Sunday, 19th May 2024

ಯಶೋಗಾಥೆಯೆಡೆಗೆ ಒಂದು ಕುಡಿನೋಟ

ವಿಶ್ವಲೋಕ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ೨೦೧೧-೧೨ರ ವರ್ಷದಲ್ಲಿ ೨೭ ಕೋಟಿಯಷ್ಟಿದೆ ಎಂದು ಅಂದಾಜಿಸಲಾಗಿತ್ತು. ಅದು ಅಂದಿನ ಜನಸಂಖ್ಯೆಯ ಶೇ.೨೧.೫ರಷ್ಟು ಆಗಿತ್ತು. ನೀತಿ ಆಯೋಗದ ಪ್ರಕಾರ, ೨೦೧೩-೧೪ ಮತ್ತು ೨೦೨೨-೨೩ರ ನಡುವೆ ದೇಶದ ಶೇ.೨೪.೨೮ರಷ್ಟು ಜನರು ಬಡತನದಿಂದ ಹೊರಬಂದಿದ್ದಾರೆ.

‘ಭಾರತದ ಆರ್ಥಿಕತೆ ಯಾವಾಗ ಬೇಕಾದರೂ ನೆಲಕಚ್ಚಬಹುದು’ ಎಂದು ಪ್ರತಿಷ್ಠಿತ ವಿತ್ತೀಯ ಸಂಸ್ಥೆ ಮೋರ್ಗನ್ ಸ್ಟ್ಯಾನ್ಲಿ ಹತ್ತು ವರ್ಷಗಳ ಹಿಂದೆ ಉದಾಹರಿಸಿತ್ತು. ಆದರೆ, ಭಾರತವಿಂದು ಸವಾಲುಗಳನ್ನು ಮೆಟ್ಟಿನಿಂತಿದೆ. ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಆರ್ಥಿಕತೆಯಲ್ಲಿ ಜಗತ್ತಿನ ಐದನೇ ಬಲಾಢ್ಯ ರಾಷ್ಟ್ರವಾಗಿ ನಿಂತಿದೆ. ೨೦೨೭ರ ಹೊತ್ತಿಗೆ ದೇಶವು ಐದು ಟ್ರಿಲಿಯನ್ ಆರ್ಥಿಕತೆಯ ರಾಷ್ಟ್ರವಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಜಾಗತಿಕವಾಗಿ ಬಹುತೇಕ ಪ್ರಮುಖ ದೇಶಗಳು ಆರ್ಥಿಕ ಸಂಕಷ್ಟದಲ್ಲಿರುವಾಗ, ಭಾರತದ ಆರ್ಥಿಕತೆಯ ಬೆಳವಣಿಗೆಯ ದರ ೨೦೨೩-೨೪ರ ಮೂರನೇ ತ್ರೈಮಾಸಿಕದಲ್ಲಿ ಶೇ.೮.೪ರಷ್ಟು ಪ್ರಗತಿಯನ್ನು ಸಾಧಿಸಿದೆ. ದೇಶದ ಆರ್ಥಿಕ ಚಟುವಟಿಕೆಗಳ ವೇಗ ಹೆಚ್ಚಿದ್ದು, ಜಿಎಸ್‌ಟಿ ಬಂದಾಗಿನಿಂದ ವರ್ಷದಿಂದ ವರ್ಷಕ್ಕೆ ಶೇ.೧೨.೪ರಷ್ಟು ಬೆಳವಣಿಗೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ೨.೧೦ ಲಕ್ಷ ಕೋಟಿ ರು. ಮೈಲಿಗಲ್ಲನ್ನು ದಾಟಿ ಹೊಸ ದಾಖಲೆ ಬರೆದಿದೆ. ಇದು ಆರ್ಥಿಕತೆಯ ಸದೃಢತೆಗೆ ಹಿಡಿದ ಕನ್ನಡಿಯಾಗಿದೆ. ಭಾರತದ ಹಣಕಾಸು ಕ್ಷೇತ್ರದಲ್ಲಿ ನಡೆದಿರುವಂಥ ಡಿಜಿಟಲ್ ಕ್ರಾಂತಿಯು ಜಗತ್ತಿನೆಲ್ಲಾ ದೇಶಗಳ ಹುಬ್ಬೇರುವಂತೆ ಮಾಡಿದೆ. ಕಾರಣ, ನಮ್ಮ ಡಿಜಿಟಲ್ ಕ್ರಾಂತಿಯು ಬಹಳ ದಕ್ಷತೆಯಿಂದ ಕೂಡಿದ್ದು ಪರಿಣಾಮಕಾರಿಯಾಗಿದೆ.

