Sunday, 28th April 2024

ಆಶಾ ಕಾರ್ಯಕರ್ತೆಯರು ಮತ್ತು  ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯಧನ ನೀಡಿ ಗೌರವ ಸಮರ್ಪಣೆ 

ಬ್ಯಾಟರಾಯನಪುರ :
ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಮಾರೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾ.ಪಂ.ಮಾಜಿ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ಮತ್ತು ಹಾಲಿ ಅಧ್ಯಕ್ಷ ಚೊಕ್ಕನಹಳ್ಳಿ ನಂಜೇಗೌಡ ಇವರ ಸಹಯೋಗದಲ್ಲಿ ಪ್ರತಿ ಕಾರ್ಯಕರ್ತೆರಿಗೆ 2.500 ರೂ ಗಳಂತೆ ಸುಮಾರು 16 ಕಾರ್ಯಕರ್ತೆಯರಿಗೆ ಧನ ಸಹಾಯದ ನೆರವು ನೀಡುವ ಮೂಲಕ ಅವರ ಸೇವೆಯನ್ನು ಗೌರವಿಸಿದರು.
 ಮಾರೇನಹಳ್ಳಿ ಗ್ರಾ.ಪಂ.ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಉದ್ದೇಶಿಸಿ ಎಸ್ ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷರೂ, ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಆಂಜಿನಪ್ಪ(ಪುಟ್ಟು) ಮಾತನಾಡಿ ‘ಕೋವಿಡ್-19 ವಾರಿಯರ್ಸ್ ಗಳಾಗಿ ಪ್ರತಿ ಮನೆಗೆ ತೆರಳಿ, ಕರೋನಾ ಕುರಿತು ಜಾಗೃತಿ ಮೂಡಿಸುವ ಮತ್ತು ಸೋಂಕಿತರನ್ನು ಪತ್ತೆ ಹಚ್ಚಲು ಶ್ರಮಿಸುವ ಆಶಾ ಕಾರ್ಯಕರ್ತೆಯರು ಮತ್ತು ಅದೇ ರೀತಿ ಮಕ್ಕಳು ಮತ್ತು ಮಹಿಳೆಯರ ಆರೋಗ್ಯ ಮತ್ತು ಪೌಷ್ಟಿಕಾಂಶ ಕುರಿತು ಅವರ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ನಿಜಕ್ಕೂ ಶ್ಲಾಘನೀಯ, ಅವರನ್ನು ಗೌರವಿಸುವುದು ಮತ್ತು ಅವರ ಕಷ್ಟಕ್ಕೆ ಸ್ಪಂದಿಸುವುದು ನಿಜವಾಗಿಯೂ ಸಂತೋಷದ ವಿಷಯ. ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸುತ್ತಿರುವ ಅವರಿಗೆ ನಮ್ಮ ಕೈಲಾದ ಮಟ್ಟಿಗೆ ಸಹಕರಿಸಬೇಕು ಎಂಬ ಅಭಿಲಾಷೆ ಯಿಂದ ಪ್ರತಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 2,500 ರೂ.ಗಳ ಚಿಕ್ಕ ನೆರವು ನೀಡಲಾಗಿದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಧ್ಯೇಯ ಹೊತ್ತು ಕಾರ್ಯನಿರ್ವಹಿಸುವ ಇಂಥವರನ್ನು ಸತ್ಕರಿಸುವುದೇ ಒಂದು ಪುಣ್ಯದ ಕೆಲಸ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೊಕ್ಕನಹಳ್ಳಿ ನಂಜೇಗೌಡ, ಉಪಾಧ್ಯಕ್ಷೆ ಸುಧಾರಮೇಶ್‌, ಗ್ರಾ.ಪಂ.ಸಿಬ್ಬಂದಿಗಳಾದ ರಮೇಶ್ ನಾಯ್ಕ್, ಸೋಮಣ್ಣ, ಗಿರೀಶ್, ನವೀನ್, ಅನಿಲ್ ಸೇರಿದಂತೆ ಇನ್ನಿತರರಿದ್ದರು

Leave a Reply

Your email address will not be published. Required fields are marked *

error: Content is protected !!