Monday, 20th May 2024

ಸಿಎನ್ಆರ್ ರಾವ್ ಗೆ ಅಂತರಾಷ್ಟ್ರೀಯ ಪ್ರಶಸ್ತಿ: ಟಿ.ಎಸ್.ನಾಗಾಭರಣ ಅಭಿನಂದನೆ

ಬೆಂಗಳೂರು: ಶಕ್ತಿ ಸಂಶೋಧನೆಯಲ್ಲಿ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿಸಲಾಗುವ ಪ್ರತಿಷ್ಠಿತ ಎನರ್ಜಿ ಫ್ರಾಂಟಿಯರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತರತ್ನ, ಕನ್ನಡಿಗ, ವಿಜ್ಞಾನಿ ಸಿಎನ್ಆರ್ ರಾವ್ ಅವರ ಸಾಧನೆ ದಾಖಲಾರ್ಹವಾದುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಅವರು ಹೃದಯಸ್ಪರ್ಶಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಪ್ರಸ್ತುತ ಕಾಲಘಟ್ಟದಲ್ಲಿ ಇಂಧನ ಅತ್ಯಮೂಲ್ಯವಾದ ವಸ್ತುವಾಗಿದೆ. ಇಂತಹ ಸಂದರ್ಭದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಸಂಗ್ರಹಣೆಯ ಸಂಶೋಧನೆಗಾಗಿ ಈ ಪ್ರಶಸ್ತಿ ಸಂದಿರುವುದು ಇಡೀ ವಿಶ್ವವೇ ಹೆಮ್ಮೆ ಪಡುವ ವಿಷಯವಾಗಿದೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಬಗ್ಗೆ ತಾವು ಸಂಶೋಧನೆಯನ್ನು ಮಾಡಿರುವುದು ಮುಂದಿನ ಪೀಳಿಗೆಗೂ ಆಶಾದಾಯಕವಾದ ವಿಷಯವಾಗಿದೆ ಎಂದು ಸಿಎನ್ಆರ್ ರಾವ್ ಅವರಿಗೆ ಬರೆಯಲಾಗಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಓದಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ರಾವ್ ಅವರು ಕನ್ನಡ ಮಾಧ್ಯಮವನ್ನು ಕಡೆಗಣಿಸುವವರಿಗೆ ಮಾದರಿಯಾಗಿದ್ದಾರೆ. ನಿಜಕ್ಕೂ ಈ ಬೃಹತ್ ಸಾಧನೆ ಬಗ್ಗೆ ಅಖಂಡ ಕನ್ನಡ ಮನಸ್ಸುಗಳ ಪರವಾಗಿ ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ವತಿಯಿಂದ ಹೃದಯಸ್ಪರ್ಶಯಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ: ಸಂವಾದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಭವಿಷ್ಯದ ವಿಜ್ಞಾನಿಗಳಿಗೆ ತಮ್ಮ ಅಗಾಧ ಅನುಭವದ ವಿಚಾರಧಾರೆಯನ್ನು ಹಂಚಿಕೊಂಡಿದ್ದು ನಿಜಕ್ಕೂ ದಾಖಲಾರ್ಹ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕನ್ನಡದ ಅದ್ಭುತ ಪ್ರತಿಭೆಯೊಂದು ವಿಶ್ವದೆಲ್ಲೆಡೆ ಪ್ರಜ್ವಲಿಸುತ್ತಿರುವ ತಮಗೆ ಪ್ರಾಧಿಕಾರ ಆಭಾರ ಮನ್ನಣೆಯನ್ನು ಸಲ್ಲಿಸುದಾಗಿ ಭಾವನಾತ್ಮಕ ನುಡಿಗಳನ್ನಾಡಿದ್ದಾರೆ.

ಪ್ರೊ. ರಾವ್ ಅವರು ಶಕ್ತಿಯ ಮೂಲವಾಗಿ ಹೈಡ್ರೋಜನ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೈಡ್ರೋಜನ್ ಸಂಗ್ರಹಣೆ, ಹೈಡ್ರೋಜನ್ ನ ದ್ಯುತಿ ರಾಸಾಯನಿಕ ಮತ್ತು ಎಲೆಕ್ಟ್ರೋಕೆಮಿಕಲ್ ಉತ್ಪಾದನೆ, ಹೈಡ್ರೋಜನ್ ನ ಸೌರ ಉತ್ಪಾದನೆ ಮತ್ತು ಲೋಹವಲ್ಲದ ವೇಗವರ್ಧನೆ ಅವರ ಕೆಲಸದ ಪ್ರಮುಖ ಅಂಶಗಳಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!