ಚಂಡೀಗಢ (ಹರಿಯಾಣ): ಹರಿಯಾಣ ಸಚಿವ ಸಂದೀಪ್ ಸಿಂಗ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಜೂನಿಯರ್ ಅಥ್ಲೆಟಿಕ್ಸ್ ಮಹಿಳಾ ಕೋಚ್ ರನ್ನು ಸೇವೆಯಿಂದ ಅಮಾನತುಗೊಳಿಸಿ ಕ್ರೀಡಾ ಇಲಾಖೆ ಆದೇಶಿಸಿದೆ.
ಸರ್ಕಾರದ ಈ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಕೋಚ್ ತಿಳಿಸಿದ್ದಾರೆ. ಅಶಿಸ್ತು ಮತ್ತು ಸೇವಾ ನಡವಳಿಕೆ ನಿಯಮಗಳನ್ನು ಉಲ್ಲಂಘಿಸಿದ ಆರೋಪ ದಡಿ ಮಹಿಳಾ ಕೋಚ್‌ಅನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 11ರಂದು ಕ್ರೀಡಾ ಇಲಾಖೆಯ ನಿರ್ದೇಶಕ ಯಶೇಂದ್ರ ಸಿಂಗ್ ಈ ಅಮಾನತು ಆದೇಶ ಹೊರಡಿಸಿದ್ದಾರೆ. ”ಜೂನಿಯರ್ ಅಥ್ಲೆಟಿಕ್ ಕೋಚ್ ಅವರನ್ನು ತಕ್ಷಣ ದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಮಾನತು ಅವಧಿಯಲ್ಲಿ ಅವರು ಹರಿಯಾಣ ನಾಗರಿಕ ಸೇವೆಗಳ (ಸಾಮಾನ್ಯ) ನಿಯಮಗಳು-2016ರ ನಿಯಮ 83ರ ಅಡಿಯಲ್ಲಿ ಜೀವನಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಹಿಳಾ ಕೋಚ್ ಮಾತನಾಡಿ, ಮಾಧ್ಯಮಗಳಿಗೆ ಎಲ್ಲವೂ ತಿಳಿದಿದೆ. ಅವರು ನನ್ನನ್ನು ಅಮಾನತುಗೊಳಿಸಿದ್ದಾರೆ. ಆದರೆ, ಅದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ. ನನ್ನ ಮೇಲೆ ತಿಂಗಳಿಂದಲೂ ಒತ್ತಡವಿದೆ. ಈಗ ಸರ್ಕಾರದಿಂದ ನನ್ನ ಮೇಲೆ ಒತ್ತಡ ಹೇರಲು ಇದು ಮತ್ತೊಂದು ಮಾರ್ಗವಾಗಿದೆ” ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ದೂರಿದರು.
ಯಾರನ್ನಾದರೂ ಅಮಾನತುಗೊಳಿಸುವ ಮುನ್ನ ನಿಯಮಗಳ ಅಡಿಯಲ್ಲಿ ಎಚ್ಚರಿಕೆ ನೀಡಲಾಗುತ್ತದೆ. ಆದರೆ, ನೇರವಾಗಿ ಅಮಾನತು ಆದೇಶವನ್ನು ಹಸ್ತಾಂತರಿಸಿದ್ದಾರೆ. ಸೋಮವಾರ ಸಂಜೆ ನನ್ನ ನಿವಾಸಕ್ಕೆ ಬಂದು ಅಮಾನತು ಪತ್ರವನ್ನು ಕೊಡಲಾ ಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಸಚಿವರಾಗಿರುವ ಸಂದೀಪ್ ಸಿಂಗ್, ಭಾರತದ ಹಾಕಿ ತಂಡದ ಮಾಜಿ ನಾಯಕ ರಾಗಿದ್ದಾರೆ. ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.