Sunday, 19th May 2024

ನೂತನ ಸಚಿವರಿಗೆ ದಿಲ್ಲಿಯಲ್ಲಿ ಡ್ರಿಲ್‌

ಹೊಸ ಮಂತ್ರಿಗಳು ಆಗಸ್ಟ್ 13ರವರೆಗೂ ರಾಜ್ಯಕ್ಕೆ ವಾಪಸ್ ಇಲ್ಲ
ರಾಜಧಾನಿಯಲ್ಲಿ ಹಿರಿಯ ನಾಯಕರಿಂದ ಮಂತ್ರಿ ನಿರ್ವಹಣೆಯ ತರಬೇತಿ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಕೇಂದ್ರ ಸಚಿವ ಸಂಪುಟ ವಿಸ್ತರಣೆಗೂ ಎರಡು ದಿನ ಮುಂಚೆ ದೆಹಲಿಗೆ ಹೋದ ರಾಜ್ಯದ ನಾಲ್ವರು ಸಂಸದರು ಸಚಿವರೇನೂ ಆಗಿ ಸಂತಸದ ಸುದ್ದಿ ರವಾನಿಸಿ ದ್ದರು. ಆದರೆ ಏಕೋ ಏನೋ ಅವರು ವಾಪಸ್ ರಾಜ್ಯಕ್ಕೆ ಬರುವ ಸೂಚನೆಗಳೇ ಕಾಣಿಸುತ್ತಿಲ್ಲ ಎನ್ನುವ ದಿಗಿಲು ಆರಂಭವಾಗಿದೆ.

ಏಕೆಂದರೆ ಸಚಿವರಾಗುತ್ತಿದ್ದಂತೆ ರಾಜ್ಯದಲ್ಲಿ ಸಂಭ್ರಮಿಸಿ, ಮಾಧ್ಯಮಗಳಲ್ಲಿ ಜಾಹೀರಾತು ಕೊಟ್ಟು ಖುಷಿ ಪಡುತ್ತಿದ್ದ ಅಭಿಮಾನಿಗಳು ಅಭಿನಂದನೆ ಕಾರ್ಯಕ್ರಮದ ಸಿದ್ಧತೆಯಲ್ಲಿ ಇದ್ದಾರೆ. ಆದರೆ, ದಿಲ್ಲಿಯಲ್ಲಿರುವ ಸಚಿವರು ವಾಪಸ್ ಬರುತ್ತಲೇ ಇಲ್ಲ. ಈ ಬಗ್ಗೆ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ಸಚಿವರಿಗೆ ಕರೆ ಮಾಡಿ ಕೇಳಿದರೆ ‘ನಾವು ಸದ್ಯಕ್ಕೆ ಬರುವುದಿಲ್ಲ’ ಎಂದು ಹೇಳುತ್ತಿದ್ದು, ಈಗಲೇ ಯಾವುದೇ ಅಭಿನಂದನಾ ಸಮಾರಂಭಗಳ ಸಿದ್ಧತೆ ಮಾಡಿಕೊಳ್ಳಬೇಡಿ ಎಂದು ಸೂಚಿಸುತ್ತಿದ್ದಾರೆ.

