, ಗಂಟಲ ಬಲ, ದೈವಬಲಗಳಿಂದ ಬಸ್ಸಿನೊಳಗೆ ಸುಳಿಯುವ ಆ ವೀರೋದ್ಧತ ದೃಶ್ಯವೆಲ್ಲಿ! ಈಗ ಮುಂದಿನವನ ಬೆನ್ನಿಗಂಟಿ ನಿಂತು ಹಿಂದೊಬ್ಬನಿರುವುದರಿಂದ ತಲೆಯಾಡಿಸಲು ಅವಕಾಶ ಕೊಡದೆ ಒಂಟೆಗಳ ಸಾಲಿನಂತೆ ನಿಧಾನವಾಗಿ ಸಾಗುವ ಕ್ಯೂ ಎಲ್ಲಿ! ಕ್ಯೂ ಇಲ್ಲದ ಕಡೆಗಳಲ್ಲಿ ಜನ ಎಷ್ಟು ಒತ್ತಾಗಿ ಸೇರುತ್ತಾರೆ, ಎಷ್ಟು ಬೇಗ ಆತ್ಮೀಯರಾಗಿ ಬಿಡುತ್ತಾರೆ!

ಎಷ್ಟೊಂದು ಪುಕ್ಕಟೆ ಮನೋರಂಜನೆಯ ಅಂಶಗಳನ್ನು ನೀವು ಗುಂಪಿನಲ್ಲಿದ್ದುಕೊಂಡೇ ನೋಡಬಹುದು! ಅದುಬಿಟ್ಟು ಕ್ಯೂ ಪಂಜರದೊಳಗೆ ನರಳಿ ನಿಮ್ಮನಿಮ್ಮ ಉದ್ರೇಕಗಳಿಗೆ ಕರ್ಫ್ಯೂ ಘೋಷಿಸಿಕೊಳ್ಳುವುದು ಏನು ಚಂದವೋ. ಬರಿಯ ರೈಲು ಬಸ್ಸುಗಳಿಗೇ ಅಲ್ಲ, ಈಚೀಚೆಗೆ ಸರದಿ ಕಾಯುವ ಈ ಕ್ಯೂಬಳ್ಳಿ ವಿಷದ ಬಳ್ಳಿಯಂತೆ ಅಕ್ಕಿಯಂಗಡಿ, ಸೊಸೈಟಿ, ಹೊಟೇಲು, ಕಾರಖಾನೆಗಳಿಗೆಲ್ಲ ವ್ಯಾಪಿಸಿದೆ. ಸಿನಿಮಾಮಂದಿರದ ಒಳಗಡೆ ಹೋಗಿ ಮೂರು ಗಂಟೆಗಳವರೆಗೆ ಅನುಭವಿಸಬೇಕಾಗುವ ಚಿತ್ರ- ಹಿಂಸೆಗಾಗಿ ಜನರು ಹೊರಗಡೆ ಗಂಟೆಗಟ್ಟಲೆ ಗರುಡಗಂಬಗಳಂತೆ ಕ್ಯೂ ನಿಲ್ಲುತ್ತಾರೆ…’ ಅಂತೂ ಅ.ರಾ.ಮಿತ್ರರಿಗೆ ಕ್ಯೂ ಅಂದರೆ
ಸ್ವಲ್ಪವೂ ಇಷ್ಟವಿಲ್ಲವೆಂದು ಗೊತ್ತಾಗುತ್ತದೆ ಈ ವಾಕ್ಯಗಳಲ್ಲಿ.

ಆದರೇನು ಮಾಡೋಣ, ಇಷ್ಟವಿರಲಿ ಇಲ್ಲದಿರಲಿ ಈಗ ಕ್ಯೂ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿದೆ. ಬೇಕಿದ್ದರೆ ಕ್ಯೂ ಎನ್ನಿ, ಇಲ್ಲ ಕತಾರ್ ಎನ್ನಿ (ಎಸ್‌ಟಿಡಿ/ಐಎಸ್‌ಡಿ ಟೆಲಿಫೋನ್ ಕರೆ ಮಾಡುವಾಗ ‘ಆಪ್ ಕತಾರ್ ಮೇ ಹೈಂ…’ ಧ್ವನಿಮುದ್ರಿತ ಸಂದೇಶ ಬರುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳಿ), ಅಮೆರಿಕ ದಲ್ಲಿ ಹೇಳುವಂತೆ ‘ಲೈನ್’ ಎನ್ನಿ ಅಥವಾ ಅಚ್ಚಕನ್ನಡದಲ್ಲಿ ಸರತಿಯ ಸಾಲು ಎನ್ನಿ- ನಾವೆಲ್ಲರೂ ಜೀವನದ ಎಷ್ಟೋ ಗಂಟೆಗಳನ್ನು ಕ್ಯೂನಲ್ಲಿ ಕಳೆದಿರುತ್ತೇವೆ; ಇನ್ನೂ ಕಳೆಯುವವರಿದ್ದೇವೆ.

