Monday, 20th May 2024

ಸಮಗ್ರ ತನಿಖೆಗೆ ಆದೇಶ, ಯಾರೇ ತಪ್ಪು ಮಾಡಿದ್ದರೂ ಕಠಿಣ ಕ್ರಮ: ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು: ಬೆಂಗಳೂರಿನ ಬಾಪೂಜಿನಗರ ಹೊಸಗುಡ್ಡದಹಳ್ಳಿಯ ಕೆಮಿಕಲ್ ಫ್ಯಾಕ್ಟರಿಯ ಗೋದಾಮಿನಲ್ಲಿ ಬೆಂಕಿ ಅವಘಡ ಕುರಿತಂತೆ, ಅಗ್ನಿಶಾಮಕ ದಳದ ಸಿಬ್ಬಂದಿ ಇಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫ್ಯಾಕ್ಟರಿ ನಿರ್ಮಿಸಲು ಬಿಬಿಎಂಪಿ, ಫೈರ್ ಡಿಪಾರ್ಟ್​ಮೆಂಟ್​ ಹಾಗೂ ಇತರ ಇಲಾಖೆಯಿಂದ ಅನುಮತಿ ತೆಗೆದುಕೊಂಡಿದ್ದರಾ? ಎಂಬಿತ್ಯಾದಿ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದೇನೆ. ಯಾರೇ ತಪ್ಪು ಮಾಡಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಸುಮಾರು 48 ಅಗ್ನಿಶಾಮಕ ವಾಹನ ಬೆಂಕಿ ನಂದಿಸಿದೆ. ಗೋದಾಮಿನಲ್ಲಿ ಈ ರೀತಿ ಸ್ಪೋಟಕ ಮತ್ತು ಅಪಾಯಕಾರಿ ವಸ್ತುಗಳನ್ನು ಇಡಲು ಅನುಮತಿ ಇದೆಯಾ? ಎಂಬುದರ ಮಾಹಿತಿ ಪಡೆಯುತ್ತಿದ್ದೇನೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿ ಕೊಳ್ಳುತ್ತೇವೆ. ಈಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಯಾವುದೇ ಅಧಿಕಾರಿ ಲಾಭಕ್ಕಾಗಿ ಅನುಮತಿ ನೀಡಿದ್ದರೆ ಅಂತಹ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಳ್ಳುತ್ತೇನೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಬಾಪೂಜಿ ನಗರದ ಬಳಿ ಇರುವ ಹೊಸಗುಡ್ಡದಹಳ್ಳಿಯ ರೇಖಾ ಕೆಮಿಕಲ್ ಫ್ಯಾಕ್ಟರಿಯಲ್ಲಿ ಮಂಗಳವಾರ ಮಧ್ಯಾಹ್ನ ಭಾರೀ ಬೆಂಕಿ ದುರಂತ ಸಂಭವಿಸಿತ್ತು. ಸ್ಥಳೀಯವಾಗಿ ಸ್ಯಾನಿಟೈಸರ್ ಮತ್ತು ಪೇಂಟ್ ರಿಮೂವ್ ಮಾಡುವ ಕೆಮಿಕಲ್ ತಯಾರಿಸುತ್ತಿದ್ದ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಲೋಕಲ್ ಆಗಿ ಸ್ಯಾನಿಟೈಸರ್ ಹಾಗೂ ಪೈಂಟ್ ರಿಮೂವಲ್ ಕೆಮಿಕಲ್ ಅನ್ನು ತಯಾರಿಸುತ್ತಿದ್ದ ಕಂಪನಿ ಇದಾಗಿದ್ದು, ಘಟನೆ ನಡೆಯುತ್ತಿದ್ದಂತೆ ಮಾಲೀಕ ನಾಪತ್ತೆಯಾಗಿದ್ದಾರೆ. ಸ್ಯಾನಿ ಟೈಸರ್ ಮತ್ತು ಹ್ಯಾಂಡ್ ವಾಶ್ ಗೆ ಬಳಸುವ ಕೆಮಿಕಲ್ ಬ್ಯಾರಲ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ.

ಫ್ಯಾಕ್ಟರಿಯ ಮಾಲೀಕ ಸಜ್ಜನ್ ರಾಜ್‌ ಹೆಂಡತಿ ಹೆಸರಿನಲ್ಲಿ ಬೊಮ್ಮಸಂದ್ರದ ರೇಖಾ ಕೆಮಿಕಲ್ ಇಂಡಸ್ಟ್ರಿ ಹೆಸರಿನಲ್ಲಿ ಪರವಾನಗಿ‌ ಪಡೆದುಕೊಂಡಿದ್ದ ಸಜ್ಜನ್ ರಾಜ್ ಹೊಸಗುಡ್ಡದಹಳ್ಳಿಯ ಗೋದಾಮಿನಲ್ಲಿ ಕೆಮಿಕಲ್ ಸಂಗ್ರಹ ಮಾಡಲು ಅನುಮತಿ ಪಡೆಯದೆ ಅಕ್ರಮವಾಗಿ ಸಂಗ್ರಹ ಮಾಡಿದ್ದರು ಎನ್ನಲಾಗಿದೆ. ಲಾರಿಯಲ್ಲಿನ ಬ್ಯಾರಲ್ ನಿಂದ ಕೆಮಿಕಲ್ಸ್​ ಅನ್ನು ಪೈಪ್ ಮೂಲಕ ನಾಲ್ವರು ಕಾರ್ಮಿಕರು ಅನ್​ಲೋಡ್ ಮಾಡುತ್ತಿದ್ದಾಗ ಕಿಡಿ ಹೊತ್ತಿಕೊಂಡು ಬೆಂಕಿ ಆವರಿಸಿತ್ತು. ಈ ಘಟನೆ ನಡೆಯುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮಾಲೀಕರು ಎಸ್ಕೇಪ್ ಆಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!