Saturday, 18th May 2024

ಸೋನಿಯಾ ರಾಜಕಾರಣದ ಆರಂಭಿಕ ದಿನಗಳು ಹೇಗಿದ್ದವು ?

ಇದೇ ಅಂತರಂಗ ಸುದ್ದಿ

vbhat@me.com

ರಾಜೀವ್ ಗಾಂಧಿ ಹತ್ಯೆ ಬಳಿಕ, ಸೋನಿಯಾ ಗಾಂಧಿ ಮೌನಕ್ಕೆ ಜಾರಿದ್ದರು. ಆದರೂ, ಅವರು ಸಕ್ರಿಯ ರಾಜಕಾರಣಕ್ಕೆ ಬರುತ್ತಾರಾ ಎಂಬ ಬಗ್ಗೆ ಪತ್ರಿಕೆಗಳಲ್ಲಿ ಆಗಾಗ ವರದಿಗಳು ಪ್ರಕಟವಾಗುತ್ತಿದ್ದವು. ಯುವ ಕಾಂಗ್ರೆಸ್ ಕಾರ್ಯಕರ್ತರು ಆಗಾಗ ಅವರ ನಿವಾಸದ ಮುಂದೆ ಜಮಾಯಿಸಿ, ರಾಜಕಾರಣಕ್ಕೆ ಬರುವಂತೆ ಕೂಗುತ್ತಿದ್ದರು. ನೆಹರು-ಗಾಂಧಿ ಕುಟುಂಬದವರ ಸಹಾಯವಿಲ್ಲದೇ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವುದು ಸಾಧ್ಯವಿಲ್ಲ ಎಂದು ಅನೇಕರು ನಂಬಿದ್ದರು. ಸಕ್ರಿಯ ರಾಜಕಾರಣ ಪ್ರವೇಶವನ್ನು ಕುರಿತ ಪ್ರಶ್ನೆಗೆ ಸೋನಿಯಾ, ’ಐಠಿ ಜಿo m ಠಿಟ ಠಿeಛಿಞ ಠಿಟ bಛ್ಚಿಜಿbಛಿ’ ಎಂದು ಪ್ರತಿಕ್ರಿಯಿಸಿ ಜಾರಿಕೊಳ್ಳುತ್ತಿದ್ದರು.

ಈ ಮಧ್ಯೆ ಅವರು ರಾಜೀವ್ ಗಾಂಧಿ ಫೌಂಡೇಶನ್ ಸ್ಥಾಪಿಸಿ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಸಮಾವೇಶಗಳನ್ನು ಆಯೋಜಿಸುತ್ತಿದ್ದರು. ರಾಜೀವ್ ಹತ್ಯೆಯ ಬಳಿಕ, ನೆಹರು ಸ್ಮಾರಕ ನಿಧಿ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟಿನ ಮುಖ್ಯಸ್ಥರೂ ಆಗಿದ್ದ ಸೋನಿಯಾ, ಈ ಕಾರ್ಯಕ್ರಮಗಳಿಗೆ ಆ ಸಂಸ್ಥೆಗಳ ಸಹಯೋಗವನ್ನು ಪಡೆಯುತ್ತಿದ್ದರು. ೧೯೯೫ರ ಆರಂಭದಲ್ಲಿ ತಾವು ರಾಜಕೀಯಕ್ಕೆ ಬರುವ ಸಣ್ಣ ಸುಳಿವನ್ನು ಸೋನಿಯಾ ನೀಡಿದರು.
ರಾಜೀವ್ ಪ್ರತಿನಿಧಿಸಿದ್ದ ಅಮೇಠಿ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ತಮ್ಮ ಪತಿಯ ಹತ್ಯೆಯ ವಿಚಾರಣೆ ವಿಳಂಬವಾಗಿ ನಡೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ದೊಡ್ಡ ಸುದ್ದಿಯಾಯಿತು.

ಇದು ಆಗ ಅಧಿಕಾರದಲ್ಲಿದ್ದ ಪಿ.ವಿ.ನರಸಿಂಹರಾಯರ ಅಧಿಕಾರ ವೈಖರಿಗೆ ಸೋನಿಯಾ ಅವರ ನೇರ ಟೀಕೆ ಎಂಬಂತೆ ಪತ್ರಿಕೆಗಳು ವಿಶ್ಲೇಷಿಸಿದವು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ದೊಡ್ಡ ಪಾತ್ರ ವಹಿಸಲು ವೇದಿಕೆ ಸಜ್ಜುಗೊಳಿಸುತ್ತಿರಬಹುದು ಎಂದೂ ಭಾವಿಸಲಾಯಿತು.
೧೯೯೭ರ ಮೇ ೮. ಆ ದಿನ ಸೋನಿಯಾ ಹಠಾತ್ತನೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದರು. ಅಲ್ಲಿ ತನಕ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಅದು ತೆರೆ ಎಳೆದುಬಿಟ್ಟಿತು. ಕ್ರಮೇಣ ಸೋನಿಯಾ ಅವರ ನಿವಾಸ ಪಕ್ಷದ ನಾಯಕರ ಕೂಡುತಾಣವಾಯಿತು. ಸೋನಿಯಾ ಅವರನ್ನು ಭೇಟಿ ಮಾಡಲು
ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸಲಾರಂಭಿಸಿತು. ಅವರು ಪ್ರಾಥಮಿಕ ಸದಸ್ಯರಾಗಿ ಒಂಬತ್ತು ತಿಂಗಳು ತುಂಬುವ ಹೊತ್ತಿಗೆ, ಪಕ್ಷದಲ್ಲಿ ಅದೆಂಥ ವಾತಾವರಣ ನಿರ್ಮಾಣವಾಯಿತೆಂದರೆ, ೧೯೯೮ರ ಫೆಬ್ರವರಿಯಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷರಾದರು.