ತಿರುಪತಿ ತಿಮ್ಮಪ್ಪನ ಧರ್ಮದರ್ಶನದಿಂದ ಹಿಡಿದು ತ್ರಿಭುವನ್ ಟಾಕೀಸ್‌ನಲ್ಲಿ ಸೆಕೆಂಡ್ ಶೋಗೆ ಟಿಕೆಟ್ ಪಡೆಯುವ ತನಕ, ಮತಿಗೆಟ್ಟ ರಾಜಕಾರಣಿಯನ್ನು ಚುನಾಯಿಸಲು ಮತಗಟ್ಟೆಯಲ್ಲಿ ಸಾಲಾಗಿ ನಿಂತು ವೋಟಿಸುವುದರಿಂದ ಹಿಡಿದು ಮಗು ಹುಟ್ಟುವ ಮೊದಲೇ ಎಲ್‌ಕೆಜಿ ಸೀಟ್ ಗಿಟ್ಟಿಸಲು ಲಕ್ಷಗಟ್ಟಲೆ ತೆತ್ತು ವೇಟಿಂಗ್ ಲಿಸ್ಟ್‌ನಲ್ಲಿ ವೇಟಿಸುವ ತನಕ… ಕ್ಯೂ ಕಬಂಧಬಾಹುಗಳ ಬಂಧನದಲ್ಲಿರುವವರೇ ನಾವೆಲ್ಲ. ಅಂದಹಾಗೆ ‘ಅಕ್ಕಿಯಂಗಡಿಯಲ್ಲೂ ಕ್ಯೂ’ ಎಂದು ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರರು ಹೇಳಿದ್ದು ಇಲ್ಲಿ ಅಮೆರಿಕದಲ್ಲೂ ನಿಜವಾದದ್ದು ಮೊನ್ನೆ ಮೂರು ವಾರಗಳ ಹಿಂದೆ ಒಂದುದಿನ ಭಾರತ ಸರಕಾರವು ತತ್‌ಕ್ಷಣದಿಂದ ಜಾರಿಯಾಗುವಂತೆ ಅಕ್ಕಿ ರಫ್ತು ನಿಷೇಧ ಹೇರಿದಾಗ. ಇನ್ನೆಷ್ಟು ಕಾಲ ಸೋನಾ ಮಸೂರಿ ಅಕ್ಕಿ ಸಿಗುವುದಿಲ್ಲವೋ ಎಂಬ ಚಿಂತೆಯಿಂದ ಅನಿವಾಸಿ ಭಾರತೀಯರೆಲ್ಲ ಇಂಡಿಯನ್ ಗ್ರೋಸರಿ ಸ್ಟೋರ್‌ಗಳಿಗೆ ನುಗ್ಗಿ ಶಾಪಿಂಗ್‌ಕಾರ್ಟ್ ತುಂಬ ಅಕ್ಕಿಚೀಲಗಳನ್ನು ಪೇರಿಸಿಕೊಂಡರು.

ಪರಿಸ್ಥಿತಿ ಕೈಮೀರಬಹುದೆಂದರಿತ ಅಂಗಡಿಗಳವರು ಒಬ್ಬೊಬ್ಬರಿಗೆ ಒಂದೊಂದೇ ಚೀಲ ಎಂದು ಘೋಷಿಸಿ ಕ್ಯೂನಲ್ಲಿ ಬರುವಂತೆ ಸೂಚಿಸಿದರು. ಆ ವಿಡಿಯೊ ಕ್ಲಿಪ್‌ಗಳು ವೈರಲ್ ಆಗಿದ್ದು ನೀವೂ ನೋಡಿರುವ ಸಾಧ್ಯತೆಯಿದೆ. ಅದೇನೋ ಅಪರೂಪದ ವಿದ್ಯಮಾನವಾದರೂ ಒಟ್ಟಾರೆಯಾಗಿ ಅಮೆರಿಕದಲ್ಲಿ ಕ್ಯೂ-ಬಳ್ಳಿ ಅಪರೂಪವೇನಲ್ಲ. ಇಂಡಿಯನ್ ಗ್ರೋಸರಿ ಸ್ಟೋರ್‌ಗಳಲ್ಲಿ ಅಲ್ಲದಿದ್ದರೂ ಕೆಲವು ಪ್ರಖ್ಯಾತ ಇಂಡಿಯನ್ ರೆಸ್ಟೊರೆಂಟ್‌ಗಳಲ್ಲಿ ವಿಶೇಷವಾಗಿ ವೀಕೆಂಡುಗಳಲ್ಲಿ
ಪ್ರವೇಶಕ್ಕೇ ಕ್ಯೂ ಇರುತ್ತದೆ. ಗಿರಾಕಿಗಳು ಭಾರತೀಯರಷ್ಟೇ ಅಲ್ಲ ಅಮೆರಿಕನ್ನರೂ ಇರುತ್ತಾರೆ. ಹಾಗೆಯೇ ‘ಬ್ಲ್ಯಾಕ್ -ಡೇ’ ಸೇಲ್ ವೇಳೆ ರಾತ್ರಿಯೆಲ್ಲ ಜಾಗರಣೆ ಮಾಡಿ ಕ್ಯೂ ನಿಂತು ಬ್ರಾಹ್ಮೀಮುಹೂರ್ತದಲ್ಲಿ ಅಂಗಡಿ ತೆರೆದಾಗ ಒಳನುಗ್ಗುವ ಕ್ರೇಜಿಗಳೂ ಬೇಕಾದಷ್ಟಿದ್ದಾರೆ.

