Monday, 20th May 2024

ಸ್ವದೇಶಿ ಲಸಿಕೆಗಳ ಮೇಲೆ ವಿದೇಶಿ ಫಾರ್ಮಾ ಲಾಬಿಯ ಮಿಥ್ಯಾರೋಪ !

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ನಿರ್ಣಾಯಕ ಚುನಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಕೋವಿಶೀಲ್ಡ್ ಸೇರಿದಂತೆ ಸ್ವದೇಶಿ ಲಸಿಕೆಗಳ ವಿರುದ್ಧ ವಿದೇಶಿ ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ನೋಡಿದಾಗ, ಇದರ ಹಿಂದಿನ ಕಾಣದ ‘ಕೈ’ಗಳು ಭಾರತದ ಹಿತಕ್ಕೆ ಧಕ್ಕೆ ತರುವ ಕೆಲಸ ಮಾಡುವಲ್ಲಿ ನಿರತವಾಗಿವೆ ಎಂಬುದು ಎಂಥವರಿಗೂ ಸ್ಪಷ್ಟವಾಗುತ್ತದೆ.

ಇಂಥ ಅಪಪ್ರಚಾರ, ವದಂತಿಗಳನ್ನು ಕೆಲ ಜನರ, ಮಾಧ್ಯಮಗಳ ಮೂಲಕ ಹೇಳಿಸಿ ವೈರುಧ್ಯ ಸೃಷ್ಟಿಸುವ ವಿದೇಶಿ ಲಾಬಿಗಳ ಜತೆಗೆ ಸ್ಥಳೀಯರೂ ಭಾಗಿ
ಯಾಗಿರುವುದನ್ನು ಅವರ ‘ಇಕೋ ಸಿಸ್ಟಂ’ನಿಂದಲೇ ತಿಳಿಯಬಹುದಾಗಿದೆ. ಚೀನಾದ ವುಹಾನ್ ನಗರದ ವ್ಯಾಪ್ತಿಯಲ್ಲಿ ಒಂದು ಗುಂಪಿನ ಜನರಲ್ಲಿ ಇದ್ದಕ್ಕಿದ್ದಂತೆ ಒಂದು ವಿಶಿಷ್ಟ ಬಗೆಯ ಕಾಯಿಲೆ ಕಾಣಿಸಿಕೊಂಡಿತು. ವಿಪರೀತ ಜ್ವರ, ಅತಿಯಾದ ಸುಸ್ತು, ಒಣಕೆಮ್ಮು, ಎದೆಯುರಿತ ಸೇರಿದಂತೆ ಹಲವು ಲಕ್ಷಣಗಳು ಕಂಡುಬಂದದ್ದರಿಂದ ಅಲ್ಲಿನ ವೈದ್ಯರು ಇದೊಂದು ಸಾಮಾನ್ಯ ವೈರಲ್ ಸಮಸ್ಯೆ ಎಂದು ಪ್ರಾಥಮಿಕ ಚಿಕಿತ್ಸೆ ನೀಡಿ ಸುಮ್ಮನಾದರು. ವಾರ ಕಳೆಯುವಷ್ಟರಲ್ಲಿ ಆ ಗುಂಪಿನ ಅಷ್ಟೂ ಜನರು ಹಠಾತ್ತಾಗಿ ತೀರಿಕೊಂಡರು.

ಇದಾದ ಬಳಿಕ ವುಹಾನ್ ನಗರಪಾಲಿಕೆಯು ದಿಢೀರ್ ಕಾರ್ಯಾಚರಣೆ ನಡೆಸಿ, ಇಂಥ ಲಕ್ಷಣಗಳಿರುವ ವ್ಯಕ್ತಿಗಳನ್ನು ಅವರವರ ಮನೆಗಳಿಂದ ಎತ್ತಿಕೊಂಡು ವಾಹನಗಳಲ್ಲಿ ಕರೆದೊಯ್ಯತೊಡಗಿತು. ವೈರಲ್ ಲಕ್ಷಣಗಳಿರುವ ವ್ಯಕ್ತಿಗಳನ್ನು ಊರ ಹೊರಗಿನ ವಿಶೇಷ ಜಾಗದಲ್ಲಿ ಇಂಜೆಕ್ಷನ್ ನೀಡುವ ಮೂಲಕ ಸಾಯಿಸುತ್ತಿದ್ದಾರೆ ಎಂಬ ಗಾಳಿಸುದ್ದಿಯೂ ಹರಡಿತು. ಈ ಘಟನೆ ನಡೆದದ್ದು ೨೦೧೯ರ ಡಿಸೆಂಬರ್ ಮೊದಲ ವಾರ, ಹುಬೈ ಪ್ರಾಂತ್ಯದ ವುಹಾನ್ ನಗರದಲ್ಲಿ!

