Tuesday, 14th May 2024

ಮತದಾರರ ಒಲವು ಯಾರೆಡೆಗೆ ?

ಅಶ್ವತ್ಥಕಟ್ಟೆ

ranjith.hoskere@gmail.com

ಭಾರತವನ್ನು ಮುಂದಿನ ಐದು ವರ್ಷ ಯಾರು ಆಳಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ದೇಶಾದ್ಯಂತ ಏಳು ಹಂತದಲ್ಲಿ ಲೋಕಸಭಾ ಚುನಾವಣಾ ಮತದಾನವನ್ನು ವಿಭಜಿಸಲಾಗಿದೆ. ಚುನಾವಣೆಯ ಹವಾ ದಿನದಿಂದ ದಿನಕ್ಕೆ ಜೋರಾಗಿದ್ದು, ಈಗಾಗಲೇ ಮೊದಲ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

ಕೆಲವೊಂದಷ್ಟು ಗದ್ದಲ, ಗೊಂದಲದ ನಡುವೆ ಮೊದಲ ಹಂತದ ಚುನಾವಣೆ ಮುಗಿಸಿ, ಇದೀಗ ಎರಡನೇ ಹಂತಕ್ಕೆ ಇಡೀ ದೇಶ ಸಜ್ಜಾಗಿದೆ. ಈಗಾಗಲೇ ನಾಮಪತ್ರ ಹಿಂಪಡೆಯಲು ಕೊನೆಯ ದಿನ ಮುಕ್ತಾಯವಾಗಿರುವುದರಿಂದ ಲೋಕಸಭಾ ಚುನಾವಣಾ ಅಖಾಡದಲ್ಲಿ ಅಂತಿಮ ಅಭ್ಯರ್ಥಿಗಳ್ಯಾರು ಉಳಿಯಲಿದ್ದಾರೆ ಎನ್ನುವುದು ಅಂತಿಮವಾಗಿದೆ. ಎರಡನೇ ಹಂತದ ಮತದಾನ ಏ.೨೬ರಂದು ನಡೆಯಲಿದ್ದು, ಕರ್ನಾಟಕದ ಮಟ್ಟಿಗೆ ಇದು ಪ್ರಮುಖ ವಾಗಿದೆ.

ಇದಕ್ಕೆ ಕಾರಣವೆಂದರೆ, ಎರಡನೇ ಹಂತದಲ್ಲಿ ರಾಜ್ಯದ ಶೇ.೫೦ರಷ್ಟು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈಗಾಗಲೇ ಭರ್ಜರಿ ವಾಕ್ಸಮರ,
ಗದ್ದಲ-ಗಲಾಟೆಯ ನಡುವೆಯೂ ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಭರದಿಂದ ಸಾಗಿದ್ದು, ಇನ್ನೆರಡು ದಿನದಲ್ಲಿ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಕರ್ನಾಟಕದಲ್ಲಿ ಕಳೆದ ಬಾರಿಯಂತೆ ಈ ಸಲವೂ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಮೇ.೬ರಂದು ನಡೆಯಲಿರುವ ಎರಡನೇ ಹಂತದ ಮತದಾನಕ್ಕೆ ಹೋಲಿಸಿದರೆ ಮೊದಲ ಹಂತದ ಮತದಾನ ಮೂರು ರಾಜಕೀಯ ಪಕ್ಷಗಳಿಗೆ ಒಂದೊಂದು ರೀತಿಯಲ್ಲಿ ಪ್ರಮುಖ ಎನಿಸಿದೆ ಎಂದರೆ ತಪ್ಪಾಗುವುದಿಲ್ಲ.