ಕೋಸ್ಟ್‌ಕೊ, ಸ್ಯಾಮ್ಸ್ ಕ್ಲಬ್ ಮುಂತಾದ ಸದಸ್ಯತ್ವಾಧಾರಿತ ಅಂಗಡಿಗಳ ಪೆಟ್ರೊಲ್‌ಬಂಕ್‌ಗಳಲ್ಲಿ ಬೆಲೆ ಕಡಿಮೆ ಇರುವುದರಿಂದ ಕಾರುಗಳ ಕ್ಯೂ ಕಾಮನ್ ಸೀನ್. ಅಮೆರಿಕದ ಅತಿವ್ಯಸ್ತ ವಿಮಾನನಿಲ್ದಾಣಗಳಾದ ಶಿಕಾಗೊ, ಅಟ್ಲಾಂಟಾ, ಜೆಎಫ್ ಕೆ ಮುಂತಾದೆಡೆ ಟೇಕ್‌ಆಫ್‌ಗೆ ವಿಮಾನಗಳ ಕ್ಯೂ ಸಹ ಅಷ್ಟೇ ಕಾಮನ್ ಸೀನ್. ಇಲ್ಲಿಯ ಡಿಎಂವಿ (ಭಾರತದಲ್ಲಿ ಆರ್‌ಟಿಒ ಇದ್ದಂತೆ) ಸೇವಾಕೇಂದ್ರಗಳಲ್ಲೂ ನಾನು ಗಮನಿಸಿರುವಂತೆ ಯಾವಾಗಲೂ ಕ್ಯೂ. ಟೋಕನ್ ಸಿಸ್ಟಮ್ ಇರುತ್ತದಾದರೂ ಹೋದಕೂಡಲೇ ಕೆಲಸ ಆಯ್ತು ಅಂತೇನಿಲ್ಲ. ಪೋಸ್ಟಾಫೀಸುಗಳಲ್ಲೂ ಹಾಗೆಯೇ. ಉಡುಗೊರೆ ಕೊಡು-ಕೊಳ್ಳುವ ಕ್ರಿಸ್ಮಸ್ ಸೀಸನ್‌ನಲ್ಲಂತೂ ವಿಪರೀತ. ಒಂದು ಅಂದಾಜಿನ ಪ್ರಕಾರ ಅಮೆರಿಕದಲ್ಲಿ ವರ್ಷಕ್ಕೆ ಸುಮಾರು ೩೭ ಬಿಲಿಯನ್ ಮಾನವ ಗಂಟೆಗಳು ಕ್ಯೂನಲ್ಲಿ ನಿಂತು ವ್ಯಯವಾಗುತ್ತವಂತೆ!

ಕ್ಯೂನಲ್ಲಿ ನಿಲ್ಲಬೇಕಾಗಿ ಬಂದಾಗ ಜನ ಬಹುಮಟ್ಟಿಗೆ ದ್ವೇಷಿಸುವುದೆಂದರೆ ಸಮಯ ವೃಥಾ ಪೋಲಾಗುವುದನ್ನು. ಇಂಗ್ಲಿಷಲ್ಲಿ ಇದನ್ನು ಎಂಪ್ಟಿ ಟೈಮ್ ಎನ್ನುತ್ತಾರೆ. ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ ಎಣಿಸಲಾರದ ಭವದಿ ನೊಂದೆ ನಾನು ಅನಿಸೋದು ಆಗಲೇ. ಕ್ಯೂ ಮತ್ತು ನಮ್ಮ ಯೋಚನಾಲಹರಿ ಹೇಗೆ
ಬೆಸೆದಿರುತ್ತವೆ ಎಂಬುದಕ್ಕೆ ಕೆಲ ವರ್ಷಗಳ ಹಿಂದೆ ಹ್ಯೂಸ್ಟನ್ ಏರ್ ಪೋರ್ಟ್‌ನಲ್ಲಿ ಕೈಗೊಂಡ ಒಂದು ಅಧ್ಯಯನ ಒಳ್ಳೆಯ ಉದಾಹರಣೆ. ಅಲ್ಲಿ ದಿನಾ ಬೆಳಗ್ಗೆ ೭ರಿಂದ ೯ರವರೆಗಿನ ಎರಡು ಗಂಟೆಗಳಲ್ಲಿ, ಒಂದೇ ಏರ್‌ಲೈನ್‌ಗೆ ಸೇರಿದ ಏಳೆಂಟು ವಿಮಾನಗಳು ಬೇರೆಬೇರೆ ನಗರಗಳಿಂದ ಬಂದಿಳಿಯುತ್ತಿದ್ದವು.