ಅಲ್ಲಿ ತನಕ ಪಕ್ಷದ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿ ಅವರನ್ನು ಪಕ್ಷದ ಕಚೇರಿಯಲ್ಲಿ ಥಳಿಸಿ, ಪಂಚೆ ಬಿಚ್ಚಿ ಅಟ್ಟಾಡಿಸಿಕೊಂಡು ಹೋಗಲಾಯಿತು. ಅಷ್ಟಾದರೂ ಸೋನಿಯಾಗೆ ರಾಜಕೀಯದ ಪಟ್ಟುಗಳು ಕರಗತವಾಗಿರಲಿಲ್ಲ. ದಿಲ್ಲಿ ರಾಜಕಾರಣದ ವರಸೆಗಳಿಗೆ ಅವರು ತೆರೆದುಕೊಂಡಿರಲಿಲ್ಲ. ತಾವು ತಮ್ಮ ಜೀವನದಲ್ಲಿ ಪಕ್ಷದ ಅಧ್ಯಕ್ಷೆಯಾಗಬಹುದು ಎಂದು ಅವರು ನಿರೀಕ್ಷಿಸಿರಲಿಲ್ಲ. ಹೀಗಾಗಿ ಅವರು ಮಾನಸಿಕವಾಗಿಯೂ ಆ ಸ್ಥಾನವನ್ನು ಅಲಂಕರಿಸಲು ಸನ್ನದ್ಧರಾಗಿರಲಿಲ್ಲ.

ಸೋನಿಯಾ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಪಕ್ಷದ ವಿದ್ಯಮಾನಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಸಹ ಅವರಿಗೆ ಗೊತ್ತಾಗುತ್ತಿ ರಲಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಬರುತ್ತಿದ್ದ ಪಕ್ಷದ ಹಿರಿಯ ನಾಯಕರ ಗುರುತು-ಪರಿಚಯ ಸಹ ಅವರಿಗಿರಲಿಲ್ಲ. ಅವರ ಹಿನ್ನೆಲೆ, ರಾಜಕೀಯ ಅನುಭವ, ಜಾತಿ, ಪ್ರಭಾವಗಳು ಅವರಿಗೆ ತಿಳಿಯುತ್ತಿರಲಿಲ್ಲ. ಹೀಗಾಗಿ ಅವರಿಗೆ ಯಾರೊಂದಿಗೂ ಬೆರೆಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗುವ
ಮುಜುಗರವನ್ನು ತಪ್ಪಿಸಲು ಅವರ ಸನಿಹದಲ್ಲಿರುವವರು, ಬೇರೆಯವರ ಜತೆ ಬೆರೆಯಲು ನಿರ್ಬಂಧ ವಿಧಿಸುವುದು ಅನಿವಾರ್ಯವಾಯಿತು. ಸೋನಿಯಾ ಸುತ್ತ ಕೋಟೆ ಮತ್ತು ಗೋಡೆಗಳು ತನ್ನಷ್ಟಕ್ಕೆ ನಿರ್ಮಾಣವಾದವು.

ಪತ್ರಕರ್ತೆ ನೀರಜಾ ಚೌಧುರಿ ಅವರು ತಮ್ಮ ಕೃತಿಯೊಂದರಲ್ಲಿ, ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷೆಯಾದ ಆರಂಭದಲ್ಲಿ, ರಾಜ್ಯಸಭೆಯ ಉಪ ಸಭಾಪತಿ ನಜ್ಮಾ ಹೆಪ್ತುಲ್ಲಾ ತಮ್ಮ ನಿವಾಸದಲ್ಲಿ ಏರ್ಪಡಿಸಿದ ಚಹಾಕೂಟದ ಪ್ರಸಂಗವನ್ನು ಪ್ರಸ್ತಾಪಿಸಿದ್ದಾರೆ. ಸೋನಿಯಾ ಗಾಂಧಿಯವರು ಅನೌಪಚಾರಿಕವಾಗಿ ಕೆಲವು ಪ್ರಮುಖ ಪತ್ರಕರ್ತರನ್ನು ಭೇಟಿ ಮಾಡಿ, ಮಾತಾಡಲಿ ಎಂಬುದು ಆ ಚಹಾಕೂಟದ ಉದ್ದೇಶವಾಗಿತ್ತು. ಮೊದಲ ಬಾರಿಗೆ ಅವರು ಹಿರಿಯ ಪತ್ರಕರ್ತರನ್ನು ಏಕಾಂಗಿಯಾಗಿ ಎದುರಿಸಿದ್ದರು. ಒಂದು ಕೈಯಲ್ಲಿ ಬ್ಲ್ಯಾಕ್ ಟೀ ಇತ್ತು. ಅವರ ಕೈ ಅಕ್ಷರಶಃ ನಡುಗುತ್ತಿತ್ತು. ಮುಖ
ಕೆಂಪಾಗಿತ್ತು. ಮಾತುಗಳು ಸ್ಪಷ್ಟವಾಗಿರಲಿಲ್ಲ. ತುಟಿಗಳು ಅದುರುತ್ತಿದ್ದವು. ತಮ್ಮ ಸುತ್ತಲೂ ಕುಳಿತ ಪತ್ರಕರ್ತರ ಪ್ರಶ್ನೆಗಳಿಗೆ ಅವರು ತುಸು ನರ್ವಸ್ ಆಗಿದ್ದರು. ಅವರ ಸನಿಹ ಕುಳಿತ ಕಾಂಗ್ರೆಸ್ ನಾಯಕರೂ ನರ್ವಸ್ ಆಗಿದ್ದರು. ತಮ್ಮ ಪಕ್ಷದ ಅಧ್ಯಕ್ಷೆ ಹೇಳಿದ ಮಾತು ಯಡವಟ್ಟಾಗಿ ಅವಾಂತರಗಳಾದರೆ ಎಂಬ ಆತಂಕ ಅವರ ಮುಖದಲ್ಲಿ ಹೆಪ್ಪುಗಟ್ಟಿತ್ತು.

