Monday, 20th May 2024

ರಾಹುಲ್ ಗಾಂಧಿ ರಾಯ್‌ಬರೇಲಿಗೆ ಹೋಗಿದ್ದೇಕೆ ?

ಸಂಗತ

ವಿಜಯ್ ದರಡಾ

ಮೋದಿಯಿಂದ ಹಿಡಿದು ಬಿಜೆಪಿಯ ಯಾವ ನಾಯಕರ ಚುನಾವಣಾ ಭಾಷಣವೂ ರಾಹುಲ್ ಗಾಂಧಿಯವರ ಹೆಸರು ಹೇಳದೆ ಪೂರ್ಣ ವಾಗುವುದಿಲ್ಲ. ರಾಹುಲ್‌ಗೆ ಅಂಥದ್ದೊಂದು ಶಕ್ತಿಯಿದೆ. ಆ ಕಾರಣಕ್ಕಾಗಿಯೇ ಅವರನ್ನು ದಡ್ಡ ಅಥವಾ ಕೆಲಸಕ್ಕೆ ಬಾರದವನು ಎಂದು ಬ್ರ್ಯಾಂಡ್ ಮಾಡಲು ಪ್ರಯತ್ನವೂ ನಡೆದಿದೆ.

ಈ ಸಲದ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕೇರಳದ ವಯನಾಡಿನ ಹೊರತಾಗಿ ಇನ್ನಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ವಿಷಯವು ಹುಟ್ಟಿಸಿದಷ್ಟು ಕುತೂಹಲ ಇನ್ನಾವ ನಾಯಕನ ಕ್ಷೇತ್ರದ ಬಗ್ಗೆಯೂ ಕಂಡುಬಂದಿರಲಿಲ್ಲ. ರಾಹುಲ್ ಅಮೇಠಿಯಿಂದ ಸ್ಪರ್ಧಿಸಬಹುದು ಎಂಬ ಚರ್ಚೆಗಳು ನಡೆದಿದ್ದವು. ಆ ಕ್ಷೇತ್ರದಲ್ಲೇ ೨೦೧೯ರಲ್ಲಿ ಅವರು ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಅದಕ್ಕೂ ಮುನ್ನ ೧೫ ವರ್ಷಗಳ ಕಾಲ ಅವರು ಅದೇ ಕ್ಷೇತ್ರವನ್ನು ಸಂಸದರಾಗಿ ಪ್ರತಿನಿಧಿಸಿದ್ದರು.

ಉತ್ತರ ಪ್ರದೇಶದ ಅಮೇಠಿಯ ಜತೆಗೆ ಗಾಂಧಿ ಪರಿವಾರದ ನಂಟು ಬಹಳ ಹಳೆಯದು ಮತ್ತು ಅಷ್ಟೇ ಗಾಢವಾದುದು. ೧೯೮೦ರಲ್ಲಿ ಸಂಜಯ್ ಗಾಂಧಿ
ಅಮೇಠಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ ರಾಜೀವ್ ಗಾಂಧಿ ಅದೇ ಕ್ಷೇತ್ರದಿಂದ ಮೂರು ಬಾರಿ ಚುನಾಯಿತರಾಗಿದ್ದರು. ಬಳಿಕ ಸೋನಿ ಯಾ ಗಾಂಧಿ ಒಮ್ಮೆ ಹಾಗೂ ರಾಹುಲ್ ಗಾಂಧಿ ಮೂರು ಬಾರಿ ಅಲ್ಲಿಂದ ಸಂಸತ್ತನ್ನು ಪ್ರವೇಶಿಸಿದ್ದರು. ಇಷ್ಟೆಲ್ಲ ಗಾಢವಾದ ನಂಟಿರುವ ಕ್ಷೇತ್ರವನ್ನು ಈ ಬಾರಿ ರಾಹುಲ್ ಗಾಂಧಿ ಏಕೆ ತೊರೆದರು ಎಂಬುದಕ್ಕೆ ಕಾರಣವಿನ್ನೂ ಸ್ಪಷ್ಟವಾಗಿಲ್ಲ.