ಜಗತ್ತಿನ ಅತ್ಯಂತ ಪ್ರತಿಷ್ಠಿತ Wuhan Institute of Virologyಸಂಶೋಧನಾ ಕೇಂದ್ರ ಇರುವುದು ಇದೇ ನಗರದಲ್ಲಿ. ಇದರ ಡೆಪ್ಯುಟಿ ಡೈರೆಕ್ಟರ್ ಗಾಂಗ್ ಪೆಂಗ್, ಅಮೆರಿಕದ ಹಾರ್ವರ್ಡ್, ಕೆನಡಾದ ವಾಟರ್‌ಲೂ ಮತ್ತು ಫ್ರಾನ್ಸ್ ಸೇರಿದಂತೆ ಬಹುತೇಕ ಎಲ್ಲ ಯುರೋಪಿಯನ್ ದೇಶಗಳೊಂದಿಗೆ ಸಂಶೋಧನೆ ಯಲ್ಲಿ ಪಾಲು ದಾರಿಕೆ ಹೊಂದಿರುವ CAS (Chinese Academy of Science) ನಲ್ಲಿ ಪ್ರಾಧ್ಯಾಪಕನಾಗಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದ. ಮೇಲಿನ ಘಟನೆಗಳು ನಡೆಯುವಾಗ ಮತ್ತು ನಡೆದ ನಂತರ, ಗಾಂಗ್ ಪೆಂಗ್‌ನ ನಿತ್ಯದ ಪ್ರಯಾಣಗಳಲ್ಲಿ ವಿಪರೀತ ಬದಲಾವಣೆ ಗಳಾದವು, ವಿದೇಶ ಯಾತ್ರೆಗಳು ಜಾಸ್ತಿಯಾದವು.

ವೈರಾಣು ಕುರಿತಾದ ಸಂಶೋಧನೆಯಲ್ಲಿ ಹೂಡಿಕೆ ಮಾಡುವ ಸಂಸ್ಥೆಗಳ ಮುಖ್ಯಸ್ಥರು ಮತ್ತು ರಾಜಕೀಯ ನಾಯಕರು ಎಚ್ಚರಿಕೆಯಿಂದ ಇರುವಂತೆ
ಸೂಚನೆ ನೀಡುವಷ್ಟರಲ್ಲಿಯೇ ನಡೆದೇಬಿಟ್ಟಿತು ಅನಾಹುತ! ಸೋಂಕಿತ ವ್ಯಕ್ತಿಯೊಬ್ಬ ವುಹಾನ್ ನಗರದಿಂದ ಯುರೋಪ್ ಕಡೆಗೆ ಪ್ರಯಾಣಿಸಿದ ಮಾಹಿತಿ ಹೊರಬಂತು. ಅಷ್ಟರಲ್ಲಿ, ಬ್ರಿಟನ್‌ನಲ್ಲಿ ಮೊಟ್ಟಮೊದಲ ಸೋಂಕಿನ ಪ್ರಕರಣ ಕಾಣಿಸಿಕೊಂಡಿತು. ಆದರೆ, ೨೦೨೦ರ ಜನವರಿ ೨೪ರಂದು ಫ್ರಾನ್ಸ್‌ನಲ್ಲಿ ಅಧಿಕೃತವಾಗಿ ೩ ಪ್ರಕರಣಗಳು ಪತ್ತೆಯಾದವು ಮತ್ತು ಮೊದಲ ಸಾವು ಸಂಭವಿಸಿದ್ದು ೨೦೨೦ರ ಫೆಬ್ರವರಿ ೧೫ರಂದು. ಇದಾಗಿದ್ದೇ ಆಗಿದ್ದು, ಫೆ.೨೧ರೊಳಗಾಗಿ ೯ಕ್ಕೂ ಹೆಚ್ಚು ಐರೋಪ್ಯ ದೇಶಗಳಿಗೆ ಸೋಂಕು ಶರವೇಗದಲ್ಲಿ ಹಬ್ಬಿತು. ಇದರ ವೇಗವನ್ನು ಕಂಡು ಆಧುನಿಕ ವೈದ್ಯಲೋಕ ಬೆಚ್ಚಿಬಿತ್ತು. ಖ್ಯಾತ ವೈದ್ಯ ವಿಜ್ಞಾನಿಗಳು ‘ವಿಶ್ವ ಆರೋಗ್ಯ ಸಂಸ್ಥೆ’ಯ (WHO) ಬಾಗಿಲು ತಟ್ಟಿದರು.