ಅದಾಗಿ ಒಂದು ವರ್ಷದ ಬಳಿಕ ಲೋಕಸಭಾ ಚುನಾವಣಾ ಘೋಷಣೆಯಾಯಿತು. ಸೋನಿಯಾ ಅವರು ಉತ್ತರ ಪ್ರದೇಶದ ಅಮೇಠಿ ಮತ್ತು ಕರ್ನಾಟಕದ ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸಿದರು. ದಿಲ್ಲಿಯಿಂದ ಬಳ್ಳಾರಿಗೆ ವಿಮಾನದಲ್ಲಿ ಹೋಗುವಾಗ, ಸೋನಿಯಾ ಆತ್ಮವಿಶ್ವಾಸದಿಂದ ಪತ್ರಕರ್ತರ ಜತೆ ಮಾತಾಡುತ್ತಿದ್ದರು. ಬಹಳ ಕಮ್ಮಿ ಸಮಯದಲ್ಲಿ ತಮ್ಮ ಅಳುಕು, ಸಂಕೋಚಗಳನ್ನು ನಿವಾರಿಸಿಕೊಂಡು, ಭರವಸೆಯ ದನಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಅವರು ಎರಡೂ ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದು ಬೇರೆ ಮಾತು.

ಸೋನಿಯಾ ಗಾಂಧಿಯವರಿಗೆ ಸಾರ್ವಜನಿಕ ಭಾಷಣ ಅಷ್ಟಾಗಿ ಒಗ್ಗಿದ ಕಲೆಯಲ್ಲ. ತಾವು ಮಾಡಬೇಕಾದ ಭಾಷಣವನ್ನು ಅವರು ವಿಮಾನದಲ್ಲಿ ಗಟ್ಟಿಯಾದ ದನಿಯಲ್ಲಿ ಓದುತ್ತಿದ್ದರು. ಇಂಗ್ಲಿಷ್ ಅಕ್ಷರಗಳಲ್ಲಿ ಹಿಂದಿ ಭಾಷಣವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಕಾಂಗ್ರೆಸ್ ನಾಯಕ ನಟವರ ಸಿಂಗ್ ಈ ಭಾಷಣವನ್ನು ಸಿದ್ಧಪಡಿಸಿ ಕೊಡುತ್ತಿದ್ದರು. ದಪ್ಪಕ್ಷರಗಳಲ್ಲಿರುತ್ತಿದ್ದ ಆ ಭಾಷಣವನ್ನು ಅವರು ಒಂದೆರಡು ಸಲ ಓದಿ, ಅದಕ್ಕೆ ತಕ್ಕದಾದ ರೀತಿಯಲ್ಲಿ ಕೈಗಳ ಹಾವ-ಭಾವವನ್ನೂ ರೂಢಿಸಿಕೊಳ್ಳುತ್ತಿದ್ದರು. ಒಂದೆರಡು ಸಲ ಭಾಷಣವನ್ನು ಓದದಿದ್ದರೆ ಅವರಿಗೆ ಸಮಾಧಾನವಾಗುತ್ತಿರಲಿಲ್ಲ.