ಬಹುಶಃ ಅವರ ಸಲಹೆಗಾರರು ಈ ಬಾರಿ ಸೋಲಿನ ಭೀತಿಯಿಂದಾಗಿ ಅಮೇಠಿಯಿಂದ ಸ್ಪರ್ಧಿಸುವುದು ಬೇಡ ಎಂದು ಹೇಳಿರಬಹುದು. ಆದರೂ
ನನ್ನ ಪ್ರಕಾರ ಅವರು ಅಮೇಠಿಯಿಂದಲೇ ಸ್ಪರ್ಧಿಸಬೇಕಿತ್ತು. ಏಕೆಂದರೆ ಅಲ್ಲೂ ಅವರು ಈ ಸಲ ಗೆಲ್ಲುತ್ತಾರೆಂಬ ಅಭಿಪ್ರಾಯವೇ ಇತ್ತು. ಅಮೇಠಿಯಿಂದ ಕಾಂಗ್ರೆಸ್ ಪಕ್ಷ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಅವರು ಗಾಂಧಿ ಪರಿವಾರದ ಪರಮಾಪ್ತ ವ್ಯಕ್ತಿ. ವಾಸ್ತವವಾಗಿ ಪ್ರಿಯಾಂಕಾ ಗಾಂಧಿ ಅಮೇಠಿಯಿಂದ ಸ್ಪರ್ಧಿಸಬಹುದು ಎಂಬ ನಿರೀಕ್ಷೆ ತುಂಬಾ ಜನರಲ್ಲಿತ್ತು.

ಆದರೆ ಅವರೇ ಸ್ವತಃ ತಾನು ಕಿಶೋರಿ ಲಾಲ್ ಶರ್ಮಾ ಪರವಾಗಿ ಪ್ರಚಾರ ಮಾಡುತ್ತೇನೆಂದು ಘೋಷಿಸಿದರು. ನನ್ನ ಅಭಿಪ್ರಾಯದಲ್ಲಿ, ರಾಹುಲ್ ಗಾಂಧಿ
ಸ್ಪರ್ಧಿಸುವುದಿಲ್ಲ ಎಂದಾದ ಮೇಲೆ ಪ್ರಿಯಾಂಕಾ ಗಾಂಧಿಯಾದರೂ ಅಲ್ಲಿಂದ ಸ್ಪರ್ಧಿಸಬೇಕಿತ್ತು. ಆಗ ಗೆಲ್ಲುವ ಸಾಧ್ಯತೆ ಜಾಸ್ತಿಯಿರುತ್ತಿತ್ತು. ಈಗ ಅವರೂ
ಅಮೇಠಿಯಿಂದ ಸ್ಪರ್ಧಿಸುತ್ತಿಲ್ಲ ಮತ್ತು ರಾಹುಲ್ ಗಾಂಧಿ ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದಾರೆ. ರಾಯ್‌ಬರೇಲಿ ಕೂಡ ಗಾಂಧಿ ಪರಿವಾರದ ಇನ್ನೊಂದು ಸಾಂಪ್ರದಾಯಿಕ ಭದ್ರಕೋಟೆ. ಅದರ ಮೇಲೆ ರಾಹುಲ್ ಹೆಚ್ಚು ವಿಶ್ವಾಸ ಹೊಂದಿದ್ದಾರೆ. ರಾಯ್ ಬರೇಲಿಯ ಜತೆಗೆ ಗಾಂಧಿ-ನೆಹರು ಪರಿವಾರದ ಐತಿಹಾಸಿಕ ಸಂಬಂಧ ತುಂಬಾ ಆಳವಾಗಿದೆ.