ಮೊದಲಿಗೆ ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಅದನ್ನೇ ಮುಂದಿಟ್ಟುಕೊಂಡು ಚುನಾವಣೆ ನಡೆಸುತ್ತಿರುವ ಕಾಂಗ್ರೆಸ್, ಹಳೇ ಮೈಸೂರು
ಭಾಗವನ್ನು ಕಬ್ಜಾ ಮಾಡುವ ಗುರಿಯನ್ನು ಹೊಂದಿದೆ. ಇತ್ತ ತಮ್ಮದೇ ಆದ ರಾಜಕೀಯ ಲೆಕ್ಕಾಚಾರಗಳನ್ನು, ಸೈದ್ಧಾಂತಿಕವಾಗಿ ಭಿನ್ನ ನಿಲುವನ್ನು ಹೊಂದಿದ್ದರೂ ಬಿಜೆಪಿ-ಜೆಡಿಎಸ್ ಮೈತ್ರಿಪಕ್ಷಗಳಾಗಿವೆ. ಇದೀಗ ಎರಡೂ ಪಕ್ಷಗಳಿಗೆ ತಮ್ಮ ‘ಮೈತ್ರಿ’ ಎಷ್ಟು ಗಟ್ಟಿಯಾಗಿದೆ ಎನ್ನುವುದನ್ನು ಪರೀಕ್ಷೆ
ಮಾಡುವ ಕಾಲ ಬಂದಿದೆ.

ಈ ಹಿಂದೆ ೨೦೧೮ರ ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ರಚಿಸಿದವು. ಅದಾದ ಬಳಿಕ ೨೦೧೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜಂಟಿಯಾಗಿಯೇ ಸ್ಪರ್ಧಿಸಿ ಎರಡೂ ಪಕ್ಷದ ಅಭ್ಯರ್ಥಿಗಳು ಹೀನಾಯವಾಗಿ ಸೋಲನುಭವಿಸಿದ್ದರು. ಈ ರೀತಿಯ ಹೀನಾಯ ಸೋಲಿಗೆ ಬಿಜೆಪಿ, ನರೇಂದ್ರ ಮೋದಿ ಅಲೆ ಎನ್ನುವುದಕ್ಕಿಂತ ಹೆಚ್ಚಾಗಿ, ಮೇಲ್ಮಟ್ಟದಲ್ಲಿ ಮಾಡಿಕೊಂಡಿದ್ದ ಮೈತ್ರಿಯನ್ನು, ತಳಮಟ್ಟದ ಕಾರ್ಯ ಕರ್ತರವರೆಗೆ ರವಾನಿಸುವಲ್ಲಿ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಎಡವಿದ್ದವು. ಆದ್ದರಿಂದಲೇ, ಇಬ್ಬರ ಜಗಳದಲ್ಲಿ ಬಿಜೆಪಿ ಲಾಭ ಮಾಡಿಕೊಂಡು ೨೬ ಕ್ಷೇತ್ರಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸಿತ್ತು.

ಅದಾದ ಬಳಿಕ ಸಮ್ಮಿಶ್ರ ಸರಕಾರ ಬಿದ್ದು, ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದು, ಬಳಿಕ ೨೦೨೩ರ ವಿಧಾನಸಭಾ ಚುನಾವಣೆ ಯಲ್ಲಿ ಹೀನಾಯವಾಗಿ ಸೋತಿದ್ದು ಇತಿಹಾಸ. ಇದಾದ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಲೋಕಸಭಾ ಚುನವಣೆಯನ್ನು ಎದುರಿಸಲು ಸಜ್ಜಾಗಿವೆ. ಬಿಜೆಪಿ ಹೇಳಿದಕ್ಕೆಲ್ಲ ‘ಒಕೆ’ ಎಂದುಕೊಂಡು ೨೫ ಸೀಟುಗಳನ್ನು ಜೆಡಿಎಸ್ ವರಿಷ್ಠರು ಬಿಟ್ಟುಕೊಟ್ಟಿದ್ದಾರೆ. ಹಾಗೆ ನೋಡಿದರೆ, ಜೆಡಿಎಸ್‌ನ ಈ ಹೊಂದಾ ಣಿಕೆ ಅಧಿಕೃತವಾಗಿ ಕಳೆದ ಮೂರ‍್ನಾಲ್ಕು ತಿಂಗಳಲ್ಲಿ ಆಗಿದೆ. ಅನಽಕೃತವಾಗಿ ವರ್ಷದ ಹಿಂದೆಯೇ ನಡೆದಿತ್ತು ಎಂದರೆ ತಪ್ಪಾಗುವುದಿಲ್ಲ.

