Saturday, 27th April 2024

ಬಸ್ ಸಿಗದೆ ಬೆಂಗಳೂರಿನಿಂದ ಕೊಪ್ಪಳಕ್ಕೆ ಬೈಕ್ ಏರಿ ಬಂದ ರಾಮಪ್ಪ

ತನ್ನ ಹೆಂಡತಿ, ಮೂವರು ಮಕ್ಕಳೊಂದಿಗೆ 300 ಕಿಮೀ ಪ್ರಯಾಣ ಮಾಡಿದ ಭೂಪ

ಕೊಪ್ಪಳ: ತಮ್ಮನ್ನು  ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂದು ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಹಿನ್ನೆಲೆಯಲ್ಲಿ ಬಸ್ ಸಂಚಾರ ಇಲ್ಲದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಈ ಮಧ್ಯೆ ದೂರದ ಬೆಂಗಳೂರಿನಿಂದ ಕೊಪ್ಪಳಕ್ಕೆ ಓರ್ವ ವ್ಯಕ್ತಿ ತನ್ನ ಕುಟುಂಬ ಸಮೇತ ಬೈಕ್‌ನಲ್ಲೆ ಪ್ರಯಾಣ ಮಾಡಿ ಬಂದಿದ್ದಾನೆ.

ಹೌದು ಬಸ್ ಸಂಚಾರ ಇಲ್ಲದೆ ಪರದಾಡಿ ಕೊನೆಗೆ ಬೈಕ್ ಪ್ರಯಾಣಕ್ಕೆ‌ ಮೊರೆ ಹೋಗಿದ್ದು ಕೊಪ್ಪಳ ತಾಲೂಕಿನ ಗ್ರಾಮ ಹಳೆ ಕುಮುಟಾ ನಿವಾಸಿ ರಾಮಪ್ಪನೆ ತನ್ನ ಪತ್ನಿ ಮೂವರು ಮಕ್ಕಳೊಂದಿಗೆ ಬಂದಾತ. ತಾಲೂಕಿನ ಹಳೆ ಕುಮುಟಾ ಗ್ರಾಮದ ರಾಮಪ್ಪ ಎಂಬಾತ ಗ್ರಾಮಕ್ಕೆ ಬರಲು  ಬಸ್ ಇಲ್ಲದ ಕಾರಣ ಸುಮಾರು 300 ಕಿ.ಮೀ. ದೂರ ಮೂವರು ಮಕ್ಕಳು ಹಾಗೂ ಪತ್ನಿ ಜತೆಗೂಡಿ ಭಯದೊಂದಿಗೆ  ಬೈಕ್‍ನಲ್ಲಿ ಆಗಮಿಸಿದ್ದಾರೆ.

ಬೆಂಗಳೂರಲ್ಲಿ  ಕೂಲಿ ಕೆಲಸ ಮಾಡುತ್ತಿದ್ದ  ರಾಮಪ್ಪ ಮನೆಯಲ್ಲಿ ಮಂಗಲ ಕಾರ್ಯ  ಇರುವುದರಿಂದ ಕೊಪ್ಪಳಕ್ಕೆ  ಬರಲು  ಬೆಂಗಳೂರು ಬಸ್  ನಿಲ್ದಾಣಕ್ಕೆ ಹೋಗಿದ್ದಾರೆ. ಆದರೆ ಸರಕಾರಿ ಬಸ್‍ಗಳು ಸಂಚಾರ ಇಲ್ಲದೇ ಕೆಲ ಹೊತ್ತು ಪರದಾಡಿದ್ದಾರೆ. ಆದರೆ ಮನೆಯಲ್ಲಿ ಕಾರ್ಯಕ್ರಮ ಇರುವುದರಿಂದ ಹೇಗಾದರೂ ಬರಬೇಕು ಎಂದು ಖಾಸಗಿ  ಬಸ್‍ನಲ್ಲಿ  ಬರಲು ವಿಚಾರಿಸಿದ್ದಾರೆ. ಆದರೆ ಖಾಸಗಿ ಬಸ್‍ನವರು ಗಂಡ ಹೆಂಡತಿಗೆ ಎರಡು ಸಾವಿರ ಹಾಗೂ ಮೂವರು ಮಕ್ಕಳಿಗೆ 500 ರೂ. ಸೇರಿ 2,500 ರೂ. ಕೊಡಲು ಕೇಳಿದ್ದಾರೆ. ಆದರೆ ರಾಮಪ್ಪ ಅಷ್ಟೊಂದು  ಹಣ ಎಲ್ಲಿಂದ ತರಬೇಕು, ದುಡಿದ ದುಡ್ಡು ಬರಿ ಖಾಸಗಿ ವಾಹನಗಳಿಗೆ  ಕೊಟ್ಟರೆ  ಹೇಗೆ ಎಂದು  ಮೂವರು ಮಕ್ಕಳು ಹಾಗೂ ಪತ್ನಿ ಜತೆ ಬೈಕ್ ತೆಗೆದುಕೊಂಡು ಬಂದಿದ್ದಾರೆ.

ಶನಿವಾರ  ಬೆಳಿಗ್ಗೆ 12 ಗಂಟೆಗೆ ಬೈಕ್‍ನೊಂದಿಗೆ  ಬೆಂಗಳೂರು ಬಿಟ್ಟ ರಾಮಪ್ಪ ಹಾಗೂ ಅವರ ಕುಟುಂಬ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಕೊಪ್ಪಳ  ತಲುಪಿದ್ದಾರೆ. ಆದರೆ ಕುಟುಂಬದೊಂದಿಗೆ  300 ಕಿ.ಮೀ. ದೂರ  ಬೈಕ್‍ನಲ್ಲಿ ಪ್ರಯಾಣ ಮಾಡುವಾಗ  ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಕೊರೆಯುವ ಚಳಿಯೊಂದಿಗೆ, ಎದುರಿಗೆ ಯಮದೂತರಂತೆ  ಬರುವ  ಲಾರಿ ಟ್ರಾಕ್ಸ್ ಕಾರುಗಳ ವೇಗದ ಸಂಚಾರದ ಯಾತನೆ ಅನುಭವಿಸಿದ ರಾಮಪ್ಪ ಭಾನುವಾರ ಬೆಳಗ್ಗೆ ಮಾಧ್ಯಮದವರೊಂದಿಗೆ ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ.

ಸಾರಿಗೆ  ನೌಕರರು  ನಡೆಸುತ್ತಿರುವ ಮುಷ್ಕರದಿಂದಾಗಿ ಬಸ್‍ಗಳ ಸಂಚಾರ ಇಲ್ಲದೇ ದುಡಿಯಲು ಬೇರೆ ಬೇರೆ ನಗರ, ಪಟ್ಟಣಕ್ಕೆ ತೆರಳಿರುವ ಜನರು ಪರದಾಡುವಂತಾಗಿದೆ. ಬೈಕ್‍ ಗಳ ಮೂಲಕ ಅಪಾಯದ ಪ್ರಯಾಣ ಜನರು ಕಂಡುಕೊಳ್ಳುತ್ತಿರುವುದು ವಿಪರ್ಯಾಸ. ಕೂಡಲೇ  ಸರಕಾರ ನೌಕರರ ಬೇಡಿಕೆಗಳನ್ನು ಈಡೆರಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎನ್ನುವುದು ಜನತೆ ಒತ್ತಡ.

Leave a Reply

Your email address will not be published. Required fields are marked *

error: Content is protected !!