ದೇಶದ ಮೊದಲ ಮತ್ತು ಎರಡನೇ ಲೋಕಸಭಾ ಚುನಾವಣೆಯಲ್ಲಿ ಫಿರೋಜ್ ಗಾಂಧಿಯವರು ರಾಯ್‌ಬರೇಲಿಯಿಂದ ಆಯ್ಕೆಯಾಗಿದ್ದರು. ನಂತರ ಇಂದಿರಾ ಗಾಂಧಿ ಆ ಕ್ಷೇತ್ರದಿಂದ ಮೂರು ಬಾರಿ ಚುನಾಯಿತರಾಗಿದ್ದರು. ಸೋನಿಯಾ ಗಾಂಽ ೨೦೦೪ರಿಂದ ಸತತ ನಾಲ್ಕು ಬಾರಿ ರಾಯ್‌ಬರೇಲಿಯಿಂದ
ಆಯ್ಕೆಯಾಗಿದ್ದಾರೆ. ರಾಹುಲ್ ಗಾಂಧಿ ಭಾರಿ ಶಕ್ತಿಪ್ರದರ್ಶನದೊಂದಿಗೆ ಬೃಹತ್ ಅಭಿಮಾನಿ ಬಳಗವನ್ನು ಕೊಂಡೊಯ್ದು ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಸಹಜವಾಗಿಯೇ ಅವರನ್ನು ಎಲ್ಲರೂ ಹತ್ತಿರದಿಂದ ಗಮನಿಸುತ್ತಿರುತ್ತಾರೆ. ಬಿಜೆಪಿ ನಾಯಕರೊಬ್ಬರು ನನ್ನ ಬಳಿ ಈ ಬಗ್ಗೆ ವ್ಯಂಗ್ಯವಾಗಿ ಪ್ರಶ್ನೆಯೊಂದನ್ನು ಕೇಳಿದ್ದರು. ‘ಜಾರಿ ನಿರ್ದೇಶನಾಲಯದವರು ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿಕೊಂಡ ಬಳಿಕ ನಮ್ಮಲ್ಲಿ ರೈಲ್ವೆ ಟಿಕೆಟ್ ಖರೀದಿಸುವು ದಕ್ಕೂ ಹಣವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ ರಾಯ್‌ಬರೇಲಿಗೆ ಅವರು ಅಶೋಕ್ ಗೆಹ್ಲೋಟ್ ಮತ್ತು ಕೆ.ಸಿ.ವೇಣು ಗೋಪಾಲ್‌ರಂಥ ನಾಯಕರ ಜತೆಗೆ ಖಾಸಗಿ ವಿಮಾನದಲ್ಲಿ ಬಂದರು. ಅದೇ ರೀತಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧ ಹಾಗೂ ರಾಬರ್ಟ್ ವಾದ್ರಾ ಎರಡನೇ ಖಾಸಗಿ ವಿಮಾನದಲ್ಲಿ ಬಂದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೂರನೇ ವಿಮಾನದಲ್ಲಿ ಬಂದರು. ರೈಲ್ವೆ ಟಿಕೆಟ್ ಖರೀದಿಸುವು ದಕ್ಕೂ ಹಣವಿಲ್ಲದ ರಾಜಕೀಯ ಪಕ್ಷಕ್ಕೆ ಮೂರು ಮೂರು ಖಾಸಗಿ ವಿಮಾನದ ಖರ್ಚನ್ನು ಭರಿಸಲು ಹೇಗೆ ಸಾಧ್ಯ?’ ಎಂಬುದು ಅವರ ಪ್ರಶ್ನೆಯಾಗಿತ್ತು.

ಅವರೇ ಇನ್ನೂ ಒಂದು ಸಂಗತಿಯನ್ನು ಗಮನಕ್ಕೆ ತಂದರು. ಅಮೇಠಿಯಲ್ಲಿ ಕಿಶೋರಿ ಲಾಲ್ ಶರ್ಮಾ ನಾಮಪತ್ರ ಸಲ್ಲಿಸುವಾಗ ಈ ಯಾವ ನಾಯಕರೂ ಅವರ ಜತೆಗಿರಲಿಲ್ಲ! ಬಿಜೆಪಿಯವರು ಯಾವಾಗಲೂ ಇಂಥ ಅವಕಾಶಗಳನ್ನು ಬಿಡುವುದಿಲ್ಲ ನೋಡಿ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ವಿಷಯದಲ್ಲಿ ಟೀಕಿಸಲು ಏನು ಸಿಕ್ಕರೂ ಅವರು ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಹುಲ್ ಗಾಂಧಿ
ವಯನಾಡಿನಲ್ಲಿ ಸೋಲುತ್ತೇನೆಂಬುದು ಖಾತ್ರಿಯಾದ ಮೇಲೆ ಅಲ್ಲಿಂದ ಪಲಾಯನ ಮಾಡಿದ್ದಾರೆ ಎಂದೂ ವ್ಯಂಗ್ಯವಾಡಿದ್ದಾರೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಾವು ವಯನಾಡಿನಿಂದ ಈ ಬಾರಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದೇವೆಂದೂ, ಅಲ್ಲಿ ರಾಹುಲ್
ಗಾಂಧಿ ಗೆಲ್ಲುವುದು ಕಷ್ಟವಿದೆಯೆಂದೂ ಹೇಳಿದ್ದಾರೆ. ಆದರೆ, ವರದಿಗಳು ರಾಹುಲ್ ಗಾಂಧಿಯೇ ವಯನಾಡಿನಲ್ಲಿ ಗೆಲ್ಲುತ್ತಾರೆಂದು ಹೇಳುತ್ತಿವೆ. ಹೀಗಾಗಿ ಈಗ ಏಳುವ ಪ್ರಶ್ನೆ ಏನೆಂದರೆ, ರಾಹುಲ್ ಗಾಂಧಿ ಎರಡೂ ಕಡೆ ಗೆದ್ದರೆ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರೆ? ನನ್ನ ಪ್ರಕಾರ ಅವರು ರಾಯ್‌ ಬರೇಲಿಯನ್ನೇ ಉಳಿಸಿಕೊಳ್ಳುತ್ತಾರೆ. ಏಕೆಂದರೆ ಅದು ಸಾಂಪ್ರದಾಯಿಕವಾಗಿ ಅವರ ಕುಟುಂಬದ ಭದ್ರಕೋಟೆ. ಉತ್ತರ ಪ್ರದೇಶದಲ್ಲಿ ಗಟ್ಟಿಯಾಗಿ ಬೇರೂರದಿದ್ದರೆ ದೇಶವನ್ನು ಆಳುವ ಕನಸು ಕಾಣುವುದೇ ವ್ಯರ್ಥ ಎಂಬುದು ಅವರಿಗೆ ಗೊತ್ತಿದೆ.