ರಾಜಕೀಯದಲ್ಲಿರುವ ‘ಶತ್ರುವಿನ ಶತ್ರು,  ಮಿತ್ರ’ ಎನ್ನುವ ಮಾತುಗಳು ಸದ್ಯದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಸ್ಪಷ್ಟ ಉದಾಹರಣೆಯಾಗಿದೆ. ಸಮ್ಮಿಶ್ರ ಸರಕಾರ
ಉರುಳುವ ಸಮಯದಲ್ಲಿ ಪರಸ್ಪರ ವಾಗ್ಬಾಣಗಳನ್ನು ಬಿಟ್ಟಿದ್ದ ಬಿಜೆಪಿ-ಜೆಡಿಎಸ್ ನಾಯಕರು, ಒಬ್ಬರ ಮುಖವನ್ನು ಒಬ್ಬರು ನೋಡುವುದಿಲ್ಲ ಎನ್ನುವ ಮಾತನ್ನು ಆಡಿದ್ದರು. ಆದರೆ ದಿನದಿಂದ ದಿನಕ್ಕೆ ಕಾಂಗ್ರೆಸ್ ರಾಜ್ಯದಲ್ಲಿ ಗಟ್ಟಿಯಾಗುತ್ತಿದೆ ಎನ್ನುವುದು ಅರಿವಿಗೆ ಬರುತ್ತಿದ್ದಂತೆ, ‘ಸ್ನೇಹ’ ವನ್ನು ಪುನರಾ ರಂಭಿಸಿದ್ದರು. ಇದಕ್ಕೆ ಪೂರಕವಾಗಿ ೨೦೨೦ ರಿಂದಲೇ ಬಿಜೆಪಿ ನಾಯಕರೊಂದಿಗೆ ಜೆಡಿಎಸ್ ಸಖ್ಯ ಹೆಚ್ಚಾಗಿತ್ತು.

ಬಿಜೆಪಿ ಅಧಿಕಾರದಲ್ಲಿದ್ದರೂ ಜೆಡಿಎಸ್ ನಾಯಕರು ಬಿಜೆಪಿಯಲ್ಲಿ ಟೀಕಿಸುವ ಬದಲು ಕಾಂಗ್ರೆಸ್ ಅನ್ನು ಟೀಕಿಸಲು ಪ್ರತಿಹಂತದ ವೇದಿಕೆಯನ್ನು ಬಳಸಿ ಕೊಳ್ಳುತ್ತಿದ್ದರು. ಅದಾದ ಬಳಿಕ ಬಿಜೆಪಿ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರೊಂದಿಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು. ಅಲ್ಲಿಂದ ಶುರುವಾದ ಇಬ್ಬರ ದೋಸ್ತಿಗೆ ಅಧಿಕೃತ ಮೈತ್ರಿ ಸ್ಥಾನ ಸಿಕ್ಕಿದ್ದು ಮಾತ್ರ ನಾಲ್ಕು ತಿಂಗಳ ಹಿಂದೆ.
ಕಳೆದೊಂದು ವರ್ಷದ ಬೆಳವಣಿಗೆಯನ್ನು ಗಮನಿಸಿದರೆ ಬಿಜೆಪಿ-ಜೆಡಿಎಸ್ ಮೈತ್ರಿಯೇನೂ ಬಹುದೊಡ್ಡ ಅಚ್ಚರಿಯಾಗಿರಲಿಲ್ಲ.