ಕಳೆದ ೨೦೨೩-೨೪ನೇ ಸಾಲಿಗೆ ಭಾರತದ ಜಿಡಿಪಿ ೩.೬-೩.೭ ಟ್ರಿಲಿಯನ್ ಡಾಲರ್‌ನಷ್ಟಿದೆ. ಅಂದರೆ ೨೦೧೪ರಲ್ಲಿ ೧೧೩ ಲಕ್ಷ ಕೋಟಿಯಷ್ಟಿದ್ದ ಜಿಡಿಪಿ ಇಂದು ೨೯೪ ಲಕ್ಷ ಕೋಟಿ ರುಪಾಯಿಗೆ ಏರಿದೆ. ೨೦೨೫ರ ಹೊತ್ತಿಗೆ ಇದು ೩೩೦ ಲಕ್ಷ ಕೋಟಿ ರುಪಾಯಿಗೆ ಏರುವ ಅಂದಾಜಿದೆ. ಜಿಡಿಪಿಯು ಶೇ.೭.೫ರಿಂದ ಶೇ.೮ರಷ್ಟು ಬೆಳವಣಿಗೆ ದರ ಕಾಯ್ದುಕೊಂಡು, ಹಣದುಬ್ಬರವನ್ನು ಶೇ.೩-೪ರಷ್ಟು ನಿಯಂತ್ರಿಸಿಕೊಂಡರೆ, ಡಾಲರ್-ರುಪಾಯಿ ಮೌಲ್ಯ ಸ್ಥಿರವಾಗಿದ್ದರೆ, ೨೦೨೭ರೊಳಗೆ ಭಾರತವು ೫ ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ. ಇದು ಸಂಪೂರ್ಣ ಡಾಲರ್-ರುಪಾಯಿ ಮೌಲ್ಯ ಆಧರಿತವಾಗಿರುತ್ತದೆ.

ಭಾರತ ಸರಕಾರವು ಕಳೆದ ೧೦ ವರ್ಷಗಳಿಂದೀಚೆಗೆ ಬಂಡವಾಳ ವೆಚ್ಚಕ್ಕಾಗಿ ೪೫ ಲಕ್ಷ ಕೋಟಿ ರು. ಖರ್ಚು ಮಾಡಿದೆ. ಇದರಲ್ಲಿ ೩೫ ಲಕ್ಷ ಕೋಟಿ ತೆರಿಗೆ ಸಂಗ್ರಹದಿಂದ ಬಂದಿದ್ದರೆ ಉಳಿದ ೧೦ ಲಕ್ಷ ಕೋಟಿಯನ್ನು ಮಾತ್ರ ಸಾಲ ಮಾಡಲಾಗಿದೆ. ೨೦೨೩-೨೪ರಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ೧೦೭ ಲಕ್ಷ
ಕೋಟಿ ಮತ್ತು ರೈಲ್ವೆ ಕ್ಷೇತ್ರಕ್ಕೆ ೨೪ ಲಕ್ಷ ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಾಗಿದೆ. ೨೦೧೪ರ ಹಿಂದಿನ ವರ್ಷಗಳಲ್ಲಿ ರೈಲ್ವೆ ಇಲಾಖೆಗೆ ಖರ್ಚು ಮಾಡಿದ ಹಣದ ೯ ಪಟ್ಟು ಹಣವನ್ನು ವಿನಿಯೋಗಿಸಲಾಗಿದೆ.