ಭಾರತದ ಇಂದಿನ ರಾಜಕೀಯ ಸನ್ನಿವೇಶದಲ್ಲಿ ರಾಹುಲ್ ಗಾಂಧಿಯವರ ಪ್ರಭಾವ ಸಾಕಷ್ಟಿರುವುದನ್ನು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ. ಪಕ್ಷದ ಅಧ್ಯಕ್ಷ
ಸ್ಥಾನವನ್ನು ಹೊಂದಿಲ್ಲದೆ ಇದ್ದರೂ ಅವರಿಲ್ಲದೆ ಕಾಂಗ್ರೆಸ್ ಪಕ್ಷ ಕೆಲಸ ಮಾಡಲು ಸಾಧ್ಯವಿಲ್ಲ. ಇದನ್ನೇ ಆಡಳಿತಾರೂಢ ಪಕ್ಷವಾದ ಭಾರತೀಯ ಜನತಾ
ಪಕ್ಷಕ್ಕೂ ಹೇಳಬಹುದು. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಬಿಜೆಪಿಯ ಯಾವುದೇ ಪ್ರಮುಖ ನಾಯಕರು ಕೂಡ ರಾಹುಲ್ ಗಾಂಧಿಯವರ ಹೆಸರು ಹೇಳದೆ ಪ್ರಚಾರ ಭಾಷಣ ಮುಗಿಸಲು ಸಾಧ್ಯವಿಲ್ಲ.

ಅವರನ್ನು ‘ಪಪ್ಪು’ ಎಂದು ಬ್ರ್ಯಾಂಡ್ ಮಾಡಲು ನಿರಂತರವಾಗಿ ಪ್ರಯತ್ನ ನಡೆದಿದೆ. ನನಗೇನು ಅನ್ನಿಸುತ್ತದೆ ಗೊತ್ತಾ? ಒಬ್ಬ ವ್ಯಕ್ತಿ ನಿಮ್ಮ ಪ್ರಕಾರ ಅಷ್ಟೊಂದು ನಿಷ್ಪ್ರಯೋಜಕನಾಗಿದ್ದರೆ ಏಕೆ ಪದೇಪದೆ ಅವನ ಹೆಸರು ಹೇಳುತ್ತೀರಿ? ಏಕೆ ಆತನನ್ನು ಕಡೆಗಣಿಸಿ ಸುಮ್ಮನಿರಲು ನಿಮಗೆ ಸಾಧ್ಯವಿಲ್ಲ? ಏಕೆಂದರೆ ಅವರು ರಾಹುಲ್ ಗಾಂಧಿ. ಅವರನ್ನು ಕಡೆಗಣಿಸಲು ಬಿಜೆಪಿಗೆ ಸಾಧ್ಯವೇ ಇಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧಿ ಕುಟುಂಬ ನೀಡಿದ ಕೊಡುಗೆ,
ನಂತರ ದೇಶವನ್ನು ನಿರ್ಮಿಸಲು ಆ ಕುಟುಂಬ ಪಟ್ಟ ಪರಿಶ್ರಮ ಹಾಗೂ ಅದಕ್ಕಾಗಿ ಮಾಡಿದ ದೊಡ್ಡ ತ್ಯಾಗವನ್ನು ಹೇಗೆ ಕಡೆಗಣಿಸಲು ಸಾಧ್ಯ! ಎಲ್.ಕೆ.ಆಡ್ವಾಣಿ ಅವರು ಒಮ್ಮೆ ನನ್ನ ಬಳಿ, ‘ನಮಗೆ ಕಾಂಗ್ರೆಸ್ ಪಕ್ಷದ ಜತೆಗೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ. ಆದರೆ ಅವರು ನಮ್ಮ ವೈರಿಗಳಲ್ಲ.
ಅವರನ್ನು ನಾವು ಸಂಪೂರ್ಣ ಕಡೆಗಣಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.