ಪ್ರಯಾಣಿಕರೆಲ್ಲ ಏರ್‌ಪೋರ್ಟ್‌ನಿಂದ ಬೇಗಬೇಗ ಹೊರಬಂದು ಹ್ಯೂಸ್ಟನ್‌ನಲ್ಲಿನ ಕಚೇರಿಗಳಿಗೆ, ವ್ಯವಹಾರಗಳಿಗೆ ಹೋಗುವ ತರಾತುರಿಯುಳ್ಳವರು. ಕೆಲವು ಪ್ರಯಾಣಿಕರ ಬಳಿ ಸಾಕಷ್ಟು ಲಗೇಜ್ ಸಹ ಇದ್ದರೆ ಅವರೆಲ್ಲ ವಿಮಾನದಿಂದಿಳಿದು ಕನ್ವೇಯರ್ ಬೆಲ್ಟ್ ಬಳಿ ಕಾಯಬೇಕು. ಹ್ಯೂಸ್ಟನ್ ಏರ್‌ಪೋರ್ಟ್‌ನಲ್ಲಿ ಲಗೇಜ್ ಬರುವುದು ತಡವಾಗು ತ್ತದೆ, ತುಂಬಾಹೊತ್ತು ಕಾಯಬೇಕಾಗುತ್ತದೆ ಎಂದು ಕಾಯಂ ಪ್ರಯಾಣಿಕರ ದೂರು ನಿತ್ಯದ ಗೋಳಾಗಿತ್ತು. ದೂರುಗಳು ಹೆಚ್ಚಾದಾಗ ಏರ್‌ಲೈನ್‌ನವರು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿ ಲಗೇಜ್ ಬರಲು ತಗಲುವ ಅವಧಿಯನ್ನು ತಗ್ಗಿಸುವ ಕ್ರಮ ಕೈಗೊಂಡರು. ಸರಾಸರಿ ಎಂಟು ನಿಮಿಷಕ್ಕೆ (ಇಂಡಸ್ಟ್ರಿ ಸ್ಟಾಂಡರ್ಡ್ ಸರಾಸರಿ ಅಷ್ಟು ಪ್ರಮಾಣದಲ್ಲಿತ್ತು) ತರುವಲ್ಲಿ ಯಶಸ್ವಿಯಾದರು.

ಆದರೂ ತಾಳ್ಮೆಯಿಲ್ಲದ ಪ್ರಯಾಣಿಕರಿಂದ ದೂರುಗಳು ಯಥಾ ಪ್ರಕಾರ ಬರುತ್ತಿದ್ದವು. ಏರ್‌ಲೈನ್‌ನವರು ಮತ್ತೆ ತಲೆಕೆಡಿಸಿಕೊಂಡು ಇದಕ್ಕೇನಪ್ಪಾ ಪರಿಹಾರ ಎಂದು ಕಂಡುಕೊಳ್ಳಲು ವಿಶೇಷ ಸಮಿತಿಯನ್ನು ನೇಮಿಸಿದರು. ಸಮಿತಿಯ ಸದಸ್ಯರೇ ಒಂದೆರಡು ಸಲ ಪ್ರಯೋಗಾರ್ಥವಾಗಿ ಲಗೇಜ್ ಸಹಿತ ವಿಮಾನ
ಪ್ರಯಾಣ ಮಾಡಿದರು. ಹ್ಯೂಸ್ಟನ್ ಏರ್ ಪೋರ್ಟ್‌ನಲ್ಲಿ ವಿಮಾನದಿಂದಿಳಿದು, ಲಗೇಜ್ ಕಲೆಕ್ಟ್ ಮಾಡುವಲ್ಲಿಗೆ ನಡೆದು ಕೊಂಡುಬಂದರು. ಅವರಿಗೆ ಒಂದು
ಆಸಕ್ತಿಕರ ಅಂಶ ತಿಳಿಯಿತು. ವಿಮಾನದಿಂದಿಳಿದು ಲಗೇಜ್ ಕಲೆಕ್ಟ್ ಮಾಡುವಲ್ಲಿಗೆ ನಡೆದು ಕೊಂಡು ಬರಲು ಒಂದೆರಡು ನಿಮಿಷ ಮಾತ್ರ ಸಾಕಾಗುತ್ತಿತ್ತು.
ಮತ್ತೆ ಲಗೇಜ್ ಬೆಲ್ಟ್ ಬಳಿ ಏಳು ನಿಮಿಷ ಕಾಯಬೇಕಾಗುತ್ತಿತ್ತು.

ಚೆಕ್ ಇನ್ ಲಗೇಜ್ ಇಲ್ಲದವರು ಬೇಗನೆ ಹೊರಬಂದು ಟ್ಯಾಕ್ಸಿ ಹಿಡಿಯುತ್ತಿದ್ದರು. ಅವರೆಲ್ಲ ಬೇಗ ಹೋಗುತ್ತಿರುವುದನ್ನು ನೋಡುತ್ತ ತಾವು ಮಾತ್ರ ಏಳು ನಿಮಿಷ ಕಾಯ ಬೇಕು ಎಂದು ಈ ಚೆಕ್‌ಇನ್ ಲಗೇಜುದಾರರಿಗೆ ಹೊಟ್ಟೆಯುರಿ. ಪರಿಣಾಮವೇ ಅಸಹನೆ ಮತ್ತು ದೂರುಗಳು! ಏರ್‌ಲೈನ್‌ನವರು ಒಂದು ಚಾಲೂ ಉಪಾಯ ಕಂಡುಕೊಂಡರು. ಪ್ರಯಾಣಿಕರಿಗೆ ವಿಮಾನದಿಂದಿಳಿದು ಲಗೇಜ್ ಬೆಲ್ಟ್ ಬಳಿಗೆ ನಡೆದುಕೊಂಡು ಬರಲು ತಗಲುವ ಅವಽಯನ್ನು ಹೆಚ್ಚಿಸುವುದೇ ಆ ಉಪಾಯ. ಅದಕ್ಕಾಗಿ ಸಾಧ್ಯವಾದಷ್ಟೂ ದೂರದ ಟರ್ಮಿನಲ್‌ನಲ್ಲಿ ಪ್ರಯಾಣಿಕ ರನ್ನು ಇಳಿಸಿ, ಲಗೇಜ್ ಬೆಲ್ಟ್‌ಗಳ ಪೈಕಿ ಅತ್ಯಂತ ಕೊನೆಯಲ್ಲಿರುವುದರ ಮೇಲೆ ಲಗೇಜನ್ನು ಕಳುಹಿಸುವ ಏರ್ಪಾಡು ಮಾಡಿದರು. ವಿಮಾನದಿಂದ ತೆಗೆಯಲ್ಪಟ್ಟ ಲಗೇಜು ಬೆಲ್ಟ್ ಮೇಲೆ ಬಂದು ತಲುಪಲು ಈಗಲೂ ಎಂಟು ನಿಮಿಷಗಳೇ. ಆದರೆ ಪ್ರಯಾಣಿಕರು ವಿಮಾನದಿಂದಿಳಿದು ಲಗೇಜ್ ಕಲೆಕ್ಟ್ ಮಾಡುವಲ್ಲಿಗೆ ತಲುಪಲು ಕನಿಷ್ಠ ಆರು ನಿಮಿಷಗಳಾದರೂ ಬೇಕಾಗುತ್ತಿತ್ತು. ಒಂದೆರಡು ನಿಮಿಷಗಳಷ್ಟೇ ಕಾದುನಿಂತು ತಮ್ಮ ಬ್ಯಾಗ್‌ಗಳನ್ನು ಪಡೆದ ಪ್ರಯಾಣಿಕರು ಹಸನ್ಮುಖದಿಂದಲೇ ಹೊರನಡೆಯತೊಡಗಿದರು; ಕಂಪ್ಲೇಂಟ್‌ಗಳ ಸಂಖ್ಯೆ ಗಣನೀಯವಾಗಿ ಇಳಿಯಿತು.