WHO ಮುಖ್ಯಸ್ಥ ಸಹಜವೆಂಬಂತೆ, ‘ಇದೊಂದು ಖಅಖ್ಖ೨ ಜಾತಿಯ ವೈರಾಣುವಾಗಿದೆ, ಮುನ್ನೆಚ್ಚರಿಕೆ ತೆಗೆದುಕೊಳ್ಳಿ’ ಎಂದು ಸಲಹೆ ನೀಡಿದ. ಆದರೆ,
ಇದರ ಗಂಭೀರತೆ ಅರಿತ ECDC (European Centre for Disease Prevention and Control) ಮತ್ತು Europe Regional CentreWHO ಜಂಟಿಯಾಗಿ ಎಲ್ಲ ಐರೋಪ್ಯ ರಾಷ್ಟ್ರಗಳಿಗೆ ಅತ್ಯಂತ ಗಂಭೀರ ಸೂಚನೆ ನೀಡಿದವು. ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳಲೂ ಇದೇ ತಂಡ ಸಹಾಯಕ್ಕೆ ನಿಂತಿತು. ಇದಕ್ಕೆ Novel Corona Virus, SARS – COV2-19 ಎಂದು ಅಧಿಕೃತವಾಗಿ ಕರೆಯಲಾಯಿತು.

ಅಲ್ಲಿಯವರೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಕೂಡ ಇದರ ಗಂಭೀರತೆಯನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಕಾರಣ, ಚೀನಾದೊಂದಿಗಿನ
ನಂಟು! ಆದರೆ, ಇದನ್ನು ಅತ್ಯಂತ ದೃಢವಾಗಿ ವಿರೋಧಿಸಿ ಸಾರ್ವಜನಿಕವಾಗಿ ಹೇಳಿದ್ದು ಮಾತ್ರ ಅಮೆರಿಕದ ಅಂದಿನ ಅಧ್ಯಕ್ಷ ಟ್ರಂಪ್! ‘ಹೌದು, ಇದು ಚೀನಾದಿಂದ ಬಂದಿದೆ. ಆದ್ದರಿಂದ ಇದು ಚೀನಿ ವೈರಸ್, ವುಹಾನ್ ವೈರಸ್, ಕೊರೋನಾ ವೈರಸ್’ ಎಂದು ಟ್ರಂಪ್ ಹೇಳಿಕೆ ನೀಡಿದರು. ಇದು ಬಹು ದೊಡ್ಡ ಚರ್ಚೆಗೆ ಗ್ರಾಸವಾಯಿತು.

ಯಾಕೆಂದರೆ, ಕೊರೋನಾ ವೈರಸ್ ಸೋರಿಕೆಯಾಗಿದ್ದು ‘ವುಹಾನ್ ವೈರಾಲಜಿ’ ಕೇಂದ್ರದಿಂದ; ಇದಕ್ಕೆ ಎಲ್ಲ ರೀತಿಯ ಆರ್ಥಿಕ ಮತ್ತು ಸಂಶೋಧನಾ ಸಹಾಯ ಹರಿದುಬರುತ್ತಿದ್ದುದು ಇದೇ ಐರೋಪ್ಯ ದೇಶಗಳ ಬಲಿಷ್ಠ ಸಂಸ್ಥೆಗಳಿಂದ. ಹಾಗಾಗಿ, ಟ್ರಂಪ್ ಆರೋಪವನ್ನು ಚೀನಾ ಬಲವಾಗಿ ವಿರೋಧಿಸಿತು.
ಯುರೋಪ್‌ನ ಬಹುತೇಕ ದೊಡ್ಡ ದೊಡ್ಡ ಸಂಸ್ಥೆಗಳು ಮುಗುಮ್ಮಾಗಿ ಕುಳಿತುಬಿಟ್ಟವು. ಇತ್ತ ಜನರು ಕಾವಲಿಗೆ ಬಿದ್ದ ಜೋಳದ ಕಾಳಿನಂತೆ ಪಟಪಟನೆ ಸಾಯುತ್ತಾ ಹೋದರು. ನೋಡನೋಡುತ್ತಿದ್ದಂತೆ ಇಡೀ ವಿಶ್ವಕ್ಕೇ ಮರಣಶಾಸನ ಘೋಷಿಸಿದಂಥ ವಾತಾವರಣ ನಿರ್ಮಾಣವಾಗಿಬಿಟ್ಟಿತು.

ಇದು ಇಡೀ ಮಾನವಕುಲಕ್ಕೆ ಈ ಶತಮಾನದಲ್ಲಾದ ಮೊಟ್ಟಮೊದಲ ಅನುಭವ. ಯಾವ ಮುಂಜಾಗ್ರತಾ ಕ್ರಮವನ್ನು ಹೇಗೆ ಕೈಗೊಳ್ಳಬೇಕು ಎಂಬುದರ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಕೊರೋನಾ ವೈರಸ್ ಇಡೀ ಜಗತ್ತನ್ನೇ ಆಕ್ರಮಿಸಿಕೊಂಡು, ಹೋದ ಕಡೆಯಲ್ಲೆಲ್ಲಾ ಮರಣಶಾಸನ ಬರೆಯುತ್ತಾ ತನ್ನ ಪ್ರಕೋಪ ಮೆರೆಯಿತು; ಮಾನವಜನಾಂಗದ ಅಂತ್ಯವಾಗಲೆಂದೇ ಕೊರೋನಾ ವೈರಾಣು ಹುಟ್ಟಿಕೊಂಡಿದೆ ಎಂದು ಬಹುತೇಕರು ಅಂತಿಮ ನಿರ್ಧಾರಕ್ಕೆ
ಬಂದುಬಿಟ್ಟಿದ್ದರು.