ಹತ್ತು ವರ್ಷಗಳ ಹಿಂದೆ, ೨೦ ರಾಷ್ಟ್ರೀಯ ಬ್ಯಾಂಕುಗಳ ಪೈಕಿ ೧೧ ಬ್ಯಾಂಕುಗಳು ಮುಳುಗಿಹೋಗುವ ಸ್ಥಿತಿಯಲ್ಲಿದ್ದವು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಆರ್ಥಿಕತೆಯನ್ನು ಗಟ್ಟಿಗೊಳಿಸಲು ದಿವಾಳಿತನದ ಕಾಯ್ದೆ, ಜಿಎಸ್‌ಟಿ, ಬೇನಾಮಿ ವಸ್ತುಗಳ ಕಾಯ್ದೆ, ನೋಟು ಅಮಾನ್ಯೀಕರಣದಂಥ ಸದೃಢ ನಿಲುವು ಗಳನ್ನು ಭಾರತ ಸರಕಾರ ತೆಗೆದುಕೊಂಡಿತು. ಮಾತ್ರವಲ್ಲದೆ, ಗ್ರಾಹಕರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಉತ್ತಮ ಹಾಗೂ ಶೀಘ್ರಸೇವೆ ಒದಗಿಸಲು ಎಲ್ಲಾ ಬ್ಯಾಂಕುಗಳ ಕಚೇರಿ ವ್ಯವಸ್ಥೆಯನ್ನು ಸಂಪೂರ್ಣ ಗಣಕೀಕರಣ ಮಾಡುವುದರ ಜತೆಗೆ ಹಲವಾರು ವಿದ್ಯುನ್ಮಾನ ಪರಿಕರಗಳನ್ನು ಅಳವಡಿಸಲಾಯಿತು.

ಬ್ಯಾಂಕುಗಳು ತಮ್ಮ ಆದಾಯದ ಶೇ.೧೧.೦೧ರವರೆಗೆ ಡಿಜಿಟಲೀಕರಣಕ್ಕೆ ವೆಚ್ಚ ಮಾಡಿದರು ಕೂಡ, ಎಲ್ಲಾ ಬ್ಯಾಂಕುಗಳು ಲಾಭದಾಯಕವಾಗಿ
ಮುಂದುವರಿಯುತ್ತಿರುವುದು ಗಮನಾರ್ಹ. ದೇಶದ ಬಹುತೇಕ ಎಲ್ಲರನ್ನೂ ವಿತ್ತೀಯ ಸೇರ್ಪಡೆಗೆ ಒಳಪಡಿಸಿರುವುದು ಇನ್ನೊಂದು ಮಹತ್ಕಾರ್ಯವೇ  ಆಗಿದೆ. ಇದು ಅನಿವಾರ್ಯವಾಗಿತ್ತು. ದೇಶದಲ್ಲಿ ಉದ್ಯೋಗಕ್ಕೆ ಕೊರತೆಯಿಲ್ಲ. ಉದ್ಯೋಗಿಗಳಿಗೆ ಸಿಗುವ ವೇತನ ಕಡಿಮೆಯಿರಬಹುದೇ ಹೊರತು
ಉದ್ಯೋಗಗಳಿಗೆ ಅಭಾವವಿಲ್ಲ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕೆಲ ತಿಂಗಳುಗಳಲ್ಲಿಯೇ ಹೊಸ ಉದ್ಯೋಗಗಳ ಸೃಷ್ಟಿಯಾಗುವ ನಿರೀಕ್ಷೆಯಿದೆ.