ಏಕೆಂದರೆ ಕೇಂದ್ರ ಬಿಜೆಪಿ ಸರಕಾರ ಇದೇ ಪ್ರಥಮ ಬಾರಿಗೆ ದೇಶದಲ್ಲಿ ನೂತನ ಸಚಿವರಿಗೆ ಮಂತ್ರಿ ಪದವಿ ನಿರ್ವಹಣೆ ಕುರಿತು ತರಬೇತಿ ನಡೆಸುತ್ತಿದೆ. ಇದು ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಆರಂಭವಾ ಗಿದ್ದು, ಆಗ 13ರವರೆಗೆ ನಡೆಯಲಿದೆ. ಅಲ್ಲಿಯವರೆಗೂ ನೂತನ ಸಚಿವರು ತವರು ರಾಜ್ಯಗಳಿಗೆ ವಾಪಸ್ ಹೋಗುವಂತಿಲ್ಲ ಎಂದು ಪಕ್ಷದ ಹೈಕಮಾಂಡ್ ಸೂಚಿಸಿದೆ. ಹೀಗಾಗಿ ರಾಜ್ಯದಿಂದ ದೆಹಲಿಗೆ ಹೋಗಿ ಸಚಿವರಾಗಿರುವ ಕೌಶಲ ಅಭಿವೃದ್ಧಿ ಮತ್ತು ಮಾಧ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ ಚಂದ್ರಶೇಖರ್, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ, ಸಮಾಜ ಕಲ್ಯಾಣ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರು ಇನ್ನೂ ಒಂದು ತಿಂಗಳ ಕಾಲ ದೆಹಲಿಯ ಮಂತ್ರಿ ತರಬೇತಿಯ ಡ್ರಿಲ್ ಮಾಡುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ಏನು ಡ್ರಿಲ್,ಯಾವ ಕಾರಣಕ್ಕೆ?
ಬಿಜೆಪಿ ಹೈಕಮಾಂಡ್ ಕೇಂದ್ರದಲ್ಲಿ ಸಚಿವರಾಗಿ ಕಳಪೆ ಪ್ರದರ್ಶನ ಮಾಡಿದವರಿಗೆ ವಿಶ್ರಾಂತಿ ನೀಡಿದ್ದು, ಕಿರಿಯ ಸಚಿವರಿಗೆ ಸಂಪುಟ ದರ್ಜೆ ಸ್ಥಾನದ ಬಡ್ತಿ
ನೀಡಿದೆ. ಅದೇ ರೀತಿ ನೂತನ ಸಚಿವರು ಸ್ವಾಭಾವಿಕವಾಗಿ ಮಂತ್ರಿ ನಿರ್ವಹಣೆ ಕಲಿತುಕೊಳ್ಳಲಿ ಎನ್ನುವುದಕ್ಕೆ ಈಗ ಸಮಯವಿಲ್ಲ. ಏಕೆಂದರೆ ಈ ನೂತನ ಸಚಿವರನ್ನು ಮುಂದಿನ ಚುನಾವಣೆ ವೇಳೆಗೆ ಸಮರ್ಥ ಸಚಿವರನ್ನಾಗಿ ರೂಪಿಸಿ, ಪಕ್ಷದ ವರ್ಚಸ್ಸು ವೃದ್ಧಿಸಿಕೊಳ್ಳುವ ಅನಿವಾರ್ಯಪಕ್ಷಕ್ಕಿದೆ.

ಹೀಗಾಗಿ ಅವರನ್ನು ವಾಪಸ್ ತವರು ರಾಜ್ಯಗಳಿಗೆ ಕಳುಹಿಸಿದರೆ ಅವರು ಅಭಿನಂದನೆ ಮತ್ತು ಸಂಭ್ರಮಗಳಲ್ಲಿ ಆರು ತಿಂಗಳನ್ನೇ ಕಳೆಯುತ್ತಾರೆ. ಅಷ್ಟೊತ್ತಿಗೆ
ಚುನಾವಣೆ ಕಾವು ಆರಂಭವಾಗಿರುತ್ತದೆ. ಇದರಿಂದ ಸಚಿವರು ಮಂತ್ರಿ ನಿರ್ವಹಣೆಯನ್ನು ಸರಿಯಾಗಿ ಕಲಿತಿರುವುದಿಲ್ಲ. ಅವರ ರಾಜ್ಯಗಳಿಗೂ ಲಾಭ ಸಿಗುವುದಿಲ್ಲ. ಪಕ್ಷಕ್ಕೂ ಅನುಕೂಲವಿಲ್ಲ. ಜತೆಗೆ ಅವರು ತಮ್ಮ ಇಲಾಖೆಗಳಿಗೂ ನ್ಯಾಯ ಒದಗಿಸಿದಂತೆ ಆಗುವುದಿಲ್ಲ ಎಂದು ಪಕ್ಷದ ವರಿಷ್ಠರು ನೂತನ ಸಚಿವರಿಗೆ ವಿವಿಧ ಉದ್ದೇಶದ ತರಬೇತಿ ನಡೆಸುತ್ತಿದ್ದಾರೆ.