ಸಾರ್ವಜನಿಕ ಸಭೆಗಳಲ್ಲಿ ಸಿದ್ಧ ಭಾಷಣ ಓದುವುದು ಅಷ್ಟೊಂದು ಪರಿಣಾಮಕಾರಿ ಅಲ್ಲ ಎಂಬ ಸಂಗತಿಯನ್ನು ನಟವರ ಸಿಂಗ್ ಒಂದೆರಡು ಸಲ ಸೋನಿಯಾ ಮುಂದೆ ಪ್ರಸ್ತಾಪಿಸಿದರು. ಈ ಸಲಹೆಯನ್ನು ಸೋನಿಯಾ ಕೇಳಿಸಿಕೊಂಡು ಸುಮ್ಮನಾದರು. ಆದರೆ ಪ್ರತಿ ಸಲ, ತಮ್ಮ ಭಾಷಣಕ್ಕೆ ಎರಡು ದಿನಗಳ ಮುಂಚೆ ಭಾಷಣ ಸಿದ್ಧಪಡಿಸುವಂತೆ ನಟವರ ಸಿಂಗ್‌ಗೆ ಸೂಚನೆ ಹೋಗುತ್ತಿತ್ತು. ‘ಸಿದ್ಧ ಭಾಷಣ ಓದುವುದೇ ಸುರಕ್ಷಿತ. ಕಾರಣ ಹಾಗೆ ಮಾಡುವುದರಿಂದ ಸೋನಿಯಾಗೆ ಎಲ್ಲೂ ಎಡವಟ್ಟು ಮಾಡುವ ಪ್ರಮೇಯವೇ ಉದ್ಭವಿಸುವುದಿಲ್ಲ. ಆ ಭಾಷಣದ ಪರಿಣಾಮ ಏನೇ ಇರಲಿ. ಅದು
ಬೇರೆ ಮಾತು. ಅವರ ದರ್ಶನ ಅದಕ್ಕಿಂತ ಹೆಚ್ಚಿನ ಪರಿಣಾಮವನ್ನುಂಟು ಮಾಡುವುದೆಂದು ಕಾಂಗ್ರೆಸ್ ನಾಯಕರು ಭಾವಿಸಿದ್ದರು. ಹೀಗಾಗಿ ಸೋನಿಯಾ ಎಲ್ಲಿಗೇ ಹೋಗಲಿ, ಸಿದ್ಧ ಭಾಷಣಕ್ಕೆ ಅಂಟಿಕೊಂಡರು ಅಥವಾ ಅದಕ್ಕೆ ಅವರನ್ನು ಅಂಟಿಸಲಾಯಿತು.

ಸೋನಿಯಾ ಎಲ್ಲಿಗೇ ಹೋದರೂ ಅವರನ್ನು ಪತ್ರಕರ್ತರಿಂದ ದೂರ ಇರಿಸಲು ಭದ್ರತೆಯವರಿಗೆ ಸೂಚಿಸಲಾಗುತ್ತಿತ್ತು. ಅವರು ಯಾರನ್ನೂ ಹಠಾತ್ತನೆ ಭೇಟಿ ಮಾಡಲು ಬಿಡುತ್ತಿರಲಿಲ್ಲ. ಅವರು ಯಾರನ್ನೇ ಭೇಟಿ ಮಾಡಲಿ, ಅವರಿಗೆ ವ್ಯಕ್ತಿ-ವಿಷಯಗಳ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕಾಗುತ್ತಿತ್ತು. ಒಬ್ಬರ ಭೇಟಿಯಾದ ಬಳಿಕ, ಒಳ ಹೋಗಿ ಮುಂದೆ ಭೇಟಿಯಾಗುವ ವ್ಯಕ್ತಿ ಬಗ್ಗೆ ಮಾಹಿತಿ ಪಡೆದು ಬಂದು ಕುಳಿತುಕೊಳ್ಳುತ್ತಿದ್ದರು. ಮೌನದಲ್ಲಿ ತಮ್ಮ
ಬುದ್ಧಿವಂತಿಕೆ ಅಡಗಿದೆ ಎಂಬುದನ್ನು ಬಹುಬೇಗ ಅರಿತುಕೊಂಡ ಸೋನಿಯಾ, ಮಾತಾಡಿ ಮನೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅರ್ಥವಾಗಲಿ, ಆಗದಿರಲಿ, ಮೌನಕ್ಕೆ ಶರಣಾಗುತ್ತಿದ್ದರು. ಸ್ಥಳದಲ್ಲಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುತ್ತಿರಲಿಲ್ಲ.

ಏನೇ ಹೇಳಿದರೂ, ‘ಯೋಚಿಸಿ ತಿಳಿಸಲಾಗುವುದು…ನೋಡೋಣ… ನನ್ನ ನಿರ್ಧಾರವನ್ನು ತಿಳಿಸುತ್ತೇನೆ… ಈಗಲೇ ಏನನ್ನೂ ಹೇಳಲಾರೆ, ಸ್ವಲ್ಪ
ಕಾಲಾವಕಾಶ ಬೇಕು… ನಿಮ್ಮ ಭಾವನೆ ಅರ್ಥವಾಗಿದೆ…’ ಎಂದು ಗೋಡೆ ಮೇಲೆ ದೀಪ ಇಟ್ಟವರಂತೆ ಹೇಳುತ್ತಿದ್ದರು. ನಂತರ ತಮ್ಮ ರಾಜಕೀಯ ಕಾರ್ಯ ದರ್ಶಿ ಮತ್ತು ಆಪ್ತರ ಜತೆ ಮಾತಾಡಿ ನಿರ್ಧರಿಸುತ್ತಿದ್ದರು. ಆರಂಭಿಕ ದಿನಗಳಲ್ಲಿ ಹೆಚ್ಚಿನ ಆತ್ಮವಿಶ್ವಾಸ ಇಲ್ಲದಂತೆ ಕಂಡುಬಂದರೂ, ನಂತರದ ದಿನಗಳಲ್ಲಿ ಸೋನಿಯಾ, ಪಕ್ಷ ಮತ್ತು ಸರಕಾರದ ಮೇಲೆ ಬಿಗಿ ಹಿಡಿತ ಸಾಧಿಸಿದ್ದು ಬೇರೆ ಕತೆ. ಕಾಂಗ್ರೆಸ್ಸಿನ ಇತಿಹಾಸದಲ್ಲಿಯೇ ಅವರಷ್ಟು ದೀರ್ಘ ಅವಧಿಗೆ (೧೯೯೮ ರಿಂದ ೨೦೧೭ರವರೆಗೆ ಹತ್ತೊಂಬತ್ತು ವರ್ಷ ಮತ್ತು ೨೦೧೯ರಿಂದ ೨೦೨೨ರವರೆಗೆ ಮೂರು ವರ್ಷ) ಅಧ್ಯಕ್ಷರಾದವರು ಯಾರೂ ಇಲ್ಲ.