ಹಾಗಂತ, ಎಲ್ಲ ಕಡೆ ಎಲ್ಲ ವಿಧದ ಕ್ಯೂಗಳಲ್ಲಿ ‘ಕಾಯು’ವ ಸಮಯವನ್ನು ಕಡಿಮೆ ಮಾಡುವುದು ಒಳ್ಳೆಯದಲ್ಲ. ಕೆಲವೊಂದು ಕ್ಯೂಗಳಲ್ಲಿ ಹ್ಯೂಸ್ಟನ್ ಏರ್‌ಪೋರ್ಟ್ ಉಪಾಯದ ತದ್ವಿರುದ್ಧ ದ್ದನ್ನೂ ಮಾಡುವುದಿದೆ. ಮುಖ್ಯವಾಗಿ ಮನೋರಂಜನಾ ಪಾರ್ಕ್ ಗಳಲ್ಲಿ, ಸಿನಿಮಾ/ನಾಟಕ ಥಿಯೇಟರ್‌ಗಳ ಪ್ರವೇಶದ್ವಾರಗಳಲ್ಲಿ
ಬೇಕಂತಲೇ ಮೈಲುದ್ದದ ಕ್ಯೂ ಇರುವಂತೆ ನೋಡಿಕೊಳ್ಳುತ್ತಾರೆ. ಇದರ ಹಿಂದೆ ಎರಡು ಉದ್ದೇಶಗಳು: ಒಂದನೆಯದಾಗಿ, ಪ್ರದರ್ಶನವನ್ನು ನೋಡಲಿರುವವರ ಮನಸ್ಸಿನಲ್ಲಿ ನಿರೀಕ್ಷೆ-ಉದ್ವೇಗ ಹೆಚ್ಚಿಸುವುದು. ಹೆಚ್ಚುಹೊತ್ತು ಕಾದಷ್ಟೂ ಆಮೇಲೆ ಪ್ರದರ್ಶನದಿಂದ ಸಿಗುವ ಆನಂದ ಹೆಚ್ಚುತ್ತದೆಯಂತೆ. ಎರಡನೆಯದಾಗಿ, ಮೈಲುದ್ದದ ಕ್ಯೂ ನೋಡಿ ಇತರರೂ ಈ ಪ್ರದರ್ಶನದ ಹಿರಿಮೆಯನ್ನು ಅರಿಯಬೇಕು! ಥೀಮ್‌ಪಾರ್ಕ್, ಕಲಾಪ್ರದರ್ಶನ ಮುಂತಾದೆಡೆ ಗಳಲ್ಲಿ ಹೆಚ್ಚಾಗಿ ‘ಸಿಂಗಲ್ ಕ್ಯೂ’ ಇರುವುದು. ಇದೊಂದು ರೀತಿ ಯಲ್ಲಿ ಸಾಮಾಜಿಕ ಸಮಾನತೆ. ಮೇಲುಕೀಳು ಭೇದಭಾವವಿಲ್ಲದೆ ಎಲ್ಲರೂ ಒಂದೇ ಸಾಲಲ್ಲಿ ನಿಂತುಕೊಳ್ಳಬೇಕು.