ECDC ಯು ಪರಿಸ್ಥಿತಿಯ ಗಂಭೀರತೆ ಅರಿತು ಕಾರ್ಯತತ್ಪರವಾಗುವಷ್ಟರಲ್ಲಿ, ಗಡಿಯಾರದ ಸೆಕೆಂಡಿನ ಮುಳ್ಳಿಗೇ ಪೈಪೋಟಿ ನೀಡುವಂತೆ ವೈರಸ್ ವೇಗವಾಗಿ ಹರಡಿತು, ೯ ರಾಷ್ಟ್ರಗಳಲ್ಲಿ ಪ್ರಕರಣಗಳು ಪತ್ತೆಯಾದವು. ಅವುಗಳ ಪೈಕಿ ೨೧ ಜನರು ನೇರಸಂಪರ್ಕಕ್ಕೆ ಬಂದದ್ದು ಚೀನಾದಿಂದ ಬಂದ ವ್ಯಕ್ತಿಯಿಂದ ಮತ್ತು ಉಳಿದವರು ಜರ್ಮನಿಯಲ್ಲಿ ಕೊರೋನಾ ಸೋಂಕಿಗೆ ಬಲಿಯಾದರು. ಗಂಭೀರತೆ ಆಧರಿಸಿ ಇವರನ್ನು ಬೇರ್ಪಡಿಸಿ ಐಸೊಲೇಷನ್‌ಗೆ
ಹಾಕಿ, ಉಳಿದ ಚಿಕಿತ್ಸೆಗೆ ತಯಾರಿ ಮಾಡಿಕೊಳ್ಳುವಷ್ಟರಲ್ಲಿ, ಮಾರ್ಚ್ ೫ಕ್ಕೆ ಕೊರೋನಾ ಸೋಂಕು ಹರಡಿದ್ದು ಬರೋಬ್ಬರಿ ೪,೨೫೦ ಜನರಿಗೆ!

ನೋಡನೋಡುತ್ತಿದ್ದಂತೆ ಸೋಂಕಿತರ ಸಂಖ್ಯೆಯೂ ತ್ರಿಗುಣಗೊಳ್ಳುತ್ತಾ ಹೋಯಿತು. ಬೆಚ್ಚಿಬಿದ್ದ ಮುಂದುವರಿದ ದೇಶಗಳು ಮತ್ತು ECDC ಸಂಸ್ಥೆಯ ಮುಖ್ಯಸ್ಥರು, ಐರೋಪ್ಯ ಒಕ್ಕೂಟ ಸೇರಿದಂತೆ ವಿಶ್ವದ ವಿಭಿನ್ನ ರಾಷ್ಟ್ರಗಳಲ್ಲಿನ ಗಣನೀಯ ಸಂಖ್ಯೆಗಳ ಲ್ಯಾಬೊರೇಟರಿಗಳನ್ನು ಬಳಸಿಕೊಂಡು ಇದನ್ನು ದಮನಿಸುವ ನಿರ್ಧಾರಕ್ಕೆ ಬಂದರು. ಅಷ್ಟರಲ್ಲಿ ಕೊರೋನಾ ಸೋಂಕು ಯುರೋಪಿನ ಶೇ.೬೦ರಷ್ಟು ಭಾಗವನ್ನು ವ್ಯಾಪಿಸಿಯಾಗಿತ್ತು. WHO ಸಂಸ್ಥೆಯು ಕೊನೆಗೂ ೨೦೨೦ರ ಮಾರ್ಚ್ ೧೧ರಂದು ಕೊರೋನಾವನ್ನು ‘ಗ್ಲೋಬಲ್ ಪಾಂಡೆಮಿಕ್ ವೈರಸ್’ ಎಂದು ಘೋಷಿಸಿತು.