ತುಂಬಾ ಜನರು ರಾಹುಲ್ ಗಾಂಧಿಯವರ ವೇಷಭೂಷಣ ಹಾಗೂ ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುವ ರೀತಿಯ ಬಗ್ಗೆಯೂ ಆಡಿಕೊಳ್ಳುತ್ತಾರೆ. ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸಾಕಷ್ಟು ಆಧುನಿಕ ವ್ಯಕ್ತಿಗಳಾಗಿದ್ದರೂ ರಾಜಕೀಯಕ್ಕೆ ಬಂದ ಮೇಲೆ ಅವರು ಖಾದಿ ಧರಿಸಲು ಶುರು ಮಾಡಿದರು. ಸೋನಿಯಾ ಗಾಂಧಿ ಸೀರೆ ಉಡುವುದಕ್ಕೂ ಆರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೆ ಅವರನ್ನು ಆಧುನಿಕ ಉಡುಗೆಯಲ್ಲಿ ಯಾರೂ ನೋಡಿಲ್ಲ.

ಆದರೆ ರಾಹುಲ್ ಗಾಂಧಿ ತಮ್ಮ ಉಡುಗೆ ತೊಡುಗೆಯ ಆಯ್ಕೆಯಲ್ಲಿ ತುಂಬಾ ಆಧುನಿಕರಾಗಿದ್ದಾರೆ. ಅವರು ಅಪ್ಪಟ ಯುವಕರಂತೆ ಬಟ್ಟೆ ಧರಿಸುತ್ತಾರೆ ಎಂದು ಕೂಡ ಕೆಲವರು ಆಕ್ಷೇಪಿಸುತ್ತಾರೆ. ಬಹುಶಃ ರಾಹುಲ್ ತಮ್ಮ ಕುಟುಂಬದ ಸಂಪ್ರದಾಯವನ್ನು ಮುರಿದು ತಮ್ಮನ್ನು ತಾವು ವಿಶಿಷ್ಟವಾಗಿ
ಗುರುತಿಸಿಕೊಳ್ಳುವುದಕ್ಕೆಂದೇ ಇಂಥ ಉಡುಪು ಧರಿಸಬಹುದು. ಆದರೆ ರಾಜಕೀಯದಲ್ಲಿ ವೇಷಭೂಷಣ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಕಡೆಗಣಿಸಲಾಗದು. ರಾಹುಲ್ ಗಾಂಧಿಯವರ ಬಗ್ಗೆ ಕೇಳಿಬರುವ ಇನ್ನೊಂದು ಮಾತೆಂದರೆ, ಒಂದು ಕಾಲದಲ್ಲಿ ಅವರ ಆತ್ಮೀಯ
ಒಡನಾಡಿಗಳಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್, ಮಿಲಿಂದ್ ದೇವ್ರಾ ಹಾಗೂ ಕೆ.ಪಿ.ಸಿಂಗ್‌ರಂಥ ಯುವನಾಯಕರು ಅವರನ್ನೀಗ ಬಿಟ್ಟುಹೋಗಿದ್ದಾರೆ.