ರಟ್ಟೆ ಬಲಪ್ರದರ್ಶನ ವಿಲ್ಲದೆ, ಚಾಲಾಕಿನ ಚರ್ಯೆಗಳಿಲ್ಲದೆ ಶಿಸ್ತುಬದ್ಧವಾಗಿ ‘ಮೊದಲು ಬಂದವರಿಗೆ ಮೊದಲು ಸೇವೆ’ ಒದಗಿಸುವ ವ್ಯವಸ್ಥೆ. ಆದರೆ ಸೂಪರ್‌ ಮಾರ್ಕೆಟ್‌ನ ಚೆಕ್‌ಔಟ್, ಇಂಟರ್‌ನ್ಯಾಷನಲ್ ಏರ್ ಪೋರ್ಟ್‌ನಲ್ಲಿ ಕಸ್ಟಮ್ಸ್ ಕ್ಲಿಯರೆನ್ಸ್, ಇಮಿಗ್ರೇಷನ್- ಇವೆಲ್ಲ ಸಿಂಗಲ್ ಕ್ಯೂ ಆಗಿರುವುದಿಲ್ಲ. ಆರೇಳು, ಕೆಲವೊಮ್ಮೆ ೧೦-೧೫ ಸಮಾಂತರ ಕ್ಯೂಗಳಿರುತ್ತವೆ. ಅಂಥ ಕ್ಯೂಗಳಲ್ಲಿ ಕಾಯುವಾಗ ಇನ್ನೊಂದು ನಮೂನೆಯ ಅಸಹನೆಯಾಗುವುದಿದೆ. ತಾನು ನಿಂತಿ ರುವ ಕ್ಯೂ ಮಾತ್ರ ನಿಧಾನವಾಗಿ ಚಲಿಸುತ್ತಿದೆಯೇನೊ, ಅಕ್ಕಪಕ್ಕದ ಕ್ಯೂಗಳೆಲ್ಲ ಬಿರುಸಾಗಿ ಮುನ್ನಡೆಯುತ್ತಿವೆಯೇನೊ ಎಂದು ಅನಿಸುವುದಿದೆ.

ಪಕ್ಕದ ಕ್ಯೂ ಚಿಕ್ಕದಾಗಿ ಕಂಡರೆ ಅದರ ಕೊನೆಗೆ ಸೇರಿಕೊಳ್ಳುವುದು, ಅಲ್ಲಿ ದುರದೃಷ್ಟಕ್ಕೆ ಮುಂದಿರುವ ಯಾವನೋ ಒಬ್ಬ ಗಿರಾಕಿಗೆ ಏನೋ ಕ್ಲಿಷ್ಟಕರ
ಸೇವೆಯ ಅಗತ್ಯ ಬಂದು ಅವನ ಹಿಂದಿರುವವರೆಲ್ಲ ಹೆಲ್ಡ್‌ಅಪ್ ಆಗೋದು… ಕ್ಯೂ ಸಿಸ್ಟಂನಲ್ಲಿ ತಾಳ್ಮೆಯ ಕಟ್ಟೆಯೊಡೆಯು ವುದಕ್ಕೆ ಇವೆಲ್ಲವೂ ಕಾರಣವಾಗುತ್ತವೆ. ಅಷ್ಟಾದರೂ ಕ್ಯೂ ಪದ್ಧತಿಯನ್ನು ಅಪಾರವಾಗಿ ಮೆಚ್ಚುವ, ದೈನಿಕ ವ್ಯವಹಾರಗಳಲ್ಲಿ ಕ್ಯೂವನ್ನು ಶಿರಸಾಪಾಲಿಸುವ ದೇಶ ಗ್ರೇಟ್‌ಬ್ರಿಟನ್. ಬ್ರಿಟಿಷ್ ಪ್ರಜೆಯೊಬ್ಬ ಸರಾಸರಿಯಾಗಿ ತಿಂಗಳಿಗೆ ಐದೂವರೆ ಗಂಟೆ, ಇಡೀ ಜೀವನದಲ್ಲಿ ಸುಮಾರು ಆರು ತಿಂಗಳ ಅವಧಿ-ಕ್ಯೂನಲ್ಲಿ ಕಳೆಯುತ್ತಾನಂತೆ.

ಬ್ರಿಟಿಷರ ಕ್ಯೂ ಪ್ರೀತಿ ಎಷ್ಟೆಂದರೆ ೨೦೧೮ರಲ್ಲಿ ಅಲ್ಲಿ ಹತ್ತು ಪೆನ್ಸ್‌ನ ಹೊಸ ನಾಣ್ಯಗಳನ್ನು ಬಿಡುಗಡೆ ಮಾಡಿದಾಗ ಒಂದು ಸರಣಿಯವುಗಳಲ್ಲಿ ನಾಣ್ಯದ ಒಂದು ಮುಖದಲ್ಲಿ ಇಂಗ್ಲಿಷ್ ಕ್ಯೂ ಅಕ್ಷರ ಅದರೊಳಗೆ ಒಂದಿಷ್ಟು ಜನ ಕ್ಯೂ ನಿಂತಿರುವ ಚಿತ್ರ ಟಂಕಿಸಿದ್ದರು. ನಾಣ್ಯದ ಇನ್ನೊಂದು ಮುಖದಲ್ಲಿ ರಾಣಿ ಎಲಿಜಬೆತ್‌ಳ ಚಿತ್ರವೇ ಇದ್ದದ್ದು. ಆದರೆ ಆ ಕ್ಯೂ ಚಿತ್ರವು ನಾಲ್ಕು ವರ್ಷಗಳ ಬಳಿಕದ ಘಟನೆಯ ಮುನ್ಸೂಚನೆ ಆಯ್ತೇನೋ! ಅದೇ, ೨೦೨೨ರ ಸೆಪ್ಟೆಂಬರ್‌ನಲ್ಲಿ ರಾಣಿ ಎಲಿಜಬೆತ್ ವಿಽವಶಳಾದಾಗ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾಲಲ್ಲಿ ನಿಂತ ಬ್ರಿಟಿಷರ ‘ದ ಕ್ಯೂ’. ಸೆಪ್ಟೆಂಬರ್ ೧೪ರಿಂದ ೧೯ರವರೆಗೆ ಸತತ ನಾಲ್ಕೂವರೆ ದಿನ,
ಸುಮಾರು ಹತ್ತು ಮೈಲು ಉದ್ದ, ಕಾಯುವಿಕೆ ಸರಾಸರಿ ೨೪ ಗಂಟೆ, ಹಾದುಹೋಗುವ ದಾರಿಗುಂಟ ೫೦೦ಕ್ಕೂ ಹೆಚ್ಚು ಟಾಯ್ಲೆಟ್‌ಗಳು, ಪ್ರಥಮಚಿಕಿತ್ಸೆ ಸ್ಟೇಷನ್‌ಗಳು, ಕುಡಿಯುವ ನೀರಿನ ಅರವಟ್ಟಿಗೆಗಳು… ‘ದ ಕ್ಯೂ’ ಬಗ್ಗೆಯಂತೂ ಇಂಟರ್‌ನೆಟ್ ಜೋಕ್‌ಗಳು ಮೀಮ್‌ಗಳು ಹರಿದಾಡುವಷ್ಟು ಜಗತ್ಪ್ರಸಿದ್ಧವಾಯ್ತು. ಇದು ಬ್ರಿಟಿಷ್ ಕ್ಯೂಗಳಿಗೆಲ್ಲ ಬಾಸ್ ಎಂದು ಒಬ್ಬಾತ ಟ್ವೀಟಿಸಿದರೆ, ಇದನ್ನು ‘ಎಲಿಜಬೆತ್ ಲೈನ್’ ಎನ್ನೋಣ ಎಂದು ಇನ್ನೊಬ್ಬ.