ಸಲ್ಮಾನ್ ರಶ್ದಿ ಹೊಸಕೃತಿ
೨೦೨೨ರ ಆಗಸ್ಟ್ ೧೨ರಂದು ಖ್ಯಾತ ಲೇಖಕ ಸಲ್ಮಾನ್ ರಶ್ದಿ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡಲು ಸಿದ್ಧರಾಗಿ ನಿಂತಿದ್ದಾಗ, ಹಠಾತ್ತನೆ ಅವರ ಮೇಲೆ ಮಾರಣಾಂತಿಕ ಹಲ್ಲೆಯಾಯಿತು. ಈ ಕಾಲಘಟ್ಟದಲ್ಲಿ ಲೇಖಕರನ್ನು ಸುರಕ್ಷಿತವಾಗಿ ಕಾಪಾಡುವ ಅಗತ್ಯದ ಬಗ್ಗೆ ರಶ್ದಿ ಮಾತಾಡಬೇಕಿತ್ತು. ಕಪ್ಪು ಉಡುಪು ಮತ್ತು ಕಪ್ಪು ಮುಖಕವಚ ಧರಿಸಿ, ಕೈಯಲ್ಲಿ ಚಾಕು ಹಿಡಿದ ಯುವಕನೊಬ್ಬ ರಶ್ದಿ ಅವರೆಡೆಗೆ ಧಾವಿಸಿ ಹಲ್ಲೆ ನಡೆಸಿದ. ತೀವ್ರ ಗಾಯಗೊಂಡ ರಶ್ದಿ, ಪವಾಡಸದೃಶ ರೀತಿಯಲ್ಲಿ ಬಚಾವ್ ಆದರು. ಈ ಘಟನೆಯನ್ನು ರಶ್ದಿ ಓಜ್ಛಿಛಿ: IಛಿbಜಿಠಿZಠಿಜಿಟ್ಞo ಅಠಿಛ್ಟಿ Z ಅಠಿಠಿಛಿಞmಠಿಛಿb Ibಛ್ಟಿ ಎಂಬ ಕೃತಿಯಲ್ಲಿ ರೋಚಕವಾಗಿ ಚಿತ್ರಿಸಿದ್ದಾರೆ.

ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಜೀವನ, ಜೀವಹಾನಿ, ಪ್ರೀತಿ, ಕಲೆ, ಬದುಕಿನ ಅರ್ಥ, ವಿಷಾದ, ದ್ವೇಷ, ಹಿಂಸೆಗಳ ಬಗ್ಗೆ ರಶ್ದಿ ಬರೆದಿದ್ದಾರೆ. ಘಟನೆ ನಡೆದಾಗ ಮತ್ತು ನಂತರದ ತಮ್ಮ ಮನಸ್ಥಿತಿ, ಮನಸ್ಸಿನಲ್ಲಿ ಹಾದುಹೊದ ಯೋಚನೆಗಳನ್ನೆಲ್ಲ ದಾಖಲಿಸಿದ್ದಾರೆ. ರಶ್ದಿ ಅವರಲ್ಲದೇ ಬೇರೆ ಯಾರಾದರೂ ಬರೆದಿದ್ದರೆ, ಇದು ಆ ಘಟನೆಯ ವರದಿಯಾಗುತ್ತಿತ್ತು. ಆದರೆ ವಿಸ್ತೃತ ವರದಿಯಾಗಬಹುದಾದ ವಿಷಯವನ್ನು ಅವರು ಬದುಕಿನ ಅನೇಕ
ಅಸಂಗತ ಸಂಗತಿಗಳ ಸುತ್ತ ಹೆಣೆದು, ಆ ಕೃತಿಯ ಮಹತ್ವವನ್ನು ಹೆಚ್ಚಿಸಿದ್ದಾರೆ.