೨೦೨೦ರ ಜನವರಿ ಸಮಯದಲ್ಲಿ, European Union and European Economic Area (EU/ EEA) ರಾಷ್ಟ್ರಗಳು ದೇಶಗಳ ಗಡಿದಾಟಿ ಬರುವ ಜನರನ್ನು ಪರೀಕ್ಷಿಸಲು ಆರಂಭಿಸಿದವು. ಮಾರ್ಚ್ ಮೊದಲ ವಾರದಲ್ಲಿ, ‘ನಮ್ಮಲ್ಲಿ ಅಷ್ಟು ಪರಿಕರ ಸಂಪನ್ಮೂಲಗಳಿಲ್ಲ; ಸ್ಥಳೀಯವಾಗಿ ಎಲ್ಲ ನಾಗರಿಕ ರನ್ನು ಪರೀಕ್ಷಿಸಲು ನಮ್ಮಲ್ಲಿ ಅಷ್ಟು ವೈದ್ಯಕೀಯ ವ್ಯವಸ್ಥೆ ಮತ್ತು ವೈದ್ಯ ಸೇವಾತಂಡವಿಲ್ಲ’ ಎಂದು ಅವು ಹೇಳಿದವು. ಹೀಗೆ, ಆಧುನಿಕ ಮತ್ತು ಮುಂದು ವರಿದಂಥವು ಎನಿಸಿಕೊಂಡ ದೇಶಗಳೇ ಕೊರೋನಾ ವೈರಸ್ ಅನ್ನು ನಿರ್ವಹಿಸಲಾಗದೆ ಕೈಚೆಲ್ಲಿ ಕುಳಿತಾಗ, ಹತ್ತತ್ತಿರ ೧೪೦ ಕೋಟಿಯಷ್ಟು ಜನಸಂಖ್ಯೆಯ ಭಾರತದ ಪರಿಸ್ಥಿತಿ ಹೇಗಾಗಿರಬೇಡ!

ಬಹುತೇಕವಾಗಿ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿರುವ, ಸರಿಯಾದ ಸಂಪರ್ಕ- ಸಂವಹನ-ವೈದ್ಯಕೀಯ ವ್ಯವಸ್ಥೆಗಳಿಲ್ಲದ, ಕಾಡು- ಬೆಟ್ಟಗಳಲ್ಲಿ ಬದುಕು ನಡೆಸುವಂಥ ಜನಸಾಮಾನ್ಯರನ್ನು ಹೊಂದಿರುವ ಭಾರತದಂಥ ಬೃಹತ್ ದೇಶಕ್ಕೆ ಅದೆಂಥ ತಲ್ಲಣವಾಗಿರಬೇಡ! ಇಂಥ ಸಮಯದಲ್ಲೇ, ೨೦ ವರ್ಷದ ಯುವತಿಯಲ್ಲಿ ಕೊರೋನಾ ಕಾಣಿಸಿಕೊಂಡಿತು; ಹೀಗೆ ಭಾರತದಲ್ಲಿ ಮೊಟ್ಟಮೊದಲ ವೈರಸ್ ಪತ್ತೆಯಾದದ್ದು ೨೦೨೦ರ ಜನವರಿ ೨೭ರಂದು ಕೇರಳದ ತ್ರಿಶೂರ್‌ನಲ್ಲಿ. ಇಲ್ಲಿಂದ ಆರಂಭವಾದ ಕೊರೋನಾದ ಭೀಭತ್ಸ ಪ್ರಯಾಣ, ದೇಶದ ಇತರೆ ರಾಜ್ಯಗಳಿಗೂ ತೀವ್ರವಾಗಿ ಹರಡುತ್ತಾ ಹೋಯಿತು.

ಕೊರೋನಾ ಸೋಂಕಿನಿಂದ ಅತೀವ ತೊಂದರೆಗೊಳಗಾದ ಮಹಾರಾಷ್ಟ್ರ, ದೆಹಲಿ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳು ಅಕ್ಷರಶಃ ತತ್ತರಿಸಿಹೋದವು. ಇಲ್ಲೆಲ್ಲ ಅಪಾರ ಸಾವು-ನೋವುಗಳು ಕಂಡುಬಂದವು. ಇದರ ಭೀಕರತೆಯನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ೨೦೨೦ರ ಮಾರ್ಚ್ ೨೪ರಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ಅನ್ನು ಘೋಷಿಸಿತು ಮತ್ತು ಇದು ೨೧ ದಿನಗಳವರೆಗೆ ಮುಂದುವರಿಯುತು. ಮಿಕ್ಕಂತೆ, ಒಡಿಶಾ, ಪಂಜಾಬ್ ಸೇರಿದಂತೆ ಇತರೆ ರಾಜ್ಯಗಳು ಮೇ ೧ರವರೆಗೂ ಲಾಕ್‌ಡೌನ್ ಅನ್ನು ಮುಂದುವರಿಸಿ ದವು.