ಯಡಿಯೂರಪ್ಪ ಅವರು ವಯಸ್ಸಿನ ಕಾರಣ ದಿಂದ ರಾಜಕೀಯವಾಗಿ ಹಿಂದೆ ಸರಿಯುವುದು ಖಚಿತ ವಾಗುತ್ತಿದ್ದಂತೆ, ರಾಜ್ಯ ಬಿಜೆಪಿಗೆ ಮಾಸ್ ನಾಯ ಕತ್ವದ ಕೊರತೆಯಿತ್ತು. ಈ ಕೊರತೆ ನೀಗಿಸಲು ಜೆಡಿಎಸ್‌ನೊಂದಿಗೆ ಕೈಜೋಡಿಸಿದರೆ, ಒಕ್ಕಲಿಗ ಮತಬ್ಯಾಂಕ್ ಸಿಗುತ್ತದೆ ಎನ್ನುವ ಲೆಕ್ಕಾಚಾರ ಬಿಜೆಪಿ ನಾಯಕರಿಗಿತ್ತು. ಇತ್ತ ದೇವೇಗೌಡರ ನಂತರ ಜೆಡಿಎಸ್ ಸ್ಥಿತಿಯೇನು ಎನ್ನುವ ಆತಂಕದಲ್ಲಿ ಈ ಮೈತ್ರಿಗೆ ಜೆಡಿಎಸ್ ಒಪ್ಪಿಕೊಂಡು, ಅಪ್ಪಿಕೊಂಡಿದೆ. ಆದರೆ
ಈಗಿರುವ ಪ್ರಶ್ನೆಯೆಂದರೆ, ರಾಜ್ಯ, ರಾಷ್ಟ್ರ ಮಟ್ಟದ ನಾಯಕರು ಒಪ್ಪಿಕೊಂಡಿರುವಂತೆ ಪಕ್ಷದ ತಳಮಟ್ಟದ ನಾಯಕರು, ಕಾರ್ಯಕರ್ತರು ಹಾಗೂ ಸಾಂಪ್ರದಾಯಿಕ ಮತದಾರರು ಒಪ್ಪಿಕೊಳ್ಳುವರೇ ಎನ್ನುವುದಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡಾಗಲೂ ತಳಮಟ್ಟದ ಕಾರ್ಯಕರ್ತರು ಕೈಕೊಟ್ಟಿದ್ದರಿಂದಲೇ ಹೀನಾಯ ಸೋಲನ್ನು ಎರಡೂ ಪಕ್ಷದ ಅಭ್ಯರ್ಥಿಗಳು ಅನುಭವಿಸಬೇಕಾಯಿತು. ಈಗಲೂ, ಅದೇ ರೀತಿಯಾದರೆ, ಕಾಂಗ್ರೆಸ್‌ಗೆ ಅದರ ನೇರ ಲಾಭವಾ ಗುತ್ತದೆ ಎನ್ನುವುದು ಹಲವರ ಲೆಕ್ಕಾಚಾರವಾಗಿದೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಗೂ, ಕಾಂಗ್ರೆಸ್-ಜೆಡಿಎಸ್ ಮೈತ್ರಿಗೂ ಒಂದು ವ್ಯತ್ಯಾಸವಿದೆ. ರಾಜ್ಯದ ಬಹುತೇಕ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಈವರೆಗೆ ನೇರ ಹಣಾಹಣಿ ಎದುರಿಸಿಲ್ಲ. ಆದರೆ ಜೆಡಿಎಸ್-ಕಾಂಗ್ರೆಸ್ ನೇರ ಸ್ಪಽಗಳಾಗಿದ್ದವು. ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಕಿತ್ತಾಟ ಬಹುದೊಡ್ಡ ಪ್ರಮಾಣದಲ್ಲಿತ್ತು.