ಈ ಕೃತಿಯಲ್ಲಿ ರಶ್ದಿ ಒಂದೆಡೆ ಹೀಗೆ ಬರೆಯುತ್ತಾರೆ- ಆಲ್ ಫುಡ್ ಹಿಚ್‌ಕಾಕ್ ಅವರ ‘ಸೈಕೋ’ ಸಿನಿಮಾ ಯಾಕೆ ಭಯವನ್ನು ಹುಟ್ಟಿಸುತ್ತದೆ ಅಂದ್ರೆ ಅದರಲ್ಲಿ ಯಾರ‍್ಯಾರೋ ಸಾಯುತ್ತಾರೆ. ಸಂಬಂಧವೇ ಇಲ್ಲದ ತಪ್ಪು ವ್ಯಕ್ತಿಗಳು ಸಾವಿಗೀಡಾಗುತ್ತಾರೆ. ಅವರೆಲ್ಲ ಯಾಕೆ ಕೊಲೆಯಾದರು ಎಂಬುದು ಸಹ ಗೊತ್ತಾಗುವುದಿಲ್ಲ. ಆ ಸಿನಿಮಾದ ದೊಡ್ಡ ನಟ ಜನೆಟ್ ಲೇಯ್ಗ್ ಆರಂಭವಾದ ಅರ್ಧ ಗಂಟೆಯಲ್ಲಿ ಸತ್ತು ಹೋಗುತ್ತಾನೆ. ಪತ್ತೇದಾರ ಪಾತ್ರದಲ್ಲಿ
ಮಾರ್ಟಿನ್ ಬಾಲ್ಸಮ್ ಕಾಣಿಸಿಕೊಳ್ಳುತ್ತಾನೆ ಮತ್ತು ಮುಂದಿನ ದೃಶ್ಯದಲ್ಲಿ ಸತ್ತಿರುತ್ತಾನೆ. ಈ ಸಂಗತಿಗಳು ತೀವ್ರ ಭಯವನ್ನು ಹುಟ್ಟಿಸುತ್ತವೆ. ನಾನೂ ಆ ಥರದ ಭಾವನೆಗಳೊಳಗೆ ಸಿಲುಕಿಕೊಂಡಂತೆ ಭಾಸವಾಗುತ್ತಿತ್ತು. ತಪ್ಪು ವಿಳಾಸದಲ್ಲಿ ಸಾವು ಬಂದು ನಿಂತಂತೆ ಅನಿಸುತ್ತಿತ್ತು.

ನಮಗೆಲ್ಲ ವಯಸ್ಸಾಗುತ್ತಿದೆ. ಅದು ಕಡಿಮೆಯಾಗುವ ಜಾಗವಂತೂ ಇಲ್ಲವಲ್ಲ. ಏಂಜೆಲಾ ಕಾರ್ಟರ್, ಬ್ರೂಸ್ ಚಾಟ್ವಿನ್, ರೇಮಂಡ್ ಕರ್ವೆರ್, ಕ್ರಿಸ್ಟೋ-ರ್ ಹಿಚಿನ್ಸ್ ನಮ್ಮನ್ನು ಬಹಳ ಬೇಗ ಬಿಟ್ಟು ಅಗಲಿದರು. ಈಗ ಇಡೀ ತಲೆಮಾರು, ಜನಾಂಗ ನಿರ್ಗಮನದ ಹೊಸ್ತಿಲಲ್ಲಿದೆ. ೨೦೨೩ರ ಮೇ ೧೯ರಂದು ಮಲಗಿದ್ದಾಗಲೇ ಮಾರ್ಟಿನ್ ಯಾವುದೇ ನೋವಿಲ್ಲದೆ, ಶಾಂತವಾಗಿ ಕೊನೆಯುಸಿರನ್ನೆಳೆದ.

ಪ್ರಧಾನಿಗೆ ಕಲ್ಲೆಸೆದ ಪ್ರೇಕ್ಷಕರು

ನನ್ನ ಕಡತದಲ್ಲಿನ ಹಳೆಯ ಪತ್ರಿಕೆಗಳನ್ನು ಜಾಲಾಡುತ್ತಿದ್ದೆ. ಒಂದು ಸುದ್ದಿ ನನ್ನ ಗಮನವನ್ನು ಸೆಳೆಯಿತು. ೧೯೬೭. ಒರಿಸ್ಸಾದ ರಾಜಧಾನಿ ಭುವನೇಶ್ವರ ದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತಾಡುತ್ತಿದ್ದರು. ಪ್ರೇಕ್ಷಕರ ಮಧ್ಯೆ ಒಂದು ಗುಂಪು ನಿರಂತರವಾಗಿ ಅವರ ವಿರುದ್ಧ ಘೋಷಣೆ ಕೂಗುತ್ತಿತ್ತು. ಸ್ಥಳೀಯ ಕಾಂಗ್ರೆಸ್ ನಾಯಕರು ಒರಿಯಾ ಭಾಷೆಯಲ್ಲಿ, ‘ಸಭೆಗೆ ಅಡ್ಡಿಪಡಿಸಕೂಡದು’ ಎಂದು ಮನವಿ ಮಾಡಿಕೊಂಡರು. ಆದರೂ ಪ್ರಯೋಜನವಾಗಲಿಲ್ಲ. ಇಂದಿರಾ ಸನಿಹ ಹೋದ ಅವರ ಪಕ್ಷದ ನಾಯಕರೊಬ್ಬರು, ‘ನಿಮ್ಮ ಭಾಷಣವನ್ನು ಮೊಟಕು ಗೊಳಿಸುವುದು ವಾಸಿ. ಅವರು ಗಲಾಟೆ ಮಾಡಲೇಬೇಕು ಎಂಬ ಉದ್ದೇಶದಿಂದಲೇ ಬಂದಿದ್ದಾರೆ’ ಎಂದು ಕಿವಿಯಲ್ಲಿ ಉಸುರಿದರು.