ಇದೇ ರೀತಿಯಲ್ಲಿ, ದೇಶದ ವಿವಿಧೆಡೆ ವಿವಿಧ ಘಟ್ಟಗಳಲ್ಲಿ ೨ನೇ, ೩ನೇ ಮತ್ತು ೪ನೇ ಲಾಕ್‌ಡೌನ್‌ಗಳನ್ನು ಘೋಷಿಸಲಾಯಿತು. ಒಟ್ಟಾರೆ ೬೮ ದಿನಗಳ ಲಾಕ್ ಡೌನ್ ಪರಿಸ್ಥಿತಿಯು ಅಗಾಧ ಜನಸಂಖ್ಯೆಯ ಭಾರತಕ್ಕೆ ಕಂಡು ಕೇಳರಿಯದ ಅನುಭವವಾಯಿತು. ಇದರ ಮಧ್ಯೆ ಪ್ರಧಾನಿಯವರು ಜಾತಿ-ಮತ-ಧರ್ಮ, ಅಲ್ಪ ಸಂಖ್ಯಾತ-ಬಹುಸಂಖ್ಯಾತ ಎಂದೆಲ್ಲ ಲೆಕ್ಕಿಸದೆ ಇಡೀ ದೇಶಕ್ಕೆ ಉಚಿತ ಪಡಿತರವನ್ನು ವಿತರಿಸಿದರು (ಇದು ಜಗತ್ತಿನ ಅತಿದೊಡ್ಡ ಆಹಾರ ಧಾನ್ಯ ಯೋಜನೆಯೆಂದೇ ಗುರುತಿಸಲ್ಪಟ್ಟಿತು). ಜನರಿಗೆ ಹತ್ತು ಹಲವು ಮಾರ್ಗ ದರ್ಶನ ನೀಡುತ್ತ ಜತೆಗೆ ನಿಂತು ಆತ್ಮಸ್ಥೈರ್ಯವನ್ನು ತುಂಬಿದರು.

ಜಗತ್ತಿನ ಇತರೆ ದೇಶಗಳಲ್ಲಿ ಲಸಿಕೆ ಕಂಡುಹಿಡಿಯಲು ದೊಡ್ಡ ದೊಡ್ಡ ಫಾರ್ಮಾ ಕಂಪನಿಗಳಲ್ಲಿ ಬಹುದೊಡ್ಡ ಲಾಬಿದಾರರು ಹೂಡಿಕೆ ಮಾಡಿದರು. ವೈರಾಣು ಅಧ್ಯಯನಕ್ಕೆ (?) ನೆರವು ನೀಡಿದ್ದ ಸದಸ್ಯ ರಾಷ್ಟ್ರಗಳ ಜನರೇ ಔಷಧಿ ತಯಾರಿಕೆಗೂ ಹಣ ಸುರಿದರು. ಇದೇ ಸಂದರ್ಭದಲ್ಲಿ ಮೋದಿಯವರು, ‘ಕೊರೋನಾ ಇಡೀ ಮಾನವ ಕುಲಕ್ಕೆ ಶಾಪವಾಗಿರುವಂಥದ್ದು. ಹಾಗಾಗಿ, ಹಲವು ದೇಶಗಳು ಒಟ್ಟಾಗಿ ಲಸಿಕೆಯ ಸಂಶೋಧನೆ ಮತ್ತು ಉಚಿತ ಹಂಚಿಕೆ ಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ವಿಶ್ವಮಟ್ಟದಲ್ಲಿ ಆಗ್ರಹಿಸಿದರು. ಮೋದಿಯವರ ಈ ಮಾತನ್ನು ಅರಗಿಸಿಕೊಳ್ಳಲು ‘ಫಾರ್ಮಾ ಲಾಬಿ’ಗಳಿಗೆ ಕಷ್ಟವಾಗಿದ್ದಿರಬಹುದು ಕೂಡ! ಅಷ್ಟರಲ್ಲಿ ಚೀನಾ, ಮಿಲಿಟರಿ ವಿಭಾಗಕ್ಕೆ ಮಾತ್ರವೇ ಬಳಸಲೆಂದು ‘ಕಾನ್ ಫಾಸಿನೋ’ ಎಂಬ ವ್ಯಾಕ್ಸಿನ್ ಅನ್ನು ೨೦೨೦ರ
ಜೂನ್ ೨೪ರಂದು ಬಿಡುಗಡೆ ಮಾಡಿತು. ತದನಂತರ, ಆಗಸ್ಟ್ ೧೧ರಂದು ‘ಸುಟ್ನಿಕ್’ ಎಂಬ ವ್ಯಾಕ್ಸಿನ್ ಅನ್ನು ರಷ್ಯಾ ಬಿಡುಗಡೆಗೊಳಿಸಿತು.