ಕ್ಯೂ ನಲ್ಲಿ ನಿಂತು ಕಾಲುಗಳೆಲ್ಲ ಊದಿರುವ ಕಾಲ್ಪನಿಕ ಚಿತ್ರವುಳ್ಳ ಒಂದು ಟ್ವೀಟ್. ಕ್ಯೂನ ಕೊನೆ ಇಲ್ಲಿದೆ ಎಂದು ಚಂದ್ರಲೋಕದ ಫೋಟೊ ಇನ್ನೊಂದು ಟ್ವೀಟ್‌ನಲ್ಲಿ. ‘ಇಸವಿ ೨೦೨೩. ವಿಲಿಯಂ ಸಿಂಹಾಸನವೇರಿದ್ದಾನೆ. ಎಲಿಜಬೆತ್‌ಳ ಅಂತಿಮ ದರ್ಶನ ಎಷ್ಟುಹೊತ್ತು ಮುಂದುವರಿಯಿತೆಂದರೆ ತನ್ಮಧ್ಯೆಯೇ ಚಾರ್ಲ್ಸ್ ಅಸುನೀಗಿದ್ದಾನೆ. ಆತನ ಪಾರ್ಥಿವ ಶರೀರ ದರ್ಶನಕ್ಕೆ ಹೊಸ ಕ್ಯೂವನ್ನು ಈ ಕ್ಯೂವಿನ ಕೊನೆಯಿಂದ ಆರಂಭಿಸಲಾಗಿದೆ!’ ರೀತಿಯ ಡಾರ್ಕ್ ಹಾಸ್ಯವಂತೂ ಬ್ರಿಟಿಷರಿಗಷ್ಟೇ ಸಾಧ್ಯ.

ಕ್ಯೂ ಬಗ್ಗೆ ಇದೊಂದು ಅಮೆರಿಕನ್ ಜೋಕ್ ಸಹ ಚೆನ್ನಾಗಿದೆ: ಡೊನಾಲ್ಡ್ ಟ್ರಂಪ್ ಒಮ್ಮೆ ನ್ಯೂಯಾರ್ಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಉದ್ದದ ಕ್ಯೂ ಕಂಡನು. ಯಾವುದಕ್ಕಿರಬಹುದೆಂಬ ಕುತೂಹಲದಿಂದ ತಾನೂ ಅದರ ಕೊನೆಗೆ ಸೇರಿಕೊಂಡನು. ಕ್ಯೂ ನಲ್ಲಿದ್ದ ಕೆಲವರು ಈ ಹೊಸದಾಗಿ ಸೇರಿಕೊಂಡ ಆಸಾಮಿ ಟ್ರಂಪ್ ಎಂದು ತಿಳಿದಕೂಡಲೇ ಒಬ್ಬೊಬ್ಬರಾಗಿ ಕ್ಯೂ ಬಿಟ್ಟು ಹೋದರು. ಇದರಿಂದ ಟ್ರಂಪ್ ಬೇಗಬೇಗನೇ ಕ್ಯೂನ ಮುಂಭಾಗಕ್ಕೆ ಬರು ವಂತಾಯಿತು. ಅಷ್ಟೊತ್ತಿಗೆ ಕ್ಯೂನಲ್ಲಿ ಟ್ರಂಪನ ಹೊರತಾಗಿ ಒಬ್ಬ ಮಾತ್ರ ಉಳಿದುಕೊಂಡನು. ಟ್ರಂಪ್‌ನನ್ನು ನೋಡಿದವನೇ ಆತನೂ ಅಲ್ಲಿಂದ ಹೊರಡಲು ರೆಡಿಯಾದನು. ಟ್ರಂಪ್ ಅವನನ್ನು ತಡೆದು, ‘ಏಯ್ ನಿಲ್ಲು. ಈ ಕ್ಯೂ ಯಾಕೆ ಇದ್ದದ್ದು ಮತ್ತು ನೀವೆಲ್ಲ ಯಾಕೆ ಇದನ್ನು ಬಿಟ್ಟು ಹೋಗುತ್ತಿರುವುದು?’ ಎಂದು ಕೇಳಿದನು.