ಆದ್ದರಿಂದ, ನಾಯಕರು ಸಮ್ಮಿಶ್ರ ಸರಕಾರವನ್ನು ಒಪ್ಪಿಕೊಂಡಿದ್ದರೂ ಕಾರ್ಯಕರ್ತರು ಒಪ್ಪಿರಲಿಲ್ಲ. ಈ ರೀತಿಯ ಸನ್ನಿವೇಶ ಜೆಡಿಎಸ್-ಬಿಜೆಪಿ ನಡುವೆ ಯಿಲ್ಲ. ಸಂಘಟನೆಯ ವಿಷಯದಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಈಗಷ್ಟೇ ಸಿದ್ಧವಾಗುತ್ತಿದೆ. ಇನ್ನು ಬಿಜೆಪಿ ಗಟ್ಟಿಯಾಗಿರುವ ಕರಾವಳಿ, ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಸಂಘಟನೆಯಿಲ್ಲ. ಈ ರೀತಿ ಅಸ್ತಿತ್ವವೇ ಇಲ್ಲದಿರುವ ಕ್ಷೇತ್ರಗಳಲ್ಲಿ ಕಾರ್ಯಕರ್ತರ ನಡುವಿನ ಕಿತ್ತಾಟದ ಪ್ರಶ್ನೆಯೇ ಬರುವುದಿಲ್ಲ ಎನ್ನುವುದು ಎರಡೂ ಪಕ್ಷದ ನಾಯಕರ ಲೆಕ್ಕಾಚಾರವಾಗಿದೆ.

ಬಿಜೆಪಿ ಸಂಘಟನೆ ಪ್ರಬಲವಿರುವ ಕ್ಷೇತ್ರದಲ್ಲಿ ಜೆಡಿಎಸ್ ದುಬರ್ಲವಾಗಿದ್ದು, ಜೆಡಿಎಸ್ ಸಂಘಟನೆ ಗಟ್ಟಿಯಿರುವ ಕ್ಷೇತ್ರ ದಲ್ಲಿ ಬಿಜೆಪಿಯ ಸಂಘಟನೆ ಹೇಳಿಕೊಳ್ಳುವಷ್ಟಿಲ್ಲ. ಆದ್ದರಿಂದ ಬಹುದೊಡ್ಡ ಸಮಸ್ಯೆಯಾಗುವುದಿಲ್ಲ ಎನ್ನುವುದು ಎಷ್ಟು ಸತ್ಯವೋ, ಪ್ರತಿ ಕ್ಷೇತ್ರದಲ್ಲಿಯೂ ಬಿಜೆಪಿ ಹಾಗೂ ಜೆಡಿಎಸ್‌ಗೆ ತಮ್ಮದೇ ಆದ ಸಾಂಪ್ರದಾಯಿಕ ಮತಗಳಿವೆ ಎಂಬುದೂ ಅಷ್ಟೇ ಸತ್ಯ. ಈ ಸಾಂಪ್ರದಾಯಿಕ ಮತಗಳು ೧೦ರಿಂದ ೨೦ ಸಾವಿರದಷ್ಟಿದ್ದರೂ, ಲೋಕಸಭಾ ಚುನಾವಣೆಯ ಫಲಿತಾಂಶ ಏರುಪೇರಾಗುವ ಸಾಧ್ಯತೆಯಿದೆ.