ಜಗತ್ತಿನ ಬಹುತೇಕ ವೈದ್ಯಕೀಯ ಮತ್ತು ಫಾರ್ಮಾ ಲೋಕವನ್ನು ಹಿಡಿತದಲ್ಲಿಟ್ಟುಕೊಂಡಿರುವ ಪಾಶ್ಚಾತ್ಯ ಕಂಪನಿಗಳು ಜಂಟಿಯಾಗಿ ಲಸಿಕೆ ತಯಾರಿಕೆಗೆ ಇಳಿದವು. ಫೈಜರ್ ಮತ್ತು ಬಯೋ-ಎನ್-ಟೆಕ್ ಕಂಪನಿಗಳಿಂದ ಹೊಮ್ಮಿದ ‘ಫೈಜರ್-೧೯’ ವ್ಯಾಕ್ಸಿನ್ ಇದಕ್ಕೊಂದು ಉದಾಹರಣೆ. ಇದಕ್ಕೆ ಅಮೆರಿಕದ Emergency Use Authorization (EUA), Food and Drug Administration (FDA) ಮತ್ತು ಇಂಗ್ಲೆಂಡ್‌ನ ಪ್ರತಿಷ್ಠಿತ Medicines and Health care
Products Regulatory Agency (MH RA) ಸಂಸ್ಥೆಗಳಿಂದ ಬೆಂಬಲ, ನೆರವು ದೊರಕಿತು. ಹಾಗಾಗಿ, WHO ಕೂಡ ಇದನ್ನು ಬಳಸಲು ಅನುಮತಿ ನೀಡಿತು. ಮೋದಿಯವರ ಕರೆಗೆ ಓಗೊಟ್ಟು ಸ್ವದೇಶಿ ಲಸಿಕೆ ತಯಾರಿಸಲು ದೇಶದ ಅನೇಕ ಪ್ರತಿಷ್ಠಿತ ಕಂಪನಿಗಳು ಮುಂದಾದವು. ‘ಭಾರತ್ ಬಯೋಟೆಕ್’ ಮತ್ತು ICMR (Indian Council of Medical Research) & NIV (National Institute of Virology) ಜಂಟಿಯಾಗಿ ಹೀಗೆ COVAXIN ಲಸಿಕೆಯನ್ನು ತಯಾರಿಸು ವಲ್ಲಿ ಯಶಸ್ವಿಯಾದವು.

‘ಸೀರಮ್ ಇನ್‌ಸ್ಟಿಟ್ಯೂಟ್’ ಎಂಬ ಭಾರತೀಯ ಸಂಸ್ಥೆಯು ‘ಆಸ್ಟ್ರಾ ಜೆನೆಕಾ’ ಎಂಬ ಸಂಸ್ಥೆಯ ಸಹಯೋಗದೊಂದಿಗೆ Covishield ಎಂಬ ಲಸಿಕೆ ಯನ್ನು ಸಿದ್ಧಪಡಿಸಿತು. ೨೦೨೧ರ ಜನವರಿ ೧೬ರಿಂದ ದೇಶವ್ಯಾಪಿಯಾಗಿ ಜಗತ್ತಿನ ಅತಿದೊಡ್ಡ ಲಸಿಕೆ ನೀಡುವ ಕಾರ್ಯಕ್ರಮವನ್ನು ಮೋದಿ ಸರಕಾರ ಹಮ್ಮಿಕೊಂಡಿತು. ೨೦೨೩ರ ಮಾರ್ಚ್ ೨೪ರ ಹೊತ್ತಿಗೆ ೧೦೨,೫೭,೮೯,೩೦೨ರಷ್ಟು ಜನರಿಗೆ ಯಶಸ್ವಿಯಾಗಿ ಲಸಿಕೆ ನೀಡುವ ಮೂಲಕ, ವಿಶ್ವದ ಬಹು ದೊಡ್ಡ ರೋಗಾಣುವಿನ ವಿರುದ್ಧ ದೇಶದ ಜನರು ಯುದ್ಧವನ್ನು ಗೆದ್ದಂತಾಯಿತು!

ಇಷ್ಟೆಲ್ಲ ವಿವರಗಳನ್ನು, ನೋವು-ನಲಿವುಗಳನ್ನು ಯಾಕೆ ಮೆಲುಕು ಹಾಕಲಾಯಿತೆಂದರೆ, ಇಂಥ ಬೃಹತ್ ಜನಸಂಖ್ಯೆಯುಳ್ಳ ದೇಶವನ್ನು ಕೊರೋನಾ
ಸಂಕಷ್ಟದ ಸಮಯದಲ್ಲಿ ಜನರಿಗೆ ಸಮಾಧಾನ ಹೇಳುತ್ತ ಧೈರ್ಯದಿಂದ ಮುನ್ನಡೆಸುವುದಿದೆಯಲ್ಲಾ, ಅದಕ್ಕೆ ಮಾತ್ರ ಅಸಾಮಾನ್ಯ ಗುಂಡಿಗೆ ಬೇಕು.
ಪ್ರಕಾಂಡ ಆತ್ಮಸ್ಥೈರ್ಯವುಳ್ಳ ನಾಯಕತ್ವ ಬೇಕು. ಇವೆಲ್ಲದರ ಜತೆಗೆ, ಆಂತರಿಕವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ವಿರೋಧಿಗಳನ್ನು ಎದುರಿಸುವ, ಲಾಬಿಗಳನ್ನು ಮಣಿಸುವ ದೃಢತೆ ಬೇಕು.