ದೇಶದಲ್ಲಿ ವರ್ಷಕ್ಕೆ ಒಂದು ಕೋಟಿಯಷ್ಟು ಯುವಜನರು ಪದವೀಧರರಾಗಿ ಹೊರಬರುತ್ತಿದ್ದಾರೆ. ಹಾಗೆಯೇ ೪.೩ ಕೋಟಿ ಯುವಜನರು ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ಪದವೀಧರರು ಉನ್ನತ ಶಿಕ್ಷಣಕ್ಕೆ ನೋಂದಣಿಯಾಗುವ ಪ್ರಮಾಣ ಶೇ.೨೮ರಷ್ಟಿದೆ. ವಾರ್ಷಿಕವಾಗಿ ಎರಡು ಕೋಟಿ ಉದ್ಯೋಗ ಸಿಗುವ
ವಾತಾವರಣ ಸೃಷ್ಟಿಯಾಗಿದೆ. ‘ಕೆಲಸ ಮಾಡುವವರಿಗೆ ಉದ್ಯೋಗ ಯಾವತ್ತೂ ಇದೆ. ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗಗಳನ್ನು ಅಪೇಕ್ಷಿಸುವುದು ಕೆಲವೊಮ್ಮೆ ಅಸಾಧ್ಯದ ಮಾತು’ ಎಂದು ಮಹಾತ್ಮ ಗಾಂಧಿಜಿ ಸಾಕಷ್ಟು ವರ್ಷಗಳ ಹಿಂದೆಯೇ ಹೇಳಿದ್ದರು. ಈ ಮಾತು ಇಂದಿಗೂ ಸತ್ಯ.

ಪ್ರಸಕ್ತ ಸನ್ನಿವೇಶದಲ್ಲಿ, ಉತ್ತರ ಭಾರತದಲ್ಲಿ ಪದವೀಧರರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ, ದಕ್ಷಿಣ ಭಾರತದಲ್ಲಿ ಹೆಚ್ಚು ಉದ್ಯೋಗ ಸಿಗುತ್ತಿದೆ. ಸದ್ಯ, ಪದವಿ ಶಿಕ್ಷಣ ಮುಗಿಸಿ ಹೊರಬರುವ ಹೊಸ ಮುಖಗಳಿಗೆ ಕೆಲಸ ಸಿಗುವುದು ಸವಾಲಾಗಿದೆ. ಹೆಣ್ಣು ಮಕ್ಕಳೂ ಹೆಚ್ಚೆಚ್ಚು ಸಂಖ್ಯೆಯಲ್ಲಿ ಪದವೀಧರ ರಾಗುತ್ತಿರುವುದು ಶ್ಲಾಘನೀಯ ಬೆಳವಣಿಗೆ ಮತ್ತು ಅಭಿನಂದನಾರ್ಹವೇ ಆಗಿದೆ. ಈಗ ಕ್ಯಾಂಪಸ್ ನೇಮಕ ಕಡಿಮೆಯಾಗಿದೆ, ಪ್ರಾರಂಭದಲ್ಲಿಯೇ ‘ವೈಟ್ ಕಾಲರ್’ ಉದ್ಯೋಗ, ಕೈತುಂಬಾ ಸಂಬಳ, ಪೂಣಾವಧಿ ಉದ್ಯೋಗ ಗಣನೀಯವಾಗಿ ಕಡಿಮೆಯಾಗಿವೆ. ನಿರುದ್ಯೋಗವೆಂಬುದು ಇಂದು ನಿನ್ನೆಯ
ಸಮಸ್ಯೆಯಲ್ಲ, ಅದು ಇಡೀ ಜಗತ್ತನ್ನೇ ಆವರಿಸಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಕಳೆದೊಂದು ದಶಕದಲ್ಲಿ ನಿರುದ್ಯೋಗ ಸಮಸ್ಯೆಯು ಗಣನೀಯವಾಗಿ ಕಡಿಮೆಯಾಗಿದೆ ಎಂಬುದನ್ನು ಗಮನಿಸಬೇಕು.