ಆದರೆ ಇಂದಿರಾ ಕೇಳಲಿಲ್ಲ. ‘ನನ್ನ ಭಾಷಣಕ್ಕೆ ಅಡ್ಡಿಪಡಿಸಲು ಕೆಲವರು ಬಂದಿದ್ದಾರಂತೆ. ನಾನು ಅಂಥವರಿಗೆಲ್ಲ ಹೆದರುವುದಿಲ್ಲ, ಗೊತ್ತಿರಲಿ’ ಎಂದು ಹೇಳಿದರು. ತತ್‌ಕ್ಷಣ ಸಭೆಯಿಂದ ಕಲ್ಲುಗಳು ತೂರಿಬರಲಾರಂಭಿಸಿದವು. ಇಂದಿರಾ ಅವರೊಂದಿಗಿದ್ದ ಭದ್ರತಾ ಪೊಲೀಸರು ತಕ್ಷಣ ಧಾವಿಸಿ ಪ್ರಧಾನಿ ಯವರಿಗೆ ಎರಡೂ ಕೈಗಳಿಂದ ‘ಕೊಡೆ’ಗಳಂತೆ ರಕ್ಷಣೆ ನೀಡಿದರು. ಆದರೆ ಅಷ್ಟರೊಳಗೆ ಒಂದು ಕಲ್ಲು ತೂರಿ ಬಂದು ಅವರ ಮೂಗನ್ನು ಸವರಿಕೊಂಡು ಹೋಯಿತು. ಇದು ಸಭೆಯಲ್ಲಿದ್ದವರ ಗಮನಕ್ಕೆ ಬರಲಿಲ್ಲ. ‘ನನಗೆ ಕಲ್ಲು ಹೊಡೆಯುವ ಗೂಂಡಾಗಳಿಗೆ ನೀವು ಮತ ನೀಡುತ್ತೀರಾ? ಇದು ನನಗೆ ಮಾಡಿದ ಅಪಮಾನವಲ್ಲ. ಇಡೀ ಮಹಿಳೆಯರಿಗೆ, ದೇಶಕ್ಕೆ ಮಾಡಿದ ಅಪಮಾನ’ ಎಂದು ಇಂದಿರಾ ಹೇಳಿದರು.

ಅವರ ದನಿಯಲ್ಲಿ ಆಕ್ರೋಶವಿತ್ತು. ಇಂದಿರಾ ಮೆಲ್ಲಗೆ ತಮ್ಮ ಮೂಗನ್ನು ಸ್ಪರ್ಶಿಸಿಕೊಂಡರು. ರಕ್ತ ಜಿನುಗುತ್ತಿತ್ತು. ಐಸ್ ಪೀಸ್ ಕೊಡುವಂತೆ ಹೇಳಿದರು. ಆದರೆ ಸಿಗಲಿಲ್ಲ. ತಮ್ಮ ಬ್ಯಾಗಿನಲ್ಲಿದ್ದ ಕರವಸವನ್ನು ತೆಗೆದುಕೊಂಡು ಒರೆಸಿಕೊಂಡರು. ಆಗಲೇ ಅವರಿಗೆ ಗಾಯದ ಅನುಭವವಾಗಿದ್ದು. ಒಂದು ಕೈ ಯಲ್ಲಿ ಕರವಸ್ತ್ರವನ್ನು ಮೂಗಿಗೆ ಹಿಡಿದುಕೊಂಡೇ ತಮ್ಮ ಭಾಷಣವನ್ನು ಮುಗಿಸಿದರು. ತಕ್ಷಣ ಅವರಿಗೆ ಚಿಕಿತ್ಸೆಯನ್ನು ನೀಡಲಾಯಿತು. ಅವರ ಮೂಗಿಗೆ ಬ್ಯಾಂಡೇಜ್ ಹಾಕಲಾಯಿತು. ಮುಂದಿನ ಎರಡು ದಿನ ಅವರಿಗೆ ಯಾವುದೇ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆ ಫೋಟೋವನ್ನು ಇಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿಗಳು ಮತ ಯಾಚಿಸಿದರು.