ಇದೆಲ್ಲವನ್ನೂ ಮೋದಿ ಘನವಾಗಿ ತೋರಿದರು. ಇದಕ್ಕೆ ವಿಶ್ವಮಟ್ಟದಲ್ಲಿ ಮೆಚ್ಚುಗೆಯೂ ದೊರೆಯಿತು. ವಿದೇಶಗಳಲ್ಲಿ ಲಸಿಕೆಗೆ ಭಾರಿ ಬೆಲೆಯನ್ನು ನಿಗದಿ
ಪಡಿಸಿದರೆ ಭಾರತದಲ್ಲಿ ೧೦೦ ಕೋಟಿಗೂ ಅಧಿಕ ಲಸಿಕೆಗಳನ್ನು ಎರಡೆರಡು ಬಾರಿ ಉಚಿತವಾಗಿ ನೀಡಲಾಯಿತು. ‘ವ್ಯಾಕ್ಸಿನ್ ಮೈತ್ರಿ’ಯ ಅಂಗವಾಗಿ ೧.೪೩ ಕೋಟಿಗೂ ಅಧಿಕ ಡೋಸ್‌ಗಳನ್ನು ೯೮ಕ್ಕೂ ಅಧಿಕ ದೇಶಗಳಿಗೆ ಉಚಿತವಾಗಿ ನೀಡಲಾಯಿತು. ೨೦೨೧ರಲ್ಲಿ ನೀಡಲಾದ ಲಸಿಕೆಯು ದುಷ್ಪರಿಣಾಮ ಬೀರುವುದಿದ್ದಿ ದ್ದರೆ, ಚುಚ್ಚುಮದ್ದು ನೀಡಿದ ೬೫ ದಿನಗಳೊಳಗೆ ಅದು ಕೆಟ್ಟ ಪರಿಣಾಮ ಬೀರಬೇಕಾಗಿತ್ತು. ಆದರೆ, ಲೋಕಸಭಾ ಚುನಾವಣೆ ಬರುವವರೆಗೆ ಅದು ‘ಸೈಡ್ ಎ-ಕ್ಟ್’ಗೆ ಕಾದು ಕುಳಿತಿತ್ತೆಂದು ಕಾಣುತ್ತದೆ! ನಿಮಗೂ ನಗು ಬಂತೇ?! ಮತ್ತೆ, ವಾಸ್ತವಾಂಶ ಹೀಗಿದ್ದಾಗ, ವಿದೇಶಿ ವ್ಯಾಕ್ಸಿನ್ ಕಂಪನಿಯೊಂದರ
ಅಡಿಯಲ್ಲಿ ಲಾಬಿಗೆ ಬದುಕುತ್ತಿರುವ ಮತ್ತು ಭಾರತದಲ್ಲಿ ತಯಾರಾದ ವ್ಯಾಕ್ಸಿನ್ ಬಗ್ಗೆ ಅದರಲ್ಲೂ ಕೋವಿಶೀಲ್ಡ್ ಬಗ್ಗೆ ತಮ್ಮ ಹಿಂಬಾಲಕರ ಮೂಲಕ ಅಪಪ್ರಚಾರ ಮಾಡುತ್ತಿರುವ ವಿದೇಶಿ ಮೂಲದ ‘ಕೆಲವರ’ ಇಂಥ ಕೆಲಸ ಫಲಪ್ರದವಾಗುವುದಿಲ್ಲ.

ಇದರ ಭಾಗವಾಗಿ, ಕರ್ನಾಟಕದಲ್ಲೂ ಕೆಲವರು ಸುಳ್ಳುಸುದ್ದಿ ಹರಡಿಸುವ ಪತ್ರಗಳನ್ನು ಹರಿಬಿಟ್ಟು ನಂತರ ಕ್ಷಮೆ ಕೇಳಿದ್ದಾರೆ ಕೂಡ. ಯಾಕೆಂದರೆ,
ಚುನಾವಣೆ ಹತ್ತಿರ ಬಂದಾಗ, ಯಾರೆಲ್ಲ ಯಾವೆಲ್ಲ ಕಥೆ-ವ್ಯಥೆಗಳನ್ನು ‘ತಯಾರು ಮಾಡಿಬಿಡಬಲ್ಲರು’ ಎಂಬುದನ್ನು ನಮ್ಮ ದೇಶದ ಮತದಾರರು
ಚೆನ್ನಾಗಿಯೇ ಅರಿತಿದ್ದಾರೆ. ಹಾಗೆಯೇ ಗಾಳಿಸುದ್ದಿಗಳಿಗೆ ಕಿವಿಗೊಡುವುದನ್ನೂ ಎಂದೋ ‘ಕೈ’ಬಿಟ್ಟಿದ್ದಾರೆ ಎಂಬುದನ್ನು ಆ ‘ಕೆಲವರು’ ಅರ್ಥಮಾಡಿಕೊಳ್ಳ
ಬೇಕಿದೆ. ಯಾಕೆಂದರೆ, ಇದು ಅಮೃತ ಕಾಲಘಟ್ಟದ ಆಧುನಿಕ ಭಾರತ.

Leave a Reply

Your email address will not be published. Required fields are marked *

error: Content is protected !!