ತರಬೇತಿ ತಂತ್ರಗಳೇನು?
ಸಚಿವರ ತರಬೇತಿ ಈಗಾಗಲೇ ಆರಂಭವಾಗಿದ್ದು, ಇದರಲ್ಲಿ ಹಿರಿಯ ಸಚಿವರು, ಪಕ್ಷದ ಮುಖಂಡರು ಮಂತ್ರಿ ನಿರ್ವಹಣೆ ತಂತ್ರ ವಿಧಾನಗಳನ್ನು ಹೇಳಿಕೊಡಲಿzರೆ.
ಪ್ರಮುಖವಾಗಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿಯುವುದು, ಆ ಮೂಲಕ ಮಾಧ್ಯಮಗಳನ್ನು ಎದುರಿಸುವುದು, ಪ್ರತಿಪಕ್ಷಗಳನ್ನು ಟೀಕಿಸುವುದು ಮತ್ತು
ಸಮರ್ಥವಾಗಿ ಉತ್ತರ ಕೊಡುವುದು ಸೇರಿದಂತೆ ಅನೇಕ ವಿಧಾನಗಳ ಗಮನ ಸೆಳೆಯಲಿದ್ದಾರೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಸಚಿವರುಗಳು ಯಾವುದೇ ಕಾರಣಕ್ಕೂ ಆರೋಪಗಳಿಗೆ ಮತ್ತು ಅಕ್ರಮಗಳ ಸುಳಿಯಲ್ಲಿ ಸಿಲುಕಬಾರದು. ಆ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಬಾರದು ಎನ್ನುವ ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಲಿದ್ದಾರೆ. ಮುಂದಿನ ಚುನಾವಣೆಗೆ ಪಕ್ಷವನ್ನು ಪುನಃ ಅಽಕಾರಕ್ಕೆ ತರುವ ನಿಟ್ಟಿನಲ್ಲಿ ಸಚಿವರನ್ನು ತಯಾರು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಇದೇ ವೇಳೆ ಜುಲೈ 19ರಿಂದ ಅಧಿವೇಶನ ಶುರುವಾಗಲಿದ್ದು, ಇಲ್ಲಿಯೂ ಸಚಿವರಿಗೆ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಪ್ರತಿಪಕ್ಷಗಳಿಗೆ ತಿರುಗೇಟು ನೀಡುವಂತಹ ಕೆಲವು ತರಬೇತಿಗಳನ್ನು ನೀಡಲಾಗುತ್ತದೆ.

ಆಗ 13ರಂದು ಸಂಸತ್ ಅಧಿವೇಶನ ಅಂತ್ಯವಾಗಲಿದೆ. ಆಗ 15ರಂದು ನೂತನ ಸಚಿವರು ನಮ್ಮ ರಾಜ್ಯಗಳಲ್ಲಿ ಸ್ವಾತಂತ್ರ್ಯಾ ದಿನಾಚರಣೆಗಳಲ್ಲಿ  ಭಾಗವಹಿಸ ಬಹುದಾಗಿದೆ. ಇದಲ್ಲದೆ ಸಚಿವರಿಗೆ ಅಗತ್ಯವಾದ ಕಚೇರಿ ಸಿಬ್ಬಂದಿ, ಇಲಾಖೆ ಅಧಿಕಾರಿಗಳು, ಆಪ್ತ ಕಾರ್ಯದರ್ಶಿ, ಅಽಕೃತ ಕಚೇರಿ ಕೊಠಡಿ, ನಿವಾಸಗಳನ್ನು ಪಕ್ಷದ ಸೂಚನೆಯಂತೆ ಹಂಚಿಕೆ ಮಾಡಲಾಗುತ್ತದೆ. ಬೇಕಾದರೆ ಸಚಿವರು ತಮಗೆ ಬೇಕಾದ ಸಹಾಯಕ ಸಿಬ್ಬಂದಿಯನ್ನು ಮಾತ್ರ ನಿರ್ಮಿಸಿ ಕೊಳ್ಳಲು ಅವಕಾಶವಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!