ಆಗ ಆ ವ್ಯಕ್ತಿಯು, ‘ಇದು ಕೆನಡಾ ದೇಶಕ್ಕೆ ವಲಸೆ ಹೋಗಬೇಕೆಂದಿರುವವರಿಂದ ಅರ್ಜಿಗಳನ್ನು ಸ್ವೀಕರಿಸುವ ಕ್ಯೂ. ನೀನೂ ಒಬ್ಬ ಉಮೇದ್ವಾರನಾದರೆ ನನಗಿನ್ನು ಅದು ಬೇಕಾಗಿಲ್ಲ!’ ಎಂದನಂತೆ. ಅರ್ಥ ಆಯ್ತಲ್ಲ? ಕೊನೆಯಲ್ಲಿ, ಅ.ರಾ.ಮಿತ್ರರ ಪ್ರಬಂಧಭಾಗದಿಂದಲೇ ಉಪಸಂಹಾರ. ಇದೊಂದು ಮಾರ್ಮಿಕ ಕಹಿಸತ್ಯ. ‘ಸರಕಾರಿ ಕಚೇರಿ ಗಳಲ್ಲಿ ನಮ್ಮ ಅರ್ಜಿಗಳು ಕಾರಕೂನನ ಕಡತದಲ್ಲಿ ಎಲ್ಲೋ ಸೇರಿ ಕೊಂಡಿರುತ್ತವೆ. ಅವು ಕ್ಯೂ ಕ್ರಮದಲ್ಲಿ ವಿಲೇವಾರಿಯಾಗಬೇಕಾದರೆ ವರ್ಷಗಟ್ಟಲೆ ಕಾಯಬೇಕು. ಈ ಬಳಸುದಾರಿ ಸುಖದ್ದಲ್ಲ. ಇದಕ್ಕಿಂತ ನೇರವಾದ ದಾರಿ ಒಂದಿದೆ. ಅದು ಹಸನಾದ ದಾರಿ ಕೂಡ! ಸಂಬಂಧಪಟ್ಟ ಕಡತದ ಕಾರಕೂನನ ಹಸ್ತಪರೀಕ್ಷೆ ಮಾಡಿ. ರೆಫ್ರಿಜರೇಟರಿನಲ್ಲಿ ಇಟ್ಟ ಬೆಣ್ಣೆಯಂತೆ ಅವನ ಕೈ ಬಹಳ ತಣ್ಣಗೆ ಒರಟಾಗಿರುತ್ತದೆ. ಅದನ್ನು ನೋಟುಗಳ ಅಗ್ಗಿಷ್ಟಿಕೆಯ ಮೇಲೆ ಇಟ್ಟರೆ ಆ ಕೈ ಬೆಚ್ಚಗಾಗುತ್ತದೆ. ಆಗ ಎಂಥ ಮಾಯೆ! ನಿಮ್ಮ ಅರ್ಜಿ ಕ್ಯೂನಲ್ಲಿರುವ ಇತರ ಅರ್ಜಿಗಳನ್ನು ಕಂಡು ಹಗುರವಾಗಿ ನಕ್ಕು ಮುಂದೆ ಧಾವಿಸುತ್ತದೆ, ನಿಮ್ಮ ಕೆಲಸ ಆಗುತ್ತದೆ!

ಇಂದಿನ ಪ್ರಜಾಪ್ರಭುತ್ವದಲ್ಲಿ ಕ್ಯೂ ಇರುವುದು ಸಾರ್ವಜನಿಕರ ಕಣ್ಣು ಒರೆಸುವುದಕ್ಕೆ. ನೇಮಕಗಳು, ಚುನಾವಣೆಯ ಟಿಕೆಟ್ಟುಗಳು ಇವೆಲ್ಲ ಕ್ಯೂ ನಿಂತವರಿಗೆ
ದಕ್ಕುವುದೇ ಇಲ್ಲ. ಅಽಕಾರದ ರಕ್ಷೆ, ಅವರಿವರ ಪ್ರಭಾವಗಳನ್ನು ಪಡೆದವರು ಎಷ್ಟೇ ತಡವಾಗಿ ಬಂದರೂ ಬಹಳ ಬೇಗ ತಮ್ಮ ಕಾರ್ಯ ಸಾಧಿಸಿಕೊಂಡು ಹೋಗುತ್ತಾರೆ. ನಮ್ಮಂಥ ಬಡಪಾಯಿ ಗಳು ಕ್ಯೂನಲ್ಲಿ ಸರದಿ ಕಾಯುತ್ತ ನಿಲ್ಲುತ್ತೇವೆ. ಕಾಯುವಿಕೆಗಿಂತನ್ಯ ತಪವು ಇಲ್ಲ ಎಂದು ಹಿಡಿಶಾಪ ಹಾಕುತ್ತೇವೆ. ಅದೇ ನಮ್ಮ ಹಣೆಬರಹ’.

Leave a Reply

Your email address will not be published. Required fields are marked *

error: Content is protected !!