Sunday, 19th May 2024

ಚಿತ್ರಮಂದಿರಗಳಲ್ಲಿ 50- 50 ಸೂತ್ರದಿಂದ ಚಿತ್ರರಂಗಕ್ಕೆ ಭಾರೀ ಪೆಟ್ಟು: ಕೆಎಫ್‌ಸಿಸಿ

ಬೆಂಗಳೂರು: ಕೋವಿಡ್ ಲಾಕ್‍ಡೌನ್‍ನಿಂದಾಗಿ ಚಿತ್ರರಂಗ ಚೇತರಿಸಿಕೊಳ್ಳುತ್ತಿದ್ದು ಮತ್ತೆ ಚಿತ್ರಮಂದಿರಗಳಲ್ಲಿ 50- 50 ಸೂತ್ರ ಅಳವಡಿಸಲು ಹೊರಟಿರುವುದು ಚಿತ್ರರಂಗಕ್ಕೆ ಭಾರೀ ಪೆಟ್ಟು ಬೀಳಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಚಿತ್ರಮಂದಿರಗಳಲ್ಲಿ 50: 50 ಸೂತ್ರ ಅಳವಡಿಸಲು ಸರ್ಕಾರ ತೀರ್ಮಾನಿಸಿ ರುವ ಕ್ರಮ ಸರಿಯಲ್ಲ ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಸಲ್ಲಿಸಲು ಶನಿವಾರ ನಡೆದ ಸಭೆಯಲ್ಲಿ ಮಂಡಳಿ ಸದಸ್ಯರು ತೀರ್ಮಾನ ಕೈಗೊಂಡಿದ್ದಾರೆ.

ಕೋವಿಡ್ ಲಾಕ್‍ಡೌನ್ ನಂತರ ಈಗ ಸ್ಟಾರ್ ನಟರುಗಳ ಚಿತ್ರಗಳು ಬಿಡುಗಡೆಯಾಗುತ್ತಿವೆ. ಧ್ರುವಸರ್ಜಾ ಅಭಿನಯದ ಪೊಗರು, ಚಾಲೆಂಜಿಂಗ್‍ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರಗಳು ಯಶಸ್ಸಿನ ಹಾದಿಯಲ್ಲಿದೆ. ಪವರ್‌ ಸ್ಟಾರ್‌  ಪುನೀತ್‍ ರಾಜ್‍ ಕುಮಾರ್ ಅಭಿನಯದ ಯುವರತ್ನ ಚಿತ್ರಕ್ಕೂ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿದೆ.

ಏಕಾಏಕಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಅರ್ಧದಷ್ಟು ಇಳಿಸಲು ಹೊರಟಿರುವುದರಿಂದ ವಿತರಕ, ಪ್ರದರ್ಶಕ ಹಾಗೂ ನಿರ್ಮಾಪಕರ ವಲಯಕ್ಕೂ ತೊಂದರೆಯಾಗಲಿದೆ. ಹಾಗಾಗಿ ಇದರಿಂದ ವಿನಾಯಿತಿ ನೀಡಬೇಕೆಂದು ಸರ್ಕಾರವನ್ನು ವಿನಂತಿಸುತ್ತೇವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಹೇಳಿದ್ದಾರೆ.

ನಾವು ಚಿತ್ರಮಂದಿರಗಳಲ್ಲಿ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ. ಪ್ರೇಕ್ಷಕರು ಕೂಡ ಮಾಸ್ಕ್ ಧರಿಸಿಯೇ ಸಿನಿಮಾ ವೀಕ್ಷಿಸುತ್ತಾರೆ. ಚಿತ್ರಮಂದಿರಗಳ ಒಳಗೆ ಹೋಗುವ ಮುನ್ನ ಎಲ್ಲರ ಟೆಂಪರೇಚರ್ ಅನ್ನು ತಪಾಸಣೆ ಮಾಡುತ್ತೇವೆ. 50- 50ರ ಸೂತ್ರವನ್ನು ಹಿಂಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸುವುದಾಗಿಯೂ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಚಲನಚಿತ್ರ ವಾಣಿಜ್ಯಮಂಡಳಿಯ ಮಾಜಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ನಿರ್ಮಾಪಕ ಎನ್.ಎಂ.ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *

error: Content is protected !!