ಆದ್ದರಿಂದ ಇದೀಗ ಮೈತ್ರಿ ಅಭ್ಯರ್ಥಿಗೆ ಎರಡೂ ಪಕ್ಷಗಳ ಸಾಂಪ್ರದಾಯಿಕ ಮತಗಳು ಬಾರದೇ ತಟಸ್ಥರಾದರೂ ಪರವಾಗಿಲ್ಲ. ಆದರೆ ಒಂದೊಮ್ಮೆ ಬಂಡಾಯವಾಗಿ ಸ್ಪರ್ಧಿಸಿ, ಮತಗಳನ್ನು ವಿಭಜನೆ ಮಾಡಿದರೆ ಪ್ರತಿಪಕ್ಷಕ್ಕೆ ಬಹುದೊಡ್ಡ ಲಾಭವಾಗುತ್ತದೆ ಎನ್ನುವುದು ನಾಯಕರ ಆತಂಕವಾಗಿದೆ.
ಆದ್ದರಿಂದ ಯಾವೆಲ್ಲ ಕ್ಷೇತ್ರದಲ್ಲಿ ತಳಮಟ್ಟದಲ್ಲಿ ಸಮಸ್ಯೆ ಗಳಿವೆಯೋ ಅಲ್ಲಿ, ಅಭ್ಯರ್ಥಿ ಪರ ಮತಯಾಚಿಸದಿದ್ದರೂ ಪರವಾಗಿಲ್ಲ. ಆದರೆ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸದಿದ್ದರೆ ಸಾಕೆಂಬ ಮಾತು ಮೈತ್ರಿ ನಾಯಕರಲ್ಲಿ ಕೇಳಿಬರುತ್ತಿದೆ.

ಹಾಗೆ ನೋಡಿದರೆ, ಬಿಜೆಪಿಗೆ ಜೆಡಿಎಸ್‌ನಿಂದ ಬಹುದೊಡ್ಡ ಪ್ರಮಾಣದಲ್ಲಿ ಹಳೇ ಮೈಸೂರು ಭಾಗದಲ್ಲಿ ಸಹಾಯ ವಾಗಲಿದೆ ಎನ್ನುವ ಲೆಕ್ಕಾಚಾರ ಬಿಜೆಪಿ ನಾಯಕರಲ್ಲಿದೆ. ಇನ್ನುಳಿದಂತೆ ಉತ್ತರ ಕರ್ನಾಟಕದ ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಜೆಡಿಎಸ್ ಪಾಲಿನ ಮೂರು ಕ್ಷೇತ್ರ ಗಳನ್ನು ಆ ಪಕ್ಷದ ಭದ್ರಕೋಟೆ ಎನಿಸಿರುವ ಲೋಕಸಭಾ ಕ್ಷೇತ್ರದಲ್ಲಿಯೇ ನೀಡಿರುವುದರಿಂದ ಇನ್ನುಳಿದ ಭಾಗದಲ್ಲಿ ಬಿಜೆಪಿಗೆ ಜೆಡಿಎಸ್ ಮತಗಳು ಬಂದರೆ, ಹಳೇ ಮೈಸೂರು ಭಾಗದಲ್ಲಿ ಇನ್ನಷ್ಟು ಸಂಘಟನೆಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಈ ಕಾರಣಕ್ಕಾಗಿಯೇ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಎಲ್ಲ ಕಾರ್ಯಕ್ರಮ ಗಳಿಗೆ ಆಹ್ವಾನಿಸುತ್ತಿದ್ದಾರೆ.

ಆದರೆ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮತದಾರರು ‘ಜಾತ್ಯತೀತ’ ಮನಸ್ಥಿತಿಯಲ್ಲಿರುವುದರಿಂದ ಸುಲಭವಾಗಿ ಬಿಜೆಪಿಗೆ ಮತ ನೀಡು
ತ್ತಾರೆ ಎನ್ನಲಾಗುವುದಿಲ್ಲ. ಕಳೆದ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಸಮಾನ ಮನಸ್ಕರಾಗಿದ್ದರೂ, ಮತಗಳು ಸುಲಭವಾಗಿ ಹಂಚಿಕೆಯಾಗಲಿಲ್ಲ. ಬದಲಿಗೆ ಹಲವು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯ ವಿರುದ್ಧ ಮೈತ್ರಿ ಪಕ್ಷದ ನಾಯಕರುಗಳೇ ಕೆಲಸ ಮಾಡಿದ್ದರು.
ಆ ಉದಾಹರಣೆ ಕಣ್ಣ ಮುಂದಿರುವುದರಿಂದ, ಭಿನ್ನ ಸಿದ್ಧಾಂತದ ಪಕ್ಷಗಳು ಒಂದಾಗಿರುವ ಈ ಬಾರಿಯ ಈ ಮೈತ್ರಿಯನ್ನು ಮತದಾರರು ಯಾವ ರೀತಿ ನೋಡುತ್ತಾರೆ ಎನ್ನುವುದೇ ಈಗಿರುವ ಕುತೂಹಲ.

