Monday, 20th May 2024

ಮನೆ ಮನೆಗೂ ಯಕ್ಷಗಾನದ ಚಿಕ್ಕಮೇಳ; ಕುಂದಾಪುರದ ತಂಡ ಶಿರಸಿಗೆ ಬಂತು!

ಶಿರಸಿ: ಮನೆ ಮನೆಗೂ ಯಕ್ಷಗಾನ ಆಡಿಸುವ ಚಿಕ್ಕಮೇಳ ಈವರೆಗೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆ ಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಆದರೆ, ಅಪರೂಪ ಎಂಬಂತೆ ಅಂಥದೊಂದು ಕಲಾ ತಂಡ ಇದೀಗ ಘಟ್ಟ ಏರಿ ಶಿರಸಿಗೂ ಬಂದಿದೆ. ಕಳೆದ ನಾಲ್ಕೈದು ದಿನಗಳಿಂದ ಹಲವಡೆ ಮನೆ ಮನೆಗೂ ತೆರಳಿ ಯಕ್ಷಗಾನದ ಗೆಜ್ಜೆ, ಚಂಡೆ, ಭಾಗವತಿಕೆಯ ಶಬ್ಧ ಕೇಳಿಸುತ್ತಿದೆ.

ಕುಂದಾಪುರದ ಬೀಜಮಕ್ಕಿಯ ಶ್ರೀಮಹಾಗಣಪತಿ ಕಲಾ ತಂಡ ಶಿರಸಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಲಾ ಪ್ರದರ್ಶನ ನೀಡುತ್ತಿದೆ. ಬೇಸಗೆಯಲ್ಲಿ ವಿವಿಧ ವೃತ್ತಿಪರ ತಿರುಗಾಟದಲ್ಲಿ ಇರುವ ಕಲಾ ತಂಡಗಳು ಮಳೆಗಾಲದಲ್ಲಿ ಚಿಕ್ಕ ಮೇಳದ ಮೂಲಕ ಮನೆ ಮನೆ ಯಕ್ಷಗಾನದ ಪ್ರದರ್ಶನ ನೀಡುತ್ತಿದ್ದಾರೆ. ಒಂದು ಕಥಾನಕವನ್ನು ಆಯ್ದು ಕೊಂಡು ೧೫-೨೦ ಮನೆಗಳಲ್ಲಿ ಆಡಿ ತೋರಿಸಲಿದ್ದಾರೆ. ಕೆಲವೊಮ್ಮೆ ೧೫-೨೦ ನಿಮಿಷ, ಅರ್ಧ ಗಂಟೆ, ತಾಸುಗಳ ಕಾಲವೂ ಪ್ರದರ್ಶನ ನೀಡುವರು. ಕೆಲವು ಆಯ್ದ ಪ್ರಸಂಗದ ತುಣಕನ್ನೂ ಪ್ರಸ್ತುಗೊಳಿಸುವವರು.

ಪ್ರತೀ ಮನೆಯಲ್ಲೂ ಗಣಪತಿ ಪೂಜೆ ಮಾಡಿ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದೂ ಪ್ರಾರ್ಥಿಸುವ ಚಿಕ್ಕ ಮೇಳದ ಕಲಾವಿದರು, ಅಕ್ಕಿ, ಕಾಯಿ, ದೇವರ ಒಪೂಜೆಗೆ ಸುವಸ್ತುಗಳ ಜೊತೆಗೆ ಕೊಟ್ಟಷ್ಟು ಕಲಾ ಕಾಣಿಕೆ ಪಡೆದು ಕೊಳ್ಳುತ್ತಾರೆ.

ದೇವರ ಸೇವಾ ರೂಪವಾಗಿ ಯಕ್ಷಗಾನ ಪ್ರದರ್ಶನ ನೀಡುವ ತಂಡವಾಗಿ ಪರಿವರ್ತನೆಗೊಂಡ ಈ ಚಿಕ್ಕಮೇಳದಲ್ಲಿ ಒಟ್ಟೂ ಐದಾರು ಜನರು ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಈ ತಂಡದಲ್ಲಿ ಭಾಗವತರಾಗಿ ರತ್ನಾಕರ ಗೌಡ ಕಾಲ್ತೋಡು, ಚಂಡೆಯಲ್ಲಿ ದಿನೇಶ ಮರಾಠಿ ಕುಮಟಾ, ಕಲಾವಿದರಾಗಿ ಪುರುಷ ಪಾತ್ರದಲ್ಲಿ ಗಣೇಶ ದೇವಡಿಗ ಮಹಾಭಲೇಶ್ವರ, ಸ್ತ್ರೀ ಪಾತ್ರದಲ್ಲಿ ಪ್ರವೀಣ ಶೆಟ್ಟಿ ಮೋರ್ಟು, ಸಂಚಾಲಕರಾಗಿ ಅಣ್ಣಪ್ಪ ಗಾಣಿಗ ಬೀಜಮಕ್ಕಿ, ರಾಘವೇಂದ್ರ ಗಾಣಿಗ ಬೀಜಮಕ್ಕಿ ಇದ್ದಾರೆ.

ಮನೆಗಳಲ್ಲಿ ಯಕ್ಷಗಾನದ ಝೇಂಕಾರ ಕೇಳಿದರೆ ವಾಸ್ತು ದೋಷ ಸೇರಿದಂತೆ ಅನೇಕ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಕೂಡ ಪ್ರಾಚೀನ ವಾಗಿಯೇ ಇದೆ. ಅದೇ ಆಧಾರದಲ್ಲಿ ದಕ್ಷಿಣೋತ್ತರ ಕನ್ನಡದಲ್ಲಿ ಇದೊಂದು ಸಂಪ್ರದಾಯವಾಗಿ ಕೂಡ ಬೆಳೆದಿದೆ ಎಂಬುದು ವಿಶೇಷ. ಮನೆ ಮನೆಗಳಲ್ಲಿ ಯಕ್ಷಗಾನ ಮಾಡಿಸುವ ಆಸಕ್ತರಿದ್ದರೆ ೯೯೪೫೭೧೯೦೩೨ ಸಂಪರ್ಕ ಮಾಡಬಹುದಾಗಿದೆ. ಇರುವ ವ್ಯವಸ್ಥೆಯಲ್ಲೇ ಕಲಾ ಪ್ರದರ್ಶನ ನೀಡುತ್ತೇವೆ ಎನ್ನುತ್ತಾರೆ ಚಿಕ್ಕ ಮೇಳದ ವ್ಯವಸ್ಥಾಪಕ ಅಣ್ಣಪ್ಪ ಗಾಣಿಗ ಬೀಜಮಕ್ಕಿ.

Leave a Reply

Your email address will not be published. Required fields are marked *

error: Content is protected !!