ಮಾನವೀಯತೆ ಮತ್ತು ಸಂವೇದನೆ
ಕೆಲ ದಿನಗಳ ಹಿಂದೆ, ವಾಟ್ಸಾಪ್‌ನಲ್ಲಿ ಒಂದು ಪ್ರಸಂಗವನ್ನು ಯಾರೋ ಹಂಚಿಕೊಂಡಿದ್ದರು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಉತ್ತರ ಪ್ರದೇಶದ ಹಳ್ಳಿಗಾಡಿನಲ್ಲಿ ಪ್ರವಾಸ ಮಾಡುವಾಗ, ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಪತ್ನಿ ಗೀಜಗನ ಹಕ್ಕಿ ಗೂಡು ಕಟ್ಟಿದ್ದನ್ನು ನೋಡಿ ದರು. ತಮ್ಮ ಪತಿಗೆ, ‘ಆ ಗೂಡು ಬೇಕಾಗಿತ್ತು. ನಮ್ಮ ಮನೆಯ ಮುಂದೆ ಅವನ್ನು ನೇತು ಹಾಕಿ ಅಲಂಕರಿಸಬಹುದು’ ಎಂದು ಹೇಳಿದರು. ಶೇಷನ್ ತಮ್ಮ ಅಂಗರಕ್ಷಕರಿಗೆ ಆ ಗೂಡನ್ನು ಕಿತ್ತು ತರುವಂತೆ ಹೇಳಿದರು.

ಅಂಗರಕ್ಷಕರು ಆ ಗೂಡನ್ನು ಕೀಳಲು ಮುಂದಾದಾಗ, ಅಲ್ಲಿದ್ದ ಒಬ್ಬ ಬಾಲಕ ಅವಕಾಶ ನೀಡಲಿಲ್ಲ. ಆಗ ಅಂಗರಕ್ಷಕ ಆ ಬಾಲಕನಿಗೆ ಹತ್ತು ರುಪಾಯಿ ತೋರಿಸಿ, ಗೂಡನ್ನು ಕೊಡುವಂತೆ ಹೇಳಿದ. ಅದಕ್ಕೆ ಆತ ಒಪ್ಪಲಿಲ್ಲ. ಆಗ ಸ್ವತಃ ಶೇಷನ್ ಕಾರಿನಿಂದ ಇಳಿದು, ಬಾಲಕನಿಗೆ ಐವತ್ತು ರುಪಾಯಿ ತೋರಿಸಿ, ಆ ಗೂಡನ್ನು ಕೊಡುವಂತೆ ಹೇಳಿದರು. ‘ಐವತ್ತಲ್ಲ, ನೂರು ರುಪಾಯಿ ಕೊಟ್ಟರೂ ಗೂಡನ್ನು ಕೀಳಲು ಬಿಡುವುದಿಲ್ಲ’ ಎಂದು ಆ ಬಾಲಕ ಖಂಡುತುಂಡು ಹೇಳಿದ. ‘ಸಾಹೇಬ್ರೇ, ಆ ಗೂಡಿನೊಳಗೆ ಮರಿಹಕ್ಕಿಗಳಿವೆ. ಅವುಗಳಿಗೆ ಆಹಾರ ತರಲು ತಾಯಿ ಹಕ್ಕಿ ಹಾರಿಹೋಗಿದೆ. ಅದು ಮರಳಿ ಬಂದಾಗ, ಗೂಡು ಇಲ್ಲದಿದ್ದರೆ ಆತಂಕಕ್ಕೊಳಗಾಗುತ್ತದೆ. ಅದರ ವೇದನೆ-ರೋದನೆ ನೋಡಲಾಗುವುದಿಲ್ಲ. ಹೀಗಾಗಿ ನೀವು ಸಾವಿರ ರುಪಾಯಿ ಕೊಟ್ಟರೂ, ನಾನು ಆ ಗೂಡನ್ನು ಕೊಡುವುದಿಲ್ಲ’ ಎಂದು ಬಾಲಕ ಹೇಳಿದ.

ಈ ಘಟನೆಗೆ ಶೇಷನ್ ತಮ್ಮ ಅನಿಸಿಕೆಗಳನ್ನು ಹೀಗೆ ದಾಖಲಿಸಿದ್ದಾರೆ- ‘ಈ ಘಟನೆ ನನ್ನನ್ನು ಬಹಳ ಕಲಕಿತು. ಒಬ್ಬ ಅಶಿಕ್ಷಿತ ಬಾಲಕನಿಗೆ ಹೊಳೆದಿದ್ದು ಒಬ್ಬ ಐಎಎಸ್ ಅಧಿಕಾರಿಗೆ ಹೊಳೆಯಲಿಲ್ಲವಲ್ಲ? ನನ್ನೆಲ್ಲ ಡಿಗ್ರಿ, ಐಎಎಸ್ ಪದವಿ, ಹುದ್ದೆ, ಅನುಭವ, ಘನತೆ, ಹಣವೆಲ್ಲವೂ ಆ ಬಾಲಕನ ವಿವೇಕದ ಮುಂದೆ ಕಸಕ್ಕೆ ಸಮಾನ ಎಂದು ಅನಿಸಿಬಿಟ್ಟಿತು. ಮನುಷ್ಯನಿಗೆ ಡಿಗ್ರಿ, ಹುದ್ದೆ, ಹಣಕ್ಕಿಂತ, ಮಾನವೀಯತೆ, ಸಂವೇದನೆ, ಸೂಕ್ಷ್ಮ ಭಾವನೆ ಬಹಳ ಮುಖ್ಯ. ಈ ಘಟನೆ ನೆನಪಾದರೆ, ನಾನು ನನ್ನಷ್ಟಕ್ಕೆ ಸಣ್ಣವನಾಗುತ್ತೇನೆ’.

Leave a Reply

Your email address will not be published. Required fields are marked *

error: Content is protected !!