‘ರಾಜಕೀಯದಲ್ಲಿ ಶತ್ರುವಿನ ಶತ್ರು, ಮಿತ್ರ’ ಎನ್ನುವ ಮಾತಿಗೆ ಪೂರಕವಾಗಿ ಶತ್ರುವನ್ನು ಸಂಹರಿಸಬೇಕೆಂಬ ಬಿಜೆಪಿಯ ಆಶಯ ಹಾಗೂ ಪಕ್ಷದ ಅಸ್ತಿತ್ವ ವನ್ನು ಉಳಿಸಿಕೊಳ್ಳಬೇಕೆಂಬ ಜೆಡಿಎಸ್ ಆಸೆಯ ಫಲವಾಗಿರುವ ಈ ಮೈತ್ರಿಯನ್ನು ರಾಜ್ಯದ ಜನ ಹೇಗೆ ನೋಡಲಿದ್ದಾರೆ ಎನ್ನುವುದಕ್ಕೆ ಉತ್ತರ ಸಿಗಬೇ ಕೆಂದರೆ, ಫಲಿತಾಂಶ ಹೊರಬೀಳಬೇಕು. ಫಲಿತಾಂಶದಲ್ಲಿ ಏರುಪೇರಾದರೂ, ಎರಡೂ ಪಕ್ಷಕ್ಕೂ ಒಬ್ಬರ ‘ಊರುಗೋಲು’ ಅಗತ್ಯವಿರುವುದರಿಂದ ತಾತ್ಕಾ ಲಿಕವಾಗಿ ಈ ಮೈತ್ರಿಗೆ ಬಹುದೊಡ್ಡ ಗಂಡಾಂತರವಿದೆ ಎನ್ನಲಾಗುವುದಿಲ್ಲ.

ಆದರೆ ದೆಹಲಿ ನಾಯಕರು, ರಾಜ್ಯ ನಾಯಕರ ನಡುವಿನ ಈ ಮೈತ್ರಿಯನ್ನು ತಳಮಟ್ಟದಲ್ಲಿರುವ ಎರಡೂ ಪಕ್ಷಗಳ ಕಾರ್ಯಕರ್ತರು ಒಪ್ಪುವರೇ? ಭಿನ್ನ ಸೈದ್ಧಾಂತಿಕ ವಿಚಾರಗಳೊಂದಿಗೆ ಪಕ್ಷವನ್ನು ಕಟ್ಟಿಕೊಂಡು ಬಂದಿರುವ ಈ ಇಬ್ಬರ ಮೈತ್ರಿ ನಿಜಕ್ಕೂ ವರ್ಕ್ ಔಟ್ ಆಗುವುದೇ? ಎನ್ನುವ ಪ್ರಶ್ನೆಗಳಿಗೆ ಜೂ.೬ರ ಫಲಿತಾಂಶವೇ ಉತ್ತರವಾಗಲಿದೆ. ಆದರೆ ಬಿಜೆಪಿ-ಜೆಡಿಎಸ್‌ನ ಸಮಾನ ಶತ್ರುವಾಗಿರುವ ಕಾಂಗ್ರೆಸ್ ಅನ್ನು ಸೋಲಿಸಲು ಮಾಡಿಕೊಂಡಿರುವ ಈ ಮೈತ್ರಿ ಯಿಂದ, ಕಾಂಗ್ರೆಸ್‌ಗೆ ನಷ್ಟವಾಗುವುದಕ್ಕಿಂತ ಲಾಭವೇ ಆದರೆ, ಮುಂದೇನು ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!