ಅವರು ರಾಹುಲ್ ಗಾಂಧಿಯವರ ಗುಣವನ್ನು ನೋಡಿ ಬಿಟ್ಟುಹೋದರೋ ಅಥವಾ ಇವರ ಜತೆಗೆ ಇದ್ದಾಗ ಅವರನ್ನು ಅಭದ್ರತೆಯ ಭಾವ ಕಾಡು ತ್ತಿತ್ತೋ? ಅಥವಾ ರಾಹುಲ್ ಗಾಂಧಿಯ ಸುತ್ತಮುತ್ತಲಿನ ವ್ಯವಸ್ಥೆಯು ಅವರಿಗೆಲ್ಲ ಉಸಿರುಗಟ್ಟಿಸುತ್ತಿತ್ತೋ? ಅವರೇ ಹೇಳಬೇಕು. ಹಾಗೆ ನೋಡಿದರೆ, ಕಾಂಗ್ರೆಸ್ ಪಕ್ಷವನ್ನು ಸಾಕಷ್ಟು ನಾಯಕರು ತೊರೆದು ಹೋಗಿದ್ದಾರೆ. ಪಕ್ಷದ ಪರಮೋಚ್ಚ ನಾಯಕಿ ಸೋನಿಯಾ ಗಾಂಧಿಯವರಿಗೆ ಆರೋಗ್ಯ ಚೆನ್ನಾಗಿಲ್ಲ. ಆದರೂ ರಾಹುಲ್ ಮತ್ತು ಪ್ರಿಯಾಂಕಾ ಸಾಕಷ್ಟು ಕೆಚ್ಚೆದೆಯಿಂದ ಬಿಜೆಪಿ ವಿರುದ್ಧ ಹೋರಾಡುತ್ತಿದ್ದಾರೆ.

ನರೇಂದ್ರ ಮೋದಿ ನೀಡುತ್ತಿರುವ ಪೈಪೋಟಿಯೇನು ಸಣ್ಣದೇ? ಬಿಜೆಪಿಗೆ ಮೋದಿ ನಾಯಕತ್ವವೇ ದೊಡ್ಡ ಶಕ್ತಿ. ಅವರ ಜತೆಗೆ ಅಮಿತ್ ಶಾ ಹಾಗೂ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರಂಥ ನುರಿತ ಆಟಗಾರರಿದ್ದಾರೆ. ಕಾಂಗ್ರೆಸಿಗರು ಬಿಲ್ಲಿಗೆ ಬಾಣ ಹೂಡಿ ಗುರಿಯಿಡುವುದಕ್ಕೂ ಮೊದಲೇ ಮೋದಿ, ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥರು ಬಿಟ್ಟ ಬಾಣ ಗುರಿಯನ್ನು ತಲುಪಿರುತ್ತದೆ! ಆದರೆ, ರಾಹುಲ್ ಗಾಂಧಿಯವರಲ್ಲಿ ಬದ್ಧತೆಯಿದೆ. ಹೋರಾಟದ ಮನೋಭಾವವಿದೆ. ಗೆಲ್ಲಬೇಕು, ಗುರಿ ಮುಟ್ಟಬೇಕು ಎಂಬ ಛಲವೂ ಇದೆ. ಆದರೆ ಅವರ ಜತೆಗೆ ಒಳ್ಳೆಯ ಹೋರಾಟಗಾರರ ತಂಡವಿಲ್ಲ. ನಾನು ತುಂಬಾ ಸಲ ಇದನ್ನು ಹೇಳಿದ್ದೇನೆ.

ಕಾಂಗ್ರೆಸ್ ಪಕ್ಷವನ್ನು ಪುನರ್‌ರಚನೆ ಮಾಡದಿದ್ದರೆ ಪ್ರಬಲವಾದ ತಂಡ ಹಾಗೂ ಹೋರಾಟಗಾರರ ಪಡೆಯನ್ನು ಕಟ್ಟಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇಂದು ಯಾವ್ಯಾವ ನಾಯಕರು ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೋ ಅವರೆಲ್ಲ ಪಕ್ಷದ ಬಲದಿಂದಾಗಿ ಗೆಲ್ಲುತ್ತಿಲ್ಲ, ಬದಲಿಗೆ ಸ್ವಂತ ಸಾಮರ್ಥ್ಯ ಹಾಗೂ ವರ್ಚಸ್ಸಿನಿಂದಾಗಿ ಗೆಲ್ಲುತ್ತಿದ್ದಾರೆ. ಹೀಗಾಗಿ ನಾಯಕರ ವೈಯಕ್ತಿಕ ವರ್ಚಸ್ಸಿನ ಬದಲು ಸಾಂಕ ಶಕ್ತಿಯಿಂದ ಗೆಲ್ಲುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮರುಸಂಘಟನೆ ಮಾಡುವ ಅಗತ್ಯವಿದೆ. ಆದರೆ ಸದ್ಯಕ್ಕಂತೂ ಅದು ಸುಲಭವಿಲ್ಲ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

error: Content is protected !!