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಪ್ರಭಾವ ಸದ್ಯ ಭಾರತದ ಮೇಲೆ ದಟ್ಟವಾಗಿಲ್ಲ. ಆದರೆ ೫-೬ ವರ್ಷಗಳ ಬಳಿಕ ಅದು ತೀವ್ರವಾಗುವ ಸಾಧ್ಯತೆ ಯಿದೆ. ಒಟ್ಟಾರೆ ಜಿಡಿಪಿ ಬೆಳವಣಿಗೆ, ಹಣದುಬ್ಬರ ನಿಯಂತ್ರಣ, ಡಾಲರ್-ರುಪಾಯಿ ಮೌಲ್ಯ ಇವು ಸ್ಥಿರತೆಯನ್ನು ಕಾಯ್ದುಕೊಂಡರೆ ಭಾರತವು ೨೦೨೭ರೊಳಗೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲಿದೆ, ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರುವಲ್ಲಿ
ಗಟ್ಟಿಹೆಜ್ಜೆಯನ್ನು ಇಡಲಿದೆ. ದೇಶದಲ್ಲಿ ಎಲ್ಲಾ ಜಾತಿಗಳಿಗಿಂತಲೂ ದೊಡ್ಡ ಜಾತಿ ‘ಬಡತನ’ ಎಂದು ಆಗಾಗ ಹೇಳುವುದುಂಟು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಬಡತನದ ಪ್ರಮಾಣವು ಕೆಳಗಿಳಿಯತೊಡಗಿದೆ. ೨೦೧೧-೧೨ರ ವರ್ಷದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ೨೭ ಕೋಟಿ ಎಂದು ಅಂದಾಜಿಸಲಾಗಿತ್ತು ಮತ್ತು ಅದು ಅಂದಿನ ಜನಸಂಖ್ಯೆಯ ಶೇ.೨೧.೫ರಷ್ಟು ಆಗಿತ್ತು.

ನೀತಿ ಆಯೋಗದ ಪರಿಶೀಲನೆಯ ಪ್ರಕಾರ, ೨೦೧೩-೧೪ ಮತ್ತು ೨೦೨೨-೨೩ರ ನಡುವೆ ದೇಶದ ಶೇ.೨೪.೨೮ರಷ್ಟು ಜನರು ಬಹು ಆಯಾಮದ ಬಡತನ ದಿಂದ ಹೊರಬಂದಿದ್ದಾರೆ. ವಿಶ್ವಸಂಸ್ಥೆಯ ಲೆಕ್ಕಾಚಾರದಂತೆ, ೨೦೨೩ರಲ್ಲಿ ಭಾರತದ ಅಂದಾಜು ಜನಸಂಖ್ಯೆ ೧೪೨.೮ ಕೋಟಿಯಷ್ಟಿದ್ದು, ಬಡತನದ ಶೇಕಡಾವಾರು ಪ್ರಮಾಣದಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಬಹು ಆಯಾಮದ ಬಡವರು ನವ ಮಧ್ಯಮವರ್ಗಕ್ಕೆ ಸೇರಿರುವುದನ್ನು ಅದರ ವರದಿ ತಿಳಿಸುತ್ತದೆ. ಒಟ್ಟಾರೆ ಹೇಳುವುದಾದರೆ, ಕಳೆದ ೧೦ ವರ್ಷಗಳಲ್ಲಿ ಕೈಗೊಳ್ಳಲಾದ ವಿಭಿನ್ನ ಸುಧಾರಣಾ ಕ್ರಮಗಳಿಂದಾಗಿ ಭಾರತವು ಸಂಪೂರ್ಣ ಆರ್ಥಿಕಾಭಿವೃದ್ಧಿಯನ್ನು ಹೊಂದಿ, ಪ್ರಗತಿಯ ಪಥದತ್ತ ದಾಪುಗಾಲು ಹಾಕಿದೆ.

(ಲೇಖಕರು ವಿಜಯ ಬ್ಯಾಂಕ್‌ನ ನಿವೃತ್ತ ಮುಖ್ಯ
ಪ್ರಬಂಧಕರು)

Leave a Reply

Your email address will not be published. Required fields are marked *

error: Content is protected !!